प्रज्वालितॊ ज्ञानमयप्रदीपः

ಭಾನುವಾರ, ಏಪ್ರಿಲ್ 8, 2012

* ನನ್ನ ಕಥೆ...!! ನನ್ನ ಜಿವನದ ದರ್ಶನ...!

  "ಅಗ್ನಿಹೋತ್ರಿ" ಸುಮ್ಮನೇ ಬಂದುದಲ್ಲ..... ಕುಲದ ಹಿರಿಯರ ತಪದ ಫಲ ಅದು.! ಅಂದು ಕಡತೋಕೆಯೆಂಬ ಊರಿನಲ್ಲಿ ಪೌರೋಹಿತ್ಯಕ್ಕೆ ಬೇಕಾಗಿ ಆ ಕಾಲದ ಊರಿನ ಹೆಗಡೇ ಮನೆಯವರು ಕರೆತಂದು ಬೆಳೆಸಿದ ಕುಟುಂಬ ನಮ್ಮದು. ಕಡತೋಕೆ ಸಣ್ಣ ಊರಲ್ಲ. ಮೊದಲಿಂದಲೂ ಚೌಕಗ್ರಾಮವೆದು ಕರೆಸಿಕೊಂಡಿದೆ. ಅಲ್ಲದೇ ಪಕ್ಕದಲ್ಲಿ ಪಂಚಗ್ರಾಮವೆಂಬ ಹೊಸಾಕುಳಿ ಇತ್ತಲ್ಲಾ.!! ಈ ಚೌಕಗ್ರಾಮಕ್ಕೆ ಸಂಬಂಧಿಸಿದ್ದು ಕೆಕ್ಕಾರು, ಕಡತೋಕೆ, ನವಿಲಗೋಣು ಮತ್ತು ಮಾಡಗೇರಿ ಯೆಂಬ ನಾಲ್ಕು ಊರುಗಳು. ಈ ಒಂದೊಂದು ಊರೂ ಒಂದೊಂದಕ್ಕೆ ಪ್ರಸಿದ್ಧ. ಅಂತೆಯೇ ಆ ಕಾಲದಲ್ಲಿ ಅಂದರೆ ಸುಮಾರು 450 ವರ್ಷಗಳ ಹಿಂದೆಯೇ ಈ ಊರಿನ ಗಣಪ ಹೆಗಡೆ ಮತ್ತು ಸುಬ್ಬಣ್ಣ ಹೆಬ್ಬಾರ ಎಂಬ ಮುಖಂಡರೀರ್ವರು ಇಲ್ಲಿ ಪೌರೋಹಿತ್ಯಕ್ಕೆ ಒಳ್ಳೆ ಬ್ರಾಹ್ಮಣರಿಲ್ಲವಲ್ಲಾ ಎಂದು, ಯಲ್ಲಾಪುರದ 'ಕುಳಿನಾಡು' ಸೀಮೆಯ( ಈಗ ಅದು ಆ ಹೆಸರಿಂದ ಇದೆಯೋ ಇಲ್ಲವೋ ಗೊತ್ತಿಲ್ಲ) ಕಡೆಯಿಂದ ಒಂದು ಬ್ರಾಹ್ಮಣ ದಂಪತಿಯನ್ನು ಈ ಊರಿಗೆ ಕರೆದು ತಂದರು. ಆಗ ಈ  ಊರು ಚಂದಾವರ ಅರಸ 'ಚಂದ್ರಸೇನ'ನ ಆಳ್ವಿಕೆಗೊಳಪಟ್ಟಿತ್ತು.  ಅದೇ ಕಾಲದಲ್ಲಿ ಈಗಿನ ಸ್ವರ್ಣವಲ್ಲೀ ಸಂಸ್ಥಾನದ ಪರಮಗುರುಗಳೂ ಈ ಊರಿಗೆ ಬಂದು ಇಲ್ಲಿ ಮಠ ಮಾಡಿ ಉಳಿದಿದ್ದರು. ಅದಕ್ಕೆ ಅರಸನ ಅಭಯವಿತ್ತು ಎಂಬ ಐತಿಹ್ಯ ದೊರೆಯುತ್ತದೆ. ಆಗ ಬಂದ ದಂಪತಿ ಸುಬ್ರಾಯ ಭಟ್ಟ- ಮಾದೇವಿ .ಇಲ್ಲಿ ಬಂದು ಊರಿನ ಪೌರೋಹಿತ್ಯ್ದ ಜವಾಬ್ದಾರಿಕೆಯನ್ನು ವಹಿಸಿಕೊಂಡಿದ್ದರು.
       ಬರ ಬರುತ್ತ ಸಂಸಾರ ಬೆಳೆದು ಮಕ್ಕಳು ಮೊಮ್ಮಕ್ಕಳು ಆದರು (ಅವರ ಇತಿಹಾಸ ತಿಳಿದುಬರುವುದಿಲ್ಲ) ಅದೇ ಕುಟುಂಬದ ವಾರಸುದಾರ ರಾಮಯ್ಯ ಭಟ್ಟ ಎಂಬವ ತನ್ನ ವಿವಾಹದಿಂದಾರಂಭಿಸಿ ಅಂತ್ಯದ ವರೆಗೆ 'ಅಗ್ನಿಹೋತ್ರ'ವನ್ನಿಟ್ಟು ಅಗ್ನಿಹೋತ್ರಿಯಾದ. ಆ ನಂತರದಲ್ಲಿ ಬಂದ ಕುಲಜರೆಲ್ಲರಿಗೆ ಈ 'ಅಗ್ನಿಹೋತ್ರಿ' ಬಿರುದಿನ ಬಿಲ್ಲೆಯಾಯಿತು. ಈ ರಾಮಯ್ಯ ಭಟ್ಟನಿಗೆ ಈರ್ವರು ಗಂಡು ಮಕ್ಕಳು. (ಅದುವರೆಗಿನ ಈ ಕುಟುಂಬದ ವಂಶವೃಕ್ಷ ಅಷ್ಟಾಗಿ ತಿಳಿಯುತ್ತಿಲ್ಲ) ಸುಬ್ರಾಯ ಭಟ್ಟ- ನಾರಾಯಣ ಭಟ್ಟ. ಇವರು ಕೌಟುಂಬಿಕ ಕಾರಣಗಳಿಗಾಗಿ ಮನೆಯನ್ನು ಎರಡು ಮಾಡಿಕೊಂಡರು, ಆದರೂ ಇಡೀ ಊರಿನ ಪೌರೋಹಿತ್ಯ ಸುಖದಿಂದ ಸಾಗುತ್ತಿತ್ತು. ಗೌರವಾದರಗಳಿದ್ದವು.
      ಅದೇ ರೀತಿಯ ಒಂದು ಕವಲು ಸುಬ್ರಾಯ ಭಟ್ಟನಿಗೆ  ಸಣ್ಣಯ್ಯ ಭಟ್ಟ ರಾಮಕೃಷ್ಣ ಭಟ್ಟ , ಸೀತಾರಾಮ ಭಟ್ಟ ಎಂಬ ಮೂವರು ಗಂದು ಮಕ್ಕಳು ಜನಿಸಿ ಅದರಲ್ಲಿ ಸಣ್ಣಯ್ಯ ಭಟ್ಟ ಅದೇ ಊರಿನ ತುದಿಯಲ್ಲಿ ಮಾಡಗೇರಿಯ ಸಮೀಪವಿರುವ 'ಮಕ್ಕಿಗದ್ದೆ' ಎಂಬಲ್ಲಿ(ಅದು ಈಗಿನ ಭಟ್ರ ದೇವಸ್ಥಾನದ ಶ್ರೀದೇವ ಕೇಶವನಾರಾಯಣನ ಉಂಬಳಿ ಜಾಗ) ತನ್ನ ಕುಟುಂಬ ಸಮೇತನಾಗಿ ಬಂದು ನೆಲೆಸಿದ. ಪಕ್ಕದಲ್ಲೇ 'ಮೇಲಿನ ಮಠ' ಎಂದು ಕರೆಸಿಕೊಳ್ಳುತ್ತಿದ್ದ ಸ್ವರ್ಣವಳ್ಳೀ ಮಠದ ಪೂರ್ವ ಗುರುಗಳ ಮಠವಿತ್ತು. ಹೀಗೆ ಬಂದು ತಳವೂರಿದ ಸಣ್ಣಯ್ಯ ಭಟ್ಟನಿಗೆ  ಈಗಿನ 'ಖಚರಹೆಗಡೆಮನೆ' ಶಿವಹೆಗಡೆಯ ಮಗಳು ಕೈ ಹಿಡಿದಿದ್ದಳು (ಹೆಸರು ತಿಳಿದಿಲ್ಲ) ಆ ದಂಪತಿಗೆ ಈರ್ವರು ಗಂಡು ಮಕ್ಕಳು ಅವರೇ ನನ್ನ ಅಜ್ಜಂದಿರು. ಶಿವರಾಮ ಭಟ್ಟ- ಮಹಾಬಲೇಶ್ವರ ಭಟ್ಟ. ದೊಡ್ಡಜ್ಜ  ಶಿವರಾಮ ಭಟ್ಟನಿಗೂ 'ಖಚರಹೆಗಡೆಮನೆ'  ಸೋದರಿಕೆಯ ಸಂಬಂಧವಾಯಿತು. ಅಜ್ಜ ಮಹಾಬಲನಿಗೆ ಕಡತೋಕೆಯ 'ಮಂಡಿಮನೆ'ಯ ಹೆಬ್ಬಾರ ಲಕ್ಷ್ಮೀ ಮನದನ್ನೆಯಾದಳು.
   ಈ  ಶಿವರಾಮ ಮತ್ತು ಮಹಾಬಲೇಶ್ವರರೀರ್ವರೂ ವೇದ ವಿದ್ಯಾ ಪಾರಂಗತರಾಗಿದ್ದರೂ ಪೌರೋಹಿತ್ಯಗಳನ್ನು ಮಾಡಿಕೊಂಡು ಬರುತ್ತಿದ್ದರೂ, ಶಿವರಾಮನಿಗೆ ಅದೇಕೋ ಕೃಷಿಯಲ್ಲಿ ತುಂಬಾ ಆಸಕ್ತಿ. ವಿವಿಧ ತಳಿಗಳ ಮಾವು, ಚಿಕ್ಕು, ಸೌತೆ.ಹೀಗೇ ಬೆಳೆ ಬೆಳೆಯುವುದು, ಅದನ್ನು ಪ್ರದರ್ಶಿಸುವುದೂ.ಅವನಿಗೆ ಹೆಮ್ಮೆಯ ಸಂಗತಿಯಾಗಿತ್ತು. ಆಕಾಲದಲ್ಲಿ ಕೃಷಿಗಾಗಿ ಕೊಡುತ್ತಿದ್ದ ಅನೇಕ ಪ್ರಶಸ್ತಿಗಳಿಗೆ  ಭಾಜನನಾಗಿದ್ದ. ಅಲ್ಲದೇ ಗಾಂಧೀಜಿಯವರ ಪ್ರಭಾವದಿಂದಲೋ ಅಥವಾ ಮೊದಲಿಂದಲೋ ಈ ಚರಕ-ಮಗ್ಗ, ಈ ಕಸುಬಿಗೂ ಕೈ ಹಾಕಿದ್ದ. ಹೀಗೇ ಅವನ ಬದುಕು ಕಂಡುಕೊಳ್ಳುತ್ತಿದ್ದಾಗಲೇ ಹುಟ್ಟಿದ ಮಗ ನಾರಾಯಣನಿಗೆ 'ಊರುಕೇರಿ'ಯ ದೇವಕಿಯನ್ನು ಮದುವೆ ಮಾಡಿಸಿಕೊಂಡು ಬಂದ ಅವಳು ಬಸುರಿಯಾಗಿ ಸೀಮಂತಮಾಡಿ ಹೆರಿಗೆಗೆ ಹೋದವಳು ಹೆತ್ತ ಗಂಡು ಮಗುವನ್ನೆತ್ತಿಕೊಂಡು ತಿರುಗಿ ಗಂಡನ ಮನೆಗೆ ಬರುವಾಗ ಹಣೆಯ ಕುಂಕುಮ ಅಳಿಸಿ ಹೋಗಿತ್ತು . ನಾರಾಯಣ 'ಮೈಲಿ' ಗೆ ತುತ್ತಾಗಿದ್ದ. (ಹಾಗಾಗಿ ಇಂದಿಗೂ ನಮ್ಮ ಕುಟುಂಬದಲ್ಲಿ ಸೀಮಂತ ಮಾಡುವ ಪದ್ದತಿ ಇಲ್ಲ )  ಬಂದ ದೇವಕಿ ಅಂದಗಾತಿಯಾಗಿದ್ದುದು ಅವಳ ವಿರೂಪಕ್ಕೂ ಕಾರಣವಾಯಿತು. ಕೆಂಪುಸೀರೆ ಬಂತು. ಮಗನನ್ನು ಮುದ್ದಾಡುತ್ತ ಮನದ ನೋವ ಮರೆಯಬೇಕೆನ್ನುವಷ್ಟರಲ್ಲಿಯೇ ಅಪ್ಪನ ಕರೆಗೆ ಓ ಗೊಟ್ಟಿದ್ದ ಮಗ ಕೂಡಾ... ಅಂತೂ ದೇವಕಿ ತನ್ನ ಹದಿನಾರನೇ ವಯಸ್ಸಿನಲ್ಲೇ ಏಕಾಂಗಿಯಾದಳು. ಆದರೂ ಹಿರಿ-ಕಿರಿಯರೆನ್ನದೇ ಆದರದಿಂದ ಮನೆಯನ್ನು ನೋಡಿಕೊಂಡಿದ್ದಳು,ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿ ತುಂಬು ಜೀವನ ನಡೆಸಿದಳು.  ಮಗನ ಗಂಡನ ವಿಯೋಗದ ಯಾವ ಬೇನೆಯೂ ತಟ್ಟದಂತೆ ಅವಳನ್ನು ತನ್ನ 97 ನೇ ವಯಸ್ಸಿನವರೆಗೂ ನೋಡಿಕೊಂಡಿದ್ದು ನಮಗೆ ಹೆಮ್ಮೆಯ ವಿಷಯ.ನಮ್ಮೆಲ್ಲರಿಗೆ ಅವಳು ಪ್ರೀತಿಯ 'ಅಬ್ಬಬ್ಬೆ'
   ಇತ್ತ ಮಹಾಬಲ ತುಂಬಾ  ವೇದ ಶಾಸ್ತ್ರ ಪುರಾಣಂಗಳನ್ನು ಅಧ್ಯಯನ ಮಾಡಿ ಆ ಕಾಲದ ಮೈಸೂರು ಒಡೆಯರ ಬಂಗಾರದ ಪದಕ, ಕಂಠೀಹಾರ, ಶಾಲುಗಳಿಗೆ ಒಡೆಯನಾಗಿದ್ದ  ಕೈಹಿಡಿದ ಹೆಬ್ಬಾರ ಲಕ್ಷ್ಮೀ ಅದೆಷ್ಟು ಹೆತ್ತಳೋ.... ಅಂತೂ ಕೊನೆಗುಳಿದವರು ಹಿರಿಯಳಾಗಿ ಸೌಭದ್ರೆ, ಮಂಜುನಾಥ, ಗೋವಿಂದ, ವಿಷ್ಣು, ಶಂಭು, ರಾಮಚಂದ್ರ, ವಾಸುದೇವ ಈ  ಏಳು ಜನ ಮಾತ್ರ.  (ಇವರ ವಿದ್ಯಾಭಾಸ ಅಷ್ಟೇನೂ ಇಲ್ಲ. ತಕ್ಕಮಟ್ಟಿಗೆ ವೇದಾಧ್ಯಯನ ಇತ್ತು ) ಅಜ್ಜಂದಿರಾದ ಶಿವರಾಮ, ಮಹಾಬಲರು,   ಮತ್ತು ಈ ತುಂಬಿದ ಸಂಸಾರ ಬಹುಕಾಲ ನಂದನವಾಗಿಯೇ ಇತ್ತು. ಆಗ ಬ್ರಿಟಿಷ್ ಆಳ್ವಿಕೆಯ ಬಿಸಿ ವಾತಾವರಣ ,ರೇಷನ್ನಿನ ಕಾಲದಲ್ಲೂ ಯಾವುದೇ ಕೊರತೆಯಿರಲಿಲ್ಲ.  ಊರಿಗೇ ಉಣಬಡಿಸುವಷ್ಟು ತುಂಬಿತ್ತು.... ಕಾಣದಂತೆ ಬಚ್ಚಿಡಲು ನೆಲಮಾಳಿಗೆಯಿತ್ತು...!!! (ಈಗಲೂ ಇದೆ ,ಆದರೆ ಬಾವಲಿಗಳು ತುಂಬಿವೆ ಅಲ್ಲಿ.)  ಮನೆಯ ಮಗಳು ಮದುವೆಯಾಗಿ ಹೆಗ್ಗೆರೆ ಕೃಷ್ಣ  ಭಟ್ಟರ ಮಡದಿಯಾದಳು, ಮಂಜುನಾಥನಿಗೆ ಹೊನಲಗದ್ದೆಯ 'ಕಾರಹಿತ್ತಲಿನ' ಮಂಜಿ ಮದುವೆಯಾಗಿ ಬಂದಳು. ಗೋವಿಂದ ,'ಹೆಗಡಿ'ಯ ಕಾನಂಭಟ್ಟರ ಮನೆಯ ಮಗಳ ಕೈ ಹಿಡಿದ, ಇಷ್ಟಾಗುವಾಗ ಮಂಜುನಾಥನಿಗೆ ಹಿರಿಯ ಮಗ ಮಹಾಬಲ ಹುಟ್ಟಿ ಸತ್ತು, ಎರಡನೇ ಮಗಳು ಯಶೋದೆ, ಮೂರನೇ ಮಗ ಗಣೇಶನ ಜನನದ ಬಾಣಂತನ ನಡೆಯುತ್ತಿತ್ತು.  ಆಗ ಅದೆಲ್ಲಿತ್ತೋ ಮಾರಿ ಮಂಜಿಯನ್ನು ಎಳೆದೊಯ್ದಿತ್ತು..... ಮಗಳು ಯಶೋದೆ ಇನ್ನೂ ನಾಕು ವರ್ಷದ ಬಾಲೆ ಗಣೇಶ ಹಸುಗೂಸು. ಆ ಈರ್ವರನ್ನೂ ನಾನೇ ಸಾಕುತ್ತೇನೆಂದು ಮದುವೆಯನ್ನೇ ಧಿಕ್ಕರಿಸಿ ಬೆಂಗಾವಲಾಗಿನಿಂತ ಹೊನಲಗದ್ದೆಯ ಸೋದರ ಮಾವ ಭಟ್ಟಣ್ಣ. ಅಲ್ಲಿಗೇ ಈರ್ವರೂ ಹೋದರು, ಇಲ್ಲಿ ತಮ್ಮಂದಿರಿಗೆ ಮದುವೆ ಮಾಡಿಸಲು ಓಡಾಡಿಕೊಂಡಿದ್ದ ಮಂಜುನಾಥ ತಾನೇ ಏಕಾಂಗಿಯಾಗಿದ್ದ.... ಮತ್ತೊಂದು ಮದುವೆ ಆಗಬೇಕು, ಅದಕ್ಕಾಗಿ ಓಡಾದಿಕೊಂಡಿದ್ದಾಗ ಆಗಿನ ರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಂದ್ರ ಭಾರತೀ ಶ್ರೀಗಳ ಸಖ್ಯದಿಂದಾಗಿ ಸವಾರಿಯೊಂದಿಗೆ ಅಲ್ಲಲ್ಲಿ ತಿರುಗಾಟ ಮಾಡಿಕೊಂಡಿರುವಾಗ ಶ್ರೀಗಳೇ ಸೂಚಿಸಿದರು ; ಅಲ್ಲಿ ಪುತ್ತೂರಿನ 'ಮುಗುಳಿ'ಯ ಶಂಕರ ನಾರಾಯಣ ಭಟ್ಟರ ಮಗಳು ಲಕ್ಷ್ಮೀ.. ಇದ್ದಾಳೆ ಓದಿದವಳಿದ್ದಾಳೆ( ಆಕಾಲಕ್ಕೇ ಬಲ್ಮಠ ಕಾಲೇಜಿನ ಮೆಟ್ಟಿಲು ತುಳಿದು ಟೀಚರ್ಸ್ ಟ್ರೇನಿಂಗ್ ಮುಗಿಸಿದ್ದಳು) ಭ್ಹಟ್ಟರು ತುಂಬಾ ಬಡವರು. ನೀವೇ ಮದುವೆ ಮಾಡಿಸಿಕೊಂದು ಬರಬಹುದಾದರೆ ನೋಡುವಾ ಎಂದು.  ಶಂಕರ ನಾರಾಯಣ ಭಟ್ಟರಿಗೆ ನಿರೂಪು ಹೋಯಿತು, ಅಲ್ಲಿ ಶಂಕರ ನಾರಾಯಣ ಭಟ್ರಿಗೆ ಐದುಜನ ಹೆಣ್ಣು ಮಕ್ಕಳು ಈರ್ವರು ಗಂಡು ಮಕ್ಕಳು ಹೆಂಡತಿ ಹೈಮಾವತಿ.   ಬಡತನವಿದ್ದರೂ ಗೌರವದ ಸಂಸಾರ ಬೇಡಿಯಾದರೂ ಬದುಕಿಯೇನು ತೊತ್ತಿಗೆ ಬದುಕಲಾರೆ ಎಂಬ ಮನೋಭಾವ ಅವರದ್ದು.  ದೊಡ್ಡಮಗಳಿಗೆ ಮದುವೆಯಾಗಿತ್ತು (ಈಗಿನ ಯಕ್ಷಗಾನಕಲಾವಿದ ಕೆ.ಗೋವಿಂದ ಭಟ್ಟರ ಅತ್ತೆ - ಮಾವ ! :ಹೆಂಡತಿ ಸಾವಿತ್ರಿಯ ಅಪ್ಪ-ಅಮ್ಮ) ಉಳಿದವಳು ಈ ಲಕ್ಷ್ಮೀ, ಗೋವಿಂದ ( ಘನಪಾಟಿ. ವಿದ್ವಾನ್ ಎಮ್.ಗೋವಿಂದ ಭಟ್ಟ: ಹಾಲಿ ಬಳ್ಳಾರಿವಾಸಿ )  ಮಗಳು ಪರಮೇಶ್ವರಿ ( ಬೆಳ್ಳಾರೆ ಪಿ.ಸುಬ್ಬಣ್ಣ ಭಟ್ಟರ ಹೆಂಡತಿ ), ಮಗ ನಾರಾಯಣ( ಸದ್ಯ ಪುಟ್ಟಪರ್ತಿ ವಾಸಿ) ಮಗಳು ಶಾರದೆ ( ವೇಣೂರು ಈಶ್ವರ ಭಟ್ಟರ ಹೆಂಡತಿ) ಅವರು ಬಂದರು.  ಸವಾರಿಯಲ್ಲಿಗೆ ಶ್ರೀಗುರುಗಳೇ ಹೇಳಿದ ಮೇಲೆ ಮತ್ತಿನ್ನೇನು ಎಂದು ಮಾತುಕತೆಯಾಗಿ ಶುಭಮುಹೂರ್ತದಲ್ಲಿ ಲಕ್ಷ್ಮೀ ಮಂಜುನಾಥನಿಗೆ ಎರಡನೇ ಸಂಬಂಧವಾಗಿ ಮನೆಗೆ ಬಂದಳು.
      ಸಂಸಾರ  ಸಾಗುತ್ತಿತ್ತು  ಬೆಳೆದ ಕುಟುಂಬದ ನಿರ್ವಹಣೆಗಾಗಿ ಘಟ್ಟದ ಮೇಲೆ ಒಂದಿಷ್ಟು ಜಮೀನು ಖರೀದಿಯಾಯಿತು ಅಲ್ಲಿಯೂ ಕೆಲ ಮಕ್ಕಳು ಹೋಗಿ ದುಡಿದರು ಇಂತಿಪ್ಪಾಗ ವಿಷ್ಣು ಕರ್ಕಿಯ ಶಶಿಕಲಾಳನ್ನೂ ಶಂಭು ಹೆಬ್ಬಾತಕೇರಿ (ಹೊಸಾಕುಳಿ)ಯ  ಹೈಮಾವತಿ (ಹೊನ್ನಿ)ಯನ್ನೂ, ರಾಮಚಂದ್ರ ಸಿರ್ಸಿ-ಗೋಳಿ ಹತ್ತಿರದ ಹೊಸಳ್ಳಿಯ ಕೂಸನ್ನೂ, ವಾಸುದೇವ ಸಿದ್ದಾಪುರ ಉಂಬಳಮನೆಯ ಲಕ್ಷ್ಮೀಯನ್ನೂ, ಕೈಹಿಡಿದು ಸಂಸಾರದ ಉತ್ತರಕಾಂಡ ಪ್ರಾರಂಭಿಸಿಯಾಗಿತ್ತು, 
     ಮಂಜುನಾಥನ ಹೆಂಡತಿ ಲಕ್ಷ್ಮೀ, ಮನೆಗೆ ಹಿರಿ ಸೊಸೆಯಾಗಿ ತನ್ನ ಯಜಮಾನಿಕೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಳು. ಕಲಿತವಳು ಎಂಬ ಗೌರವ-ಭಯ ಇತ್ತು ಎಲ್ಲರಲ್ಲೂ , ಅವಳಿಗೆ ಅಹಂಕಾರವಿರಲಿಲ್ಲ ,ಊರಿನ ಮಕ್ಕಳೆಲ್ಲರಿಗೆ ಲಕ್ಷ್ಮೀಚಿಕ್ಕಿಯಾಗಿದ್ದಳು , ಮಂಜುನಾಥನ  ಹಿರಿಯ ಹೆಂಡತಿಯ ತವರಿನವರಿಗೂ ಇವಳು ಮನೆ ಮಗಳೇ ಆಗಿದ್ದಳು. ಇವಳೂ ಅಲ್ಲಿ ಹೊನಲಗದ್ದೆಯ ಎಲ್ಲಾ ಕಾರ್ಯಗಳಿಗೆ 'ತವರು' ಮನೆಯ ಕೆಲಸವೆಂದೇ ತಿಳಿದು ಹೋಗುತ್ತಿದ್ದಳು ಆ ಮಕ್ಕಳಿಗೂ ಲಕ್ಷ್ಮೀಚಿಕ್ಕಿ ಆಪ್ಯಾಯವಾಗಿದ್ದಳು. ಮನೆಯಲ್ಲಿ ಓರಗಿತ್ತಿಯರ ಮನಗೆದ್ದಿದ್ದ ಲಕ್ಷ್ಮೀ ಮನೆಗೆಲಸ ಮುಗಿಸಿ ಊರಲ್ಲಿ ಮಹಿಳಾ ಮಂಡಳ ಯುವತಿ ಮಂಡಳಗಳನ್ನು ಕಟ್ಟಿ ಹೊಲಿಗೆ ,ಹಪ್ಪಳ,ಕಸೂತಿ ಮುಂತಾದ ಕಾರ್ಯಗಳಲ್ಲೂ ಮುಂದಾಗಿದ್ದಳು.
ಹೀಗೇ ಸಾಗುತ್ತಿರುವಾಗ ಅಣ್ಣ ಮಂಜುನಾಥ ಕೇವಲ ಅಲ್ಲಿ ಇಲ್ಲಿ ತಿರುಗಾಡಿಕೊಂಡು ಮನೆಗೆಲಸಕ್ಕೆ ಸಿಗದೇ..... ಬಂದಾಗ ಓ..ಆ...ಎಂದು ಕೂಗಾಡುವುದನ್ನು ಸಹಿಸಲಾರದ ತಮ್ಮಂದಿರು ಹಿಸೆಯಾಗಬೇಕು, ನಮ್ಮ ಸಂಸಾರ ನಾವು ನೋಡಿಕೊಳ್ಳುತ್ತೇವೆ, ಎಂಬ ಇರಾದೆ ಇಟ್ಟಾಗ, ಸಣ್ಣ ಪುಟ್ಟ ಮನಸ್ತಾಪಗಳೊಂದಿಗೆ ಮನೆಯ ಆಸ್ತಿ ಭಾಗವಾಯಿತು, ಇದಕ್ಕೆ ಆಕಾಲದ ಕೊಂಕೇರಿ ವಿಷ್ಣು ಭಟ್ಟರು,ಭಡ್ತಿ ಗೋವಿಂದ ಭಟ್ಟರು,ಕಡೇಮನೆ ಗೋಪಾಲ ಭಟ್ಟರು, ಸಭಾಹಿತರು ಇವರೆಲ್ಲ ಸಾಕ್ಷಿಗಳಾದರು. ಮಂಜುನಾಥ - ಲಕ್ಷ್ಮೀ ಮನೆಯ ಹಿರಿಯರಾಗಿದ್ದರೂ ಬೇರೆ ಮನೆ ಮಾಡಿಕೊಂಡು ಮಕ್ಕಿಗದ್ದೆಯ ಮೂಲೆಯಲ್ಲಿ ವಾಸಿಸಬೇಕಾಯಿತು. ಅದು ಹೆಣ ಸುಡುವ ಸುಡುಗಾಡಾಗಿತ್ತು ಮೊದಲು, ( ಈಗಲೂ ಅಲ್ಲಲ್ಲಿ ಅಗೆದರೆ ಮೂಳೆಗಳನ್ನು ಹುಗುದಿಟ್ಟ ಮಣ್ಣಿನ ಪಾತ್ರೆಗಳು ಸಿಗುತ್ತಿವೆ.)
      ಬೇರೆ ಮನೆ ಮಾಡಿ, ತೋಟ ಸಾಲದೆಂದು ಹೆಚ್ಚು ಅಡಿಕೆ ಸಸಿನೆಟ್ಟು, ಅದು ಫಲಬಿಡುವ ಹೊತ್ತಿಗೆ ಲಕ್ಷ್ಮಿಯೂ ಫಲಭರಿತಳಾ ದಳು. ಕೀಲಕ ಸಂವತ್ಸರದ ಶ್ರಾವಣ ಶುದ್ಧ ನವಮಿಯಶುಭಮುಹುರ್ತದಲ್ಲಿ ಬೆಳಿಗ್ಗೆ ಏಳುಗಂಟೆಗೆ ( ಗಡಿಯಾ ರವಿರಲಿಲ್ಲ ಅಂದಾಜು)  ಗಂಡು ಮಗುವಿಗೆ ತಾಯಿಯಾದಳು, ಅಂದರೆ ನಾನು ಹುಟ್ಟಿದೆ. !!!  ಮನೆಯಲ್ಲಿ ಬೋರಿಡುವ ಬಡತನ, ಮಳೆಗಾಲ, ಎಲ್ಲವನ್ನೂ ಮರೆಸಿದ್ದೆ.!! ಹಾಲು ಮೊಸರಿಗೆ ಬರವಿರಲಿಲ್ಲ. ಅಪ್ಪ ಆಟದ ಮೇಳ- ಗುರುಗಳ ಸವಾರಿ ಎಂದು ಹೊರಗೇ ಇರುತ್ತಿದ್ದ ಇಲ್ಲಿ ಗೊಂಡಾರಣ್ಯದ ಮಧ್ಯದಲ್ಲಿ ಹಗಲೆನ್ನದೇ ರಾತ್ರಿಯೆನ್ನದೇ ತಾಯಿ-ಮಗ ಇಬ್ಬರೇ...! ಹಿಂದೆ ಸುಡುಗಾಡು( ವಾಸ್ತವ್ಯ ಸುರು ಆದ ಮೇಲೆ ಊರಿನ ಹೆಣ ಸುಡುವುದು ನಮ್ಮ ಮನೆಯ ಹಿಂಭಾಗಕ್ಕೆ ಸ್ಥಳಾಂತರ ಆಗಿತ್ತು ಮೊದಲು ಮನೆಯಿದ್ದ ಜಾಗದಲ್ಲೇ ಇತ್ತಂತೆ!!!
                   ಬಾಲ್ಯ...!!! ನನಗೂ ಇತ್ತು,,,,! ಆಡಲು ಮಕ್ಕಳಿರಲಿಲ್ಲ.... ಮನೆಯ ನಾಯಿ ಬೆಕ್ಕು, ಹಸು,ಕರು,,, ಎಲ್ಲಾ ನನ್ನ ಆಟಿಕೆಗೆ ವಸ್ತುವಾದವುಗಳೇ...!! ಆದರೆ ತಾಯಿಯ ಶಿಕ್ಷಣದ ಫಲ!!! ಅದರ ಸಂಸ್ಕಾರವಿತ್ತು.. ಜಾಣ್ಮೆಯಿತ್ತು... ವಂಶದ ಪ್ರಭಾವವಿತ್ತು. !!! ಸೂಕ್ಷ್ಮಗ್ರಾಹಿಯಾಗಿದ್ದೆ.... ಬೆಳೆದೆ..... ಬಡತನ ಎಷ್ಟಿದ್ದರೂ.... ಬಾಗುತ್ತಿರಲಿಲ್ಲ ದೇಹಿ ಎನ್ನುತ್ತಿರಲಿಲ್ಲ ಈಗಲೂ ನೆನಪಿದೆ... ಅಪ್ಪನಿಲ್ಲದ  ಒಂದು  ಮಳೆಗಾಲ.... ಮನೆಯಲ್ಲಿ ದೇವರ ಅಕ್ಷತೆಗೆಂದು ತೆಗೆದಿರಿಸಿದ್ದ  ಪಾವು ಅಕ್ಕಿ ಬಿಟ್ಟರೆ ಬೇರೆ ಅಕ್ಕಿಯಿಲ್ಲ.... ಸಾಲ ಕೊಡುವವರಿಲ್ಲ.!!..... ಊರು ಬೆಳೆದಿರಲಿಲ್ಲ....!!. ಇಪ್ಪತ್ತೇಳುದಿನ..... ಮಳೇಗಾಲದಲ್ಲಿ  ಹಿತ್ತಿಲಲ್ಲಿ ಬೆಳೆದುಕೊಂಡಿದ್ದ ಬೆಂಡೇಕಾಯಿ ಬೇಯಿಸಿ ತಿಂದು. ಅದೂ ಒಗ್ಗರಣೆಯಿಲ್ಲ,,...! ಹಾಗೇ ತಿಂದು ಬದುಕಿದ್ದೆವು, ನಾವು ತಾಯಿ ಮಗ...!!!! ಅಂತೂ ಒಂದು ದಿನ ಬಂದ ಕಡೇಮನೆ ಗೋಪಾಲ ಭಟ್ರು ವಿಷಯ ಹೇಗೋ ತಿಳಿದು ಮನೆಗೆ ಹೋಗಿ ಮನೆಯ ಆಳಿನ ಮೂಲಕ ಅಕ್ಕಿ ಕಳುಹಿಸಿದ್ದರು. ಅಂದೇ ಅನ್ನ!!! ಕಂಡಿದ್ದು ಇಪ್ಪತ್ತೇಳನೇ ದಿನ ರಾತ್ರಿ..... ಮರೆಯಲಾದೀತೇ..... ಆ ರಾತ್ರಿಯನ್ನ....! ಎಂದೋ ಬಂದ ಅಪ್ಪನಿಗೆ ವಿಷಯವೇ ಗೊತ್ತಿರಲಿಲ್ಲ ಅವ ಕೇಳಲೂ ಇಲ್ಲ!!!!! ಆದರೂ ಅಪ್ಪ ಅಪ್ಪನೇ ಅಲ್ಲವೇ ಸಂಭ್ರಮಿಸುತ್ತಿದ್ದೆ... ಕಂಡಾಗ..... ಹಾಗಂತ ,,,,ತುಂಬ ಮೃದು ಸ್ವಭಾವ ಯಾವ ಚಟಗಳಿಲ್ಲ!! ಬರೇ ಸುತ್ತುವುದು..... ಇದು ಇಡೀ ಮನೆಯ ಬದುಕನ್ನೇ ವಿಚಿತ್ರವಾಗಿಸಿತ್ತು...! ಅಂತೂ ಬೇಳೆದೆ ಶಾಲೆಗೆ ಹೋಗಬೇಕು.... ಹತ್ತಿರದಲ್ಲೇ ಎರಡುಶಾಲೆಗಳಿದ್ದವು.  ತೊಂದರೆಯಿರಲಿಲ್ಲ.. ಹೋದೆ... ಓದಿನಲ್ಲಿ ಮುಂದಿದ್ದೆ ಆ ಕಾಲದ ವಿಷ್ಣು ಮಾಸ್ತರರು ಯಾಲಕ್ಕಿ. ಭಡ್ತಿ ಪಿ.ಆರ್..ಭಟ್ಟರು. ಪಿ.ವಿ.ಶೇಟರು.. ಸೂರಿ ಮಾಸ್ತರರು, ಎಮ್.ಪಿ.ಭಟ್ಟರು.. ಇವರೆಲ್ಲಾ ಮೆಚ್ಚಿನ ಗುರುಗಳು ನನ್ನನ್ನು  ಮೆಚ್ಚಿದ ಗುರುಗಳು.... ಅದರಲ್ಲೂ ಯಾಲಕ್ಕಿ ವಿಷ್ಣು ಮಾಸ್ತರರ ಮರೆಯಲು ಸಾಧ್ಯವೇ ಇಲ್ಲ...!!
    ಹೀಗೇ ದಿನಗಳೆಯುತ್ತಿರುವಾಗ ಅಮ್ಮ ಮತ್ತೋರ್ವ ತಂಗಿಗೆ ಜನ್ಮ ಕೊಟ್ಟಳು (ಅವಳು ಸತ್ತೂ ಹೋದಳು) ಮತ್ತೆ ನಂತರದ ದಿನಗಳಲ್ಲಿ  ಮತ್ತೊಬ್ಬ ತಂಗಿ ಹುಟ್ಟಿದಳು.. ಮಹಾಲಕ್ಷ್ಮೀ.... ಆಕಾಲಕ್ಕೆ ನಾನು ಹೈಸ್ಕೂಲು ಸೇರಿದ್ದೆ.  ಅದರೊಟ್ಟಿಗೆ ವೇದ ಸಂಸ್ಕೃತಾಧ್ಯಯನಕ್ಕಾಗಿ ಕೆಕ್ಕಾರು ಪಾಠಶಾಲೆಗೂ ಹೋಗಿ ಬರುತ್ತಿದ್ದೆ. ಆ ಸಮಯಕ್ಕೇ ವೈದಿಕ ಮಂತ್ರ -ಪೂರ್ವಾಪರ ಪ್ರಯೋಗ ಆಗಿತ್ತು, ಹಾಗಾಗಿ ಅಪ್ಪನಿಗೆ ಇನ್ನು ಇಂಗ್ಲೀಷ್ ವಿದ್ಯೆ ಸಾಕು ಮಾಡೋಣ ಪೌರೋಹಿತ್ಯ ಮಾಡಲಿ, ಎಂದಿತ್ತು. ಆಧಾರವಾಗಲೀ ಎಂದು. ಆದರೆ ಅಮ್ಮ ( ಅಮ್ಮನನ್ನು "ಅಬ್ಬೆ" ಎನ್ನುತ್ತೇನೆ) ಸುತರಾಂ ಒಪ್ಪಲಿಲ್ಲ .ಅವಳ ಜ್ಞಾನದ ಅರಿವಿತ್ತು ಅವಳಿಗೆ !! ಅಂತೂ ಹೈಸ್ಕೂಲು ಸೇರಿದೆ. ಅಲ್ಲಿ ಜಿ,ಆರ್,ಭಟ್ಟರು, ಎಸ್,ಶಂಭು ಭಟ್ಟರು, ಜಿ,ವಿ,ಭಟ್ಟರು, ಪಿ.ಜಿ.ಭಟ್ಟರು, ಇತ್ಯಾದಿ ಮಹಾಮಹೋಪಾಧ್ಯಾಯರ ಸೂಕ್ತ ಮಾರ್ಗದರ್ಶನ ಇತ್ತು, ಶಿಕ್ಷಕ ತರಬೇತಿಯನ್ನೂ ಮುಗಿಸಿದೆ ,
    ,ಶಾಲೆ ಕಾಲೇಜಿಗೆ ಹೋಗುತ್ತಲೇ ಜೋಗಿ ನಾರಾಯಣ ಭಟ್ರು ಛೇರಮನ್ ನಾರಾಯಣ್ ಭಟ್ರು( ಬಾವಜ್ಜನ ಮನೆ) ಇವರಲ್ಲಿ ಜ್ಯೋತಿಷ್ಯದ ಪ್ರಥಮ ಪಾಠವಾಗಿತ್ತು, ಅಂತೆಯೇ ಬಾಳೆಗೆದ್ದೆ ಜಿ.ಆರ್.ಬಟ್ಟರು ಹಾಗೂ ನಮ್ಮೂರಿಗೆ ವಾರದಲ್ಲೊಮ್ಮೆ ಬಂದು ಸಂಗೀತ ಪಾಠ ಹೇಳೀ ಕೊಡುತ್ತಿದ್ದ ಪಂಡಿತ ಷಡಕ್ಷರಿ ಗವಾಯಿಗಳ ಸಾಂಗತ್ಯದಲ್ಲಿ ಸಂಗೀತದ ಸರಿಗಮ ವನ್ನ್ನೂ ಕಲಿತಾಯ್ತು. ಇನ್ನು ಊರಿನ ಅಕ್ಕ ಪಕ್ಕದ ಮನೆಯವರು ಯಕ್ಷಗಾದ ದಿಗ್ಗಜರುಗಳು, ಜೋಗಿ ಕೃಷ್ಣ ಬಾಗವತರು, ಕಡತೋಕಾ ಮಂಜುನಾಥ ಭಾಗವತರು,ಮತ್ತು ಕಡತೋಕೆಯವರ ಅಣ್ಣಂದಿರಾದ ಶ್ರೀ ಸುಬ್ರಾಯ ಭಾಗವತರು ಶ್ರೀ ನಾರಾಯಣ ಭಾಗವತರು ಹೀಗೆ ಇವರೆಲ್ಲರ ಮೈದಡವುವಿಕೆಯಿಂದ ಆ ರಂಗದಲ್ಲೂ ಗೆಜ್ಜೆ ಕಟ್ಟಿದ್ದಾಯ್ತು. ಆ ಕಾಲದ ಘಟಾನುಘಟಿಗಳೆನಿಸಿದ ಶೇಣಿ ಮಾವ, ಮಲ್ಪೆ ರಾಮದಾಸ ಸಾಮಗರು ಕೆರೆಕೈ ಕೃಷ್ಣ ಭಟ್ಟರು, ಕೆರೆಮನೆ ಹೆಗಡೆ ದ್ವಯರು ಮುಂತಾದ ಮಹಾಪಾತ್ರರ ಎದುರು ಸಣ್ಣ ಸಣ್ಣ ಪಾತ್ರಗಳಾದ ವಿದುರ,ಚಾರಕ, ಬ್ರಾಹ್ಮಣ,ಲಕ್ಷ್ಮಣ, ಪಾತ್ರಧಾರಿಯಾಗಿ ತಾಳಮದ್ದಳೆಗಳಲ್ಲಿ ಕುಳಿತಿದ್ದಾಯಿತು. ಹಿರಿಯರೆದುರ ಸಹಜ ಭಯ ಮಾತ ಮರೆಸಿದಾಗ ಬೆನ್ನು ಸವರಿ ಬಾಯ್ದೆರಿಸಿದರು ಆ ಹಿರಿಯ ಜೀವಗಳು...ಮತ್ತೆ ಆ ಚಿಕ್ಕ ಪಾತ್ರಗಳಿಗೇ ಜೀವತುಂಬಿ ಸೈ ಎನಿಸಿಕೊಂಡೆ......ಹೀಗಿರುವಾಗಲೇ ತರ್ಕಶಾಸ್ತ್ರವನ್ನು ಕಲಿಯಬೇಕು ಎಂಬ ಹಪಹಪಿಕೆ ಉಂಟಾಗಿ ಆಗ ಶ್ರೀ ಎಸ್.ಶಂಭು ಭಟ್ಟರ ಮನೆಯಲ್ಲಿ ವಾಸಿಸುತ್ತಿದ್ದ  ಕರ್ಕಿಯ ಬೊಂಬೆ ವೆಂಕಟ್ರಮಣ ಶಾಸ್ತ್ರಿಗಳಿಂದ  ತರ್ಕ ಪಾಠವೂ ಆಯಿತು. ಅದರ ಸಾರವನ್ನು ಉಣಬಡಿಸಿದರವರು. ಈ ಪಾಠವೇ ಅಂದು ಅದುವರೆಗೆ ನನ್ನಲ್ಲಡಗಿದ್ದ ಹಿಂದಿನ ದೈವೀ ಕಲ್ಪನೆಗಳನ್ನೆಲ್ಲ ಬದಿಗೊತ್ತಿ ಜೀವನದ ದಿಕ್ಕು ಬದಲಿಸಲು ಕಾರಣ ಆಯಿತು ಎನ್ನಬಹುದೇನೋ. ಆದರೂ ಇವು ಎಲ್ಲವೂ ನನ್ನ ಮಾನಸಿಕ ಬದುಕನ್ನು ಬೆಳೆಸಿದವೇ ಹೊರತು ಭೌತಿಕವಾಗಿ, ಆರ್ಥಿಕವಾಗಿ ಬೆಳೆಯಲನುವಾಗಲೇ ಇಲ್ಲ.!!!! ಹಾಗಾಗಿ ಎಲ್ಲವನ್ನೂ ಬಿಟ್ಟೆ.......!!!! ಹೊಸದ ಹುಡುಕಲು ಹೊರಟೆ...
       ಇಷ್ಟಾಗುವಾಗ ಮನೆಯಲ್ಲಿ ಅಪ್ಪ ರಕ್ತದೊತ್ತಡದಿಂದಾಗಿ ಪಾರ್ಶ್ವವಾಯು ಪೀಡಿತನಾಗಿ ಜೀವಚ್ಛವವಾಗಿದ್ದ . ಮನೆಯಲ್ಲಿನ ಒಬ್ಬ ರೋಗಿಯಾಗಿ ಮಲಗಿದ್ದ. ಇಡೀ ಮನೆಯ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಿದ್ದ, ತಕ್ಕ ಮಟ್ಟಿಗೆ ಉಂಡುಟ್ಟು ಸುಖವಾಗಿದ್ದ ಸಂಸಾರ ವೈದ್ಯಕೀಯ ವೆಚ್ಚಗಳಿಂದಾಗಿ ಸಾಲದ ಬಲೆಯಲ್ಲಿ ಬೀಳ ಬೇಕಾಯಿತು.... ಅಂತೂ  ಅಪ್ಪ ಸತ್ತ.. !!!ಅದುವರೆಗೆ ಮನೆಯಿಂದ ದೂರವಾಗೇ ಇದ್ದ ಅಣ್ಣ ಗಣೇಶ ಅಕ್ಕ ಯಶೋದೆ ಬಂದು ಕ್ರಿಯಾದಿಗಳನ್ನು ಮಾಡಿದರು..... ದೂರವೇ ಇದ್ದರೂ ಅಪ್ಪ ಅಪ್ಪನೇ ಅಲ್ಲವೇ?,  ಇವೆಲ್ಲ ಘಟನೆಗಳ ಒಳಗೆ ನಾನು ವೇದ,  ಸಂಸ್ಕೃತ,  ವೈದಿಕ ವಿದ್ಯೆ,  ಜ್ಯೋತಿಷ್ಯ  ಎಲ್ಲ ಕಲಿತಿದ್ದರೂ ಯಾವುದೂ ಪ್ರಯೋಜನಕ್ಕೆ ಬಾರದಿದ್ದಾಗ ಅದನ್ನು ದ್ವೇಷಿಸ ತೊಡಗಿದೆ.  ಅದು ಸತ್ಯವೂ ಆಗಿತ್ತು!!!!
        ಅಪ್ಪನ ನಂತರ ?....... ಕೆಲಸವಿಲ್ಲಾ... ಸಾಲದ ಹೊರೆ.... ಊರಲ್ಲಿ ಯೇನಾದರೂ ಉದ್ಯೋಗ ಮಾಡೋಣವೆಂದರೆ.... ಸಹಕಾರವಿಲ್ಲಾ.... ಅಂತೂ ಕಾಲೇಜು ಮುಗಿಸಿದ ಶಾಸ್ತ್ರ ಮಾಡಿದೆ. ಅಂದು ಆಗಿನ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡದಲ್ಲಿ ಯಾವುದೋ ಸಕ್ರೆಟರಿ ಹುದ್ದೆಗೆ ಅರ್ಜಿ ಕರೆದಿದ್ದಕ್ಕೆ ಗುಜರಾಯಿಸಿದ್ದೆ. ಕರೆಯೂ ಬಂತು...... ಹೋಗಬೇಕಲ್ಲಾ  ಧಾರವಾಡಕ್ಕೆ.... ಇಪ್ಪತ್ತು ಹಲಸಿನಕಾಯಿ ಮಾರಿ ಸಂಪಾದಿಸಿದ ಹಣ ರೂಪಾಯಿ ಒಂದುನೂರಾ ಎಂಭತ್ತನ್ನು ಕೈಯಲ್ಲಿ ಹಿಡಿದುಕೊಂಡು ಧಾರವಾಡಕ್ಕೆ ಬಂದು ಇಂಟರವ್ಯೂನಲ್ಲಿ ಉತ್ತಮವಾಗಿ ಅಂಕಗಳಿಸಿ ಹೊರಕ್ಕೆ ಬರುವಾಗ ಇಟ್ಟಿದ್ದ ಬೇಡಿಕೆ ಐದಂಕಿಯ ಮೊತ್ತದ್ದಾಗಿತ್ತು....!!! ಥೂ.... ಇವರಾ.... ವಿದ್ಯೆಗೆ ಬೆಲೆಯೇ ಇಲ್ಲವಾ...? ಎನಿಸಿ ಬಿಟ್ಟಿತ್ತು.... ಮನೆಗೆ ಬರುವಾಗ ಇನ್ನೂ ಮೂವತ್ತಾರು ರೂಪಾಯಿ ಉಳಿಯುತ್ತದೆನ್ನುವುದನ್ನು ಲೆಕ್ಖ ಹಾಕಿ, ತಂಗಿಗೆ ಒಂದು ಅಂಗಿಯನ್ನು ತಂದೆ. ಚೆಂದದ್ದು... ಹಾಕಿ ನಲಿದಳು ಅವಳು...... ಇಲ್ಲಿ ಏನೂ  ಇಲ್ಲ... ಬೇರೆ ಯೆಲ್ಲಿಗಾದರೂ ಹೋಗಬೇಕು ಎಂಬ ಮನಸು... ಊರು ತೊರೆದೆ. ಅಷ್ಟು ಮಾಡುವಾಗ ತಂಗಿಯಂದಿರಿಗೆ ಓದಿಸುವ ಜವಾಬ್ದಾರಿಯಿಂದ ಹಿಂದೆ ಸರಿಯಲಿಲ್ಲ ,ಅವರೂ ಓದಿದರು.... ಒಂದು ಹಂತಕ್ಕೆ ಬಂದ ಮೇಲೆ ಅಬ್ಬೆ ಇನ್ನೂ ಗಟ್ಟಿ ಇದ್ದಾಳೆ ಮನೆಗೆಲಸ ತೊಂದರೆಯಾಗಲಿಕ್ಕಿಲ್ಲ ವೆಂದು ಸಮಾಧಾನ ಗೊಂಡು ನಾವು ಅಣ್ಣ-ತಂಗಿ ಮನೆ ಬಿಟ್ಟು ಬೆಂಗಳೂರು ಸೇರಿ ಅಲ್ಲಿ ಸಂಸ್ಕೃತದ ಅರಿವಿನಿಂದಾಗಿ 'ಸಂಸ್ಕೃತ ಭಾರತೀ'ಯಲ್ಲಿ ಸೇವೆ ಮಾಡುತ್ತ  ಇದ್ದೆವು. ಅಲ್ಲಿ ನಾಲ್ಕೈದು ವರ್ಷಗಳ ಕಾಲ ದೇಶದ ನಾನಾ ಭಾಗಗಳಿಗೆ ತಿರುಗಿದೆವು. ಕಾಶ್ಮೀರ ದಿಂದ ಕನ್ಯಾಕುಮಾರಿ, ಗುಜರಾತಿನಿಂದ ಕಲಕತ್ತಾದ ವರೆಗೆ ಯೆಲ್ಲ ಕಡೆ ಸಂಸ್ಕೃತ ಪ್ರಚಾರಕ್ಕಾಗಿ ಓಡಾಡಿದೆ...ಜ್ಞಾನದ ಹರವು ಹೆಚ್ಚಿಸಿಕೊಂಡೆ,,,ವಿದ್ವಜ್ಜನರ ಸಖ್ಯ ಬೆಳೆಸಿದೆ .ಈ ಸಂಸ್ಕೃತ ಭಾರತಿಯ ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಾಗುತ್ತಿರುವಾಗಲೇ ತಿರುಗದ ತಾಣವಿಲ್ಲಾ ....ಎಂದೆನಲ್ಲಾ......ಅಲ್ಲಿ ಹೋದಲ್ಲಿ ಬಂದಲ್ಲಿ ನನ್ನ ಬೇಟೆ..... ವಿದ್ವಜ್ಜನರದಾಗಿತ್ತು...!! ಉತ್ತರದ ಉದ್ದಾಮ ಪಂಡಿತ ಶ್ರೀ ದೇವೇಂದ್ರ ಚತುರ್ವೇದಿಯವರಿಂದ ವೇದದ ಸಾರವನ್ನು ಸಾಧ್ಯವಾದಷ್ಟು ಸೊರೆದೆ... ಕಲಕತ್ತದಲ್ಲಿರುವಾಗ ಊಟದ ಮನೆಯ ಅಪ್ರತಿಮ ವೈಯ್ಯಾಕರಣಿ  'ಮಹಾಪಾತ್ರರು'  ಸಮಯವಿದ್ದಾಗಲೆಲ್ಲಾ ವ್ಯಾಕರಣ ಶಾಸ್ತ್ರದ ಒಳಹೊರಗನ್ನೂ ಉಣಬಡಿಸಿದರು ನನಗೆ. ಆಂಧ್ರದಲ್ಲಿರುವಾಗ 'ವೆಂಗಪಲ್ಲಿ ರಂಗಸ್ವಾಮಿ ಅವಧಾನಿ, ಮೇಲುಕೋಟೆಯ ಶ್ರೀ ಲಕ್ಷ್ಮೀತಾತಾಚಾರ್ಯರು, ವೇದಗಣಿತದ ಪ್ರವಕ್ತೃ ಪೂಜ್ಯ ಭಾರತೀ ತೀರ್ಥರ ಪರಂಪರಾನುಗತ  ಶಿಷ್ಯರಾದ ಶ್ರೀ ವಿದ್ಯಾತೀರ್ಥರು. ಶತಾವಧಾನಿ ಆರ್.ಗಣೇಶ್. ಮೈಸೂರಿನ ಶ್ರೀ ಪರಾಂಜಪೆ  ಮುತಾದವರೆಲ್ಲರ ವಿದ್ವತ್ತೆಯ ಹನಿಗಳನ್ನು ಸವಿದೆ. ಇಷ್ಟೆಲ್ಲ ಆಗಿದ್ದರೂ ಅಂದು ಕುಮಟಾ ಕಾಲೇಜಿಗೆ ಹೋಗುತ್ತಿರುವಾಗ  ಅಲ್ಲಿ ಸಖೀಗೀತವನ್ನು ಹೇಳಿದ ಡಾ|| ಜಿ.ಎಲ್.ಹೆಗಡೆ, ಬುದ್ಧ ಚರಿತದಲ್ಲಿ ನನ್ನೊಂದಿಗೆ ವಾದಕ್ಕಿಳಿದ ಡಾ|| ಮಹೇಶ್ ಅಡಕೊಳಿ, ಮೇಘದೂತವನ್ನು ಕನ್ನಡದಲ್ಲೂ ಬರೆದ ಡಾ|| ವಿ.ಆರ್.ಜೋಷಿ. ಕಬ್ಬಿಣದ ಕಡಲೆಯಂತಿದ್ದ ಸಂಸ್ಕೃತ ವ್ಯಾಕರಣವನ್ನು ಸೋದಾಹರಣವಾಗಿ ತಿಳಿಸಿಕೊಟ್ಟ ಡಾ|| ವಿ.ಕೆ.ಹಂಪಿಹುಳಿ, ಇವರಲ್ಲದೇ ಅದಾಗಲೇ ಕನ್ನಡದ 'ಶಬ್ದಮಣಿ ದರ್ಪಣ'ಕ್ಕೆ ದರ್ಪಣವಾಗಬಲ್ಲ ಸಾಮರ್ಥ್ಯ ಹೊಂದಿದ್ದ ಗೆಳೆಯ ಜಿ. ಎಸ್. ಹೆಗಡೆ, ಇವರೆಲ್ಲರಿಂದ ಕಲಿತಿದ್ದು ಅಳೆಯಲಾಗದ ಆಳದ್ದು..ಆದರೂ 'ಅಕ್ಷರಂ' ಪರಿಸರದಲ್ಲಿ ಇರುವಾಗ ಅಲ್ಲಿನ ಶ್ರೀ ಶೇಷಾಚಲ ಶರ್ಮರು,ಭುವನಗಿರಿ ಅನಂತ ಶರ್ಮರು, ಸೋ.ತಿ.ನಾಗರಾಜರು, ಜಿ,ಮಹಾಬಲೇಶ್ವರ ಭಟ್ಟರು ಇವರೊಂದಿಗೂ ನನ್ನ ಮಾತುಗಳು ಕೇವಲ ಉಭಯ ಕುಶಲೋಪರಿಯಷ್ಟೇ ಆಗಿರಲಿಲ್ಲ, ಶಾಸ್ತ್ರ-ಸಂಪ್ರದಾಯಗಳ ಕುರಿತೂ ಅರಿತುಕೊಂಡೆ . ಒಂದು ರೀತಿಯ ಶಾಸ್ತ್ರಾಧ್ಯಯನವೇ ಆಯಿತೆನ್ನಿ.....ಎಲ್ಲವೂ ಇತ್ತು  ..... ಅದಾವುದೂ.. ಉಣ್ಣುವ ಬೋನಕ್ಕೆ 'ತುಪ್ಪ'ವಾಗಲೇ ಇಲ್ಲ .... .......ಆಗ ಅಂಕುರಿಸಿತ್ತು ಮತ್ತೆ..... ಎಲ್ಲವನ್ನೂ ಬಿಟ್ಟುಬಿಡಬೇಕು..... ಯಾವುದೂ ಇಲ್ಲ...! ಇರುವುದೆಲ್ಲ  ಬೇರೆಯವರಿಗೆ  ಬೋಧಿಸುವುದಕ್ಕೆ  ಮಾತ್ರ....! ಬದುಕಿಗಲ್ಲಾ....!!! ಹಾಗಾಗಿ ಬಿಟ್ಟೆ...... ಎಲ್ಲವನ್ನೂ  ಬಿಟ್ಟೆ......ನಾನು ನಾನಾದೆ..... ಮುಂದೆ ನನಗೇ ಎಂದು ಒಂದು ಬದುಕಿದೆ, ....ತಂಗಿಯರು ತಾಯಿ ಎಲ್ಲ ಮನದ ಮೂಲೆಯಲ್ಲಿದ್ದವರು ಎದ್ದು ಬಂದರು...
     ಹೀಗಿರುವಾಗ ... ನನ್ನ ಹೆಸರಿಗೆ ಒಂದು ಎಂದೋ ಗುಜರಾಯಿಸಿದ್ದ ಅರ್ಜಿಯಿಂದಾಗಿ  ಕೆಲಸದ ಆದೇಶ ಬಂತು... ಸಂಘದ ಹಿರಿಯರ ಹೇಳಿಕೆಯಂತೆ ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಈ ರಾಮನಗರಕ್ಕೆ ಬಂದೆ. ಇಲ್ಲಿ ಕೆಲಸ ಪ್ರಾರಂಭಿಸುತ್ತಿದ್ದಾಗಲೇ ತಂಗಿ ಮಹಾಲಕ್ಷ್ಮಿಯನ್ನು ಕೈಹಿಡಿಯಲು ಸಾಗರದ ಗೊರಮನೆ ಸುಬ್ರಾಯರ ಮಗ ಮೋಹನ ಬಂದ ಮದುವೆಯೂ ನಡೆಯಿತು... ಇನ್ನು ಅಬ್ಬೆ ಇನ್ನೋರ್ವ ತಂಗಿ ಊರಲ್ಲಿದ್ದಾರೆ.  ತಂಗಿ ಓದುತ್ತಿದ್ದಾಳೆ... ನಾನು ಊರಿಗೆ ಹೋದೆ ಒಂದು ಬೇಸಿಗೆ ರಜೆಯಲ್ಲಿ.... ಅಲ್ಲಿ ಮದುವೆ ಮನೆಗಳಲ್ಲಿ ಮಾತು ಬಂದು ಹೀಗೊಬ್ಬಳು ಬೆಂಗಳೂರಿನಲ್ಲೇ ಒಬ್ಬಳು ಶಿಕ್ಷಕಿಯಾಗಿ ಇರುವ ಹುಡುಗಿಯಿದ್ದಾಳೆ ಎಂದು ಹೇಳಿದ್ದನ್ನು  ಕೇಳಿ ನಾನೇ ನೇರವಾಗಿ ಆ ಹುಡುಗಿಯ ಮನೆಗೆ ಹೋಗಿ ಮಾತಾಡಿ ಅವಳೂ ಒಪ್ಪಿ.. ಆಮೇಲೆ ಅಮ್ಮನಿಗೆ ಹೇಳಿದ್ದು... ಅಮ್ಮ ಅಸ್ತು ಎಂದಳು. ಮದುವೆ ನಡೆದೇ ಹೋಯಿತು ಸಾಲಕೋಡು ಗೋವಿಂದ ಹೆಗಡೆಯ ಮನೆಯ ಪರಮೇಶ್ವರ ಮತ್ತು ಕಲಾವತಿ ದಂಪತಿಯ ನಾಲ್ಕನೇ ಮಗಳು 'ಉಷೆ' ನನ್ನ ಹೆಂಡತಿಯಾದಳು ಆಮೇಲೆ ರಾಮನಗರದಲ್ಲಿ ಸಂಸಾರ ಅಮ್ಮ ತಂಗಿ ಮನೆಯಲ್ಲಿ .
      ಒಂದು ದಿನ  ನಾನು ಮೊದಲು ಆಟವಾಡಲು ಹೋಗುತ್ತಿದ್ದ ಮನೆಯ  ಮಾವನಿಂದ ಬಂದ ದೂರವಾಣಿ  'ನಿನ್ನ ತಂಗಿಯನ್ನು ನನ್ನ ಮಗ 'ಮಹೇಶನಿಗೆ ಮದುವೆ ಮಾಡಿ ಕೊಡುತ್ತೀಯಾ?  ಎಂದು ಕೇಳಿದ್ದಕ್ಕೆ ದೂರವಾಣಿಯಲ್ಲೇ ಯಾವಾಗ ಮದುವೆ ಇಟ್ಟುಕೊಳ್ಳೋಣ, ಎಂಬಲ್ಲಿಯವರೆಗೂ  ಮಾತಾಡಿದ್ದಾಯಿತು .. ಮನೆಗೆ ತಿಳಿಸಿ ತಂಗಿಯ ಒಪ್ಪಿಗೆ ಆಯಿತು ಅಮ್ಮ ಒಪ್ಪಿದಳು ಯೇನು ಕೇಳುವುದಿರಲಿಲ್ಲ .....ಅವ ನಮ್ಮ ಗಾಳಿ ಮನೆ, ಈಶ್ವರ ಭಟ್ಟರ ನಾಲ್ಕನೇ ಮಗ ಮಹೇಶನಾಗಿದ್ದ.  ಆ ಬೇಸಿಗೆಯಲ್ಲಿ ಮದುವೆ ಆಯಿತು.. ತಂಗಿಯರು ದಿಡವ ಸೇರಿದರು ನಾನು ಮೊದಲ ಮಗಳು ಪ್ರಥಮಾಳಿಗೆ ತಂದೆಯಾದೆ. ನನ್ನ ಅಮ್ಮ ಮೊಮ್ಮಗಳ ಕಂಡಳು ವಂಶ ಬೆಳೆಯಿತೆಂಬ ಸಂತಸವಿತ್ತು ಅವರ ಮುಖದಲ್ಲಿ,
     ಊರಲ್ಲಿ ಇದ್ದ ಅಮ್ಮ ಅದೇಕೋ ಒಮ್ಮೆ  ದೂರವಾಣಿ ಮಾಡಿ ತಮಾ... ನಾನು ಅಲ್ಲಿಗೇ ಬರುತ್ತೇನೆ... ಇಲ್ಲಿ ನನ್ನಿಂದ ಕೆಲಸ ಮಾಡಿ ಕೊಳ್ಳಲು ಆಗುತ್ತಿಲ್ಲಾ ....ಅಂದಳು  ಅವಳಿಗೂ  ವರ್ಷ ಎಪ್ಪತ್ತೊಂದಾಗಿತ್ತು. ಅಸ್ತಮಾ ಖಾಯಿಲೆ ಈ ಮೊದಲೇ ಇತ್ತು ,ಜರ್ಝರಿತರಾಗಿದ್ದರು,  ನಾನೂ 'ಬಾ' ಎಂದೆ ಬಂದಳು, ಮಗ ,ಸೊಸೆ, ಮೊಮ್ಮಗಳೊಟ್ಟಿಗೆ ಒಂದು ವರ್ಷಗಳ ಕಾಲ ತುಂಬಾ ಸಂತಸದಿಂದಲೇ ಇದ್ದ ರು ಅತ್ತೆ ಸೊಸೆ ಸೇರಿ ಮಾಡಿದ ಚೌತಿ ಹಬ್ಬ, ಮರೆಯಲಾರದ  ಸುದಿನ....  ನನ್ನವಳೂ ಪುಟ್ಟಕ್ಕ.(ನನ್ನ ಹೆಂಡತಿ ಉಷೆಯನ್ನು ನಾನು ಕೂಗುವುದು ಪುಟ್ಟಕ್ಕ ಎಂದೇ) ಅವಳು ಹಾಗೇ.... ಎಲ್ಲರೊಂದಿಗೆ ಬೆಳೆದವಳು. ಅತ್ತೆ ಅತ್ತೆಯೆನಿಸಲಿಲ್ಲ. ಅಮ್ಮ ತಿಳಿದವಳು ಅತ್ತೆಯ ದೌಲತ್ತು ಮೆರೆಯಲಿಲ್ಲ... ಒಂದೊಂದು ಬಾರಿ ನಾನೇ ಪರಕೀಯನಾಗಿ ಬಿಡುತ್ತಿದ್ದೆ....
     ಒಂದು  ದಿನ ಅಮ್ಮ ಹೇಳಿದಳು.... ಸಾಕು... ಯೆಲ್ಲವನ್ನೂ ನೋಡಿ ಮುಗಿಯಿತು ,,,,,, ನಾನು ಹೋಗಲಾ...?  ಗಟ್ಟಿ ಇದ್ದವರು ಇದೇನಪ್ಪಾ ಈ ಪ್ರಶ್ನೆ ಎಂದು ಮನಸ್ಸಿಗೆ ಬಂದರೂ, ಯಾಕೋ ಹೊರ ಬಂದಿದ್ದು ಆತಬ್ಬೆ..ಅದು ಯೆಲ್ಲಡಗಿತ್ತೋ ಗೊತ್ತಿಲ್ಲ...!. ಅದೇ ದಿನ ಸಂಜೆ ಮಲಗಿದೋರು ಸನ್ನೆ ಮಾಡಿದರು ಕರೆಸು ಹೆಮ್ಮಕ್ಕಳನ್ನ ಎಂದರು.  ಬೆಂಗಳೂರಿನಲ್ಲೇ ಇರುವ ಕಿರಿಯ ಮಗಳು ಅಳಿಯ ಮೊದಲೇ ಬಂದರು, ಸಾಗರ ದಿಂದ  ಆ ಕೂಡಲೇ ಹೊರಟ ಹಿರಿಯ ಮಗಳು ಅಳಿಯ ರಾತ್ರಿ ಹತ್ತಾಗು ವಾಗ ರಾಮನಗರ ಸೇರಿದ್ದರು. ಎಲ್ಲರೂ ಸೇರಿದ್ದರೆಂದು ಖಚಿತ ಮಾಡಿ ಕೊಳ್ಳು ಒಮ್ಮೆ ಕಣ್ಣು ಬಿಟ್ಟು ನಗಾಡಿದವರು,  ಕಣ್ಣು ಮುಚ್ಚಿದ ರು ....ಮತ್ತೆ ತೆರೆಯಲೇ ಇಲ್ಲ.... ನನ್ನಮ್ಮ ನನ್ನ ಹೊತ್ತು ಹೆತ್ತು ಪೊರೆದ ಅಬ್ಬೆ ಹೋದರು..... ಮುಂದೆ ಹೇಳಲಾಗುತ್ತಿಲ್ಲ... ಸಾಕು...
    ನಂತರದ ದಿನಗಳಲ್ಲಿ ನಮ್ಮ ಸಂಸಾರದಲ್ಲಿ ಮಗ ಶರಚ್ಚಂದ್ರನ ನ ಪ್ರವೇಶವಾಗಿದೆ. ಮಕ್ಕಳ ಆಟ ಪಾಠ ಯಶಸ್ವೀ ತಂದೆ-ತಾಯಿಯೆನಿಸಿದೆ. ನಮ್ಮ ಸಂತೋಷಕ್ಕಾಗಿ ಮಾಡಿಕೊಂಡ ಬೊಂಬೆಗಳಲ್ಲವೇ ?...ಅವರೊಂದಿಗೆ ಆಡುವ ಆಡಿ ಸಂತಸ ಪಡುವ ಯಾವ ಘಳಿಗೆಯನ್ನೂ ನಮಗೆ ತಪ್ಪಿಸಲಿಲ್ಲ... , ನಮ್ಮನ್ನು ಸಂತೈಸುತ್ತ ಅವರೂ ಬೆಳೆಯುತ್ತಿದ್ದಾರೆ, ಓದಿನಲ್ಲೂ ಆಚಾರದಲ್ಲೂ ಮುಂದಿದ್ದಾರೆ. ನಾವೂ ಸದ್ಯಕ್ಕೆ ಯಾವ ರೋಗ ರುಜಿನಗಳಿಲ್ಲದೇ ಸಾಗಿ ಬರುತ್ತಿದ್ದೇವೆ. ಸಾಕಲ್ಲವೇ?
  ಎನ್ನಬ್ಬೆ ಆವಾಗಾವಾಗ ಹೇಳುತ್ತಿದ್ದಳು. ತಮಾ ( ನನ್ನನ್ನು ಹಾಗೆ ಸಂಬೋಧಿಸುತ್ತಿದ್ದಳು) " ಉರಿದರೆ ಕರ್ಪೂರದಂತೆ ಉರಿದುಬಿಡು, ಧಗ ಧಗನೆ ಉರಿದು ನಿಶ್ಶೇಷವಾಗಿಬಿಡು....! ಬತ್ತಿಯ ಸೊಡರಾಗಬೇಡಾ... ಕೊನೆಯಲ್ಲಿ ಕಮಟು ವಾಸನೆ...! ಬತ್ತಿಯ ಕರಿ ಹಾಗೇ ಉಳಿದುಬಿಡುತ್ತದೆ....! . ಬಾಗಿದರೆ ಬದುಕಲ್ಲಿ ನಿನ್ನ ಆತ್ಮಸಾಕ್ಷಿಗೆ ಬಾಗು..! ಉಳಿದಿದ್ದಕ್ಕೆ ಬಾಗಬೇಡಾ...! ಬದುಕಲ್ಲಿ ವೈಜ್ಞಾನಿಕ ಭಾವವಿರಲಿ.....!!! ಮೂಢ ಆಚರಣೆಗಳಿಗೆ ಮನವೀಯ ಬೇಡಾ... !!ಇವೆಲ್ಲ.. ನನ್ನಲ್ಲಿ ಆಡಂಬರದ ಭಕ್ತಿಯ ವಿರೋಧಕ್ಕೆ , ಸ್ವಲ್ಪಮಟ್ಟಿನ 'ಚಾರ್ವಾಕ' ಭಾವಕ್ಕೆ ಕಾರಣವಾಯಿತು. ಆದರೂ ಬೇರೆಯವರಿಗೆ ಹೇಳುವ ಮನವಿರಲಿಲ್ಲ.... ಹಾಗೇ ಬದುಕಿದೆ.. ಈಗಲೂ ಹಾಗೇ.......
  ಯಾಕೋ.... ಬಾಲ್ಯದ ಆ ಜಗತ್ತಿಲ್ಲಿ ಬದಲಾಗಿದೆ ಎನಿಸುತ್ತಿದೆ.... ಅಂದು ಎನ್ನಬ್ಬೆ ಹೇಳಿದ ಸತ್ಯ,ಧರ್ಮ,ನ್ಯಾಯ ಎಲ್ಲ ಸಾಯಹೊರಟಿದೆ....! ಆದರೂ "ಧರ್ಮೊ ರಕ್ಷತಿ ರಕ್ಷಿತಃ" ಅಲ್ಲವೇ...? ಇನ್ನೂ ನನ್ನ ಭವಿಷ್ಯದಲ್ಲಿ 'ಸತ್ಯ'ಸತ್ತಿರಲಾರದು...? 'ಧರ್ಮ' ಕುಲಗೆಟ್ಟಿರಲಾರದು...? ನ್ಯಾಯಕ್ಕೇ ಸಂಕೋಲೆ ಬೀಳಲಾರದು...? ಅಲ್ಲವೇ..?
......... ಇದು ನನ್ನ ಕಥೆಯಲ್ಲ ನನ್ನ ಜೀವನದರ್ಶನ....!






7 ಕಾಮೆಂಟ್‌ಗಳು:

  1. ರಾಮಣ್ಣಾ, ಓದುತ್ತಾ ಓದುತ್ತ ನೀವು ನನಗೆ ತು೦ಬ ಆತ್ಮೀಯರಾದಿರಿ.

    ಪ್ರತ್ಯುತ್ತರಅಳಿಸಿ
  2. ರಾಮಣ್ಣ, ಇದಕ್ಕೆ ಆರಂಭವೂ ಅಂತ್ಯವೂ ಇಲ್ಲದ್ದ ಹಾಂಗೆ, ನೆರಳಿಲಿ ಬದುಕುದೇ ನಮ್ಮ ಭಾಗ್ಯ.

    ಪ್ರತ್ಯುತ್ತರಅಳಿಸಿ
  3. ಕಡತೋಕೆ ರಾಮಭಟ್ಟ ಅಗ್ನಿಹೋತ್ರಿ ಅಣ್ಣ, ಓದಿದೆ ನಿಂಗಳ ಜೀವನ ದರ್ಶನ ವ. ಬಹಳ ಕಷ್ಟ
    ಪಟ್ಟಿದ್ದೀರಿ. ಬಹಳ ಕಲಿತು ವಿದ್ವಾಂಸರಾಗಿದ್ದೀರಿ. ನೀವು ಬಹಳ ತಿಳಿದವರು. ನೀವು ಬಹಳ
    ಬುದ್ಧಿವಂತರು, ಜಾಣರು. ಅಧ್ಯಾಪಕರು. ಶಿಕ್ಷಕರು. ಯಶಸ್ಸಿನಿಂದ ಮುಂದೆ ಸಾಗುತ್ತಾ ಇರಿ.
    ಎಲ್ಲದಕ್ಕೂ ತುಂಬಾ ಧನ್ಯವಾದಗಳು, ಪ್ರಣಾಮಗಳು ಹಾಗೂ ಶುಭ ಹಾರೈಕೆಗಳು.

    ಪ್ರತ್ಯುತ್ತರಅಳಿಸಿ
  4. ರಾಮಣ್ಣ ಮಾತಿಲ್ಲ. ನಿಂಗೊಗೆ ನಿಂಗಳೆ ಸಾಟಿ..

    ಪ್ರತ್ಯುತ್ತರಅಳಿಸಿ