प्रज्वालितॊ ज्ञानमयप्रदीपः

ಮಂಗಳವಾರ, ಏಪ್ರಿಲ್ 10, 2018

ಲಂಕೆ ಇದ್ದುದೆಲ್ಲಿ? ಒಂದು ವೈಚಾರಿಕ ವಿಶ್ಲೇಷಣೆ...!

       ಇದುವರೆಗೆ ಸಿಕ್ಕಿದ ರಾಮಾಯಣದ ಹಸ್ತಪ್ರತಿಗಳು ಮೂರು ಪಾಠಕ್ರಮಗಳನ್ನು ನಿರ್ದೇಶಿಸಿವೆ. ಮೊದಲನೇಯದು ದಾಕ್ಷಿಣಾತ್ಯ, ಎರಡನೇಯದು ಗೌಡೀಯ ಮತ್ತು ಮೂರನೇಯದು ಪಶ್ಚಿಮೋತ್ತರೀಯ. ಉದೀಚ್ಯಪಾಠವೇ ಕೊನೆಯ ಎರಡು ಭೇದದ್ವಯಗಳಾದವೆಂಬ ಭಾವನೆಯಿದೆ. ದಾಕ್ಷಿಣಾತ್ಯವು ದಕ್ಷಿಣ ಭಾರತದವರಿಗೆ ಹೆಚ್ಚು ಪರಿಚಿತ. ಈ ಮೂರೂ ಕ್ರಮಗಳಲ್ಲಿ ಯಾವ ಶ್ಲೋಕಗಳು ಸಾಮಾನ್ಯವಾಗಿವೆಯೋ ಅದೇ ರಾಮಾಯಣದ ಪ್ರಾಚೀನ ಶ್ಲೋಕಗಳೆಂದು ವಿದ್ವಾಂಸರು ಪರಿಗಣಿಸುತ್ತಾರೆ. ದಾಕ್ಷಿಣಾತ್ಯದಲ್ಲಿ ಇಲ್ಲದ ಕೇವಲ ಉದೀಚ್ಯದಲ್ಲಿ ಮಾತ್ರ ಕಂಡುಬರುವ ಅಂಶಗಳಲ್ಲಿ ಪ್ರಮುಖವಾದವು ಭರತ ಶತ್ರುಘ್ನರ ಯಾತ್ರೆ ಮತ್ತು ರಾಜಗೃಹವಾಸ, ಸೀತೆಯು ಜನಕನ ಮಾನಸಪುತ್ರಿಯೆಂಬ ಕಥೆ, ಕೇಸರಿಯ ಮಗನಾಗಿ ಹನುಮಂತನ ಜನ್ಮ, ನಿಕಷೆಯ ವೃತ್ತಾಂತ, ಕಾಲನೇಮಿಯ ಕಥೆ ಇತ್ಯಾದಿ. ಇಂಥ ಕಥೆಗಳೆಲ್ಲ ಸುಮಾರು ಕ್ರಿ,ಶ ೧ನೇ ಶತಮಾನದೀಚೆ ಸೇರಿಸಲ್ಪಟ್ಟವು. ೫ನೇ ಶತಮಾನದೀಚೆ ಉದೀಚ್ಯವು ಮತ್ತೆರಡು ಕವಲಾಯಿತು. ಅದೇ ರೀತಿ ರಾಮಾದಿಗಳ ಜನ್ಮತಿಥಿ, ನಕ್ಷತ್ರಗಳ ವರ್ಣನೆ, ಬಾಲಕಾಂಡದ ಪೌರಾಣಿಕ ಕಥೆಗಳು, ಅಕಂಪನ, ಅಯೋಮುಖಿಯರ ವೃತ್ತಾಂತ, ಹನುಮಂತನಿಗೂ ಲಂಕೆಯ ಅಭಿಮಾನಿ ದೇವತೆಗಳಿಗೂ ಯುದ್ಧ, ಅಗಸ್ತ್ಯನು ಆದಿತ್ಯ ಹೃದಯವನ್ನು ಉಪದೇಶಿಸುವುದು ಇತ್ಯಾದಿಗಳು ಕೇವಲ ದಾಕ್ಷಿಣಾತ್ಯದಲ್ಲಿ ಮಾತ್ರ ಕಂಡುಬರುವಂಥವು. 

     ಉತ್ತರಕಾಂಡವು ರಾಮಾಯಣದಲ್ಲಿ ನಿಸ್ಸಂಶಯವಾಗಿ ಬಹಳ ಕಾಲದ ನಂತರ ಸೇರಿದ್ದು. ಇದು ವಾಲ್ಮೀಕಿರಚಿತವಲ್ಲದ್ದೆಂದು ಭವಭೂತಿಯೇ ಮೊದಲಾದವರು ಸಂದೇಹ ವ್ಯಕ್ತಪಡಿಸಿದ್ದಾರೆ. ರಾಮನು ಅವತಾರಪುರುಷನೆಂಬ ವರ್ಣನೆ, ಸೀತೆಯು ವೇದವತಿಯ ಅಂಶವೆಂಬ ಕಲ್ಪನೆಗಳು ಇಲ್ಲಿಯೇ ಮೂಡಿದ್ದು. ಮಹಾಭಾರತದ ರಾಮೋಪಾಖ್ಯಾನದಿಂದ ಹಿಡಿದು ಜಾನಕೀಹರಣ, ರಾಮಚರಿತ, ಭಟ್ಟಿಕಾವ್ಯ, ಅನರ್ಘರಾಘವ ಸೇರಿ ರಾಮಾಯಣದ ಗ್ರಂಥಗಳಲ್ಲೆಲ್ಲ ಕಥೆಯು ಮುಕ್ತಾಯವಾಗುವುದು ರಾಮಪಟ್ಟಾಭಿಷೇಕದಲ್ಲೇ. ಇದೇ ರೀತಿ ಪ್ರಕ್ಷೇಪಗೊಂಡ ಇನ್ನೊಂದು ಭಾಗವು ಬಾಲಕಾಂಡ. ಇದೂ ಕೂಡ ರಾಮಾಯಣ ರಚಿತಗೊಂಡು ಎಷ್ಟೋ ಕಾಲದ ನಂತರ ಒಂದಕ್ಕಿಂತ ಹೆಚ್ಚು ಸಮಯಗಳಲ್ಲಿ ಸೇರಲ್ಪಟ್ಟಿದ್ದು. ಇಲ್ಲಿ ಹೇಳಿದ ಕೆಲ ವಿಷಯಗಳು ಮುಂದಿನ ಭಾಗಗಳಲ್ಲಿ ತದ್ವಿರುದ್ಧವಾಗಿವೆ. ಉದಾಹರಣೆಗೆ ಬಾಲಕಾಂಡದಲ್ಲಿ ಲಕ್ಷ್ಮಣನಿಗೂ ಊರ್ಮಿಳೆಗೂ ಮದುವೆಯಾಯಿತೆಂದಿದ್ದರೆ ಅರಣ್ಯಕಾಂಡದಲ್ಲಿ ಶೂರ್ಪನಖಿಯೊಡನೆ ರಾಮನು ಲಕ್ಷ್ಮಣನಿಗಿನ್ನೂ ಮದುವೆಯಾಗಿಲ್ಲವೆನ್ನುತ್ತಾನೆ. ಇಂಥ ಕಾರಣಗಳಿಂದ ಬಾಲಕಾಂಡವೂ ಉತ್ತರಕಾಂಡದಂತೆ ಪ್ರಕ್ಷೇಪಭೂಯಿಷ್ಟವೆಂದು ವಿದ್ವಾಂಸರು ಭಾವಿಸುತ್ತಾರೆ. ರಾಮನು ವಿಷ್ಣುವಿನ ಅವತಾರವೆಂಬ ಕಲ್ಪನೆ ಬರುವುದು ಪ್ರಕ್ಷೇಪಗೊಂಡ ಬಾಲಕಾಂಡದಲ್ಲಿಯೇ. ಉಳಿದೆಡೆ ’ವಿಷ್ಣುನಾಸದೃಶೋ ವೀರ್ಯೇ’ ಎಂದಿದೆಯೇ ಹೊರತೂ ವಿಷ್ಣುವಿನ ಅವತಾರವೆಂದಲ್ಲ. ದಾಕ್ಷಿಣಾತ್ಯಪಾಠದ ಸುಂದರಕಾಂಡದಲ್ಲೂ ಒಂದೇ ಒಂದು ಕಡೆ ಹನುಮಂತನು ರಾಮನನ್ನು ’ವಿಷ್ಣುತುಲ್ಯ ಪರಾಕ್ರಮಃ’ ಎಂದು ಸ೦ಬೋಧಿಸುತ್ತಾನೆ. ರಾಮನು ವಿಷ್ಣುವಿನ ಅವತಾರವೆಂಬ ಕಲ್ಪನೆ ಬೆಳೆದದ್ದು ಪ್ರಾಯಶಃ ಗುಪ್ತರ ಕಾಲದಲ್ಲಾದ ವೈಷ್ಣವ ಮತದ ಬೆಳವಣಿಗೆಯಲ್ಲಿರಬಹುದು. ಮೂಲರಾಮಾಯಣದಲ್ಲಿ ಅತಿಮಾನುಷ ಘಟನೆಗಳು ಅತ್ಯಲ್ಪವಾದ ಕಾರಣ ಪುಷ್ಪಕ ವಿಮಾನ, ಲಂಕಾದಹನ, ಸಂಜೀವಿನಿ ಪರ್ವತವನ್ನು ತರುವುದು, ಅಗ್ನಿಪರೀಕ್ಷೆಗಳೆಲ್ಲ ಮತ್ತೆ ಪ್ರಕ್ಷೇಪಿತ ಭಾಗಗಳೇ. ರಾಮನನ್ನು ಆದರ್ಶಪುರುಷನೆಂದು ತೋರಿಸುವುದಕ್ಕೆ ವಾಲಿವಧೆಯನ್ನು ನ್ಯಾಯಸಂಗತಗೊಳಿಸುವ ಪ್ರಯತ್ನವೂ ಹೊಸದೇ.
     ಲೆಟ್ ಮಿ ಕಮ್ ಟು ದ ಪಾಯಿಂಟ್. ಕಿಷ್ಕಿಂಧೆ ಎಲ್ಲಿದೆ ಎಂಬುದು ದೊಡ್ಡ ಪ್ರಶ್ನೆ. ಲಂಕೆ ಎಲ್ಲಿದೆ ಎಂಬುದು ಅದಕ್ಕಿಂತ ದೊಡ್ಡ ಪ್ರಶ್ನೆ. ಇದೇನು ಹುಚ್ಚಾಟ ಎನ್ನಬೇಡಿ. ನಮ್ಮಲ್ಲಿ ಪ್ರತಿ ಊರಿನಲ್ಲೊಂದು ರಾಮಾಯಣಕ್ಕೆ ಸಂಬಂಧಿಸಿದ ಸ್ಥಳವಿದೆ, ಪ್ರತಿ ಹಳ್ಳಿಯಲ್ಲೂ ಪಾಂಡವರು ಬಂದು ಕಟ್ಟಿದ ದೇವಸ್ಥಾನವಿದೆ, ಪ್ರತಿ ಗುಡ್ಡದ ಮೇಲಿನ ಕಲ್ಲಿನಲ್ಲಿ ಹನುಮಂತನ ಹೆಜ್ಜೆಯೋ, ಭೀಮನ ಪಾದವೋ ಇದೆ. ಹನುಮಂತ ಹುಟ್ಟಿದ್ದು ಗೋಕರ್ಣದಲ್ಲೆಂದು ಅಷ್ಟಮಂಗಲದಲ್ಲಿ ಕಂಡುಬಂದಿದೆ, ಕಿಷ್ಕಿಂಧೆಯಿರುವುದು ಇಲ್ಲೇ, ಕಿಷ್ಕಿಂಧೆಯಿರುವುದು ಹಂಪೆಯಲ್ಲಿ, ಕಿಷ್ಕಿಂಧೆಯಿರುವುದು ಮಹಾರಾಷ್ಟ್ರದ ಅಂಜನಾದ್ರಿಯಲ್ಲಿ ಎಂಬಂಥ ಹತ್ತಾರು ನಂಬಿಕೆಗಳಿರಲಿ ಬಿಡಿ. ಕಿಷ್ಕಿಂಧಾ, ಋಷ್ಯಮೂಕ, ಪಂಪಾಸರೋವರ, ಪ್ರಸ್ರವಣ ಮುಂತಾದವು ದಂಡಕಾರಣ್ಯದಲ್ಲಿವೆ ಎಂದು ರಾಮಾಯಣದಲ್ಲೇ ಎನ್ನಲಾಗಿದೆ. ಚಿತ್ರಕೂಟ, ಪಂಪಾ, ಕಿಷ್ಕಿಂಧೆ, ಪಂಚವಟಿ, ದಂಡಕಾರಣ್ಯಗಳು ಮಧ್ಯಭಾರತ ಮತ್ತು ಅದಕ್ಕಿಂತ ತುಸು ಕೆಳಗಿರುವ ಪರಸ್ಪರ ಸಂಬಂಧಿತ ಸ್ಥಳಗಳೆಂದು ವಿವಾದಾತೀತ ಆಧಾರಗಳು ಕ್ರಿ.ಶ ೬ನೇ ಶತಮಾನದವರೆಗೂ ದೊರಕುತ್ತವೆ. ವಾಯು, ಬ್ರಹ್ಮಾಂಡ, ಮಾರ್ಕಂಡೇಯ, ಮತ್ಸ್ಯ ಪುರಾಣಗಳೂ ಕಿಷ್ಕಿಂಧೆಯ ಜನಪದವನ್ನು ಮಲದ, ಕುರೂಷ, ಮೇಖಲ, ಕೋಸಲ, ವಿದಿಷ, ಅನುಪಗಳೊಡನೆ ಕೂಡಿಸಿ ಇವೆಲ್ಲ ವಿಂಧ್ಯದಲ್ಲಿವೆ ಎಂದು ಬಣ್ಣಿಸುತ್ತವೆ. ಈ ಪರಿಸರದಲ್ಲೇ ಲಂಕೆಯೂ ಇದ್ದಿರಬೇಕು. ಅದು ಸರೋವರ ಅಥವಾ ನದಿಮಧ್ಯದ ದ್ವೀಪವಾಗಿರಬೇಕು. ಮೂಲಕಥೆಯಲ್ಲಿ ಕೈಯಾಡಿಸಿ ಮಹಾಕಾವ್ಯವನ್ನು ಪುನರ್ರಚಿಸುವಾಗ ಪವಾಡಸದೃಶ ಅದ್ಭುತ ಅಂಶಗಳನ್ನು ಸೇರಿಸಲಾಯ್ತು. ಕಿಷ್ಕಿಂಧಾನಗರಿಯು ಎಲ್ಲ ಸೌಲಭ್ಯಗಳನ್ನು ಹೊಂದಿದ ದೊಡ್ಡ ಗುಹೆ ಮಾತ್ರ ಎಂದು ಕವಿ ಪದೇ ಪದೇ ಹೇಳಿದ್ದಾನೆ. ರಾಮ ಲಕ್ಷ್ಮಣರು ಭೇಟಿಕೊಟ್ಟಾಗ ಅಲ್ಲಿನ ಹೊರಬಾಗಿಲುಗಳಲ್ಲಿ ಭಟರುಗಳಿದ್ದರು, ಗುಹೆಯೊಳಗೆ ಅರಮನೆಗಳು, ಹಲವಾರು ಮನೆಗಳೂ ಇದ್ದವು. ಕಿಷ್ಕಿಂಧೆಯಲ್ಲಿಯೇ ವಾಲಿಯು ರಾಮನ ಬಾಣಕ್ಕೆ ತುತ್ತಾಗಿ ಕೊನೆಯುಸಿರೆಳೆಯುವಾಗ ’ನಿನ್ನೊಡನೆ ಯುದ್ಧಮಾಡದಿರುವ, ಕಾಡಿನಲ್ಲಿ ಹಣ್ಣುಹಂಪಲು ತಿಂದು ಬದುಕುವ ನನ್ನನ್ನೇಕೆ ಕೊಂದೆ’ ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ರಾಮ ಕೊಡುವ ಉತ್ತರ ಗಮನಾರ್ಹ.
ಇಕ್ಷ್ವಾಕುಕೂಣಾಮಿಯಂ ಭೂಮಿಃ ಸ ಶೈಲವನ ಕಾನನಾ
ಮೃಗಪಕ್ಷಿ ಮನುಷ್ಯಾಣಾಂ ನಿಗ್ರಹಾನುಗ್ರಹಾವಪಿ ||

ಅದರರ್ಥ ಕಿಷ್ಕಿಂಧೆಯು ಕೌಸಲದ ದಕ್ಷಿಣದಲ್ಲಿರುವ ಒಂದು ಭಾಗವಾಗಿತ್ತು. ಹೀಗಾಗಿ ಕಿಷ್ಕಿಂಧೆಯನ್ನು ಕರ್ನಾಟಕದಲ್ಲಿ ಗುರುತಿಸುವುದು ಶುದ್ಧಾಂಗ ತಪ್ಪು.
     ಕಿಷ್ಕಿಂಧಾಕಾಂಡದಲ್ಲಿ ಸುಗ್ರೀವನು ಪೂರ್ವದಿಕ್ಕಿನತ್ತ ತೆರಳಿದ ವಿನುತನಿಗೆ ಸೀತೆಯನ್ನು ಹುಡುಕೆಂದು ಹೇಳುವ ಸ್ಥಳಗಳಲ್ಲಿ ಲೋಹಿತ ಸಾಗರವೂ ಒಂದು. ಇದು ಬ್ರಹ್ಮಪುತ್ರಾ ನದಿಯೆಂದು ಗುರ್ತಿಸಲಾಗಿದೆ. ಸಾಗರ ಎಂಬ ಪ್ರತ್ಯಯದ ಬಳಕೆಯನ್ನು ನೋಡಿದರೆ ಇದು ಯಾವಗಲೂ ಸಮುದ್ರವನ್ನೇ ಬಿಂಬಿಸುತ್ತಿರಲಿಲ್ಲವೆನ್ನುವುದು ಸತ್ಯ. ನದಿ ಅಥವಾ ಭಾರೀ ಪ್ರಮಾಣದ ಸರೋವರಗಳೂ ಸಾಗರಗಳೆಂದೇ ಕರೆಯಲ್ಪಟ್ಟಿವೆ. ಶತಬಲಿಯ ನೇತೃತ್ವದಲ್ಲಿ ವಾನರರ ತಂಡ ಶೋಧನೆ ನಡೆಸಿದ ಸ್ಥಳಗಳಲ್ಲಿ ಮ್ಲೇಚ್ಛ, ಪುಳಿಂದ,  ಬಾಹ್ಲೀಕ, ಪೌರವ, ನೀಹಾರ, ಶಕ, ಯವನ, ಚೀನಾ, ಕ್ರೌಂಚ ದೇಶಗಳೂ ಸೇರಿವೆ. ಈ ಪಟ್ಟಿಯಲ್ಲಿ ಶಕ, ಯವನರಂಥ ಹೊಸ ಜನಾಂಗಗಳನ್ನೂ ಎಳೆದು ತರಲಾಗಿದೆ. ಹೂಣರು ಈ ಪಟ್ಟಿಯಲ್ಲಿಲ್ಲದ ಕಾರಣ ಅವರು ಪ್ರಬಲರಾಗಿದ್ದು ಐದನೇ ಶತಮಾನದ ಹೊತ್ತಿಗೆ. ಆದ್ದರಿಂದ ಈ ಸರ್ಗಗಳ ರಚನೆಯಾಗಿದ್ದು ಕ್ರಿ.ಶ ಎರಡರಿಂದ ನಾಲ್ಕನೇ ಶತಮಾನದೊಳಗಿರಬಹುದು. ಪಶ್ಚಿಮದತ್ತ ಹೊರಟ ಸುಷೇಣ ಶೋಧ ನಡೆಸಿದ ಸ್ಥಳಗಳು ಅಭೀರ, ಮರೀಚಪಟ್ಟಣ ಇತ್ಯಾದಿ. ಅಭೀರರು ಕ್ಷತ್ರಪರ ನಂತರ ಕ್ರಿ.ಶ ಮೂರನೇ ಶತಮಾನದಲ್ಲಿ ಪಶ್ಚಿಮ ಭಾರತದಲ್ಲಿ ರಾಜಕೀಯ ವ್ಯವಸ್ಥೆಯಾಗಿ ರೂಪಗೊಂಡರು. ಅದಕ್ಕೂ ಮೊದಲು ಕ್ರಿ.ಪೂ ಒಂದನೇ ಶತಮಾನದಲ್ಲಿ ಕೇರಳದಿಂದ ಕಾಳುಮೆಣಸು(ಮರೀಚ) ಮತ್ತು ಸಾಂಬಾರ ಪದಾರ್ಥಗಳಿ ಪರದೇಶಗಳಿಗೆ ರಫ್ತಾಗುತ್ತಿದ್ದವು. ರೋಮನ್ನರು ಕೇರಳ ಕರಾವಳಿಯ ಮುಜರಿಸ್ ಬಂದರುಗಳಿಂದ ಕಾಳುಮೆಣಸನ್ನು ಕೊಂಡೊಯ್ಯುತ್ತಿದ್ದರೆಂದು ಪಾಶ್ಚಾತ್ಯ ಭೂಗೋಳಶಾಸ್ತ್ರಜ್ಞರಾದ ಸ್ಟ್ರಾಬೋ ಮತ್ತು ಪ್ಲೈನಿ ತಿಳಿಸಿದ್ದಾರೆ. ಮರೀಚ ಪಟ್ಟಣವು ಈ ಪಟ್ಟಿಯಲ್ಲಿ ಸೇರಿದ್ದು ಕಿಷ್ಕಿಂಧಾ ಕಾಂಡದ ಪಕ್ಷಿಪ್ತ ಭಾಗಗಳ ಕಾಲಮಿತಿಯನ್ನು ನಿರ್ಣಯಿಸಲು ಸಹಕಾರಿಯಾಗಿದೆ. ಅರಣ್ಯ ಕಾಂಡದಲ್ಲೂ ಮರೀಚಪಟ್ಟಣದ ಉಲ್ಲೇಖವಿದೆ. ಖರದೂಷಣರನ್ನು ಕೊಂದ ವಿಷಯವನ್ನು ರಾವಣನಿಗೆ ತಿಳಿಸಲು ಶೂರ್ಪಣಖಿ ಲಂಕೆಗೆ ಓಡುವ ಪ್ರಕರಣ. ಬಳಿಕ ರಾವಣ ಕತ್ತೆಗಳಿಂದ ಎಳೆಯಲ್ಪಟ್ಟ ರಥವನ್ನೇರಿ ಮಾರೀಚನ ಆಶ್ರಮವನ್ನು ತಲಪುತ್ತಾನೆ. ದಾರಿ ಮಧ್ಯದ ವರ್ಣನೆಗಳಲ್ಲಿ ಸಮುದ್ರತೀರದ ಸೂರ್ಯಾಸ್ತ, ಮರೀಚ(ಕಾಳುಮೆಣಸಿನ) ತೋಟಗಳು, ಶಂಖ ಮತ್ತು ಮುತ್ತಿನ ರಾಶಿಗಳಿವೆ. ಇದು ಪಕ್ಕಾ ಪಶ್ಚಿಮ ಸಮುದ್ರ ತೀರದ ವರ್ಣನೆ. ವಾಸ್ತವವಾಗಿ ಕೇರಳದ ಕ್ರಾಂಗಾನೂರ್ ಮೊದಲು ಮರೀಚಪಟ್ಟಣವಾಗಿ ಪ್ರಸಿದ್ಧವಾಗಿತ್ತು. ಅರಣ್ಯ ಕಾಂಡವನ್ನು ಪುನರೂಪಿಸಿದ ಕವಿಗೆ ಲಂಕೆಯು ದಕ್ಷಿಣದ ಹಿಂದೂಮಹಾಸಾಗರದಲ್ಲೆಲ್ಲೋ ಇದ್ದೀತೆಂಬ ಅಸ್ಪಷ್ಟ ಕಲ್ಪನೆಯಿರಬಹುದು. ಅದಕ್ಕಾಗಿಯೇ ದಕ್ಷಿಣ ಭಾರತದ ಹೆಚ್ಚಿನ ಯಾವ ಪ್ರದೇಶಗಳ ಉಲ್ಲೇಖವಿಲ್ಲದಿದ್ದರೂ ಮೊದಲಿನಿಂದಲೂ ಹೆಸರಾಗಿದ್ದ ಮರೀಚಪಟ್ಟಣದ ಹೆಸರು ಒಂದಕ್ಕಿಂತ ಹೆಚ್ಚು ಬಾರಿ ಬಂದಿದೆ. ರಾಮನ ಬಾಣದಿಂದ ದೂರ ಎಸೆಯಲ್ಪಟ್ಟ ಮಾರೀಚನು ಲಂಕೆಗೆ ಓಡಿದ. ಖರನನ್ನು ರಾಮ ಕೊಂದಾಗ ಲಂಕೆಗೆ ಅವಸರವಾಗಿ ಧಾವಿಸಿದ ಶೂರ್ಪನಖಿ ಈ ಕಥೆಯನ್ನು ರಾವಣನಿಗೆ ತಿಳಿಸಿದಳು. ಹೀಗೆ ಇಬ್ಬರೂ ಅವಸರವಸರವಾಗಿ ಮಧ್ಯಭಾರತದಿಂದ ಶ್ರೀಲಂಕಾಕ್ಕಂತೂ ಓಡಲು ಸಾದ್ಯವಿರಲಿಲ್ಲ. ಇಲ್ಲಿ ಮತ್ತೂ ಒಂದು ವಿಷಯವಿದೆ. ರಾಮ ಸೀತೆಯರು ಹತ್ತು ವರ್ಷಗಳ ಕಾಲ ಚಿತ್ರಕೂಟದಲ್ಲಿದ್ದಾಗ(ಇದು ಉತ್ತರ ಪ್ರದೇಶದ ಮಿರ್ಜಾಪುರ, ಭಾಂಡಾಗಳ ಆಸುಪಾಸಿನ ಜಾಗ) ರಾಕ್ಷಸ, ಅಸುರರೊಡನೆ ಒಂದೇ ಒಂದು ಯುದ್ಧವೂ ನಡೆದಿಲ್ಲ. ಯಾಕೆಂದರೆ ಈ ಪ್ರದೇಶ ಕೋಸಲದ ಒಂದು ಭಾಗವಾಗಿತ್ತು. ಅದರ ನಂತರ ರಾಮ ಬಂದಿದ್ದು ದಂಡಕಾರಣ್ಯಕ್ಕೆ. ವಿಚಿತ್ರವೆಂದರೆ ಚಿತ್ರಕೂಟದಿಂದ ಇಲ್ಲಿನವರೆಗಿನ ಪಯಣದಲ್ಲಿ ಎಲ್ಲೂ ವಿಂಧ್ಯ ಮತ್ತು ನರ್ಮದೆಯ ಪ್ರಸ್ತಾವನೆಯಿಲ್ಲ. ನರ್ಮದೆಯನ್ನು ದಾಟದೇ ನಾಸಿಕಕ್ಕಾಗಲೀ, ಪೂರ್ವ ಮಧ್ಯಭಾರತಕ್ಕಾಗಲೀ ತೆರಳಲು ಅಸಾಧ್ಯ. ಕಾಳಿದಾಸನ    ರಘುವಂಶದ ೧೩ನೇ ಸರ್ಗದಲ್ಲೂ ನರ್ಮದೆಯ ಮಾತಿಲ್ಲ. ಸಹ್ಯ, ಮಲಯ ಪರ್ವತಗಳ ಸುಳಿವಿಲ್ಲ. ಗೋದಾವರಿಯನ್ನುಲ್ಲೇಖಿಸಿದರೂ ರಾಮಾಯಣವಾಗಲೀ ಕಾಳಿದಾಸನಾಗಲೀ ನಾಸಿಕದ ಹೆಸರೆತ್ತುವುದಿಲ್ಲ. ಹಾಗೆ ನೋಡಿದರೆ ನಾಸಿಕದಲ್ಲಿ ನಾಲ್ಕು ಸಾವಿರ ವರ್ಷಗಳಿಂದಲೂ ಜನವಸತಿಯ ಕುರುಹು ಇತ್ತೆಂದು ಉತ್ಖನಗಳಿಂದ ಸಾಬೀತಾಗಿದೆ. ದಂಡಕದ ಒಂದು ಭಾಗವಾದ ಪಂಚವಟಿಯ ಪ್ರಾಂತ್ಯದಲ್ಲೇ ರಾಕ್ಷಸರೊದನೆ ಮೊದಲ ಯುದ್ಧ ನಡೆದಿದ್ದು. ಈ ಪಂಚವಟಿ ಮತ್ತು ಪರ್ಣಶಾಲೆಯಿರುವುದು ನಾಸಿಕದಲ್ಲಲ್ಲ, ಬದಲಾಗಿ ಆಂಧ್ರದ ಉತ್ತರ ತುದಿಯ ಗೋದಾವರೀ ತೀರದಲ್ಲಿ. ರಾಮ ಲಕ್ಷ್ಮಣರು ಇಲ್ಲಿದ್ದಾಗಲೇ ಜನಸ್ಥಾನದ ರಕ್ಷಣೆಗೆ ಮತ್ತು ರಾಮನ ಸಂಹಾರಕ್ಕಾಗಿ ಎಂಟು ಜನ ರಾಕ್ಷಸರು ಕಳುಹಿಸಲ್ಪಡುತ್ತಾರೆ. ಯಾವುದೇ ಪ್ರದೇಶಕ್ಕೆ ಶಸ್ತ್ರಧಾರಿಗಳಾದ ಅಪರಿಚಿತರು ಬಂದಾಗ ಅಲ್ಲಿನ ಮೂಲನಿವಾಸಿಗಳೊಡನೆ ತಿಕ್ಕಾಟವಾಗುವುದು ಸಹಜ. ಅದೂ ಅಲ್ಲದೇ ಭಾರತದ ದಕ್ಷಿಣ ತುದಿಯಿಂದಲೂ ದೂರವಿದ್ದ ಪ್ರದೇಶವೊಂದರಲ್ಲಿ ಕುಳಿತು ಮಧ್ಯಭಾರತದ ದಂಡಕಾರಣ್ಯವನ್ನು ನಿಯಂತ್ರಿಸಲು ಖರ,ದೂಷಣರಿಗಾಗಲೀ ಅಥವಾ ಅವರ ಒಡೆಯ ರಾವಣನಿಗಾಗಲೀ ಆಗದ ಮಾತು.  ಆದ್ದರಿಂದ ತಾರ್ಕಿಕವಾಗಿ ಲಂಕೆಯು ಚಿತ್ರಕೂಟ ಮತ್ತು ದಂಡಕಾರಣ್ಯದಿಂದ ನೂರಾರು ಕಿ.ಮಿ ದೂರದಲ್ಲಿರಲು ಸಾಧ್ಯವಿಲ್ಲ. ಪಂಚವಟಿಯ ಪ್ರಾಂತ್ಯದ ಸಾಲವೃಕ್ಷಗಳ ವರ್ಣನೆಯನ್ನೇ ನೋಡಿ. ಶೋರಿಯಾ ರೋಬಸ್ಟಾ ಜಾತಿಗೆ ಸೇರಿದ ಸಾಲ ವೃಕ್ಷಗಳು ಎಲ್ಲಿಬೇಕಾದರೂ ಬೆಳೆಯಬಹುದೆಂದು ವಾದಮಾಡಬಹುದಾದರೂ ಕಾಶ್ಮೀರ ಮತ್ತು ಆಸ್ಸಾಂನ್ನು ಹೊರತುಪಡಿಸಿ ಇದು ವಿಶೇಷವಾಗಿ ಕಾಣಬರುವುದು ದಕ್ಷಿಣ ಬಿಹಾರ, ಮಧ್ಯಪ್ರದೇಶದ ಪೂರ್ವಭಾಗ, ಛತ್ತೀಸಘಢ, ಪಶ್ಚಿಮ ಓರಿಸ್ಸಾ ಮತ್ತು ಗೋದಾವರಿಯ ಮುಖಜಭೂಮಿಯಲ್ಲಿ ಮಾತ್ರ.
     ಲಂಕೆ ಎಲ್ಲಿದೆ ಎಂಬ ವಿಷಯಕ್ಕೆ ಪುನಃ ಬರೋಣ. ಪುರಾಣಗಳು, ಮಹಾಭಾರತದಿಂದ ಮೊದಲಾಗಿ ವರಾಹಮಿಹಿರನ ಬೃಹಜ್ಜಾತಕಗಳು ಸಿಂಹಳ ಮತ್ತು ಲಂಕೆ ಬೇರೆಬೇರೆಯೆಂದರೆ, ರಾಮಾಯಣದಲ್ಲೆಲ್ಲೂ ಸಿಂಹಳದ ಪ್ರಸ್ತಾಪವೇ ಇಲ್ಲ. ಅಶೋಕನ ಕಾಲದಿಂದ ತೊಡಗಿ ೧೨ನೇ ಶತಮಾನಗಳವರೆಗೂ ಶ್ರೀಲಂಕಾವನ್ನು ಸಿಂಹಳವೆನ್ನಲಾಗಿದೆಯೇ ಹೊರತೂ ಲಂಕೆಯೆಂದಲ್ಲ. ಮರೀಚಪಟ್ಟಣವೊಂದನ್ನು ಹೊರತುಪಡಿಸಿ ಇಡೀ ರಾಮಾಯಣದಲ್ಲಾಗಲೀ, ಕಾಳಿದಾಸನ ರಘುವಂಶವಾಗಲೀ, ಉತ್ತರ ರಾಮಚರಿತವಾಗಲೀ ಗೋದಾವರಿಯ ದಕ್ಷಿಣ ಭಾಗದಲ್ಲಿರುವ ಸ್ಥಳಗಳ ಸರಿಯಾದ ವರ್ಣನೆ ಎಲ್ಲೂ ಇಲ್ಲ. ಹಾಗಾದರೆ ಅಸಲು ಲಂಕೆ ಇರುವುದೆಲ್ಲಿ?
ಮೂಲಲಂಕೆಯ ನೆಲೆಯ ಬಗ್ಗೆ ಬೆಳಕು ಚೆಲ್ಲುವ ರಾಮಾಯಣದ ಒಂದು ಘಟನೆ ಸಂಪಾತಿಗೆ ಸಂಬಂಧಿಸಿದ್ದು. ಸಂಪಾತಿ ವಾನರರಿಗೆ ಹೇಳುತ್ತಾನೆ
ಮಹೇಂದ್ರಸ್ಯ ಗಿರಿದ್ವಾರ ಮಾವೃತ್ಯ ಚ ಸಮಾಸ್ಥಿತಿಃ
ತತ್ರ ಕಶ್ಚಿನ್ಮಯಾ ದೃಷ್ಟಃ ಸೂರ್ಯೋದಯ ಸಮಪ್ರಭಾಮ್ ||
ಸ್ತ್ರೀಯಮಾದಾಯ ಗಚ್ಛನ್ವೈ  ಭಿನ್ನಾಜನಯೋಪಮಃ ||
ಹರಾನ್ದಾ ಶರಥೇರ್ಭಾರ್ಯಾಂ ರಾಮಸ್ಯ ಜನಕಾತ್ಮಜಮ್
ಭ್ರಷ್ಟಾಭರಣಕೌಶೇಯಂ ಶೋಕವೇಗ ಪರಾಜಿತಾಮ್ ||

ಮಹೇಂದ್ರದ ಗಿರಿಯ ಬುಡದಲ್ಲಿ ನನ್ನ ಮಗ ಸುಪಾರ್ಶ್ವನು ಹಾದಿಗಡ್ಡ ಕುಳಿತಿರುವಾಗ ಸೂರ್ಯೋದಯದ ಕಾಂತಿಗೆ ಸಮಾನವಾದ ಸ್ತ್ರೀಯೊಬ್ಬಳನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು ಹೋಗುತ್ತಿದ್ದ ಪುರುಷನೊಬ್ಬನನ್ನು ಕಂಡ. ಅವನು ಕಾಡಿಗೆಯಂತೆ ಕಪ್ಪಗಿದ್ದನು. ಆದರೂ ಆತ ವಿನೀತ ಭಾವದಿಂದ ದಾರಿಬಿಟ್ಟುಕೊಡೆಂದು ಯಾಚಿಸಿದ. ಹೀಗೆ ಕೇಳಿಕೊಂಡಾಗ ಸುಪಾರ್ಶ್ವನು ಸಹಜವಾಗಿಯೇ ದಾರಿಬಿಟ್ಟುಕೊಟ್ಟ. ಆದರೆ ಆಮೇಲೆ ಆ ಪುರುಷನು ರಾವಣನೆಂದೂ, ಅವಳು ಸೀತೆಯೆಂದೂ ತಿಳಿಯಿತು.
 ಇದು ಸೀತಾಪಹರಣದ ಬಗೆಗಿನ ರಾಮಾಯಣದಲ್ಲಿ ಕಂಡುಬರುವ ಪ್ರಥಮಾನುಭವದ ಅತ್ಯಂತ ಸಹಜವಾಗಿ ಒಪ್ಪಿಕೊಳ್ಳಬಹುದಾದ ವರದಿ. ನಾನಾಗಲೇ ಹೇಳಿದಂತೆ ಪುಷ್ಪಕ ವಿಮಾನ ಪ್ರಕರಣ ಪ್ರಕ್ಷೇಪಭೂಯಿಷ್ಟವಾಗಿದ್ದು ಎಷ್ಟೋ ಕಾಲದ ನಂತರ ಸೇರಿಸಲ್ಪಟ್ಟಿದ್ದು.  ಮೇಲಿನ ಶ್ಲೋಕದಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ ರಾವಣ ಸೀತೆಯನ್ನೆಳೆದುಕೊಂಡು ದಟ್ಟಕಾಡುಗಳಿಂದಾವೃತವಾದ ಪರ್ವತಗಳ ಕಣಿವೆಯಲ್ಲಿ ಸಾಗುತ್ತಿದ್ದಾನೆ. ಕುದುರೆಗಾಡಿ, ರಥಗಳು ಸಾಗಲು ಸಾಧ್ಯವಿಲ್ಲದ ಇಂಥ ಕಣಿವೆ, ಅರಣ್ಯಗಳನ್ನು ದಂಡಕ, ಸಾಲಾವೃಕ್ಷಾರಣ್ಯಗಳ ಕಡೆ ಇಂದಿಗೂ ಕಾಣಬಹುದು. ರಾವಣನು ಆಕಾಶಮಾರ್ಗವಾಗಿ ಸೀತೆಯೊಡನೆ ಪಯಣಿಸಿದನೆಂಬುದು ನಂತರ ಸೇರಿಕೊಂಡ ಶುದ್ಧ ಕಾವ್ಯಮಯ ಕಲ್ಪನೆ. ಮೇಲಿನ ಘಟನೆಯಿಂದ ರಾವಣನ ಆವಾಸಸ್ಥಾನ ಹೆಚ್ಚೇನೂ ದೂರವಿರಲಾರದು ಅಂದುಕೊಳ್ಳಬಹುದು. ಸಾಗರವೆಂದರೆ ದೊಡ್ಡ ಸರೋವರ ಅಥವಾ ಅಗಲ ಹರಿವಿನ ನದಿಯ ಆಚೆಯ ದಡದಲ್ಲಿ ಅವನ ವಸತಿಯಿರಬೇಕು. ಮುಂದೆ ಸಂಪಾತಿಯ ಸೂಚನೆಯಂತೆ ದಕ್ಷಿಣಾಭಿಮುಖವಾಗಿ ತೆರಳಿದ ವಾನನರು ಮಹೇಂದ್ರಗಿರಿಗೆ ಬಂದರು. ಗಿರಿಯನ್ನೇರಿದ ಬಳಿಕ ಸಾಗರದ ದಡವನ್ನು ಕಂಡರು. ಈ ಕಾಂಡವನ್ನು ಪುನರ್ರಚಿಸಿದ ಕವಿಗೆ ದಕ್ಷಿಣ ಭಾರತದ ಅಸ್ಪಷ್ಟ ಚಿತ್ರಣವಷ್ಟೇ ಇತ್ತು. ಹೀಗಾಗಿ ಈ ಸಾಗರವನ್ನೇ ಹಿಂದೂ ಸಾಗರದ ಉತ್ತರ ತುದಿಯೆಂದು ಭಾವಿಸಲಾಯ್ತು. ಹನುಮಂತನು ಸಾಗರೋಲ್ಲಂಘನ ಮಾಡುವಂತೆ ಮಾಡಲಾಯ್ತಲ್ಲದೇ ಇಡೀ ಕಪಿಸೈನ್ಯವನ್ನು ಮಧ್ಯಭಾರತದಿಂದ ಸಾವಿರಾರು ಕಿ.ಮಿ ದೂರದ ದಕ್ಷಿಣಕ್ಕೆ ಕರೆತರಲಾಯ್ತು. ಅದೇ ಮಹಾಭಾರತದಲ್ಲಿ ಬಲರಾಮನ ತೀರ್ಥಯಾತ್ರೆಯ ವಿವರಣೆಯಲ್ಲಿ ’ಗಂಗಾಸಾಗರದಲ್ಲಿ ತೀರ್ಥಸ್ನಾನ ಮಾಡಿ, ಮಹೇಂದ್ರಪರ್ವತದತ್ತ ತೆರಳಿದನು. ಅದನ್ನು ದರ್ಶಿಸಿ ದಕ್ಷಿಣಾಭಿಮುಖವಾಗಿ ತೆರಳಿ ಗೋದಾವರಿ ನದಿಯನ್ನು ಕಂಡನು’ ಎಂದಿದೆ. ಮಹೇಂದ್ರ ಪರ್ವತವು ಗೋದಾವರಿಯ ಉತ್ತರಕ್ಕಿತ್ತೆಂಬುದು ಇದರಿಂದ ಸ್ಪಷ್ಟ. ಮಹೇಂದ್ರ ಪರ್ವತದ ಪ್ರಸ್ತಾಪ ಗಂಗ ಇಂದ್ರವರ್ಮನ ಗೌತಮಿ ತಾಮ್ರ ಶಾಸನದಲ್ಲಿಯೂ ಇದೆ. ಉತ್ತರಕಾಂಡದ ವಿಮರ್ಶಾತ್ಮಕ ಆವೃತ್ತಿಯನ್ನು ಪ್ರಕಟಿಸಿದ ಯು.ಪಿ. ಷಾ ಇದನ್ನು ಆಂಧ್ರದ ಗಡಿಭಾಗದಲ್ಲಿರುವ ಓರಿಸ್ಸಾದ ಗಂಜಾಂ ಜಿಲ್ಲೆಯಲ್ಲಿ ಗುರುತಿಸುತ್ತಾರೆ.
     ರಾಮಾಯಣದ ಯುದ್ಧಕಾಂಡದಲ್ಲಿ ರಾವಣನನ್ನು ದೇವಕಂಟಕನೆಂದೂ, ರಾಕ್ಷಸರನ್ನು ದೈವಕಂಟಕರೆಂದೂ, ವಿಶ್ವಕರ್ಮನ ಲಂಕೆಯು ನಂತರ ಸಾಲಕಂಟಕ ಸಂತತಿಯ ಆವಾಸಸ್ಥಾನವಾಯಿತೆಂದೂ ಹೇಳಲಾಗಿದೆ. ಅಬುಲ್ ಫಜಲ್ ತನ್ನ ಐನೇ ಅಕ್ಬರಿಯಲ್ಲಿ ಗಡಕಟಂಗ ಎಂಬ ಸ್ಥಳವನ್ನುಲ್ಲೇಖಿಸುತ್ತಾನೆ. ಈ ಸಾಲಕಂಟಕ, ಗಡಕಟಂಗ ಮತ್ತು ಗೊಂಡವನಗಳು ಒಂದೇ ಎಂದು ಸಂಕಾಲಿಯಾರಂಥ ಖ್ಯಾತ ಇತಿಹಾಸಕಾರರು ಸಿದ್ಧಪಡಿಸಿದ್ದಾರೆ. ಗೊಂಡವನದಲ್ಲಿ ಇಂದಿಗೂ ರಾವಣನನ್ನು ತಮ್ಮ ಮೂಲಪುರುಷನೆಂದು ಹೇಳಿಕೊಳ್ಳುವ ಗೊಂಡ ಸಮುದಾಯದವರಿದ್ದಾರೆ. ಛತ್ತೀಸಗಢ, ಉತ್ತರ ಆಂಧ್ರಪ್ರದೇಶ, ಒರಿಸ್ಸಾದ ಪೂರ್ವಭಾಗ, ದಕ್ಷಿಣ ಮಧ್ಯಪ್ರದೇಶ, ಮಹಾರಾಷ್ಟ್ರದ ಪಶ್ಚಿಮ ಭಾಗ ಸೇರಿದ ಮಧ್ಯಭಾರತದಲ್ಲಿ ಇವರ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ.
     ಈಗ ರಾಮೇಶ್ವರಂ ಮತ್ತು ಶ್ರೀಲಂಕಾದ ಮಧ್ಯವಿರುವ ರಾಮಸೇತು ಮಾನವನಿರ್ಮಿತವೆಂಬ ಕಲ್ಪನೆಯನ್ನು ನಂಬಿಕೆಯ ವಿಚಾರವಾದರೂ ಸ್ವಲ್ಪ ಹೊತ್ತು ಪಕ್ಕಕ್ಕಿಡಿ.  "As per the geological, geographical and remote sensing investigations carried out so far, the Adam's Bridge area is of natural origin with a particular stratigraphic sequence, formed due to marine geomorphological and coastal shoreline processes. Studies by Geological Survey of India also confirm this." ಎಂದು ನಾಸಾ ಮತ್ತು ಭಾರತ ಸರ್ಕಾರದ ವಿಜ್ಞಾನಿಗಳ ತಂಡ ತನ್ನ ಅಧಿಕೃತ ದಾಖಲೆಯಲ್ಲೇ ಹೇಳಿವೆ.
     ’ಉತ್ತರ ಫಾಲ್ಗುಣಿಯು ಹಸ್ತಾ ನಕ್ಷತ್ರದೊಡನೆ ಸೇರಿದ ಶುಭ ಮುಹೂರ್ತದಲ್ಲಿ ವಾನರ ಸೇನೆ ರಾಮನ ನೇತೃತ್ವದಲ್ಲಿ ದಕ್ಷಿಣಾಭಿಮುಖವಾಗಿ ಪ್ರಯಾಣ ಮಾಡಿತು. ಅವರು ಹಸಿರಿನಿಂದ ಆವೃತವಾದ ಸಹ್ಯ ಪರ್ವತವನ್ನು, ನದಿ ಝರಿ ಕಾಡುಗಳಿಂದ ಕೂಡಿದ ಮಲಯ ಪರ್ವತವನ್ನು ಕಂಡರು. ಬಳಿಕ ಅವರು ಮಹೇಂದ್ರ ಪರ್ವತವನ್ನು ತಲುಪಿದರು. ರಾಮನು ಈ ಪರ್ವತವನ್ನೇರಿ ಆಮೆ, ಮೀನುಗಳಿಂದ ತುಂದಿದ ಸಾಗರವನ್ನು ಕಂಡನು.’ ಇದು ರಾಮಾಯಣದಲ್ಲಿ ಕಂಡುಬರುವ ವರ್ಣನೆ. ಕಿಷ್ಕಿಂಧೆ ಕರ್ನಾಟಕದಲ್ಲಿತ್ತು ಎಂದುಕೊಂಡರೂ ದಕ್ಷಿಣ ತುದಿಗೆ ಸಾಕಷ್ಟು ದೂರವಿದೆ. ರಾಮನ ಸೇನೆ ದಕ್ಷಿಣಾಭಿಮುಖವಾಗಿ ಸಾವಿರಾರು ಮೈಲುಗಳಷ್ಟು ಬಂದರೂ ಸಹ್ಯ, ಮಲಯ, ಮಹೇಂದ್ರ ಪರ್ವತಗಳನ್ನು ಬಿಟ್ಟರೆ ಮತ್ಯಾವ ಗುರುತಿನ ನೆಲಗಳನ್ನೂ ಹೆಸರಿಸದಿದ್ದುದು ನೋಡಿದರೆ(ಮಾನವನ ಅಸ್ತಿತ್ವದ ಆರಂಭಕಾಲದಿಂದಲೂ ಜನವಸತಿಯನ್ನು ಹೊಂದಿದ ಕಾವೇರಿ ಕಾಣದಿದ್ದುದು ಆಶ್ಚರ್ಯ) ಕವಿಗೆ ದಕ್ಷಿಣ ಭಾರತದ ಪರಿಚಯ ಸರಿಯಾಗಿಲ್ಲವೆನ್ನುವುದು ಸ್ಪಷ್ಟ. ಇನ್ನು ರಾಮೇಶ್ವರದ ಬಗ್ಗೆಯಂತೂ ಕವಿಗೆ ಏನೂ ಗೊತ್ತಿಲ್ಲ. ಹನುಮಂತ ಇಲ್ಲಿಂದಲೇ ೧೦೦ ಯೋಜನಗಳ ಸಮುದ್ರವನ್ನು ದಾಟಿದನೆಂದಿದೆ. ವಾನರರು ಕಟ್ಟಿದ ರಾಮಸೇತುವೂ ೧೦೦ ಉದ್ದ, ೧೦ ಯೋಜನ ಅಗಲವಿತ್ತಂತೆ. ಒಂದು ಯೋಜನವೆಂದರೆ ಆರ್ಯಭಟೀಯಂ, ಸೂರ್ಯಸಿದ್ಧಾಂತವೇ ಇತ್ಯಾದಿ ಗ್ರಂಥಗಳ ಪ್ರಕಾರ ೮ ಕಿ.ಮಿ. ಮತ್ತು ಭಾಗವತ ಪುರಾಣದ ಪ್ರಕಾರ ೧೩ ಕಿ.ಮೀ. ಇರಲಿ..... ೮ ಕಿ.ಮೀ ಎಂದೇ ಇಟ್ಟುಕೊಳ್ಳೋಣ. ಅಲ್ಲಿಗೆ ರಾಮೇಶ್ವರಂ ಮತ್ತು ಶ್ರೀಲಂಕಾದ ನಡುವಿನ ಉದ್ದ ೮೦೦ ಕಿ.ಮೀಗಳಾಗಬೇಕಾಯ್ತಲ್ಲ? ಆದರೆ ಈಗ ಇರುವುದು ಅಬ್ಬಬ್ಬಾ ಎಂದರೆ ೨೪ ಕಿ.ಮೀಗಳಷ್ಟೇ. ಭಾರತ ಮತ್ತು ಶ್ರೀಲಂಕಾದ ಮಧ್ಯ ಮೈಲಿಗಟ್ಟಲೆ ವಿಸ್ತಾರವಾದ ಸಾಗರವಿರುವುದಾದರೆ ರಾಕ್ಷಸರು ಲಂಕೆಯಿಂದ ಹೊರಗೆ ಪದೇ ಪದೇ ಹೋಗಿಬರುತ್ತಿದ್ದುದು ಹೇಗೆ? ವಾಸ್ತವವಾಗಿ ಸೇತುವೆ ಕಟ್ಟಲ್ಪಟ್ಟ ರಾಮೇಶ್ವರ ಎಂಥಹ ಸ್ಥಳ? ಮಹೇಂದ್ರ ಪರ್ವತವಿರುವುದಾಗಿಯೂ, ಅದರ ಮೇಲಿಂದ ಹನುಮಂತ ಲಂಕೆಗೆ ಜಿಗಿದನೆಂದೂ, ಅಕ್ಕಪಕ್ಕದ ಬೆಟ್ಟಗಳನ್ನು, ಮರಗಳನ್ನು, ಕಲ್ಲುಬಂಡೆಗಳನ್ನು ಎತ್ತಿಹಾಕಿ ನಳನೂ ವಾನರರೂ ಸೇತುವಿನ ನಿರ್ಮಾಣಮಾಡಿದರೆಂದು ಹೇಳುವುದಾದರೆ ರಾಮೇಶ್ವರದಲ್ಲಿ ದೂರದೂರಕ್ಕೂ ಕಾಣಸಿಗುವುದು ಬರಿಯ ಮರಳ ದಿಣ್ಣೆಗಳಷ್ಟೆ. ಇಲ್ಲಿನ ಮರಳ ಬಿಸಿಲಲ್ಲಿ ಕಾದು ಕೆಂಪಾಗಿ ತಾಮ್ರದ ಬಣ್ಣದಲ್ಲಿರುವುದರಿಂದ ಈ ಪ್ರಾಂತ್ಯ ಪ್ರಾಚೀನ ಕಾಲದಿಂದಲೂ ತಾಮ್ರಪರ್ಣಿ ಎಂದೇ ಹೆಸರಾಗಿತ್ತು. ಇಲ್ಲೆಲ್ಲೂ ಕುರುಚಲು ಗಿಡಗಳನ್ನು ಬಿಟ್ಟರೆ ಸಸ್ಯಸಂಪತ್ತಿಲ್ಲ, ಬೆಟ್ಟಗುಡ್ಡಗಳಿಲ್ಲ. ಕಲ್ಲುಬಂಡೆಗಳು ಬೇಕೆಂದರೂ ಒಳನಾಡಿನಲ್ಲಿ ಕೆಲವು ಮೈಲಿ ದೂರದಿಂದ ಹೊತ್ತು ತರಬೇಕು. ಈ ಪ್ರಕರಣವೊಂದು ಸುಂದರ ಕಲ್ಪನಾ ಸಾಮ್ರಾಜ್ಯ.
     ಇನ್ನು ರಾಮ-ರಾವಣರ ಸೈನ್ಯ ವ್ಯೂಹಗಳ ರಚನೆಯನ್ನು ಗಮನಿಸಿ. ರಾವಣನು ಲಂಕೆಯ ಉಳಿದ ದಿಕ್ಕುಗಳಂತೆ ದಕ್ಷಿಣ ದಿಕ್ಕಿನಲ್ಲೂ ಸಾವಿರಾರು ಭಟರೊಡನೆ ತನ್ನ ಸೇನಾಪತಿಯನ್ನು ನಿಯುಕ್ತಿಗೊಳಿಸಿದನು. ಆದರೆ ಲಂಕೆಯು ಗಿರಿಶಿಖರದ ಮೇಲಿದ್ದು, ಹಿಂಭಾಗದಲ್ಲಿ ಉದ್ದಕ್ಕೂ ಬರೀ ಸಾಗರವಿರುವುದರಿಂದ, ರಾವಣ ಹಿಂಭಾಗದಿಂದಲೂ ದಾಳಿಯನ್ನು ನಿರೀಕ್ಷಿಸಿದ್ದನೆಂದರೆ ಆಶ್ಚರ್ಯವೇ. ಇದೆಲ್ಲ ಕವಿಗಳ ಕಾವ್ಯದಲ್ಲಿ ಕಂಡುಬರುವ ಸಾಂಪ್ರದಾಯಿಕ ವರ್ಣನೆ. ನಮ್ಮ ಕವಿಯಂತೂ ಅದು ಸಂದರ್ಭಕ್ಕೆ ಹೊಂದುತ್ತದೋ ಇಲ್ಲವೋ ಎಂದು ಪರಿಗಣಿಸಲು ಹೋಗದೇ ಕಥೆಯನ್ನು ಇನ್ನಷ್ಟು ರಮ್ಯವಾಗಿಸಲು ಅಲ್ಲಲ್ಲಿ ತಿರುಕಿದ್ದಾನೆ. ಸಾಮಾನ್ಯವಾಗಿ ರೂಢಿಯಲ್ಲಿರುವಂತೆ ರಾಮ ವಿಜಯದಶಮಿಯ ದಿನ ಲಂಕೆಗೆ ಮುತ್ತಿಗೆ ಹಾಕಿ ರಾವಣನನ್ನು ಕೊಂದನೆಂಬುದೂ ಸತ್ಯವಲ್ಲ. ಕಿಷ್ಕಿಂಧಾಕಾಂಡದಲ್ಲಿ ರಾಮ-ಲಕ್ಷ್ಮಣರು ವಸಂತಕಾಲಕ್ಕೆ ಪಂಪಾಪ್ರಾಂತ್ಯಕ್ಕೆ ಬಂದರು ಎಂದಿದೆ.  ಸುಗ್ರೀವ ಪಟ್ಟಾಭಿಷೇಕ ನಡೆದಿದ್ದು ಶ್ರಾವಣ ಮಾಸದಲ್ಲಿ. ಮಳೆಗಾಲದ ನಾಲ್ಕು ತಿಂಗಳು ಕಳೆದ ನಂತರ ಸೀತೆಯನ್ನು ಹುಡುಕಬೇಕೆಂದು ರಾಮ, ಸುಗ್ರೀವರ ಒಪ್ಪಂದವಾಯ್ತು. ಮಧ್ಯದಲ್ಲಿ ಉದ್ಯೋಗದ ಮಾಸವಾದ ಕಾರ್ತೀಕ ಬಂತೆಂದು ಸುಗ್ರೀವನಿಗೆ ನೆನಪಿಸುತ್ತಾನೆ. ಅಷ್ಟರಲ್ಲಾಗಲೇ ಆಶ್ವೀಜದ ವಿಜಯದಶಮಿ ಕಳೆದುಹೋಗಿತ್ತು. ಕಾಲದ ಕುರಿತಾದ ವರ್ಣನೆಯೇ ಸ್ಪಷ್ಟಪಡಿಸುತ್ತದೆ ರಾಮನು ವಿಜಯದಶಮಿಯಂದು ಯಾತ್ರೆಯನ್ನು ಆರಂಭಿಸಲಾಗಲೀ, ರಾವಣನನ್ನು ಕೊಂದದ್ದಾಗಲೀ ಅಲ್ಲವೆಂದು.
     ಪುನಃ ಲಂಕೆಯೆಡೆ ಬರೋಣ. ಸಂಸ್ಕೃತ ಸಾಹಿತ್ಯದಲ್ಲಿ ಸಿಲೋನ್ ಅಥವಾ ಶ್ರೀಲಂಕಾವನ್ನು ಸಿಂಹಳ ಎಂದು ಗುರುತಿಸಲಾಗಿತ್ತೇ ಹೊರತೂ ಲಂಕೆಯೆಂದಲ್ಲ. ಮಹಾಭಾರತದ ವನಪರ್ವದಿಂದ ಹಿಡಿದು ಸಮುದ್ರಗುಪ್ತನ ಅಲಹಾಬಾದ್ ಸ್ಥಂಭ ಶಾಸನ, ವರಾಹಮಿಹಿರನ ಬೃಹತ್ ಸಂಹಿತೆಯವರೆಗೂ ಲಂಕೆ ಮತ್ತು ಸಿಂಹಳವನ್ನು ಬೇರೆಬೇರೆಯಾಗಿಯೇ ಉಲ್ಲೇಖಿಸಲಾಗಿದೆ. ಫಾಹಿಯಾನ, ಹ್ಯೂಯಾನ್ಸಾಂಗ್, ಇಟ್ಸಿಂಗ್ ಈ ಮೂರೂ ಪ್ರಸಿದ್ಧ ಚೀನಿ ಯಾತ್ರಿಕರಿಗೂ ಈ ದ್ವೀಪ ಸಿಂಹಳವೆಂಬ ಹೆಸರಿನಿಂದ ಗೊತ್ತಿತ್ತೇ ಹೊರತೂ ಲಂಕೆಯೆಂದಲ್ಲ. ಮಾವಿನ ಹಣ್ಣಿನ ಆಕಾರದಲ್ಲಿರುವುದರಿಂದ ಇದಕ್ಕೆ ಆಮ್ರದ್ವೀಪವೆಂಬ ಹೆಸರೂ ಇತ್ತು. ಸಿಲೋನಿನ ಪ್ರಾಚೀನ ಪಾಲಿ ಸಾಹಿತ್ಯದಲ್ಲಿ ರಾಮಾಯಣದ ಉಲ್ಲೇಖವಿಲ್ಲ. ದೀಪವಂಶ ಮತ್ತು ಮಹಾವಂಶಗಳು ಟ್ರಂಕಾಮಲಿಗೆಯ ಆಗ್ನೇಯದಲ್ಲಿರುವ ಇಲಂಕೈ ಎಂಬ ಪ್ರದೇಶವನ್ನು ಗುರುತಿಸಿವೆ. ಯಕ್ಷರು ಈ ನಗರವನ್ನು ವ್ಯವಸ್ಥಿತವಾಗಿ ಆಳುತ್ತಿದ್ದರಂತೆ. ವಿಜಯನೆಂಬುವವನು ಕುವಣ್ಣನ ಸಹಾಯದಿಂದ ಅವರ ರಾಜನನ್ನು ಕೊಂದನಂತೆ. ಸಿಂಹಳದ ’ಮಹಾಮಯೂರಿ’ಯಲ್ಲಿ ವಿಭೀಷಣನನ್ನು ಇಲ್ಲಿ ಪೂಜಿಸಲ್ಪಡುವ ಯಕ್ಷನೆನ್ನಲಾಗಿದೆ. ರಾವಣನೊಂದಿಗೆ ಸೇರಿಕೊಂಡ ವಿಭೀಷಣ ಇವನೇ ಇರಬೇಕು.
      ಇನ್ನೊಂದು ಮಜಾ ವಿಷಯ ನೋಡಿ. ಹತ್ತನೇ ಶತಮಾನದ ಹೊತ್ತಿಗೆ ದಕ್ಷಿಣ ಕೊಂಕಣದ ಶಿಲಾಹಾರರು ಗೋವೆಯನ್ನು ಗೆದ್ದರು. ಇದನ್ನು ಬಹಳ ಹೆಮ್ಮೆಯಿಂದ ತಮ್ಮ ತಾಮ್ರಶಾಸನದಲ್ಲಿ ’ನಿಶ್ಶಂಕ ಲಂಕೇಶ್ವರ’ನೆಂದು ಹೇಳಿಕೊಂಡಿದ್ದಾರೆ. ಇನ್ನೊಂದು ದಾಖಲೆಯಲ್ಲೂ ಶಿಲಾಹಾರರನ್ನು ಲಂಕೆಯ ಒಡೆಯರೆನ್ನಲಾಗಿದೆ.  ಭೌಗೋಳಿಕ ದೃಷ್ಟಿಯಿಂದ ಗೋವೆ ಅಥವಾ ಮತ್ತಿತರ ದ್ವೀಪದಂಥ ಪ್ರದೇಶಗಳಿಗೆ ಲಂಕೆ ಎಂಬ ಹೆಸರಿನಿಂದ ಕರೆಯುವ ವಾಡಿಕೆಯಿದ್ದಿತ್ತೇನೋ. ಇದು ದಕ್ಷಿಣ-ಮಧ್ಯಭಾರತದಿಂದ ಬೆಳೆದುಬಂದ ಪರಂಪರೆ. ಲಂಕಾ ಎಂಬುದು ಭಾಷಾ ವಿಜ್ಞಾನಿಗಳ ಪ್ರಕಾರ ಮುಂಡಾರಿ ಭಾಷೆಯ ಶಬ್ದವೇ ಹೊರತೂ ಸಂಸ್ಕೃತ ಜನ್ಯವಲ್ಲ. ಇದು ಇಂಡೋ ಆರ್ಯನ್ ಅಥವಾ ದ್ರಾವಿಡ ಭಾಷವರ್ಗಕ್ಕೆ ಸೇರದೇ ಆದಿವಾಸಿಗಳ ಆಸ್ಟ್ರೋ ನೇಸಿಯನ್ ಭಾಷಾ ಕುಟುಂಬಕ್ಕೆ ಸೇರಿದ್ದು. ರಾವಣನನ್ನು ತಮ್ಮ ಮೂಲಪುರುಷನೆಂದುಕೊಳ್ಳುವ ಗೊಂಡ ಸಮುದಾಯವೇ ಸೇರಿದಂತೆ ಇಂದಿಗೂ ಈ ಭಾಷೆಯನ್ನು ಮಾತಾಡುವ ಬುಡಕಟ್ಟುಗಳು ಮಧ್ಯಭಾರತದಲ್ಲಿವೆ. ಆಂಧ್ರ ಒರಿಸ್ಸಾ ಗಡಿಯ ತೆಲ್ ಮತ್ತು ಮಹಾನದಿಯ ಸಂಗಮಸ್ಥಾನದಲ್ಲಿರುವ ಸೋನ್‌ಪುರವನ್ನು ಪಶ್ಚಿಮ ಲಂಕಾ ಎನ್ನಲಾಗಿದೆ. ಆಂಧ್ರದ ಗೋದಾವರಿಯ ನಡುವಿನ ಅಸಂಖ್ಯ ನಡುಗಡ್ಡೆಗಳಿಗೆ, ಅಳಿವೆ ಪ್ರದೇಶದ ಸಣ್ಣಪುಟ್ಟ ದ್ವೀಪಗಳಿಗೆ ಲಂಕಾ ಎಂಬ ಹೆಸರಿದೆ. ಕೋತಲಂಕಾ, ಅಪ್ಪಲರಮುನಿ ಲಂಕಾ, ಐನಾವಿಲಿ ಲಂಕಾ, ಕೃಷ್ಣಲಂಕಾ ಮಾತ್ರವಲ್ಲ ಬಾಪಟ್ಲದ ಸೂರ್ಯಲಂಕಾ, ಕೃಷ್ಣಾ ತೀರದ ನಾಗಯಲಂಕಾ ಎಂಬ ಹೆಸರುಗಳು ಆಂಧ್ರದೇಶದಲ್ಲಿ ದ್ವೀಪಗಳಿಗಿರುವ ಸಾಮಾನ್ಯ ಹೆಸರುಗಳು.  ಗೋದಾವರೀ ನದಿ ಮುಖಜ ಭೂಮಿಯ ಸಮೀಪ ಸ್ಥಳವನ್ನೂ ಪ್ರಾಕ್ಕಿಲ್ಲಂಕಾ ಅಥವಾ ಹಳೆಯ ಲಂಕೆ ಎಂದು ಕರೆಯುತ್ತಾರೆ. ಗೋದಾವರಿಯ ಉತ್ತರಕ್ಕಿರುವ ಬಸ್ತರ್‌ನಲ್ಲಿ ಲಂಕಾ ಮತ್ತು ಲಕ್ಕೈ ಎಂಬ ಹೆಸರಿನ ಎರಡು ಹಳ್ಳಿಗಳನ್ನು ಕಾಣಬಹುದು. ಇದೇ ಪ್ರದೇಶದಲ್ಲಿ ೯ನೇ ಶತಮಾನದ ಕುಮಾರ ಸೋಮೇಶ್ವರ ದೇವನ ಶಾಸನವೊಂದು ದೊರೆತಿದೆ. ಆರಂಭಿಕ ಸಂಶೋಧನೆಗಳಿಂದ ಈ ಸ್ಥಳ ಬಹಳ ಪುರಾತನವೆಂದು ತಿಳಿದುಬಂದಿದೆ. ವಿವಿಧ ಐತಿಹಾಸಿಕ ಅವಧಿಗಳಿಗೆ ಸಂಬಂಧಿಸಿದ ಕಬ್ಬಿಣದ ಸಾಧನಗಳು, ಮಡಿಕೆ ಚೂರುಗಳೂ, ಮುದ್ರೆಯುಳ್ಳ ಬೆಳ್ಳೀನಾಣ್ಯಗಳು, ಆಯುಧಗಳು ಕಂಡುಬಂದಿವೆ. ಗೋದಾವರೀ ಮುಖಜ ಭೂಮಿಯಲ್ಲಿಯೂ ಇಂಥದೇ ಉತ್ಖನನಗಳಾದರೆ ಲಂಕೆಯ ಇತಿಹಾಸದ ಮೇಲೆ ಹೆಚ್ಚು ಬೆಳಕು ಬೀರಬಹುದು.

ಶನಿವಾರ, ಮಾರ್ಚ್ 31, 2018

ಶ್ರೀಮಚ್ಛಂಕರಭಗವತ್ಪಾದ ಚರಿತ್ರ: ಕಾಲಪ್ರಕರಣ


       ಶ್ರೀಮಚ್ಛಂಕರ ಭಗವತ್ಪಾದರು ಕಾಲಾತೀತನಾದ ಶಿವನ ಅವತಾರವೆಂಬುವ ಪ್ರತೀತಿಯ ಕಾರಣಕ್ಕೋ ಏನೋ ಅವರ ಆವಿರ್ಭಾವಕಾಲವನ್ನು ಪ್ರಚಲಿತ ಶಾಂಕರಪೀಠಗಳ ಸಂಪ್ರದಾಯಸ್ಥರು ತಮಗೆ ಬೇಕಾದಂತೆ ಎಲ್ಲೆಲ್ಲೋ ಎಳೆದು ಬಿಸುಟಿದ್ದಾರೆ. ಯಾವುದೋ ಕಾಲದ ಇತಿಹಾಸಪುರುಷರನ್ನು ಇನ್ಯಾವುದೋ ಕಾಲಕ್ಕೆ ದರದರನೆ ಎಳೆತಂದು ಬೇಕುಬೇಕಾದ ಹಾಗೆ ಹುಟ್ಟಿಸುವುದು, ಸಾಯಿಸುವುದು ನಮ್ಮ ಇತಿಹಾಸಕಾರರಿಗೆಲ್ಲ ಕರತಲಾಮಕ. ಅದಕ್ಕೆ ಶಂಕರರೂ ಹೊರತಲ್ಲ. ಶ೦ಕರರ ಕಾಲಮಾನದ ವಿಚಾರದಲ್ಲಿ ವಾದ-ವಿವಾದಗಳು ವಿರಳವಾಗಿ ನಡೆದಿದ್ದರೂ ಅವುಗಳಲ್ಲಿ ಒಮ್ಮತಾಭಿಪ್ರಾಯವಿಲ್ಲದಿರುವುದ೦ತೂ ಸತ್ಯ.  ಲೋಕರೂಢಿಯೂ, ಕೆಲ ಇತಿಹಾಸದ ಪುಸ್ತಕಗಳೂ, ಭೈರಪ್ಪನವರ ’ಸಾರ್ಥ’ವೇ ಮು೦ತಾದ ಕಾದ೦ಬರಿಗಳೂ ಶ೦ಕರರನ್ನು ಕ್ರಿ.ಶ 8ನೇ ಶತಮಾನದಲ್ಲಿರುವ೦ತೆ ಚಿತ್ರಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲ ಐತಿಹಾಸಿಕ ದಾಖಲೆಗಳು, ಆದಿ ಶ೦ಕರರಿ೦ದ ಸ್ಥಾಪಿಸಲ್ಪಟ್ಟ ಕೆಲ ಮಠ, ದೇವಾಲಯಗಳು ಅವರ ಕಾಲವನ್ನು ಕ್ರಿ.ಪೂರ್ವದಷ್ಟು ಹಿ೦ದಕ್ಕೊಯ್ಯುತ್ತವೆ. ಕಾಲದ ನಿಷ್ಕರ್ಷೆಗೆ ಬರುವ ಮೊದಲು ಶಂಕರವಿಜಯಗಳನ್ನೇ ಗಮನಿಸೋಣ.
       ಚತುರಾಮ್ನಾಯಗಳಲ್ಲೊ೦ದಾದ ಶೃ೦ಗೇರಿ ಮಠವನ್ನು ಶ೦ಕರರು ಕ್ರಿ.ಶ. 8ನೇ ಶತಮಾನದಲ್ಲಿ ಸ್ಥಾಪಿಸಿದರೆ೦ಬುದು ಲೋಕರೂಢಿ. ಅವರೂ ಅದೇ ಕಾಲದವರೆಂದಾಯ್ತು. ಶೃಂಗೇರಿ ಮಠದಲ್ಲೇ ಅದಕ್ಕೇನಾದರೂ ದಾಖಲೆ ಸಿಗಬೇಕಾದರೆ ಅವರದ್ದೇ ಗುರುಪರಂಪರೆಗಳ ಪಟ್ಟಿ ನೋಡಬೇಕು. ಮಹಾದೇವ ರಾಜಾರಾಮ ಬೋಡಸ್‌ರ ’ಶಂಕರಾಚಾರ್ಯ ವ ತ್ಯಾಂಚಾ ಸಂಪ್ರದಾಯ’ ಪುಸ್ತಕದಲ್ಲಿ ಶೃಂಗೇರಿ ಸಂಪ್ರದಾಯದ ಗುರುಪರಂಪರೆಯ ನಾಲ್ಕು ಪಟ್ಟಿಗಳನ್ನು ಕೊಟ್ಟಿದ್ದಾರೆ!. ಮೊದಲನೇಯದು 8ನೇ ಜಗದ್ಗುರುಗಳಾದ ನರಸಿಂಹಭಾರತೀ ಸ್ವಾಮಿಗಳ ಮಂತ್ರಾಕ್ಷತೆಯೊಂದಿಗೆ 1879ರಲ್ಲಿ ಸಿದ್ಧಾಂತಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಬರೆದದ್ದು. ಎರಡನೇಯದು ಸೂರ್ಯನಾರಾಯಣರಾಯರು ಬರೆದ ವಿಜಯನಗರ ಇತಿಹಾಸದ್ದು. ಇದರ ಗುರುಪರಂಪರೆಯ ಪಟ್ಟಿ ಮೊದಲನೇಯದ್ದನ್ನೇ ಆಧರಿಸಿದ್ದು. ಮೂರನೇಯದು ಶ್ರೀಸಚ್ಚಿದಾನಂದಶಿವಾಭಿನವನೃಸಿಂಹಭಾರ್ತೀಸ್ವಾಮಿಗಳು ಮದ್ರಾಸಿನ ವಾಣಿವಿಲಾಸ ಪ್ರೆಸ್ಸಿನಲ್ಲಿ ಅಚ್ಚುಹಾಕಿಸಿದ ಕೃತಿ. ಅದು ಮೊದಲೆರಡನ್ನು ಹೋಲುವುದಾದರೂ ಸುರೇಶ್ವರಾಚಾರ್ಯರ ಬದಲು ವಿಶ್ವರೂಪರ ಹೆಸರು ಅಚ್ಚಾಗಿದೆ. ಇವುಗಳ ಪ್ರಕಾರ 14ನೇ ಈಶ್ವರ ಸಂವತ್ಸರದ ವೈಶಾಖ ಶುದ್ಧ ಆರ್ದ್ರಾ ನಕ್ಷತ್ರ ಮಿಥುನಲಗ್ನದಲ್ಲಿ ಆಚಾರ್ಯರ ಅವತಾರವೂ ವಿಕ್ರಮಶಕೆಯ 46ನೇ ಜ್ಯೇಷ್ಠಶುದ್ಧ ದ್ವಾದಶಿಯ ದಿನ ಕೈಲಾಸಗಮನವೆಂದೂ ಬರೆದಿದೆ. ಇದರ ಪ್ರಕಾರವೇ ಕ್ರಿ.ಪೂ 44ರಿಂದ ಕ್ರಿಪೂ 12ರವರೆಗೆ ಆಚಾರ್ಯರ ಕಾಲವಾಯ್ತು. ಇದೇ ಪಟ್ಟಿಯಲ್ಲಿ ಮೊದಲ ಪೀಠಾಧಿಪತಿಗಳಾದ ಸುರೇಶ್ವರಾಚಾರ್ಯರು ಕ್ರಿ.ಪೂ 28ರಿಂದ ಕ್ರಿ.ಶ 773ರವರೆಗೆ ಬರೋಬ್ಬರಿ 8೦೦ ವರ್ಷಗಳು ಪೀಠಾಧಿಪತಿಗಳಾಗಿದ್ದಾರು! ಅವರ ನಂತರ ಎರಡನೇ ಪೀಠಾಧಿಪತಿಗಳಾದ ನಿತ್ಯಬೋಧಘನಾಚಾರ್ಯರು ಪೀಠವೇರಿದ್ದು ಕ್ರಿ.ಶ 773ರಲ್ಲಿ. ಶೃಂಗೇರಿ ಪರಂಪರೆಯ ಪ್ರಕಾರವೇ ಆಚಾರ್ಯರ ಕಾಲ ಕ್ರಿ.ಪೂವೆಂದಾದಮೇಲೆ ಮಠಸ್ಥಾಪನೆ ಕ್ರಿ.ಶ 8ನೇ ಶತಮಾನದಲ್ಲಾಗಲು ಹೇಗೆ ಸಾಧ್ಯ? ಶೃಂಗೇರಿ ಅಂಗೀಕರಿಸಿದ ವಿಕ್ರಮಶಕೆಯು ಮಾಲವ ಶಕೆಯಲ್ಲವೆಂದೂ, ಅದು ಚಾಲುಕ್ಯ ವಿಕ್ರಮಶಕೆಯೆಂದೂ, ಸರ್ವಪ್ರಥಮ ವಿಕ್ರಮನು ಕ್ರಿ.ಶ 670ರಲ್ಲಿ ಸಿಂಹಾಸನಾರೋಹಣಗೈದುದರಿಂದ ಶಂಕರರ ಜನನ ಮತ್ತು ಕೈಲಾಸಗಮನವಾದುದು ಕ್ರಮವಾಗಿ ಕ್ರಿ.ಶ 684 ಹಾಗೂ ಕ್ರಿ.ಶ 716ರಲ್ಲೆಂದು ಇದಕ್ಕೆ ಸಮಾಧಾನವನ್ನು ಲೋಕಮಾನ್ಯ ತಿಲಕರು ನೀಡಿದ್ದಾರೆ.
       ಶಂಕರಾಚಾರ್ಯರು ಕ್ರಿಸ್ತನಿಗಿಂತ ಪೂರ್ವದವರೆಂಬುದು ಸರ್ವವಿದಿತ. ಅದಕ್ಕೆ ಬೇಕಾದಷ್ಟು ಇತಿಹಾಸದ ಪುರಾವೆಗಳಿವೆ. ಈ ಕಷ್ಟದಿಂದ ಪಾರಾಗಲು ಪ್ರಾಯಶಃ ಶೃಂಗೇರಿಯವರು ಸುರೇಶ್ವರಾಚಾರ್ಯರಿಗೆ 8೦೦ ವರ್ಷಗಳನ್ನು ಕೊಟ್ಟು ಅವರ ಸಮಾಧಿ ಕಾಲವನ್ನು ಕ್ರಿ.ಶ 8ನೇ ಶತಮಾನಕ್ಕೆ ಇಳಿಸಿದ್ದಾರೆ. ಶೃಂಗೇರಿ ಮಠವೇ ಹೀಗಾದರೆ ಇನ್ನು ಅದರ ಕಾಲುಮಠವಾದ ಶಂಕರರ ಏಕೈಕ ಅವಿಚ್ಛಿನ್ನ ಪರಂಪರೆಯೆಂದು ಹೇಳಿಕೊಳ್ಳುವ ರಾಮಚಂದ್ರಾಪುರಮಠದ ಕಾಲ ಅದಕ್ಕಿಂತ ಹಿಂದಿನದಂತೂ ಅಲ್ಲ. ಸ್ವರ್ಣವಲ್ಲಿ ಮಠವೂ ಅಷ್ಟೇ. ಶಂಕರರಿಂದ ಕಾಶಿಯಲ್ಲಿ ಸ್ಥಾಪಿತವಾಗಿ ಪ್ರಯಾಗವೇತ್ಯಾದಿ ಜಾಗಗಳಲ್ಲಿ  ಸ್ಥಳಾಂತರಗೊಂಡು ಈಗ ಶಿರಸಿ ಸಮೀಪದ ಸೋಂದೆಯಲ್ಲಿದೆ ಎಂದು ಮಠದ ಇತಿಹಾಸ ಹೇಳುತ್ತದೆ. ಆದರೆ ಇದು ಮೂಲತಃ ಹೊನ್ನಾವರ ತಾಲೂಕಿನ ಚಂದಾವರದ ಹತ್ತಿರದ ಹೊನ್ನೆಹಳ್ಳದಲ್ಲಿ ಚಂದಾವರದ ರಾಮಕ್ಷತ್ರಿಯ ಸಮಾಜದ ತುಂಡರಸ ಚಂದ್ರಸೇನನ ಕಾಲದಲ್ಲಿ ಶೃಂಗೇರಿ ಮಠದವರಿಂದ ಸ್ಥಾಪಿತವಾದ ಕಾಲುಮಠ.  ಗೋಮಾಂತಕರ ದಾಳಿಯ ನಂತರ ಅದು ಅಲ್ಲಿಂದ ಕಡತೋಕೆಗೆ ಹೋಯಿತು. ಮುಂದೆ ಸರ್ವಜ್ಞೇಂದ್ರ ಸರಸ್ವತಿಯವರ ಕಾಲದಲ್ಲಿ ಸೋದೆ ಅರಸರ ಕೋರಿಕೆಯ ಮೇರೆಗೆ ಅಲ್ಲಿಂದ ಸೋದೆಗೆ ಸ್ಥಳಾಂತರವಾಯಿತು. ಹೊನ್ನೆಹಳ್ಳಿ ಸ್ವರ್ಣವಲ್ಲಿಯಾಯಿತು. ಆದ್ದರಿಂದ ಅವೆರಡೂ ಮಠಗಳ ಇತಿಹಾಸವನ್ನು ಶಂಕರರ ಕಾಲಮಾನ ನಿಷ್ಕರ್ಷೆಗೆ ಬಳಸಲು ಬರುವುದಿಲ್ಲ. ಶೃಂಗೇರಿಯ ಪಟ್ಟಿಗಳನ್ನೂ ಬದಿಗಿಟ್ಟು ಶಂಕರವಿಜಯಗಳನ್ನೇ ಗಮನಿಸೋಣ.
ಕಂಚಿಕಾಮಕೋಟಿ ಪೀಠದ ಸಂಪ್ರದಾಯದಂತೆ ಆತ್ಮಬೋಧರು ಉದಾಹರಿಸಿರುವ ಪ್ರಾಚೀನಶಂಕರವಿಜಯದಲ್ಲಿ
ತಿಷ್ಯೇ ಪ್ರಯಾತ್ಯನಲಶೇವಧಿಬಾಣನೇತ್ರೇ
ಯೋ ನನ್ದನೇ ದಿನಮಣಾವುದಗಧ್ವಭಾಜಿ |
ರಾಧೇದಿತೇರುಡುನಿ ನಿರ್ಗತಮಸ್ತಲಗ್ನೆ
ಪ್ಯಾಹೂತವಾನ್ ಶುವಗುರುಃ ಸ ಚ ಶಂಕರೇತಿ ||
ಅನಲ=3, ಸೇವಧಿ=9, ಬಾಣ=5, ನೇತ್ರ=2 . ಕಲಿಪ್ರಾರಂಭವಾದ 2593ನೇ ಸಂವತ್ಸರವಾದ ನಂದನದ ಉತ್ತರಾಯಣ ವೈಶಾಖ ಶುದ್ಧ ಪಂಚಮಿ ಪುನರ್ವಸು ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ಶಿವಗುರುವಿಗೆ ಹುಟ್ಟಿದನು.
ಕಲಿಯುಗ ಪ್ರಾರಂಭವಾದದ್ದು ಕ್ರಿ.ಪೂ 3102ರಲ್ಲೆಂದು ಸಿದ್ಧಪಟ್ಟಿದೆ. ಅ೦ದರೆ ಶ೦ಕರರ ಜನನವಾದದ್ದು ಕ್ರಿ.ಪೂ 3102- ಕ್ರಿ.ಪೂ 2593= ಕ್ರಿ.ಪೂ 509ರಲ್ಲಿ.
ವ್ಯಾಸಾಚಲೀಯದಲ್ಲಿ
ಅಬ್ದೇ ಕಲೇರನಲವರ್ಷಶರಾಕ್ಷಿಸಂಖ್ಯೇ
ಶ್ರೀನಂದನೇ ದಿನಮಣಾವುದಗಧ್ವಭಾಜಿ |
ರಾಧೇಽದಿಪಞ್ಚಮಿತಿಥಾವಸಿತೇತರಾಯಾಮ್
ವಾರೇ ರವೇರದಿತಿಭೇ ಶುಭಯೋಗಯುಕ್ತೇ ||
ಲಗ್ನೇ ಶುಭೇ ಶುಭಯುತೇ ಸುಷುವೇ ಕುಮಾರಂ
ಶ್ರೀಪಾರ್ವತೀವ ಸುಖಿನೀ ಶುಭವೀಕ್ಷಿತೇ ಚ |
ಜಾಯಾ ಸತೀ ಶಿವಗುರೋರ್ನಿಜತುಙ್ಗಸಂಸ್ಥೇ
ಸೂರ್ಯೇ ಕುಜೇ ರವಿಸುತೇ ಚ ಗುರೌ ಚ ಕೇಂದ್ರೇ ||
ಮೊದಲ ಭಾಗವನ್ನು ಗಮನಿಸಿದರೆ ಇದು ಪ್ರಾಚೀನಶಂಕರ ವಿಜಯದಿಂದ ತೆಗೆದುಕೊಂಡಿರಬಹುದಾದ ಸಾಧ್ಯತೆಗಳಿವೆ. ಎರಡನೇ ಶ್ಲೋಕ ಮಾಧವೀಯದಲ್ಲಿಯೂ ಇದೆ. ಯುಧಿಷ್ಟಿರ ಶಕದ 2631ನೇ ವರ್ಷ ನಂದನ ಸಂವತ್ಸರ ವೈಶಾಖ ಶುದ್ಧ ಭಾನುವಾರ ಪುನರ್ವಸು ನಕ್ಷತ್ರ ಅಭಿಜಿನ್ಮುಹೂರ್ತದಲ್ಲಿ ಕರ್ಕಾಟಕ ಲಗ್ನ ರವಿಕುಜಗುರುಶನಿಗಳು ಉಚ್ಛಸ್ಥರಾಗಿ ಕೇಂದ್ರದಲ್ಲಿರಲು ಶುಕ್ರನು ಉಚ್ಛಸ್ಥಾನದಲ್ಲಿದ್ದು ಬುಧನು ರವಿಯೊಡನೆ ಸೇರಿದ ಶುಭಮುಹೂರ್ತದಲ್ಲಿ ಆರ್ಯಾಂಬೆ ಮಗನನ್ನು ಪಡೆದಳು.
ಇದೇ ಗ್ರಂಥದಲ್ಲಿ ಆಚಾರ್ಯರ ದೇಹಾಂತದ ವಿವರಗಳಿವೆ.
ವರ್ಷೇ ಕಲೇಃ ಶರವಿಲೋಚನಶಾಸ್ತ್ರನೇತ್ರೇ
ರಕ್ತಾಕ್ಷಿನಾಮ್ನಿ ವೃಷಶುಕ್ಲಮುಕುನ್ದನಿಥ್ಯಾಮ್ |
ಗಚ್ಛನ್ ಸ ಜಾತು ಸವಿಧೇ ಪರದೇವತಾಯಾಃ
ತ್ಯಕ್ತುಂ ಸಮೃಚ್ಛದಥ ಭೌತಿಕಮಾತ್ಮದೇಹಮ್ ||
-ಕಲಿ 2625ನೇ ರಕ್ತಾಕ್ಷಿ ಸಂವತ್ಸರದ ವೈಶಾಖ ಶುದ್ಧದ್ವಾದಶೀ ದಿನ ಪರದೇವತೆಯ ಸಮೀಪಕ್ಕೆ ಹೋಗಲು ಭೌತಿಕ ದೇಹವನ್ನು ಬಿಡಲಿಚ್ಛಿಸಿದರು. ಕಲಿ 2625ನೇ ವರ್ಷವೆಂದರೆ ಅದು ಕ್ರಿ.ಪೂ 477 ಆಯಿತು.
ಇದಕ್ಕನುಗುಣವಾಗಿ ಚಿತ್ಸುಖರ ಪ್ರಾಚೀನ ಶಂಕರವಿಜಯದ ಆತ್ಮಬೋಧರ ವ್ಯಾಖ್ಯಾನದಲ್ಲಿ
ಕಲ್ಯಬ್ದೈಶ್ಚ ಶರೇಕ್ಷಣಾಧ್ವನಯನೈಃ ಸತ್ಕಾಮಕೋಟಿಪ್ರಥೇ
ಪೀಠೇ ನ್ಯಸ್ಯ ಸುರೇಶ್ವರಂ ಸಮವಿತುಂ ಸರ್ವಜ್ಞಸಂಜ್ಞಂ ಮುನಿಮ್ |
ಕಾಮಾಕ್ಷ್ಯಾಃ ಸವಿಧೇ ಸ ಜಾತು ನಿವಿಶನ್ನುನ್ಮುಕ್ತಲೋಕಸ್ಪೃಹೋ
ದೇಹಂ ಸ್ವಂ ವ್ಯಪಹಾಯ ದೇಹ್ಯಸುಗಮಂ ಧಾಮ ಪ್ರಪೇದೇ ಪರಮ್ ||
ಎಂದಿದೆ.
ಬೃಹಚ್ಛಂಕರ ವಿಜಯವನ್ನು ಗಮನಿಸೋಣ.
ವಹ್ನ್ಯದ್ದ್ವಶಾಸ್ತ್ರನಯನಾಙ್ಕ ಯುಧಿಷ್ಠಿರಾಬ್ಧೇ
ದ್ವಾತ್ರಿಂಶತಂ ಹಿ ಶರದೋ ಧರಣೀಂ ವಿಭೂಷ್ಯ
ಶ್ರೀಶಂಕರೇಂದ್ರಗುರುರಾಟ್ಭ್ರತರಾಜಸೇನಃ
ಸಂ ಶಿಷ್ಯ ಧರ್ಮಮಖಿಲಂ ಶಿವತಾಂ ಪ್ರಪೇದೇ ||
ಯುಧಿಷ್ಟಿರಶಕದ 2663ರಂದು ಮೂವತ್ತೆರಡು ವರ್ಷ ಭೂಮಿಯನ್ನಲಂಕರಿಸಿದ ಮೇಲೆ ರಾಜಸೇನನಿಂದ ಸೇವೆಗೊಂಡ ಶ್ರೀಶಂಕರೇಂದ್ರ ಗುರುರಾಜರು ಶಿವತ್ವವನ್ನು ಹೊಂದಿದರು. ಇದರಲ್ಲಿರುವ ರಾಜಸೇನ ಯಾರೆಂಬುದು ಗೊಂದಲವಾದರೂ ಯುಧಿಷ್ಟಿರಶಕದ 2663ನೇ ವರ್ಷ ಕ್ರಿ.ಪೂ 477ಕ್ಕೆ ಸರಿಯಾಗಿ ಹೊಂದುತ್ತದೆ.
       ದ್ವಾರಕಾಮಠದ ಶಾಸನದಲ್ಲಿ ಯುಧಿಷ್ಟಿರಶಕದ 2631ನೇ ವೈಶಾಖ ಶುದ್ಧ ಪಂಚಮಿಯಂದು ಅವತರಿಸಿ 2663ನೇ ಕಾರ್ತ್ತೀಕ ಹುಣ್ಣಿಮೆಯಂದು ಬ್ರಹ್ಮೀಭೂತರಾದರು ಎಂದು ಇದೆಯಂತೆ. ಅದೂ ಕೂಡ ಕ್ರಿ.ಪೂ 508 ಮತ್ತು ಕ್ರಿ.ಪೂ 477ನ್ನೇ ಸೂಚಿಸುತ್ತದೆ.
ಇನ್ನು ಶಂಕರರ ಜನ್ಮಕಾಲ ವೈಶಾಖ ಶುದ್ಧ ಪಂಚಮಿ ಎನ್ನುವವರಂತೆ ದಶಮಿ ಎನ್ನುವವರೂ ಇದ್ದಾರೆ. ನೀಲಕಂಠಭಟ್ಟನ ಶಂಕರಮಂದಾರಸೌರಭದಲ್ಲಿ
ಸಂವತ್ಸರೇ ವಿಭವನಾಮ್ನಿ ಶುಭೇ ಮುಹೂರ್ತೇ
ರಾಧೇ ಸಿತೇ ಶಿವಗುರೋರ್ಗೃಹಿಣೀ ಧಶಮ್ಯಾಮ್ ||
ವಿಭವ ಸಂವತ್ಸರದ ವೈಶಾಖ ಶುದ್ಧ ದಶಮಿಯ ದಿನ ಶಿವಗುರುವಿನ ಪತ್ನಿ ಶಂಕರನನ್ನು ಹಡೆದಳು(ವಿಭವ ಸಂವತ್ಸರವೆಂದು ಹೇಳಿರುವುದನ್ನು ಆಸಕ್ತರು ಗಮನಿಸಬೇಕು!). ಇದಕ್ಕನುಗುಣವಾಗಿ ಶಂಕರಜಯಂತಿಯನ್ನು ದಶಮಿಯ ದಿನ ಆಚರಿಸುವವರೂ ಇದ್ದಾರೆ. ಎಲ್ಲ ಶಂಕರವಿಜಯಗಳು ಮತ್ತು ಮಠಗಳ ಸಂಪ್ರದಾಯಗಳನ್ನು ಹೊಂದಿಸಿಕೊಂಡು ಹೋಗುವುದಂತೂ ಸಾಧ್ಯವಿಲ್ಲ. ಕ್ರಿ.ಪೂ 5ನೇ ಶತಮಾನದಿಂದ ಹಿಡಿದು ಕ್ರಿ.ಶ 8ನೇ ಶತಮಾನದವರೆಗೆ ತಮಗೆ ತೋಚಿದ ಕಾಲಗಳನ್ನು ಎಲ್ಲರೂ ಬರೆದಿದ್ದಾರೆ. ಹಾಗೆ ಬರೆದವರಲ್ಲಿ ಒಬ್ಬರೂ ಶಂಕರರ ಕಾಲದವರಲ್ಲ. ಬರೆದುದಕ್ಕೆ ಏನು ಆಧಾರವೆಂಬುದು ಸ್ಪಷ್ಟವಿಲ್ಲ. ವೈಶಾಖ ಶುದ್ಧ ಪಂಚಮಿಯನ್ನು ಶಂಕರಜಯಂತಿಯೆಂದು ಆಚರಿಸಲಾಗುತ್ತಿದೆಯಾದರೂ ಅದಕ್ಕೂ ಸಾಧಾರವಿಲ್ಲ. ’ಶಂಕರ’ ಎಂಬ ಶಬ್ದದ ಅಕ್ಷರಗಳ ಅಂಕೆಗಳನ್ನು ಹಿಂದುಮುಂದಾಗಿ ಎಣಿಸಿದರೆ 5,1,2 ಬರುವುದರಿಂದ ವೈಶಾಖ ಶುದ್ಧ ಪಂಚಮಿಯೆಂದು ತರ್ಕಿಸಲಾಯ್ತೇ? ಶಂಕರರೇ ಹೇಳಬೇಕು!
ಇದಲ್ಲದೇ ಜಿನವಿಜಯದಲ್ಲಿ ಶಂಕರರ ಉಲ್ಲೇಖವಿದೆಯಂತೆ( ಈ ಹೆಸರಿನ ಪುಸ್ತಕ ನನಗಂತೂ ಸಿಕ್ಕಿಲ್ಲ)
ಋಷಿರ್ಬಾಣಸ್ತಥಾ ಭೂಮಿರ್ಮರ್ತ್ಯಾಕ್ಷೋ ವಾಮಮೇಳನಾತ್ |
ಏಕತ್ವೇನ ಲಭೇದಙ್ಕೋ ರಕ್ತಾಕ್ಷಸ್ತದ್ಧಿ ವತ್ಸರಃ ||
ರಶಿ=7, ಬಾನ=5, ಭೂಮಿ=1, ಮರ್ತ್ಯಕ್ಷವು=2. ಜೈನ ಕ್ಯಾಲೆ೦ಡರಿನ ಪ್ರಕಾರ ಶ೦ಕರರ ಭೌತಿಕ ಶರೀರದ ಮರಣ 2157ನೇ ಯುಧಿಷ್ಟೀರ ಶಕದ೦ದು ಸ೦ಭವಿಸಿತು. ಜೈನರ ಯುಧಿಷ್ಟಿರ ಶಕೆಗೂ ಹಿ೦ದುಗಳ ಯುಧಿಷ್ಟಿರ ಶಕೆಗೂ ಇರುವ ವ್ಯತ್ಯಾಸ 467 ವರ್ಷಗಳು. ಹಿ೦ದುಗಳ ಯುಧಿಷ್ಟಿರ ಶಕೆಯು ಕಲಿಯುಗದ ಮೊದಲ ವರ್ಷದಿ೦ದ ಪ್ರಾರ೦ಭವಾದರೆ ಜೈನರ ಯುಧಿಷ್ಟಿರ ಶಕವು 468ನೇ ಕಲಿ ವರ್ಷದಿ೦ದ ಪ್ರಾರ೦ಭವಾಗುತ್ತದೆ.
ಅರ್ಥಾತ್ ಶ೦ಕರರ ಮರಣ ಸ೦ಭವಿಸಿದ್ದು 2157+468=2625ನೇ ಕಲಿ ವರ್ಷದಲ್ಲಿ ಅಥವಾ 3102-2625=477 ಕ್ರಿ.ಪೂ.ದಲ್ಲಿ
ನೇಪಾಳವನ್ನು ಕ್ರಿ.ಪೂ 547 ರಿ೦ದ 486ರವರೆಗೆ ಆಳಿದವನು ಸೂರ್ಯವ೦ಶದ 18ನೇ ರಾಜ ವ್ರಶದೇವ ವರ್ಮ. ನೇಪಾಳರಾಜವ೦ಶಾವಳಿಯಾದ ಕಲ್ಹಣನ ರಾಜತರ೦ಗಿಣಿಯಲ್ಲಿ ಉಲ್ಲೇಖಿಸಿದ೦ತೆ ಕ್ರಿ.ಪೂ 487(ಕಲಿ ವರ್ಷ 2614)ರಲ್ಲಿ ದಕ್ಷಿಣದಿ೦ದ ಬ೦ದ ಆದಿ ಶ೦ಕರಾಚಾರ್ಯರು ಬೌದ್ಧರನ್ನು ವಾದದಲ್ಲಿ ಸೋಲಿಸಿ ಬುದ್ಧರ ನ೦ಬಿಕೆಯನ್ನು ನಾಶ ಮಾಡಿದರು.
ಶಂಕರರು ಕ್ರಿ.ಪೂರ್ವ 5ನೇ ಶತಮಾನದವರೆಂದು ಆಧಾರಗಳಿರುವಾಗ 8೦೦ ವರ್ಷಗಳ ಶೃಂಗೇರಿ ಮಠದ ಇತಿಹಾಸ ಮಾತ್ರ ಮಾಯವಾಗಿರುವುದು ಹೇಗೆ?
ಮಹಾನುಭಾವ ಸಂಪ್ರದಾಯದಲ್ಲಿ ದರ್ಶನಪ್ರಕಾಶವೆಂಬ ಗ್ರಂಥವೊಂದಿದೆ. ಅದರಲ್ಲಿರುವ ಒಂದು ಶ್ಲೋಕವನ್ನು ಗಮನಿಸಿ.
ಯುಗ್ಮಪಯೋಧಿರಸಾಮಿತಶಾಕೇ ರೌದ್ರಕವತ್ಸರ ಊರ್ಜಕಮಾಸೇ |
ವಾಸರ ಈಜ್ಯ ಉತಾಚಲ ಮಾನೇ ಕೃಷ್ಣತಿಥೌ ದಿವಸೇ ಶುಭಯೋಗೇ |
ಶಂಕರ ಲೋಕಮಗಾನ್ನಿಜದೇಹಂ ಹೇಮಗಿರೌ ಪ್ರವಿಹಾಯ ಹಠೇನ ||
- ಇಲ್ಲಿ ಶಂಕರರ ಮೃತ್ಯುಕಾಲ 642ನೇ ಶಕೆ(ಕ್ರಿ.ಶ  72೦) ಎಂದಿದೆ. ಆದರೆ ಹಠಯೋಗದಿಂದ ಹೇಮಗಿರಿಯಲ್ಲಿ ದೇಹವನ್ನು ಬಿಟ್ಟರು ಎಂದು ಹೇಳಿರುವುದರಿಂದ ಇದು ಯಾವ ಶಂಕರ ಕುರಿತಾದದ್ದೆಂದು ವಿಮರ್ಶಕರೇ ಊಹಿಸಬೇಕು. ಕಂಚಿಪೀಠದಲ್ಲಿ ಕೃಪಾಶಂಕರ, ಮೂಕ ಶಂಕರ, ಅಭಿನವಶಂಕರ ಎಂಬಿತ್ಯಾದಿ ಹೆಸರಿನ ಹಲವು ಯತಿಗಳು ಆಗಿಹೋಗಿರುವುದರಿಂದ ಅವರ ಚರಿತ್ರೆಗಳು ಆದ್ಯಶಂಕರರೊಡನೆ ಸೇರಿ ಹೋಗಿರಬಹುದೇ?!
ಕೇರಳೀಯ ಶಂಕರವಿಜಯದಲ್ಲಿ ಚೇರಾಮನ್ ಪೆರುಮಾಳನ ಕಾಲದಲ್ಲಿ ಶಂಕರರ ಜನನವಾಯ್ತೆಂದಿದೆ(ಪೆರುಮಾಳನ ಕಥೆಗಾಗಿ ಇಲ್ಲಿ ನೋಡಿ). ಆತ ಕ್ರಿ.ಶ ಏಳನೇ ಶತಮಾನದವನು. ಒಂದೇ ಸರ್ಗದಲ್ಲಿ ಸರ್ವಜ್ಞಪೀಠವನ್ನು ಕಾಶ್ಮೀರದಲ್ಲಿಯೂ ಕಾಂಚಿಯಲ್ಲಿಯೂ ಇತ್ತೆಂದು ಬರೆಯಲ್ಪಟ್ಟಿರುವ ಕೇರಳೀಯವು ಇತಿಹಾಸಕಾರರಿಂದ ತಿರಸ್ಕೃತವಾಗಿರುವುದರಿಂದ ಅದನ್ನು ಆಧಾರಯೋಗ್ಯವೆಂದು ಪರಿಗಣಿಸುವಂತಿಲ್ಲ.
       ಕಂಚಿಮಠ ಸಂಪ್ರದಾಯದ ಪ್ರಕಾರ ಶಂಕರರು ಜನಿಸಿದ್ದು ಕ್ರಿ.ಪೂ 508ರಲ್ಲಿ ಮತ್ತು ಸಿದ್ಧಿ ಹೊಂದಿದ್ದು ಕ್ರಿ.ಪೂ 476ರಲ್ಲಿ. ಕ್ರಿ.ಪೂ 406ರವರೆಗೆ ಸುರೇಶ್ವರಾಚಾರ್ಯರು ಕಂಚಿಯ ಮೊದಲ ಪೀಠಾಧಿಪತಿಗಳಾಗಿದ್ದರು. ಆತ್ಮಬೋಧರು ತಮ್ಮ ಸುಷುಮಾ ಗ್ರಂಥದಲ್ಲಿ ಸುರೇಶ್ವರರು ಅಪರಮಹಂಸರಾಗಿದ್ದರಿಂದ ಅವರ ಬದಲು ನಂತರ ಪೀಠವೇರಿದ್ದ ಸರ್ವಜ್ಞಾತ್ಮರನ್ನು ಮೊದಲ ಪೀಠಾಧಿಪತಿಯೆಂದಿದ್ದಾರೆ. ಅದೇನೇ ಇದ್ದರೂ ಶೃಂಗೇರಿಯಲ್ಲಿ ಮೊದಲ ಪೀಠಾಧಿಪತಿಗಳಾಗಿದ್ದ ಸುರೇಶ್ವರರೇ ಕಂಚಿಯಲ್ಲೂ ಪೀಠವೇರಿದ್ದಾರೆ. ಅದೇ ದ್ವಾರಕಾ ಪೀಠದಿಂದ 1957ರಲ್ಲಿ ಪ್ರಕಾಶಿತವಾದ ಗುರುಪರಂಪರೆಯ ಪಟ್ಟಿಯನ್ನೂ ಬಲದೇವ ಉಪಾಧ್ಯಾಯರ ದ್ವಾರಕಾ ಪರಂಪರೆಯ ಪಟ್ಟಿಯನ್ನೂ ನೋಡಿದರೆ ಅಲ್ಲಿನ ಮೊದಲ ಪೀಠಾಧಿಪತಿಗಳೂ ಸುರೇಶ್ವರಾಚಾರ್ಯರೇ. ಅವರಿಗೆ ಯುಧಿಷ್ಟಿರ ಶಕ 2649ರ ಮಾಘ ಶುದ್ಧ ಸಪ್ತಮಿಯ ದಿನ ಶಾರದಾಪೀಠದ ಅಧ್ಯಕ್ಷರಾಗಿ ಅಭಿಷೇಕವಾಯಿತೆಂದು ಪರಂಪರೆಯಲ್ಲಿದೆ. ಮಹಾದೇವ ರಾಜಾರಾಮ ಬೋಡಸ್‌ರು ಮೊದಲನೇಯ ಆಚಾರ್ಯರು ಹಸ್ತಾಮಲಕರೆನ್ನುತ್ತಾರೆ. ದ್ವಾರಕಾ ಮಠದಲ್ಲಿ ಕ್ರಿ.ಪೂ 477ರಲ್ಲಿ ಸುಧನ್ವ ರಾಜನಿಂದ ಬರೆಸಲ್ಪಟ್ಟ(!!!) ತಾಮ್ರಶಾಸನವೊಂದಿದೆಯಂತೆ. ಸುಧನ್ವ ಎಂಬ ರಾಜ ಕೇರಳ ದೇಶದವನೆಂದು ಕೆಲ ಶಂಕರವಿಜಯಗಳು ಹೇಳಿದರೆ, ಚಿತ್ಸುಖರ ಬೃಹತ್ ಶಂಕರ ವಿಜಯ ಮತ್ತು ಆನಂದಗಿರಿಯ ಪ್ರಾಚೀನ ಶಂಕರವಿಜಯಗಳು ಸುಧನ್ವ ದ್ವಾರಕೆಯನ್ನಾಳಿದ್ದನೆಂದಿವೆ. ಮಹಾಮಹೋಪಾಧ್ಯಾಯ ಜೆ.ಎನ್ ದ್ವಿವೇದಿ ಮತ್ತು ಬೋಡಸ್‌ರ ಶಂಕರರ ಚರಿತ್ರೆಗಳಲ್ಲಿಯೂ ಸುರೇಶ್ವರರನ್ನೇ ದ್ವಾರಕಾ ಮಠದ ಮೊದಲ ಪೀಠಾಧಿಪತಿಗಳನ್ನಾಗಿಸಿದೆ.
        ಮಠಾಮ್ನಾಯಗಳಲ್ಲಿ ದ್ವಾರಕೆ ’ಭದ್ರಕಾಲೀ’ಪೀಠವೆಂದಿದ್ದರೂ ಈ  ಪೀಠಕ್ಕೆ ’ಶಾರದಾ ಪೀಠ’ವೆಂದು ಅವರ ಪರಂಪರೆ ಕರೆದಿರುವುದು ವಿಚಾರಣೀಯ. ಶಾರದಾ ಪ್ರತಿಷ್ಟೆಯನ್ನು ಯುಧಿಷ್ಟಿರ ಶಕ 2648ರಲ್ಲೇ ಮಾಡಲಾಯಿತೆಂದು ದ್ವಾರಕಾ ಮಠದ ಸಂಪ್ರದಾಯ ಹೇಳುತ್ತದೆ. ಆದರೆ ಇಲ್ಲಿ ಭದ್ರಕಾಲಿ ಮತ್ತು ಸಿದ್ಧೇಶ್ವರರಿಗೇ ಹೆಚ್ಚು ಪ್ರಾಶಸ್ತ್ಯ. ಮಠಾಮ್ನಾಯಶಾಸನದಲ್ಲಿ ’ಕಾಲಿಕಾಪೀಠಶಾಸನೇ’ ಎಂದಿದ್ದು ದ್ವಾರಕೆಯ ಮಹಾಶಾಸನದಲ್ಲಿ ಮಾತ್ರ ’ಶಾರದಾಪೀಠಸ್ಕೃತಾಃ’ ಎಂದಾಗಿದೆ. ’ದ್ವಾರಕಾ ಶ್ರೀಶಾರದಾಪೀಠಗುರುಪರಂಪರೆ’ಯಲ್ಲಿ ಯುಧಿಷ್ಟಿರ ಶಕ 2648ರಲ್ಲಿ ಕಾರ್ತ್ತಿಕಮಾಸದ ಕೃಷ್ಣಪಕ್ಷದಂದು ಮಂದನರ ಪತ್ನಿ ಭಾರತಿದೇವಿಯ ಜೊತೆಗಿನ ವಾದದ ನಂತರ ಆಕಾಶಮಾರ್ಗದಿಂದ ತನ್ನ ಲೋಕಕ್ಕೆ ಹೋಗುತ್ತಿದ್ದ ಆಕೆಯನ್ನು ಚಿಂತಾಮಣಿ ಮಂತ್ರದಿಂದ ಆಕರ್ಷಣೆ ಮಾಡಿ ದ್ವಾರಕೆಯಲ್ಲಿ ಶಾರದೆಯಾಗಿ ಸ್ಥಾಪಿಸಿದರು ಎಂದಿದೆ. ಶೃಂಗೇರಿಯದ್ದೂ ಕೂಡ ಇದೇ ಕಥೆ. ಕಂಚಿಯಲ್ಲಿ ಕಾಮಾಕ್ಷಿಗೆ ಹೆಚ್ಚಿನ ಪ್ರಾಶಸ್ತ್ಯವಿದ್ದರೂ ಕಂಚಿಯವರೂ ತಮ್ಮದು ಶಾರದಾ ಪೀಠವೆಂದು ಕರೆದುಕೊಳ್ಳುತ್ತಾರೆ. ಶೃಂಗೇರಿಯವರೂ ಕೂಡ. ಇದರ ಗುಟ್ಟೇನೋ ತಿಳಿದಿಲ್ಲ.
       ದ್ವಾರಕೆ ಮತ್ತು ಕಾಂಚಿ ಇವೆರಡರ ಪರಂಪರೆಯಲ್ಲೂ ಶಂಕರಾಚಾರ್ಯರಿಗೆ ಹೆಚ್ಚುಕಡಿಮೆ ಕ್ರಿ.ಪೂ ೫ನೇ ಶತಮಾನದ ಕಾಲವನ್ನೇ ಕೊಟ್ಟಿದ್ದಾರೆ. ಇವೆರಡರಲ್ಲೂ ಮೊದಮೊದಲ ಗುರುಗಳಿಗೆ ಹೆಚ್ಚಿನ ಕಾಲಾವಧಿಯನ್ನೂ ಇತ್ತೀಚಿನವರಿಗೆ ಸ್ವಲ್ಪ ಕಡಿಮೆ ಒಪ್ಪುವ ಕಾಲವನ್ನೂ ಬರೆದಿರುತ್ತಾರೆ. ಕಂಚಿಯಲ್ಲಿ 67 ಪೀಠಾಧ್ಯಕ್ಷರ ಪಟ್ಟಿಯಿದ್ದರೆ ದ್ವಾರಕೆಯಲ್ಲಿ ಸುಮಾರು 78 ಜನರ ಹೆಸರಿದೆ. ಇವೆರಡೂ ಮಠಗಳ ಪೀಠಾಧಿಪತಿಗಳ ಸಂಖ್ಯೆಯಲ್ಲಿ ಸಾಮ್ಯವಿದ್ದರೂ ಶೃಂಗೇರಿಯ ಪಟ್ಟಿಯಲ್ಲಿ 36 ಜನರ ಹೆಸರು ಮಾತ್ರವಿದೆ. ಮಾತ್ರವಲ್ಲ ಶೃಂಗೇರಿ ಮಠದವರು ಒಪ್ಪುವಂತೆ ಶಂಕರರ ಕಾಲಮಾನ ಕ್ರಿ.ಶ 8ನೇ ಶತಮಾನ. ಶೃಂಗೇರಿ, ರಾಮಚಂದ್ರಾಪುರ, ಕಂಚಿ ಮತ್ತು ದ್ವಾರಕೆ ಈ ನಾಲ್ಕೂ ಪೀಠಗಳೂ ತಮ್ಮ ತಮ್ಮ ಮೊದಲ ಪೀಠಾಧಿಪತಿಗಳನ್ನಾಗಿ ಸುರೇಶ್ವರಾಚಾರ್ಯರನ್ನೇ ಹೆಸರಿಸಿದೆ. ಮಂಡನ ಮಿಶ್ರರು ಸಂನ್ಯಾಸ ಸ್ವೀಕಾರದ ನಂತರ ಸುರೇಶ್ವರರೆಂದು ಹೆಸರಾದರು ಎಂಬುದು ಲೋಕವಿದಿತ. ಆದರೆ ಶೃಂಗೇರಿಪೀಠದ ಅನುಜ್ಞೆಯಂತೆ ರಚಿತವಾದ ಗುರುವಂಶಕಾವ್ಯದಲ್ಲಿ ಮಂಡನಸುರೇಶ್ವರಿಬ್ಬರನ್ನೂ ಬೇರೆಬೇರೆ ವ್ಯಕ್ತಿಗಳಾಗಿ ಪರಾಮರ್ಶಿಸಲಾಗಿದೆ.
ಈ ಒಗಟುಗಳನ್ನು ಒಡೆಯುವುದು ಹೇಗೆಂದು ಸಾಕ್ಷಾತ್ ಶಂಕರರೇ ಬಲ್ಲರು!!!!!!!

ಶ್ರೀಮಚ್ಛಂಕರಭಗವತ್ಪಾದಚರಿತ್ರ: ಶಾರದಾ ಪೀಠ ಪ್ರಕರಣ

   

    ಶಿವನು ಆಚಾರ್ಯ ಶಂಕರರಿಗೆ ಕಾಶಿಯಲ್ಲಿ ಚಂಡಾಲನ ವೇಷದಲ್ಲಿ ದರ್ಶನವಿತ್ತ ಕಥೆ ಹೆಚ್ಚಿನೆಲ್ಲರೂ ಕೇಳಿದ್ದೇ. ಶಂಕರರ ದಾರಿಗೆ ಚಂಡಾಲನೊಬ್ಬ ಅಡ್ಡಬಂದ. ಅಪಸರ, ಆಚೆ ಹೋಗು ಎಂದರು ಶಂಕರರು. ಅಪಸರತು ಕಃ? ದೇಹಃ ಅಹೋ ಆತ್ಮಾ? ಕಸ್ತಾವದಪಸರತು? ದೂರ ಹೋಗಬೇಕಾದುದು ಒಂದು ಅನ್ನಮಯ ದೇಹದಿಂದ ಇನ್ನೊಂದು ಅನ್ನಮಯ ದೇಹವೋ ಅಥವಾ ಕೇವಲ ಸಾಕ್ಷಿಯಾದ ಒಂದು ಆತ್ಮದಿಂದ ಇನ್ನೊಂದು ಆತ್ಮವೋ? ಎಂದು ಕೇಳಿದ ಚಂಡಾಲ. ಇದು ಮಾಧವೀಯ ಶಂಕರ ವಿಜಯದಲ್ಲಿ ಬರುವ ಸಂಗತಿ. ಶಂಕರಾಚಾರ್ಯರದ್ದು ಎನ್ನುವ ’ಮನೀಷಾ ಪಂಚಕ’ದಲ್ಲೂ ಸರಿಸುಮಾರು ಇಂಥದೇ ಅವತರಣಿಕೆಯಿದೆ('ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ'). ಇದರ ಪ್ರಕಾರ ಚಂಡಾಲನ ಮಾತಿಗೆ ಜ್ಞಾನೋದಯಗೊಂಡ ಆಚಾರ್ಯರು ಆತನನ್ನು ಗುರುವೆಂದು ಒಪ್ಪಿ ನಮಸ್ಕರಿಸಿದರು. ಆಗ ಚಂಡಾಲನ ಜಾಗದಲ್ಲಿ ಸಾಕ್ಷಾತ್ ಶಿವನೇ ಪ್ರತ್ಯಕ್ಷನಾದ. ಆಚಾರ್ಯರು ಭಕ್ತಿಯಿಂದ ಶಿವನನ್ನು ಸ್ತುತಿಸಿದರು. ಶಿವನು ಪ್ರಸನ್ನನಾಗಿ ಬಾದರಾಯಣರು ಬ್ರಹ್ಮಸೂತ್ರಗಳನ್ನು ರಚಿಸಿ ದುರ್ಮತಗಳನ್ನು ಖಂಡಿಸಿದಂತೆ ನೀನು ವೇದಗಳು, ಬ್ರಹ್ಮಸೂತ್ರಾದಿಗಳಿಗೆ ಭಾಷ್ಯವನ್ನು ರಚಿಸಿ, ಕುತ್ಸಿತ ತತ್ತ್ವಗಳನ್ನು ಪ್ರಚಾರ ಮಾಡುತ್ತಿರುವ ಭಾಸ್ಕರ, ನೀಲಕಂಠ, ಅಭಿನವಗುಪ್ತ, ಮಂಡನರನ್ನು ಜಯಿಸಿ, ಅದ್ವೈತ ತತ್ತ್ವವನ್ನು ಖ್ಯಾತಿಗೊಳಿಸಿ ಜನರ ಅಜ್ಞಾನವನ್ನು ತೊಲಗಿಸು ಎಂದು ಆಶೀರ್ವದಿಸಿದ. ಬೇರೆ ಶಂಕರವಿಜಯಗಳಲ್ಲಿ ಈ ಕಥೆಯಿಲ್ಲ. ಭಾಸ್ಕರಾದಿಗಳು ಐತಿಹಾಸಿಕವಾಗಿ ಆಚಾರ್ಯರಿಗಿಂತ ಈಚಿನವರೆಂದು ಮಾಧವೀಯದ ಕವಿಗೆ ಗೊತ್ತಿಲ್ಲವೇನೋ! ಚಂಡಾಲನನ್ನೂ ಗುರುವೆಂದು ಒಪ್ಪಿಕೊಂಡ  ಆಚಾರ್ಯರು ಪರಮ ಸೆಕ್ಯುಲರ್ ಎಂದು ಪ್ರಚುರಪಡಿಸಲೋ ಈ ಕಥೆ ಹುಟ್ಟಿದ್ದೋ ಅಥವಾ ಆಚಾರ್ಯರು ಚಂಡಾಲನನ್ನು ಗುರು ಎಂದರೆ ಅವರಿಗೇ ಅವಮಾನ ಎಂಬ ಭ್ರಾಂತಿಯಿಂದ ಆ ಚಂಡಾಲ ಶಿವನೇ ಎಂದು ಈ ಕಥೆ ಹುಟ್ಟಿತೋ ನಾಕಾಣೆ. ಅದೇನೇ ಇರಲಿ. ತತ್ತ್ವಜ್ಞಾನಿಯೊಬ್ಬ ಜನ್ಮದಿಂದ ಯಾವ ವರ್ಣದವನಾದರೂ ಸದ್ಗುರುವಿನಂತೆ ಗೌರವಕ್ಕೆ ಅರ್ಹನೆಂಬ ಆಸ್ತಿಕ ಅದ್ವೈತಿಗಳ ನಂಬಿಕೆಗೊಂದು ನಮಸ್ಕಾರ.
       ಚಿದ್ವಿಲಾಸೀಯದಂತೆ ಆಚಾರ್ಯರು ಕಾಶಿವಿಶ್ವೇಶನನ್ನು ಪೂಜಿಸಿ ’ಅದ್ವೈತವು ಸತ್ಯವೋ, ದ್ವೈತವು ಸತ್ಯವೋ ಎಂಬ ಸಂಶಯವನ್ನು ತೊಲಗಿಸು’ ಎಂದು ಬೇಡಿಕೊಂಡಾಗ ಲಿಂಗದಿಂದ ಪ್ರತ್ಯಕ್ಷನಾದ ಶಿವನು ಅದ್ವೈತವೇ ಶುದ್ಧಸತ್ಯವೆಂದು ಮೂರು ಬಾರಿ ಕೈಯೆತ್ತಿ ಸಾರಿ, ವೇದಾದಿಗಳಿಗೆ ಅದ್ವೈತಪರ ಭಾಷ್ಯವನ್ನು ಬರೆಯುವಂತೆ ಹೇಳಿದನಂತೆ. ಶಂಕರರು ಸೂತ್ರಭಾಷ್ಯವನ್ನು ರಚಿಸಿದ್ದು ಅವರ ಹನ್ನೆರಡನೇ ವಯಸ್ಸಿನಲ್ಲಿ ಎನ್ನಲಾಗುತ್ತದೆ. ಆಮೇಲೆ ಭಗವದ್ಗೀತೆ ಹಾಗೂ ವೇದಾಂತಗಳಿಗೆ ಭಾಷ್ಯವನ್ನೂ ರಚಿಸಿದರು. ಈ ಭಾಷ್ಯಗಳಿಗೆ ಆಕಾಲದ ಸುಪ್ರಸಿದ್ಧ ವಿದ್ವಾಂಸರಾದ ಕುಮಾರಿಲಭಟ್ಟರಿಂದ ವಾರ್ತಿಕೆಯನ್ನು ಬರೆಯಿಸಬೇಕೆಂದು ಶಂಕರರಿಗೆ ಅಭಿಲಾಷೆಯುಂಟಾಯಿತು. ಭರತಖಂಡದಲ್ಲೆಲ್ಲ ಅವೈದಿಕರು ತಲ್ಲಣಗೊಳ್ಳುವ ಹೆಸರದು. ಕುಮಾರಿಲ ಭಟ್ಟರು ವಾದಕ್ಕೆ ಕರೆದರೆಂದರೆ ಮಹಾಮಹಾ ಬೌದ್ಧ ವಿದ್ವಾಂಸರ ಬಾಯಿಪಸೆ ಒಣಗಿಹೋಗುತ್ತಿತ್ತು. ಆ ಪಾಖಂಡಿಯ ಜೊತೆ ವಾದಕ್ಕೆ ಕೂರುವುದು ತಮ್ಮ ಧರ್ಮಕ್ಕೆ ಮಾಡುವ ಅವಮಾನವೆಂದು ಹೆಚ್ಚಿನವರೆಲ್ಲ ಭಟ್ಟರೆದುರು ಕೂರುವುದನ್ನು ತಪ್ಪಿಸಿಕೊಳ್ಳುತ್ತಿದ್ದರು. ಮಾಧ್ಯಮಿಕರ ನಿರಾಲಂಬವಾದವನ್ನೂ, ಬೌದ್ಧರ ಶೂನ್ಯವಾದವನ್ನೂ ಖಂಡಿಸಿ ವೇದಪ್ರಾಮಣ್ಯವನ್ನು ಸಿದ್ಧಪಡಿಸಿದ ಮಹಾಪುರುಷರಿವರು. ’ವ್ಯವಹಾರೇ ಭಾಟ್ಟನಯಃ’ ಎಂದು ವಿರೋಧಿಗಳಾದ ಅದ್ವೈತಿಗಳೂ ಇವರ ವಾದಕ್ಕೆ ತಲೆದೂಗಿದ್ದರು. ಋಗ್ವೇದಕ್ಕೆ ಭಾಷ್ಯ ಬರೆದ ಸ್ಕಂದಸ್ವಾಮಿಗೂ, ಶತಪಥ ಬ್ರಾಹ್ಮಣದ ಮೇಲೆ ಭಾಷ್ಯ ಬರೆದ ಹರಿಸ್ವಾಮಿಗೂ, ನಿರುಕ್ತದ ಮೇಲೆ ಭಾಷ್ಯವನ್ನು ಬರೆದ ಮಹೇಶ್ವರಾಚಾರ್ಯನಿಗೂ ಕುಮಾರಿಲರ ಅಭಿಪ್ರಾಯಗಳೇ ಆಧಾರ. ಶ್ಲೋಕವಾರ್ತಿಕ, ತಂತ್ರವಾರ್ತಿಕ, ಟುಪ್‍ಟೀಕಾಗಳ ಮೂಲಕ ಶಬರಸ್ವಾಮಿಗಳ ಭಾಷ್ಯಕ್ಕೆ ವಾರ್ತಿಕೆಯನ್ನು ಬರೆದು ಪೂರ್ವಮೀಮಾಂಸಾ ದರ್ಶನವನ್ನು ಜಗದ್ವಿಖ್ಯಾತಗೊಳಿಸಿದ ಕೀರ್ತಿ ಕುಮಾರಿಲರದ್ದು. ಅದ್ವೈತಿಗಳು ಬ್ರಹ್ಮಸತ್ಯವೆಂದರೆ ಮೀಮಾಂಸಕರು ದೇವರ ಬಗ್ಗೆಲ್ಲ ತಲೆಕೆಡಿಸಿಕೊಳ್ಳುವವರಲ್ಲ. ಅವರಿಗೆ ದೇವರಿರಲೀ, ಇಲ್ಲದಿರಲೀ ಎರಡೂ ಒಂದೇ. ಆದರೆ ವೇದಗಳು ಮಾತ್ರ ಸ್ವತಃ ಪ್ರಮಾಣವೆಂದು ಮೀಮಾಂಸಕರ ಅಭಿಮತ. ವೈದಿಕ ದರ್ಶನದ ಮಜವೇ ಅದು. ಷಡ್ದರ್ಶನಗಳಲ್ಲಿ ನ್ಯಾಯ ಮತ್ತು ವೈಶೇಷಿಕ ದರ್ಶನಗಳು ಮೂಲವಾಗಿ ನಿರೀಶ್ವರ ದರ್ಶನಗಳು. ಸಾಂಖ್ಯರೂ ದೇವರನ್ನು ಒಪ್ಪುವುದಿಲ್ಲ. ಯೌಗಿಕರೂ ಸಾಂಖ್ಯರಂತೆಯೇ. ಯೋಗ ಸಾಂಖ್ಯಗಳೆರಡೂ ಮುಂದೆ ಒಂದಾಗಿ ಕಲೆತುಹೋದವು. ಮೀಮಾಂಸಕರು ದೇವರಿಗೆ ತುಂಬ ಸೀಮಿತ ಅಧಿಕಾರವನ್ನು ನೀಡುತ್ತಾರೆ. ಹಾಗಿದ್ದರೂ ಇವೆಲ್ಲ ಅಪ್ಪಟ ಆಸ್ತಿಕ ವೈದಿಕ ದರ್ಶನಗಳು(ವೇದಗಳನ್ನು ಒಪ್ಪಿಕೊಳ್ಳದಿದ್ದವರನ್ನು ನಾಸ್ತಿಕರೆಂದು ಕರೆದರೇ ವಿನಹ ದೇವರನ್ನು ಒಪ್ಪಿಕೊಳ್ಳದಿದ್ದವರನ್ನಲ್ಲ ಎಂಬುದನ್ನು ಗಮನಿಸಬೇಕು). ಪೂರ್ಣಪ್ರಮಾಣದಲ್ಲಿ ದೇವರನ್ನೊಪ್ಪುವವರು ವೈದಿಕ ದರ್ಶನದ ಆರನೇ ಶಾಖೆಯಾದ ವೇದಾಂತಿಗಳೇ. ಪೂರ್ವ ಮೀಮಾಂಸದ ಪದ್ಧತಿಯನ್ನು ಅಳವಡಿಸಿಕೊಂಡು ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಮತ್ತು ಗೀತೆಯಲ್ಲಿರುವ ಸತ್ಯಗಳನ್ನು ಸಮನ್ವಯಗೊಳಿಸಲು ಪ್ರಯತ್ನಿಸಿದ್ದರಿಂದ ವೇಂದಾತ ದರ್ಶನಕ್ಕೆ ಉತ್ತರ ಮೀಮಾಂಸೆಯೆಂಬ ಹೆಸರೂ ಇದೆ. ನಮ್ಮ ಈಗಿನ ದೇವರುಗಳೆಲ್ಲ ವೇದಾಂತದ ದ್ವೈತಾದ್ವೈತ, ವಿಶಿಷ್ಟಾದ್ವೈತ, ಅಚಿಂತ್ಯ ಅಬೇಧವೇತ್ಯಾದಿ ಶಾಖೋಪಶಾಖೆಗಳಲ್ಲಿ ಸೃಷ್ಟಿಯಾದವೇ. ಅದು ಬೇರೆಯೇ ವಿಚಾರ ಬಿಡಿ. ಬೌದ್ಧಮತದ ಒಳರಹಸ್ಯವನ್ನೆಲ್ಲ ತಿಳಿಯಲು ನಾಲಂದದ ಮುಖ್ಯಸ್ಥ ಧರ್ಮಪಾಲಯಲ್ಲಿ ಶಿಷ್ಯನಾಗಿ ಕುಮಾರಿಲರು ಸೇರಿಕೊಂಡರು. ವೈದಿಕ ಮತವನ್ನು ಖಂಡಿಸಿ ಗುರುಗಳು ಪಾಠಮಾಡಿದಾಗಲೆಲ್ಲ ಕುಮಾರಿಲರ ಕಣ್ಣಂಚು ಒದ್ದೆಯಾಗುತ್ತಿತ್ತು. ಸುತ್ತಲಿದ್ದ ಸಹಪಾಠಿಗಳು, ಗುರುಗಳು ಇದನ್ನು ಗಮನಿಸಿದರು. ಪ್ರಚ್ಛನ್ನ ಬೌದ್ಧನ ವೇಷದಲ್ಲಿ ಸೇರಿಕೊಂಡವನ ನಿಜರೂಪ ತಿಳಿಯಲು ಅವರಿಗೆ ತುಂಬ ಹೊತ್ತೇನೂ ಬೇಕಾಗಲಿಲ್ಲ. ಆದರೆ ಹಾಗೆ ಬಂದವ ಕುಮಾರಿಲಭಟ್ಟರೆಂಬುದು ಗೊತ್ತಾದಾಗ ಮಾತ್ರ ನಾಲಂದದ ಬೌದ್ಧ ಭಿಕ್ಕುಗಳಿಗೆ ಕಾಲಡಿಯ ನೆಲ ಬಿರಿದ ಅನುಭವ. ಎದುರಿಗಿರುವ ಆಸಾಮಿ ಅಂಥಿಂಥವನಲ್ಲ. ವೈದಿಕ ಧರ್ಮದ ವಿರೋದಿಗಳೇ ಪ್ರಬಲರಾಗಿದ್ದ ಕಾಲದಲ್ಲಿ ಬೌದ್ಧಮತವನ್ನು ಖಂಡತುಂಡವಾಗಿ ಖಂಡಿಸಿ ಚೆಂಡಾಡಿ ವೈದಿಕ ಧರ್ಮದ ಪಕ್ಷವನ್ನು ಹಿಡಿದು ಅದನ್ನು ನಾಡಿನಾದ್ಯಂತ ಪ್ರಚಾರ ಮಾಡಿದ ಮಹಾಮೀಮಾಂಸಕ. ಆದರೆ ಒಬ್ಬನೇ ಸಿಕ್ಕಿದಾಗ ಬಿಡುತ್ತಾರೆಯೇ? ಸಮಯ ಸಾಧಿಸಿ ತಲೆಗೊಂದರಂತೆ ಏಟು ಹಾಕಿ ಬೆಟ್ಟದ ತುದಿಯಿಂದ ಕುಮಾರಿಲರನ್ನು ಕೆಳಗೆ ತಳ್ಳಿದರು. ’ವೇದಗಳು ಪ್ರಮಾಣವಾದರೆ ನನಗೆ ಯಾವ ಅಪಾಯವೂ ಆಗದಿರಲಿ’ ಎಂದು ಭಟ್ಟರು ಕೂಗಿಕೊಂಡರಂತೆ. ಬೆಟ್ಟದಿಂದ ಕಂದಕಕ್ಕೆ ಬಿದ್ದರೂ ಕುಮಾರಿಲರಿಗೆ ಏನೂ ಆಗಲಿಲ್ಲ. ಆದರೆ ಸಣ್ಣ ಕಲ್ಲೊಂದು ತಾಗಿ ಕಣ್ಣಿಗೆ ಗಾಯವಾಯಿತಂತೆ. ಮೀಮಾಂಸಕ ಮತದಲ್ಲಿ ವೇದಗಳು ಸ್ವತಃ ಪ್ರಮಾಣವಾದವು. ಅಂಥದ್ದರಲ್ಲಿ ’ಪ್ರಮಾಣವಾದರೆ’ ಎಂಬ ಸಂಶಯವನ್ನು ಸೂಚಿಸಿದ್ದರಿಂದಲೂ ಪ್ರಚ್ಛನ್ನವೇಷದಲ್ಲಿ ಶಾಸ್ತ್ರಶ್ರವಣ ಮಾಡಿದ್ದರಿಂದಲೂ ಒಂದು ಕಣ್ಣಿಗೆ ಗಾಯವಾಯಿತೆಂದು ಕಥೆ. ವೇದ ಮಹಾತ್ಮ್ಯವನ್ನರಿಯದೇ ವೇಷಾಂತರಿಯಾಗಿ ವಿರೋಧಿಯ ರಹಸ್ಯವನ್ನರಿತು ಸೋಲಿಸುವ ಲೌಕಿಕ ಕುತಂತ್ರವನ್ನು ಮಾಡಿದ್ದರಿಂದ, ಶಿಷ್ಯನೆಂದು ನಂಬಿದ ಗುರುವಿಗೆ ವಂಚನೆ ಮಾಡುವಂಥದ ವೇದವಿರೋಧಿ ಕರ್ಮದಲ್ಲಿ ತೊಡಗಿದ್ದರಿಂದ ಕುಮಾರಿಲರು ದೇಹತ್ಯಾಗಕ್ಕೆ ನಿರ್ಧರಿಸಿದರು.
       ಆ ಕಾಲದಲ್ಲಿ ವೈದಿಕರೂ ಬೌದ್ಧರೂ ಒಬ್ಬರ ಶಾಸ್ತ್ರವನ್ನು ಇನ್ನೊಬ್ಬರು ಕಲಿತು ಪರಸ್ಪರ ಖಂಡನೆ ಮಂಡನೆಗಳನ್ನು ಮಾಡುತ್ತಿದ್ದರೆಂಬುದು ಕುಮಾರಿಲರ ಕಥೆಯಿಂದ ಸ್ಪಷ್ಟ. ಆದರೆ ಕುಮಾರಿಲರನ್ನು ಗುಡ್ಡದ ತುದಿಯಿಂದ ತಳ್ಳಿದ, ಪ್ರಾಯಶ್ಚಿತ್ತಕ್ಕೆಣಿಸಿದ ಕಥೆಗಳು ಒಂದೊಂದು ಶಂಕರವಿಜಯದಲ್ಲಿ ಒಂದೊಂದು ತೆರನಾಗಿದೆ. ಬ್ರಾಹ್ಮಣನೆಂದು ತಿಳಿದು ಬೌದ್ಧರು ಕುಮಾರಿಲರನ್ನು ಹೊರಹಾಕಿದಾಗ ಅವರನ್ನೆಲ್ಲ ವಾದದಲ್ಲಿ ಜಯಿಸಿ ಸುಧನ್ವ ರಾಜನ ಸಹಾಯದಿಂದ ಅವರ ತಲೆಕಡಿಸಿದರೆನ್ನುತ್ತದೆ ಚಿದ್ವಿಲಾಸೀಯ. ಅನಂತಾನಂದಗಿರೀಯದ ಒಂದು ಕಥೆಯ ಪ್ರಕಾರ ರಾಜನು ಗಡಿಗೆಯಲ್ಲಿ ಸರ್ಪವನ್ನಿಟ್ಟು ಇದೇನೆಂಬ ಪ್ರಶ್ನೆ ಹಾಕಿದನಂತೆ. ಬೌದ್ಧ ವಿದ್ವಾಂಸರು ’ಇದರಲ್ಲಿ ಹಾವಿದೆ’ ಎಂದರು. ಕುಮಾರಿಲರು ’ಅದರಲ್ಲಿ ಶೇಷಶಾಯಿಯಾದ ವಿಷ್ಣುವಿದ್ದಾನೆ’ ಎಂದರು. ರಾಜನು ಗಡಿಗೆಯನ್ನು ತೆಗೆದು ನೋಡಲಾಗಿ ಸರ್ಪವು ವಿಷ್ಣುವಿನ ವಿಗ್ರಹವಾಗಿ ಬದಲಾಗಿತ್ತು, ರಾಜ ಕುಮಾರಿಲರ ಶಿಷ್ಯನಾಗಿ ಬೌದ್ಧರ ತಲೆಕಡಿಸಿ ಕಾಳ್ಗಿಚ್ಚಿಗಿಟ್ಟ. ಬೆಟ್ಟದಿಂದ ಬಿದ್ದರೂ ಎದ್ದು ಬಂದ ಪವಾಡ ಬೇರೆ. ಬುದ್ಧನ ಪವಾಡಗಳನ್ನು ಶ್ಲೋಕವಾರ್ತಿಕದ ಚೋದನಾಸೂತ್ರದಲ್ಲಿ ಹಾಸ್ಯಮಾಡಿದ ಭಟ್ಟರು ಇಂಥ ಅದ್ಭುತದರ್ಶನಗಳಿಗೆಲ್ಲ ಬೆಲೆಕೊಡುತ್ತಾರೆಂಬುದಕ್ಕೆ ಯಾವ ಆಧಾರವೂ ಇಲ್ಲ. ಇದೆಲ್ಲ ಶಂಕರವಿಜಯಕಾರರ ಕಲ್ಪನಾ ಸಾಮ್ರಾಜ್ಯ ಮಾತ್ರ.
ದ್ವಾರಕಾಮಠದಲ್ಲಿರುವ ಕುಮಾರಿಲ ಶಂಕರ ಸಮಾಗಮದ ಉಬ್ಬುಶಿಲ್ಪ
       ಅದೇನೇ ಆದರೂ ಕುಮಾರಿಲರು ತುಷಾಗ್ನಿ ಪ್ರವೇಶ ಮಾಡಿದ್ದೂ ಹಾಗೂ ಆ ಸಮಯದಲ್ಲಿ ಅವರನ್ನು ಶಂಕರರು ಭೇಟಿಯಾದ ಬಗ್ಗೆ ಎಲ್ಲ ಶಂಕರ ವಿಜಯಗಳಲ್ಲೂ ಸಹಮತವಿದೆ. ವ್ಯಾಸಾಚಲೀಯದ ಪ್ರಕಾರ ಆಚಾರ್ಯರು ತಮ್ಮ ಸೂತ್ರಗಳಿಗೆ ವಾರ್ತಿಕೆಯನ್ನು ಬರೆಸಲು ಕುಮಾರಿಲರನ್ನು ಹುಡುಕಿಕೊಂಡು ಪ್ರಯಾಗಕ್ಕೆ ಬಂದಾಗ ಹೊಟ್ಟಿನ ಮಧ್ಯೆ ಬೇಯುತ್ತಿದ್ದ ಭಟ್ಟಪಾದರನ್ನು ಕಂಡರು. ಅನಂತಾನಂದಗಿರೀಯ, ಚಿದ್ವಿಲಾಸೀಯ ಮತ್ತು ಆನಂದಗಿರೀಯದಂತೆ ಆಚಾರ್ಯರು ಕಾಶಿಯಲ್ಲಿದ್ದಾಗ ಕುಮಾರಿಲರ ಮಹಿಮೆಯನ್ನು ತಿಳಿದು ಅವರನ್ನು ಹುಡುಕಿಕೊಂಡು ದಕ್ಷಿಣದ ರುದ್ಧಪುರಿಗೆ ಬಂದರು. ಈ ರುದ್ದಪುರಿ ಈಗಿನ ಆಂಧ್ರದ ಅನಂತಪುರ ಜಿಲ್ಲೆಯ ರೊದ್ದಂ ಆಗಿರಬೇಕು. ಕುಮಾರಿಲರ ತಂತ್ರವಾರ್ತಿಕದಲ್ಲಿ ಬರುವ ದ್ರಾವಿಡಪದಗಳ ಹೇರಳ ಪ್ರಯೋಗವೂ ಅವರನ್ನು ದಾಕ್ಷಿಣಾತ್ಯನೆಂದೇ ಸೂಚಿಸುತ್ತದೆ. ಶಂಕರರು ಕುಮಾರಿಲರನ್ನು ಭೇಟಿಯಾದದ್ದೂ ಕೂಡ ಇಲ್ಲಿಯೇ .
       ತುಷಾಗ್ನಿಯ ಮಧ್ಯದಲ್ಲಿದ್ದಾಗೆ ಆಚಾರ್ಯರನ್ನು ಭೇಟಿಯಾದ ಭಟ್ಟರು ಮಗಧದಲ್ಲಿ ಮಹಾವೈದಿಕನಾದ ವಿಶ್ವರೂಪನೆಂಬ ತಮ್ಮೊಬ್ಬ ಶಿಷ್ಯನನ್ನು ಜಯಿಸುವಂತೆ ಶಂಕರರಿಗೆ ಸೂಚಿಸುತ್ತಾರೆ(’ಸ ವಿಶ್ವರೂಪಃ ಪ್ರಥಿತೋ ಮಹೀತಲೇ’). ಮಾಧವೀಯದಲ್ಲೂ ಸರಿಸುಮಾರು ಇದೇ ವೃತ್ತಾಂತವಿದೆ. ’ಶಬರಭಾಷ್ಯಕ್ಕೆ ವಾರ್ತಿಕವನ್ನು ಬರೆದಂತೆ ತಮ್ಮ ಭಾಷ್ಯಕ್ಕೂ ಬರೆಯುವ ಭಾಗ್ಯವಿಲ್ಲದೇ ಹೋಯಿತು. ಪ್ರಾಯಶ್ಚಿತ್ತವನ್ನು ಕೈಗೊಳ್ಳದೇ ಇದ್ದಿದ್ದರೆ ತಮ್ಮ ಮೊದಲನೇಯ ಅಧ್ಯಾಸಭಾಷ್ಯಕ್ಕೇ ಎಂಟು ಸಾವಿರ ವಾರ್ತಿಕೆಗಳನ್ನು ಬರೆಯಬಹುದಿತ್ತು. ಮಾಹಿಷ್ಮತಿಯಲ್ಲಿ ವಿಶ್ವರೂಪನೆಂಬ ನನ್ನ ಶಿಷ್ಯನಿದ್ದಾನೆ. ದೂರ್ವಾಸನ ಶಾಪದಿಂದ ಪ್ರಭಾವದಿಂದ ಭುವಿಯ ಮೇಲೆ ಜನಿಸಿದ ಸ್ವತಃ ಸರಸ್ವತಿಯೇ ಉಭಯಭಾರತಿಯೆಂಬ ಹೆಸರಿನಿಂದ ಅವನ ಹೆಂಡತಿಯಾಗಿದ್ದಾಳೆ. ತಮ್ಮ ಸೂತ್ರಭಾಷ್ಯಕ್ಕೆ ವ್ಯಾಖ್ಯಾನವನ್ನು ಬರೆಯಲು ಅವನೇ ಸರಿಯಾದ ವ್ಯಕ್ತಿ’ ಎನ್ನುತ್ತಾರೆ ಕುಮಾರಿಲರು. ಚಿದ್ವಿಲಾಸೀಯದ ಪ್ರಕಾರ ಮಂಡನಮಿಶ್ರರೆಂಬ ಭಟ್ಟಪಾದರ ಶಿಷ್ಯನಿದ್ದುದು ಕಾಶ್ಮೀರದಲ್ಲಿ. ಆತ ಸ್ವತಃ ಬ್ರಹ್ಮನ ಅಂಶದಿಂದ ಹುಟ್ಟಿದವನು. ದೂರ್ವಾಸರ ಸ್ವರಸ್ಖಾಲಿತ್ಯವನ್ನು ಕೇಳಿ ನಕ್ಕ ತಪ್ಪಿಗಾಗಿ ಶಾಪದಿಂದ ಸರಸ್ವತಿಯು ಭಾರತಿಯಾಗಿ ಜನಿಸಿ ಅವನ ಪತ್ನಿಯಾದಳಂತೆ. ಮನುಷ್ಯರೂಪನಾದ ಶಿವನನ್ನು ಕಂಡಕೂಡಲೇ ಅವಳಿಗೆ ಶಾಪಮೋಕ್ಷವೆಂದು ವಿಮೋಚನೆಯ ದಾರಿಯನ್ನೂ ಚಿದ್ವಿಲಾಸಕಾರನೇ ಸೂಚಿಸಿದ್ದಾನೆ. ಆನಂದಗಿರೀಯದಂತೆ ಮಂಡನ ಕುಮಾರಿಲರ ತಂಗಿಯ ಗಂಡ. ಮಾಧವೀಯದಂತೆ ಕುಮಾರಿಲರಿಗೆ ಮಂಡನ ಮತ್ತು ಪ್ರಭಾಕರರೆಂಬ ಇಬ್ಬರು ಶಿಷ್ಯರು. ಈ ಪ್ರಭಾಕರನು ಪೂರ್ವಮೀಮಾಂಸೆಯ ಮಹಾ ಪಂಡಿತ ಪ್ರಾಭಾಕರ ಮತದ ಪ್ರಭಾಕರನೇ ಅಲ್ಲವೇ ಎಂಬುದು ಪ್ರಶ್ನಾರ್ಹ ವಿಚಾರ.
(ಒಂದು ಕೃತಿಯನ್ನು ವಿವರಿಸಿ ಬರೆಯುವುದನ್ನೇ ಭಾಷ್ಯವೆಂದೂ, ಟೀಕಿಸಿ ಬರೆಯುವುದನ್ನೇ ಟೀಕೆಯೆಂದೂ ಹೆಚ್ಚಿನವರು ತಿಳಿದಿದ್ದಾರೆ. ರಾಜಶೇಖರನ ಕಾವ್ಯಮೀಮಾಂಸೆಯನ್ನು ನೋಡಿದರೆ ಅವುಗಳ ವ್ಯತ್ಯಾಸ ಸುಲಭಗ್ರಾಹ್ಯ. "ಸೂತ್ರಾಣಾಂ ಸಕಲಸಾರವಿವರಣಂ ವೃತ್ತಿಃ | ಸೂತ್ರವೃತ್ತಿವಿವೇಚನಂ ಪದ್ಧತಿಃ | ಆಕ್ಷಿಪ್ಯ ಭಾಷಣಾದ್ ಭಾಷ್ಯಮ್ | ಅಂತರ್ಭಾಷ್ಯಂ ಸಮೀಕ್ಷಾ | ಅವಾಂತರಾರ್ಥವಿಚ್ಛೇದಶ್ಚ ಸಾ | ಯಥಾಸಂಭವಮರ್ಥಸ್ಯ ಟೀಕನಂ ಟೀಕಾ | ವಿಷಮಪದಭಂಜಿಕಾ ಪಂಜಿಕಾ | ಅರ್ಥಪ್ರದರ್ಶನಕಾರಿಕಾ ಕಾರಿಕಾ | ಉಕ್ತಾನುಕ್ತದುರುಕ್ತಚಿಂತಾ ವಾರ್ತಿಕಮಿತಿ ಶಾಸ್ತ್ರಭೇದಾಃ |" - ಸೂತ್ರಗಳ ತಾತ್ಪರ್ಯವನ್ನು ವಿವರಿಸುವ ವ್ಯಾಖ್ಯಾನಕ್ಕೆ ವೃತ್ತಿಯೆಂದು ಹೆಸರು. ಇಂತಹ ಸೂತ್ರವೃತ್ತಿಗಳ ವಿವೇಚನೆಯೇ ಪದ್ಧತಿ. ಅನೇಕ ಆಕ್ಷೇಪಗಳನ್ನೆತ್ತಿ ಅದಕ್ಕೆ ಸಮುಚಿತವಾದ ಉತ್ತರವನ್ನು ರೂಪಿಸುವ ಸಿದ್ಧಾಂತವನ್ನು ನಿರ್ಣಯಿಸುವುದೇ ಭಾಷ್ಯ. ಭಾಷ್ಯದ ಅವಾಂತರ ಮತ್ತು ಗರ್ಭಿತ ಅರ್ಥಗಳ ಸ್ಪಷ್ಟೀಕರಣವೇ ಸಮೀಕ್ಷಾ. ಉಚಿತ ಅರ್ಥಗಳ ಪ್ರತಿಪಾದನೆಯೇ ಟೀಕಾ. ಕಠಿಣ ಶಬ್ದಗಳ ಅರ್ಥವನ್ನು ಸರಳ ಶಬ್ದಗಳಿಂದ ವಿವರಿಸುವುದೇ ಪಂಜಿಕಾ. ಸೂತ್ರಾರ್ಥವನ್ನು ಸರಳವಾಗಿ ಪ್ರದರ್ಶಿಸುವುದೇ ಕಾರಿಕಾ. ಸೂತ್ರಗಳಲ್ಲಿ ಹೇಳಿದ, ಹೇಳದ, ಕಠಿಣವಾಗಿ ಹೇಳಿದ ವಿಷಯಗಳ ವಿವೇಅನೆಯೇ ವಾರ್ತಿಕಾ. ಇದು ಶಾಸ್ತ್ರಗಳ ವಿಭಾಗ ಕ್ರಮ.)
ಮಂಡನ ಮಿಶ್ರರೊಡನೆ ಶಂಕರರ ವಾದ
       ಈ ಮಂಡನಮಿಶ್ರ ಅಥವಾ ವಿಶ್ವರೂಪರೇ ಮುಂದೆ ಶಂಕರರಿಂದ ವಾದದಲ್ಲಿ ಸೋತು ಸಂನ್ಯಾಸ ಸ್ವೀಕರಿಸಿ ಸುರೇಶ್ವರರೆಂಬ ಅಭಿದಾನದಿಂದ ವಿಖ್ಯಾತರಾದರು. ಶೃಂಗೇರಿ, ಕಂಚಿ, ದ್ವಾರಕಾಪೀಠಗಳಿಗೆ ಸಾವಿರ ವರ್ಷಗಳಿಗೂ ಮಿಕ್ಕಿ ಕಾಲವ್ಯತ್ಯಾಸದಲ್ಲಿ ಸುರೇಶ್ವರರು ಮೊದಲ ಪೀಠಾಧಿಪತಿಗಳಾಗಿದ್ದ ಆಶ್ಚರ್ಯವನ್ನು ಹಿಂದಿನ ಲೇಖನದಲ್ಲಿ ಗಮನಿಸಿದ್ದೇವೆ. ಆದರೆ ಈ ಮಂಡನಮಿಶ್ರ ಮತ್ತು ಕೆಲ ಶಂಕರವಿಜಯಗಳಲ್ಲಿ ಹೇಳಲಾಗಿರುವ ವಿಶ್ವರೂಪ ಇವರಿಬ್ಬರೂ ಒಬ್ಬರೇ ಅಥವಾ ಬೇರೆಬೇರೆಯೇ? ಮಾಧವೀಯದಲ್ಲೇ ಐದನೇ ಸರ್ಗದಲ್ಲಿ ಮಂಡನನಿಗೆ ಬ್ರಹ್ಮವಾದವನ್ನು ಉಪದೇಶಿಸಿದ ವೃತ್ತಾಂತವಿದ್ದರೆ(’ತ್ಯಕ್ತ್ವಾ ಮಂಡನಭೇದಗೋಚರಧಿಯಂ ಮಿಥ್ಯಾಭಿಮಾನಾತ್ಮಿಕಾ’), ಎಂಟನೇ ಅಧ್ಯಾಯದಲ್ಲಿ ’ಅಥ ಪ್ರತಸ್ಥೇ ಭಗವಾನ್ ಪ್ರಯಾಗಾತ್, ದಿದೃಕ್ಷಮಾಣೋ ಗೃಹಿವಿಶ್ವರೂಪಮ್’ ಎಂದು ಗೃಹಸ್ಥನಾದ ವಿಶ್ವರೂಪನನ್ನು ನೋಡಲು ಆಚಾರ್ಯರು ಯೋಗಬಲದಿಂದ ಅವನ ಮನೆಯಂಗಳದಲ್ಲಿ ಇಳಿಯುತ್ತಾರೆ!. ಗುರುವಂಶಕಾವ್ಯ, ವ್ಯಾಸಾಚಲೀಯದಲ್ಲೂ ಮಂಡನ ವಿಶ್ವರೂಪರನ್ನು ಬೇರೆಬೇರೆಯಾಗಿಯೇ ಉಲ್ಲೇಖಿಸಲಾಗಿದೆ. ಯಾಜ್ಞವಲ್ಕ್ಯಸ್ಮೃತಿಗೆ ಬಾಲಕ್ರೀಡಾ ವ್ಯಾಖ್ಯಾನವನ್ನು ಬರೆದವರು ವಿಶ್ವರೂಪರೆಂದು ಪ್ರಸಿದ್ಧಿ. ಶಂಕರರ ದಕ್ಷಿಣಾಮೂರ್ತಿ ಸ್ತೋತ್ರಕ್ಕೆ ಮಾನಸೋಲ್ಲಾಸ ವ್ಯಾಖ್ಯಾನವನ್ನು ಬರೆದವರೂ ವಿಶ್ವರೂಪರೆಂದು ಅದರ ವ್ಯಾಖ್ಯಾನಕಾರರು ಹೇಳುತ್ತಾರೆ. ಶಾಂಕರಪರಂಪರೆಯಲ್ಲಿ ಸಂನ್ಯಾಸಿಗಳು ಪೂಜಿಸುವ ’ಆಚಾರ್ಯ ಪಂಚಕ’ದಲ್ಲಿ ಸುರೇಶ್ವರರ ಹೆಸರಿಲ್ಲ. ಆದರೆ ಧರ್ಮಸಿಂಧುವೇತ್ಯಾದಿಗಳು ವಿಶ್ವರೂಪಾಚಾರ್ಯರನ್ನೇ ಹೆಸರಿಸಿವೆ. ಗೃಹಸ್ಥನಾಗಿದ್ದ ವಿಶ್ವರೂಪನನ್ನು ಶಾಂಕರ ಪರಂಪರೆಯಲ್ಲಿ ಮಠಾಧಿಪತಿಯ ಪದವಿಯಲ್ಲಿಟ್ಟದ್ದು ಹೇಗೆ ಸರಿಯಾದೀತು?
       ಇನ್ನು ಶಂಕರರು ಮಂಡನಮಿಶ್ರರನ್ನು ಎಲ್ಲಿ ಜಯಿಸಿದರೆಂಬುದೂ ಚರ್ಚಾರ್ಹವೇ. ಮಾಧವೀಯದಲ್ಲಿ ಪ್ರಯಾಗವೆಂದಿದ್ದರೆ, ವ್ಯಾಸಾಚಲೀಯದಲ್ಲಿ ಮಾಹಿಷ್ಮತಿಯೆಂದಿದೆ. ಪ್ರಾಚೀನ ಹಾಗೂ ಬೃಹಚ್ಛಂಕರ ವಿಜಯಗಳಲ್ಲಿ ಮತ್ತು ಗುರುರತ್ನಮಾಲಿಕೆಯಲ್ಲಿರುವಂತೆ ’ಪಟುಮಂಡನಮಿಶ್ರಖಂಡನಾರ್ಥಂ ಪ್ರವಿಶನ್ಪದ್ಮವನಂ ನವಂ ಜಯಾರ್ಥಮ್’ ಮಂಡನಮಿಶ್ರರನ್ನು ಜಯಿಸಿದ್ದು ಪದ್ಮವನವೆಂಬ ಅಗ್ರಹಾರದಲ್ಲಿ. ಅದೇನೆ ಆದರೂ ಮಂಡನರೊಡಗಿನ ಆಚಾರ್ಯರ ವಾದ ವಿವಾದಾತೀತ. ತತ್ತ್ವಶಾಸ್ತ್ರದ ಹಿನ್ನೆಲೆಯಲ್ಲಿ ಅವರಿಬ್ಬರ ವಾದಗಳ ಸೊಬಗನ್ನು ಭೈರಪ್ಪನವರ ’ಸಾರ್ಥ’ದಲ್ಲಿ ಓದಿ ಆಸ್ವಾದಿಸುವ ಸೊಗಸೇ ಬೇರೆ!. ಮಂಡನರ ಸೋಲು ಅರಿತ ಪತ್ನಿ ಉಭಯಭಾರತಿ ಬಾಲಸನ್ಯಾಸಿ ಆಚಾರ್ಯರಿಗೆ ಕಾಮಶಾಸ್ತ್ರದ ಮೇಲಿನ ಪ್ರಶ್ನೆಯನ್ನು ಹಾಕುತ್ತಾಳೆ. ಒಂದು ತಿಂಗಳ ಸಮಯಾವಕಾಶ ಕೋರಿದ ಶಂಕರರು ಅಮರುಕ ರಾಜನ ಶರೀರದೊಳಗೆ ಪರಕಾಶಪ್ರವೇಶ ಮಾಡಿಬಂದು ಈ ಪ್ರಶ್ನೆಗೆ ಉತ್ತರಿಸಿದರೆಂದು ಮಾಧವೀಯ ಮೂಲದ ಪ್ರಸಿದ್ಧ ಪ್ರತೀತಿ.(ಹೀಗೆ ಪರಕಾಯ ಪ್ರವೇಶದ ಸಂದರ್ಭದಲ್ಲಿಯೇ ಅಮರುಕ ಸಂಸ್ಕೃತದ ಸಾರ್ವಕಾಲಿಕ ಶ್ರೇಷ್ಟ ಶೃಂಗಾರ ಕೃತಿ ಅಮರುಶತಕವನ್ನು ಬರೆದನೆಂದು ಹೇಳಲಾಗುವುದಾದರೂ ಅದಕ್ಕೆ ಐತಿಹಾಸಿಕ ಆಧಾರಗಳು ಲಭ್ಯವಿಲ್ಲ). ಇದೇ ಕಥೆ ವ್ಯಾಸಾಚಲೀಯದಲ್ಲಿ ಸ್ವಲ್ಪ ಭಿನ್ನವಾಗಿದೆ. ಒಮ್ಮೆ ಶಂಕರರು ಗಂಗೆಯಲ್ಲಿ ನಿತ್ಯಾನುಷ್ಟಾನದಲ್ಲಿದ್ದಾಗ ಅವರಿಗೆ ಕಾಶ್ಮೀರದ ಶಾರದಾಪೀಠದ ಮಾಹಿತಿ ಕಿವಿಗೆ ಬಿತ್ತು. ಕಾಶ್ಮೀರದಲ್ಲಿ ಶಾರದಾದೇವಿಯ ಒಂದು ಪೀಠವಿದೆ. ಅದಿರುವ ಆಲಯಕ್ಕೆ ನಾಲ್ಕು ಬಾಗಿಲುಗಳು. ಸರ್ವಜ್ಞನಾದವನು ಮಾತ್ರ ಅದನ್ನೇರಬಹುದಾದುದರಿಂದ ಅದನ್ನು ಸರ್ವಜ್ಞ ಪೀಠವೆಂದೂ ಕರೆಯುತ್ತಾರೆ. ಈಗಾಗಲೇ ಪೂರ್ವ,ಪಶ್ಚಿಮ, ಉತ್ತರ ದೇಶದ ವಿದ್ವಾಂಸರು ಆ ಮೂರು ಬಾಗಿಲುಗಳನ್ನು ತೆರೆಸಿದ್ದಾರೂ, ದಕ್ಷಿಣದ ಬಾಗಿಲನ್ನು ದಕ್ಷಿಣದವರ್ಯಾರೂ ತೆರೆಸಲು ಸಾಧ್ಯವಾಗಿಲ್ಲ. ಇದನ್ನು ಕೇಳಿದ ಆಚಾರ್ಯರು ಆ ಬಾಗಿಲನ್ನು ತೆರೆಸಬೇಕೆಂದು ಶಾರದಾಲಯದ ದಕ್ಷಿಣ ದ್ವಾರಕ್ಕೆ ಬಂದರು. ಎದುರು ಬಂದ ಕಣಾದ, ನೈಯಾಯಿಕ, ಸಾಂಖ್ಯ, ಜೈಮಿನೀಯ, ಬೌದ್ಧ, ಜೈನ ವಿದ್ವಾಂಸರನ್ನೆಲ್ಲ ವಾದದಲ್ಲಿ ಸೋಲಿಸಿ ಸರ್ವಜ್ಞಪೀಠವನ್ನು ಹತ್ತಲು ಪ್ರಾರಂಭಿಸಿದಾಗ ಸ್ವತಃ ಶಾರದೆಯೇ ಆಚಾರ್ಯರೊಡನೆ ವಾದಕ್ಕೆ ಬಂದಳು. ಆಕೆ ಕೇಳಿದ ವಾತ್ಸಾಯನಯಂತ್ರದ ಪ್ರಶ್ನೆಗೆ ಉತ್ತರಿಸಲಾಗದೇ ಶಂಕರರು ಏಳು ದಿನಗಳ ಗಡುವು ಕೇಳಿ ಪರಕಾಯಪ್ರವೇಶಗೈದು ಎಂಟನೇ ದಿನ ತಿರುಗಿ ಬಂದು ಪ್ರಶ್ನೆಗಳಿಗೆಲ್ಲ ಉತ್ತರ ನೀಡಿದರಂತೆ. ಸ್ತ್ರೀಸಂಗವನ್ನು ಮಾಡಿ ಕಲಾರಾಸ್ಯವನ್ನು ಅರಿತುಕೊಂಡೆಯಾದ್ದರಿಂದ ನೀನು ಪರಿಶುದ್ಧನೇ ಎಂದು ಶಾರದೆ ತಿರುಗಿ ಪ್ರಶ್ನಿಸಿದಳಂತೆ. ಆಗ ಶಂಕರರು ಅನ್ಯದೇಹದಿಂದುಂಟಾದ ಕರ್ಮದಿಂದ ದೇಹಾಂತರಕ್ಕೆ ಪಾಪಲೇಪವಿಲ್ಲವೆಂದು ಹೇಳಿ ಆಕೆಯನ್ನು ನಿರುತ್ತರಳನ್ನಾಗಿಸಿ ಸರ್ವಜ್ಞಪೀಠವನ್ನು ಏರಿದರು. ಈ ಸಂಭಾಷಣೆ ಮಾಧವೀಯದಲ್ಲಿ ಹಾಗೂ ಸಾರ್ಥದಲ್ಲಿ ಉಭಯಭಾರತಿಯೊಡಗಿನ ವಾದದಲ್ಲಿ ಮೂಡಿಬಂದಿದೆ. ಕರ್ಮ ಫಲವು ಜನ್ಮಾಂತರದಲ್ಲಿಯೂ ಲೋಕಾಂತರದಲ್ಲಿಯೂ ಆಗುವುದೆಂದು ಶಾಸ್ತ್ರಾಧಾರವಿರುವಾಗ ಒಂದೇ ಜನ್ಮದಲ್ಲಿ ಒಂದು ದೇಹದಲ್ಲಿ ಮಾಡಿದ ಕರ್ಮವು ಇನ್ನೊಂದು ದೇಹದಲ್ಲಿರುವಾಗ ಅಂಟುವುದಿಲ್ಲವೆಂದು ಆಚಾರ್ಯರು ವಾದಿಸಿದರೆಂದು ಹೇಳುವುದು ಮಾತ್ರ ವಿಚಿತ್ರವಾಗಿದೆ. ಜೊತೆಗೆ ಸರ್ವಜ್ಞಪೀಠದ ಮೂರು ದಿಗ್ಭಾಗಗಳ ಬಾಗಿಲು ತೆರೆಯಿಸಲು ಕಾಶ್ಮೀರದ  ಪೂರ್ವೋತ್ತರ ಪಶ್ಚಿಮಗಳಲ್ಲಿ ಎಷ್ಟರ ಮಟ್ಟಿಗೆ ವೈದಿಕಮತ ವ್ಯಾಪಿಸಿತ್ತು? ವೈದಿಕ ಧರ್ಮದ ಮಹಾನ್ ಆಚಾರ್ಯರು, ವಿದ್ವಾಂಸರೆಲ್ಲ ಜನ್ಮತಳೆದಿದ್ದು ತೆರೆಯದೇ ಉಳಿದ ದಕ್ಷಿಣ ಭಾಗದಲ್ಲೇ ಅಲ್ಲವೇ! ಹಾಗೆಂದು ಈ ಕಥೆ ಪೂರ್ತಿ ಅತಾರ್ಕಿಕವಲ್ಲ. ಕಾಶ್ಮೀರದ ಶಾರದಾಮಂದಿರ ಬರಿಯ ಕವಿಕಲ್ಪನೆಯೂ ಅಲ್ಲ. ಶ್ರೀನಗರದಿಂದ ೧೩೦ ಕಿ.ಮೀ ದೂರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್‌ಬಾದ್‌ ಪ್ರದೇಶದಲ್ಲಿ LOCಯಿಂದ ಕೆಲವೇ ಕಿಲೋಮೀಟರ್‌ಗಳಷ್ಟು ಸಮೀಪದ ಕಿಷನ್‌ಗಂಗಾ ಮೇಲ್ಭಾಗದ ನೀಲಂಕೊಲ್ಲಿ ಎಂಬಲ್ಲಿ ಶಾರದಿ ಎಂಬ ಗ್ರಾಮವಿದೆ. ಇದು ಸರಸ್ವತಿ ಅಥವಾ ಕಲ್ನೋತ್ರಿ ಹಾಗೂ ಮಧುಮತಿ ನದಿಗಳ ಸಂಗಮಸ್ಥಾನ. ಲೋಲಬ್‌ವ್ಯಾಲಿಯ ಉತ್ತರ ಮತ್ತು ಉಲಾರ್ ಸರೋವರದ ವಾಯುವ್ಯಕ್ಕೆ ಈ ಗ್ರಾಮವಿದೆ. ಝೀಲಂ ಅನ್ನು ಸೇರುವ ಬಳಿ ಕಿಷನ್‌ಗಂಗಾ ನದಿಯನ್ನು ದಾಟಿ ಹೋದರೆ ಈ ಸ್ಥಳ ಸಿಗುತ್ತದೆ. ೧೨ನೇ ಶತಮಾದಲ್ಲಿ ಕಲ್ಹಣ ಸರ್ಹಸಿಲ ಕೋಟೆಯ ವಿವರಣೆ ನೀಡುವಾಗ ಸಮೀಪದ ಶಾರದಾ ಮಂದಿರವನ್ನು ಕವಿಗಳು ಹಾಡಿಹೊಗಳುವ ಪುಣ್ಯಸ್ಥಾನವೆಂದು ಬಣ್ಣಿಸುತ್ತಾನೆ. ಮಾತ್ರವಲ್ಲ ರಾಜತರಂಗಿಣಿಯ ಪ್ರಕಾರ ಗೌಡ ದೇಶದ ರಾಜ ಲಲಿತಾದಿತ್ಯ ಬಂಗಾಳದಿಂದ ಕಾಶ್ಮೀರಕ್ಕೆ ಬಂದು ಈ ಮಂದಿರವನ್ನು ಸಂದರ್ಶಿಸಿದ್ದನಂತೆ. ಬಿಲ್ಹಣನ ವಿಕ್ರಮಾಂಕದೇವಚರಿತದಲ್ಲಿ ಶಾರದಾ ಮಂದಿರ ಮತ್ತು ಶಾರದಾ ತೀರ್ಥಗಳ ಪ್ರಸ್ತಾಪವಿದೆ. ಅವರಿಗಿಂತ ಹಿಂದಿನ ಅಲ್ಬೆರುನಿ ಲಢಾಕ್ ಮತ್ತು ಗಿಲ್ಗಿಟ್‌ನ ನಡುಮಧ್ಯದಲ್ಲಿರುವ ಶಾರದಾಸ್ಥಾನ ಹಿಂದೂಗಳಿಗೆ ಸೋಮನಾಥದಷ್ಟೇ ಪವಿತ್ರಸ್ಥಳವೆಂದು ಹೊಗಳಿದ್ದಾನೆ. ೧೧ನೇ ಶತಮಾನದಲ್ಲಿ ಗುಜರಾತಿನ ಜಯಸಿಂಗನ ಆಸ್ಥಾನದಲ್ಲಿದ್ದ ಹೆಸರಾಂತ ವಯ್ಯಾಕರಣಿ ಹೇಮಚಂದ್ರಸೂರಿಯು ’ಸಿದ್ಧಹೇಮಖಂಡ’ವೆಂಬ ಸುಪ್ರಸಿದ್ಧ ವ್ಯಾಕರಣ ಗ್ರಂಥವೊಂದನ್ನು ಬರೆಯಲುದ್ದೇಶಿಸಿದಾಗ ಅದರ ನೆರವಿಗೆ ಜಯಸಿಂಗ ಶಾರದಾಮಂದಿರದ ಗ್ರಂಥಾಲಯದಿಂದ ಭಾರತದ ಎಂಟು ಹೆಸರಾಂತ ವ್ಯಾಕರಣಶಾಸ್ತ್ರದ ಉದ್ಗ್ರಂಥಗಳನ್ನು ತರಿಸಿಕೊಟ್ಟಿದ್ದನಂತೆ. ಅಕ್ಬರನ ಆಸ್ಥಾನ ಕವಿ ಅಬುಲ್ ಫಜಲ್ ತನ್ನ ಐನ್-ಎ-ಅಕ್ಬರಿಯಲ್ಲಿ ಹೀಗೆ ದಾಖಲಿಸುತ್ತಾನೆ. ’ಆಯಾ ಹೋಂನಿಂದ ಎರಡು ದಿನಗಳಷ್ಟು ಕಾಲ್ನಡಿಗೆಯಲ್ಲಿ ಕ್ರಮಿಸಿದ ಮೇಲೆ ದುರ್ದೇಶ ಪ್ರದೇಶದಲ್ಲಿ ಹರಿಯುವ ಮಧುಮತಿ ಎಂಬ  ನದಿ ಸಿಗುತ್ತದೆ. ಈ ನದಿಯ ದಡದ ಮೇಲೆ ಶಾರದೆಯ ಒಂದು ವಿಶ್ವವಿಖ್ಯಾತ ಮಂದಿರವಿದೆ. ಪ್ರತಿ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಇಲ್ಲಿ ಜರುಗುವ ಅದ್ಭುತ ಪವಾಡಗಳನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಸಾವಿರಾರು ಜನ ಇಲ್ಲಿ ಬಂದು ಸೇರುತ್ತಾರೆ’. ವಸಿಷ್ಟನ ಮಗ ಶಾಂಡಿಲ್ಯ ಬ್ರಾಹ್ಮಣರಿಂದ ಬಹಿಷ್ಕೃತನಾಗಲು ಕಾಶ್ಮೀರಕ್ಕೆ ಬಂದು ಇದೇ ಸ್ಥಳದಲ್ಲಿ ಶಾರದೆಯನ್ನು ತಪಸ್ಸಿನ ಮೂಲಕ ಒಲಿಸಿಕೊಂಡನಂತೆ. ಈತ ರಚಿಸಿದ ಶಾರದಾ ಮಹಾತ್ಮ್ಯಮ್‌ನಲ್ಲಿ ಶಾರದಾಪೀಠ ವಿಸ್ತೃತ ಮಾಹಿತಿಯಿದೆ. ಈಗಲೂ ಕಾಶ್ಮೀರಿ ಪಂಡಿತರಲ್ಲಿ ಶಾಂಡಿಲ್ಯ ಗೋತ್ರದವರೇ ಅಧಿಕ. ಕಾಶ್ಮೀರಿ ಮತ್ತು ಪಂಜಾಬಿನ ಗುರುಮುಖಿ ಲಿಪಿಗಳ ತಾಯಿಯಾದ ಶಾರದಾ ಲಿಪಿ ಹುಟ್ಟಿದ್ದು ಇಲ್ಲಿಂದಲೇ. ಹದಿನಾಲ್ಕು-ಹದಿನೈದನೇ ಶತಮಾನದಲ್ಲಿದ್ದ ಕಾಶ್ಮೀರದ ಸುಲ್ತಾನ ಜೈ-ಉಲ್-ಅಬಿದ್ದೀನ್ ಈ ಶಾರದೆಯ ಕಟ್ಟಾ ಭಕ್ತನಾಗಿದ್ದನಂತೆ. ಮಾತ್ರವಲ್ಲ ಪ್ರತಿವರ್ಷ ಕಾಲ್ನಡಿಗೆಯಲ್ಲಿ ಶಾರದಾ ಮಂದಿರಕ್ಕೆ ತಪ್ಪದೇ ಭೇಟಿಕೊಡುತ್ತಿದ್ದ. ಲಕ್ಷಾಂತರ ಯಾತ್ರಿಕರು ಸಹಸ್ರಾರು ವರ್ಷಗಳಿಂದ ಭಾರತ ಮತ್ತು ಬೇರೆ ಬೇರೆ ದೇಶಗಳಿಂದ ಇಲ್ಲಿಗೆ ಬಂದು ಹೋದ ದಾಖಲೆಗಳಿವೆ. ಶತಮಾನಗಳ ಕಾಲ ವೈದಿಕ ಸಂಸ್ಕೃತಿಯ ಅತ್ಯುಚ್ಚ ಕೇಂದ್ರವಾಗಿ ಬೆಳೆದ ಶಾರದಾ ಪೀಠಕ್ಕೆ ಮೊದಲ ಹೊಡೆತ ಬಿದ್ದಿದ್ದು ಹದಿನೈದನೇ ಶತಮಾನದಲ್ಲಿ ಕಾಶ್ಮೀರದ ಮೇಲಾದ ಅಫ್ಘನ್ನರ ದಾಳಿಯಿಂದ. ಸತತ ಮೂರು ಶತಮಾನ ಇಸ್ಲಾಮಿನ ದಾಳಿಗೆ ತತ್ತರಿಸಿದ ಇದು ಪುನಃ ವೈಭವದಿಂದ ತಲೆಯೆತ್ತಿದ್ದು ೧೮೪೬ರಲ್ಲಿ ಪಂಜಾಬಿನ ಮಹಾರಾಜ ಗುಲಾಬ್ ಸಿಂಗ್‌ನ ಕಾಲದಲ್ಲಿ. ಆದರೇನು ಫಲ? ೧೯೪೭ರಲ್ಲಿ ಈ ಪ್ರದೇಶ ಪಾಕಿಸ್ತಾನದ ವಶವಾಯ್ತು. ಪಾಕಿನ ಹಿಂದೂಗಳ ಪಾಲಿಗೆ ಪರಮ ಶ್ರದ್ಧಾಕೇಂದ್ರವಾಗಿಯೇ ಕೆಲಕಾಲ ಇದು ಮುಂದುವರೆಯಿತಾದರೂ ಇತ್ತೀಚೆಗೆ ಈ ಸ್ಥಳ ಹೆಚ್ಚುಕಡಿಮೆ ಹೊರಜಗತ್ತಿಗೆ ಮುಚ್ಚಿದ ಸ್ಥಿತಿಯಲ್ಲಿಯೇ ಇದೆ. ಮುಂದೆ ಅಕ್ಟೋಬರ್ ೨೦೦೫ರಲ್ಲಿ ನಡೆದ ಭೀಕರ ಭೂಕಂಪದಲ್ಲಿ ಈ ಮಂದಿರ ಸಂಪೂರ್ಣವಾಗಿ ಭಗ್ನಗೊಂಡಿತಂತೆ. ಭಾರತದ ಅಜ್ಮೇರ್ ದರ್ಗಾಕ್ಕೆ ಬರಲು ಪಾಕಿಸ್ತಾನಿಯರಿಗೂ, ಲಹೋರಿನ ನಾನಕಾನಾ ಸಾಹೇಬ್ ಗುರುದ್ವಾರಕ್ಕೆ ಹೋಗಲು ಭಾರತೀಯ ಸಿಖ್ಖರಿಗೂ ಉಭಯ ದೇಶಗಳು ಅವಕಾಶ ಕಲ್ಪಿಸಿದಂತೆ ಕಾಶ್ಮೀರದ ಹಿಂದೂಗಳಿಗೆ ಇಲ್ಲಿ ಭೇಟಿನೀಡಲು ಅವಕಾಶ ಮಾಡಿಕೊಡಬೇಕೆಂಬ ಕಳೆದ ಎಪ್ಪತ್ತು ಚಿಲ್ಲರೆ ವರ್ಷಗಳ ಕೂಗು ಇನ್ನೂ ನಮ್ಮ ಸರ್ಕಾರಗಳ ಕಿವಿ ತಲುಪಿಲ್ಲ. ಪಾಕಿಸ್ತಾನ ಸರ್ಕಾರ ಇಲ್ಲಿಗೆ ಭೇಟಿ ಕೊಡಲು ಭಕ್ತಾದಿಗಳನ್ನು ಪದೇ ಪದೇ ನಿಷೇಧಿಸುತ್ತ ಬಂದಿರುವುದಕ್ಕೂ ಒಂದು ಕಾರಣವಿದೆ. ಝೀಲಂ ವ್ಯಾಲಿ ಕಾಶ್ಮೀರದ ಅತಿಸೂಕ್ಷ್ಮ ಪ್ರದೇಶಗಳಲ್ಲೊಂದು. ಜೊತೆಗೆ ಭಾರತದ ಕುಪ್ವಾರಾ ಪ್ರದೇಶಕ್ಕೆ ಪಾಕಿಸ್ತಾನಿ ಭಯೋತ್ಪಾದಕರು ಒಳನುಗ್ಗುವುದು ಇದೇ ಕಡೆಯಿಂದ ಎಂಬ ಕುಖ್ಯಾತಿಯೂ ಇದೆ. ಆಯಕಟ್ಟಿನ ಜಾಗವೊಂದರ ಒಳಗೆ ಶತ್ರು ದೇಶದವರನ್ನು ಬಿಟ್ಟುಕೊಳ್ಳವಷ್ಟು ಉದಾರ ಮನಸ್ಸು ಪಾಕಿಸ್ತಾನಕ್ಕೂ ಇದ್ದಂತಿಲ್ಲ. ಇಷ್ಟಾದರೂ ಇತ್ತೀಚೆಗೆ ಮುಜಫರಾಬಾದ್ ವಿಶ್ವವಿದ್ಯಾಲಯದ ಕುಕ್ಷಾನಾ ಖಾನ್‌ರಂಥ ಕೆಲ ಸಂಶೋಧಕರ ನೆರವಿನಿಂದ ಅಲ್ಪಸ್ವಲ್ಪ ಪ್ರಮಾಣದಲ್ಲಿ ಶಾರದಾ ಸಂಸ್ಕೃತಿಯನ್ನು ಹರಡುವ ಕಾರ್ಯ ಶುರುವಾಗಿದೆ. ಕಟ್ಟಡಗಳನ್ನು ಎಷ್ಟೇ ಮರುನಿರ್ಮಿಸಿದರೂ ಅದು ಶ್ರದ್ಧಾಳುಗಳ ಶ್ರದ್ಧೆಗೆ. ಭಾವನೆಗಳಿಗೆ ಸರಿಸಾಟಿಯಲ್ಲವೇ ಅಲ್ಲ. ವರ್ಷಕ್ಕೆ ಕೆಲವೇ ಕೆಲ ಕಾಶ್ಮೀರಿ ಹಿಂದೂಗಳಿಗಾದರೂ ಶಾರದಾ ಪೀಠದ ದರ್ಶನಕ್ಕೆ ಪಾಕಿಸ್ತಾನ ಅವಕಾಶ ಕಲ್ಪಿಸಿದರೆ, ಭಾರತ ಸರ್ಕಾರ ಆ ದಿಶೆಯಲ್ಲಿ ಪ್ರಯತ್ನಿಸಿದರೆ ಅದಕ್ಕಿಂತ ದೊಡ್ಡ ಖುಶಿಯ ಮಾತೇನಿದೆ ಹೇಳಿ?
       ಹಾಗೆಂದು ಶಂಕರವಿಜಯಕಾರರ ಸರ್ವಜ್ಞಪೀಠದೆಡೆಗಿನ ಗೊಂದಲ ಪೂರ್ತಿ ಬಗೆಹರಿದಿಲ್ಲ. ಚಿದ್ವಿಲಾಸೀಯದಲ್ಲಿ, ಪ್ರಾಚೀನಶಂಕರ ವಿಜಯದಲ್ಲಿ ಸರ್ವಜ್ಞಪೀಠವಿರುವುದು ಕಾಂಚಿಯಲ್ಲಿ ಎನ್ನಲಾಗಿದೆ. ಶೃಂಗೇರಿ ಸಂಪ್ರದಾಯದ ಆತ್ಮಬೋಧರ ಗುರುರತ್ನಮಾಲಿಕೆಯೂ ಸರ್ವಜ್ಞಪೀಠವಿರುವುದು ಕಂಚಿ ಎಂದೇ ಹೇಳುತ್ತದೆ. ಅಲ್ಲಿಗೆ ಶಂಕರವಿಜಯಕಾರರಲ್ಲೇ ಕಾಶ್ಮೀರಸರ್ವಜ್ಞಪೀಠವಾದಿಗಳು ಹಾಗೂ ಕಾಂಚೀಸರ್ವಜ್ಞಪೀಠವಾದಿಗಳು ಎಂಬ ಎರಡು ಪಂಗಡಗಳಿವೆ ಎಂದಾಯ್ತು. ಕಾಶ್ಮೀರವು ಶಾರದಾಸ್ಥಾನವೆಂಬ ಪ್ರಸಿದ್ಧಿಯ ಮೇಲೆ ಮೊದಲನೇಯವರೂ, ಸರ್ವಜ್ಞಾತ್ಮರು ಕಂಚಿಯ ಮೊದಲನೇ ಪೀಠಾಧಿಪತಿಗಳಾಗಿದ್ದರೆಂಬ ಆಧಾರದಲ್ಲಿ ಎರಡನೇಯವರೂ ಸರ್ವಜ್ಞಪೀಠವನ್ನು ತಮ್ಮತಮ್ಮಲ್ಲಿ ಕಲ್ಪಿಸಿಕೊಂಡಿರಬಹುದೇ!!!

ಕೊನೆಹನಿ:
ಆಚಾರ್ಯರು ಗೋಕರ್ಣದಿಂದ ಕೊಲ್ಲೂರಿಗೆ ತೆರಳುತ್ತಿದ್ದಾಗ ಶ್ರೀವಲ್ಲಿ ಎಂಬ ಅಗ್ರಹಾರಕ್ಕೆ ಬಂದರು. ಅಲ್ಲಿ ಎರಡು ಸಾವಿರ ಅಗ್ನಿಹೋತ್ರಿ ಬ್ರಾಹ್ಮಣರಿದ್ದರು. ಅವರಲ್ಲಿ ಪ್ರಭಾಕರನೆಂಬವನೊಬ್ಬ. ಇರುವ ಒಬ್ಬನೇ ಮಗ ಹುಟ್ಟಿದಾಗಿನಿಂದ ಮೂಕನಾಗಿದ್ದರಿಂದ ತಂದೆತಾಯಂದಿರು ಚಿಂತಿತರಾಗಿದ್ದರು. ಶಂಕರರಲ್ಲಿ ಕರೆತಂದು ಮಗನ ಸ್ಥಿತಿಯನ್ನು ವಿವರಿಸಿದರು. ಶಂಕರರು ಕರುಣೆಯಿಂದ ’ಯಾರಪ್ಪಾ ನೀನು? ಏಕೆ ಮಾತಾಡದೇ ಜಡನಂತಿರುವೆ?’ ಎಂದು ಕೇಳಿದರು. ಕೂಡಲೇ ಬಾಲಕ
ನಿಮಿತ್ತಂ ಮನಶ್ಚಕ್ಷುರಾದಿಪ್ರವೃತ್ತೌ
ನಿರಸ್ತಾಖಿಲೋಪಾಧಿರಾಕಾಶಕಲ್ಪಃ |
ರವಿರ್ಲೋಕಚೇಷ್ಟಾನಿಮಿತ್ತಂ ಯಥಾ ಯಃ
ಸ ನಿತ್ಯೋಪಲಬ್ಧಿ ಸ್ವರೂಪೋಹಮಾತ್ಮಾ ||
- ’ಸೂರ್ಯನು ಲೋಕದ ವ್ಯವಹಾರಕ್ಕೆ ನಿಮಿತ್ತನಾಗಿರುವಂತೆ ಯಾವ ಉಪಾಧಿಯೂ ಇಲ್ಲದ ಯಾವನು ಮನಸ್ಚಕ್ಷೆರೇತ್ಯಾದಿಗಳ ಪ್ರವೃತ್ತಿಗೆ ನಿಮಿತ್ತನಾಗಿರುವನೋ ಆ ನಿತ್ಯಸ್ವರೂಪನಾದ ಆತ್ಮನೇ ನಾನು’ ಎಂದು ನುಡಿದನಂತೆ. ಪರತತ್ತ್ವವನ್ನು ಅಂಗೈನ ನೆಲ್ಲಿಕಾಯಿಯಂತೆ ಹೇಳಿದ ಬಾಲಕನಿಗೆ ಆಚಾರ್ಯರು ಹಸ್ತಾಮಲಕನೆಂದು(ಹಸ್ತ- ಅಂಗೈ, ಆಮಲಕ - ನೆಲ್ಲಿ) ನಾಮಕರಣ ಮಾಡಿ ಶಿಷ್ಯನನ್ನಾಗಿ ಸ್ವೀಕರಿಸಿದರು. ’ನಿತ್ಯೋಪಲಬ್ಧಿ ಸ್ವರೂಪೋಹಮಾತ್ಮಾ’ ಎಂಬ ಪಲ್ಲವಿಯುಳ್ಳ ಹನ್ನೆರಡು ಶ್ಲೋಕಗಳು ’ಹಸ್ತಾಮಲಕೀಯ’ ಪ್ರಕರಣವೆಂದು ಪ್ರಸಿದ್ಧವಾದವು. ’ಅಗ್ರಹಾರಕಂ ಶ್ರೀವಲಿಸಂಜ್ಞಮ್’ ಎಂದು ಮಾಧವೀಯದಲ್ಲೂ, ವ್ಯಾಸಾಚಲೀಯದಲ್ಲೂ ಈ ಘಟನೆಯ ಉಲ್ಲೇಖವಿದೆ. ಶ್ರೀವಲಿ ಅಗ್ರಹಾರವೆಂದು
ಧನ್ಯೋಸ್ಮಿ ಶ್ರೀಶಂಕರಭಗವತ್ಪಾದಪ್ರಭೋ

ಸೋಮವಾರ, ಜನವರಿ 4, 2016

ವೇದ ವಾಙ್ಮಯ


ನಮಃ ಸಭಾಭ್ಯಃ ಸಭಾಪತಿಭ್ಯಶ್ಚ|
      ನಾನು ಕೈಗೆತ್ತಿಕೊಂಡಿರುವುದು ಅಗಾಧವಾದ ವೇದರಾಶಿಯ ವಿಶ್ಲೇಷಣೆಯೆಂದು ಭಯವಾಗುತ್ತಿದ್ದರೂ ಸನಾತನ ಪರಂಪರೆಯ ಉಳಿವಿಗೆ ನನ್ನದೊಂದು ಅಳಿಲು ಸೇವೆ ಎಂದು ತಿಳಿದಿ ದ್ದೇನೆ. ಅಷ್ಟಕ್ಕೂ ನಾನೇನೂ ವೇದದ ಸಕಲ ವಿಭಾಗಗಳ ಅವಲೋಕನ ಮಾಡುತ್ತಿಲ್ಲ, ಅದು ಸಾಧ್ಯವೂ ಆಗಲಿಕ್ಕಿಲ್ಲ. ಆದರೆ ಈ ನಮ್ಮ ವೇದ ವಾಙ್ಮಯದ ಕೆಲವೊಂದಿಷ್ಟು ವಿಚಾ ರಗಳನ್ನು ನನಗೆ ತಿಳಿದ ಮಟ್ಟಿಗೆ ಹಿರಿಯ ವಿದ್ವಾಂಸರುಗಳ ಅಭಿಪ್ರಾಯವನ್ನೂ ಸೇರಿಸಿ ತಮ್ಮ ಮುಂದಿಡಲು ಉಪಕ್ರಮಿ ಸುತ್ತೇನೆ. ಮೊದಲಾಗಿ ನನಗೆ ಈ ವೇದದಲ್ಲಿ ಅನುರಕ್ತಿಯುಂಟಾಗಲು ಕಾರಣೀಭೂತರಾದ ನನ್ನೆಲ್ಲ ಹಿರಿಯ ಗುರುಗಳಿಗೆ ಶಿರಸಾ ಪ್ರಣಾಮಗಳನ್ನು ಗೈಯ್ಯುತ್ತೇನೆ. ಈ ವೇದ ವಿಚಾರದಲ್ಲಿ ಇದಮಿತ್ಥಂ ಎಂದು ಉಸುರಬಲ್ಲ ಸಾಮರ್ಥ್ಯವಿದ್ದ ನನ್ನ ಆತ್ಯಂತಿಕ ಗುರು ಶ್ರೀ ಶೇಷಾಚಲ ಶರ್ಮರು. ಅವರು ಈ ವಿಚಾರದಲ್ಲಿ ನನ್ನೊಳಗೆ ಅಚ್ಚೊತ್ತಿದ್ದನ್ನು ಇಲ್ಲಿ ಅರುಹುವ ಪ್ರಯತ್ನ ಮಾಡುತ್ತೇನೆ ಹಾಗಾಗಿ ಅವರಿಗೆ ನನ್ನ ಗೌರವ ಪೂರ್ವಕ ನಮನಗಳು. ವೇದವೆಂದರೆ ಕೇವಲ ಹಿಂದಿನ ಮಂತ್ರಗಳಷ್ಟೇ ಅಲ್ಲ. ತದನಂತರದ ಕಾಲಘಟ್ಟದಲ್ಲಿ ಜೀವನ ಧರ್ಮವನ್ನು ಬೋಧಿಸಿದ ಎಲ್ಲ ಸಾಹಿತ್ಯಗಳೂ ವೇದವೆಂದೇ ಪರಿಗಣಿಸಲ್ಪಡಬೇಕು ಎಂಬುದು ನನ್ನ ಅಂಬೋಣ, ಆಧುನಿಕವಾದ ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಕಂಡುಕೊಂಡ ಸತ್ಯಗಳ ಸಾಹಿತ್ಯವೂ ವೇದಗಳೇ ಆಗಿವೆ ಎಂಬುದು ನನ್ನ ಅಭಿಮತ. ವೇದ ಮಂತ್ರಗಳನ್ನು ಕೇವಲ ಮಡಿಗಂಟಿನೊಳಗಿಟ್ಟು ಅದನ್ನು ಪುರೋಹಿತರುಗಳ ಸ್ವತ್ತನ್ನಾಗಿಸಿ ಮಾನವ ಜೀವನ ಧರ್ಮ ದಿಂದ ದೂರಾಗಿಸಿರುವುದು ನಮ್ಮ ಮೌಢ್ಯ ಅಷ್ಟೇ. ಅದಲ್ಲದೇ ಸಕಲ ಜೀವರಾಶಿಗಳ ಒಳಿತನ್ನೇ ಬಯಸಿದ್ದ ವೇದ ರಾಶಿ ಯನ್ನು, ಅದರೊಳಗಿನ ಜೀವನಾಂಶಗಳನ್ನು ಪ್ರಸ್ತುತ ಕಾಲಕ್ಕೆ ಬೇಕಾದ ಅರ್ಥದೊಂದಿಗೆ ಸಮ್ಮಿಳಿತಮಾಡಲಾಗದೇ ಸೋತಿದ್ದು ನಮ್ಮ ಆಲಸ್ಯ. ಅಲ್ಲಿನ ವಿಜ್ಞಾನ, ಅಲ್ಲಿನ ಗಣಿತ, ಅದಲ್ಲದೇ ಇನ್ನೂ ಅನೇಕ ಮೌಲೀಕವಾದ ವಿಚಾರಗಳು ಇಂದು ಕೇವಲ ಪುರೋಹಿತರು ಹೇಳುವ ಮಂತ್ರಗಳು ಎಂಬ ಕಾರಣಕ್ಕೆ ಅವಗಣನೆಗೆ ಗುರಿಯಾಗಿ ಇದೇ ವೇದಾದಿಗಳ ಸೂಕ್ಷ್ಮಾಧ್ಯಯನದಿಂದ ಪಾಶ್ಚಿಮಾತ್ಯರು ಮುಂದುವರೆದು ಕಂಡುಕೊಂಡ ಸತ್ಯಗಳನ್ನೇ ಹೊಸ ಸಂಶೋಧನೆಯೆಂದು ಬಿಂಬಿಸಿ ಲಾಭಪಡೆದುಕೊಳ್ಳುತ್ತಿರುವುದು ಗುಪ್ತಸತ್ಯವಾಗಿದೆ. ಈ ಹಿನ್ನೆಲೆಯಲ್ಲಿ ವೇದದೊಳಗಣ ಹೂರಣಗಳನ್ನು ಸರಳ ಭಾಷೆಯಲ್ಲಿ ನನ್ನ ಅರಿವಿನ ಪರಿಧಿಯಲ್ಲಿ ವಿಸ್ತರಿಸ ಹೊರಡುವ ಉತ್ಸಾಹ ತೋರಿದೆ. ವಿಚಾರಗಳಲ್ಲಿ ತಮ್ಮ ಸಲಹೆ ಸೂಚನೆಗಳಿಗೆ ಅವಕಾಶವನ್ನೀಯುತ್ತಾ ಮುಂಬರಿಯುತ್ತೇನೆ ತಮ್ಮ ಆಶೀರ್ವಾದವಿರಲಿ.
      ವೇದವಾಙ್ಮಯವನ್ನು ಋಕ್, ಸಾಮ ಮತ್ತು ಯಜುಸ್ ಎಂದು ಮೂರು ಬಗೆಯಾಗಿಯೂ, ಅಥರ್ವಣವನ್ನೂ ಸೇರಿಸಿ ನಾಲ್ಕು ಬಗೆಯಾಗಿಯೂ ವಿಂಗಡಿಸಿದ್ದು ಕಂಡುಬರುತ್ತದೆ.   ‘ಋಕ್’ ಎಂದರೆ ಪ್ರಾರ್ಥನಾರೂಪವಾದ ಛಂದೋಬದ್ಧ ರಚನೆಗಳು. ‘ಮಂತ್ರ’ ಎಂಬುದು ಇದರ ನಾಮಾಂತರ. ‘ಯಜುಸ್’ ಎಂದರೆ ಯಜ್ಞ ವಿಧಾನಕ್ಕೆ ಸಾಧರೂಪವಾದುದು, ಇದು ಕೇವಲ ಗದ್ಯಾತ್ಮಕವಾದುದೂ ಆಗಿದೆ. ಇವೆರಡನ್ನೂ ಹೊರತುಪಡಿಸಿದ ಗೀತಾ( ಸಾಮ) ರೂಪವಾದ ಮಂತ್ರಭಾಗವೇ ಸಾಮ. ಈ ಸಾಮದ ಪ್ರಯೋಜನಗಳೂ ವಿಶಿಷ್ಟ, ‘ವಿಘ್ನಶಾಂತಿ’, ‘ದೇವತಾ ತುಷ್ಟಿ’ ಇವೇ ಸಾಮದ ಉದ್ದೇಶಗಳಾಗಿವೆ.  ಇವು ಮೂರರಲ್ಲೂ ಸೇರದೇ ಕೇವಲ ಮಾರಣ, ಮೋಹನ, ಉಚ್ಛಾಟನಾದಿ ವ್ಯವಹಾರಗಳಿಗೆ ಉಪಯುಕ್ತವಾದ ಮಂತ್ರಭಾಗಗಳನ್ನೊಳಗೊಂಡ ವೇದಭಾಗವೇ ‘ಅಥರ್ವಣ’. ಈ ಅಥರ್ವಣವನ್ನು ವೇದವೆಂದು ಪರಿಗಣಿಸಿದ್ದು ತೀರಾ ಇತ್ತೀಚೆಗೆ. ಏಕೆಂದರೆ ವೇದಗಳನ್ನು ‘ತ್ರಯೀ’ ಎಂದೇ ಕರೆಯಲಾಗಿತ್ತು. ಅಂದರೆ ಋಕ್-ಯಜುಸ್- ಸಾಮ ಇವು ಮಾತ್ರ ವೇದವೆಂದು ಪರಿಗಣಿತವಾದವುಗಳು.

     ಇಂತಹ ವೇದರಾಶಿಯನ್ನು ಮತ್ತೆ ಪುನಃ ‘ಸಂಹಿತಾ’, ‘ಬ್ರಾಹ್ಮಣ’, ‘ಆರಣ್ಯಕ’ ಹಾಗೂ ‘ಉಪನಿಷತ್’ ಎಂಬ ನಾಲ್ಕು ಪ್ರಕಾರಗಳಲ್ಲಿ ವಿಭಾಗಿಸಲಾಗಿದೆ. ಸಂಹಿತೆಗಳು ಅನೇಕ ಮಂತ್ರಗಳನ್ನು ಸೇರಿಸಿ ಹೇಳಿದ ಸಂಕಲನವಾದರೆ, ಬ್ರಾಹ್ಮಣಗಳು ಹೆಚ್ಚಾಗಿ ಗದ್ಯರೂಪದ ಸಾಹಿತ್ಯಗಳನ್ನೇ ಹೊಂದಿದ್ದಲ್ಲದೇ ಯಜ್ಞ ಸಂಬದ್ಧವಾದ ವಿಚಾರಗಳನ್ನು ಹೇಳುತ್ತವೆ. ಈ ಬ್ರಾಹ್ಮಣಗಳನ್ನೊಳಗೊಂಡ ಸಾಹಿತ್ಯವನ್ನು ‘ವಾನಪ್ರಸ್ಥಿಗಳೂ’, ‘ಸಂನ್ಯಾಸಿಗಳೂ’ ಅನುಸಂಧಾನ ಮಾಡಲು ಯೋಗ್ಯವೆನಿಸುವ ಭಾಗವೇ ‘ಆರಣ್ಯಕ’ ಹಾಗೂ ‘ಉಪನಿಷತ್’ ಗಳು.

..............................................................

ಸಂಹಿತಾ( ಸಂಹಿತೆಗಳು)
1. ಋಗ್ವೇದ ಸಂಹಿತಾಃ
       ಎಲ್ಲರಿಗೂ ತಿಳಿದಂತೆ ಇದು ಅತ್ಯಂತ ಪ್ರಾಚೀನತಮವಾದ ವೇದಭಾಗ. ಇದರಲ್ಲಿ ಉಪಲಬ್ಧಿಯಾದುದು 1,028 ಸೂಕ್ತಗಳು. ಇವನ್ನು 10 ಮಂಡಲಗಳಲ್ಲಿ ಅಳವಡಿಸಿ ಹೇಳಲಾಗಿದೆ. ಒಂದೊಂದು ಸೂಕ್ತದಲ್ಲಿಯೂ 3 ರಿಂದ 58 ಋಕ್ಕುಗಳು ಕಾಣಸಿಗುತ್ತವೆ. ಒಟ್ಟು ಋಗ್ವೇದದಲ್ಲಿ ಕಾಣಸಿಗುವ ಋಕ್ಕುಗಳ ಸಂಖ್ಯೆ 10,462. ಈ ರೀತಿಯಲ್ಲಿ ನೋಡಿದಾಗ ಸರಾಸರಿ ಒಂದು ಸೂಕ್ತಕ್ಕೆ ಹತ್ತರಿಂದ ಹನ್ನೆರಡು ಋಕ್ಕುಗಳು ಸಿಗುತ್ತವೆ. ಇದಲ್ಲದೇ ಇನ್ನೊಂದು ರೀತಿಯ ವಿಭಾಗಕ್ರಮವೂ ಇದೆ. ಅದೆಂದರೆ ಇಡೀ ಋಗ್ವೇದವನ್ನು ‘ಅಷ್ಟಕ’, ‘ಅಧ್ಯಾಯ’, ‘ವರ್ಗ’ ಗಳಲ್ಲಿ ವಿಭಾಗಿಸುವುದು. ಇದರ ಪ್ರಕಾರ ಪ್ರತೀ ವರ್ಗದಲ್ಲಿ 5 ಋಕ್ಕುಗಳು. ಅಷ್ಟಕದಲ್ಲಿ 8 ಅಧ್ಯಾಯಗಳು. ಇದನ್ನೂ ಮೀರಿ ಅಧ್ಯಯನಕ್ಕೆ ಉಪಯೋಗವಾಗುವಂತೆ ‘ಅನುವಾಕ’ ಕ್ರಮವೂ ಚಾಲ್ತಿಯಲ್ಲಿದೆ.
   ಋಗ್ವೇದದಲ್ಲಿರುವ ಸೂಕ್ತಗಳು ಹಾಗೂ ಋಕ್ಕುಗಳ ಸಂಯೋಜನೆಯಲ್ಲಿ ಒಂದು ವ್ಯವಸ್ಥಿತ ಕ್ರಮವಿದೆ. ಎರಡನೇ ಮಂಡಲದಿಂದ ಏಳನೇ ಮಂಡಲದ ವರೆಗೂ ‘ದೇವತಾ’ ದೃಷ್ಟಿಯಿಂದ ಮಾಡಿದ ಸಂಯೋಜನೆ ಕಂಡುಬರುತ್ತದೆ. ‘ಅಗ್ನಿ ದೇವತಾ ಸೂಕ್ತಗಳು’, ‘ಇಂದ್ರ ದೇವತಾ ಸೂಕ್ತಗಳು’, ‘ವರುಣ ದೇವತಾಸೂಕ್ತಗಳು’ ಇತ್ಯಾದಿ. ಮುಂದೆ ಒಂಭತ್ತನೇಯ ಮಂಡಲದಿಂದ ಛಂದಸ್ಸುಗಳ ಕ್ರಮಾನುಸಾರ ಸೂಕ್ತಗಳನ್ನು ಸಂಯೋಜಿಸಲಾಗಿದೆ. ಈ ಎರಡು ವ್ಯವಸ್ಥೆಯಲ್ಲಿ ಆಶ್ಚರ್ಯವೆಂಬಂತೆ ಸೂಕ್ತಗಳ ಕ್ರಮಾಣುಗತ ಇಳಿಕೆ ಕ್ರಮವನ್ನು ಕಾಣುತ್ತೇವೆ ( 58, 50, 42, 34, 28, 16, 10, 5, 3 ಇತ್ಯಾದಿ...!) ಸಮಾನ ಋಕ್ ಸಂಖ್ಯೆಯುಳ್ಳ ಸೂಕ್ತಗಳಾದರೆ ಆಗ ಛಂದಸ್ಸಿನ ಅಕ್ಷರ ಸಂಖ್ಯೆಯು ಇಳಿಕೆಯ ಕ್ರಮದಲ್ಲಿರುತ್ತದೆ. ಅದರಂತೆ ಮಂಡಲಗಳ ಮತ್ತು ಸೂಕ್ತ ಸಂಖ್ಯೆಯ ಸಂಯೋಜನೆಯಲ್ಲಿಯೂ ಇಳಿಕೆ ಕ್ರಮವನ್ನೇ ಅನುಸರಿಸಲಾಗಿದೆ. ಇದಲ್ಲದೇ ಇನ್ನೊಂದು ರೀತಿಯ ಸಂಯೋಜನಾ ಕ್ರಮವನ್ನೂ ಕಾಣುತ್ತೇವೆ. ಅದೇನೆಂದರೆ, ಒಂಭತ್ತನೇಯ ಮಂಡಲದ ಸೂಕ್ತಗಳೆಲ್ಲವೂ ಸೋಮ ದೇವತಾ ಮಂತ್ರಗಳನ್ನು ಒಳಗೊಂಡಿದೆ. ಎಂಟನೇ ಮಂಡಲದ ಸೂಕ್ತಗಳಲ್ಲಿ ‘ಪ್ರಗಾಥ’ ಹಾಗೂ ‘ಕಾಣ್ವ’ ವಂಶೀಯ ಸೂಕ್ತಗಳೇ ತುಂಬಿವೆ..!ಏಳನೇಯ ಮಂಡಲದ ಸೂಕ್ತಗಳು ಕ್ರಮವಾಗಿ ಗೃತ್ಸ್ನಮದ, ವಿಶ್ವಾಮಿತ್ರ, ವಾಮದೇವ, ಅತ್ರಿ, ಭರದ್ವಾಜ, ವಸಿಷ್ಠ ಈ ಋಷಿವಂಶೀಯ ಸೂಕ್ತಗಳೇ ಆಗಿವೆ...!( ವಂಶೀಯ ಎಂದರೆ ದೃಷ್ಟಾರರು) ಮೊದಲ ಮತ್ತು ಹತ್ತನೇ ಮಂಡಲದಲ್ಲಿರುವ ಸೂಕ್ತ ಸಂಖ್ಯೆ ಕೇವಲ 1.  ಇದನ್ನು ನೋಡಿದಾಗ 2ರಿಂದ 9 ಮಂಡಲಗಳ ತರುವಾಯ ಈ 1 ಮತ್ತು 10 ನೇ ಮಂಡಲಗಳನ್ನು ಸೇರಿಸಿರಲೂ ಬಹುದು ಎಂಬುದು ಕೆಲ ವಿದ್ವಾಂಸರ ಅಭಿಪ್ರಾಯ...( ಮಕ್ ಡೊನಾಲ್ಡ್) 
       ಅಧ್ಯಯನ ಕ್ರಮದಲ್ಲಿ ಪ್ರತಿಯೊಂದು ಸೂಕ್ತಕ್ಕೂ ಋಷಿ, ದೇವತೆ ಮತ್ತು ಛಂದಸ್ಸುಗಳನ್ನು ತಿಳಿಯಲೇ ಬೇಕೆಂಬ ನಿಯಮವಿದೆ( ...ನಿರುಕ್ತ). ಇದನ್ನು ‘ಕಾತ್ಯಾಯನ’ರು ತಮ್ಮ ‘ಸರ್ವಾನುಕ್ರಮಣಿ’ ಯಲ್ಲಿ ... ‘‘ಯಸ್ಯ ವಾಕ್ಯಂ ಸ ಋಷಿಃ| ಯಾ ತೇನೋಚ್ಯತೇ ಸಾ ದೇವತಾ| ಯದಕ್ಷರ ಪರಿಮಾಣಂ ತಚ್ಛಂದಃ| ಅರ್ಥೇಪ್ಸವಃ ಋಷಯಃ ದೇವತಾಃ ಛಂದೋಭಿಃ ಉಪಾಧಾವನ್" ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ. ಉದಾಹರಣೆಗೆ ಪ್ರಸಿದ್ಧವಾದ ‘ಗಾಯತ್ರೀಮಂತ್ರ’ ಕ್ಕೆ ಋಷಿ- ವಿಶ್ವಾಮಿತ್ರ, ದೇವತೆ-ಸವಿತೃ, ಛಂದಸ್ಸು- 8 ಅಕ್ಷಗಳ 3 ಪಾದಗಳುಳ್ಳ ‘ಗಾಯತ್ರೀ’
ಸಾಮಾನ್ಯವಾಗಿ ಸಂಹಿತಾ ಪಾಠವೆಂದರೆ  ಪದಗಳಿಗೆ ‘ಸಂಧಿ’ಮಾಡಿದ ರೂಪದಲ್ಲಿರುವ ಪಾಠವೇ ಆಗಿದೆ. ಒಮ್ಮೊಮ್ಮೆ ಇದರಲ್ಲಿನ ಪದವಿಭಾಗವೂ ಸುಲಭವಾಗಿರುವುದಿಲ್ಲ. ಅಲ್ಲದೇ ‘ಪ್ರಗೃಹ್ಯ’ ಗಳೂ ‘ಉ’ ಮುಂತಾದ ಅವ್ಯಯಗಳೂ ಸಂಧಿಯಲ್ಲಿ ಸುಲಭವಾಗಿ ಕಾಣುವಂತಿರುವುದಿಲ್ಲ. ಸಮಾಸಗಳಲ್ಲಿಯೂ ಭಿನ್ನ ಪಾದಗಳು ಯಾವುವು ಎಂಬುದು ಸ್ಪಷ್ಟಗೊಂಡಿರುವುದಿಲ್ಲ. ಹೀಗಿರುವಾಗ ಇವನ್ನೆಲ್ಲ ಸ್ಪಷ್ಟಗೊಳಿಸಲೋಸುಗ ‘ಶಾಕಲ್ಯ’ನು ರಚಿಸಿರುವ ಸಂಧಿ ಬಿಡಿಸಿ ಇತಿಕರಣಮಾಡಿ, ಸಮಾಸಗಳನ್ನು ಪ್ರತ್ಯೇಕಿಸಿರುವ ಪಾಠಕ್ಕೆ ‘ಪದಪಾಠ’ ಎನ್ನುತ್ತಾರೆ, ಅದನ್ನು ವಿಶೇಷವಾಗಿ ಅಧ್ಯಯನಮಾಡುತ್ತಾರೆ. ಇಲ್ಲಿ ಇನ್ನೊಂದು ಗಮನೀಯ ಅಂಶವೆಂದರೆ ಸಂಹಿತೆಯ ಸ್ವರಗಳಿಗೂ, ಪದಪಾಠದ ಸ್ವರಗಳಿಗೂ ನಿಯಮಾನುಸಾರ ಅಲ್ಲಲ್ಲಿ ವ್ಯತ್ಯಾಸಗಳನ್ನು ಕಾಣುತ್ತೇವೆ. ಆದ್ದರಿಂದ ವೇದಾಧ್ಯಯನ ಮಾಡುವಾಗ ಸಂಹಿತಾ ಪಾಠವನ್ನೂ ಪದ ಪಾಠವನ್ನೂ ಪ್ರತ್ಯೇಕವಾಗಿ ಅಧ್ಯಯನ ಮಾಡುವ ಕ್ರಮ ಬಂದಿರುತ್ತದೆ. ಅಲ್ಲದೇ ಪೂರ್ವಪದ ಉತ್ತರಪದಗಳ ಅಕ್ಷರಗಳನ್ನು ಶೃಂಖಲಾಕ್ರಮದಿಂದ ನಿಯತವಾಗಿ ಅನುವೃತ್ತಿ ಮಾಡುವ ‘ಕ್ರಮ ಪಾಠ’, ‘ಜಠಾಪಾಠ’ ಹಾಗೂ ‘ಘನಪಾಠ’ ಮುಂತಾದ ಜಟಿಲ ವ್ಯವಸ್ಥೆಗಳು ಈ ಸಂಹಿತಾ ಪಾಠಕ್ರಮದಲ್ಲಿ ಇವೆ. ಹಾಗಾಗಿಯೇ ಸಾವಿರ ಸಾವಿರ ವರ್ಷಗಳ ನಂತರದಲ್ಲೂ ವೇದಾಂಶಗಳು ಜನಮಾನಸದಿಂದ ಅಳಿಯದೇ ಉಳಿದುಕೊಂಡು ಬಂದಿರುವುದು. ಮತ್ತು ಹಾಗೆ ಉಳಿಸಿಕೊಂಡು ಬಂದ ಘನಪಾಠಿಗಳಿಗೆ ಇಂದಿಗೂ ನಾವು ನತಮಸ್ತಕವಾಗಬೇಕಿರುವುದು...! ಏಕೆಂದರೆ ವೇದ ಪಾಠಗಳು ಅವುಗಳ ನಿರ್ಣಯದಲ್ಲಿ ಹಸ್ತಪ್ರತಿಗಳಿಗಿಂತಲೂ ‘ಮುಖೋಚ್ಚಾರಣೆ’ ಯಲ್ಲಿಯೇ ಉಳಿದುಕೊಂಡಿರುವುದು. ಇಂತಹ ಒಂದು ಕ್ರಮ, ಇಂತಹ ಒಂದು ಅದ್ಭುತ ಸಾಹಿತ್ಯ ಬೇರೆ ಎಲ್ಲಿಯೂ ಕಾಣಸಿಗಲಾರದು..!

      ಋಗ್ವೇದ ಸೂಕ್ತಗಳ ವೈವಿಧ್ಯಃ-
ಈ ಸೂಕ್ತಗಳಲ್ಲಿ ಹಲ್ವು ಪ್ರಕಾರಗಳಿವೆ. ಅವುಗಳಲ್ಲಿ ಕೆಲವು ಪ್ರಮುಖವಾದವುಗಳ ವಿನ್ಯಾಸವನ್ನು ಗಮನಿಸೋಣ.
1. ದೇವತಾ ಸೂಕ್ತಗಳು :- ಭಾರತದ ಇತಿಹಾಸಕಾಲದ ಭಕ್ತಿಯ ತೋರ್ಪಡಿಕೆಯ ಸ್ವರೂಪಕ್ಕೂ ಋಷಿಗಳ ಉಪಾಸನಾ ಸ್ವರೂಪಕ್ಕೂ ಸ್ವಲ್ಪ ವೈಲಕ್ಷಣ್ಯಗಳಿವೆ. ದೇವತೆಗಳ ಬಗೆಗೆ ಋಷಿಗಳಿಗೆ ಭಯ-ಭಕ್ತಿಗಳಿಗಿಂತ ಕೊಡು-ತೆಗೆದುಕೊಳ್ಳುವ ವ್ಯವಹಾರ ಬುದ್ಧಿಯೇ ಹೆಚ್ಚಾಗಿ ಇರುವಂತೆ ತೋರುತ್ತದೆ. ‘ದೀನ ನಾನು ಸಮಸ್ತ ಲೋಕಕೆ ದಾನಿ ನೀನು’ ಎಂಬಂಥಾ ಆರ್ತ ಭಾವ ಋಗ್ವೇದದ ಸೂಕ್ತಗಳಲ್ಲಿ ಕಂಡುಬರುವುದಿಲ್ಲ. ಸಂಪತ್ತಿಗಳು ಅದರಲ್ಲೂ ಮುಖ್ಯವಾಗಿ ‘ಗೋಧನ’, ‘ವೀರಪುತ್ರಪ್ರಾಪ್ತಿ’ ಇಂತವುಗಳಿಗಾಗಿ ಸ್ತೋತ್ರ ಮಾಡುತ್ತಿದ್ದರೆಂಬುದನ್ನು ಗಮನಿಸಬಹುದಾಗಿದೆ. ಅದಕ್ಕೆ ಅವರು ಆಯ್ದುಕೊಂಡದ್ದು ಮುಖ್ಯವಾಗಿ ‘ಯಜ್ಞ’ವನ್ನು..! ಏಕೆಂದರೆ ಯಜ್ಞ ಗೈದ ಮೇಲೆ ತತ್ ಫಲವನ್ನು ದೇವತೆಗಳು ಕೊಟ್ಟೇ ತೀರಬೇಕು ಮತ್ತು ಕೊಡುತ್ತಾರೆ ಎಂಬ ವಿಶ್ವಾಸದ ಋಕ್ಕುಗಳೇ ಈ ಸ್ತೋತ್ರಗಳಲ್ಲಿ ಅಡಗಿದೆ. ಆದರೆ ಸಾಮಾನ್ಯವಾಗಿ ಸ್ತೋತ್ರಗಳಲ್ಲಿ ಈ ಭಾವ ತೋರಿದರೂ ‘ವರುಣ ಸೂಕ್ತ’ವು ಪಾಪ ಭೀರುತ್ವ ನಾಶಕವಾದ ಅಂಶಗಳ ಕಡೆಗೆ ಹೆಚ್ಚು ಒಲವು ತೋರಿದ್ದು ಕಂಡುಬರುತ್ತದೆ. ಋಷಿಗಳು ತಮ್ಮ ಪಾಪಗಳ ಕುರಿತು ಕ್ಷಮಾಯಾಚನೆ ಮಾಡುತ್ತಾರೆ...!  ಇದಕ್ಕೆ ಪ್ರತಿಯಾಗಿ ‘ವೈದಿಕ ಆರ್ಯ’  ರ ಶೌರ್ಯೋತ್ಸಾಹ ಗಳಿಗೆ ಪ್ರತೀಕವಾಗಿ ಕಾಣುವುದು ‘ಇಂದ್ರಸೂಕ್ತ’..! ಇಂದ್ರನೇ ವೈದಿಕ ಆರ್ಯರ ಯುದ್ಧ ದೇವತೆಯಂತೆ ಕಾಣುತ್ತಾನೆ. ಏಕೆಂದರೆ ಅವನ ವರ್ಣನೆಯಲ್ಲಿ ಅವನ ವಜ್ರಾಯುಧದ ವರ್ಣನೆ ಹೆಚ್ಚಾಗಿ ಕಂಡುಬರುತ್ತದೆ. ‘ವೃತ್ರಾಸುರ’ ಮುಂತಾದ ಅಸುರ..? ! ರನ್ನು ಅವನು ಸದೆಬಡಿಯುವ ವರ್ಣನೆಗಳೇ ಅತ್ಯಾಕರ್ಷಕವಾಗಿ ವರ್ಣಿಸಲ್ಪಟ್ಟಿವೆ. ಇನ್ನೊಂದು ವಿಶೇಷವೆಂದರೆ ‘ಅಗ್ನಿ’ ಇಲ್ಲಿ ಗೃಹದ ಅಧಿದೇವತೆ. ಅಲ್ಲದೇ ಅಗ್ನಿಯೇ ಮಾನವನ ಆತ್ಯಂತಿಕ ಮಿತ್ರನೆಂಬುದು ವರ್ಣಿಸಲ್ಪಟ್ಟಿದೆ. ಮನೆಯ ಮಕ್ಕಳನ್ನು ಆಶೀರ್ವದಿಸುವಂತೆ ಋಷಿಗಳು ಅಗ್ನಿಯನ್ನು ಸ್ತೋತ್ರಮಾಡುತ್ತಾರೆ.ಯಜ್ಞಪ್ರಧಾನವಾದ ಆ ಕಾಲದಲ್ಲಿ ಅಗ್ನಿಗೇ ಅಗ್ರಸ್ಥಾನ ದೊರೆತುದು ವಿಶೇಷವೇನಲ್ಲ ಎನ್ನಿಸುತ್ತದೆ.  ಹಾಗೆಯೇ ‘ಉಷಸ್’ ಸೂಕ್ತವೂ ಅತ್ಯಂತ ರೋಚಕವಾದುದು. ಋಷಿ ಸಂಕುಲದ ಸೌಂದರ್ಯೋಪಾಸನೆ ಈ ಸೂಕ್ತದಲ್ಲಿ ಅತ್ಯಂತ ವಿಶದವಾಗಿ  ತಿಳಿಸಲ್ಪಟ್ಟಿದೆ. "ಪುನಃ ಪುನರ್ಜಾಯಮಾನೀ ಪುರಾಣೀ" ಎಂಬಲ್ಲೆಲ್ಲ ನಿಚ್ಚಳವಾದ ಕಾವ್ಯಾತ್ಮಕ ಶೈಲಿ ನಮ್ಮನ್ನು ಸೌಂದರ್ಯೋಪಾಸನೆಯ ಹೊಸ ಮಜಲಿಗೆ ಕೊಂಡೊಯ್ಯುತ್ತದೆ. ಸವಿತೃ ದೇವನಿಂದ ‘ವಿಕಸಿತಪ್ರಜ್ಞೆ’ ಯನ್ನೂ ‘ರುದ್ರ’ನ ಕೋಪದಿಂದ ಮುಕ್ತಿಯನ್ನೂ ‘ಅಶ್ವಿನೀದೇವತೆ’ಗಳಿಂದ ರೋಗಬಾಧಾ ನಿವೃತ್ತಿಯನ್ನೂ, ‘ವಿಷ್ಣು’ವಿನಿಂದ ಪರಮಪದದ ಆನಂದವನ್ನೂ ಬಯಸಿ ಋಷಿಗಳು ಸ್ತೋತ್ರ ಮಾಡಿದ್ದು ಕಂಡುಬರುತ್ತದೆ. ಹೀಗೇ ಸ್ತೋತ್ರ ಮಾಡುವಾಗ ಒಂದು ಆಶ್ಚರ್ಯವೆಂಬಂತೆ ಎಲ್ಲ ದೇವತೆಗಳನ್ನೂ ಸೇರಿಸಿ ‘ವಿಶ್ವೇದೇವತೆ’ ಎಂಬ ನೂತನ ರೂಪದಲ್ಲಿಯೂ ಸ್ತೋತ್ರ ಗೈದಿರುವುದು ವಿಶೇಷ. 
2. ಆಪ್ರೀ ಸೂಕ್ತಗಳು :- ಕೇವಲ ಯಜ್ಞ ವಿಧಿಗೇ ಅನ್ವಯಗೊಳ್ಳುವಂತಹ ಸೂಕ್ತಗಳು ಪ್ರತಿಯೊಂದು ಋಗ್ವೇದ ಮಂಡಲದಲ್ಲಿಯೂ ಕಾಣಿಸಿಕೊಳ್ಳುತ್ತದೆ.ಇಂತಹ 10  ಸೂಕ್ತಗಳನ್ನು ನಾವು ಕಾಣಬಹುದು. ಇವುಗಳ ಪ್ರತಿಯೊಂದುಸೂಕ್ತದಲ್ಲಿಯೂ ಹತ್ತು ಅಥವಾ ಹನ್ನೆರಡು ಋಕ್ಕುಗಳು ಅಗ್ನಿಯ ಸ್ತೋತ್ರಕ್ಕಾಗಿ ಮೀಸಲಾಗಿವೆ. ಇದಲ್ಲದೇ ‘ತನೂನಪಾತ್’ ಇತ್ಯಾದಿ ದ್ವಾರಗಳು, ‘ದರ್ಭಾ’ ಇತ್ಯಾದಿ ದೇವತಾ ಸ್ತುತಿಗಳೂ ಕ್ರಮಾಗತವಾಗಿ ಕಂಡುಬರುತ್ತವೆ. ಇದನ್ನು ಗಮನಿಸಿದಾಗ ಒಂದೊಂದು ಋಷಿ ವಂಶೀಯರೂ ತಮ್ಮ ಪ್ರತ್ಯೇಕವಾದ ಆಪ್ರೀ ಸೂಕ್ತಗಲನ್ನು ಬಳಸುತ್ತಿದ್ದರು ಎಂದು ತೋರುತ್ತದೆ.ಹಾಗೆಯೇ ಸೋಮಪವಮಾನನ ಕುರಿತ ಒಂಭತ್ತನೇ ಮಂಡಲವೆಲ್ಲ ಯಜ್ಞೋಪಯೋಗೀ ಸೂಕ್ತಗಳಿಂದಲೇ ತುಂಬಿದೆ.
3. ಸಂಸ್ಕಾರ ಸೂಕ್ತಗಳು :- ಮರಣೋತ್ತರವಾದ ಅಪರಕ್ರಿಯೆಗಳ ಕುರಿತು ಅದು ಹೀಗೆಯೇ ನಡೆಯಬೇಕು ಎಂಬುದಕ್ಕೆ ಸಂಬಂಧಿಸಿದ ಮತ್ತು ಇನ್ನೂ ಕೆಲವು ಧಾರ್ಮಿಕ ಆಚರಣೆಗಳಿಗೆ ಉಪಯುಕ್ತವಾದ ಪಿತೃಕರ್ಮಪರ ಸೂಕ್ತಗಳು ಹತ್ತನೇ ಮಂಡಲದಲ್ಲಿ ಕಾಣಸಿಗುತ್ತವೆ. ಇವುಗಳಲ್ಲಿ ಪ್ರೇತ ಸಂಸ್ಕಾರ ವಿಚಾರಗಳು ದೇವಯಾನ - ಪಿತೃಯಾನ, ಜೀವಾತ್ಮಕ ವಿಚಾರಗಳು ತುಂಬಿವೆ.
4. ಆಧ್ಯಾತ್ಮಿಕ ಸೂಕ್ತಗಳು :- ವಿಶ್ವೋತ್ಪತ್ತಿ, ವಿಶ್ವವ್ಯಾಪಿಯಾದ ಒಬ್ಬನೇ ಪರಮಾತ್ಮ, ಮುಕ್ತಿ, ಮುಂತಾದ ಆಧ್ಯಾತ್ಮಿಕ ಅಂಶಗಳನ್ನು ವಿವರಿಸುವ ಸೂಕ್ತಗಳು ಇವನ್ನೆಲ್ಲ ವಿವರಿಸುವ ‘ಪುರುಷ ಸೂಕ್ತ’, ‘ನಾಸದೀಯ ಸೂಕ್ತ’ ಮೊದಲಾದವು ಕಂಡುಬರುತ್ತವೆ. ಇವೇ ಮುಂಬರಿದು ಉಪನಿಷತ್- ವೇದಾಂತ ಭಾಗದ ಮೂಲಸ್ರೋತಗಳಾಗಿವೆ.
5. ಆಖ್ಯಾನ ಸೂಕ್ತಗಳು :- ಮುಂದಿನ ನಮ್ಮ ಭಾರತೀಯ ಕಾವ್ಯ ಲೋಕಕ್ಕೆ ಅತ್ಯಂತ ಮೂಲಧನವೆನ್ನಿಸುವ ಆಖ್ಯಾನ ಸೂಕ್ತಗಳು ವೇದ ಸಾಹಿತ್ಯದಲ್ಲೇ ಮೇರು ಸದೃಶವಾದ ಭಾಗವಾಗಿದೆ. ಇವನ್ನು ಸಂವಾದ ಸೂಕ್ತಗಳೆಂದು ಕರೆದರೂ ತಪ್ಪೇನಿಲ್ಲ. ‘ಪುರೂರವಸ್-ಊರ್ವಶೀ, ಯಮ-ಯಮೀ, ವಿಶ್ವಾಮಿತ್ರ-ನದೀ ’ ಮುಂತಾದ ಸಂವಾದಗಳು ಆ ಕಾಲದ ಜನಜೀವನವನ್ನು ಈ ಲೋಕಕ್ಕೆ ತೆರೆದಿಡುವುದರೊಂದಿಗೆ ಮುಂದೆ ಬಂದ ವಾಲ್ಮೀಕಿಯಿಂದಾರಂಭಿಸಿ ಕಾಳಿದಾಸಾದಿಗಳವರೆಗಿನ ಸಾರಸ್ವತ ಸಾಮ್ರಾಟರುಗಳಿಗೆ ಮೂಲವಸ್ತುವನ್ನೊದಗಿಸಿದ ಕೀರ್ತಿ ಈ ಸೂಕ್ತಗಳಿಗೆ ಸಲ್ಲುತ್ತದೆ. 
6. ಮಾಂತ್ರಿಕ ಸೂಕ್ತಗಳು :- ಗರ್ಭ ರಕ್ಷಣೆ, ಆರೋಗ್ಯರಕ್ಷಣೆ, ರೋಗ ಪರಿಹಾರ, ದುಸ್ವಪ್ನನಾಶ, ಶತ್ರುನಾಶ, ವಿರೋಧೀ ಮಂತ್ರವಾದಿಗಳ ನಾಶ..!, ಮುಂತಾದ ತರಹೆವಾರಿ ವಿನಿಯೋಗಗಳಿರುವ ಸೂಕ್ತಗಳನ್ನು ಈ ಶೀರ್ಷಿಕೆಯಡಿಯಲ್ಲಿ ತರಬಹುದಾಗಿದೆ. ಪರ್ಜನ್ಯನಿಂದ ಬೇಗ ಮಳೆ ಸುರಿಯುವಂತೆ ಮಾಡುವ ಸಲುವಾಗಿ ಅನುಸರಿಸಿದ ಮಾಂತ್ರಿಕ ವಿಧಾನವು ತುಂಬ ಹಾಸ್ಯಮಯವಾಗಿಯೂ ಗೋಚರಿಸುತ್ತದೆ.. 
7. ಲೌಕಿಕ ಸೂಕ್ತಗಳು :- ಯಜ್ಞ ವಿಧಿಯ ಅಂಗಗಳನ್ನು ತಿಳಿಸುವ ಸೂಕ್ತಗಳ ನಡು ನಡುವೆಯೇ ಹಲವಾರು ಲೌಕಿಕ ವಿಚಾರಗಳನ್ನು ವಸ್ತುಗಳನ್ನೂ ತಿಳಿಸಿಕೊಡುವ ಸೂಕ್ತಗಳು ಕಂಡುಬರುತ್ತವೆ ಉದಾಹರಣೆಗೆ, ಒಂಭತ್ತನೇ ಮಂಡಲದಲ್ಲಿ ಇರುವ ಸೋಮ ಸೂಕ್ತದ ನಡುವೆಯೇ ನಾನಾ ದುಷ್ಪವೃತ್ತಿನಿಂದಾ ಸೂಕ್ತವಿದೆ. ಅದರಲ್ಲಿ ದ್ಯೂತ ವ್ಯಾಮೋಹದಲ್ಲಿ ಬಿದ್ದು ಸರ್ವಸ್ವವನ್ನೂ ಕಳೆದುಕೊಂಡು ಹೆಂಡತಿ ಮಕ್ಕಳಿಗೂ ಬೇಡದವನಾಗಿ ಹಳಹಳಿಸುವ ಜೂಜುಗಾರನ ಹಾಸ್ಯಭರಿತ ಸ್ಥಿತಿಯ ವರ್ಣನೆ ತುಂಬ ಮನೋಹರವಾಗಿದೆ. ಇದು ಆಕಾಲದ ಕುಟುಂಬ ವ್ಯವಸ್ಥೆಯನ್ನು ನಮಗೆ ತಿಳಿಸಿಕೊಡುತ್ತದೆ.
8. ದಾನಸ್ತುತಿ ಸೂಕ್ತಗಳು :- ಋಗ್ವೇದದ ಹಲವು ಮಂಡಲಗಳಲ್ಲಿ ಹಂಚಿಕೊಂಡಿರುವ ಸುಮಾರು 40 ದಾನ ಸ್ತುತಿಗಳು ಆ ಕಾಲದಲ್ಲಿ ವಿಜಯಿಯಾದ ರಾಜರುಗಳು ಯಜ್ಞಕಾಲದಲ್ಲಿ ಮಾಡಿದ ದಾನಗಳ ಪ್ರಶಂಸೆಯು  ಕಂಡುಬರುತ್ತದೆ. ಇಲ್ಲಿ ಐತಿಹಾಸಿಕ ನಾಮಾಂಕಿತಗಳನ್ನು ತಿಳಿಯುವುದರೊಮ್ದಿಗೆ ಆದರ್ಶ ಜೀವನದ ಸ್ಥಿತಿಗತಿಗಳನ್ನೂ ತಿಳಿದುಕೊಳ್ಳಬಹುದು.
9. ಕೆಲವು ಕೂಟರಚನೆಯ ಸ್ತುತಿಗಳು :- ಒಗಟಿನಂತಿರುವ ಕೆಲವು ಋಕ್ಕುಗಳನ್ನೊಳಗೊಂಡ ಕೆಲವೊಂದು ಸೂಕ್ತಗಳು ಋಗ್ವೇದದಲ್ಲಿದೆ. ಸೂರ್ಯ, ಯಜ್ಞ ಇತ್ಯಾದಿ ಗಳ್ ಕುರಿತು ಒಗಟಿನ ರೂಪಗಳು ಕಂಡುಬರುತ್ತವೆ. ಅಂತಹ ಒಗಟು ಸೂಕ್ತಗಳ ಎಷ್ಟೋ ಕೂಟಪ್ರಶ್ನಗಳನ್ನು ಇಂದಿಗೂ ಭೇದಿಸಲಾಗಿಲ್ಲ..!

     ಹೀಗೇ ಋಗ್ವೇದ ಸಂಹಿತೆಯ ಸೂಕ್ತಗಳ ಸಿಂಹಾವಲೋಕನದಿಂದ ಧರ್ಮನಿಷ್ಠೆಯ ಜೊತೆಜೊತೆಗೇ ಕಾವ್ಯ ನಿಷ್ಠೆಯೂ ಋಷಿಗಳಲ್ಲಿ ಮಿಂಚುತ್ತಿರುವ ವಿಷಯ ವ್ಯಕ್ತವಾಗುತ್ತದೆ. ಸಂಸ್ಕೃತ ಸಾಹಿತ್ಯದ ಮೂಲಸ್ರೋತವನ್ನು ಅನ್ವೇಷಿಸುವವರಿಗೆ ಮಹಾಭಾರತಾದಿ ಛಂದೋಬಂಧ ಸಾಹಿತ್ಯಗಳ ವಿಕಸಿತ ರೂಪವನ್ನರಿಯಲು ಋಗ್ವೇದದ ಛಂದಸ್ಸುಗಳು ಸಹಾಯಕವಾಗಿವೆ ಮತ್ತು ವೇದಜ್ಞಾನವಿಲ್ಲದ ರಾಮಾಯಣಾದಿಗಳ ಅಧ್ಯಯನವು ನಿರರ್ಥಕವಾಗುತ್ತದೆ ಎಂಬುದನ್ನು ಕಾಣಬಹುದಾಗಿದೆ.
ಇನ್ನು ನಾವು ಈ ವೇದದಲ್ಲಿ ಸ್ತಿತಿಸಲ್ಪಟ್ಟ ದೇವಾನುದೇವತೆಗಳ ಕುರಿತು ಕಿಂಚಿತ್ ಕಣ್ಣು ಹಾಯಿಸಲೇ ಬೇಕು. ವೇದದಲ್ಲಿ ಸ್ತುತರಾದ ದೇವತೆಗಳು ಮನುಷ್ಯ ಜೀವನದಲ್ಲಿ ಪ್ರಭಾವ ಬೀರುವ ವಿಭೂತಿಗಳು ಮತ್ತು ಮಹಾ ಸತ್ವರೂ ಆಗಿದ್ದಾರೆ. ಮೊದ ಮೊದಲು ಕಂಡುಬರುವ ವರ್ಣನೆಗಳಲ್ಲಿ ಭಯ-ಭೀತಿಗಳನ್ನು ತರುವಂತಹುದಾದರೂ ಸ್ತೋತ್ರದಿಂದ ಅವರನ್ನು ಪ್ರಸನ್ನಗೊಳಿಸಬಹುದು ಎಂಬುದನ್ನು ಮನವರಿಕೆ ಮಾಡಿಕೊಂಡಂತಿದೆ. ಅವರು ಮನುಷ್ಯರಿಗೆ ಮಿತ್ರರಾಗುತ್ತಾರೆ ಮತ್ತು ಪರಸ್ಪರವಾಗಿ ಆ ದೇವತೆಗಳಲ್ಲಿಯೂ ಸಖ್ಯವಿದೆ ಹಾಗಾಗಿ ಅವರೆಲ್ಲರೂ ಶತ್ರುಗಳಾದ ದಾನವರನ್ನು..( ಈ ದಾನವ ಪದ ಬಳಕೆ ಹೇಗೆ ಒಡಮೂಡಿತೆಂಬುದಕ್ಕೆ ವೇದಗಳು ವಿವರಣೆ ನೀಡದಿದ್ದರೂ ನಂತರ ಬಂದ ಉಪನಿಷತ್ತುಗಳು ಅವರ ಲಕ್ಷಣವನ್ನು ವಿವರಿಸುವಲ್ಲಿ ಸಫಲವಾಗಿವೆ)  ನಾಶಗೈಯ್ಯುವುದರಲ್ಲಿ ಸಹಕರಿಸುವವರು. ಮನುಷ್ಯನು ಈ ದೇವತೆಗಳ ದಾಸತ್ವವನ್ನು ಪಡೆದುಕೊಂಡಾಗ ಮಾತ್ರ ಸ್ತೋತ್ರ ಮಾಡುವುದರ ಫಲವಾಗಿ ಈ ದಾನವರುಗಳನ್ನು ನಿಯಂತ್ರಿಸಬಲ್ಲ ಶಕ್ತಿಯನ್ನು ಪಡೆಯುತ್ತಾನೆ ಎಂಬ ವಿವರಣೆ ಸಿಗುತ್ತದೆ. ಇದೇ ಮಂತ್ರದ ‘ಶಕ್ತಿ’ ಅಥವಾ ಸೂಕ್ತಗಳ ‘ಶಕ್ತಿ’ ಎನ್ನಿಸಿಕೊಂಡಿತು.
ಆಶ್ಚರ್ಯವೆಂದರೆ ವೇದದಲ್ಲಿ ವರ್ಣಿತವಾದ ದೇವತೆಗಳ ಸಂಖ್ಯೆ ಕೇವಲ 33...! ಈ ಸಂಖ್ಯೆಯು ಇರಾನಿನ ದೇವತೆಗಳ ಲೆಕ್ಕಾಚಾರಗಳಲ್ಲೂ ಪ್ರಸ್ತುತವೆನ್ನಿಸಿವೆ..! ಈ ದೇವತೆಗಳ ಸಾಂಖ್ಯಿಕ ವಿವರಗಳು ಬ್ರಾಹ್ಮಣಗಳಲ್ಲಿ ದೊರೆಯುತ್ತದೆ. ಅದನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

೧. ಅಷ್ಟ ವಸುಗಳು- 8
೨. ಏಕಾದಶ ರುದ್ರರು- 11
೩. ದ್ವಾದಶಾದಿತ್ಯರು- 12
೪.  ಅನಿರ್ದಿಷ್ಟರು ( ಇವರ ಹೆಸರುಗಳು ಉಲ್ಲೇಖಿತವಾಗಿಲ್ಲ..!) -2
ಇದನ್ನೇ ಯಾಸ್ಕನು ತನ್ನ ‘ನಿರುಕ್ತ’ದಲ್ಲಿ ಸ್ಥಾನಾಪನ್ನತೆಯ ಆಧಾರದಲ್ಲಿ ‘ಪೃಥ್ವೀಸ್ಥಾನಿಗಳು, ಅಂತರಿಕ್ಷಸ್ಥಾನಿಗಳು, ದ್ಯುಸ್ಥಾನಿಗಳು ’ ಎಂದು ಮೂರು ಗುಂಪುಗಳಲ್ಲಿ ವಿಂಗಡಿಸಿದ್ದಾನೆ.ಅಲ್ಲದೇ ಅವರ ಕೃತಿ ವೈಚಿತ್ರ್ಯಗಳೂ ಗಮನೀಯವಾಗಿವೆ. 
ಅಧಿರಾಜ ದೇವತೆಗಳು:- ವರುಣ, ಮಿತ್ರ ಇತ್ಯಾದಿಗಳು
ಯುದ್ಧ ದೇವತೆಗಳು:- ಇಂದ್ರ, ಮರುದ್ಗಣಗಳು, ರುದ್ರ ಇತ್ಯಾದಿಗಳು
ಪ್ರಕಾಶ ದೇವತೆಗಳು :- ವಿಷ್ಣು, ಅಶ್ವಿನೀಕುಮಾರರು ಇತ್ಯಾದಿ
ಯಜ್ಞದೇವತೆಗಳು :- ಅಗ್ನಿ, ಸೋಮ ಇತ್ಯಾದಿಗಳು
ಉಳಿದವೆಂದರೆ ಅಪ್ರಧಾನ ದೇವತೆಗಳು :- ಶ್ರದ್ಧಾ ಮತ್ತು ಇಳಾ
ಏಕದೇವತೋಪಾಸನೆಯ ಮೂಲ ಸಿಗುವುದೇ ನಮಗೆ ಋಗ್ವೇದದ ವರುಣನ ವಿವರಣೆಯಲ್ಲಿ. ಇವನನ್ನು ಎಲ್ಲರಿಗಿಂತ ಪ್ರಧಾನ ದೇವತೆಯೆಂದೇ ಬಿಂಬಿಸಲಾಗಿದೆ. ಈ ವರುಣನಿಗೆ ಮಾನವೀಯ ಆಕೃತಿಯನ್ನಾಗಲೀ ಮನೋಭೂಮಿಕೆಯನ್ನಾಗಲೀ ವೇದಗಳಲ್ಲಿ ಹೇಳಿಲ್ಲ. ಆದ ಕಾರಣ ಮಿತ್ರನೊಂದಿಗೆ ಇವನ ಸ್ತುತಿಗಳು ಸಮ್ಮಿಳಿತಗೊಂಡಿವೆ. ಹಾಗಿದ್ದೂ ವರುಣನೇ ಸರ್ವದೇವಾಧಿಪ, ಸಾಮ್ರಾಟ್..! ಜಗತ್ತಿನ ಸೃಷ್ಟಿ-ಸ್ಥಿತಿ ಕಾರ್ಯಗಳು ದ್ಯುದೇವನಂತೆಯೇ ಇವನಿಗೂ ಹೇಳಲ್ಪಟ್ತಿವೆ. ಸೂಕ್ತಗಳಲ್ಲಿ ಬರುವ ವರ್ಣನೆಗಳ ಪ್ರಕಾರ ವರುಣನು ಕ್ಷತ್ರಿಯರಿಗೆ ಪ್ರಭುತ್ವವನ್ನು ದಯಪಾಲಿಸುವವನು ವರುಣನೇ. ಅವನೇ ಮಹಾಪ್ರಭು, ಅವನಿಂದ ಹೊಮ್ಮಿದ ‘ಮಾಯೆ’ ಯಿಂದಲೇ ವಿಶ್ವದ ಋತುನಿಯಮವು ಕರಾರುವಾಕ್ಕಾಗಿ ನಡೆಯುವುದು. ಧರ್ಮ ನೀತಿಗಳು ಉಳಿದಿರುವುದು, ಪಾರ್ಶ್ವವಾಗಿ ಯಮನ ಕಾರ್ಯವನ್ನು ನಡೆಸುತ್ತಿರುವುದಾಗಿಯೂ ವರ್ಣನೆಯಿದೆ. ಹಾಗಾಗಿ ದುರ್ನೀತಿಯ ಜನರನ್ನು ಶಿಕ್ಷಿಸುವವನೂ ವರುಣನೇ...! ಕೆಲವು ಸೂಕ್ತಗಳಲ್ಲಿ ಅವನನ್ನು ಪಾಪಿಗಳನ್ನು ದಂಡಿಸುವ ದೇವತೆ, ಹಾಗಾಗಿ ಗೂಢಚಾರರನ್ನು ಹೊಂದಿದ್ದು ಎಲ್ಲೆಡೆಯೂ ಅವನ ಚರರು ನೋಡುತ್ತಲೇ ಇರುತ್ತಾರೆ. ಇನ್ನೊಂದು ವಿಶೇಷವೆಂದರೆ ಈ ವರುಣನೇ ಈ ಭೂಮಿಗೆ ಮಳೆಯನ್ನು ಕೊಡತಕ್ಕವನು, ಅಲ್ಲದೇ ಆಕಾಲದಲ್ಲಿ ಕಂಡುಬಂದ ‘ಜಲೋದರ’ ಕಾಯಿಲೆಯನ್ನು ಕಡಿಮೆ ಮಾಡುವ ಸಲುವಾಗಿ ಅವನಿಗೆ ಸೋಮಯಾಜಮಾನ್ಯವನ್ನೂ ಕರುಣಿಸಿದ್ದಾರೆ ಋಷಿಗಳು...! ಋಗ್ವೇದ ಕಾಲದಲ್ಲಿ ಪೌರಾಣಿಕ ಕಥಾ ಹಂದರದ ಪರಿಚಯ ಅಷ್ಟಾಗಿ ಕಾಣದಿರುವುದು ಈ ವರುಣನೇ ಮುಂದೆ ಮಿತ್ರ ಎಂದೂ ಕರೆಯಲ್ಪಟ್ಟು ವರುಣನಿಗೆ ಪ್ರತಿದ್ವಂದ್ವಿಯಾಗಿ ಮಾರ್ಪಟ್ಟಿದ್ದು ಕಂಡುಬರುತ್ತದೆ. ಮುಂದೆ ಮಿತ್ರನು ಹಗಲಿನ ದೇವತೆ- ಸೂರ್ಯನೆನ್ನಿಸಿಕೊಂಡರೆ ವರುಣನು ರಾತ್ರಿ ದೇವತೆಯಾಗಿ ಚಂದ್ರನಾಗಿ ಮಾರ್ಪಡುತ್ತಾನೆ.  ಹೀಗೆ ಚಂದ್ರ ತತ್ವವನ್ನು ಆರೋಪಿಸುವಾಗಲೂ ಜಲ ಸಂಬಂಧ ಬಿಟ್ಟು ಹೋಗುವುದಿಲ್ಲ. 
ಮುಂದೆ ಬರ ಬರುತ್ತಾ ಇದೇ ವರುಣನೇ ಯಜ್ಞ ಕಾರ್ಯಗಲಲ್ಲಿ ತನ್ನ ಸ್ಥಾನವನ್ನು ಚಂದ್ರನಿಗೆ ಬಿಟ್ಟುಕೊಡುತ್ತಾನೆ ಮತ್ತು ರಾಜಸೂಯ, ಮುಂತಾದ ಯಜ್ಞಗಳಲ್ಲಿ ಅವನ ಸ್ಥಾನವನ್ನು ಇಂದ್ರನು ಆಕ್ರಮಿಸುತ್ತಾನೆ. ಈ ತೆರನಾದ ಸ್ಥಾನ ಪಲ್ಲಟ ವಿಧಾನವನ್ನು ಇತ್ತೀಚಿನ ಸಂಶೋಧಕರು ಬಹು ಆಸಕ್ತಿಯಿಂದ ಗಮನಿಸಿ ತಮ್ಮ ವರುಣನ ಕುರಿತಾದ ಜಿಜ್ಞಾಸೆಯನ್ನು ತೋರ್ಪಡಿಸಿದ್ದಾರೆ( ಜಾನ್ ಕೀತ್,  ಓಲ್ಡೇನ್ ಬರ್ಗ್, ಹೀಲ್ ಬ್ರಾಂಡ್ ಓಟ್ಟೋ ಇತ್ಯಾದಿಗಳು)ಏನೇ ಆದರೂ ವರುಣನ ‘ಸಾಮ್ರಾಟ್’ ಪದವಿಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ...! ಅತಿ ಪ್ರಾಚೀನ ಮತ್ತು ವೇದ ವರ್ಣಿತರುಗಳಲ್ಲಿ ಪ್ರಥಮ ದೇವತೆಯೆಂಬುದನ್ನು ಎಲ್ಲರೂ ಸಮ್ಮತಿಸುತ್ತಾರೆ. 
...................................................................................................
ಋಗ್ವೇದದ ಸೂಕ್ತಗಳನ್ನು ಕೂಲಂಕಷವಾಗಿ ಗಮನಿಸುತ್ತಾ ಹೋದರೆ ನಮ್ಮ ಅರಿವಿಗೆ ಬರುವುದು ‘ಮಿತ್ರ’ನ ಕುರಿತಾದ ವಿವರಣೆಗಳು. ಆದರೆ ಅವನ ಸ್ಥಾನಾಪನ್ನತೆಯು ಕ್ಷೀಣವಾದುದು ‘ಮಿತ್ರಸೂಕ್ತ’ವೆಂದು ಕರೆಯಲ್ಪಡುವ ಒಂದೇ ಒಂದು ಸೂಕ್ತದಲ್ಲಿ ದೊರೆತ ವಿವರಣೆಯಷ್ಟೇ ಆಗಿದೆ. ಬಹುಶಃ ಹಿಂದೆ ತಿಳಿಸಿದಂತೆ ವರುಣನ ಸ್ಥಾನವನ್ನು ಆಕ್ರಮಿಸಿದ ಈ ದೇವತೆಯು ಹಿಂದೆ ಉತ್ತಮ ಸ್ಥಾನದಲ್ಲಿದ್ದವನು ಎಂಬುದನ್ನು ಸೂಚಿಸುತ್ತದೆ. ಇಲ್ಲಿ ಮಿತ್ರನ ನಂತರ ವರುಣನೋ ಅಥವಾ ವರುಣನಾದ ಮೇಲೆ ಮಿತ್ರನೋ ಎಂಬುದು ಇಂದಿಗೂ ಬಗೆಹರಿಯದ ವಿಚಾರವಾಗಿಯೇ ಇದೆ. ಏಕೆಂದರೆ ಕೆಲ ಋಕ್ಕುಗಳಲ್ಲಿ ಮಿತ್ರಾನಂತರದಲ್ಲಿ ವರುಣ ಬಂದಂತೆ ತೋರುತ್ತದೆ.
ವಿಶ್ವದ ಸೃಷ್ಟಿ, ಋತ-ಸತ್ಯ, ನ್ಯಾಯ ನಿರ್ಣಯಾದಿ ಕಾಯಕಗಳಲ್ಲಿ ಈ ಮಿತ್ರನ ಪಾತ್ರ ಮಹತ್ವದ್ದು ಎಂದೂ ಅದಕ್ಕೆ ಈ ಮಿತ್ರನು ವರುಣನೊಡಗೂಡಿಯೇ ಆ ಕೆಲಸಗಳನ್ನು ನಿರ್ವಹಿಸುತ್ತಾನೆಂದೂ ವರ್ಣಿಸಲಾಗಿದೆ. ಒಂದು ಅಚ್ಚರಿಯ ವಿಚಾರವೆಂದರೆ, ‘ಇರಾನ್’ ನಲ್ಲಿ ಅವರ ಪ್ರಾಕ್ಕಥನಗಳಲ್ಲಿ ಬರುವ ಇದೇ ಕಾಯಕಗಳನ್ನು ನಿರ್ವಹಿಸುತ್ತಾನೆಂದು ವರ್ಣಿಸಲ್ಪಡುವ ದೇವತೆಯ ಹೆಸರೂ ‘ಮಿಥ್ರ್’ ಇದಕ್ಕೆ ಹೊಂದಿಕೊಂಡಂತೆ ವರುಣನಲ್ಲಿ ಉಗ್ರಾಂಶವನ್ನೂ ಮಿತ್ರನಲ್ಲಿ ಸಾತ್ವಿಕಾಂಶಗಳನ್ನೂ ಆರೋಪಿಸಿರುವುದು ಈ ಎರಡು ದೇವತೆಗಳು ಸಮಾನ ಕಾರ್ಯಕ್ಕೆ ನಿಯೋಜಿಸಲ್ಪಟ್ಟವರೆಂಬುದನ್ನು ತಿಳಿಸುತ್ತದೆ.
ಆದಿತ್ಯರು :- ಈ ಮಿತ್ರ ಮತ್ತು ವರುಣರೂ ಅದಿತಿಯ ಪುತ್ರರು...! ಹೀಗೆ ಇವರನ್ನೂ ಒಳಗೊಂಡಂತೆ ಋಗ್ವೇದದ ಪಾಥಮಿಕ ಸೂಕ್ತಗಳಲ್ಲಿ ಕಂಡುಬರುವ ಆದಿತ್ಯರ ಸಂಖ್ಯೆ ಕೇವಲ ಏಳು...! ಅಥವಾ ಎಂಟು...! ಮುಂದೆ ಬ್ರಾಹ್ಮಣದ ಕಾಲದಲ್ಲಿ ಅವನ್ನು 12 ಕ್ಕೆ ತಂದು ನಿಲ್ಲಿಸಲಾಯಿತು. ಅದರ ವಿವರಣೆಯನ್ನು ಮುಂದೆ ಸಂದರ್ಭಾನುಸಾರ ವಿವೇಚಿಸೋಣ. ಏಕೆಂದರೆ ಅಲ್ಲಲ್ಲಿ ಈ ಆದಿತ್ಯರ ನಾಮಾಂಕಿತಗಳು ಬದಲಾಗುತ್ತಲೇ ಸಾಗಿದೆ.ಏಕೆಂದರೆ ಸೂಕ್ತಗಳಲ್ಲಿ ಬರುವ ‘ಮಿತ್ರ- ಅರ್ಯಮ’ ಎಂಬ ಈರ್ವರೂ ವರುಣನ ನಂತರದ ಕಾಲಘಟ್ಟದಲ್ಲಿ ಬರುವ ದೇವತೆಗಳು..! ಈ ‘ಅರ್ಯಮ’ ಇರಾನೀ ಸಾಹಿತ್ಯದಲ್ಲಿ ‘ಅರ್ಯಮನ್’..! ಹೇಗೆ ಇಲ್ಲಿ ಮಿತ್ರ ವರುಣ ಅರ್ಯಮರು ಎಲ್ಲರೂ ಆದಿತ್ಯಾಂಶಿಗಳೋ ಅಂತೆಯೇ ಇರಾನೀ ‘ಅರ್ಯಮನ್’ ಕೂಡಾ ಸೂರ್ಯಾಂಶನು..! ಆ ಕಾಲದ ವಿವಾಹ ವಿಧಿಗಳಲ್ಲಿ ( ಪೂರ್ವದ ಕಾಲಘಟ್ಟದಲ್ಲಿ ವಿವಾಹ ಎಂಬ ವ್ಯವಸ್ಥೆಯೇ ಇರಲಿಲ್ಲ..!), ಆತಿಥ್ಯ ಸಂದರ್ಭಗಳಲ್ಲಿ ಈ”ಅರ್ಯಮಾ’ ಎಂಬವನು ಪ್ರಧಾನ ದೇವತೆಯಾಗಿರುತ್ತಾನೆ. ಅಷ್ಟೇ ಅಲ್ಲ, ಅದೃಷ್ಟವನ್ನು ತಮ್ಮ ನಂಬಿಕೆಯ ಇನ್ನೊಂದು ಭಾಗವನ್ನಾಗಿ ಮಾಡಿಕೊಳ್ಳುತ್ತಾ ಸಾಗಿದ ಋಗ್ವೇದ ಸಂಸ್ಕೃತಿಯಲ್ಲಿ ಅದಕ್ಕೊಬ್ಬ ದೇವತೆ ‘ಅಂಶ’ ಮತ್ತು ನೀತಿಯನ್ನು ಸಾರುವ ದೇವತೆಯಾದ ‘ದಕ್ಷ’  ಇವರೆಲ್ಲ ಆಕಾಲದ ನೀತಿ, ಸಾಮಾಜಿಕ ಕಟ್ಟುಪಾಡುಗಳನ್ನು ನಿಯಂತ್ರಿಸಬಲ್ಲ ದೇವತೆಗಳೆಂದು ವರ್ಣಿಸಲ್ಪಟ್ಟಿವೆ. ಈ ಭಾಗವನ್ನು ‘ಲೋಕ ಶಾಸನ’ ಎಂಬ ಅರ್ಥದಲ್ಲಿ ವೇದ ತಿಳಿಸುತ್ತಿದೆ. ಇಲ್ಲಿ ಒಂದು ಜಿಜ್ಞಾಸೆ ಪೂರ್ವ ವಿದ್ವಾಂಸರುಗಳಿಗೂ ಮೂಡಿದ್ದು ಏನೆಂದರೆ ‘ಸಪ್ತಾದಿತ್ಯ’ ಸೂತ್ರಗಳು ಅಂದಿನ ಗ್ರಹ ಕೂಟಗಳಾಗಿ 7 ಗ್ರಹಗಳನ್ನು ಸೂಚಿಸಲೂ ಸಾಕು ಎಂಬುದು.ಆದರೆ ಕೆಲ ವಿದ್ವಾಂಸರು ಶಾಬ್ದಿಕ ವಿವರಣೆಯ ಪ್ರಕಾರ ಅದನ್ನು ಒಪ್ಪುತ್ತಿಲ್ಲ. ಏಕೆಂದರೆ ‘ಅದಿತಿ’ ಎಂಬುದು ‘ದಿತ್-ಬಂಧನೇ’ ಎಂದು ವಿಭಾಗಿಸಲ್ಪಡುವುದರಿಂದ ಬಂಧನವಿಲ್ಲದ ಸ್ಥಿತಿ ಎಂಬರ್ಥ ಸ್ಫುರಿಸುತ್ತದೆ. ಹಾಗಾಗಿಯೇ ಅದಿತಿಯನ್ನು ‘ದೇವ ಮಾತಾ’ ಸ್ಥಾನಕ್ಕೇರಿಸಿದ್ದು..!
ವೇದೋಲ್ಲಿಖಿತವಾದ ದೇವತೆಗಳಲ್ಲಿ ನಂತರದ ಸ್ಥಾನ ‘ಮರುದ್ಗಣ’ಗಳದ್ದು. ಇವರು ಯಾವಾಗಲೂ ತಾರುಣ್ಯಪೂರ್ಣಾವಸ್ಥೆಯಲ್ಲಿರುವವರು (ಮರ್ಯ) ಮತ್ತು ರುದ್ರನ ಪುತ್ರರು. ವೇದ ಸೂಕ್ತಗಳಲ್ಲಿ ಇವರ ವರ್ಣನೆ ಅನುಪಮ ಕಾವ್ಯ ಶಯ್ಲಿಯಿಂದ ಕೂಡಿದೆ ಎನ್ನಬಹುದು. ಕಂದುಬಣ್ನದ ಕುದುರೆಗಳನ್ನು ಹೊಂದಿದ ಚಿನ್ನದ ರಥಗಳಲ್ಲಿ ಇವರು ಬರುತ್ತಾರೆ. ಈ ಭೂಮಿಯ ಮೇಲೆ ಮಳೆಯನ್ನು ಸುರಿಸುವವರು, ಗಾಳಿಯನ್ನು ಬೀಸುವವರು, ಮತ್ತು ಸುಶ್ರಾವ್ಯವಾದ ಸಂಗೀತವನ್ನು ಹಾಡುತ್ತಾ ಬರುವವರೂ ಆಗಿರುತ್ತಾರೆ. ಅಂತೆಯೇ ಮಿಂಚು ಎಂಬ ಹೊಸ ಬೆಳಕಿನ ವೈಚಿತ್ರ್ಯವೂ ಇವರಿಂದಲೇ ಉದ್ಭವಿಸಿದ್ದು. ಏಕೆಂದರೆ ಇವರ ಆಭರಣಗಳೇ ಅದಕ್ಕೆ ಕಾರಣವಂತೆ...! ಏನೇ ಇದ್ದರೂ ಇವರು ‘ಇಂದ್ರ’ನ ನಾಯಕತ್ವವವನ್ನು ಒಪ್ಪಿ ಅವನ ಸಹಚರರಾಗಿ ಯುದ್ಧಾದಿಗಳಲ್ಲಿ ತೊಡಗಿಸಿಕೊಳ್ಳುವವರಾಗುತ್ತಾರೆ.
ರುದ್ರ :- ಋಗ್ವೇದದಲ್ಲಿ ಇವನ ಸ್ಥಾನ ಗೌಣ. ಆದರೂ ರುದ್ರನ ಬಿಲ್ಲು-ಬಾಣಗಳ ವರ್ಣನೆಗಳು ಅಲ್ಲಲ್ಲಿ ಬರುತ್ತವೆ. ಹಾಗಾಗಿ ಈ ರುದ್ರನೆಂಬವನು ಯಾವಾಗಲೂ ಉಗ್ರರೂಪಿ ಎಂಬುದು ತಿಳಿದುಬರುತ್ತದೆ. ಕಾಡುಗಳಲ್ಲಿಯೇ ಅವನ ವಾಸ, ಮತ್ತು ಯಾರನ್ನು ‘ಪಶುಪತಿ’ ಎಂದು ಹೇಳುತ್ತಾರೋ ಅವನೇ ರುದ್ರನು,...! ಸೂಕ್ತಗಳಲ್ಲಿ ಕಂಡುಬರುವಂತೆ ಇವನು ‘ನಿಷೇಧಗಳ ದೇವತೆಯಾಗಿದ್ದಾನೆ’..! ಈ ಪಶುಪತಿಯನ್ನೇ ಮುಂದೆ ‘ಯಜುರ್ವೇದ’ದಲ್ಲಿ ‘ಮಹಾದೇವ’, ‘ಶಿವ’ ಎಂದು ಬಣ್ಣಿಸಲಾಗಿದೆ. ಯಜ್ಞಗಳಲ್ಲಿ ಇವನಿಗೆ ಬೇರೆಯದೇ ಆದ ಹವಿರ್ಭಾಗವನ್ನೂ ನೀಡಲಾಗುತ್ತಿತ್ತು. ಏಕೆಂದರೆ ಇವನು ನಿಯಾಮಕನೂ, ರೋಗ ನಿವಾರಕನೂ, ಅನ್ಯಾಯಗಳನ್ನು ನಿಯಂತ್ರಿಸುವವನೂ ಆಗಿದ್ದನು.
ಅಶ್ವಿನೀ ದೇವತೆಗಳು :- ಇವರು ಮೂಲದಲ್ಲಿಯೇ ಅವಳಿಗಳು. ಎಲ್ಲ ಕಡೆಗಳಲ್ಲಿಯೂ ದ್ವಿವಚನದಲ್ಲಿಯೇ ಇವರನ್ನು ಹೆಸರಿಸಲಾಗುತ್ತದೆ. ಇವರು ‘ದ್ಯುದೇವ’ನ ಪುತ್ರರು. ಪಕ್ಷಿಗಳಿಂದ ಎಳೆಯಲ್ಪಡುವ ರಥದಲ್ಲಿ ಒಟ್ಟಿಗೇ ಕುಳಿತು ಆಕಾಶದಲ್ಲಿ ಸಂಚರಿಸುವವರು..! (ಆಕಾಶಗಮನದ ಕಲ್ಪನೆಯ ಕುರಿತು ಜಿಜ್ಞಾಸೆಗೊಳಪಡಬೇಕಾದ ಅನೇಕ ವಿಚಾರಗಳು ಈ ಅಶ್ವಿನೀದೇವತೆಗಳ ಸೂಕ್ತಗಳಲ್ಲಿ ವರ್ಣನೆಯಿರುವುದು) ಅರುಣೋದಯದಲ್ಲಿ ಇವರನ್ನು ಕಾಣುತ್ತೇವೆ. ಸುಂದರರೂ, ಶೀಘ್ರಗಾಮಿಗಳೂ ಆಗಿದ್ದಾರೆ. ಇವರಿಗೆ ಕೆಲವು ಸೂಕ್ತಗಳಲ್ಲಿ ‘ದಸ್ರಾ’- ‘ನಾಸತ್ಯ’ ಎಂಬ ನಾಮಾಂತರಗಳನ್ನೂ ಹೇಳಿದ್ದಾರೆ. ಇವರು ರೋಗ ಚಿಕಿತ್ಸಕರು ಎಂಬ ಬಹುವಾದ ವಿವರಣೆ ಕಂಡುಬರುತ್ತದೆ. ಏಕೆಂದರೆ ‘ಚ್ಯವನ’ನ ಮುಪ್ಪನ್ನು ಹೋಗಲಾಡಿಸಿ ತರುಣನನ್ನಾಗಿಸಿದವರು ಈ ಅಶ್ವಿನೀದೇವತೆಗಳು ಎಂದು ನಂಬಲಾಗಿದೆ.ಒಂದು ಸೂಕ್ತದಲ್ಲಿ ಕಥೆಯ ರೂಪದಲ್ಲಿ ಕಾಣುವಂತೆ ‘ಭುಜ್ಯು’ವು ಸಮುದ್ರದಲ್ಲಿ ಮುಳುಗುತ್ತಿರುವಾಗ ಅವನನ್ನು ಮೇಲಕ್ಕೆತ್ತಿ ಬದುಕಿಸಿದವರು ಇವರು. ಇವರ ಸೂಕ್ತಗಳಲ್ಲೇ ನಮಗೆ ‘ಮಧು’ ಎಂಬ ಪೇಯದ ವಿಚಾರ ತಿಳಿದುಬರುವುದು....! ‘ದಧ್ಯಂಚ’ ನೆಂಬವನ ಸಹಾಯದಿಂದ ಈ ಮಧುವನ್ನು ತಯಾರಿಸಿ ದೇವತೆಗಳಿಗೆ ಹಂಚಿದರು ಎಂಬುದು ತಿಳಿದುಬರುತ್ತದೆ. ಹಾಗಾಗಿ ಇವರು ಅತ್ಯಂತ ಜನಪ್ರಿಯ ದೇವತೆಗಳೆನ್ನಿಸಿದರಂತೆ...!
ವಿಷ್ಣು:- ವಿಷ್ಣುವಿನ ಕಲ್ಪನೆಯೇ ಋಗ್ವೇದದ ಏಳು ಮತ್ತು ಒಂಭತ್ತನೇ ಮಂಡಲದಲ್ಲಿ ಬರುತ್ತದೆ. ಹೇಗೆ ಇವನನ್ನು ಜಗನ್ನಿಯಾಮಕ ಎಂದು ಕರೆದರು ಎಂಬುದಕ್ಕೂ ವಿವರಣೆಗಳು ದೊರೆಯುತ್ತವೆ. ಅದಲ್ಲದೇ ‘ಮೂರುಲೋಕಗಳು’ ಎಂಬ ಕಲ್ಪನೆಯೂ ಇವನಿಂದಲೇ ತಿಳಿಯುತ್ತದೆ. ಏಕೆಂದರೆ ಇವನು ಮೂರು ಲೋಕಗಳನ್ನೂ ಅಳೆಯುವ  ಇವನ ಸಾಹಸ ವಿವರಗಳು ಋಗ್ವೇದದಲ್ಲಿ ಉಕ್ತವಾಗಿದೆ.  ಲೋಕವನ್ನಳೆಯುವಾಗ ಮೂರು ಕ್ರಮಗಳನ್ನು ಅನುಸರಿಸಿದ್ದರೂ ಮೊದಲೆರಡು ಕ್ರಮಗಳು ಸಾಮಾನ್ಯ ಕಣ್ಣಿಗೆ ಕಾಣಿಸುವಂತಿದ್ದು ಮೂರನೇಯ ಕ್ರಮವು ಅದೃಶ್ಯವಾದುದಾಗಿದೆ ಎಂದು ವಿವರಣೆ ದೊರೆಯುತ್ತದೆ. ಆದರಿಂದಲೇ ಇವನಿಗೆ ‘ಉರುಗಾಯ’, ‘ಉರುಕ್ರಮ’ ಎಂಬ ಬಿರುದುಗಳಿವೆಯಂತೆ...! ಈ ವಿಷ್ಣುವು ‘ಇಂದ್ರ’ನ ಮಿತ್ರನಾಗಿರುತ್ತಾನೆ. ಅವನಿಗಾಗಿ ‘ಮಧು’ವನ್ನು ತಯಾರಿಸಿಕೊಡುತ್ತಾನೆ ಅದು ವಿಶೇಷವಾದುದಾಗಿದೆ ಏಕೆಂದರೆ ಅವನ ಪಾದದಲ್ಲಿ ಮಧುವಿನ ‘ಉತ್ಸ’(ಬುಗ್ಗೆ) ರೂಪವಾಗಿ  ಸೋಮವು ಜನಿಸುತ್ತದೆ..!
ಪೂಷನ್:- ಈ ದೇವತೆಯು ಜನರಿಗೆ ಮಾರ್ಗ ದರ್ಶಕನು. ದಾರಿ ತಪ್ಪಿದ ಪ್ರಾಣಿಗಳಿಗೂ ಇವನು ಮಾರ್ಗ ದರ್ಶನ ಮಾಡುತ್ತಾನೆ. ಎಲ್ಲರಿಗೂ ಸಮೃದ್ಧಿಯನ್ನು ಕೊಡಬಲ್ಲ ದೇವತೆ ಪೂಷನ್..!
ಸೂರ್ಯಾಂಶೀಯ ದೇವತೆಗಳು:- 1.-ಸೂರ್ಯ- ಇವನು ಒಮ್ಮೆ ಹಕ್ಕಿಯಂತೆಯೂ ಇನ್ನೊಮ್ಮೆ ಜಡದಂತೆಯೂ...!? ಕಾಣಿಸಿಕೊಳ್ಳುತ್ತಾನೆ. ಆದರೂ ಇವನಿಗೆ ‘ದೇವ’ ಪಟ್ಟವಂತೂ ಇದ್ದೇ ಇದೆ..! 2.-ಸವಿತೃ- ಇವನನ್ನು ‘ಸುವರ್ಣಪಾಣಿ’ ಎಂದಿರುವುದು ಅರ್ಥವಾಗುವುದಿಲ್ಲವಾದರೂ ಈತನು ಸಕಲ ಜೀವ ಜಂತುಗಳ ಚೇತನಾ ಶಕ್ತಿ ಎಂದು ವಿವರಿಸಲಾಗಿದೆ..! 

ಇದಲ್ಲದೇ ಅಚ್ಚರಿಯ ಅಂಶಗಳೆಂದರೆ, ಈ ಚೈತನ್ಯಗಳನ್ನು ನೀಡುವಲ್ಲಿನ ವೈವಿಧ್ಯವನ್ನು ಗಮನಿಸಿ ಅವನೊಂದಿಗೆ ‘ಅಜೈಕಪಾತ್’ ‘ವಿವಸ್ವಾನ್’ ಮತ್ತು ‘ರೋಹಿತ’ ಎಂಬವರನ್ನೂ  ಸೂರ್ಯಾಂಶಿಗಳೆಂದು ಗುರುತಿಸಿದೆ.
ಉಷಸ್ :- ಋಗ್ವೇದದಲ್ಲಿ ವರ್ಣಿಸಲ್ಪಟ್ಟ ಪ್ರಥಮ ಸ್ತ್ರೀ ದೇವತೆಯೆಂದರೆ ‘ಉಷಸ್’..! ಇಲ್ಲಿಂದಲೇ ಅನೇಕ ಸ್ತ್ರೀದೇವತೆಗಳಾದ ‘ರಾತ್ರಿ ದೇವಿ’, ‘ನಿಶಾ ದೇವಿ’ ಮುಂತಾದವರು ಕಾಣಿಸಿಕೊಳ್ಳುತ್ತಾರೆ..! ಅಪ್ರತಿಮ ಸೌಂದರ್ಯದ ವರ್ಣನೆಯೂ ಇಲ್ಲಿಂದಲೇ ಪ್ರಾರಂಭವಾಗುತ್ತದೆ..! ಇವಳು ದ್ಯುದೇವನ ಮಗಳು. ಸೂರ್ಯನೊಂದಿಗೆ ಗುರುತಿಸಿಕೊಳ್ಳುತ್ತಾಳೆ..!
ದ್ಯಾವಾಪೃಥಿವೀ :- ದ್ಯುದೇವನು ಈ ಎಲ್ಲ ದೇವತಾ ಕುಟುಂಬಕ್ಕೆ ಪಿತೃ ಸ್ಥಾನದಲ್ಲಿರುವವನು  ಹಾಗಾಗಿ ಇವನು ಪೃಥಿವೀ ದೇವಿಯೊಡನೆ ಯಾವಾಗಲೂ ಗುರುತಿಸಿಕೊಂಡಿದ್ದು ಈ ‘ದ್ಯಾವಾಪೃಥಿವೀ’ ಎಂಬ ಹೆಸರಿನಿಂದ. ವೇದದಲ್ಲಿ ಈ ದೇವತಾಯುಗ್ಮಕ್ಕೆ ‘ರೋದಸೀ’ ಎಂಬ ನಾಮಾಂತರವೂ ಹೇಳಲ್ಪಟ್ಟಿದೆ. ಪೃಥಿವೀಯು ಸಕಲರನ್ನೂ, ಸಕಲವನ್ನೂ ಸಾಕುತ್ತಿರುವವಳು....!

ವಾಯು:- ವಾಯುವೆಂದರೆ ಅಗೋಚರವೆಂದೂ ಗಮ್ಯವೆಂದೂ ಚಲನ ಶೀಲವೆಂದೂ ಗುರುತಿಸಲಾದ ‘ಗಾಳಿ’ಯ ದೇವತಾ ಸ್ವರೂಪವು. ಆದರೂ ಇವನಿಗೆ ಮಾನವ ಸ್ವರೂಪವನ್ನೇ ಹೇಳಲಾಗಿದೆ..! ಇವನೂ ಇಂದ್ರನೂ ಪರಸ್ಪರ ಮಿತ್ರರು..!
ಪರ್ಜನ್ಯ:- ಇವನೂ ವೇದೋಕ್ತವಾದ ಓರ್ವ ದೇವತೆ...! ಅಪ್ರತಿಮ ಶಕ್ತಿವಂತನೂ ಮಳೆ-ಮೋಡ-ಬಿರುಗಾಳಿಗಳ ದೇವತೆಯಾಗಿದ್ದಾನೆ. ಎಲ್ಲ ಸಸ್ಯಗಳ ಜನಕನೂ, ಜೀವಿಗಳ ಉತ್ಪಾದಕನೂ ಪರ್ಜನ್ಯನೇ ಆಗಿದ್ದಾನೆ...!
ಸ್ತ್ರೀ ದೇವತೆಗಳು :- ವೇದದಲ್ಲಿ ಆಗಲೇ ಹೇಳಿದಂತೆ ಮೂಲದಲ್ಲಿ ಯಾವ ಸ್ತ್ರೀ ದೇವತೆಯ ವರ್ಣನೆ ಬಾರದಿದ್ದರೂ ಹಿಂದಿನ ದೇವತೆಗಳಿಗೆಲ್ಲ ಮಾತೃ ರೂಪಗಳನ್ನು ಕಲ್ಪಿಸುವಾಗ ಅನೇಕ ಸ್ತ್ರೀ ದೇವತೆಗಳ ಹೆಸರುಗಳು ಬರುತ್ತವೆ. ಅವರಲ್ಲಿ ಉಷಸ್ ಮತ್ತು ಅದಿತಿ ಗಳಲ್ಲದೇ ಶ್ರೀ, ಪುರಂಧ್ರೀ, ವಾಕ್, ಧಿಷಣಾ, ಇಳಾ ಮುಂತಾದ ಹನ್ನೆರಡು ಸ್ತ್ರೀದೇವತೆಗಳ ಹೆಸರುಗಳಿವೆ. ಅದಲ್ಲದೇ ಇಂದ್ರಾಣೀ ಎಂಬ ದೇವತೆಯೂ ಪ್ರಸ್ತಾಪಿಸಲ್ಪಟ್ಟಿದ್ದಾಳೆ... ( ಶಚಿ ಇಂದ್ರನ ಪತ್ನಿ ಎಂಬ ಉಲ್ಲೇಖ ಕಂಡುಬರುವುದಿಲ್ಲ..!)
ದ್ವಂದ್ವ ದೇವತೆಗಳು :- ವೇದದಲ್ಲಿ ಅನೇಕ ದೇವತೆಗಳು ಅಲ್ಲ..ಬಹುತೇಕ ದೇವತೆಗಳು ಯುಗ್ಮಗಳಾಗಿಯೇ ಗುರುತಿಸಲ್ಪಡುತ್ತಾರೆ. ಮಿತ್ರಾವರುಣ, ದ್ಯಾವಾಪೃಥಿವೀ, ಇಂದ್ರಾವಿಷ್ಣೂ, ಇಂದ್ರಾಗ್ನೀ..... ಮುಂತಾಗಿ
ದೇವತಾ ಗಣಗಳು:-  ಆದಿತ್ಯರು, ಮರುದ್ಗಣಗಳು, ರುದ್ರಗಣಗಳು, ಮುಂತಾದವು ಗಣ ರೂಪದ ದೇವತೆಗಳು( ಗಣ-ಗುಂಪು) ಇವುಗಳಲ್ಲಿ ‘ವಿಶ್ವೇದೇವ ಗಣ’ ಅತ್ಯಮ್ತ ಹರವಾದುದಾಗಿದೆ. ಈ ಎಲ್ಲ ಗಣಗಳನ್ನೂ ವಿಶೇಷವಾಗಿ ಸ್ತೋತ್ರಗೈಯ್ಯುವ ಅನೇಕ ಸೂಕ್ತಗಳು ದೊರೆಯುತ್ತವೆ. 
ಋಭುಗಳು:- ಇವರು ಮೂರು ಜನ ( ಹೆಸರು ಉಲ್ಲೇಖ ಇದ್ದಿರಬಹುದಾದರೂ ಆ ಋಕ್ಕುಗಳ ಉಪಲಬ್ದಿಯಿಲ್ಲ) ಇವರು ದೇವತೆಗಳ ಸಾರಥಿಗಳು.
ಋಗ್ವೇದದ ಅಂತ್ಯ ಕಾಲಘಟ್ಟದಲ್ಲಿ ಬಂದ ದೇವತಾ ಮಂತ್ರಗಳಲ್ಲಿ ಅಪ್ಸರೆಯರು, ಗಂಧರ್ವರು ಹಾಗೂ ಯಕ್ಷರು ಎಂಬ ದೇವತಾ ಗಣಗಳು ಸ್ತೋತ್ರಮಾಡಲ್ಪಟ್ಟಿದ್ದಾರೆ..! ಅಪ್ಸರೆಯರು ಗಂಧರ್ವರ ಪತ್ನಿಯರೆಂದೂ ಇಂದ್ರನರಮನೆಯ ನಾಟ್ಯಾಂಗನೆಯರೆಂದೂ ವರ್ಣಿತವಾಗಿದೆ. ( ಇಲ್ಲಿಂದಲೇ ನಮಗೆ ಭರತ ಮುನಿಯ ನಾಟ್ಯಶಾಸ್ತ್ರದ ಮೂಲ ಸ್ರೋತ ಸಿಗುವುದು..!) ಗಂಧರ್ವರು ಶಬ್ದದ ಅಧಿದೇವತೆಗಳು..! ಮೇಘ, ಜಲ, ಇತ್ಯಾದಿಗಳ ರಕ್ಷಕರು. ಇವರು ಕಳ್ಳರುಕೂಡಾ ..! ಏಕೆಂದರೆ ಇಂದ್ರನ ಉಪಭೋಗಕ್ಕಿರುವ ಸೋಮವನ್ನೂ ಜಲವನ್ನೂ ಕದ್ದೊಯ್ಯುತ್ತಾರೆ ಎಂಬ ವರ್ಣನೆ ದೊರೆಯುತ್ತದೆ
ಈ ಮೇಲಿನ/ಹಿಂದಿನ ದೇವತೆಗಳ ವರ್ಣನೆ ಕೇವಲ ಸ್ತೋತ್ರಾತ್ಮಕವೆಂದು ಕೈಬಿಡುವಂತಿಲ್ಲ. ಇಲ್ಲಿ ಬರುವ ಅನೇಕ ದೇವತೆಗಳ ಗುಣವಿಶೇಷಗಳಲ್ಲಿ ವೈಜ್ಞಾನಿಕ ಅಂಶಗಳ ಮಹಾದಧಿ ಇದೆ... ಸಾಂದರ್ಭಿಕವಾಗಿ ವಿವರಣೆಯಲ್ಲಿ ನೋಡೋಣ.

ಯಜುರ್ವೇದ:
ಯಜುರ್ವೇದ ಸಂಹಿತೆಗಳು:- ಕೇವಲ ಯಜ್ಞದ ದೃಷ್ಟಿಯಿಂದ ಅಧ್ವರ್ಯುವಿನ ಉಪಯೋಗಕ್ಕಾಗಿ ಇರುವ ನಿಯಮಗಳ ಸಂಗ್ರಹವೇ ಈ ಯಜುರ್ವೇದ ಸಂಹಿತೆಯ ಮುಖ್ಯಾಂಶವಾಗಿದೆ. ಈಗಾಗಲೇ ತಿಳಿಸಿದಂತೆ ಛಂದೋರೂಪವಾದ ಮಂತ್ರಕ್ಕೆ ‘ಋಕ್’ ಎಂಬ ಹೆಸರಿನಿಂದ ಹೇಗೆ ಕರೆಯುತ್ತಾರೆಯೋ ಹಾಗೆಯೇ ಗದ್ಯರೂಪಾತ್ಮಕವಾದ ಯಜುರ್ವೇದೀಯ ವಚನಗಳಿಗೆ ‘ಯಜುಸ್’ ಅಥವಾ ‘ಬ್ರಾಹ್ಮಣ’ ಎಂಬ ಸಂಜ್ಞೆಯಿಂದ ಸೂಚಿಸುತ್ತಾರೆ. “ಅನಿಯತಾಕ್ಷರಾವಸಾನೋ ಯಜುಃ”..... “ಗದ್ಯಾತ್ಮಕೋ ಯಜುಃ” .... ಎಂಬ ಅನೇಕ ವಿವರಣೆಗಳು ಇದನ್ನು ತಿಳಿಸಿಕೊಡುತ್ತವೆ. ಮುಂದೆ ‘ಗೃಹ್ಯ’ ಹಾಗೂ ‘ಶ್ರೌತ’ ಸೂತ್ರಗಳು ವಿವರವಾಘಿ ಹೇಳುವ ಕರ್ಮಗಳ ಮೂಲರೂಪಗಳುಅತಿ ಪ್ರಾಚೀನವಾದ ‘ಯಜುರ್ವೇದ’ ದಲ್ಲಿಯೇ ದೊರಕುತ್ತದೆ..!ಉಪನಯನಾದಿ ಗೃಹ್ಯ ಸಂಸ್ಕಾರಗಳನ್ನೂ, ಶ್ರಾದ್ಧಾದಿ ಅಪರ ಕರ್ಮಗಳನ್ನೂ ಆಚರಿಸಲು ಒಬ್ಬ ಪುರೋಹಿತನ ನೆರವು ಸಾಕು, ಆದರೆ ಸೋಮಯಾಗಾದಿಗಳನ್ನೂ, ರಾಜಸೂಯಾದಿ ಯಜ್ಞಗಳನ್ನೂ ನಡೆಸಲು ಅನೇಕ ಬಗೆಯ ...? ಪುರೋಹಿತರುಗಳ ಅವಶ್ಯಕತೆಯಿದೆ. ಇವನ್ನೇ ‘ಶ್ರೌತ’ಕರ್ಮಗಳು ಎಂದು ತಿಳಿಸುವುದರೊಂದಿಗೆ ಈ ಎರಡೂ ಕರ್ಮಾಚರಣೆಗಳಿಗೂ ಮುಖ್ಯವಾದ ಗದ್ಯ-ಪದ್ಯಾತ್ಮಕ ಮಂತ್ರಗಳ ಮೊದಲ ಸಂಕಲನವೇ ಯಜುರ್ವೇದವೆಂದು ತಿಳಿಯಬಹುದಾಗಿದೆ.ಯಜ್ಞದ ಮುಖ್ಯವಾದ ನಾಲ್ವರು ಪುರೋಹಿತರುಗಳಲ್ಲಿ ‘ಹೋತೃ’ವಿಗೆ ಋಗ್ವೇದ ಸಂಬಂಧಿಸುವಂತೆ ಯಜುರ್ವೇದವು ‘ಅಧ್ವರ್ಯು’ವಿಗೂ, ಸಾಮವೇದವು ‘ಉದ್ಗಾತೃ’ವಿಗೂ ಸಂಬಂಧಿಸಿರುತ್ತದೆ. ಕರ್ಮಾಚರಣೆಗೆ ಅಗ್ರ ಪ್ರಾಶಸ್ತ್ಯವನ್ನಿತ್ತ ಭಾರತೀಯರು ಯಜುರ್ವೇದವನ್ನು ಹೆಚ್ಚಾಗಿ ಅಧ್ಯಯನ ಮಾಡುವ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ಸಹಜವೂ ಆಗಿದೆ.ಆದ್ದರಿಂದಲೇ ಈ ಯಜುರ್ವೇದವು ಅನೇಕ ಶಾಖೆಗಳನ್ನು ಹೊಂದುವಂತಾಗಿದೆ. ಇದರಲ್ಲಿ ಮೂಲದಲ್ಲಿ 101 ಶಾಖೆಗಳು ಇದ್ದವು ಎಂಬುದು ಪತಂಜಲಿಯ ‘ಮಹಾಭಾಷ್ಯ’ ದ ಪ್ರಸ್ಥಾವನೆಯಿಂದ ತಿಳಿದುಬರುತ್ತದೆ. ಆದರೆ ಈಗ ಉಪಲಬ್ಧಿಯಿರುವುದು ಕೇವಲ 6 ಮಾತ್ರ...! 
1. ಕಾಠಕಸಂಹಿತೆ
2. ಕಪಿಷ್ಠಲಕಠಸಂಹಿತೆ
3. ಮೈತ್ರಾಯಣೀಸಂಹಿತೆ
4. ತೈತ್ತರೀಯಸಂಹಿತೆ
5.ವಾಜಸವನೇಯೀ ಸಂಹಿತೆಯ ‘ಕಾಣ್ವ’ಶಾಖೆ .
6.ವಾಜಸನೇಯೀ ಸಂಹಿತೆಯ ಮಾದ್ಯಂದಿನ ಸಂಹಿತೆ.
ಇದರಲ್ಲಿ ಮೊದಲ ನಾಲ್ಕು ಸಂಹಿತಗಳಿಗೆ ‘ಕೃಷ್ಣಯಜುರ್ವೇದ’ವೆಂದೂ ಕೊನೇಯ ಎರಡು ಶಾಖೆಗಳಿಗೆ ‘ಶುಕ್ಲಯಜುರ್ವೇದ’ವೆಂದೂ ಕರೆಯುತ್ತಾರೆ. ಇಲ್ಲಿ ಈ ವಿಭಾಗಕ್ರಮಕ್ಕೆ ಕೊಟ್ಟ ಕಾರಣ ಇದರಲ್ಲಿ ಮೊದಲ ವಿಭಾಗವು ‘ಗದ್ಯಪದ್ಯಮಿಶ್ರಿತ’ವೂ, ಎರಡನೇಯದು ಕೇವಲ ಗದ್ಯಾತ್ಮಕವೂ ಇರುವುದಾಗಿದೆ. ಋಗ್ವೇದಕ್ಕೆ ‘ಸಾಯಣಭಾಷ್ಯ’ ವಿರುವಂತೆ ಕೃಷ್ಣಯಜುರ್ವೇದದ ತೈತ್ತರೀಯ ಸಂಹಿತೆಗೂ ಸಾಯಣರ ಭಾಷ್ಯವಿದೆ. ಇದರಲ್ಲಿ ಸಾಯಣಾಚಾರ್ಯರು ‘ಅನುಬಂಧಚತುಷ್ಟಯ’ವನ್ನು ಬಹುವಾಗಿ ವಿವರಿಸಿದ್ದಾರೆ.“ಇಷ್ಟಪ್ರಾಪ್ತ್ಯನಿಷ್ಟ ಪರಿಹಾರಯೋರಲೌಕಿಕಮುಪಾಯಂ ಯೋ ಗ್ರಂಥೋ ವೇದಯತಿ ಸ ವೇದಃ” ಎಂದರೆ ಯಾವ ಗ್ರಂಥವು ಇಷ್ಟಪ್ರಾಪ್ತಿ ಮತ್ತು ಅನಿಷ್ಟನಿವಾರಣಾ ರೂಪದ ‘ಅಲೌಕಿಕ’ ಉಪಾಯಗಳನ್ನು ಬೋಧಿಸುವುದೋ ಅದೇ ವೇದ ಎಂದು ವೇದ ಲಕ್ಷಣವನ್ನು ಹೇಳಿದ್ದಾರೆ...! ‘ಪ್ರತ್ಯಕ್ಷ ಅನುಮಾನಗಳಿಗೆ ಗೋಚರವಲ್ಲದ ಉಪಾಯವನ್ನು ಬೋಧಿಸುವುದೇ ‘ಶ್ರುತಿ’ ಯೆಂದು ಸ್ಪಷ್ಟಪಡಿಸುವುದಕ್ಕಾಗಿ ‘ಅಲೌಕಿಕ’ ಎನ್ನಲಾಗಿದೆ. “ಪ್ರತ್ಯಕ್ಷೇಣಾನುಮಿತ್ಯಾವಾ ಯಸ್ತೂಪಾಯೋ ನ ಬುಧ್ಯತೇ
ಏನಂ ವಿಂದತಿ ವೇದೇನ ತಸ್ಮಾತ್ ವೇದಸ್ಯ ದೇವತಾ||"
ಈ ವೇದಾಧಿಕಾರವು ‘ಉಪನಯನ’ ಸಂಸ್ಕಾರವಾದವರಿಗೆ ಮಾತ್ರ ಎಂಬ ಪರಂಪರೆಯ ಕಾರಣ ಸ್ತ್ರೀ ಶೂದ್ರಾದಿಗಳಿಗೆ ಉಪದೇಶಿಸುವ ಪರಿಪಾಠವಿರಲಿಲ್ಲ.  ವೇದವು ನಿತ್ಯವಾದುದರಿಂದ ಅದು ‘ಸ್ವಯಂಪ್ರಮಾಣ’. “ಸ್ವಾಧ್ಯಾಯೋಧ್ಯೇತವ್ಯಃ” ಎಂಬ ವಿಧಿವಾಕ್ಯಕ್ಕೆ ಅರ್ಥಜ್ಞಾನ ಪುರಸ್ಸರವಾಗಿ ವೇದಾಧ್ಯಯನ ಮಾಡಬೇಕು ಎಂಬುದೇ ಆಗಿದೆ.










ಭಾನುವಾರ, ಸೆಪ್ಟೆಂಬರ್ 6, 2015

ನನ್ನ ಇತಿಹಾಸದಲ್ಲೊಂದು ಇಣುಕು ನೋಟ.( ಹವ್ಯಕರು ಮತ್ತು ಮಠ)



         ಭಾರತೀಯ ಇತಿಹಾಸವನ್ನು ಇದಮಿತ್ಥಂ ಎಂದು ಇದುವರೆಗೆ ಯಾರೂ ಕಂಡು ಕೇಳಿದ್ದಿಲ್ಲ. ಇಲ್ಲಿನ ಇತಿಹಾಸಗಳೆಲ್ಲವೂ ಕೆಲವು ಶಾಸನಾಧಾರಿತವೂ ಕೆಲವು ಉಲ್ಲೇಖಗಳ ಆಧಾರಿತವೂ ಆಗಿದ್ದರೂ ಅನೇಕ ಐತಿಹಾಸಿಕ ಘಟನೆಗಳು ಕಪೋಲಕಲ್ಪಿತವಾದವುಗಳೇ ಆಗಿವೆ. ಇಂತಹ ಕಪೋಲ ಕಲ್ಪಿತ ಇತಿಹಾಸದ ಪುಟಗಳನ್ನು ತೆರೆಯುತ್ತ ಹೋದಾಗ ನನಗೆ ನಮ್ಮ ಈ ಹವ್ಯಕ ಪರಂಪರೆ ಮತ್ತು ಇತಿಹಾಸವನ್ನು ಕೆದಕುವ ಮನಸ್ಸಾಯಿತು. ಇದನ್ನೇ ಎಳೆಯಾಗಿರಿಸಿಕೊಂಡು ನನ್ನ ಅನೇಕ ಹಿರಿಯರು ಹಾಗೂ ಗೆಳೆಯರೊಂದಿಗೆ ಚರ್ಚಿಸಿದಾಗ ಬಂದ ಕೆಲವು ಮಾಹಿತಿಗಳನ್ನು ಇಲ್ಲಿ ಕಲೆಹಾಕುವ ಪ್ರಯತ್ಮ ಮಾಡಿದ್ದೇನೆ. ಅದೇ "ನಾವು ಮತ್ತು ನಮ್ಮ ಇತಿಹಾಸ"
( ಇಲ್ಲಿ ಬರುವ ವಿವರಣೆಗಳೆಲ್ಲವೂ ಸತಾರ್ಕಿಕವೇ ಹೊರತೂ ಯಾವುದೇ ಆಧಾರಗಳನ್ನು ಹೊಂದಿರುವುದಿಲ್ಲ.)
        ನೇರವಾಗಿ ಇತಿಹಾಸದ ಆಳಕ್ಕಿಳಿಯೋಣ... ಕಂಚಿಯ ಪಲ್ಲವರ ಮೇಲೆ ಕುಪಿತನಾದ ಕದಂಬರ ವಂಶಜನಾದ ಮಯ್ಯೂರ ಶರ್ಮ ಮಯ್ಯೂರ ವರ್ಮನಾದ ನೆಂಬ ಇತಿಹಾಸವನ್ನು ತಾವೆಲ್ಲರೂ ತಿಳಿದಿರುತ್ತೀರಿ. ಅಂತೆಯೇ ಅವನು ಈಗಿನ ಬನವಾಸಿಯನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು ಈ ನೆಲವನ್ನು ಆಳಿದನೆಂಬುದು ಎಲ್ಲರಿಗೂ ತಿಳಿದಿದೆ. ಈ ಮಯ್ಯೂರ ವರ್ಮ ಮೂಲತಃ ಗೋದಾವರೀ ತೀರದ ಅಹಿಚ್ಛತ್ರದವನು ಮೇಲಾಗಿ ಬ್ರಾಹ್ಮಣ ( ಪೂರ್ವ ನಾಮ ’ಮಯ್ಯೂರ ಶರ್ಮ...!) ಇವನು ಕರ್ನಾಟಕದ ಬನವಾಸಿಯಲ್ಲಿ ತನ್ನ ಸಂಸ್ಥಾನವನ್ನು ಕಟ್ಟಿಕೊಂಡಮೇಲೆ ಇಲ್ಲಿ ಯಜ್ಞ ಕಾರ್ಯಗಳನ್ನು ನಡೆಸುವ ಸಲುವಾಗಿ ತನ್ನ ಮೂಲಸ್ಥಾನವಾದ ಅಹಿಚ್ಛತ್ರದಿಂದಲೇ ಅನೇಕ ಬ್ರಾಹ್ಮಣರುಗಳನ್ನು ಕರೆಸಿದ್ದ. ಬಂದ ಬ್ರಾಹ್ಮಣರು ತಮ್ಮ ಯಜ್ಞ  ಕಾರ್ಯಾನಂತರ ಪುನಃ ಅಹಿಚ್ಛತ್ರಕ್ಕೇ ಹೊರಟು ಹೋಗಿದ್ದರು. ಆದರೆ ಅವನ ಮಗನಾದ ರವಿವರ್ಮ ಮತ್ತು ಮೊಮ್ಮಗನಾದ ಕಾಕುಸ್ಥವರ್ಮನು ತಮ್ಮ ಕಾಲದಲ್ಲಿ (ಅಂದರೆ ಸುಮಾರು ಕ್ರಿ.ಶ. 450-480) ಒಂದು ಮಹಾ ಯಜ್ಞವನ್ನು ನಡೆಸುವ ಸಲುವಾಗಿ ಮತ್ತು  ತಮ್ಮ ರಾಜ್ಯದಲ್ಲಿ ಅಗ್ನಿಹೋತ್ರಾದಿಗಳು ನಡೆದುಕೊಂಡು ಬರಬೇಕು ಎಂಬ ಕಾರಣಕ್ಕಾಗಿ ಪುನಃ ಅಹಿಚ್ಛತ್ರದಿಂದ 7 ಗೋತ್ರದ ಸುಮಾರು 32 ಬ್ರಾಹ್ಮಣರನ್ನು ಬನವಾಸಿಗೆ ಕರೆಸಿದ. ಅವರಲ್ಲಿ ಕೆಲವು ಗೋತ್ರದವರು ಕಡಿಮೆ ಸಂಖ್ಯೆಯಲ್ಲಿದ್ದರು. ಇನ್ನು ಕೆಲವು ಗೋತ್ರದವರು ಬಹುಸಂಖ್ಯೆಯಲ್ಲಿದ್ದರು.  ಬನವಾಸಿಯಲ್ಲಿ ಮಹಾಯಾಗವನ್ನು ನಡೆಸಿದ ನಂತರ ಆ ಬ್ರಾಹ್ಮಣರನ್ನು ತನ್ನದೇ ಸಾಮ್ರಾಜ್ಯದ ಒಂದು ಪ್ರದೇಶವಾದ ಈಗಿನ ’ಹೈಗುಂದ’ ಪ್ರಾಂತಕ್ಕೆ ಕರೆದೊಯ್ದು ಅಲ್ಲಿ ಅವರ ಯಜ್ಞ ಕಾರ್ಯಗಳಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿ ಇರಿಸಿದ. ( ಯಜ್ಞಕಾರ್ಯಗಳಿಗೆ ಮೂರು ಕಡೆ ನೀರನ್ನು ಒಂದು ಕಡೆ ಭೂಮಿಯನ್ನೂ ಹೊಂದಿರುವ ಪ್ರದೇಶವು ಅತ್ಯಂತ ಪ್ರಶಸ್ಥ ಎಂಬುದು ವೈದಿಕ ಮತ)
             ಹೀಗೆ ಹವ್ಯ-ಕವ್ಯಗಳನ್ನು ನಡೆಸುವ ಬ್ರಾಹ್ಮಣರು ಈ ಪ್ರದೇಶಕ್ಕೆ ಬಂದುದರಿಂದ ಇದನ್ನು "ಹೈಗುಂದ" ಎಂದು ಕರೆಯಲಾಯಿತು. ಅವರು ಹೈಗುಂದದಲ್ಲಿ ಯಜ್ಞಾದಿ ಕಾರ್ಯಗಳನ್ನು ನಡೆಸಿದರೂ ವಾಸಸ್ಥಳವು ಅದಕ್ಕೆ ಸಮೀಪವಿರುವ ಈಗಿನ ಅಗ್ರಹಾರ ( ಹೊನ್ನಾವರ- ಕುಮಟಾ ಮುಖ್ಯ ರಸ್ತೆಯಲ್ಲಿರುವ ) ವಾಗಿತ್ತು.
ಈಗ ಅಲ್ಲಿಗೆ ಬಂದ ಬ್ರಾಹ್ಮಣರಲ್ಲಿ ಈ ಯಜ್ಞ ಕಾರ್ಯವನ್ನು ನೋಡಿಕೊಳ್ಳುವ ಸಲುವಾಗಿ ಕೆಲವೊಂದು ಉಪಾಧಿಗಳನ್ನು ಅವರಲ್ಲಿಯೇ ಮಾಡಿಕೊಂಡರು ಅದು ಹೇಗೆಂದರೆ,
ಸಭಾಹಿತ - ಇವರು ಕಾಶ್ಯಪ ಗೋತ್ರದವರು
ಇವರದ್ದು ಒಂದೇ ಕುಟುಂಬ ಇದ್ದು ಒಮ್ದು ರೀತಿಯಲ್ಲಿ ಇದು ಧರ್ಮ ಪೀಠದ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.
ಹೆಗಡೆ - ಇವರು ವಾಸಿಷ್ಠ ಗೋತ್ರದವರು.
ಇವರು ಯಜ್ಞಕ್ಕೆ ಬೇಕಾದ ಯಾಜಮಾನ್ಯವನ್ನು ಹೊಂದಿದ್ದರು.
ಹೆಬ್ಬಾರ - ಇವರು ಗೌತಮ ಗೋತ್ರದವರು.
ಇವರದ್ದು ಯಜ್ಞದಲ್ಲಿ ವೇದಿಕೆಯ ನಿರ್ಮಾಣ ಹೊಣೆಯಾಗಿತ್ತು.
ಶಾನುಭೋಗ - ಇವರು ವಿಶ್ವಾಮಿತ್ರ ಗೋತ್ರದವರು
ಇವರದ್ದು ಲೆಕ್ಕಪತ್ರಗಳನ್ನು ಅರಸನಿಗೆ ಕೊಡುವ ಜವಾಬ್ದಾರಿಯಾಗಿತ್ತು.
ದೀಕ್ಷಿತ - ಇವರು ಜಮದಗ್ನಿ ಗೋತ್ರದವರು
ಇವರದ್ದು ಯಜ್ಞವನ್ನು ನಡೆಸಿಕೊಡುವುದಾಗಿತ್ತು.
ಮಧ್ಯಸ್ಥ - ಇವರು ಆಂಗೀರಸ ಗೋತ್ರದವರು.
ಇವರು ಈ ಬ್ರಾಹ್ಮಣರಲ್ಲಿ ಒಡಮೂಡುವ ಭಿನ್ನಾಭಿಪ್ರಾಯಗಳನ್ನು ಸರಿದೂಗಿಸುವುದಾಗಿತ್ತು.
ಯಾಜಿಗಳು - ಇವರು ಭಾರದ್ವಾಜ ಗೋತ್ರದವರಾಗಿದ್ದರು.
 ಇವರದ್ದು ಯಜ್ಞ ಕಾರ್ಯವನ್ನು ನೆರವೇರಿಸುವುದಾಗಿತ್ತು
ಹೀಗೆ ಯಜ್ಞ ಸಂಬಂಧಿಯಾದ ಎಲ್ಲ ಉಪಾಧಿಗಳನ್ನೂ ಹಂಚಿಕೊಂಡು ಸಭಾಹಿತರ ಧರ್ಮ ಮಾರ್ಗದರ್ಶನದಲ್ಲಿ  ಜೀವನವನ್ನು ಸಾಗಿಸಿಕೊಂಡು ಬರುತ್ತಿದ್ದರು 
{ Dr. N.R.Nayak ರವರ ’ಉತ್ತರಕನ್ನಡದ ಜಾನಪದ’ ಎಂಬ ಉದ್ಗ್ರಂಥದಲ್ಲಿ ಉಲ್ಲೇಖಿಸಿರುವಂತೆ ಕಾಕುಸ್ಥವರ್ಮನ ಕಾಲದಲ್ಲಿ ಅಹಿಚ್ಛತ್ರದಿಂದ ಬಂದ 32 ಬ್ರಾಹ್ಮಣರು ಇಲ್ಲಿಗೆ ಬಂದ ನಂತರದಲ್ಲಿ ಅಗ್ರಹಾರ ಮತ್ತು ಸುತ್ತಲಿನ ಆಕಾಲದಲ್ಲಿ ವಾಸವಿದ್ದ ’ಹಾಲಕ್ಕಿ’ ಜನಾಂಗದ ಹೆಮ್ಮಕ್ಕಳನ್ನು ವಿವಾಹವಾಗಿ ತಮ್ಮ ಸಂತಾನವನ್ನು ಬೆಳೆಸಿದರು ಎಂದಿದ್ದರೆ. Dr. G.L.Hegde/ Dr.L.R.Hegde ಯವರ ಪ್ರಕಾರ ಬಂದ 32 ಜನ ಕೇವಲ ಬ್ರಾಹ್ಮಣರಲ್ಲ ಅವರು ಸಪತ್ನೀಕರಾಗಿಯೇ ಇಲ್ಲಿಗೆ ಬಂದಿದ್ದರು. ಏಕೆಂದರೆ ಆಕಾಲದಲ್ಲಿ ಯಜ್ಞಕ್ಕೆ ಸಪತ್ನೀಕರಾಗಿಯೇ ಹೋಗಬೇಕಿತ್ತು. ಎಂಬ ಎರಡು ವಾದಗಳಿವೆ.}
      

************************************************************************
       ಹೀಗೇ ಅಗ್ರಹಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹವ್ಯಕರು ತಮ್ಮ ಬ್ರಾಹ್ಮಣ್ಯವನ್ನು ಮೆರೆಯುತ್ತಿರುವ ಸಂದರ್ಭದಲ್ಲಿ ಆ ಇಡೀ ಬ್ರಾಹ್ಮಣ ಸಮುದಾಯದ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಸಭಾಹಿತರು ಕಾಣಿಸಿಕೊಂಡರು ಮತ್ತು ಎಲ್ಲ ಬ್ರಾಹ್ಮಣರೂ ಸಭಾಹಿತರನ್ನು ಗುರು ಪೀಠವೆಂದು ನಡೆದುಕೊಳ್ಳುತ್ತಿದ್ದರು. ನಂತರದಲ್ಲಿ...
ಬ್ರಾಹ್ಮಣರ ಸಂತತಿ ಬೆಳೆಯುತ್ತಿದ್ದ ಹಾಗೇ ಈಗಿನ ಗೋಕರ್ಣ ಮತ್ತು ಗೋಕರ್ಣಕ್ಕೆ ತತ್ಸಂಬದ್ಧವಾದ ಧಾರೇಶ್ವರ ಗುಣವಂತೆ ಇಡಗುಂಜಿ ಮುಂತಾದ ಭಾಗಗಳಿಗೆ ತಮ್ಮ ವಿಸ್ತಾರವನ್ನು ಹೊಂದಿದರು.ಆ ವೇಳೆಗೆ ದಕ್ಷಿಣದಲ್ಲಿ ಕೋಟ, ಕೋಟೇಶ್ವರ, ಶಿವಳ್ಳಿ ಮೊದಲಾದ ಬ್ರಾಹ್ಮಣ ಕುಟುಂಬಗಳು ಬಂದಾಗಿತ್ತು.. ನಂತರದಲ್ಲಿ ಗುಣವಂತೆ ಪ್ರಾಂತದಲ್ಲಿ ವಾಸಿಸುತ್ತಿದ್ದ ಕೆಲ ಕುಟುಂಬಗಳು ಈಗಿನ  ದಕ್ಷಿಣ ಕನ್ನಡದ ’ವಿಟ್ಳ’ ಪ್ರಾಂತಕ್ಕೆ ವಲಸೆ ಹೋದರು ಅದಲ್ಲದೇ ಕೇರಳ ಪ್ರಾಂತಕ್ಕೂ ಕೂಡಾ ಈ ಹವ್ಯಕರು ವಲಸೆ ಹೋದರೆಂಬುದು ತಿಳಿದುಬರುತ್ತದೆ. ಹಾಗೆ ಹೋದ ಒಂದು ಕುಟುಂಬ ಕೇರಳದ ’ಕಾಲಟಿ’ ಎಂಬಲ್ಲಿ ನೆಲೆ ನಿಂತಿತ್ತು. ಅಲ್ಲಿನ ಒಬ್ಬ ಹವ್ಯಕ ಮಾಣಿಗೆ ಬಾಲ್ಯ ವಿವಾಹ ಏರ್ಪಟ್ಟು ಆ ಹೆಣ್ಮಗಳಿಗೆ ಒಂದು ಪುತ್ರ ಸಂತಾನವಾಗುತ್ತಿದ್ದಂತೆ ಗಂಡನು ತೀರಿಕೊಳ್ಳಲಾಗಿ ( ಶ್ರೀ ಶಂಕರರ ಚರಿತ್ರೆಯಲ್ಲಿ ಎಲ್ಲಿಯೂ ಅವರ ತಂದೆಯ ಕುರಿತಾದ ಯಾವ ಮಾಹಿತಿಯೂ ಲಭ್ಯವಾಗುವುದಿಲ್ಲ.) ಅವಳು ಬಾಲವಿಧವೆಯಾದಳು ಮತ್ತು ಅವಳ ಮಗನು ಬಾಲ್ಯದಲ್ಲಿಯೇ ಸಂನ್ಯಾಸವನ್ನು ಸ್ವೀಕರಿಸಿ ಸಕಲ ವೇದಗಳನ್ನೂ ಅಧ್ಯಯನ ಮಾಡಿದವನಾಗಿ ವಿಖ್ಯಾತನಾದ ಶ್ರೀ ಶಂಕರನೆನಿಸಿಕೊಂಡನು ಎಂಬುದು ತಥಾ ಕಥಿತ ಇತಿಹಾಸ ಅದರಂತೆ ವೇದ ವೇದಾಂಗಗಳನ್ನು ವೈದಿಕ ಧರ್ಮವನ್ನು ಈ ದೇಶದಲ್ಲಿ ನೆಲೆಗೊಳಿಸಲು ಇಡೀ ದೇಶವನ್ನು ಪರ್ಯಟನೆ ಮಾಡಿ ವೈದಿಕ ಮತವನ್ನು ಪ್ರಸಾರ ಮಾಡಿದ. ಶ್ರೀ ಶಂಕರರು ತಮ್ಮ ಮೂಲಸ್ಥಾನವಾದ ಈ ಹವ್ಯಕ ಪ್ರದೇಶಕ್ಕೆ ಬಂದು ಅಲ್ಲಿನ  ಅದುವರೆಗೆ ಧರ್ಮ ಪೀಠದಂತೆ ವರ್ತಿಸುತ್ತಿದ್ದ ಸಭಾಹಿತರನ್ನು ಗುರು ಪೀಠದ ಮುಖಾಂತರ ಧರ್ಮ ಕಾರ್ಯಗಳನ್ನು ನಡೆಸಿಕೊಂಡು ಬರುವಂತೆ ಕೇಳಿಕೊಂಡಾಗ ತಮ್ಮ ಸುಪರ್ದಿಯಲ್ಲಿದ್ದ ಧರ್ಮ ಪೀಠದ ಮಾನ್ಯತೆಯನ್ನು ಶ್ರೀ ಶಂಕರರ ಆಣತಿಯಂತೆ ಗೋಕರ್ಣದಲ್ಲಿ ಸಂಸ್ಥಾಪಿತವಾದ ಶ್ರೀ ಶಂಕರರ ಪ್ರ-ಪ್ರಥಮ ಅದ್ವೈತ ಪೀಠವೆಂದು ಘೋಷಿತವಾದ " ಸರ್ವತಂತ್ರ ಸ್ವತಂತ್ರ" ಇತ್ಯಾದಿ ಬಿರುದಾಂಕಿತವಾದ ಹವ್ಯಕ "ಮಂಡಲಾಧೀಶ್ವರ" ಪೀಠಕ್ಕೆ ಸರ್ವ ಸಮರ್ಪಣೆಯನ್ನು ಮಾಡಲಾಯಿತು.ಶ್ರೀ ಶಂಕರರ ಪ್ರಥಮ ಶಿಶ್ಯರಾದ ಶ್ರೀ ಸುರೇಶ್ವರಾಚಾರ್ಯರ ಶಿಷ್ಯರಿಗೆ ಈ ಧರ್ಮ ಪೀಠದ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು. ಆಕಾರಣಕ್ಕಾಗಿಯೇ ಇಂದಿಗೂ ಅನೂಚಾನವಾಗಿ ನಡೆಸಿಕೊಂಡು ಬಂದ ಪದ್ಧತಿಯನುಸಾರ ಈ ಸಭಾಹಿತ ಕುಟುಂಬಕ್ಕೆ ದೀಪಗಾಣಿಕೆ- ಪಾದಗಾಣಿಕೆ ಮೊದಲಾದ ಕಾಣಿಕೆಗಳಿಂದ ಮನಾಯಿ ಇರುತ್ತದೆ. ಅಲ್ಲದೇ ಸಭಾಹಿತ ಕುಟುಂಬವನ್ನು ’ಸರ್ವ ಮಾನ್” ಕುಟುಂಬ ಎಂದು ಸಾರಲಾಗಿದೆ. ಅಲ್ಲದೇ ಈ ಕುಟುಂಬದ ಸದಸ್ಯರು ಶ್ರೀ ಮಠಕ್ಕೆ ಆಗಮಿಸಿದಾಗ ಶ್ರೀ ಗುರುಗಳು ಸ್ವತಃ ಪೀಠದಿಂದ ಇಳಿದು ಬಂದು ಸಭಾಹಿತರನ್ನು ಕರೆದೊಯ್ದು ತಮ್ಮ ಬಲಭಾಗದಲ್ಲಿ ಆಸನವನ್ನು ಹಾಕಿ ಕೂರಿಸುವ ಕ್ರಮ ಇದೆ. ಅಲ್ಲದೇ ಸಭಾಹಿತರ ಕುಟುಂಬದಲ್ಲಿ ವರ್ಷದಲ್ಲಿ ಒಂದು ಗುರು ಪಾದುಕಾ ಪೂಜೆ ಹಾಗು ಗುರು ಭಿಕ್ಷವನ್ನು ಮಠದ ವತಿಯಿಂದಲೇ ನಡೆಸಿಕೋಂಡು ಬರಬೇಕೆಂಬ ವಿಧಿಯೂ ಇರುತ್ತದೆ.. 
    ಹೀಗೇ ಅನೇಕ ವರ್ಷಗಳ ವರೆಗೆ ಗೋಕರ್ಣವನ್ನು ಮೂಲಸ್ಥಾನವನ್ನಾಗಿಸಿಕೊಂಡು ನಡೆದುಕೊಂಡು ಬಂದ ಧರ್ಮ ಪೀಠವು ಗೋವಾದ ಗೋಮಾಂತಕರ ದಾಳಿಯನ್ನೆದುರಿಸಲಾಗದ ಅಂದಿನ ಇಲ್ಲಿನ ರಾಜ ಪ್ರಭುತ್ವವು ಗೋಕರ್ಣದಲ್ಲಿದ್ದ ಶ್ರೀ ಗುರು ಮಠವನ್ನು ಈಗಿನ ಕಡತೋಕೆಯ ಮಧ್ಯಭಾಗದಲ್ಲಿರುವ ಆ ಕಾಲದ ಹೆಬ್ಬಾರರುಗಳು ವಾಸವಾಗಿದ್ದ "ಹಳೆ ಮಠ" ಎಂಬಲ್ಲಿಗೆ ತಂದು ಅದನ್ನು " ಶ್ರೀ ರಘೂತ್ತಮ ಮಠ" ಎಂದು ಪುನಃ ಮರುನಾಮಕರಣ ಮಾಡಿ ಶ್ರೀಗಳನ್ನು ಇರಿಸಲಾಯಿತು. ಆದರೆ ಅಲ್ಲಿ ವಾಸವಾಗಿದ್ದ ಯತಿಗಳೊಬ್ಬರು ಅಲ್ಲಿನ ಕೆರೆಯಲ್ಲಿ ಸ್ನಾನಕ್ಕೆಂದು ಹೋದಾಗ ಅಲ್ಲಿ ಆಗಿನ ಹೆಬ್ಬಾರನ ಹೆಂಡತಿ ರಜಸ್ವಲೆಯಾಗಿದ್ದು ಅವಳು ಸ್ನಾನಕ್ಕೆ ಅದೇ ಕೆರೆಗೆ ಬಂದುದನ್ನು ಕಂಡು ಕುಪಿತರಾದ ಶ್ರೀಗಳು ವಂಶ ನಿರ್ವಂಶವಾಗಲೆಂದು ಶಪಿಸಿದರು. ಅಲ್ಲಿಂದೀಚೆಗೆ ಅಲ್ಲಿರುವ ಹೆಬ್ಬಾರ ಕುಟುಂಬವು ನಿರ್ನಾಮಗೊಂಡಿತು. ಈಗಲೂ ಅಲ್ಲಿ ಆ ಹೆಬ್ಬಾರರುಗಳು ವಾಸವಾಗಿದ್ದ ಬಗ್ಗೆ ದಾಖಲೆಗಳು ಹಾಗೂ ಹೆಬ್ಬಾರ ದೇವಸ್ಥಾನವೆಂದೇ ಕರೆಯಲ್ಪಡುವ ಒಂದು ದೇವಾಲಯವೂ ಇದೆ. ಹೀಗೆ ಶಾಪವನ್ನಿತ್ತ ಶ್ರೀಗಳು ಮುಂದೆ ಅದೇ ಕೆರೆಯನ್ನು ಉಪಯೋಗಿಸುವುದು ತರವಲ್ಲವೆಂದು ಹತ್ತಿರದಲ್ಲೇ ಇರುವ ಈಗಿನ ಮಠದ ಸಮೀಪಕ್ಕೆ ಹೋಗಿ ಅಲ್ಲಿ ಕುಟೀರವನ್ನು ಕಟ್ಟಿಕೊಂಡು ವಾಸಮಾಡತೊಡಗಿದರು ಎಂಬುದು ತಿಳಿದುಬರುತ್ತದೆ. ಆ ಕಾಲದ ಅಲ್ಲಿನ ಮಾಡಳಿಕನಾದ ಚಂದ್ರಸೇನನಿಗೂ ಶ್ರೀ ಮಠಕ್ಕೂ ಆಗಿನ ಸ್ವಾಮಿಗಳ ಶೀಘ್ರಕೋಪದ ಕಾರಣದಿಂದಾಗಿ ಅಷ್ಟು ಒಟ್ಟಂದದ ವ್ಯವಹಾರವಿರಲಿಲ್ಲ..!
            ಇಲ್ಲಿಗೆ ಸುಮಾರು 28 ಯತಿ ಪರಂಪರೆಯು ಕಾಲವಾದುದಾಯಿತು. ಈಗ ಇತಿಹಾಸದ ದಿಕ್ಕು ಬದಲಾಗುತ್ತದೆ. ಇದು ತಾರ್ಕಿಕವಾದುದರಿಂದ ಯಾರೂ ಬೇಸರಗೊಳ್ಳುವ ಅಗತ್ಯವಿಲ್ಲ. ಸತ್ಯದೆಡೆಗೆ ಸಾಗುವುದಕ್ಕೊಂದು ದಾರಿ ಅಷ್ಟೇ.
           ಈಗ ನಾವು ಶ್ರೀ ಪೀಠ ಸ್ವರ್ನವಳ್ಳಿಯ  ಇತಿಹಾಸದ ಕಡೆಗೆ ಸ್ವಲ್ಪ ನೋಡೋಣ.
    "ಸ್ವರ್ನವಳ್ಳಿ" ಇದು ಈಗಿರುವ ಸ್ಥಳದಲ್ಲಿಯೇ ಪ್ರಾರಂಭವಾದ ಧರ್ಮ ಪೀಠವಲ್ಲ. ಶ್ರೀ ರಘೂತ್ತಮ ಮಠದ ಇತಿಹಾಸ ಮತ್ತು ಯತಿ ಪರಂಪರೆಯನ್ನು ಮತ್ತು ಶ್ರೀ ಸಂಸ್ಥಾನ ಸ್ವರ್ನವಳ್ಳಿಯ ಪೀಠ ಮತ್ತು ಯತಿ ಪರಂಪರೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ನಮಗೆ ಹಿಂದಿನ 6 ತಲೆಮಾರಿನವರೆಗಿನ ಯತಿಗಳ ಬಗ್ಗೆ ಯಾವುದೇ ಮಾಹಿತಿ ಸರಿಯಾಗಿ ಲಭ್ಯವಾಗುವುದಿಲ್ಲ.
ನಾನು ಮೇಲೆ ತಿಳಿಸಿದಂತೆ ಹಳೇಮಠದಿಂದ ನಿರ್ಗಮಿಸುವಾಗ ಆ ಕಾಲದಲ್ಲಿದ್ದ ಶ್ರೀ ನರಸಿಂಹ ಭಾರತೀ ಶ್ರೀಗಳು ಶಿಷ್ಯ ಸ್ವೀಕಾರ ಮಾಡಿಯಾಗಿತ್ತು. ಆದರೆ ಅವರೊಳಗಿನ ಭಿನ್ನಾಭಿಪ್ರಾಯದಿಂದಾಗಿ ಕಿರಿಯ ಶ್ರೀಗಳು ಮಠವನ್ನು ತೊರೆದು ಸಮೀಪದಲ್ಲೇ ಇರುವ " ಮೇಲಿನ ಮಠ" ಎಂಬಲ್ಲಿಗೆ ತಮ್ಮ ವಾಸಸ್ಥಳವನ್ನು ಬದಲಾಯಿಸಿಕೊಂಡರಲ್ಲದೇ ಮೊದಲಿನ ಮಠಕ್ಕೂ ತಮಗೂ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಆಕಾಲದ ಚಂದಾವರ ಪ್ರಾಂತದ ಮಾಂಡಳಿಕನಾದ ಚಂದ್ರಸೇನನಿಗೆ ಅರುಹಲಾಗಿ. ಅವನು ಈ ಗುರ್ ಪೀಠಕ್ಕೂ ಒಂದು ಸ್ಥಾನವನ್ನು ಕಲ್ಪಿಸಿ ತನ್ನ ಒಕ್ಕಲುತನವನ್ನು ಈ ಪೀಠಕ್ಕೇ ಸಮರ್ಪಿಸಿ ಮಠಕ್ಕೆ ಬೇಕಾದ ಆದಾಯಕ್ಕಾಗಿ ಸಮೀಪದ "ಅಂಸಳ್ಳಿ" ಹಾಗೂ "ಬಾದಳ್ಳಿ" ಎಂಬೆರಡು ಗ್ರಾಮಗಳನ್ನು ಉಂಬಳಿಯಾಗಿ ನೀಡಿ ಮೇಲಿನ ಮಠವೆಂಬ ಪ್ರದೇಶದಲ್ಲಿ ಮಠವನ್ನೂ ನಿರ್ಮಿಸಿಕೊಟ್ತನು. ಅಲ್ಲಿ ಬಂದ ಯತಿಗಳು ಅಕಾಲ ಮೃತ್ಯುವಿಗೆ ತುತ್ತಾಗಲಾಗಿ ಮುಂದೆ ರಾಜನ ಇಚ್ಛೆಯಂತೆ ಶ್ರೀ ಕ್ಷೇತ್ರ ಮತ್ತು ಆಮ್ನಾಯ ಪೀಠವಾದ ಶೃಂಗೇರಿಯಿಂದ ಸನ್ಯಾಸ ದೀಕ್ಷೆ ಕೊಡಿಸಿ ಅಲ್ಲಿಗೆ ಓರ್ವ ಪೀಠಾಧಿಪತಿಯನ್ನು ನಿಯಮಿಸಿಕೊಳ್ಳಲಾಯಿತು. ಮತ್ತು ಮುಂದೆ ಅದು "ಸರಸ್ವತೀ ಪೀಠ"ವಾಗಿ ಬೆಳೆದು ಬಂತು...!
   ಕಾಲಕ್ರಮದಲ್ಲಿ ಅಗ್ರಹಾರ ಹಾಗೂ ಸುತ್ತ ಮುತ್ತಲು ವಾಸಿಸುತ್ತಿದ್ದ ಬ್ರಾಹ್ಮಣ ( ಹವ್ಯಕ) ಕುಟುಂಬಗಳು ಜೀವನ ನಿರ್ವಹಣೆಗಾಗಿ ಘಟ್ಟದ ಮೇಲಿನ ಪ್ರಾಂತಗಳಿಗೂ ಹೋಗತೊಡಗಿದರು. ಈ ಮೇಲಿನ ಮಠಕ್ಕೆ ನಡೆದುಕೊಳ್ಲುತ್ತಿದ್ದ ಅನೇಕ ಕುಟುಂಬಗಳು ಹೋಗಿ ಸಿರ್ಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳಲ್ಲಿ ನೆಲೆಸಲಾಗಿ ಇಲ್ಲಿ ಅಂಸಳ್ಳಿ ಬಾದಳ್ಳಿ ಪ್ರದೇಶಗಳಿಂದ ಬರುವ ಆದಾಯವೂ ಕ್ಷೀಣಿಸುತ್ತಾ ಬದಿರುವುದರಿಂದ ಮೇಲಿನ ಮಠದಲ್ಲಿ ಇರುವ ಶ್ರೀಗಳು ಇಲ್ಲಿಂದ ಕಾಶೀ ಕ್ಷೇತ್ರಕ್ಕೆ ಹೋಗಿ ಅಲ್ಲೇ ತಂಗಿದ್ದರು ಇಲ್ಲಿಗೆ ಸುಮಾರು 3 ಜನ ಯತಿಗಳು ಈ ಮೇಲಿನ ಮಠದಲ್ಲಿ ವಾಸವಿದ್ದ ಬಗ್ಗೆ ಕುರುಹುಗಳು ಲಭ್ಯವಿವೆ. ಅಲ್ಲದೇ ಇನ್ನೊಂದು ವಿಶೇಷವೆಂದರೆ, ಈ ಮೇಲಿನ ಮಠದಲ್ಲಿ ಇರುವ ಶ್ರೀ ಸರ್ವಜ್ಞೇಂದ್ರ ಸರಸ್ವತಿ, ಶ್ರೀ ವಿಶ್ವ ವಂದ್ಯ ಸರಸ್ವತಿ ಮುಂತಾದ ಮೂರು ಯತಿ ಪರಂಪರೆಯನ್ನೊಳಗೊಂಡ ಮುಂದೆ ಸ್ವರ್ನವಲ್ಲೀ ಕ್ಷೇತ್ರದಲ್ಲಿ  ವಿಜೃಂಭಿಸಿದ ಯತಿಗಳನ್ನು ಹೊರತು ಪಡಿಸಿದರೆ ಈ ಎರಡೂ ಶ್ರೀ ಮಠಗಳ ಯತಿ ಪರಂಪರೆಯು ಒಂದೇ ಆಗಿರುವುದು ಸೋಜಿಗ.! ಹೀಗೆ ಮೇಲಿನ ಮಠದಲ್ಲಿ ಆದಾಯದ ಕೊರತೆಯುಂಟಾಗಿ ಶ್ರೀಗಳು ಕಾಶೀ ಕ್ಷೇತ್ರದ ಕಡೆಗೆ ಹೋದರು. ಮತ್ತು ನಂತರದಲ್ಲಿ ಈ ಘಟ್ಟದ ಮೇಲಿನ ಹವ್ಯಕರು ತಮ್ಮ ಊರಿಗೆ ಕರೆತಂದು ಈಗಿನ ಸ್ವರ್ನವಳ್ಳಿಯಲ್ಲಿ ಮಠವನ್ನು ನಿರ್ಮಿಸಿ ಅಲ್ಲಿ ಶ್ರೀಗಳ ಆವಾಸಕ್ಕೆ ವ್ಯವಸ್ಥೆಯನ್ನು ಮಾಡಿದರು ಅಲ್ಲದೇ ಅಲ್ಲಿಗೆ ನಡೆದುಕೊಳ್ಲಲು ಪ್ರಾರಂಭಿಸಿದರು. ಈ ಸ್ವರ್ನವಳ್ಳಿ ಮಠಕ್ಕೆ ಚಂದ್ರಸೇನನ ಕಾಲದಿಂದ ಇಲ್ಲಿ ಕಡತೋಕೆಯ ಮೇಲಿನ ಮಠಕ್ಕೆ ನಡೆದುಕೊಳ್ಳುತ್ತಿದ್ದ ರಾಮ ಕ್ಷತ್ರಿಯ ಸಮಾಜದವರೂ  ಅಲ್ಲಿ ಹೋಗಿ ತಮ್ಮ ಗುರುಕಾಣಿಕೆಯನ್ನು ಸಮರ್ಪಿಸಿ ಬರಲಾರಂಭಿಸಿದರು....
ಹವ್ಯಕರ ಇನ್ನೊಂದು ಧರ್ಮ ಪೀಠ- "ನೆಲೆಮಾವು ಮಠ"

     ಹೈಗುಂದ ಪ್ರಾಂತವು ಅದಾಗಲೇ ಶರಾವತೀ ನೀರಿನ ಪ್ರಭಾವದಿಂದಾಗಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿತ್ತು. ಆ ಕಾಲಕ್ಕೆ ಅಲ್ಲಿ ಧರ್ಮ ಸೂಕ್ಷ್ಮಗಳನ್ನು ತೀಲಿಸುವ ಸಲುವಾಗಿ ಒಂದು ಪೀಠ ಸ್ಥಾಪನೆಯಾಗಿತ್ತು. ಚತುರಾಮ್ನಾಯ ಪೀಠಸ್ಥರಾದ ಶ್ರೀ ಶೃಂಗೇರಿ ಸಂಸ್ಥಾನದ ವತಿಯಿಂದ  ಸಂನ್ಯಾಸ ದೀಕ್ಷೆಯನ್ನು ಪಡೆದ ಯತಿವರರೊಬ್ಬರು ಸಾಮ ವೇದಿಗಳು..! ಅಲ್ಲಿ ನೆಲೆ ನಿಂತಿದ್ದರು ಮತ್ತು ಆ ಭಾಗದ ಜನರಿಗೆ ಧರ್ಮ ಗುರುವೆನ್ನಿಸಿಕೊಂಡು ತಮ್ಮ ಧರ್ಮಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಅಲ್ಲಿಯೂ ಆದಾಯ ಕ್ಷೀಣವಾಗಿರುವುದರಿಂದ ಮತ್ತು ಆ ಭಾಗದಲ್ಲಿ ಆಗ ತಲೆದೋರಿದ ಮೈಲಿ ಬೇನೆ ರೋಗದ ಕಾರಣ ಶ್ರೀಗಳು ವಿಚಲಿತರಾಗಿ ಘಟ್ಟದ ಪ್ರಾಂತಕ್ಕೆ ತಮ್ಮ ಆವಾಸವನ್ನು ಬದಲಿಸಲು ಮುಂದಾದರು. ಆಗ ಅವರು ಈಗಿನ ಸಿದ್ದಾಪುರದ ಸಮೀಪದ " ನೆಲೆ ಮಾವು" ಎಂಬಲ್ಲಿಗೆ ತೆರಳಿ ಅಲ್ಲಿ ವಾಸಮಾಡತೊಡಗಿದರು. 
    ಹೀಗೆ ಹವ್ಯಕರದ್ದಾಗಿ ಮೂರು ಧರ್ಮ ಪೀಠಗಳು ನಮ್ಮ ಸಮಾಜದ ಧರ್ಮ ಜಾಗೃತಿಯನ್ನು ಮುನ್ನಡೆಸಿಕೊಂಡು ಬಂದವು.
ಇಷ್ಟಾದರೂ ಇದರ ಇತಿಹಾಸ ನಿರ್ಣಾಯಕವಲ್ಲ. ಇನ್ನೂ ನಮಗೆ ಬೇಕಾದಷ್ಟು ಕಪೋಲ ಕಲ್ಪಿತ ಕಥೆಗಳು ದೊರೆಯುತ್ತಿವೆ. ಅವುಗಳನ್ನು ತಾರ್ಕಿಕವಾಗಿ ಕಾಲಾನುಕ್ರಮಕ್ಕೆ ಹೊಮ್ದಿಸಿ ಪರಾಮರ್ಶಿಸಿ ಬರೆಯಬೇಕಿದೆ.














ಶನಿವಾರ, ಮಾರ್ಚ್ 14, 2015

ಬ್ರಹ್ಮಣಸ್ಪತಿಯ ಗಣಪತಿ ರೂಪ.

ವೇದಗಳ ಬ್ಸಹ್ಮಣಸ್ಪತಿಯಿಂದ ಪೈರಾಣಗಳ ಗಣಪತಿಯವರೆಗೆ
ವೇದಗಳ ಬ್ಸಹ್ಮಣಸ್ಪತಿಯಿಂದ ಪೈರಾಣಗಳ ಗಣಪತಿಯವರೆಗೆ

.....ಭಾರತದ ದೇವತಾಶಾಸ್ತ್ರದಲ್ಲಿ , ಇಂದಿಗೆ ಹಿಂದೂ ಧರ್ಮದಲ್ಲಿ ಪ್ರಚಲಿತವಿರುವ, ಸಂಸ್ಕೃತ ಸಾಹಿತ್ಯಗಳಲ್ಲಿ ಉಲ್ಲೇಖೀಸಲ್ಪಡುವ ದೇವತೆಗಳನ್ನು -1. ವೈದಿಕ ಅರ್ಥಾತ್‌ ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವ ವೇದಗಳಲ್ಲಿ ನೇರವಾಗಿ ಹೇಳಲ್ಪಟ್ಟಿರುವ ದೇವತೆಗಳು. 2. ಪುರಾಣೋಕ್ತ (ವೈಷ್ಣವ, ಶೈವ-ಶಾಕ್ತ, ಮತ್ತು ಗಾಣಪತ್ಯ) ಮತ್ತು 3. ಪುರಾಣ -ಆಗಮೋಕ್ತ (ಪುರಾಣ ಮತ್ತು ಶೈವ-ಶಾಕ್ತ, ವೈಷ್ಣವ ಆಗಮಗಳೆರಡರಲ್ಲೂ ಹೇಳಲ್ಪಟ್ಟ) ಎಂಬ ಮೂರು ವರ್ಗಗಳಾಗಿ ಗುರುತಿಸಬಹುದು.
ಇಂದ್ರ, ಅಗ್ನಿ , ಮರುತ್ತುಗಳು, ಪ್ರಜಾಪತಿ, ರುದ್ರ-ಶಿವ, ವಿಷ್ಣು, ಶಚೀ, ವಾಗಂಭ°ಣೆ ಮಿತ್ರ, ಸೂರ್ಯ- ಇತ್ಯಾದಿ ದೇವತೆಗಳು ನೇರವಾಗಿ ನಿರ್ದಿಷ್ಟ ಸೂಕ್ತಗಳ ಮೂಲಕ ವೇದಸಾಹಿತ್ಯದಲ್ಲಿ ಹೇಳಲ್ಪಟ್ಟ ದೇವತೆಗಳು. ಋಗ್ವೇದದಲ್ಲಿ ಗಣಪತಿಯು ಹೇಳಲ್ಪಟ್ಟಿರುವನಾದರೂ, ಅದು ಬೃಹಸ್ಪತಿ-ಬ್ರಹ್ಮಣಸ್ಪತಿಗೆ (ಋ. 2.23.1) ಅಥವಾ ಇಂದ್ರನಿಗೆ (ಋ. 8.81) ಮತ್ತೂಂದೆಡೆ "ಗಣೇಶಾನ' ಎಂದು ಶಿವನಿಗೆ ವಿಶೇಷಣವಾಗಿ ಅನ್ವಯಿಸುವ ಪದ. ಅದು ನಾವಿಂದು ನಂಬಿರುವ ವಕ್ರತುಂಡ, ಗಜಾನನನಾದ ಶಿವ-ಪಾರ್ವತಿಯರ ಪುತ್ರ ಗಣಪತಿಯಲ್ಲ. ಗಣಾನಾಂತ್ವಾ ಗಣಪತಿಂ... ಎನ್ನುವ ಸೂಕ್ತ "ಕವಿ, ಜ್ಯೇಷ್ಠರಾಜ, ಬ್ರಹ್ಮಣಾಂ ಬ್ರಹ್ಮಣಸ್ಪತಿ'ಯೆಂದು ಬೃಹಸ್ಪತಿಗೆ ಸಂಬಂಧಿಸಿದ್ದು. ಅದೇ ರೀತಿ ಋ. 8.81ರ ಸೂಕ್ತ ಆತೂನ ಇಂದ್ರಕ್ಷುಮಂತಂ... ಅನ್ನುವ ಇಂದ್ರನ ಕುರಿತಾದದ್ದು. ಋಷಿಗಣದ ರಾಜ (ಋಕ್ವತ್ತುಗಳ) ಬ್ರಹ್ಮಣಸ್ಪತಿ.
ಮರುತ್ತುಗಳ ಗಣರಾಜ ಇಂದ್ರ. ಒಂದು ಗಣವು ಏಳು ಸಂಖ್ಯೆಯುಳ್ಳದ್ದೆನ್ನುವ ಅರ್ಥದಲ್ಲಿ ಋಗ್ವೇದದಲ್ಲಿ ಬಳಸಲಾಗಿದೆ. ಸಪ್ತ ಮರುತ್ತು (ಇದು ಪ್ರಾಚೀನ ಬ್ಯಾಬಿಲೋನ್‌, ಈಜಿಪ್ತ್ , ಗ್ರೀಕ್‌ ಪುರಾಣಗಳಲ್ಲೂ ಹೇಳಲ್ಪಟ್ಟಿದೆ)ಗಳ ಅಧಿಪತಿ ಇಂದ್ರ. ದೇವತೆಗಳ ರಾಜ ಬ್ರಹ್ಮಣಸ್ಪತಿ. ಅದೇ ರೀತಿ ರುದ್ರನೂ ಮರುತ್ತುಗಳ ಗಣದ ಪತಿಯಾದ, "ಈಶಾನ'-"ಗಣೇಶಾನ'. ಇದು ಬಿಟ್ಟರೆ ರುದ್ರಪುತ್ರನಾದ "ಗಜಾನನ' - ಗಣೇಶಾನ ವೇದಗಳಲ್ಲಿ ಕಾಣುವುದಿಲ್ಲ. ಪ್ರಾಚೀನ ಬ್ಯಾಬಿಲೋನಿನ ಹಮ್ಮುರಬಿ (ಕ್ರಿ. ಪೂ. 2600)ಯ ಕಾಲದ ಮರುತ್ತುಗಳ ದೇವತೆ "ಮರ್ಧುಕ್‌' (ಮುಂದಕ್ಕೆ ರೋಮನರ ದೌÂ-ಪಿತರ = "ಜ್ಯುಪಿಟರ್‌' ಏಳು ಪ್ರಚಂಡ ಮಾರುತರುಗಳ ಅಧಿಪತಿ)ನಿಗೆ ಸಮಾನವಾದ ಭಾರತದ ಜ್ಯುಪಿಟರ್‌ ಬ್ರಹ್ಮಣಸ್ಪತಿ = ಬೃಹಸ್ಪತಿ.
ಗಜಾನನನ ಕಲ್ಪನೆಯೇ ವೇದೋತ್ತರ ಕಾಲದ್ದು. ಆದರೆ, ಮುಂದಿನ ಗಜಾನನ ಗಣಪತಿಗೆ ಸಲ್ಲುವ ಅನೇಕ ಲಕ್ಷಣಗಳು ಋಗ್ವೇದದ ಗಣಪತಿಯಲ್ಲೂ ಕಾಣಬಹುದು-ಕವಿ, ವಿಪ್ರತಮ, ಜ್ಯೇಷ್ಠರಾಜ, ಪರಶುಧಾರಿ, ಸ್ವರ್ಣಕಾಂತಿ ಶರೀರದವ, ಬೃಹತ್‌ ಶರೀರಿ. ಇವಲ್ಲದೆ ಇತರ ವಿಶೇಷಣಗಳೆಂದರೆ - ದೇವಪುರೋಹಿತ, ಋಕ್ವತ್ತುಗಳ ಗಣದ ಮುಖ್ಯಸ್ಥ , ಇಂದ್ರಸಖ, ಇಂದ್ರನ ಒಟ್ಟಿಗಿರುವವ =ಇಂದ್ರಯುಜಾ = ಅವನೊಡನೆ ಸೋಮಪಾನ ಮಾಡುವವ (2. 23.18), ಇಂದ್ರನಂತೆ ವಜ್ರಿಣಃ (ಋ. 1.40. 8), ದೇವತೆಗಳಲ್ಲಿ ದೇವತಮ (2.24.3), ಸ್ತುತಿಸದವರನ್ನು ನಿಗ್ರಹಿಸುವವ (2. 25.1, 2.23.4) ಇತ್ಯಾದಿ. ಹೀಗಾಗಿ, ಈತ ಬ್ರಹ್ಮಣಸ್ಪತಿಯಾದ ಬೃಹಸ್ಪತಿಯೇ ಆಗಿದ್ದಾನೆಂಬ ಅರ್ಥ ಬರುತ್ತದೆ. ಅಂದಿನ ಯಜ್ಞಯಾಗಾದಿಗಳಲ್ಲಿ ಯಜ್ಞವೇದಿಯ ಬಳಿ ಪೀಠಸ್ಥನಾಗಿ, ಜಾತವೇದ ಅಗ್ನಿಯ ಸಮೀಪದಲ್ಲಿ ಪ್ರಥಮಪೂಜ್ಯನಾಗಿ, ಪೂರ್ವಭಾಜ್ಯನಾಗಿ ಪರಿಗಣಿಸಲ್ಪಡುವವನು. ಶೌನಕರು ಬ್ರಹದ್ದೇವತಾದಲ್ಲಿ "ಬೃಹತ್ತಾದ ಸ್ವರ್ಗಾಂತರಿಕ್ಷವನ್ನು ತನ್ನ ಶ್ರೇಷ್ಠವಾದ ಕರ್ಮದಿಂದ ರಕ್ಷಿಸುವವ' ಎಂದು ಅರ್ಥ ನೀಡುತ್ತಾರೆ. ಅಲ್ಲದೆ, ವಾಕ್ಕೇ ಬ್ರಹ್ಮ, ಸತ್ಯವೇ ಬ್ರಹ್ಮ , ಸಮಸ್ತ ಪ್ರಪಂಚವೂ ಬ್ರಹ್ಮವೇ ಆಗಿರುವುದು. ಬ್ರಹ್ಮ ಸ್ವರೂಪವಾದ ಇವೆಲ್ಲವನ್ನು ರಕ್ಷಿಸುವವನೇ "ಬ್ರಹ್ಮಣಸ್ಪತಿ' ಎಂದೂ ಹೇಳುತ್ತಾರೆ (ಬ್ರಹ್ಮವಾ ಬ್ರಹ್ಮ ಸತ್ಯಂ... ಪಾತಾರಂ ಬ್ರಹ್ಮರಾಸ್ತೇನ). ಹೀಗಾಗಿ, ಪ್ರಜಾಪತಿ ಬ್ರಹ್ಮನೇ ಈತನೆಂಬ ಅರ್ಥವನ್ನದು ಸೂಚಿಸುತ್ತದೆ. ಹೀಗಾಗಿಯೇ ಆತನನ್ನು ಮುಂದಿನ ಗಣೇಶ ಪುರಾಣ, ಮುದ್ಗಲ ಪುರಾಣ, ಅಥರ್ವಶೀರ್ಷ ಉಪನಿಷತ್ತುಗಳು ಪರಬ್ರಹ್ಮನಾಗಿ ವರ್ಣಿಸಲು ಆಧಾರವಾಗಿ ಬಳಸಿಕೊಂಡಿವೆ. ಇವುಗಳ ಪ್ರಕಾರ ಗಣೇಶನೊಬ್ಬ ದೇವತೆ ಮಾತ್ರವಲ್ಲ- ದೇವಾಧಿದೇವ-ಪರಬ್ರಹ್ಮನಾಗುತ್ತಾನೆ. ಪ್ರಾಕಾರ ದೇವತೆಯಲ್ಲ , ಪ್ರಧಾನ ದೇವತೆಯಾಗುತ್ತಾನೆ- ದೇವಾಲಯದಲ್ಲಿ.
ಶುಕ್ಲಾಂಬರಧರಂ ವಿಷ್ಣುಂ...
ಋಗ್ವೇದ ಮಂಡಲ 4. 50ರಲ್ಲಿ ಇಂದ್ರನ ಜತೆ ಬೃಹಸ್ಪತಿಯ ಸ್ತುತಿಯಿದೆ. ಆತ ಋಕ್ವತ್ತುಗಳ ಪತಿ (ಋಕ್ವತಾ ಗಣೇನ ವಲಂ). ಪೂರ್ವಭಾಜ (ವಂದತೇ ಪೂರ್ವಭಾಜಂ) ಇಂದ್ರನ ಜತೆ ಸೋಮಪಾನ ಮಾಡುವಾತ (ಇಂದ್ರಶ್ಚ ಸೋಮಂ ಪಿಬತಂ). ಋ. 8.96ರಲ್ಲಿ ಇಂದ್ರಾಬೃಹಸ್ಪತಿಯರ ಸ್ತುತಿ. ಇಂದ್ರ ವೃತ್ತನನ್ನು ಕೊಲ್ಲಲು ತ್ರಿಷಷ್ಟಿ (63) ಮರುತ್ತುಗಳ ಜತೆ ವಜ್ರಬಾಹುವಾಗಿ ಹೊರಡುವುದನ್ನು ಹೇಳುತ್ತದೆ. ಇಲ್ಲಿ ಮರುತ್ತುಗಳ ಒಡೆಯ ಇಂದ್ರನೇ ಬೃಹಸ್ಪತಿಯೂ ಆಗಿದ್ದಾನೆ. ಆತನೇ ವೃತ್ರನನ್ನು ವಧಿಸಿ ಶುಷ್ಕತೆಯನ್ನು ಹೋಗಲಾಡಿಸಿ, ಸ್ವರ್ಗಾಂತರಿಕ್ಷವನ್ನು ಪಾಲಿಸುವಾತ. ಮುಂದಕ್ಕೆ ಈ 63 ಮರುತ್ತುಗಳು ವೀರಶೈವ ದರ್ಶನದಲ್ಲಿ 63 "ವಿರಕ್ತ ಪುರಾತನ'ರಾಗುವುದನ್ನು ಜೈನರಲ್ಲಿ 63 ಶಲಾಕಾ ಪುರುಷರಾಗುವುದನ್ನು ಕಾಣುತ್ತೇವೆ. ವೈಷ್ಣವ ಪಾಂಚರಾತ್ರದಲ್ಲಿ ಶುಕ್ಲಾಂಬರಧರಂ ವಿಷ್ಣುಂ ಎನ್ನುವ ಮೂಲಕ ಸ್ತುತಿಸಲ್ಪಡುವ ಗಣಪತಿಯು ಆದಿತ್ಯರೂಪಿ. ಆದಿತ್ಯನೇ ಮೂಲನಾರಾಯಣ- ಗಣಪತಿ. ಆದಿತ್ಯನ ಸಪ್ತವರ್ಣಗಳು ಒಟ್ಟಾಗಿ, ಒಂದಾಗುವ ಶುಕ್ಲ (ಬಿಳಿ), ಅಂಬರ (ಆಕಾಶ) ಧರ, ವಿಷ್ಣು (ಸರ್ವವ್ಯಾಪಿ).
ನಿಷುಸೀದ ಗಣಪತೇ ಗಣೇಶುತ್ವಾ... ಚಿತ್ರಮರ್ಚ- ಎನ್ನುವ ಇಂದಿನ ಗಣಪತಿಯ ಪ್ರಧಾನ ವೇದಸೂಕ್ತ, ಇಂದ್ರನಿಗೇ ಅನ್ವಯಿಸುವುದು. ಋಗ್ವೇದದಲ್ಲಿ ಗುಂಪಾಗಿರುವುದು ಗಣವೆನಿಸುತ್ತದೆ. ಆದಿತ್ಯರು, ರುದ್ರರು, ವಸುಗಳು, ಮರುತ್ತುಗಳು, ವಿಶ್ವೇದೇವರುಗಳು, ಆಭಾಸ್ಪರರು, ಅನಿಲರು, ಸಂಧ್ಯಾದೇವತೆಗಳು, ಮಹಾರಾಜಕರು, ತುಷಿತರು - ಇತ್ಯಾದಿ. ಹಾಗಾಗಿ, ಋಗ್ವೇದದ ಗಣಪತಿಯು ಈ ಅರ್ಥದಲ್ಲಿ ಇಂದ್ರ, ಬ್ರಹ್ಮಣಸ್ಪತಿಯಲ್ಲದೆ, ಮುಂದಿನ ಪುರಾಣಗಳ ವಿನಾಯಕ, ವಿಘ್ನಕರ್ತ, ವಿಘ್ನಹರ್ತ, ವಕ್ರತುಂಡ, ಗಜಾನನನಲ್ಲ. ಶಿವಪುತ್ರನಲ್ಲ.
ಆದರೆ, ಮುಂದಕ್ಕೆ ಕ್ರಿ. ಶ. 5-6ನೇ ಶತಮಾನಕ್ಕೆ, ಭಾರತೀಯ ಮತ್ತು ಯವನರ ಜ್ಯೋತಿಶಾÏಸ್ತ್ರವು ಆರ್ಯಭಟ, ವರಾಹಮಿಹಿರರೇ ಮುಂತಾದವರ ಮೂಲಕ ವಿಸ್ತರಿಸಿದುದರ ಪರಿಣಾಮವೋ ಏನೋ, ಬ್ರಹಸ್ಪತಿಯು ತನ್ನ ವೈದಿಕಯುಗದ ಲಕ್ಷಣಗಳನ್ನು ಕಳೆದುಕೊಂಡು, ರೋಮಕ (ರೋಮನ್‌) ಸಿದ್ಧಾಂತದ ಅತ್ಯಂತ ದೊಡ್ಡ ಆಕಾಶಕಾಯ - "ಜ್ಯುಪಿಟರ್‌' (ದೌÂ-ಪಿತರ)ನಾಗಿ ಬಿಡುತ್ತಾನೆ.
ತೈತ್ತಿರೀಯ ಬ್ರಾಹ್ಮಣದಲ್ಲಿ ಮರುತ್ತುಗಳೂ ಗಣಪತಿಗಳು (ಮರುತೋ ಗಣಾನಾಂ ಪತಯಃ). ಗಣಪತಿ ಇಲ್ಲಿ ಗೌರೀತನಯನಲ್ಲ. ಅದುವರೆಗೆ "ಗೌರಿ', "ಪಾರ್ವತಿ', "ಉಮಾ' ಕಾಣುವುದಿಲ್ಲ. ಬದಲಾಗಿ ಅಲ್ಲಿರುವುದು ವಾಗಂಭೃಣಿ, ಅದಿತಿ ಮತ್ತು ಶಚಿ ಅಥವಾ ಅಥವಾ ಇಳಾ, ಭಾರತೀ, ಸರಸ್ವತೀ = ತಿಸ್ರೋದೇವ್ಯಃ. ಗೌರಿಯು ಕಾಣಿಸಿಕೊಳ್ಳುವುದು ವಾಜಸನೇಯಿ ಸಂಹಿತೆ, ಶತರುದ್ರೀಯ ಮುಂತಾದ ಅನಂತರದ ಕಾಲದಲ್ಲಿ. ಗೌರಿಯು ವೇದದ ನಿಕೃತಿಗೆ ಸಮಾನ ಕಲ್ಪನೆ. ಗ್ರೀಕರ ಆರ್ತೆಮಿಸ್‌, ಲೂನಾ, ಲೋನಾ, ನೋನಾ, ನಾನದೇವಿಯರಿಗೆ (ಪಾಶ್ಚಾತ್ಯ) ಸಮಾನವಾದ ಕಲ್ಪನೆಯೂ ಹೌದು. ಆಕೆ ಎಲ್ಲ ದುರಿತಗಳ ತಾಯಿ. ಗೌರಿಯ ಪುತ್ರ ಗಣೇಶ ಎಲ್ಲ ದುರಿತಗಳನ್ನು ತಂದೊಡ್ಡುವವ = ವಿಘ್ನಕರ್ತ. ಇವುಗಳ ನಿವಾರಣೆಗೆ ಗೌರಿ-ಗಣೇಶಗಳ ಸಂತೈಸುವಿಕೆ, ಪೂಜಿಸುವಿಕೆ. ಪೂಜಿಸಿದ ಬಳಿಕ ವಿಸರ್ಜನ. ಪೂಜಿಸಿ ವಿಸರ್ಜಿಸುವ ಈ ಕ್ರಮ, ದಕ್ಷಿಣಭಾರತದ ವೈದಿಕಕಲ್ಪನೆಯ ಹೊರನಿಲ್ಲುವ ಆಚರಣೆ. ಮಾರಮ್ಮ , ಮಾಸೋಬಾ ಇತ್ಯಾದಿ ದೇವತೆಗಳನ್ನು ಪೂಜಿಸಿ ವಿಸರ್ಜಿಸುವಂತೆ. ಗಣೇಶನೂ ಪ್ರಧಾನವಾಗಿ ದಕ್ಷಿಣಭಾರತದ ಮೂಲದಲ್ಲಿ ಆಯೇìತರ ದೇವತೆಯಾಗಿದ್ದು ಪೂಜಿಸಿ ವಿಸರ್ಜಿಸಲ್ಪಡುವವನು.
ಶರಣು ಸಿದ್ಧಿವಿನಾಯಕ...
ಸೂತ್ರಗಳ ಕಾಲದಲ್ಲಿ ವಿನಾಯಕನಿದ್ದಾನೆ. ಕ್ರಿ.ಪೂ. 1ನೇ ಶತಮಾನದ ಪತಂಜಲಿ, ಅದರ ಮೊದಲ ಮೌರ್ಯರ ಕಾಲದಲ್ಲಿ ವಿಗ್ರಹಗಳ ಬಗ್ಗೆ ಹೇಳುವಾಗ ಶಿವ-ಸ್ಕಂದ-ವಿಶಾಖರ ಉಲ್ಲೇಖವಿದ್ದರೂ, ಗಣೇಶ ಇಲ್ಲ. ಹಾಗಾಗಿ, ಪುರಾಣಗಳಲ್ಲಿ ಗಣೇಶ ಶಿವನ ಹಿರಿಯ ಮಗನಾದರೂ, ಇತಿಹಾಸದಲ್ಲಿ ಸ್ಕಂದನೇ ಮೊದಲು ಕಾಣಿಸಿಕೊಳ್ಳುವವನು. ಆದರೆ, ವಿಘ್ನ-ವಿನಾಯಕನಿದ್ದ . ಬೌಧಾಯನ ಸೂತ್ರದಷ್ಟು ಪ್ರಾಚೀನಕ್ಕೆ ಈತನನ್ನು ರುದ್ರಪುತ್ರನಾಗಿ ಕಾಣಬಹುದು. ಆದರೆ ಒಂದಲ್ಲ, ಎಂಟು ರುದ್ರರಿಗೆ ಎಂಟು ವಿನಾಯಕ ಪುತ್ರರು. ವಿನಾಯಕ = ವಿಘ್ನಕಾರಕ. ಇನ್ನೊಂದು ಅರ್ಥ ವಿ+ನಯನ = ದೂರ ಒಯ್ಯುವವನು = ವಿಘ್ನಹರ್ತ. ಮೊದಲಲ್ಲಿ ವಿಘ್ನಕರ್ತನೆಂದೇ ಈತನನ್ನು ತಿಳಿದದ್ದು. ಎರಡನೆಯ ಅರ್ಥ ಕ್ರಿ. ಶ. ದ 4-5ನೇ ಶತಮಾನದ ಕಾಲದಲ್ಲಿ ಸೇರಿಕೊಂಡದ್ದು. ವಿಘ್ನಕರ್ತ ಗೌರೀತನಯನಾಗಿದ್ದ. ವಾಯು ಪುರಾಣ ಅತಿ ಪ್ರಾಚೀನ ಮಾಹಿತಿಗಳ ಆಗರ. ಅದರಲ್ಲಿ ಶಿವಪೂಜೆಯಾಗುತ್ತಿರುವ ಮನೆಮಠಗಳಲ್ಲಿ ವಿನಾಯಕನ ಬಾಧೆಯಿಲ್ಲವೆಂಬ ಉಲ್ಲೇಖವಿದೆ. ಶಿವನು ವಿನಾಯಕ ಬಾಧೆಗೆ ತಡೆಯೊಡ್ಡುವಾತ.
ಜೈನ ಧರ್ಮದಲ್ಲೂ ವಿನಾಯಕನಿದ್ದಾನೆ. ಆತನೂ ವಿಘ್ನಕರ್ತನೇ. ಅಲ್ಲಿ ಸಿದ್ಧನೆಂದು ಕರೆಯಲ್ಪಡುತ್ತಾನೆ. ಆತ ಸಿದ್ಧಿವಿನಾಯಕನಲ್ಲ. ಜಿನ-ಅರ್ಹಂತನೇ ಸಿದ್ಧ, ಆದಿಪೂಜ್ಯ. ಹಾಗಾಗಿ, ಅಲ್ಲಿ ಅಕ್ಷರಾಭ್ಯಾಸದಲ್ಲಿ ಆತನನ್ನು "ಓಂ ನಮಃ ಸಿದ್ಧಂಗ' ಎಂದು ಸ್ಮರಿಸುವುದು. ಅದು ಗಣಪತಿ- ವಿನಾಯಕನಲ್ಲ. ಇನ್ನು ಬೌದ್ಧರಲ್ಲಿ ಈತ ಹೇರುಕ-ಹೇರಂಭನೆಂಬ ಬುದ್ಧ . ಬುದ್ಧಿ ಅಂದರೆ ಜ್ಞಾನ. ಅಕ್ಷರಜ್ಞಾನದಾತ ಹೇರಂಭ ಬುದ್ಧ , ವಾಕ³ತಿ. ವೃದ್ಧಿ-ಸಿದ್ಧಿ ಪ್ರದಾಯಕ ವಿನಾಯಕ. ಮಹಾಯಾನದ ಬೌದ್ಧರ ಮಂಜುಶ್ರೀ- ಮಂಜುಕಲ್ಪಗಳಲ್ಲಿ ವಿನಾಯಕರೆಂದರೆ ವಿಘ್ನಕಾರಕರೇ.
ಒಂದು ರೀತಿಯಲ್ಲಿ ಈ ಬೌದ್ಧರ ಕಲ್ಪನೆಯೇ ಮುಂದಿನ ಪುರಾಣಗಳ ಸ್ಕಂದ-ಕುಮಾರ ಮತ್ತು ಗಣಪತಿಯ ನಡುವಿನ ಅಸೂಯೆ-ಪೈಪೋಟಿಗೆ ಮೂಲವಾಗಿದ್ದಿರಬೇಕು. ಗಣಪತಿ ಸ್ಕಂದನಿಗಿಂತ ಹೆಚ್ಚು ಬುದ್ಧಿವಂತ. ಸ್ಕಂದನಷ್ಟೇ ವೀರನೂ ಕೂಡಾ. ಪಾರ್ವತಿಯ ನೇರ ಪುತ್ರನಲ್ಲ. ದ್ವೆ„ಮಾತರ (ಎರಡು ತಾಯಂದಿರು)ನೆಂಬ ಬಿರುದನ್ನು ಹೊಂದಿದವನು. ವರಾಹ ಪುರಾಣದ ಪ್ರಕಾರ ಶಿವನ ಅಟ್ಟಹಾಸದಲ್ಲಿ ಜನಿಸಿದವ.
ಹೊಂಬಣ್ಣದ ಸುಂದರಕಾಯನಾದ ಇವನನ್ನು ಕಂಡು ಶಿವನ ಮಡದಿ ಮೋಹ ತಾಳಿದಾಗ ಶಿವನು ಈತನನ್ನು ಮತ್ಸರದಿಂದ ಲಂಬೋದರನನ್ನಾಗಿಸಿದನಂತೆ ! ಆನೆಯ ಮುಖದ ಕುರೂಪಿಯಾಗಲು ಶಪಿಸಿದನಂತೆ ! ಬಳಿಕ ಕರುಣೆದೋರಿ, ಕುರೂಪಿಯಾದರೂ ವಿನಾಯಕರ ಗಣದ ಪತಿಯಾಗೆಂದು ಅನುಗ್ರಹಿಸಿದನಂತೆ !
ದ್ವೆ„ಮಾತರ ಗಣಾಧಿಪಃ
ಕ್ರಿಸ್ತಶಕ ಮೊದಲ ಕೆಲವು ಶತಕಗಳ ತನಕ ವಿನಾಯಕನು ಸ್ಕಂದನಿಗಿಂತ ಕೆಳಗಿನ ಸ್ಥಾನದಲ್ಲೇ ಇದ್ದವನು. ತಾರಕಾಸುರ ವಧೆಗೆ ಸೇನಾನಿಯಾಗಿ ಪಡೆದ ಪುತ್ರ ಸ್ಕಂದ-ಕುಮಾರನು ಶಿವನಿಗೆ ಹೆಚ್ಚು ಪ್ರಿಯನಾದವನಾಗಿದ್ದನೆ? ಈ ಸಂದೇಹ ಶಿವ ಗಣಪತಿಯರಿಗೆ ಸಂಬಂಧಿಸಿದ ಅನೇಕ ಪುರಾಣಗಳಲ್ಲಿ ಸೂಚ್ಯವಾಗಿದೆ. ಆದರೆ ಕ್ರಿ.ಶ. 6ನೇ ಶತಮಾನದ ಬಳಿಕ ವಿನಾಯಕ-ಗಣೇಶನು ಸ್ಕಂದನನ್ನು ಹಿಂದಕ್ಕೆ ಸರಿಸಿ, ಪ್ರಥಮಪೂಜ್ಯನಾಗಿ ನಿಲ್ಲುತ್ತಾನೆ. ಉತ್ತರಭಾರತದ ಆದ್ಯಂತ ವಿಷ್ಣು , ಶಿವ, ದುರ್ಗೆಯರ ಅಂತಸ್ತಿಗೆ ಸಮನಾಗಿ ಅದುವರೆಗೆ ಸ್ಥಾನ ಪಡೆದಿದ್ದ ಸ್ಕಂದ ಈಗ ಎರಡನೇ ಸ್ಥಾನಕ್ಕೆ ಸರಿಯುತ್ತಾನೆ. ಗುಪ್ತರ ಕಾಲದವರೆಗೆ ರಾಜರುಗಳ ಹೆಸರುಗಳನ್ನು ಪರಿಶೀಲಿಸಿದರೂ ವಿನಾಯಕ, ಗಣಪತಿ, ಗಣಪತಿಯರಿಲ್ಲ.
ಆದರೆ ಕುಮಾರಗುಪ್ತ, ಸ್ಕಂದಗುಪ್ತ, ಕಾರ್ತಿಕೇಯ ಇತ್ಯಾದಿಗಳನ್ನು ಕಾಣಬಹುದು. ಕ್ರಿ. ಪೂ. ದಿಂದ ಹಿಡಿದು ಕ್ರಿ.ಶ. 5ನೇ ಶತಮಾನದವರೆಗೆ ಈಗಿನ ಪಂಜಾಬದ ರೋಹಟಕದಿಂದ ಆಳುತ್ತಿದ್ದ ಯೌಧೇಯರು, ಶಕರಿಂದ ಹಿಡಿದು ಹೂಣರವರೆಗೆ ಹೊರಗಿನ ಆಕ್ರಮಣವನ್ನು ಎದುರಿಸುತ್ತ ಬಂದವರು ತಮ್ಮನ್ನು "ಮತ್ತ ಮಯೂರ'ರೆಂದೇ ಕರೆದುಕೊಳ್ಳುತ್ತಿದ್ದರು. ಸ್ಕಂದ-ಸೇನಾನಿಯೇ ಅವರ ಇಷ್ಟದೇವತೆ. ದಕ್ಷಿಣದ ಮೊದಲ ಅರಸರಾದ ಪಲ್ಲವ-ಕದಂಬರಲ್ಲೂ ಗಜಾನನನ ಹೆಸರಿನವರಿಲ್ಲ. ಗುಪ್ತರಲ್ಲಿಯೂ ಕುಮಾರಗುಪ್ತ, ಸ್ಕಂದಗುಪ್ತರೆಂಬ ಅರಸರಿದ್ದರು. ಕಾಳಿದಾಸ, ವರಾಹಮಿಹಿರ ಸ್ಕಂದನ ಪ್ರಶಂಸೆ ಮಾಡುತ್ತಾರೆ. ಅವರ ಯಾವ ಕೃತಿಯೂ ಗಣಪತಿಯ ಸ್ತುತಿಯಿಂದ ಆರಂಭವಾಗುವುದಿಲ್ಲ.
ಗಣಪತಿಯ ಸ್ತುತಿಯಿಂದ ಆರಂಭವಾಗುವುದು ಭವಭೂತಿ (ಕ್ರಿ.ಶ. 7ನೇ ಶತಮಾನ)ಯಿಂದ. ಮುಂದೆ ಅದು ಎಲ್ಲ ಪ್ರಾದೇಶಿಕ ಭಾಷೆಗಳಿಗೂ ವ್ಯಾಪಿಸುತ್ತದೆ. ಗಣೇಶನ ಸ್ತುತಿಯು ಮೊದಲು ಕಾಣಿಸಿಕೊಳ್ಳುವುದು ಸಂಸ್ಕೃತದ ಮಾಲತೀ-ಮಾಧವದಲ್ಲಿ ಮತ್ತು ಉತ್ತರರಾಮಚರಿತದಲ್ಲಿ. ಮಹಾರಾಷ್ಟ್ರದ ಉತ್ತರ ಭಾಗದವನು ಭವಭೂತಿ. ಆತನಿಂದ ಹಿಡಿದು ಆ ಪ್ರದೇಶದ 13ನೇ ಶತಮಾನದ ಮರಾಠೀ ಸಂತ ಜ್ಞಾನೇಶ್ವರನಿಂದ ಮುಂದೆ ಸಾಗಿ 17ನೇ ಶತಮಾನದ ಕರಾಡದ "ಮೋರಯಪಂತ'- ಹೀಗೆ ಸಾಗುತ್ತದೆ ಗಣಪತಿಯ ಪ್ರಭಾವ. ಈ ಮಹಾರಾಷ್ಟ್ರದ ಹತ್ತಿರದವರಾದ ಬ್ರಾಹ್ಮಣರ ಒಂದು ವರ್ಗ ಗಾಣಪತ್ಯ ಪಂಥವನ್ನು ಅನುಸರಿಸುವವರಾಗಿದ್ದಿರಬೇಕು. ಈ ವರ್ಗಕ್ಕೆ ಸೇರಿದವರೇ ಇಸ್ಲಾಂ ಧರ್ಮ ಸ್ವೀಕರಿಸಿ ಬಹಮನೀ ರಾಜ್ಯ ಸ್ಥಾಪಿಸಿದವರಾಗಿದ್ದಿರಬೇಕು. (ಬಹಮನೀ=ಬ್ರಾಹ್ಮಣ) ಹಾಗಾಗಿ, ಗುಲ್ಬರ್ಗಾದಲ್ಲಿರುವ ಬಹಮನೀ ರಾಜ್ಯದ ಕೋಟೆಯೊಳಗೆ ಇಂದಿಗೂ ಗಣೇಶನ ದೇವಾಲಯ ಉಳಿದು ಕೊಂಡಿದೆ.
ಬಹಮನಿಯವರು ಇದನ್ನು ಉಳಿಸಿಕೊಂಡೇ ಕೋಟೆಯನ್ನು ಕಟ್ಟಿಕೊಂಡರು. ಕ್ರಿ. ಶ. ಆರನೆಯ ಶತಮಾನದ ಬಳಿಕ ಗಣೇಶ ಪ್ರಬಲನಾಗುತ್ತಾನೆ. ಆಗ ಸ್ಕಂದ ಹಿಂದಕ್ಕೆ ತಳ್ಳಲ್ಪಡುತ್ತಾನೆ. ಸ್ಕಂದನ ಕಾಲದಲ್ಲಿ ಗಣೇಶ ವಿಘ್ನಗಳನ್ನುಂಟುಮಾಡುವವನು ವಿನಾಯಕ. ವಿನಾಯಕ ಒಬ್ಬನಲ್ಲ - ನಾಲ್ಕು ಅಥವಾ ಎಂಟು ಮಂದಿ ಇದ್ದರು. ಬೇರೆ ಬೇರೆ ಸಾಹಿತ್ಯದಲ್ಲಿ ಬೇರೆ ಬೇರೆ ಕಲ್ಪನೆಯಿದೆ. ಮಾನವಗೃಹ್ಯ ಸೂತ್ರ, ಬೈಜವಾಪ ಸೂತ್ರದಲ್ಲಿ ನಾಲ್ಕು ವಿಘ್ನರು. ಈ ವಿಘ್ನರನ್ನು ಹೊಡೆದೋಡಿಸಿ ರಕ್ಷಿಸುವಾತ "ಮಹಾಕ್ರೋಧ‌'ನಾದ ಸ್ಕಂದ.
ಈ ನಂಬಿಕೆ ಕ್ರಿ. ಶ. 5ನೇ ಶತಮಾನದವರೆಗೂ ಮುಂದುವರಿದಿತ್ತು. ಉದಾ: ಯಾಜ್ಞವಲ್ಕéಸ್ಮತಿಯಲ್ಲೂ ವಿನಾಯಕ ವಿಘ್ನಕಾರಕನೇ. ಪ್ರಾಚೀನ ಬೌಧಾಯನ ಸೂತ್ರದಲ್ಲಿ ಎಂಟು ವಿಘ್ನರು. ಹೇರಂಭ ಎನ್ನುವ ದ್ವಿಭುಜ ಗಣಪತಿಯು ಭವಭೂತಿಯ ಮೂಲಕ ಪ್ರಸಿದ್ಧನಾದ, ಜನಪ್ರಿಯನಾದ. ಪ್ರಾಯಃ ಬೌದ್ಧ ಮೂಲದ ಹೇರಂಭ-ಹೇರುಕನೇ ಮುಂದಕ್ಕೆ ಶೈವಾಗಮದೊಳಗೆ ಸೇರಿಕೊಳ್ಳುತ್ತಾನೆ. ಈತನ ಮೊದಲ ದಾಖಲೆ ಮಹಾಭಾರತದಲ್ಲಿದೆ. ಅಮರಕೋಶದ ಉಲ್ಲೇಖ ಹೀಗಿದೆ :
ವಿನಾಯಕೋ ವಿಘ್ನರಾಜೋ ದ್ವೆ„ಮಾತುರ ಗಣಾಧಿಪಃ |
ಅವ್ಯೇಕದಂತೋ ಹೇರಂಭೋ ಲಂಬೋದರ ಗಜಾನನಃ ||
ಮುಂದಕ್ಕೆ ಗಣೇಶಪುರಾಣ, ಮುದ್ಗಲಪುರಾಣಗಳ ಮೂಲಕ ಈತ ಪ್ರಸಿದ್ಧನಾಗುತ್ತಾನೆ. ಪ್ರಾಯಃ ಕ್ರಿ. ಶ. 10ನೇ ಶತಮಾನದ ಅನಂತರದ ಬೆಳವಣಿಗೆ ಇದು. ಇವುಗಳಿಗಿಂತಲೂ ಅನಂತರದ ಗಾಣಪತ್ಯರ ರಚನೆ ಗಣೇಶ ಅಥರ್ವಶೀರ್ಷ ಉಪನಿಷತ್ತು. ಕ್ರಿ. ಶ. 7ನೇ ಶತಮಾನದ ಬಳಿಕ ಒಂದೊಂದಾಗಿ ಎಲ್ಲ ಶೈವ ಪುರಾಣಗಳೂ ಈತನನ್ನು ಸೇರಿಸಿಕೊಂಡೇ ಸಾಗುತ್ತವೆ. ವೈಷ್ಣವ ಭಾಗವತದ ಕೃಷ್ಣಕತೆಯನ್ನೇ ಹೆಸರು ಬದಲಾಯಿಸಿಕೊಂಡು ರಚಿಸಿದ ಕೃತಿ ಗಣೇಶಪುರಾಣ. ಅಲ್ಲಿ ವಸುದೇವ-ದೇವಕಿ-ಕಂಸ, ತೃಣಾವರ್ತ, ಧೇನುಕ, ಪೂತನಿ, ಶಕಟಾಸುರ-ಮುಷಿ¡ಕ-ಚಾಣೂರ ಇತ್ಯಾದಿ ಎಲ್ಲರೂ ಇಲ್ಲಿ ಬೇರೆ ಹೆಸರಿನಲ್ಲಿ ಕಾಣಿಸಿಕೊಳ್ಳುವರು. ಕೃಷ್ಣನ ಬದಲು ವಿಕಟ ಶಿಶು ಗಣೇಶ. ವಸುದೇವ- ದೇವಕಿಯರ ಬದಲು ಕಶ್ಯಪ-ಅದಿತಿ. ಸಾಕು ತಂದೆ ನಂದಗೋಪನು ಇಲ್ಲಿ ಕಾಶೀರಾಜ. ಕಂಸನ ಬದಲು ನರಕಾಂತಕ. ಪೂತನಿಗೆ ಬದಲು ವಿರಜಾ ರಾಕ್ಷಸಿ, ಮುಷ್ಟಿಕ-ಚಾಣೂರರ ಬದಲು ಉದ್ಧತ-ದುಂಧುರ. ಹೀಗೆ ಒಟ್ಟು ಗಣೇಶ ಪುರಾಣವೇ ಭಾಗವತದ ಪ್ರತಿರೂಪ. ಬಾಲಕೃಷ್ಣನಂತೆ ಬಾಲಗಣೇಶನೂ ಬಾಯಿಯಲ್ಲಿ ಬ್ರಹ್ಮಾಂಡವನ್ನು ತೋರಿಸುತ್ತಾನೆ. ವಿಶ್ವರೂಪದರ್ಶನ ಮಾಡಿಸುತ್ತಾನೆ. ಪ್ರಾಯಃ ನರ್ಮದೆಗಿಂತ ದಕ್ಷಿಣದ ಮಹಾರಾಷ್ಟ್ರದಲ್ಲಿ ಈ ಪುರಾಣ ಹುಟ್ಟಿಕೊಂಡಿರಬೇಕು. ಜ್ಞಾನೇಶ್ವರನಿಂದ ಹಿಡಿದು ಮಹಾರಾಷ್ಟ್ರದ ಎಲ್ಲ ಸಂತರೂ, ವೈಷ್ಣವರೂ ಸೇರಿದಂತೆ ತಮ್ಮ ಎಲ್ಲ ಕೃತಿಗಳ ಮೊದಲಲ್ಲಿ ಗಣೇಶನನ್ನು ಸ್ತುತಿಸುತ್ತಿದ್ದರು. ಅದೇ ರೀತಿ ವೈದಿಕ ಕರ್ಮಗಳಾದ ಹೋಮಹವನಗಳಲ್ಲಿ ವೇದದ ಬ್ರಹ್ಮಣಸ್ಪತಿಯನ್ನು ಮೊದಲು ಪ್ರಾರ್ಥಿಸುತ್ತಿದ್ದ ಕ್ರಮ, ವಕ್ರತುಂಡ ಮಹಾಕಾಯನ ಸ್ತುತಿಯಾಗಿ ಪರಿವರ್ತಿತವಾದದ್ದು ಕಳೆದ ಒಂದು ಸಾವಿರ ವರ್ಷಗಳಿಂದ !
ವಾತಾಪಿ ಗಣಪತಿಂ ಭಜೆ...
ಮಹಾರಾಷ್ಟ್ರದಲ್ಲಿ ಇಂದು ನಾವು ಕಾಣುವ ಗಣೇಶೋ ತ್ಸವದ ಮೂಲಪುರುಷ ಕರ್ಹಾಡ ಮೂಲದ ಮೋರೋಪಂತ. 17ನೇ ಶತಮಾನದಲ್ಲಿ ಈತ ಪುಣೆಯ ಹತ್ತಿರ ಗಣೇಶನ ವಿಗ್ರಹ ಸ್ಥಾಪಿಸಿ ಚತುರ್ಥಿಯಿಂದ ಅನಂತಚತುರ್ದಶಿಯವರೆಗೆ ಪೂಜಿಸಿ ವಿಸರ್ಜಿಸುವ ಸಂಪ್ರದಾಯ ಹುಟ್ಟುಹಾಕಿದವ. ಅಂದಿನಿಂದ ಆ ದೇವಾಲಯದ ಊರು "ಮೋರೆಗಾಮ್‌' ಆಯಿತು. ವಿಸರ್ಜಿಸುವಾಗ ಮರಾಠಿಯಲ್ಲಿ "ಮೋರಯನ ತಂದೆ ಗಣಪತಿಯೇ, ಬೇಗನೇ ಮುಂದಿನ ವರ್ಷ ಬಾ' ಎನ್ನುವ ಒಕ್ಕಣೆ (ಗಣಪತಿ ಬಾಪ್ಪಾ ಮೋರಯಾ | ಪುಡಚಾ ವರ್ಷಾ ಲೌಕರ್‌ ಯಾ |) ಎಂದು ಹಾಡಿ ಕುಣಿಯುವ ಸಂಪ್ರದಾಯ ಮಹಾರಾಷ್ಟ್ರದಾದ್ಯಂತ ಇಂದಿಗೂ ನಾವು ಕಾಣಬಹುದು. ಚಿತ್ಪಾವನ ಪೇಶ್ವೆಯವರ ಮನೆದೇವತೆಯಾಗಿದ್ದ ಗಣೇಶ ಬಾದಾಮಿಯ ಚಾಳುಕ್ಯರಿಗೆ ವಾತಾಪಿ ಗಣಪತಿ. ಗಣಪತಿಯು ಹೀಗೆ ಮುಂದಕ್ಕೆ ಮಹಾರಾಷ್ಟ್ರ , ಉತ್ತರಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ದೇವತೆಯಾಗಿ ವಿಘ್ನಕರ್ತನ ಬದಲು ವಿಘ್ನ-ವಿನಾಯಕನಾಗಿ ವಿಜಯನಗರದ ಅರಸರವರೆಗೂ ತನ್ನ ಕೀರ್ತಿಯನ್ನು ವರ್ಧಿಸುತ್ತ ಸಾಗಿದ.
ವಿಜಯನಗರದ ಅನಂತರದಲ್ಲಿ ತಮಿಳುನಾಡಿಗೂ ಆತ ತನ್ನ ಜನಪ್ರಿಯತೆಯನ್ನು ಚಾಚಿಕೊಂಡ. ಅತ್ಯಂತ ದೊಡ್ಡ ಗಣಪತಿಯ ವಿಗ್ರಹವಿರುವುದು ತಮಿಳುನಾಡಿನಲ್ಲಿ. ಅಲ್ಲಿಯ ವೈಷ್ಣವರಿಗೆ ಪರದೈವವಾದ ಹರಿಯೇ ಗಣಪತಿ. ನಾರಾಯಣನೇ ಗಣಪತಿ. ಅವರ ವಿದ್ಯಾರಂಭದಲ್ಲಿ ಗಣಪತಿಯನ್ನೇ ಓಂ ನಮೋ ನಾರಾಯಣಾಯ ಎಂದು ಸಂಬೋಧಿಸುತ್ತಾರೆ. "ಹರಿಃ ಶ್ರೀ ಗಣಪತಯೇ' ಎನ್ನುತ್ತಾರೆ. ತುಳುನಾಡಿನಲ್ಲೂ ಲಕ್ಷ್ಮೀಸಮೇತ ನರಸಿಂಹ ರೂಪ ಸಹಿತ ಗಣಪತಿಯು ಮಾಧ್ವರೂ ಸೇರಿದಂತೆ ಅನೇಕರ ಮನೆದೇವತೆಯಾಗಿದ್ದಾನೆ. .
ತಮಿಳುನಾಡಿನಲ್ಲಿ ಒಂದು ಹೇಳಿಕೆಯಿದೆ. ಶಿವನು ಬ್ರಾಹ್ಮಣರ ದೇವತೆ, ಮಾಧವ ಕ್ಷತ್ರಿಯರದ್ದು. ಬ್ರಹ್ಮ ವೈಶ್ಯರದ್ದು. ಗಣನಾಯಕ ಶೂದ್ರರದ್ದು. ಆದರೆ ಒಟ್ಟು ಭಾರತದಲ್ಲಿ ಗಣಪತಿಯು ಶೂದ್ರರಲ್ಲಿ ಪ್ರಿಯನಾದರೂ ಬ್ರಾಹ್ಮಣರೂಪದಲ್ಲೇ ಬಿಂಬಿತನಾಗಿದ್ದಾನೆ. ಉತ್ತರಭಾರತದಲ್ಲಿ ಗುಜರಾತಿನಿಂದ ಮೊದಲ್ಗೊಂಡು, ರಾಜಸ್ಥಾನ, ಮಧ್ಯಪ್ರದೇಶದ ಕಡೆ ಗಾಣಪತ್ಯ ಪಂಥದ ಪ್ರಭಾವವಿಲ್ಲದ ಕಾರಣ ಅಲ್ಲಿ ಗಣೇಶನ ಪ್ರಭಾವ ಕಡಿಮೆ. ಹಾಗಾಗಿ, ಗಣೇಶ ಬಹುತೇಕ ದಕ್ಷಿಣಭಾರತದ ದೇವತೆ.
ಇಂದು ಗಣೇಶ ಸೃಷ್ಟಿ , ಸ್ಥಿತಿ, ಲಯಗಳಿಗೆ ಕಾರಣೀ ಭೂತನಾದ ಸರ್ವಸ್ಥಿತ, ಸರ್ವಗತ, ಸರ್ವವ್ಯಾಪ್ತನಾದ ಬ್ರಹ್ಮಾಂಡರೂಪಿಯೇ ಆಗಿ, ಇಂದಿಗೆ ಮಹಾಗಣಪತಿಯ ರೂಪದಲ್ಲಿ ಆರಾಧ್ಯನಾಗಿದ್ದಾನೆ. ಮತ್ತೆ ವೇದಕಾಲದ ಬ್ರಹ್ಮಣಸ್ಪತಿ-ಪ್ರಜಾಪತಿಯಾಗಿ, ಭೂಮ್ಯಂತರಿಕ್ಷ ವ್ಯಾಪಿಯಾಗಿ ದೌÂ-ಪಿತರನಾಗಿ, ಬೃಹತ್ಛರೀರನಾಗಿ ಪೂಜಿಸಲ್ಪಡುತ್ತಾನೆ.