ಕೌರವನ ಕಪಟ ದ್ಯೂತದಿಂದಾಗಿ ವನವಾಸಕ್ಕೆ ತೆರಳಿದ ಪಾಂಡವರು ದಾರಿಯಲ್ಲಿ ಎದುರಾದ ಅನೇಕ ಋಷಿ ಮುನಿಗಳ ಸಲಹೆಯಂತೆ ಅಲ್ಲಲ್ಲಿ ತಿರುಗಾಡಿ ಒಂದು ಸುಂದರವಾದ ಕಾಡಿನ ಮಧ್ಯಕ್ಕೆ ಬರುತ್ತಾರೆ. ಅಲ್ಲಿ ಮಹಾಮುನಿ ಲೋಮಶರು ಧರ್ಮರಾಜನಿಗೆ ಈ ವನವಾಸದ ಅವಧಿಯಲ್ಲಿ ನೋಡಬಹುದಾದ ಅನೇಕ ತೀರ್ಥ ಕ್ಷೇತ್ರಗಳ ವಿಚಾರವನ್ನು ತಿಳಿಸುತ್ತಾ ಒಂದೊಂದೇ ತೀರ್ಥ ಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಾರೆ ಮತ್ತು ಅಲ್ಲಿಯ ಮಹಿಮೆಯನ್ನು ಧರ್ಮರಾಜನಿಗೆ ಪಂಥಾಯಾಸ ಶಮನಕ್ಕಾಗಿ ಹೇಳುತ್ತಾರೆ...
ಹೀಗೇ ಅಗಸ್ತ್ಯ ತೀರ್ಥವನ್ನು ಸಂದರ್ಶಿಸಿ ಮುಂದೆ ತೆರಳುತ್ತಿದ್ದಾಗ ಅಲ್ಲೊಂದು ಸುಂದರವಾದ ತೀರ್ಥ ಕಾಣುತ್ತದೆ.. ಧರ್ಮರಾಜ ಈ ತೀರ್ಥ ಕ್ಷೇತ್ರದ ಮಹಿಮೆಯನ್ನು ವಿಸ್ತರಿಸಿ ಹೇಳುವಂತೆ ಲೋಮಶರನ್ನು ಕೇಳುತ್ತಾನೆ.. ಈ ಕಥೆಯು ಅತ್ಯಂತ ಗಂಭೀರವಾದ ಮಹಾಭಾರತ ಕಥಾನಕವನ್ನು ಹೆಣೆದ ವೇದವ್ಯಾಸರ ಮತಿಯಿಂದ ಹೊರಬಂದ ಒಂದು ಅತಿ ಶೃಂಗಾರ ಮತ್ತು ತುಂಬ ಮನೋಹರವಾದ ಹಾಸ್ಯ ಕಥಾನಕವಾಗಿದೆ.
****************************************************
"ಯುಧಿಷ್ಠಿರಾ... ಬಹಳ ಹಿಂದೆ ಈ ಭಾರತ ಭೂ ವರ್ಷದಲ್ಲಿ ರೋ( ಲೋ) ಮಪಾದ ಎಂಬ ಹೆಸರಿನ ಓರ್ವ ಅತಿ ಕ್ರೂರಿಯಾದ ರಾಜನಿದ್ದ... ಅವನು ಬ್ರಾಹ್ಮಣದ್ವೇಶಿಯಾಗಿದ್ದ..ಅವನಿಗೆ ಅಂಗಾಲುಗಳಲ್ಲಿಯೂ ರೋಮಗಳಿದ್ದುದರಿಂದ ಆ ಹೆಸರು ಅನ್ವರ್ಥವಾಗಿ ಬಂದಿತ್ತು. ಹಿಂದೆ ಬ್ರಾಹ್ಮಣನೊಬ್ಬನಿಗೆ ಯಾವುದೋ ಕೆಲಸವನ್ನು ಮಾಡಿಕೊಡುತ್ತೇನೆ ( ತೇನ ಕಾಮಾತ್ ಕೃತಂ ಮಿಥ್ಯಾ ಬ್ರಾಹ್ಮಣಸ್ಯೇತಿ ನ ಶ್ರುತಿಃ|) ಎಂದು ನಂಬಿಸಿ ಮೋಸ ಮಾಡಿದ್ದರಿಂದ ಆ ದೇಶದಲ್ಲಿರುವ ಬ್ರಾಹ್ಮಣರೆಲ್ಲರೂ ದೇಶವನ್ನು ಬಿಟ್ಟು ಹೊರನಡೆದರು. "ಸಬ್ರಾಹ್ಮಣೈಃ ಪರಿತ್ಯಕ್ತಃ ತತೋ ವೈ ಜಗತಃ ಪತಿಃ ಪುರೋಹಿತಾಪಚಾರಾಚ್ಚ ತಸ್ಯ ರಾಜ್ಞೋ ಯದೃಚ್ಛಯಾ|| ಈ ಘಟನೆಯಿಂದ ಗಾಬರಿಯಾದ ರೋಮಪಾದ.
. ಆಗ ತನ್ನ ಪುರೋಹಿತರನ್ನು ಕರೆಸಿ ಕೇಳಿದ ಯಾಕೆ ಬ್ರಾಹ್ಮಣರೆಲ್ಲಾ ನನ್ನ ದೇಶವನ್ನು ಬಿಟ್ಟು ಹೋದರು.. ಆಗ ಆ ಪುರೋಹಿತರೂ ಈ ರೋಮ ಪಾದನನ್ನು ಹಳಿದರು.. ಛೀ.. ನೀನು ಮಾಡಿದ ಪಾಪ ಕಾರ್ಯದಿಂದಾಗಿ ಹೀಗಾಗಿದೆ ಎಂದರು... ಅದನ್ನು ಕೇಳಿ ಪುರೋಹಿತರ ಮೇಲೂ ಕೋಪಗೊಂಡ ರಾಜ ಅವರನ್ನೂ ಹೊರ ಹಾಕಿದ.. ಬೇರೆ ದೇಶದಿಂದ ಬ್ರಾಹ್ಮಣರನ್ನು ಕರೆತರಬೇಕೆಂದು ಆಲೋಚಿಸಿದ. ಆದರೆ ಆ ಎಲ್ಲಾ ಬ್ರಾಹ್ಮಣರು ರಾಜನನ್ನು ಹಳಿದರು.. ಆಗ ಚಿಂತಾಕ್ರಾಂತನಾದ ರಾಜ.. ರಾಜ್ಯದಲ್ಲಿ ಮಳೆ ಬೆಳೆಗಳು ಆಗಲಿಲ್ಲ.. ಬ್ರಾಹ್ಮಣರು ಬಾಳದ ಭೂಮಿಯಲ್ಲಿ ಏನೂ ಆಗಲಾರದು ಎಂಬುದನ್ನರಿತ ರಾಜ ಲೋಮಪಾದ ಹೇಗಾದರೂ ಮಾಡಿ ಬ್ರಾಹ್ಮಣರನ್ನು ಈ ರಾಜ್ಯಕ್ಕೆ ಕರೆತಂದು ಬಾಳುಗೊಡಬೇಕು ಎಂದುಕೊಂಡ... ಆಗ ಯಾರೋ ರಾಜನಿಗೆ ಒಂದು ಸಲಹೆಯನ್ನಿತ್ತರು.... " ರಾಜಾ ವಿಭಾಂಡಕ ಎಂಬ ಮುನಿಯ ಮಗನೊಬ್ಬನಿದ್ದಾನೆ ಆ ವಿಭಾಂಡಕ ಮುನಿಯೋ ಮಹಾನ್ ಕೋಪಿಷ್ಠ..! ಅವನ ಮಗನೇ ಋಷ್ಯಶೃಂಗ..!! ಲೋಕದ ಯಾವ ಜ್ಞಾನವೂ ಇಲ್ಲದೇ ದಷ್ಟಪುಷ್ಟವಾಗಿ ಗಡವನಂತೆ ಬೆಳೆದುಕೊಂಡಿದ್ದಾನೆ.. ಕಟ್ಟುಮಸ್ತಾದ ದೇಹವಿದ್ದರೂ ಯಾವ ಪ್ರಯೋಜನವೂ ಇಲ್ಲ... ಆದರೆ ಅವನ ಪಾದದಲ್ಲಿ ಕ್ಷೇಮ ಚಕ್ರವಿದೆ..!! ಇದರಿಂದಾಗಿ ಅವನು ಯಾವ ಪ್ರದೇಶದಲ್ಲಿ ಕಾಲಿಡುತ್ತಾನೋ ಆ ಪ್ರದೇಶದಲ್ಲಿ ಮಳೆ ಬೆಳೆಗಳು ಉಂಟಾಗುತ್ತವೆ.. ಹಾಗಾಗಿ ಅವನನ್ನು ಕರೆಸು.. ಕ್ಷೇಮವಾಗುತ್ತದೆ ಅಲ್ಲದೇ ನಿನಗೊಬ್ಬಳು ಮಗಳಿದ್ದಾಳಲ್ಲಾ ಅವಳನ್ನು ಅವನಿಗೇ ಕೊಟ್ಟು ಮದುವೆಮಾಡಿ ನಿನ್ನ ರಾಜ್ಯದಲ್ಲಿಯೇ ಇಟ್ಟುಕೋ. (ಹೌದು ಅವನಿಗೊಬ್ಬ ಸಾಕುಮಗಳಿದ್ದಳು.. ಅವಳು ಶಾಂತಾ..! ದಶರಥನ ಮುನ್ನೂರೈವತ್ಮೂರು ಪತ್ನಿಯರಲ್ಲಿ ಯಾವಳಲ್ಲಿಯೋ ಹುಟ್ಟಿದ ಕೂಸು.. ಅದನ್ನು ಈ ರೋಮಪಾದನಿಗೆ ದಶರಥನೇ ದತ್ತಕಕ್ಕೆ ಕೊಟ್ಟಿದ್ದ...!!) ಎಂದು ಸಲಹೆಯನ್ನಿತ್ತ.. ಅದನ್ನು ಕೇಳಿದ ರೋಮಪಾದ.. ಕೂಡಲೇ ಆ ಋಷ್ಯಶೃಂಗನನ್ನು ತನ್ನ ರಾಜ್ಯಕ್ಕೆ ಕರೆಸುವ ಸಲುವಾಗಿ ಉಪಾಯಗಳನ್ನು ಹುಡುಕತೊಡಗಿದ..
ಈ ವಿಭಾಂಡಕನ ಪುತ್ರನೋ.. ಅವನಿಗೊಬ್ಬನೇ ಮಗ.. ಬೇರೆ ಯಾರೂ ಬಂಧುಗಳಿಲ್ಲ.. ಈ ವಿಭಾಂಡಕರೋ.. ಮಹಾ ಬ್ರಾಹ್ಮಣ.. ಕಾಶ್ಯಪ ಗೋತ್ರದಲ್ಲಿ ಜನಿಸಿದ ಇವರು ಅದೇ ಅಂಗ ದೇಶದ ಪಕ್ಕದ ದೇಶದಲ್ಲಿ ತಮ್ಮ ಆಶ್ರಮವನ್ನು ಕಟ್ಟಿಕೊಂಡು ಶಿಷ್ಯಂದಿರಿಗೆ ವೇದೋಪದೇಶಗಳನ್ನು ಮಾಡುತ್ತಾ ಕಾಲಕಳೆಯುತ್ತ ಇದ್ದವರು... ಒಂದು ದಿನ ಸಮಿತ್ತುಗಳನ್ನು ಕಡಿಯುವುದಕ್ಕಾಗಿ ಮರವನ್ನೇರಿದ್ದ ವಿಭಾಂಡಕರು ಅದೇ ದಾರಿಯಲ್ಲಿ ದೇವಲೋಕದ ಅಪ್ಸರೆ ಊರ್ವಶಿ ಹಾದುಹೋಗುವುದನ್ನು ಗಮನಿಸಿದರು ಕಾಮೋತ್ತೇಜಿತರಾದರು.. ಅದರಿಂದ ಅವರ ಶರೀರದಿಂದ ಹೊರಬಂದ ರೇತಸ್ಸು ಅಲ್ಲೇ ಕೆಳಗೆ ಓಡಾಡಿಕೊಂಡಿದ್ದ ಒಂದು ಜಿಂಕೆಯ ಕೋಡಿನ ಮೇಲೆ ಬಿತ್ತು....!! ಕೂಡಲೇ ಆ ಜಿಂಕೆಯು ಗರ್ಭ ಧರಿಸಲಾಗಿ ಆ ಜಿಂಕೆಯ ಹೊಟ್ಟೆಯಲ್ಲಿ ಹುಟ್ಟಿಬಂದ ಮಾನವರೂಪಿ ಶಿಶು...!!! ಜಿಂಕೆಯ ಗರ್ಭದಲ್ಲಿ ಬೆಳೆದುದರಿಂದ ಹುಟ್ಟಿದ ಶಿಶುವು ಜಿಂಕೆಯಂತೆ ಎರಡು ಕೊಂಬುಗಳನ್ನು ಹೊಂದಿತ್ತು.. ಆದ್ದರಿಂದ ಆ ಶಿಶುವಿಗೆ "ಋಷ್ಯಶೃಂಗ" ಎಂದು ನಾಮಕರಣ ಮಾಡಿದರು ವಿಭಾಂಡಕರು...!!! ಅವನ ಮೇಲೆ ಅತಿಯಾದ ವ್ಯಾಮೋಹ.. ಆಳೆತ್ತರಕ್ಕೆ ಬೆಳೆದು ನಿಂತಿದ್ದರೂ ಲೋಕದ ಹೊರ ಪರಿಚಯವೇ ಆಗದಂತೆ ಬೆಳೆಸಿಬಿಟ್ಟಿದ್ದ... ಪ್ರಾಯ ಪ್ರಭುದ್ಧನಾಗಿದ್ದರೂ ಸ್ತ್ರೀಯರನ್ನು ಕಣ್ಣಿನಿಂದಲೇ ನೋಡಿರಲಿಲ್ಲ..!! ಸ್ತ್ರೀ ಕುಲದ ಯಾವ ಪರಿಚಯವೂ ಅವನಿಗಿದ್ದಿಲ್ಲ..!!
ತನ್ನ ಮಗನಿಗೆ ವೇದಜ್ಞಾನವನ್ನು ಬಿಟ್ಟು ಬೇರೇನೂ ಗೊತ್ತಾಗಬಾರದೆಂದು ಅದ್ಭುತವಾದ ಬ್ರಹ್ಮಚಾರಿಯಾಗಿ ಬಾಳಬೇಕು ತನ್ನ ಮಗ ಎಂದು.. ಈ ರೀತಿಯಾಗಿ ಬೆಳೆಸಿದ್ದರು..!! "ಸತೇನ ದ್ರಷ್ಟಪೂರ್ವೋನ್ಯಃ ಪಿತೃರನ್ಯತ್ರ ಮಾನುಷಃ| ತಸ್ಮಾತ್ತಸ್ಯ ಮನೋನಿತ್ಯಂ ಬ್ರಹ್ಮಚರ್ಯ ಭವನೃಪ|| ಆಜನ್ಮ ಬ್ರಹ್ಮ ಚಾರಿಯಾಗಿ ಬದುಕಬೇಕು, ತನ್ನಮಗನಿಗೆ ಸ್ತ್ರೀ ದರ್ಶನವೇ ಆಗಬಾರದು ಎಂಬಂತೆ ಬೆಳೆಸಿದ್ದರು..!! ತಾವು ಹೊರಗೆ ಹೋಗುವಾಗಲೂ ತನ್ನ ಮಗನನ್ನು ಆಶ್ರಮದೊಳಗೆ ಕೂಡಿಹಾಕಿ ಹೋಗುತ್ತಿದ್ದರು.. ಆದ್ದರಿಂದ ಋಷ್ಯಶೃಂಗನಿಗೆ ಯಾವುದರ ಪರಿವೆಯೂ ಇರಲಿಲ್ಲ...!!
ಉಪಾಯವನ್ನು ಹುಡುಕುತ್ತಿದ್ದ ರೋಮಪಾದನಿಗೆ ಈ ಋಷ್ಯಶೃಂಗನನ್ನು ಕರೆಸುವುದು ಹೇಗೆಂದು ಚಿಂತೆಯಾಯಿತು. ಹಲವಾರು ಜನರನ್ನು ಕೇಳಿದ.. ಆ ಋಷಿಕುಮಾರನನ್ನು ಕರೆಸಿಕೊಡಿ ಎಂದು.. ಆದರೆ ವಿಭಾಂಡಕರ ಕೋಪದ ಅರಿವಿದ್ದ ಬ್ರಾಹ್ಮಣರು ಯಾರೂ ಅವನನ್ನು ಕರೆತರಲು ಒಪ್ಪಲಿಲ್ಲ... ಕೇಳಿದಷ್ಟು ಧನಕನಕಗಳನ್ನು ಕೊಡುತ್ತೇನೆಂದರೂ ಆಗದೆಂದರು ಬ್ರಾಹ್ಮಣರು.... ಹೀಗೇ ಕಾಲಯಾಪನೆ ಮಾಡುತ್ತಿರುವಾಗ ಓರ್ವ ಬ್ರಾಹ್ಮಣ ಒಂದು ಸಲಹೆಯನ್ನು ಕೊಟ್ಟ.. !!! ಅದೇನೆಂದರೆ ರಾಜಗಣಿಕೆಯರ ಸಹಾಯವನ್ನು ಪಡೆದುಕೊಳ್ಳುವುದು...!!! ವಾರಾಂಗನೆಯರನ್ನು ಅವನಲ್ಲಿಗೆ ಕಳಿಸು... ಎಂದ.. ಅದರಂತೆ ಆಸ್ಥಾನದ ವೇಶ್ಯೆಯರನ್ನೆಲ್ಲಾ ರಾಜ ತನ್ನೆದುರಿಗೆ ಕರೆಸಿದ...! ಆದರೆ ಯಾವ ಗಣಿಕೆಯೂ ಈ ಕೆಲಸಕ್ಕೆ ಒಲ್ಲೆ ಎಂದು ಒಪ್ಪಲಿಲ್ಲ..ಅವರಿಗೂ ಈ ವಿಭಾಂಡಕನ ಪರಿಚಯವಿತ್ತು..ಅವನ ಕೋಪದ ಅರಿವಿತ್ತು..!! ಆಗ ರಾಜ ಅವರಮೇಲೂ ಸಿಟ್ಟಾಗಿ ನಿಮಗೆಲ್ಲಾ ಪಿಂಡಹಾಕಿ ಸಾಕಿದ್ದು ವ್ಯರ್ಥವಾಯಿತು ಎಂದು ಗದರಿದ..!! ಅಷ್ಟರಲ್ಲಿ ಅಲ್ಲಿಯೇ ಇದ್ದ ಓರ್ವ ಮುದುಕಿಯಾದ ವೇಶ್ಯೆಯು ಮುಂದೆ ಬಂದಳು "ರಾಜಾ.... ನಾನು ಹೋಗುತ್ತೇನೆ...!! ಆ ಬ್ರಾಹ್ಮಣ ವಟುವನ್ನು ಹೇಗಾದರೂ ಮಾಡಿ ನಿನ್ನ ರಾಜ್ಯಕ್ಕೆ ಕರೆತರುತ್ತೇನೆ ... ಆದರೆ ನನಗೆ ಕೆಲವು ಸೋಪಸ್ಕರಗಳನ್ನು ಹೊಂದಿಸಿಕೊಡಬೇಕು" ಎಂದಳು. "ಏನು?" ಎಂದ ರಾಜ. " ರಾಜಾ.. ನನಗೆ ಒಂದು ನೀರಿನಲ್ಲಿ ಓಡಾಡಬಹುದಾದ ದೊಡ್ಡ ನಾವೆಯನ್ನು ತರಿಸಿಕೊಡು.. ಅದು ಹೇಗಿರಬೇಕೆಂದರೆ..... ಅದರಲ್ಲಿ ಹಲವು ಜನ ವೇಶ್ಯಾ ಸ್ತ್ರೀಯರು ವಾಸಮಾಡುವುದಕ್ಕಾಗಿ ಪ್ರತ್ಯೇಕವಾದ ಕೊಠಡಿಗಳಿರಬೇಕು.. ಕೊಠಡಿಗಳ ಸುತ್ತಲೂ ಕೃತಕವಾದ ಗಿಡಮರಗಳು ಇರಬೇಕು ಅದು ಹೂವು ಹಣ್ಣುಗಳಿಂದ ತುಂಬಿ ತೊನೆಯುತ್ತಿರಬೇಕು".....??????!! ರಾಜ ಒಪ್ಪಿದ. ದೋಣಿ ಸಿದ್ಧವಾಯಿತು.. ತನಗೆ ಬೇಕಾದ ಅನೇಕ ಸುಂದರ ಸ್ತ್ರೀಯರನ್ನು ಅದರಲ್ಲಿ ತುಂಬಿಕೊಂಡು ಆ ಮುದುಕಿ ಹೊರಟಳು.. ಗಂಗಾ ನದಿಯಲ್ಲಿ... ಹೀಗೇ ಅನೇಕ ದಿನಗಳು ಕಳೆದವು..ಪ್ರತಿದಿನವೂ ಬೇಕಾದ ಅಲಂಕಾರಗಳನ್ನು ಮಾಡಿಕೊಂಡು ಈ ವಿಭಾಂಡಕರ ಆಶ್ರಮವನ್ನು ಹುಡುಕುತ್ತಾ ಸಾಗಿದರು... ಅಂತೂ ಮುನಿಯ ಆಶ್ರಮದಿಂದ ತುಸು ದೂರದಲ್ಲಿ ದೋಣಿ ಬಂದು ತಲುಪಿತು... ಆದರೆ ಅಲ್ಲಿ ಮುನಿಯಾಶ್ರಮ ಯಾವುದೆಂದು ವಿಚಾರಿಸುವಂತಿರಲಿಲ್ಲ..!! ತಿಳಿದರೆ ಸುಟ್ಟುಬಿಡುತ್ತಾನೆ.. ಹಾಗಾಗಿ ಅಲ್ಲಿಯೇ ಸುತ್ತಾಡುತ್ತಾ ಆಶ್ರಮ ಆಶ್ರಮಗಳನ್ನು ಜಾಲಾಡುತ್ತಾ ಇರುವಾಗ.. ಒಂದು ಆಶ್ರಮ ಈ ಗಣಿಕಾ ಸ್ತ್ರೀಯರ ಕಣ್ಣಿಗೆ ಬಿತ್ತು.. ಅಲ್ಲಿರುವ ಮುನಿಯೋರ್ವ ಪ್ರತಿದಿನವೂ ತನ್ನ ಮಗನನ್ನು ಒಳಗೆ ಕೂಡಿಹಾಕಿ ತಾನು ಯಜ್ಞಕಾರ್ಯಾರ್ಥವಾಗಿ ಹೊರಗೆ ಸಂಚಾರಕ್ಕೆ ತೆರಳುತ್ತಿದ್ದ...!
..... ಹಲವು ದಿನಗಳ ಕಾಲ ಮುನಿಯ ಚಲನವಲನಗಳನ್ನು ಅಭ್ಯಾಸಮಾಡಿದ ಈ ವೇಶ್ಯಾ ಸ್ತ್ರೀಯರು ಒಂದು ದಿನ ಮುನಿಯು ಹೊರ ಸಂಚಾರಕ್ಕೆ ಹೋದ ಸಂದರ್ಭದಲ್ಲಿ ಓರ್ವ ಯುವತಿಯನ್ನು ಅವನ ಆಶ್ರಮದ ಸಮೀಪಕ್ಕೆ ಕಳುಹಿದಳು ಆ ವೃದ್ಧೆ..!! ಆ ಯುವತಿಯೋ ಮಹಾ ವಾರಾಂಗನೆ.. ಆ ಮುನಿಯ ಆಶ್ರಮಕ್ಕೆ ಸಮೀಪ ಹೋದಳು ಕಿಟಕಿ ಸಂದಿಯಿಂದ ಬಗ್ಗಿ ನೋಡಿದಳು... ಅಲ್ಲೊಬ್ಬ ಯುವಕ ಒಳಗೆ ಕುಳಿತುಕೊಂಡು ವೇದಾಧ್ಯಯನದಲ್ಲಿ ನಿರತನಾಗಿದ್ದ... ನೋಡುವುದಕ್ಕೆ ತುಂಬ ಸುಂದರನೂ ಆಗಿದ್ದ...!! ಅವನೂ ಅತ್ತ ಕಿಟಕಿಯಲ್ಲಿ ನೋಡಿದ...!! ಯಾರೋ ನಿಂತಂತಿದೆಯಲ್ಲಾ ಎಂದು "ಯಾರು"? ಎಂದ... ಆಗ ಈ ಯುವತಿ ತಡ ಮಾಡದೇ ಉತ್ತರಿಸಿದಳು.. "ನಾನೂ ನಿಮ್ಮಂತೆ ಒಂದು ಋಷಿಯಾಶ್ರಮದವಳು...!!" ಅಯ್ಯೋ ಇದೇನಿದು ಈ ರೀತಿಯಲ್ಲೂ ಋಷಿಗಳು ಇರುತ್ತಾರಾ...?" ಎಂದು ಕೇಳಿದ.. ಅದಕ್ಕವಳು ತಲೆಯಾಡಿಸಿದಳು..!! ಕೂಡಲೇ ಅವಳಿಗೆ ನಮಸ್ಕರಿಸುವುದಕ್ಕೆ ಮುಂದಾದ... ಛೇ ಛೇ.. ಹಾಗೆಲ್ಲಾ ಮಾಡಬಾರದು.. ಅದು ನಮ್ಮ ಪದ್ಧತಿಯಲ್ಲ.. ನಮ್ಮಲ್ಲಿ ಹೀಗೆಲ್ಲಾ ಅಭಿವಾದನ ಮಾಡುವುದಿಲ್ಲ..! " ಹಾಗಾದರೆ ನಿಮ್ಮ ಪದ್ಧತಿ ಹೇಗೆ..? ಎಂದು ವಿಚಾರಿಸಿದ.. ಅದಕ್ಕವಳು.." ನಮ್ಮ ಆಶ್ರಮ ಪದ್ಧತಿ ಎಂದರೆ ತಬ್ಬಿಕೊಳ್ಳುವುದೇ ಅಭಿವಾದನ...! ಮುತ್ತಿಕ್ಕುವುದೆ ಆಶೀರ್ವಾದ...!! (ವಯಸ್ಸಿಗೆ ಬಂದ ಯುವಕನೊಬ್ಬನಿಗೆ ಕಾಮೋದ್ರೇಕವಾ ಗುವುದಕ್ಕೆ ಏನೇನು ಮಾತುಗಳನ್ನು ಆಡಬೇಕೋ ಅದನ್ನೆಲ್ಲಾ ಹೇಳುತ್ತಾಳೆ...!!) ಹೀಗೆ ಹೇಳುತ್ತಾ ಕ್ಷೇಮ ಸಮಾಚಾರವನ್ನೆಲ್ಲಾ ಹೊರಗಿನಿಂದಲೇ ವಿಚಾರಿಸಿದಳು.. ಅದನ್ನು ಕೇಳಿದ ಋಷ್ಯಶೃಂಗನಿಗೆ ಯಾರೋ ಪರಿಚಿತರೇ ಇರಬೇಕು ಎಂದುಕೊಂಡು ಬಾಗಿಲನ್ನು ತೆರೆದ..!
ಕೂಡಲೇ ಒಳ ಬಂದ ಆ ಯುವತಿ ಅವನ ಸಮೀಪದಲ್ಲೇ ಬಂದು ನಿಂತಳು..! ಅವಳ ದಿವ್ಯವಾದ ಶರೀರವನ್ನು ನೋಡಿದ ಋಷ್ಯಶೃಂಗ ಅವಳನ್ನು ಯಾವುದೋ ಋಷಿಕುಮಾರನೆಂದೇ ಭಾವಿಸಿ ಮಾತನಾಡತೊಡಗಿದ....!! ಋಧ್ಯಾ ಭವಾನ್ ಜ್ಯೋತಿರಿತಿ ಪ್ರಕಾಶತೇ......."ಅರೆರೇ.. ಏನು ಸುಂದರಾಂಗನಯ್ಯಾ ನೀನು.. ನಿನ್ನ ಈ ದಿವ್ಯವಾದ ಶರೀರವನ್ನು ನೋಡಿದರೆ ಒಳ್ಳೇ ತೇಜಸ್ವಿಯ ಹಾಗೇ ಕಾಣುತ್ತೀಯಾ.. ನಿನ್ನನ್ನು ನೋಡುತ್ತಿದ್ದರೆ ನಿನ್ನ ಕಾಲುಗಳನ್ನು ತೊಳೆದು ನಿನಗೆ ನಮಸ್ಕಾರಗಳನ್ನು ಮಾಡಬೇಕೆನ್ನಿಸುತ್ತಿದೆ...!! ಕುಮಾರಾ...!! ಬಾ ಇದೋ ಇಲ್ಲಿ ದರ್ಭಾಸನವಿದೆ ಕುಳಿತುಕೋ.. ತಿನ್ನಲು ನಮ್ಮ ವನದಲ್ಲಿ ಬೆಳೆದ ಹಣ್ಣುಗಳಿವೆ ಸೇವಿಸು" ಎಂದೆಲ್ಲ ಬಡಬಡಿಸುತ್ತಾನೆ. ಹೀಗೇ ಕೇಳುತ್ತಾ "ನಿನ್ನ ಆಶ್ರಮವೆಲ್ಲಿ ಯಾವ ನಿಷ್ಠೆಯನ್ನು ಹೊಂದಿದ್ದೀಯಾ.. " ಎಂದು ಕೇಳಿದ..ಅದಕ್ಕವಳು ಇಲ್ಲೇ ಪಕ್ಕದಲ್ಲಿ ಎಂದು ಉತ್ತರಿಸಿದಳು... "ಹಾಗಾದರೆ ನಿಮ್ಮ ಕಾಲುಗಳನ್ನು ತೊಳೆದು ಅಭಿವಾದನ ಮಾಡುತ್ತೇನೆ.."ಎಂದ. ಅದಕ್ಕವಳು "ಛೇ ಛೇ.. ಇದು ನಮ್ಮ ಕ್ರಮವಲ್ಲ.. ನಾವು ಬ್ರಾಹ್ಮಣರಿಂದ ಕಾಲು ತೊಳೆಸಿಕೊಳ್ಳುವುದಿಲ್ಲ...!( ವೇಶ್ಯೆಯಾದರೂ ಬ್ರಾಹ್ಮಣರಿಂದ ಕಾಲು ತೊಳೆಸಿಕೊಳ್ಳಬಾರದೆಂಬ ಪ್ರಜ್ಞೆ...!! ) "ನಾನೇ ನಿನಗೆ ಕಾಲು ತೊಳೆದು ಅಭಿವಾದನ ಮಾಡಬೇಕು..!!( ಅಭಿವಾದನ...!!) ಹೀಗೇ ಹೇಳುತ್ತಾ ಇದು ನಮ್ಮ ವ್ರತ ಎಂದು ಅವನನ್ನು ತಬ್ಬಿಕೊಂಡಳು...!! ಆಗ ಅವನ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು.. ಇಂಥಾ ಅಭಿವಾದನವನ್ನು ಜನ್ಮದಲ್ಲಿಯೇ ಕಂಡಿಲ್ಲವಲ್ಲಾ..!! ಇನ್ನೊಮ್ಮೆ ಹೀಗೇ ಅಭಿವಾದನ ಮಾಡು ಎಂದ..!! ಆಮೇಲೆ ಅವಳು ಹೇಳಿದಳು.." ಇದೋ ಈ ಫಲಗಳನ್ನು ಸ್ವೀಕರಿಸು ಇವು ನಮ್ಮ ತೋಟದಲ್ಲಿ ಬೆಳೆದವು.. ನಿಮ್ಮಾಶ್ರಮದ ಫಲಗಳನ್ನು ಸ್ವೀಕರಿಸುವಂತಿಲ್ಲ ನಾವು.. ನಮ್ಮ ತೋಟದ ಹಣ್ಣುಗಳನ್ನು ನಿನಗೆ ಕೊಡುತ್ತಿದ್ದೇನೆ " ಎಂದು ತಾನು ತಂದ ಹಣ್ಣುಗಳನ್ನು ಅವನಿಗೆ ಕೊಟ್ತಳು.. ಅದನ್ನೆಲ್ಲ ಋಷ್ಯಶೃಂಗ ತಿಂದ... ಅಪರಿಚಿತವಾದ ಅನೇಕ ಫಲಗಳನ್ನು ತಾನು ಇದುವರೆಗೂ ತಿಂದೇ ಇರಲಿಲ್ಲ...! ನಮ್ಮಪ್ಪನಿಗೆ ಇವೆಲ್ಲಾ ಗೊತ್ತೇ ಇಲ್ಲ..!! ನಮ್ಮ ತೋಟದಲ್ಲಿ ಇವನ್ನೆಲ್ಲಾ ಬೆಳೆಸಿಯೇ ಇಲ್ಲ..!! ಹೀಗೇ ಅವರಿಬ್ಬರೂ ಹಣ್ಣುಗಳನ್ನು ತಿಂದರು.. ಅಲ್ಲದೇ ವಿಶೇಷವಾದ ಪೇಯಗಳನ್ನು ತಂದಿದ್ದೇನೆ ಎಂದು ಅನೇಕ ಬಗೆಯ ಪಾನೀಯಗಳನ್ನು ಕುಡಿಸಿದಳು... ಅಲ್ಲದೇ
ಮುಂದುವರೆಯುತ್ತದೆ.......
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ