प्रज्वालितॊ ज्ञानमयप्रदीपः

ಸೋಮವಾರ, ಆಗಸ್ಟ್ 11, 2014

ಮಹಾಭಾರತದ ಒಂದು "ಕೂಟಶ್ಲೋಕ"

               "ಶ್ರೀಮನ್ಮಹಾಭಾರತ"... "ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನತತ್ ಕ್ವಚಿತ್" ಅಂದರೆ ಈ ಮಹಾ ಭಾರತವೆಂಬ”ಮಹಾಕಾವ್ಯದಲ್ಲಿ ಏನೇನು ಹೇಳಲ್ಪಟ್ಟಿದೆಯೋ ಅದು ಈ ಲೋಕದಲ್ಲಿ ಎಲ್ಲ ಕಡೆಯೂ ಇದೆ, ಇಲ್ಲಿ ಏನು ಹೇಳಿಲ್ಲವೋ ಅದು ಎಲ್ಲಿಯೂ ಇಲ್ಲ’ ಇಂತಹ ಅಮೋಘವಾದ ಪಂಚಮ ವೇದವನ್ನು ನಮಗೆ ಕರುಣಿಸಿದವರು ’ಶ್ರೀಮನ್ ವೇದವ್ಯಾಸರು’
          ತಮ್ಮ ಕಥಾ ಪ್ರೌಢಿಮೆಯನ್ನು ಮೆರೆಯುವುದಕ್ಕಾಗಿಯೇ ವನ ಪರ್ವದಲ್ಲಿ ತೀರ್ಥ ಕ್ಷೇತ್ರಗಳ ದರ್ಶನವನ್ನು ಧರ್ಮರಾಜನಿಗೆ ಮಾಡಿಸುವ ನೆಪದಲ್ಲಿ  ಮಹಾ ಮುನಿ "ಲೋಮಶ"ರ ಮುಖದಿಂದ ಅನೇಕ ದಿವ್ಯವಾದ ಕಥಾನಕಗಳನ್ನೂ ಧರ್ಮ ಸೂಕ್ಷ್ಮಗಳನ್ನೂ ಹೇಳಿಸುತ್ತಾರೆ.
          ಹಿಂದೆ ಬಹಳವಾದ ತೀರ್ಥಕ್ಷೇತ್ರಗಳನ್ನು ಧರ್ಮರಾಜ ತನ್ನ ತಮ್ಮಂದಿರಾದ ಭೀಮ, ನಕುಲ, ಸಹದೇವ ಹಾಗೂ ದ್ರೌಪದಿಯರೊಡನೆ ಸಂದರ್ಶನ ಮಾಡುತ್ತಾ ’ಸೋಮಕ’ ತೀರ್ಥವನ್ನು ನೋಡಿಕೊಂಡು ಮುಂದಕ್ಕೆ ಹೊರಡುತ್ತಾರೆ.. ಅವರೊಂದಿಗೆ ಲೋಮಶರೂ ಜತೆಗೂಡುತ್ತಾರೆ.. ಅವರು ಸಂದರ್ಶನ ಮಾಡುವ ಎಲ್ಲಾ ತೀರ್ಥ ಕ್ಷೇತ್ರಗಳ ಸ್ಥಳಪುರಾಣಗಳನ್ನು ವಿವರವಾಘಿ ಧರ್ಮರಾಜನಿಗೆ ಹೇಳುತ್ತಾ ಇಡೀ ಭಾರತದ ಭೌಗೋಲಿಕ ಐತಿಹಾಸಿಕ, ಪದರವನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಹಾಗೇ  ಮುಂದುವರಿದು ’ರೌಪ್ಯಾ’ ನದೀ ತೀರಕ್ಕೆ ಬರುತ್ತಾರೆ. ಯಾವುದು ಇದು "ರೌಪ್ಯಾ"?
ಲೋಮಶರು ಈ ಪ್ರದೇಶವು ನಿನ್ನ ಪೂರ್ವಜರಾದ ನಹುಷಾದಿಗಳು ವಾಸಮಾಡಿದ ಭೂಮಿ ಎಂದು ಹೇಳುತ್ತಾರೆ.. ಆಗ  ಈ ನದೀ ತೀರದಲ್ಲಿ ಒಂದು ಸುಂದರವಾದ ಪ್ರದೇಶದಲ್ಲಿ ಧರ್ಮರಾಜಾದಿಗಳು ವಾಸಮಾಡಬೇಕೆಂದು ಆಲೋಚಿಸಿದರು. ಇಲ್ಲಿ ಒಂದು ಚಮತ್ಕಾರಿಕವಾದ ಒಂದು ಕೂಟ ಶ್ಲೋಕವನ್ನು ವ್ಯಾಸರು ಲೋಮಶರಿಂದ ಹೇಳಿಸುತ್ತಾರೆ...
ಇಲ್ಲಿ ಹಿಂದಿನ ಒಂದು ಘಟನೆಯನ್ನು ಕೂಟ ಶ್ಲೋಕ ರೂಪದಲ್ಲಿ ಲೋಮಶರು ಧರ್ಮರಾಜನಿಗೆ ಹೇಳುತ್ತಾರೆ... ಹಾಗಾದರೆ ಈ "ಕೂಟ ಶ್ಲೋಕ" ಎಂದರೇನು? ವಿವಿಧಾರ್ಥಗಳನ್ನು ತನ್ನಲ್ಲಿ ಅಡಕಮಾಡಿಕೊಂಡಿರುವ, ಮೇಲ್ನೋಟಕ್ಕೆ ಸಾಮಾನ್ಯಾರ್ತಹವನ್ನು ಕಾಣಿಸುವ ಶ್ಲೋಕ....!! ಹಾಗಾದರೆ ಯಾವುದು ಆ "ಕೂಟಶ್ಲೋಕ"?
ಬಹಳ ಹಿಂದೆ ಇದೇ ಕ್ಷೇತ್ರದಲ್ಲಿ ಬಂದಂತಹ ಯಾತ್ರಿಕರೆಲ್ಲರಿಗೆ ಒಂದು ಅಶರೀರವಾಣಿ ಕೇಳಿಬರುತ್ತಿತ್ತು. ಅದು ಒಂದು "ಪಿಶಾಚ ಧ್ವನಿ" ಅದು ಹೇಳುವ ಒಂದು ಶ್ಲೋಕವೇ ಆ ಕೂಟಶ್ಲೋಕ...!

"ಯುಗಂಧರೇ ದಧಿಪ್ರಾಶ್ಯ ಉಷಿತ್ವಾಚ್ಚಾಚ್ಯುತಸ್ಥಲೇ|
   ತದ್ವದ್ಭೂತಲಯೇ ಸ್ನಾತ್ವಾ ಸಪುತ್ರಾ ವಸ್ತುಮರ್ಹಸಿ|
ಈ ಶ್ಲೋಕದ ಸಾಮಾನ್ಯಾರ್ಥ ತುಂಬ ಸುಲಭವಾಗಿದೆ. ಇಲ್ಲಿ ಒಂದು ಪ್ರಶ್ನೆಯೂ ಇನ್ನೊಂದು ಉತ್ತರವೂ ಅಡಗಿದೆ.
ಯುಗಂಧರಎಂಬಲ್ಲಿ ಮೊಸರನ್ನು ಕುಡಿದು, ಅಚ್ಯುತ ಎಂಬ ಜಾಗದಲ್ಲಿ ವಾಸಮಾಡಿ ಅಲ್ಲೇ ಇರುವ ಭೂತಲದಲ್ಲಿ ಸ್ನಾನವನ್ನೂ ಪೂರೈಸಿ ಆ ನಂತರದಲ್ಲಿ ಈ ಪ್ರದೇಶಕ್ಕೆ ಪುತ್ರಾದಿಗಳೊಂದಿಗೆ ಬಂದು ವಾಸಮಾಡಲು ಸಮರ್ಥನಾಗುತ್ತೀಯಾ..
ಇಲ್ಲಿ ಕೊನೇಯಲ್ಲಿರುವ "ಸಮರ್ಥನಾಗುತ್ತೀಯಾ" ಎಂಬುದು ಪ್ರಶ್ನಾರ್ಥಕವಾಗಿ ಯೂ ಉತ್ತರವಾಗಿಯೂ ಹೇಳಲ್ಪಟ್ಟಿದೆ.....!!
ಇದರ ನಾನಾರ್ಥವನ್ನು ಗುರುಮುಖದಿಂದ ಕೇಳಿ ತಮ್ಮ ಮುಂದಿಡಲು ಹರ್ಷವೆನಿಸುತ್ತದೆ.. ತಾವೂ ಆನಂದಿಸುವಿರಾಗಿ ನಂಬಿದ್ದೇನೆ.

****************************************************
ಈ ಶ್ಲೋಕಕ್ಕೆ ಅನೇಕಾರ್ಥಗಳಿವೆಯೆಂದು ಈ ಮೊದಲೇ ಹೇಳಿದೆನಷ್ಟೇ.. ಅದನ್ನು ಒಂದೊಂದಾಗಿ ನೋಡೋಣ...
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಯುಗಂಧರೇ...( ನಿಷೇಧಾರ್ಥ)
   "ಯುಗಂಧರ" ಎಂಬ ಒಂದು ಪರ್ವತ ಇತ್ತು. ಅದು ಕುರುಕ್ಷೇತ್ರಕ್ಕೆ ಬರುವವರಿಗೆ ಪ್ರವೇಶದ್ವಾರದಂತಿತ್ತು. ರೌಪ್ಯಾ ನದಿಯ ದಂಡೆಯಲ್ಲಿ ಇರುವ ಈ ಪ್ರದೇಶದ ಮೂಲಕವೇ ಹಿಂದೆ ಜನರು ಪ್ರವಾಸ ಮಾಡುತ್ತಿದ್ದರು .ಹೀಗೆ ಯಾತ್ರೆ ಮಾಡುತ್ತಾ ಈ ಸ್ಥಳಕ್ಕೆ ಬಂದು ವಾಸ ಮಾಡುವವರಿಗೆ ಅಲ್ಲಿರುವ ಪಿಶಾಚಿಯು ಅದೃಶ್ಯ ರೂಪದ ಲ್ಲಿದ್ದು  ಹೇಳುತ್ತಿತ್ತು... ಯುಗಂಧರೇ ದಧಿಪ್ರಾಶ್ಯ..... ಅಂದರೆ ಈ ಸ್ಥಳದಲ್ಲಿ ದಧಿಪ್ರಾಶನ ನಿಷಿದ್ಧ...! ಅಂದರೆ ಈ ಯುಗಂಧರ ಪ್ರದೇಶದಲ್ಲಿ ಮೊಸರು ತಿನ್ನುವಂತಿಲ್ಲ...! ಅದು ನಿಷಿದ್ಧಾಹಾರ...! ಏಕೆಂದರೆ ಈ ಪ್ರದೇಶದಲ್ಲಿ ಗೋವುಗಳ ಸಂತತಿ ಇಲ್ಲ...! ಇಲ್ಲಿರುವುದೆಲ್ಲಾ ಒಂಟೆಗಳು, ಕುದುರೆಗಳು, ಹೇಸರಗತ್ತೆಗಳು...! ಅಂದರೆ ಒಂದೇ ಗೊರಸು ಹೊಂದಿರುವ ಪ್ರಾಣಿಗಳು. ಶಾಸ್ತ್ರದಲ್ಲಿ ಒಂದೇ ಗೊರಸನ್ನು ಹೊಂದಿರುವ ಪ್ರಾಣಿಯ ಹಾಲು ಮೊಸರುಗಳನ್ನು ಸೇವಿಸಬಾರದು ಎಂದಿದೆ.. ಇದೇ ಮಾತನ್ನು ಕರ್ಣ ಪರ್ವದಲ್ಲೂ ಶಲ್ಯನಿಗೆ ಕರ್ಣ ಹೇಳುತ್ತಾನೆ.. ನಿಮ್ಮ ದೇಶದಲ್ಲಿ ಕುಡಿಯಬಾರದ್ದನ್ನೆಲ್ಲಾ ಕುಡಿಯುತ್ತಾರೆ ಎಂದು ಮುಂತಾಗಿ... ಅಂದರೆ ಈಗಿನ ಇರಾಕ್,ಇರಾನ್ ಪ್ರಾಂತಗಳ ಪ್ರವಾಸಕ್ಕೆ ಹೋದವರು ಅಲ್ಲಿ ಈ ರೀತಿಯಾದ ಪ್ರಾಣಿಗಳ ಹಾಲು ಮೊಸರುಗಳನ್ನು ಉಪಯೋಗಿಸುತ್ತಾರೆ ಅಂಥವರು ಯಾತ್ರೆಯನ್ನು ಮುಗಿಸಿಕೊಂಡು ಈ ಯುಗಂಧರಕ್ಕೆ ಬರುತ್ತಾರೆ.. ಅಂತಹ ಸಂದರ್ಭದಲ್ಲಿ ಈ ಪಿಶಾಚವು ಈ ಮಾತನ್ನು ಹೇಳುತ್ತದೆ...!!! ಹೀಗೇ ಈ ಯುಗಂಧರ ಪ್ರದೇಶದಲ್ಲಿ  ನೀನು ಅಲ್ಲೆಲ್ಲ ದಧಿಎಂದರೆ ಮೊಸರನ್ನು ಸೇವಿಸಿದ್ದೀಯಾ ... ಅದಷ್ಟೇ ಅಲ್ಲ... "ಅಚ್ಯುತಸ್ಥಲೇ" ಸಾಮಾನ್ಯಾರ್ಥದಲ್ಲಿ ಅಚ್ಯುತ ಎಂಬ ಸ್ಥಳ ಎಂದು ಹೇಳಿದರೂ ಕೂಟಾರ್ಥವು... ಸಂಕರ ವರ್ಣದವರು ವಾಸಮಾಡುವ ಸ್ಥಳದಲ್ಲಿ ವಾಸಮಾಡಿದ್ದೀಯಾ... {ಸಂಕರ ವರ್ಣೀಯರು ಎಂದರೆ ತುರುಕರು ಎಂದು ವ್ಯಾಖ್ಯಾನ ಮಾಡಿದ್ದಾರೆ.}. ಅಂತಹ ಜನರೊಂದಿಗೆ ವಾಸಮಾಡಿದ್ದೀಯಾ..
ಭೂತಿಲಯ/ಭೂತಲಯೇ ಭೂತಾನಾಂ ಲಯ ಸ್ಥಾನೇ- ಪ್ರಾಣಿಗಳನ್ನು ಕೊಂದು ಬದುಕುವ ಜನರು ಇರುವಲ್ಲಿ( ತುರುಕ ದೇಶದಲ್ಲಿ) ಸ್ನಾನ ಮಾಡಿದ್ದೀಯಾ...ಬೆಂಕಿಯಲ್ಲಿ ಬೇಯದೇ ಇರುವ ಹೆಣಗಳನ್ನು ನದಿಗಳಿಗೆ ತಳ್ಳಿಬಿಡುತ್ತಿದ್ದಾರೆ ಅಂತಹ ನದಿಗಳಲ್ಲಿ ಸ್ನಾನ ಮಾಡಿದ್ದೀಯಾ...{" ಯೇನಗ್ನಿದಗ್ಧಾಃ ಯೇವಾಜಾತಾ ಕುಲೇ ಮಮ.. ಎಂದು ಹೇಳಿದೆ.. ಪಂಚಾಗ್ನಿ ಸಂಬದ್ಧನಾದ ವ್ಯಕ್ತಿಯನ್ನು ಅಗ್ನಿಯಲ್ಲೇ ಸುಡಬೇಕು ಎಂಬುದು ವೇದವಾಚ್ಯವಾದದ್ದು. ಬ್ರಾಹ್ಮಣನನ್ನು ಅಗ್ನಿಯಲ್ಲೇ ಸುಡಬೇಕು.. ಸನ್ಯಾಸಿಗಳನ್ನು ಹೂಳಬೇಕು. ಪಂಚಾಗ್ನಿ... ಬ್ರಾಹ್ಮಣನು ಹುಟ್ಟುವಾಗ ಮಾತಾ, ಶ್ರದ್ಧಾ,ಸೋಮ, ಮೇಘ, ಪರ್ಜನ್ಯ ಎಂದು  ಪಂಚಾಗ್ನಿಯಿಂದ ಬಂದಿರುತ್ತಾನೆ ಎಂದು ಉದ್ಧಾಲಕರು ಉಪನಿಷತ್ತಿನಲ್ಲಿ ಹೇಳಿದೆ. ಯಾರಿಗೆ ಯಜ್ಞೋಪವೀತ ಧಾರಣಾಧಿಕಾರವಿದೆಯೋ ಅವರೆಲ್ಲರನ್ನೂ ಅಗ್ನಿಯಲ್ಲೇ ಸುಡಬೇಕು... ಅದೇ ರೀತಿ ಸನ್ಯಾಸಿಗಳಿಗೆ ಅಗ್ನಿ ಸಂಸ್ಕಾರವಿಲ್ಲ...!! ಅವರು ಎಲ್ಲವನ್ನೂ ಕಳಚಿಕೊಂಡಿರುತ್ತಾರೆ..!!}
ಅದೇ ರೀತಿಯಲ್ಲಿ "ಅನಗ್ನಿದಗ್ಧಾನಾಂ" ಪ್ರದೇಶದಲ್ಲಿ ಸ್ನಾನ ಮಾಡಿದವಗಿದ್ದೀಯಾ.... ಹಾಗಾಗಿ ಈ ಕ್ಷೇತ್ರಕ್ಕೆ ಬರಬೇಡ.. ಒಂದು ವೇಳೆಇದನ್ನು ಮಾಡಿಲ್ಲದಿದ್ದರೆ ಇಲ್ಲಿ ನೀನು ಉಳಿದುಕೊಳ್ಳಬಹುದು.. ಎಂದು ಪಿಶಾಚವು ಹೇಳುತ್ತದೆ...!!
          ಹೀಗೆ ಅಲ್ಲಿ ಬಂದವರಿಗೆಲ್ಲ ಈ ಮೇಲಿನ ಮಾತುಗಳನ್ನು ಪ್ರಶ್ನಿಸುತ್ತಾ ಮತ್ತೂ ಉಳಿದುಕೊಂಡನಾದರೆ ... ಅಂದರೆ  ಯಾವನು ಆ ದೇಶಗಳಿಂದ  ಬರುವಾಗ ಅಲ್ಲಿನ ಒಂಟೆ ಇತ್ಯಾದಿ ಒಂದೇ ಗೊರಸನ್ನು ಹೊಂದಿದ ಪ್ರಾಣಿಗಳ ಮೊಸರನ್ನು ಸೇವಿಸಿದ್ದರೆ, ವರ್ಣ ಸಂಕರಗೊಂಡ ಜನರಿ ಬದುಕುತ್ತಿರುವಲ್ಲಿ ವಾಸ ಮಾಡಿ ಬಂದವನಾಗಿದ್ದರೆ.... ಮತ್ತು ಅಗ್ನಿ ದಗ್ಧಮಾಡದೆ ಅರ್ಧ ಬೆಂದ ಹೆಣಗಳನ್ನು ಎಸೆದ ನದಿಗಳಲ್ಲಿ ಸ್ನಾನ ಮಾಡಿ ಬಂದವನಾಗಿದ್ದರೆ ... ಇಲ್ಲಿ ಒಂದು ದಿನ ಕೂಡಾ ನಿನಗೆ ವಾಸಮಾಡುವುದಕ್ಕೆ ಬಿಡುವುದಿಲ್ಲ.. ಹೀಗೆ ಹೇಳುತ್ತಾ ಅನೇಕ ಜನರನ್ನು ಅಲ್ಲಿಂದ ಹೆದರಿಸಿ ಕಳಿಸಿಬಿಡುತ್ತಿತ್ತು.. 
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
"ಯುಗಂಧರೇ"...( ಸಾದ್ವರ್ಥ)
ಯುಗಂಧರ ಎಂದರೆ ಸ್ಥೂಲ ಶರೀರ ಎಂದೂ ಹೆಸರಿದೆ. ಏಕೆಂದರೆ ಸುಖ ದುಃಖಾದಿಗಳನ್ನು ಲಾಭಾಲಾಭಗಳೆಂಬ ಯುಗಲಗಳನ್ನು ಈ ಶರೀರವು ಹೊಂದುವುದರಿಂದ ಇದನ್ನು ಅಂದರೆ ಶರೀರ ದಲ್ಲಿ.. ಮೊಸರನ್ನು ಕುಡಿದಿದ್ದೀಯಾ...( ದಧಿಪ್ರಾಶನ ಶಬ್ದೇನ  ಧರ್ಮಪ್ರಜಾ ಸಂಪತ್ಯರ್ಥೋ ದಾರ ಸಂಯೋಗಃ- ವಿವಾಹ ಕಾಲದಲ್ಲಿ ಬ್ರಹ್ಮವರ್ಯ ಸಮಾಪ್ತಿಗಾಗಿ ಮೊಸರನ್ನು ಕುಡಿಸುತ್ತಾರೆ..... ||ಸಮಜ್ಜಂತು ವಿಶ್ವೇ ದೇವಾಃ | ದಧ್ನ ಪ್ರಾಶ್ಯ| ಪ್ರತಿಪ್ರಯಚ್ಛೇತ್|(ಗೃಹ್ಯಸೂತ್ರ..) ಬ್ರಹ್ಮ ಚಾರಿಯಾದವನು ತನ್ನ ಬ್ರಹ್ಮರ್ಯವನ್ನು ಮುಗಿಸುವುದಕ್ಕಾಗಿ ಮೊಸರನ್ನು ಇಂದೂ ಕೂಡಾ ಕುಡಿಸುವುದಿದೆ. ಏಕೆಂದರೆ ಈ ಮೊಸರನ್ನು ಕುಡಿಯುವುದರಿಂದ ಪತ್ನಿಯಲ್ಲಿ ಪ್ರಜೋತ್ಪತ್ತಿಯನ್ನು ಮಾಡುವುದಕ್ಕೆ ಸಹಾಯಕವಾಗುವುದೆಂದು ಮಂತ್ರಗಳಿವೆ...!! ಹಾಗೆ ದಧಿ-ಮೊಸರನ್ನು ಕುಡಿಯುವುದರ ಮೂಲಕ ಸತ್ಪುತ್ರರನ್ನು ಪಡೆದವನಾಗಿದ್ದೀಯಾ....
ಅಚ್ಯುತಸ್ಥಲೇ.....
ಅಚ್ಯುತ ಎಂದರೆ ಲಿಂಗರೂಪ...!
ಲೀಂಗ ರೂಪವಾದ ಶರೀರ....!! ಇದು ಭೌತ ಶರೀರವಾದರೆ ಚ್ಯುತ... ಯಾವನಿಗೆ ಪ್ರೇತೋದ್ಧಾರ ಕಾರ್ಯವು ಆಗುವುದಕ್ಕೆ ಮೊದಲಿನ ರೂಪವಾದ  ಲಿಂಗ ರೂಪದಲ್ಲೇ ಸುತ್ತುತ್ತಿರುತ್ತಾನಾದ್ದರಿಂದ ಅಂತಹ ಸ್ಥಳದಲ್ಲಿ ಉಳಿದುಕೊಂಡಂಥಾ..
ಭೂತಲಯೇ ಸ್ನಾತ್ವಾ..
ಭೂತಾನಾಂ ಲಯಸ್ಥಾನೇ  ಸ್ನಾತ್ವಾ ಎಂದರೆ ಅಲ್ಲಿ ಶುದ್ಧಿಯನ್ನು ಹೊಂದಿದವನಾಗಿ...
ಅಂದರೆ ಈ ಕ್ಷೇತ್ರ ದಲ್ಲಿ ವಾಸಮಾಡಲು ಯೋಗ್ಯನಾಗಬೇಕಾದರೆ.. ವಿವಾಹವಾಗುವುದರ ಮೂಲಕ ಸತ್ಪುತ್ರರನ್ನು ಪಡೆದವನಾಗಿ ನಂತರದಲ್ಲಿ ಲಿಂಗರೂಪ ಶರೀರವನ್ನು ಹೊಂದುತ್ತಾ ಮುಂದೆ ಅದನ್ನೂ ಬಿಟ್ಟು ಶರೀರ ಶುದ್ಧಿಯನ್ನು ಹೊಂದಿ ಬ್ರಹಾನುಭವವನ್ನು ಹೊಂದಿದ ನಂತರ ಆ ನಂತರದಲ್ಲಿ ಇಲ್ಲಿಗೆ ಬಾ.. ಎಂದುಪಿಶಾಚವು ಹೇಳುತ್ತದೆ..
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
"ಯುಗಂಧರೇ...." {ವಾನಪ್ರಸ್ಥ.}

ಗ್ರಹಸ್ಥ ಧರ್ಮದಲ್ಲಿ ಇದ್ದವನು ಅಲ್ಲಿ ಆತ್ಮ ಶ್ರಾದ್ಧವನ್ನು ಮಾಡಿಕೊಂಡು ವಾನಪ್ರಸ್ಥವನ್ನೂ  ಅಲ್ಲಿ ಪುನಃ ಆತ್ಮ ಶ್ರಾದ್ಧವನ್ನು ಮಾಡಿಕೊಂಡು ಸನ್ಯಾಸವನ್ನು ಸ್ವೀಕರಿಸಿದವನಾಗಿ ಇಲ್ಲಿ ಬಂದು ವಾಸ ಮಾಡುತ್ತೀಯಾ....
ಹೀಗೇ ಪ್ರತಿಯೋಮ್ದು ಅರ್ಥದಲ್ಲೂ ಬ್ರಹ್ಮ ಚಾರೀ, ಗ್ರಹಸ್ಥ, ವಾನಪ್ರಸ್ಥ, ಸನ್ಯಾಸ ಧರ್ಮ, ಹೀಗೇ ಆಶ್ರಮ ಚತುಷ್ಠಯಗಳನ್ನೂ ಮೀರಿದವನಾಗಿ ಇಲ್ಲಿ ಬಂದು ವಾಸಿಸುವುದಕ್ಕೆ ಮಾತ್ರ ಅವಕಾಶವುಂಟು ಎಂದು ಪಿಶಾಚವು ಎಚ್ಚರಿಕೆಯನ್ನು ಕೊಡುತ್ತದೆ  





       
  









ಮುಂದುವರೆಯುತ್ತದೆ...

3 ಕಾಮೆಂಟ್‌ಗಳು: