प्रज्वालितॊ ज्ञानमयप्रदीपः

ಭಾನುವಾರ, ಏಪ್ರಿಲ್ 1, 2012

*ತಲೆಗೇ.. ಮೆದುಳಾಗುವವರು.....!!

                           ಬೇರೆಯವರ ತಲೆಗೆ ಮೆದುಳಾಗುವವರು ಬಹಳಿದ್ದಾರೆ...!

ಮನೆಗೊಬ್ಬ ಯಜಮಾನ ಇರುತಿದ್ದ ಮೊದಲೆಲ್ಲ
ಕೇಳುತಿದ್ದರು ಮಾತ ಅವನೆಣಿಸಿದಂತೇ.....
ದೇಶವಾಳುವುದಕ್ಕೆ ಇರುತಿದ್ದನೊಬ್ಬರಸ
ಆಡುತಿದ್ದರು ಜನರು ಅವನಾಡಿಸಿದಂತೆ.....
ಜಗಕೊಬ್ಬ ಗುರುವಿದ್ದ ಜಗದ್ಗುರುವೆನಿಸಿದ್ದ
ಎರಗುತಿದ್ದರು ಅವನ ಪಾದದ್ವಯಗಳಿಗೆ....
ಲೋಕಕಾಯುವ ಸ್ವಾಮಿಯಿದ್ದೊಬ್ಬ ಪರಮಾತ್ಮ
ಕಾಯುತಿದ್ದರು ಅವನ ಕರುಣೆಗಾಗಿ......
ಥತ್ತೇರಿಕೇ...... ಕಾಲಾ ಕಳದೋಯ್ತು ಅಂತೀರಾ....
ಇಂದು.........
ಯಜಮಾನ ಮಾನಕಳಕೊಂಡಾಗ 
ಹೇಳುವವರೇ ಎಲ್ಲಾ.......
 ಕೇಳಲಿಕೆ ಪುರುಸೊತ್ತು ಬೇರೆ ಇಲ್ಲಾ...!
ದೇಶವಾಳುವ ಅರಸ ಅರಸಿದರೂ ಸಿಗಲೊಲ್ಲ....
ಬರಿ ವೇಶಗಾರರು ತುಂಬಿ ದೇಶ ತಿಂತಿಹರು
ಅರಸನಾಡುವುದಕ್ಕೆ ಇವರೂ ಕುಣಿದಾಡುವರು
ಕುಣಿವರಸನಂ ನೋಡಿ ಕಣಿಯ ಕೇಳುವರು....!!
ಜಗದ ಗುರು ನೂರಾಗಿ ಜಾಗವೆಲ್ಲವ ನುಂಗಿ 
ಇರುವ ಒಂದೇ ಜಗದಿ ನಾನು ! ನಾನೆಂಬರು!
ಪಾದಕೆರಗಲು ಬಗ್ಗೆ .... ಜೇಬ ಮರೆಯಲಿ ನೋಡಿ
ಫಲವೋ... ಬರಿ ಮಂತ್ರಾಕ್ಷತೆಯೋ
ಲೆಕ್ಕ ಹಾಕುವರು.....!!
ದೇವನೊಬ್ಬನು ಎಂದು ನಾಮ ಹಲವಿಹುದೆಂದು 
ಹೇಳಿದನು ಅಂದು ಆ ಹಿಂದು...
ಇಂದು ಆ ದೇವನಿಗೇ ನಾಮವನು ಇಕ್ಕಿದರು..
ಉದ್ದ ನಾಮವೋ ಅಡ್ಡ ನಾಮವೋ ಎಂದು ಬಡಿದಾಟ ಬೇರೆ..
ಅಂತೂ ಮಾಡಿದರವನ ನಾಮಾವಶೇಷ....!!
ಹೇಳುವರೇ ಎಲ್ಲ ಕೇಳುವವರಾರಿಲ್ಲ
ಹೇಳುವಗೆ ಬಾಯಿಲ್ಲ..! ಕೇಳುವಗೆ ಕಿವಿಯಿಲ್ಲ... !
ಆದರೂ ಬಿಡಲೊಲ್ಲ. ತಲೆಗೆ ಮಿದುಳಾಗುವುದ...
ಅವರೇ ಮಿದುಳಿಗೂ ಕೈಯ್ಯಿಕ್ಕುವರು
ಮಿದುಳಿಲ್ಲದವರು.......................!!!!!!


1 ಕಾಮೆಂಟ್‌: