ಸೊಡ್ಳೆಯಲ್ಲಿನ ರಾತ್ರಿ...!!
ಆಗ ಮಾತ್ರ ನಾನು ನನ್ನ ಚೆಡ್ಡಿಯನ್ನು ನಾನೇ ಹಾಕಿಕೊಳ್ಳಲು ಕಲಿತಿದ್ದ ಕಾಲ.ನನಗೂ ಯೆಲ್ಲರಂತೇ ನನ್ನಪ್ಪನೊಟ್ಟಿಗೆ ಊರೂರು ಸುತ್ತಿ ಅವರಿವರ ಮನೆಯ ಕಜ್ಜಾಯದ ರುಚಿನೋಡುವಾಸೆ. ಶಾಲೆಗೆ.....!!! ಹೆಹ್ಹೆಹ್ಹೇ... ಯಾಲಕ್ಕಿ ವಿಷ್ಣು ಮಾಸ್ತರು. ಸೈಕಲ್ಲಲಿ. ಬಂದು ಬೆಲ್ ಮಾಡಿದ ಮೇಲೇ ಪಾಟೀ ಚೀಲವ ಹುಡುಕುವ ಕೆಲಸ.ಒಂದು ವೇಳೆ ಸೈಕಲ್ ಬೆಲ್ ಆಗದಿದ್ದರೆ.....? ರಜ ಎಂದೇ ಲೆಕ್ಖಾ.....! ಏಕೆಂದರೆ ನಮ್ಮ ಮನೆಯ ಹತ್ತಿರ ಬರುವುದು ಅವರ ಸೈಕಲ್ ಮಾತ್ರ... ! ಇನ್ನು ಬಂದರೆ..... ಬಾಳೇಕಾಯಿ ಶಂಭು ನಾಯ್ಕಂದು....! ಏಕೆಂದರೆ ಆಗ ಸೈಕಲ್ ಇದ್ದಿದ್ದು ಊರಲ್ಲಿ ಅವರಿಬ್ಬರ ಹತ್ತಿರ ಮಾತ್ರ....! ಆಗ ವೈರಲ್ಲಿ ಕರೆಂಟ್ ಹೇಗೆ ಹೋಗುತ್ತದೆಂದು ನೋಡಲು ದಿನವೆಲ್ಲಾ ಕೂತು ಕಾಯುತ್ತಿದ್ದೆವು ನಾವು........ನಮ್ಮೂರಲ್ಲಿ ಕರೆಂಟಿನ ವೈರ್ ಮಾತ್ರ ಹೋಗಿತ್ತು...! ಕರೆಂಟು ಯಾರ ಮನೆಯಲ್ಲೂ ಇರಲೇ ಇಲ್ಲಾ...! ಮನೆಯ ಹಿಂಭಾಗ ಗೊಂಡಾರಣ್ಯ...!! ಆವಾಗಾವಾಗ ಹಳದೀ ಪುರಕ್ಕೆ.... ಹೋದ ನೆನಪು, ನಮ್ಮೂರ ದೋಣಿ ವೀರ ಕಿರಿಸ್ತರ ಪಾವ್ಲೂ !!!! ನಾಕಾಣೆ ಕೊಟ್ರೆ ಹಳದೀಪುರ.... ಹತ್ತು ಪೈಸೆಗೆ ಹೊಳೇಗೆದ್ದೆ.!!! (ಒಂದು ಊರ ಹೆಸರು)ಅಂತೂ..... ನಡು ನೀರಲ್ಲಿ ಬಿಡ್ತಿರಲ್ಲಿಲ್ಲಾ ಈಗಿನವರಂತೆ... ನಿಯತ್ತಿತ್ತು ಅವನಲ್ಲಿ....! ನಂತರದ ದಿನಗಳಲ್ಲಿ ನಾವು ಒಂದೇ ಕುಟುಂಬದ ಹುಡುಗರು ನಾಕಾಣೆ ಕೊಡಲಾಗದೇ ಹತ್ತು ಪೈಸೆ ಮಾತ್ರ ಕೊಟ್ಟು ಹೊಳೆಗೆದ್ದೆಗೆ ಹೋಗಿ ಅಲ್ಲಿಂದ ಹಳದೀ ಪುರಕ್ಕೆ ನಡಕೊಂಡು ಹೋಗಿದ್ದೂ ಇದೆ. (ಅದು ನಮ್ಮ ಮನೆಯಿಂದ ಹಳದೀ ಪುರಕ್ಕೆ ಹೋದಷ್ಟೇ ದೂರ ಇತ್ತು!!!) ಆದರೂ ಎಲ್ಲರ ಕೈಯ್ಯಲ್ಲಿರುವುದು ಎಂಟಾಣೆ ಮಾತ್ರ ,, ಹೋಗಿ ಬರಲೇ ಅದು ಖರ್ಚಾದರೆ ಮತ್ತೆ ಅಲ್ಲಿ ಹೋಗುವುದೇತಕ್ಕೆ? ಒಂದು ನಾಕಾಣೆದಾದರೂ ಮುಕ್ಕ್ಕಲು ಬೇಕಲ್ಲಾ....!! ಆ ಜೀವನವೇ ಹಾಗಿತ್ತು... ಆದ್ರೂ ಸುಖ ಇತ್ತು ಕಣ್ರೀ.......
... ಇಂತಿಪ್ಪ ಕಾಲದಲ್ಲಿ ಯಾಲಕ್ಕಿ ವಿಷ್ಣು ಮಾಸ್ತರರ ಸೈಕಲ್ ಬೆಲ್ ಎರಡು ದಿನಗಳಿಂದ ಬಾರಿಸಲೇ ಇಲ್ಲ..!!? ಯೇನೋ ಗೊತ್ತಿಲ್ಲಾ.. ಭಾರೀ ನಿಯತ್ತಿನ ಮನುಷ್ಯರು. ಯೇಕೆ ಬರಲಿಲ್ಲಾ ಅಪ್ಪನಿಗೆ ಗೊತ್ತಿತ್ತು..... ಆದರೆ ನಮ್ಮೊಟ್ಟಿಗೆ ಹೇಳಲು ಪುರುಸೊತ್ತೇ ಇರಲ್ಲಿಲ್ಲವಲ್ಲಾ.... ಅವನೋ 'ಮನೇಲಿ ಮಂಗ ಹೋದಲ್ಲಿ ರಂಗ' ಊರೆಲ್ಲ ಹೊಗಳುತ್ತಿದ್ದಾಗ ನನಗೆ ಒಂಥರಾ ಆಗುತ್ತಿತ್ತು.. ನಾನು ಮಾತಾಡಿಸಿದ್ದು ಬಲು ಅಪರೂಪ ನನ್ನಪ್ಪನನ್ನು....! ಅದು ಹಾಗೇ ಅಂತೆ.... ಮನೆಯ ಮಗ ಹತ್ತಿರ ಬಂದರೆ ' ಹೋಗಾ ಅಲ್ಲಿ ಕೆಲ್ಸಾ ನೋಡು ,ಬಂದಾ ಇಲ್ಲಿ ನನ್ನ ಮೈ ಜೋತೋದಕ್ಕೆ ' ಎಂದು ತಳ್ಳುತ್ತಿದ, ಅಪ್ಪ ಕಂಡವರ ಮಕ್ಕಳನ್ನು ಅಯ್ಯೋ ತಮ್ಮಾ,ಗುಬ್ಬಾ ಎನ್ನುವಾಗ ಹೇಗಾಗಿರಬೇಡಾ..... ನನಗೆ... ಆದರೂ ಅಪ್ಪ ಅಪ್ಪನೇ ಅಲ್ಲವೇ.... ಏಕೆಂದರೆ ಅಬ್ಬೆಗೆ (ತಾಯಿ) ಸುಳ್ಳು ಹೇಳಿ ಅಭ್ಯಾಸವಿರಲಿಲ್ಲಾ... ನಾನೂ ಅಬ್ಬೆಯ ಗುಬ್ಬಿಯೇ ಆಗಿ ಬೆಳೆದದ್ದು, ಆಮೇಲೆ ಗೊತ್ತಾಯ್ತು ಮಾಸ್ತರರಿಗೆ ವಿಷಮಜ್ವರ...! ಆಗೆಲ್ಲಾ ಈ ಜ್ವರ ಬಂದರೆ ಮೇಲೇಳಲು ತಿಂಗಳುಗಳೇ ಬೇಕು... ಊರಿನ ಏಕೈಕ ವೈದ್ಯರಾಜ ಗಣಪಜ್ಜ.......! ಅವನ ಸಣ್ಣ ಗುಳಿಗೆ, ಐದಾರು ಚಮಚ ಬೇರೆ ಬೇರೆ ಬಾಟಲಿಗಳ್ಲ್ಲಿ ತುಂಬಿಟ್ಟ ಒಂದೇ ಬಣ್ಣದ ಔಷಧಗಳು ಅದನ್ನೂ ಮಾಪಿನಲ್ಲಿ ಅಳೆದು, ಅವನ ಹೆಂಡತಿ ಕಮಲಕ್ಕ ಬೆಳಿಗ್ಗೆ ಕಾಯಿಸಿ ಮಡುಗಿದ ಬಿಸಿನೀರನ್ನು ಬೆರೆಸಿ ಅಂದ್ರೆ ತೆಗೆದು ಕೊಂಡು ಹೋದ ಬಾಟ್ಳಿಗೆ ಮುಕ್ಕಾಲು ನೀರು ತುಂಬಿ ಮಾಪಿನ ಔಷಧವ ಅದಕ್ಕೆ ಬೆರೆಸಿ ತಮ್ಮಾ.... 'ಅಲುಗಾಡಿಸಿ ಕುಡಿ' ಎಂದು ಬೇರೆ ಸಜೇಶನ್ ನೀಡಿ ಕಳಿಸುತ್ತಿದ್ದ. ಯಾವ ರೋಗಿಯೂ ಕಡಿಮೆ ಎಂದರೆ ಒಂದು ನಾಲ್ಕು ಬಾರಿಯಾದರೂ ಹೋಗಿ ಆ ತೀರ್ಥವ ತೆಗೆದು ಕೊಂಡ್ರೇನೇ ಕಡಿಮೆ ಆಗುವುದು.. ಅವನು ಕೊಡುವ್ ಔಷಧಗಳ ಬಾಟ್ಳುಗಳ ನೋಡಿ ಆವಾಗಾವಾಗ ಅನಿಸುತ್ತಿತ್ತು.. ಓ 'ಸರ್ವ ರೋಗಾನಿಕಿ ಸಾರಾಯಿ ಮದ್ದಂಡಿ ' ಎಂದರೆ ಇದೇ ಯೇನೋ ಅಂತ. ಇಂತಿಪ್ಪಾಗ ಮಾಸ್ತರರ ವಿಷಮಜ್ವರ ವಿಷಮವೇ ಆದೀತಲ್ಲವೇ...? ಆ ವಿಷಯ ನನಗೂ ಗೊತ್ತಾಗಿ ಹೋಯಿತು... ಅಂದರೆ ಇನ್ನು ಶಾಲೆ ಅಷ್ಟಕಷ್ಟೇ......ಅದೇ ಸಮಯದಲ್ಲಿ ನನ್ನ ಅಜ್ಜನ ಮನೆಯಿಂದ ಒಂದು ಕಾಗದ ಬಂತು "ಒಪ್ಪಕ್ಕನ ಮದುವೆ ನಾಳ್ತು ಪಾದೆಕಲ್ಲಿನಲ್ಲಿ... ನಾಕುದಿನ ಮುಂಚಿತವಾಗಿ ಬರೆಕ್ಕು" ಅಂದರೆ ನಾನು ಹೋಗಲೇ ಬೇಕಲ್ಲಾ ಅಜ್ಜನಮನೆಯ ವಾರಸುದಾರನಲ್ಲವೇ?
ಅಂದು ಬೆಳಿಗ್ಗೆ ಬೇಗ ಎದ್ದ ಅಪ್ಪ ನನ್ನನ್ನೂ ಅಬ್ಬೆಯನ್ನೂ ಎಬ್ಬಿಸಿ ನಾನು, ಮಾಣಿ ಇಬ್ಬರೂ ಅಲ್ಲಿಗೆ ಹೋಗಿ ಬತ್ತೋ. ಹೇಳಿ ಸ್ನಾನಕ್ಕೆ ಹೋದ .ಅಬ್ಬೆ ಈ ಮದುವೆಗೆ ಹೋಗುವಂತಿರಲಿಲ್ಲ ಆಮೇಲೆ ಬಂದ ತಂಗಿ ಒಳಗಿದ್ದಳು...! ಅಂತೂ.. ಸ್ನಾನವಾಗಿ ಹೊರಟೆವು ನಾವಿಬ್ಬರೂ ಹಳದೀಪುರಕ್ಕೇ ಹೋಗಿ ಅಲ್ಲಿ ಬೆಳ್ಗಿನ ಜಾವ ನಾಕು ಗಂಟೆಗೆ ಬರುವ ಯಾವುದೋ ಬಸ್ಸನ್ನು ಹತ್ತಬೇಕು. ಹೊರಟು ಸುಮಾರು ದುರ ಬರುವಾಗ ದಾರಿಬದಿಯ ಯಾರದೋ ಮನೆಯಲ್ಲಿ ದೀಪ ಉರಿಯುತ್ತಿತ್ತು. ನಾಕಾರು ಜನ ಇಸ್ಪೇಟು ಆಟದಲ್ಲಿ ಕೇಕೆ ಹಾಕುತ್ತಿದ್ದ್ರು... ಇದೇನಪ್ಪಾ ಎಂದು ಹೋಗಿ ನಿಂತೆವು...ಆಗ ಅವರ ಮನೆಯಲ್ಲಿರುವ ಗೋಡೆ ಗಡಿಯಾರ ಹನ್ನೆರಡೂ ಹೊಡೆಯುತ್ತಿತ್ತು..ಠಂ....ಠಂ....... ಎಂದು ಅಯ್ಯೋ ಶಿವನೇ.... ಈಗ ಹನ್ನೆರಡಾಯಿತಷ್ಟೇ,,, ಎಂದು ಅವರು ನಮ್ಮ ಮುಖವನ್ನು ನೋಡಿದಾಗ ಅಪ್ಪ ಉಚ್ಚೆ ಹುಯ್ಯಲು ಬದಿಗೆ ಸರಿದಿದ್ದ.....!!!! ಯೇಕೆಂದರೆ ನಮ್ಮ ಮನೆಯಲ್ಲಿ ಗಡಿಯಾರವಿರಲಿಲ್ಲಾ... ಎಚ್ಚರಾದಾಗ ಬೆಳಗು....! ಕತ್ತಲೆಯಾದಾಗ ರಾತ್ರಿ...! ಸೂರ್ಯ ನೆತ್ತಿ ಸುಡುತ್ತಿದ್ದರೆ.... ಮಧ್ಯಾನ್ಹ...!!! ಗಡಿಯಾರದ ಗೊಡವೆಯೇ ಇರಲಿಲ್ಲಾ.... ಬೇಕಿರಲಿಲ್ಲಾ ಅನ್ನಿ .... ಅಷ್ಟು ಸಮಯ ನೋಡಿ ಯಾವ ರಾಜ್ಯವನ್ನೂ ಗೆಲ್ಲಬೇಕಿರಲಿಲ್ಲವಲ್ಲಾ...! ನಮ್ಮಲ್ಲಿ ಅಂತ ಅಲ್ಲ ಊರಲ್ಲಿ ಗಡ್ಯಾರವಿರುವುದು ಭಡ್ತಿ ಗೋವಿಂದ ಭಟ್ರ ಮನೇಲಿ ಮತ್ತು ಹೆಗಡೇ ಮನೇಲಿ ಬಿಟ್ಟರೆ... ಮಾಡಗೇರಿ ಗಣಪತಿ ಭಟ್ರ ಮನೇಲಿ..... ಯಾರು ಸತ್ತರೂ ಅಲ್ಲಿಗೇ ಹೋಗಿ ಟೈಮ್ ನೋಡಿ ಹೇಳಬೇಕು ಹುಟ್ಟಿದರೂ.... ಅಲ್ಲಿಗೆ ಹೋಗಿ ಸಮಯ ಹೇಳುವವರು ಅಲ್ಲೇ ಇದ್ದರೆ ಕೂಡ್ಳೆ ಇಲ್ಲದ್ದರೆ ಅವರು ತೋಟದಿಂದ ಬಂದಮೇಲೇ ನೋಡಿ ಹೇಳುವುದು.. ಹಾಗಾಗಿಯೇ ನಾನು ಹುಟ್ಟಿದ್ದ ಸಮಯ ಸರಿಯಾಗಿ ಯೆಷ್ಟು ಅಂತ ನನ್ಗೇ ಗ್ಯಾರಂಟಿ ಗೊತ್ತಿಲ್ಲಾ. ಅದಕ್ಕೇ ಅಲ್ಲವೇ ನನ್ನ ಜಾತಕ ಕುಂಡಲಿಯಲ್ಲಿ ನನಗೇ ನಂಬಿಕೆ ಇಲ್ಲದ್ದು... ಹೀಗಿತ್ತು ಆವಾಗಿನ ಪರಿಸ್ಥಿತಿ...!!!!!
ಅಂತೂ ಅಲ್ಲಿಯೇ ಬೆಳಗುಮಾಡಿ ಮುಂದೆ ದೋಣಿ ದಾಟಲು ಬಂದಿದ್ದಾಯ್ತು.. ಮೊದಲೇ ಬಂದಿದ್ದರೆ...... ಸಾಳುಕಟ್ಟಿನ(ದೋಣಿ ದಾಟುವ ಜಾಗ) ಬೈಲಿನಲ್ಲೇ ಬೆಳಗು ಮಾಡಬೇಕಿತ್ತು ಅನ್ನೀ... ಪಾವ್ಲು ಅಲ್ಲಿರುತ್ತಿರಲಿಲ್ಲ.....ಅದೋ ಬಂದ ಪಾವ್ಲು.... ದೊಡ್ಡದೊಂದು 'ಗಳು' ಅದೇ 'ಜೆಲ್ಲು' ಉದ್ದದೊಂದು ದೋಣಿ. ಮತ್ತೆ ಹೋಯಾರೇ.....ಹೋಯ್... ಹಾಡು.... ಈ ಸಂಭ್ರಮವನ್ನು ನೋಡಿಯೇ ಆನಂತರದ ದಿನಗಳಲ್ಲಿ ಒಂದು ಹಾಡು ಗುನುಗುತ್ತಿದ್ದೆವು ನಾವು ....'' ಸಾಳುಕಟ್ಟಿನ ನಿರಿನಲೀ..... ಪಾವಲನಾಯ್ಕನ ದೋಣಿಯಲೀ...... ಪಯಣಿಗ ನಾನಮ್ಮಾ......." ಅಂತೂ ದೋಣಿ ದಾಟಿ ಹಳದೀ ಪುರಕ್ಕೆ ಬಂದು ಅಲ್ಲಿ ಬಂದ ಬಸ್ಸನ್ನೇರಿದೆವು..... ಅಲ್ಲಿಂದ ಪುತ್ತೂರಿಗೆ ಪಯಣ.... ಹೊಳೆ-ನದಿಗಳ ಲೆಕ್ಕ ಸರಿಯಾಗಿ ಮಾಡಬಹುದಿತ್ತು...ಆಗ...... ಪ್ರತೀ ಹೊಳೆ ಬಾಗಿಲಲ್ಲಿ ಬಸ್ಸು ಇಳಿದು.. ಆಚೆ ದಡದಲ್ಲಿರುವ ಬಸ್ಸನ್ನೇರಿ ಹೋಗಬೇಕಿತ್ತು ನೋಡಿ,, ಹೊಳೆ ದಾಟಲಿ ಹತ್ತು ಪೈಸೆ.. ಅಂತೂ ಪುತ್ತೂರು ತಲಪುವಾಗ ಒಂದು ರೂಪಾಯಿ ನಲವತ್ತು ಪೈಸೆ ಖಾಲಿ....!ಅದೂ ರಾತ್ರಿ ಎಂಟು ಗಂಟೆ ಆಗಿತ್ತು
ಬಸ್ಸು ಮುಗುಳಿಯ ನಮ್ಮ ಅಜ್ಜನ ಮನೆಯ ಹತ್ತಿರವೇ ಹೋಗುತ್ತಿತ್ತಾದ್ದ್ದರಿಂದ ಅಲ್ಲೇ ಇಳಿಯುವುದೆಂದು ಮೊದಲೇ ಅಪ್ಪ ಡೈವರನಿಗೆ ಹೇಳಿದ್ದರು.. ಹಾಗಾಗಿ ಡೈವರ್ ಇಳೀಯಿರಿ ಎನ್ನುವ ವರೆಗೆ ನೆಮ್ಮದಿ....! ಸಣ್ಣ ನಿದ್ದೆಯ ಮಂಪರು ಬೇಳಗಿನಿಂದ ಒಂದೇ ಸಮನೆ ಪ್ರಯಾಣ...! ಸುಸ್ತು..! ಅಪ್ಪನಿಗೂ ಜೋಂಪು....! ಅಲ್ಲಿ ಹಿಂದೆ ಯಾರೋ ನಾಕು ಬ್ಯಾರಿಗಳು ಹತ್ತಿದ್ದರು.... ಅವರು ಹೇಳಿದ್ದು (ಕನ್ನಡವಲ್ಲ) ನೀವು ಅಲ್ಲಿಗೆ ಹೋಗುವವರಾ... ಇಲ್ಲೇ ನಮಗಿಂತ ಒಂದು ಸ್ಟಾಪು ಮುಂದೆ ಇಳ್ಕೊಳ್ಳಿ...ಆವಾಗ ಮುಗುಳಿ ರಾಮ್ ಭಟ್ರೆಂದರೆ ಜಗದ್ವಿಖ್ಯಾತ. ಹಾಗಾಗಿ ಅಲ್ಲಿಯೇ ಹತ್ತಿರದಲ್ಲಿ ಬಸ್ಸು ನಿಲ್ಲಿಸುತ್ತಾರೆ ಅಲ್ಲಿಂದ ಸ್ವಲ್ಪದೂರ ಅಷ್ಟೇ ಎಂದು ಕುಳಿತಿದ್ದೆವು ಅವರು ಇಳೀದು ಹೋಗಿದ್ದರು... ಡ್ರೈವರ್ ಹೇಳಿದ 'ಇಂಚಿ ಬಲ್ಲೆ' ನಾವೂ ಬಸ್ ನಿಂತಲ್ಲಿ ಇಳಿದೇ ಬಿಟ್ಟೆವು..... ಬಸ್ಸು ದ್ರೋ ಡ್ರೋ.ಎಂದು ಮುಂದೆ ಹೊರಟೇ ಹೋಯ್ತು ನಮ್ಮನ್ನಿಳಿಸಿ....
ಸುತ್ತ ನೋಡಿದರೆ... ಒಂದೇ ರೀತಿಯ ಕಾಡು ಬೇಣ....ಗುಂಪೇಗುಡ್ಡೆ....ಗುಡ್ಡೆಯ ತಲೆಯಲ್ಲಿರುವ ರಸ್ತೆ,,,,... ಅಲ್ಲಿಂದ ಯಾರದಾದರೂ ಮನೆಗೆ ಹೋಗಬೇಕಾದರೆ ಕೆಳಗಿಳ್ದೇ ಹೋಗಬೇಕು.. ಯೆಲ್ಲಿ ಇಳಿಯುವುದೂ...... ದಾರಿಯೇ ಇಲ್ಲಾ...ಇಳಿಯಲು.... ಅಪ್ಪನೂ ಅರಸಿ ಅರಸಿ ಸುಸ್ತಾದರು ನಾನೋ ನಿದ್ದೆಗೆ ಜಾರುತ್ತಲಿದ್ದೆ.. ಕೈಕಾಲು ಓಡುತ್ತಿರಲಿಲ್ಲ... ಅಪ್ಪಾ ಇಲ್ಲೇ ಯೆಲ್ಲಾದರೂ ಕುಂತು ಯೇನಾದರೂ ತಿನ್ನುವಾ..ಆಗದಾ? ನನ್ನ ಪ್ರಶ್ನೆ ಇಂದು ಅಪ್ಪನಿಗೆ ಸರಿ ಕಂಡ್ತು ನೋಡಿ.... ಹಾಂ.ಎಂದು ಅಬ್ಬೆ ಕಟ್ಟಿಕೊಟ್ಟ ಗೋಧಿ ರೊಟ್ಟಿ ಇನ್ನೂ ನಾಕು ಉಳಿದಿತ್ತು... ದೊಡ್ಡ ಬಾಟ್ಳಲ್ಲಿ ನೀರಿತ್ತು... ನಾನೂ ಅಪ್ಪನೂ ರೊಟ್ಟಿ ತಿಂದು ನೀರು ಕುಡಿದೆವು... ಆಮೇಲೆ..... ಆಮೇಲೆ ನಾನು ನಾನಾಗಿರಲೇ ಇಲ್ಲಾ... ನಿದ್ರೆ ನನ್ನನ್ನು ಎಳೆದು ಕೊಂಡು ಹೋಗಿತ್ತು... ನನ್ನ ಈ ಅವಸ್ಥೆ... ದಾರಿ ಸರಿಯಾಗಿ ಕಾಣದೇ ಯೆಲ್ಲಿ ಇಳಿಯುವುದೆಂದು ತೋಚದೇ ಅರಸುತ್ತಿರುವ ಅಪ್ಪನ ಅವಸ್ಥೆ... ನಾನು ಮಾತಾಡುವ ಸ್ಥಿತಿಯಲ್ಲಿರಲಿಲ್ಲವಲ್ಲಾ...!!!! ಅಪ್ಪ ಹೇಳಿದರು..ಇಲ್ಲೇ ಯೆಲ್ಲಾದರೂ ಮಲಗಿ ರಾತ್ರಿ ಕಳೆದು ಬೆಳಿಗ್ಗೆ ಹೋಗುವಾ.... ನಾನು ಯೆಲ್ಲಾದರೂ ಸರಿಯಾದ ಜಾಗ ಇದೆಯಾ ಎಂದು ನೋಡುತ್ತೇನೆ ಎಂದು ಆಚೀಚೆ ನೋಡುತ್ತಿದ್ದರು... ನಾನೂ ನಿದ್ದೆಗಣ್ಣರಳಿಸಿ ನೋಡಿದೆ ಅಲ್ಲೆ.. ಪಕ್ಕದಲ್ಲಿ ಒಂದಷ್ಟು ಸಮತಟ್ಟಾದ ಜಾಗವಿತ್ತು... ಅಪ್ಪಾ...ಅಲ್ಲಿ.... ಯಾರೋ ಒಂದಿಷ್ಟು ಮರದ ತುಂಡುಗಳನ್ನು ತಂದು ಹಾಕಿದ್ದರು... ಗೊತ್ತಿರಲಿಲ್ಲ ಏಕೆ ಎಂದು ........ ನೋಡುವ ವ್ಯವಧಾನವೂ ಇರಲಿಲ್ಲಾ..ಅನ್ನಿ..ಅಪ್ಪ ಅಲ್ಲಿಯೇ ಒಂದು ಜಾಗದಲ್ಲಿ ತಮ್ಮ ವೇಷ್ತಿಯನ್ನು ಹರವಿದರು ಅಲ್ಲೇ ಮಲಗಿದೆವು.....
ಬೆಳಕು ಮೂಡಣದಲ್ಲಿ ಕೆಂಪು ನೆತ್ತರ ಚೆಲ್ಲಿತ್ತು...ಹಾಂ...ಅಂತೂ ಬೆಳಕಾಗ್ತಾ ಬಂತು ,,,.......... 'ತಮ್ಮಾ... ಏಳು ಬೆಳ್ಕಾತು' ಅಪ್ಪ ತಾನೂ ಎದ್ದು ನನ್ನನ್ನು ಎಬ್ಬಿಸಲಿದ್ದ.. ಅಷ್ಟು ಹೊತ್ತಿಗೆ ಬೆಳಕಾಗಿತ್ತು ಅಪ್ಪನ ಮುಖ ಮೈ ಕಾಣುವಷ್ಟು...... ಕಣ್ ಬಿಟ್ಟು ನೋಡಿದೆ ಅಪ್ಪನನ್ನ... ಅಂದು ನಾನು ಮೇಳದ ಆಟದಲ್ಲಿ ಕೆರಮನೆ ಶಿವರಾಮ ಹೆಗಡೇಯವರ ಯಾವುದೋ ಪಾತ್ರ..... ಹಾಂ ಭಸ್ಮಾಸುರ'''''ಇರಬೇಕು....' ಅವರ ನೋಡಿದಂತೆ ಭಾಸವಾಯ್ತು....ಅಪ್ಪಾ....ಇದೇನಿದು ಮೈಗೆಲ್ಲ ಬೂದಿ...? ಅದುವರೆಗೂ ಅಪ್ಪ ನೋಡಿಕೊಂಡಿರಲೇ ಇಲ್ಲ... ....ಹೌದಲ್ಲಾ ಯೆಂತದು ಇದು... ಓಹ ನಿನ್ನ ಮಯ್ಯಲ್ಲೂ ಬೂದಿ,,,,, ಆಗ ಬೆಳ್ಳಂಬೆಳಗಾಗಿತ್ತು. ಕಂಡಿತ್ತು ಅಲ್ಲಿ ಹಲವು ಎಲುಬಿನ ಚೂರು...! ಅರ್ಧ ಸುಟ್ಟ ಸೌದೆ .........ಅಪ್ಪನಿಗೆ ಅದೇ ತಲೆದಿಂಬಾಗಿತ್ತು.....!!! ಮಡಿಕೆಚೂರುಗಳು...................... ಅಬ್ಬಾ...ಮೈ ಝುಂ...""""" ಎಂದಿತು..... ಅದು ಸೊಡ್ಳೆಯಾಗಿತ್ತು.... ಮಸಣವಾಗಿತ್ತು......ಹಿಹ್ಹಿಹ್ಹೀ...... ಆ ರಾತ್ರಿಯೆಲ್ಲ ...............ಒಂದಿಡೀ ರಾತ್ರಿ.... ............ಅಲ್ಲೇ ಅಲ್ಲವಾ ನಾನು ,,,ಅಪ್ಪ ಮಲಗಿ ಸುಖನಿದ್ದೆ ಹೊಡೆದಿದ್ದು ಯೆಂಥಾ ಸುಖ.......! ಮಸಣಸುಖ........! ಯೆಂತಾ ನಿದ್ದೆ..... ಸತ್ತುಬಿದ್ದವರಂತೆ ನಿದ್ದೆ... ನಾವಿಳಿದಿದ್ದು ಸ್ವಲ್ಪ ಹಿಂದಿನ ತಿರುವಿನಲ್ಲಾಗಿತ್ತು.. ಮುಗುಳಿರಾಂಭಟ್ರಮನೆ ಆಚೆ ಕಡೇಲಿ ಕಾಣುತ್ತಿತ್ತು ಬೆಳ್ಗಿನ ದೋಸೆ ಸುಟ್ಟ ಘಂ ಘಂ ವಾಸನೆ ಸೊಡ್ಳೆಗೂ ಬರುತ್ತಿತ್ತು.... ಮದುವೆ ದಿಬ್ಬಣಿಗರು ಇನ್ನೇನು ಬರುವವರಿದ್ದರು,,,, ಯೆಲ್ಲ ರೇಷ್ಮೆ ಸೀರೆ ಬಿಳಿ ಪಂಚೆ ತುಂಬು ತೋಳಿನ ಷರ್ಟು ಮೇಲೊಂದು ಹೆಗಲುವಲ್ಲಿಯಿಂದ ಕಂಗೊಳಿಸುತ್ತಿದ್ದರೆ ನಾವು ಹೋಗಿ ಹಿತ್ತಿಲಬಾಗಿಲಿನಿಂದ ಹೊಗಬೇಕಾಯಿತು... ಮೈಯ್ಯೆಲ್ಲ ಸೊಡ್ಳೆಯ ಬೂದಿ ನೆಂಟರು ನೋಡಾರೆಂಬ ನಾಚಿಕೆ,,,,,,,ಖರ್ಮ....!.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ