प्रज्वालितॊ ज्ञानमयप्रदीपः

ಮಂಗಳವಾರ, ಏಪ್ರಿಲ್ 17, 2012

ಸಖಿ ನಿನ್ನ ಸಖ್ಯದ ಅತಿ ಮಧುರ ಆಖ್ಯಾನ......


...........ತುಂಬು ಕೂದಲಿನ ತಂಗಿಯ ತಲೆಬಾಚಿ ಜಡೆ ಹಾಕುತ್ತಿರುವ ಪ್ರೀತಿಯ ಅಣ್ಣನ ಎದುರು ಸಂತಸವನ್ನನುಭವಿಸುತ್ತಿರುವ ತಂಗಿ ಅವಳು........ ಎಂಥಾ ಪ್ರೀತಿ... ಎಂಥಾ ನೋಟ.... ನಿಮಗಾರಿಗೂ ಇಲ್ಲದ ಭಾಗ್ಯ ನನಗೆ ಸಿಕ್ಕಿದೆ ಎಂಬ ಉಲ್ಲಾಸದ ನೋಟ ಅದು.ಎಷ್ಟು ತಾದಾತ್ಮ್ಯ ಅಣ್ಣನದು ತಂಗಿಯ ಒಂದೊಂದು ಕೂದಲೂ ಸಿಕ್ಕಾಗದಂತೆ ನೋಡಿ ನೋಡಿ ಹೆಣೆಯುತ್ತಿದ್ದಾನೆ ಜಡೆಯನ್ನು. ನನ್ನ ತಂಗಿ ಹೇಗಿರಬೇಕು... ಜಗ ಮೆಚ್ಚುವಂತಿರಬೇಕು.... ಆಹಾ..ಆಹಾ...ಇದು ನಾವು ನೀವು ಅನುಭವಿಸಬೇಕಾದ್ದು,,,,,,ಅಲ್ಲವೇ?
ಬ್ಯಾಡಾ........ಮುಂದೆ ನನ್ನ ಹೆಂಡತಿಯಾಗಿ ಬರುವವಳ ಕೊರಳಹಿಂಭಾಗವನ್ನ ಲಂಕರಿಸುವ ನೀಳ ಕೇಶರಾಶಿಯನ್ನು ತನ್ನ ಕೈಗಳಿಂದಲೇ ಸವರಿ ಜಡೆ ಹಾಕಿದರೆ.... ಆ ಹೆಂಡತಿ ಪಡುವ ಖುಶಿ....... ಗಂಡನ ಬರುವಿಕೆಯನ್ನು ಹೇಗಾದರೂ ಕಾದಾಳು ಬಂದ ಗಂಡ ಹೀಗೆ ಒಂದು ಬಾರಿ ತನ್ನ ತಲೆ ನೇವರಿಸುತ್ತಾನೆಂದರೆ.ಅವಳಿಗೂ ಅನ್ನಿಸುವುದಿಲ್ಲವೇ....ಇಂತಹ ಗಂಡನಿಗೆ ತನ್ನ ಸರ್ವಸ್ವವನ್ನೂ ಅರ್ಪಣ ಮಾಡಬೇಕು ಎಂದು...ಆಹಾ....ಆಹಾ....ಎಂಥಾ ಸರಸ ದಾಂಪತ್ಯ....ಇದು ನಾವು ನೀವು ಅನುಭವಿಸಬೇಕಾದ್ದು...ಅಲ್ಲವೇ..?

.. ಹೀಗಿದ್ದರೆ ಸಾವಿಗೆ ಅಂಜಬೇಕೇ?.. ಬದುಕು ಇನ್ನೂ ನೂರು ವರ್ಷ ಹೆಚ್ಚಿರಲೀ ಎಂದೆನಿಸುವುದಿಲ್ಲವೇ..?...........ಅನುಭವಿಸಬೇಕು ಕಣ್ರೀ.... ಮುಗಿದು ಹೋಗಿಬಿಡುತ್ತೆ...ಮತ್ತೆ ಸಿಗೋದಿಲ್ಲಾ....
....ಇಲ್ಲಾ.. ನಾವು ಅವೆರಡನ್ನು ಇದ್ದರೂ ಅನುಭವಿಸದೇ ಕಾಲಕಳೆದಿದ್ದೇವೆ...... ಈಗ ಹಪ ಹಪಿಸುತ್ತೇವೆ....ಸಿನಿಮಾ,  ಧಾರವಾಹಿಗಳಲ್ಲಿ ಗಂಡು-ಹೆಣ್ಣು ಡ್ಯಾನ್ಸ್ ಮಾಡುವುದನ್ನು ನೋಡಿ ಬೆಚ್ಚಗಾಗುತ್ತೇವೆ... ನಮ್ಮ ಹೆಂಡತಿ ಮನೆಯಲ್ಲಿ ಬಾಗಿಲು ತೊಳೆದು ರಂಗೋಲಿಯಿಕ್ಕಿ ಕಾಯುತ್ತಿರುತ್ತಾಳೆ... ಪುರುಷಪುಂಗವ ಬರುವನೆಂದು ..ಅವಳೊಂದಿಗೆ ಡ್ಯಾನ್ಸ್ಮನೆ ಹಾಳಾಗಿ ಹೋಗಲೀ ಪೇಟೇ ಸುತ್ತುವುದಕ್ಕೂ ಪುರುಸೊತ್ತಿಲ್ಲ.ಇಷ್ಟುಒಳ್ಳೆಯವರೆನಿಸಿಕೊಳ್ಳಲು ಹರಸಾಹಸ ಪಡುತ್ತಿರುವ ,ಒಂದೇ ತಲೆಯಿರುವ ನಮಗೇ ನೂರಾರು ದುಷ್ಟ ಆಲೋಚನೆಗಳು ಸುನಾಮಿಯಂತೇ ಬರುವಾಗ .......ಅಯ್ಯೋ ಆ ಹತ್ತು ತಲೆಯ ರಾವಣ..... ಅವನಿಗೆಂಥಾ ಆಲೋಚನೆಗಳು ಎಷ್ಟು ಬರಬೇಡಾ......!!!!!!!!!!!!!!

ಭಾನುವಾರ, ಏಪ್ರಿಲ್ 15, 2012

ಮನುಷ್ಯನಾಗಿಯೇ ಸಾಯಬೇಕೆಂದಿದ್ದೇನೆ ಆಗುತ್ತಾ....!

"ಸ್ವಧರ್ಮೇ ನಿಧನಂ ಶ್ರೇಯಃ" ಎಂದು ಉಕ್ತಿಯಿದೆ. ನನಗೆ ತಿಳಿದ ಮಟ್ಟಿಗೆ ಅಥವಾ ನನ್ನ ಅನುಭವಕ್ಕೆ ಬಂದ ಹಾಗೇ ಈ ದೇಶದಲ್ಲಿ ಸನಾತನ ಧರ್ಮ ಎಂದು ಕರೆಸಿಕೊಂಡಿರುವ ವೇದೋಕ್ತ ಜೀವನಕ್ರಮವನ್ನುಳಿದು ಉಳಿದೆಲ್ಲ ,(ಅದಕ್ಕೆ ಧರ್ಮ ಎಂದು ಹೇಗೆ ಹೇಳಬೇಕೋ ತಿಳಿಯುತ್ತಿಲ್ಲಾ ಆದರೂ..) ಧರ್ಮಗಳನ್ನು ಆಶ್ರಯಿಸಿ ತಂತಮ್ಮ ಬದುಕನ್ನು ಕಂಡುಕೊಂಡವರೆಲ್ಲರೂ ಆ ಸ್ವಧರ್ಮದ ತಳವನ್ನೇ ಬಿಟ್ಟು ಪರರ ಬುದ್ಧಿಯಿಂದ ಪ್ರೇರಿತವಾದ ಧರ್ಮದ ಆಶ್ರಯವನ್ನು ಪಡೆದವರೇ ಆಗಿದ್ದಾರೆ, ನೀವು ಯಾರನ್ನೇ ಇಲ್ಲಿ ಉದಾಹರಿಸಿದರೂ. ಅವರೆಲ್ಲರ ಘೋಷಿತವಾದ ಧಾರ್ಮಿಕ ಪ್ರತಿಪಾದನೆಗಳೆಲ್ಲವೂ ಅವರವರ ಮೂಗಿನ ನೇರಕ್ಕೇ ಮಾಡಿದ್ದೇ ವಿನಃ ಸಾರ್ವಕಾಲಿಕ್ತೆ ಅದರಲ್ಲಿ ಖಂಡಿತವಾಗಿ ಗೋಚರವಾಗುವುದಿಲ್ಲ. ಬುದ್ಧ,ಬಸವ,ಜೈನ,ಶಂಕರ,ಮಧ್ವ, ಹೀಗೇ ಯೆಲ್ಲರೂ... ಆ ಸನಾತನವನ್ನು ಅಪಭೄಂಶ ಯಾ ಪರಿವ್ರ್ತನೆ ಮಾಡಿ ಹೇಳಿದ್ದೇ ಆಗಿದೆ. 
....... ನಾವು ಮನುಷ್ಯರಾಗಿ ಮನುಷ್ಯ ಧರ್ಮದಲ್ಲಿ ಹುಟ್ಟಿಬಿಟಿದ್ದೇವೆ ಹಾಗಾಗಿ ಸಾವೂ ಈ ಮನುಷ್ಯಜನ್ಮದಲ್ಲೇ ಬರುವಂತಾಗಾಲೀ. ಹಾಗಾದಾಗ "ಸ್ವಧರ್ಮೇ ನಿಧನಂ ಶ್ರೇಯಃ " ಎಂಬುದಕ್ಕೆ ಅರ್ಥ ಬಂದಂತಾಗುತ್ತದೆ ಎಂಬುದು ನನ್ನ ಅಂಬೋಣ ನನ್ನ ಬದುಕು.ಈ ಧರ್ಮ ಪ್ರವರ್ತಕರು ಧರ್ಮಗುರುಗಳು, ಧಾರ್ಮಿಕ ವ್ಯಕ್ತಿಗಳೆನಿಸಿಕೊಂಡವರ ಹಿಂದಿನ ಬದುಕು ಬವಣೆಗಳನ್ನವಲೋಕಿಸಿದಾಗ ನನಗೆ ಈ ಮೇಲಿನ ಉಕ್ತಿಯ ವೈರುಧ್ಯದಲ್ಲೇ ಬದುಕಿದರಲ್ಲವೇ ಇವರೂ ಅನ್ನಿಸಿದೆ. ಹಾಗಾಗಿ ಮನುಷ್ಯನಾಗಿ ಹುಟ್ಟಿದ್ದೇನೆ ಮನುಷ್ಯನಾಗಿಯೇ ಸಾಯುತ್ತೇನೆ, ಆ ಭಾಗ್ಯವೊದಗಲೀ ದಗಲೀ ಎಂಬುದು ನನ್ನ ಅಭಿಮತ.......

ಗುರುವಾರ, ಏಪ್ರಿಲ್ 12, 2012

* ಬಾಲ ಭಾಸ್ಕರ ಬಂದಾ..ಬಾನ ಅಂಗಳಕೆ

ಓ.....ನನ್ನನೆಬ್ಬಿಸಲು ಬಂದ 'ಬಾಲ ಭಾಸ್ಕರ'
ಆಗಲೇ ಆಡಹತ್ತಿದ್ದಾನೆ ಬಾನಂಗಳದಲ್ಲಿ,
ಕೇಳಬೇಕೆಂದಿದ್ದೆ ಆ ಕಾಕ,ಪಿಕ,ಶುಕ ರವವ
ನೋಡಬೇಕೆಂದಿದ್ದೆ ಆ ಉಷೆಯ ಹೊಂಗಿರಣ
ಅಯ್ಯೋ , ಅದಾಗಲೇ ಭಾನು ಬಾನೇರಿ ಬಂದು ಬಂದಾಯ್ತು
ಖಗ ಮೃಗಗಳೆಲ್ಲ ಊರು ಬಿಟ್ಟಾಯ್ತು
ಹಾಲಿನವ ಹಾಲಾಕಿ ಹೋಗಾಯ್ತು...!
ನನಗೀಗ ಬೆಳಗಾಯ್ತು.....!!
ನಾನು ಮಲಗೇ ಇದ್ದೆ....!
ಆಗಲಿ...ಏನಂತೆ...
ಈ ನೀಲಾಕಾಶ ಮತ್ತೆ ಕೆಂಪೇರುವ ವರೆಗೂ
ಹಗಲೇ ಅಲ್ಲವೇ...?
ಆಡಲು ಯಾರಿದ್ದಾರೆ ನನ್ನೊಟ್ಟಿಗೆ..?
ಇದೆಯಲ್ಲ....!
ಈ ಜಗ,ಈ ಜನ
ಈ ಜಾತ್ರೆ....!
ಸಾಕು....ಸಾಕು...!

* ಬದುಕಿನ ಬಣ್ಣಗಳು.....

ಕುರುಡ ಆನೆಯ ಆಕಾರ ಅಳೆದು ಹೇಳಿದಂತೆ ಆಗಿದೆ,ನಮ್ಮ ಶಾಸ್ತ್ರಾವಲೋಕನ.ನಾವು ಓದಿದ,ತಿಳಿದ ಭಾಗವನ್ನೇ ಸತ್ಯ ಮತ್ತು ಅದಷ್ಟೇ.ಬ್ರಹ್ಮಾಂಡವೆಂದು ತಿಳಿದಿದ್ದೇವೆ. ಹಾಗಾಗಿ ಸಾಗರದ(ಸಂಸಾರ)ಆಳ ಅಗಲಗಳ ನಮ್ಮರಿವಿನ ಬಲಕ್ಕೇ ನೋಡಿ ಇಷ್ಟೇ ಎಂದು ಈಜಲು ಧುಮುಕಿಬಿಟ್ಟಿದ್ದೇವೆ. ಆಮೇಲೆ ಕೈ ಕಾಲು ಒದರುತ್ತಿದ್ದೇವೆ. ......ಕಷ್ಟ.

ಪರರ ತಟ್ಟೆಯಲ್ಲಿ ಬಿದ್ದ ನೊಣಕ್ಕೆ ವ್ಯಾಖ್ಯಾನಮಾಡುತ್ತ ನನ್ನ ತಟ್ಟೆಯಲ್ಲಿ ಉರುಳಾಡುತ್ತಿರುವ ಹೆಗ್ಗಣವನ್ನು ಗಮನಿಸದೇ ಕೈಯ್ಯಿಕ್ಕುತ್ತಿದ್ದೇವೆ.

ನನ್ನ ಕೈಯ್ಯಲ್ಲಿರುವ ಇಸ್ಪೀಟು ಕಾರ್ಡುಗಳನ್ನು ನಾನು ಯಾವಾಗಲೂ ನೋಡಿಕೊಳ್ಳಬಹುದು....ಪಕ್ಕದವನ ಕಾರ್ಡು ನೋಡಲು ಸಿಕ್ಕಾಗ ನೋಡಿ ಬಿಡಬೇಕು.

ಅಷ್ಟಾದರೂ ಕೆರೆಯಭಾಗದ ಜಾಗವ ಕೆರೆದುಕೊಂಡಿದ್ದಲ್ಲದೇ ಕೈಯ್ಯನ್ನೂ ಮೂಸಿ ನೋಡಿಕೊಳ್ಳುತ್ತಾರೆ.

ಮನೆಯ ಜಗುಲಿಯಲ್ಲಿ ಉರುಳಾಡಿ..... ನಾನು ಈಜಲು ಕಲಿಯುತ್ತಿದ್ದೇನೆ ...ಓಹ್.... ಕಲಿತಿದ್ದೇನೆ ಇದೋ ಎಂದು ಬೀಗಿ ಕೆರೆಗೆ ಹಾರಿ ಬಿಡುತ್ತಾರೆ.......ಕೆರೆಯಲ್ಲಿ ನೀರಿರುತ್ತದಲ್ಲಾ....!!


ಮೂಗಿನಲ್ಲಿ ಒಣಗಿದ ಸಿಂಬಳವನ್ನು ಬೆರಳೆಟ್ಟಿ ಕೆರೆದು ತೆಗೆದಿದ್ದಲ್ಲದೇ ಅದರ ತಿಕ್ಕಿ ಉಜ್ಜಿ ಮತ್ತೇ ಆ ಬೆರಳನ್ನೇ ಮೂಗೇ ಹಿಡಿದು ಆಘ್ರಾಣಿಸಿ ಸಂತಸವನ್ನನುಭವಿಸುವವರಿಗೆ ಯೇನೆನ್ನಲೀ...

ಕೆಲವರು ನನಗೆಲ್ಲಾ ಗೊತ್ತು ಎಂದು ಹೇಳುತ್ತಾರೆ.ಹೌದು ಅವರಿಗೆಲ್ಲದೂ ...ಗೊತ್ತು ಆದರೆ ಎಲ್ಲದರ ಅರ್ಥ ಆಗಿರುವುದೇ ಇಲ್ಲಾ. ನೋಟಕ್ಕೂ ದರ್ಶನಕ್ಕೂ ವ್ಯತ್ಯಾಸವಿದೆಯೆಂಬುದನ್ನು ಮರೆತು ಬಿಟ್ಟಿರುತ್ತಾರೆ.

ಹೆರಿಗೆಯ ನೋವು ಹೆತ್ತವಳಿಗಲ್ಲದೇ ಅನ್ಯರಿಂಗರಿವಾಗುವುದೇ.?

ಸವೆದ ದಾರಿಯ ಸುಖವನ್ನು ಚಿಂತಿಸುತ್ತ ಸವೆಯುವ ದಾರಿಯ ಚಿಂತನೆಯಾನ್ನು ಮರೆತು ಬಿಡುತ್ತಾರೆ. ಅದು ಚಿಂತಾಯಾಶ್ಚ ಚಿತಾಯಾಶ್ಚ ಬಿಂದು ಮಾತ್ರಂ ವಿಶೇಷತಃ| ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ಜೀವಿನಮ್| ಎಂಬುದನ್ನು ಅರಿತೂ ಚಿಂತನೆಯ ಬಿಟ್ಟು ಚಿಂತೆಯನ್ನೇ ಮಾಡುತ್ತಾರೆ.

ನಮ್ಮ ಸ್ಥಿತಿ:- ಮರ್ಕಟಸ್ಯ ಸುರಾಪಾನಂ ಮಧ್ಯೇ ವೃಶ್ಚಿಕದಂಶನಮ್| ತನ್ಮಧ್ಯೇ ಭೂತ ಸಂಚಾರಃ ಯದ್ವಾ ತದ್ವಾ ಭವಿಷ್ಯತಿ |ಆಗಿದೆ.

ಮೊದಲು ಮನೆಗೊಬ್ಬ ಯಜಮಾನನೆಂಬವನಿದ್ದ , ಸರಿಯೋತಪ್ಪೊ ಯೆಲ್ಲರೂ ಅವ ಹೇಳಿದಂತೆ ಕೇಳುತ್ತಿದ್ದರು. ಸಂಸಾರದಲ್ಲಿ ಸುಖವಿತ್ತು ಸಮರಸತೆಯಿತ್ತು ಧನ್ಯತೆಯಿತ್ತು. ಇಂದು ಮನೆ ಒಂದೇ ಮನ ಹಲವು... ಯಜಮಾನನಿಲ್ಲದ ಸಂಸಾರ, ಕಾವರಿಲ್ಲದ ಗೂಡು, ದೇವರಿಲ್ಲದ ಗುಡಿ. ಯೆಲ್ಲರೂ ಹೇಳುವವರೇ ಕೇಳುವವರು ಯಾರೂ ಇಲ್ಲಾ.

ಹಿಂದೆ , ಓರ್ವ ಗುರುವಿರುತ್ತಿದ್ದ ಮುಂದೆ, ಒಂದು ಗುರಿಯಿರುತ್ತಿತ್ತು.. ಇಂದು , ಮುಂದಿದ್ದವರೇ ಹಿಂದಿನಿಂದ ಚೂರಿಯಿಕ್ಕುತ್ತಾರೆ.

ಕೆಲವರು ಬದುಕುವುದಕ್ಕಾಗಿ ಉಣ್ಣುತ್ತಾರೆ ಇನ್ನು ಕೆಲವರು ಉಣ್ಣ್ವುದಕ್ಕಾಗಿಯೇ ಬದುಕುತ್ತಿದ್ದಾರೆ. ಆದರೆ ಉಂಡು ಬದುಕುತ್ತಿರುವವರು ಬೆರಲೆಣಿಕೆಯಷ್ಟೂ ಜನರಿಲ್ಲಾ. ಕೆಲವರಿಗೆ ಉಣ್ಣಲು ಊಟವಿಲ್ಲಾ...ಇನ್ನು ಕೆಲವರಿಗೆ ಬಾಳಲು ಬದುಕೇ ಇಲ್ಲವಲ್ಲಾ..

ಕೊಡಲಿಯ ಕಾವೇ ಕುಲಕ್ಕೆ ಮೃತ್ಯುವಾಗಿ ಬಿಟ್ಟಿದೆ. ಹಾಗಂತ ಕಾವಿಲ್ಲದಿದ್ದರೆ ಕುಲಕ್ಕೆ ಕೊನೆಯೇ ಇಲ್ಲದಂತಾಗಿ ಬಿಡುತ್ತದಲ್ಲಾ.

ಬದುಕಿಗಾಗಿ ಬಣ್ಣ ಹಚ್ಚಿ ಕುಣಿಯುತ್ತಿದ್ದೇವೆ, ಆ ಬಣ್ಣದ ಬದುಕಿನಲ್ಲಿ ನಮ್ಮ ನಿಜವಾದ 'ನಾನು' ಕಳೆದುಕೊಂಡಿದ್ದೇವೆ.

ಮೊದಲು ನೆರೆಹೊರೆಯವರ ಸಹಕಾರವಿತ್ತು ಬದುಕಿಗೆ ಅರ್ಥವಿತ್ತು ಈಗ ನೆರೆ ಯೇ ಹೊರೆಯಾಗಿದೆ ಕಳ್ಳ ಅವನ ಮನೆಯನ್ನು ಕದ್ದೊಯ್ದನೆಂದು ಸಂಭ್ರಮಿಸಿ ಆ ಕಳ್ಳನಿಗೆ ಪುಕ್ಕಟೆ ಸಲಹೆಯನ್ನೂ ಕೊಡುತ್ತಾರೆ ಪಾಪ ಗೊತ್ತಿಲ್ಲ ಕಳ್ಳನಿಗೆ ಕದಿಯದೇ ಬದುಕಿಲ್ಲ... ಅವನ ಮ್ನೆಯಲ್ಲಿ ಯೇನೂ ಸಿಗದಿದ್ದಾಗ ತನ್ನ ಮನೆಗೇ ಕನ್ನ ಹಾಕುತ್ತಾನೆ...ಎಂದು 

ಈಗಿನ ರಾಜಕಾರಣ :- ರಾಜಕಾರಣಿಯ ಮನೆಗೆ ಯಾವಾಗಲೂ ಜನ ಹೋಗುತ್ತಲೇ ಇರಬೇಕು, ಅವನಲ್ಲಿ ಸಮಸ್ಯೆಯ ಸರವನ್ನು ಹಾಕುತ್ತಲೇ ಇರಬೇಕು. ಅವನಿಗದೇನೋ ಬಿಮ್ಮು, ಜಗದ ಜಂಜಡವ ನಾನೇ ತೊಳೆಯುವೆನೆಂದು ಯಾರೂ ಹೋಗದಿದ್ದರೆ ಅವನು ನಿದ್ದೆ ಮಾಡಲಾರ . ಅವನ ಸುಖನಿದ್ದೆಗಾಗಿ ಹೋಗುತ್ತಿದ್ದೇವೆ ನಾವು ನಿತ್ಯ. ಅವನ ಮನೆ ಬಾಗಿಲಿಗೆ.

ದೇವನಿಗೆ ದಾನವರ ಭಯ, ಭಕ್ತಂಗೆ ದೇವರ ಭಯ, ಹೆಂಡತಿಗೆ ಗಂಡನ ಭಯ, ಮಗಂಗೆ ಅಪ್ಪನ ಭಯ, ಅಪ್ಪಂಗೆ ಆದಿಕೊಂಬವರ ಭಯ, ಸಿಷ್ಯಂಗೆ ಗುರುವಿನ ಭಯ, ಯೆಲ್ಲ ಇತ್ತು,, ಈಗ...?ಇಲ್ಲ..ಯಾವುದೂ ಇಲ್ಲ.. ಯಾರಿಗೂ ಇಲ್ಲ. ಯೇನೂ ಇಲ್ಲ... ಹೋಯಿತು ಸೂರೆಯಾಗಿ..... ಲಜ್ಜೆ ನಾಚಿಕೆ ಮಾನ, ಮರ್ಯಾದೆ, ಸಿಗ್ಗು,, ಸಿವುಡು,, ಯಾವುದೂ ಇಲ್ಲ.. ಶಿಕ್ಷೆಯೇ ಇಲ್ಲವಲ್ಲಾ...


ಸತ್ತರೆ ....ಎಲ್ಲರೊಂದಿಗೇ ಸಾಯಬೇಕು......ಈಗಸಾಯೋದಿಲ್ಲಾ ನಾನು. ನಾನೇ ಬೇರೆ ಸಾಯುತ್ತೇನೆ ಎಂದು ಕುಳಿತರೆ..... ಬರುವವರೆಗೂ ಕಾಯಬೇಕಾಗುತ್ತದೆ ಕಣ್ರೀ...... ಅದೋ ಬೇಗ ಬರೋದೂ ಇಲ್ಲಾ.... ಸಾವಿಗಾಗಿ ನರಳಬೇಕಾಗಿಬರುತ್ತೆ... ಅಲ್ವಾ.....ನಿವೇನಂತೀರಿ.....

* ಉಷೆ.....

ಓಹ್... ಯೆಂಥಾ ವಿಚಿತ್ರ ಈ ಧರಣಿ
ಕಣ್ಣು ಬಿಟ್ಟಾಗ ಕಂಡದ್ದು ಆ ರವಿಯ ಕಿರಣ.
ಅದೇ, ಹೆತ್ತಳಾ ನಿದ್ರಾಂಗನೆಯು...
ಬಸಿರಿಂದ ಬಂದೆ
ಎಲ್ಲಿ ಆ ಸೂಲಗಿತ್ತಿ?
ಉಷೆ...!
ಮಡಿಲಲ್ಲಿ ಮಲಗಿಸಿ
ಮೊಲೆಯೂಡಿದಾ ಧರಣಿ
ಮತ್ತೆಲ್ಲಿ ಹೊರಟಳೋ
ಮಗುವಿಗುಸಿರಾಗಲು.
ಈ ಗಾಳಿ, ಈ ಬೆಳಕು
ಆಹಾ ಛಳಿ,
ಕಳೆದೋಯ್ತೇ
ಕರುಣೆಯ ಕರದಾಸರೆ..!
ಕಳೆದೋಯ್ತೇ
ಬೆಚ್ಚನೆದೆಯ ಬಿಸಿಯಪ್ಪುಗೆ
ಬೆಳೆದೆನೆಂದರೆ
ಬೇಡವೇ ಇವಾವುದೂ ಮನುಜಂಗೆ..!!
ಆದರೂ  ನೀ ದೊಡ್ಡವನೆಂಬ ತಾತ್ಸಾರವೇ?
ಬಾ.... ಮಡಿಲ ಮಗುವಾಗುವಾಸೆ..
ಬಾ..... ಮತ್ತೆ ನಿನ್ನಯ ಕರಕೆ
ಕರವಿಡುವ ಆಸೆ
ಬಾ...ನಿನ್ನೆದೆಯ ಬಿಸಿಯಲ್ಲಿ
ಎನ್ನ ಛಳಿ ಕಳೆವಾಸೆ
ಬಾ... ಬಿಸಿಯುಸಿರ ಬೆಂಕಿಯಲಿ
ಬೇಯುವಾಸೆ...
ಬಂದಳಲ್ಲಾ ಮತ್ತೇ..
 ನನ್ನೆಲ್ಲ ಆಸೆಗಳ ಕೂಸು
ಅವಳೇ ಆ ಉಷೆ.......!

ಬುಧವಾರ, ಏಪ್ರಿಲ್ 11, 2012

* ತುರುಕನ ತಕರಾರು....!

ನಮ್ಮ ಮನೆಯ ಬಾಬ್ರಿ ಮಸೀದಿಯ ನಾನೇ ಧ್ವಂಸ ಮಾಡಿದ್ದೆ...!
          ನಮ್ಮ ಮ್ಮ ಮನೆಯ ಗೋಡೆಯಾಚೆಯ ಪಾಳುಬಿದ್ದ ಸಣ್ಣ ಗುಡಿಸಲೊಂದಿತ್ತು. ಅದು ಯಾಕೆ ಅಲ್ಲಿತ್ತು...? ಗೊತ್ತಿಲ್ಲ. ಸುಮಾರು ದಿನಗಳ ಹಿಂದೆ ಅಪ್ಪನ ತಿಥಿಗೆ ಪಾತ್ರ್ಗಳನ್ನು ಕಲಾಯಿ ಹಾಕಿಸಬೇಕೆಂದು ಕುಮಟೆಯ ಜಬ್ಬಾರರನಿಗೆ ನಾನು ಹೇಳಿದ್ದೆ, ಅವ ಒಂದು ದಿನ ಶುಭ ಮುಹೂರ್ತದಲ್ಲಿ ಆ ಪಾಳು ಬಿದ್ದ ಬಂಗಲೆ !!ಯೊಳಕ್ಕೆ ಪ್ರವೇಶಿಸಿದ್ದ.. ತನ್ನ ತಿದಿ (ಕುಲುಮೆ) ಯೊಂದಿಗೆ...!ನಮ್ಮ ಮನೆಯ ಸರ್ವಸ್ವವೂ ಈಗ ಆ ಸೂರ ಸೇರಿತ್ತು, ಕಲಾಯಿಗಾಗಿ...! ಬೆಳಿಗ್ಗೆ ಏಳಕ್ಕೇ ತಿಂಡಿ ಚಹ, ಮಧ್ಯಾನ್ಹ ಒಂದಕ್ಕೆ ಊಟ... ಹೀಗೇ ವೇಳಾ ಪಟ್ಟಿಯಂತೇ ಸರಬರಾಜಾಗುತ್ತಿತ್ತು ಆ ಸಾಬಿಗೆ..!
         ಹಾಗೆ ನಮ್ಮ ಮನೆಯ ಗೋಡೆಯಾಚೆಯಲ್ಲಿ ತಿದಿಯ ತಳವೂರಿ ನಮ್ಮ ಮನೆಯ ತಾಮ್ರದ ದಳ್ಳೆ(ಕಡಾಯಿ)ಗೆ ಸುತ್ತಿಗೆ ಪೆಟ್ಟು ಕೊಟ್ಟು  ಬಣ್ಣ ಮೆತ್ತಿದ ಸಾಬಿ. ಅವನ ಸುತ್ತಿಗೆ ಪೆಟ್ಟಿನ ಸದ್ದು ಹಲವರ ಮನೆಯ ಪಾತ್ರೆಯನ್ನೂ ಹೊಸದು ಮಾಡಿತ್ತು. ನನಗೇ ...'ತಮಾ..ನಿಮ್ಮನೇಲಿ ಇಪ್ಪ ಸಾಯ್ಬಂಗೆ ..ಇದ್ನ ಕೊಡು... ಇದಕ್ಕೆ..ಚೊಟ್ಟು ಸರಿಮಾಡಲಿ..ಇದರ...ತಲಕ್ಕೆ ತಗಡು ಸೇರಿಸಲಿ.ಇದಕ್ಕೆ ಕಲಾಯಿ ಹಾಕಲಿ'.....!.. ಅಯ್ಯೋ ಖರ್ಮವೇ.... ಈ ಕಂಡವರ ಮನೆಯ ಪಾತ್ರೆಯ ಮಸಿಯನ್ನು ನನ್ನ ಹೆಗಲಿಗೆ ಹಚ್ಚಿಕೊಳ್ಳುವ ಖರ್ಮ.... ದುಡಿದಿದ್ದರೆ ಒಂದಿಷ್ಟು ಕಾಸಗುತ್ತಿತ್ತೇನೋ....ಕೂಲಿದು..ಬರಲೇಯಿಲ್ಲ ಆ ಬುದ್ಧಿ....ನನ್ನ ವಿದ್ಯೆ ನೈವೇದ್ಯವಾದದ್ದು ಇಂಥ ಪ್ರಸಂಗಗಳಿಂದಲೇ...
            ಅಂತೂ  ಸಾಬಿ ನಮ್ಮಪ್ಪನ ತಿಥಿ ಮುಗಿದರೂ... ನಮ್ಮ ಮನೆಯ ಒಂದು ಕೈಚೊಟ್ಟಿಗೆ ಕಲಾಯಿ ತಾಗಿಸಲು ಪುರುಸೊತ್ತಿ ಲ್ಲದೇ..ಹಾಗೇ ಇಟ್ಟಿದ್ದ ಮೂಲೆಯಲ್ಲಿ.ತಿಂಗಳೆರಡು ಮೂರಾಯ್ತು. ಮಳೆಗಾಲ ಹತ್ತಿರವಾಯ್ತು ದಿನಂಪ್ರತಿ ಊಟ-ತಿಂಡಿ ನಮ್ಮ ಮನೆಯಿಂದ ಹೋಗುತ್ತಿತ್ತು ಸಾಬಿಗೆ. ಬೆರೆಯವರೆಲ್ಲರ ಮನೆಯ ಪಾತ್ರೆಗಳ ರಾಶಿ ಕರಗಿರಲೇ ಇಲ್ಲ ಇನ್ನೂ..ನನ್ನಮ್ಮ ಅಯ್ಯೋ.. ನಮ್ಮನೆಯವರ ತಿಥಿಗೆ ಪಾತ್ರೆಗಳಿಗೆ ಕಲಾಯಿ ಹಾಕಿಕೊಟ್ಟ ಸಾಬಿ ಅಲ್ಲವೇ... ಅವಳು ಆ ಸಾಬಿಯನ್ನು ಆ 'ನಮ್ಮನೆಯವರಿಗಿಂತ' ಉನ್ನತ ಸ್ಥಾನ ಕೊಟ್ಟು ಬಿಟ್ಟಿದ್ದಳು.ಇದು ನನಗೆ ಆಶ್ಚರ್ಯ ಅಮ್ಮನ ಗುಣವೇ ಹಾಗೆ ಗಂಡನನ್ನು ದೇವರೆಂದೇ ಬಗೆದವಳು..! ಅವನಿಗಾಗಿ ಮಾಡುವ ಕೆಲಸ.ದೇವರ ಪೂಜೆ..ಅದು.ಅವನ ಕೆಲಸಕ್ಕಾಗಿ ಸಹಕರಿಸುವವರು.... ಅವರೂ ದೇವತೆಗಳೇ ಆಗಿಬಿಡುತ್ತಿದ್ದರು..!ಹಾಗಾಗಿ ನನಗೆ ಇಲ್ಲದಿದ್ದರೂ ಆ ತುರುಕರ ಸಾಬಿಗೆ ಹೊತ್ತಿಂದ ಹೊತ್ತಿಗೆ ಪೂಜೆ ನೈವೇದ್ಯಗಳು ..!ಸಾಗುತ್ತಿದ್ದವು.. ಕಂಡವರ ಮನೆಯ ಪಾತ್ರೆ ಹೊತ್ತಿದ್ದಲ್ಲದೇ ಸಾಬಿಗೆ ಊಟ ತಿಂಡಿ ಸಪ್ಲಾಯಿ ಮಾಡುವ ಬೇರರ್ ನಾನೇ ಆಗಿದ್ದೆ.
ಓಹ್...ಗಾಳಿ ಬೀಸಲು ಸುರುವಾಯ್ತು.... ಕರಿ ಮೋಡ ಮೇಲೇರಿ ಬರುತ್ತಿತ್ತು... ಮಳೆಗಾಲ ಸನ್ನಿಹಿತವಾದ ಎಲ್ಲಾ ಲಕ್ಷಣಗಳೂ ಗೋಚರಿಸ ಹತ್ತಿದವು. ಗಾಳಿಗೆ ಗುಡಿಸಲಿನ ಮಡಲಗರಿಯೊಂದು ಎಗರಿ ಬಿತ್ತು, ಆ ಸಾಬಿಯ ತಿದಿಯ ಬೆಂಕಿಯೊಳಗೇ.. ಓಹೋ..ನೀರಾಕಿ..... ಹಾಂ... ಅಂತೂ ಅಲ್ಲೇ ಆರಿತು  ಆ ಬೆಂಕಿ.  ಆದರೆ ಸಾಬಿಯ ಮನದಲ್ಲಿ  ಎದ್ದ ಈ ಬೆಂಕಿ ಬೂದಿ ಮುಚ್ಚಿದ ಕೆಂಡವಾಗಿತ್ತು ಎಂದು ಆಮೇಲೆ ತಿಳಿಯಿತು  ಸಾಬಿಯ ಶುಕ್ರವಾರದ ನಮಾಜು ಆ ತಿದಿಬೊಡ್ಡೆಯ ಮುಂದೇ ಆರಂಭವಾಯ್ತು..!
       ಊಹೂಂ...ಮತ್ತೆ ಕುಮಟೆಯ ಸುದ್ದಿಯೇ ಇಲ್ಲ ಸಾಬಿದು..!! ದಿನಕ್ಕೆ ಹತ್ತಾರು ಪಾತ್ರೆಗಳಿಗೆ ಕುಟ್ಟಿ ಕಲಾಯಿಹಾಕಿ ಮಡುಗುವ ಸಾಬಿ ಬರಬರುತ್ತ ನಿಧಾನಿಯಾದ..! ಬಂದ ಒಂದೆರಡು ಪಾತ್ರೆಗೇ ಸಂಜಾಗುತ್ತಿತ್ತು..ಮಡಲಗರಿ ಹರಿದು ಬಿದ್ದ ಜಾಗೆಗೆ ಹೊಸಮಡಲು ಹಾಸಿಕೊಂಡಿದ್ದ.ಮಳೆಗಾಲದ ತಯಾರಿ ಸಾಬಿದೂ ಅಲ್ಲೇ ನಡೆಯುವುದನ್ನು ನೋಡಿ ನಾನು ಎಲಾ ಇವನಾ..! ಎಂದು ಒಂದು ದಿನ ಕೇಳಿಯೇ ಬಿಟ್ಟೆ ,, ಅಲ್ಲಾ..!ಸಾಯ್ಬರೇ.. ನೀವು ಹೋಗುವುದಿಲ್ಲವಾ...? ಅದಕ್ಕೆ ಆಸಾಬಿ...' ಯೆಂತಮಾಣಿ ಯೆಲ್ಲಿಗೆ ಹೋಗುವುದು..?' 'ಅದು ನಮದೂಕಿದು ಇದು ಇಲ್ಲೇ ಇಲ್ಲಾ... ಅದು ಬಿಟ್ಟಿ ನಾನು ಹೋಗೂದೂ... ನಿಮದು ಅಪ್ಪಂದು ಇದು ನನಗೆ ಗೊತ್ತಿಲ್ಲಾ,' ಎಂದೆಲ್ಲಾ ಬಡ ಬಡಿಸಿದಾಗ  ಆಂ...ಓ ಇವ ಅಷ್ಟೇ..ಇನ್ನು.. ಎಂದು ಮನೆಗೆ ಬಂದವ ಅಮ್ಮನಿಗೆ ವಿಷ್ಯದ ಗುಟ್ಟು ತಿಳಿಸಿದೆ.ಅವರಿವರಲ್ಲಿ ಮೊದಲು....ನಾನು ಇನ್ನು ಸ್ವಲ್ಪದಿನ ಇಲ್ಲಿರುತ್ತೇನೆ ಆಮೇಲೆ ಕುಮಟೆ ಇದ್ದೇ ಇದೆಯಲ್ಲಾ ಎನ್ನುತ್ತಿದ್ದವನು ಒಂದು ದಿನ ನನ್ನ ಅಮ್ಮನ ಹತ್ತಿರ ಹೇಳಿದ್ದೇನು ಗೊತ್ತಾ... ಅಮ್ಮೋರೇ... ನನಗೆ ನಿಮ್ಮನೆಯೋರು ಬಾಳ್ ಹಿಂದಿನಿಂದಲೂ ಪರಿಚಯ... ನಾನು ಅವ್ರೂ ವಂದೇ ಬಟ್ಳಲ್ಲಿ ಊಟ ಮಾಡುವಷ್ಟು ವಿಶ್ವಾಸ ..! ಕೇಳಿದ ನನಗೆ..... ಓ ಸಾಬಿಯ ಪೀಠಿಕೆ ಭಾರೀ ಚೆನ್ನಾಗಿದೆ ಅನ್ನಿಸತೊಡಗಿತು...ಹಾಂ.......ಭಟ್ರು ಬಾರೀ ಒಳ್ಳೆಯವರಾಗಿದ್ದರು.....ಕೊಡುಗೈದೊರೆ...ಬಿಡಿ ಅಮ್ಮಾವರೇ... ಈಗ ನನಗೇ ನೋಡಿ.... ಹೇಳಿದ್ರು ಅವರು.....ಜಬ್ಬಾರಾ... ನೀ ಇಲ್ಲೇ ಬಂದುಬಿಡು.... ಹೇಗಂದ್ರು.... ನಿನ್ ಸಂಸಾರ ಅಷ್ಟಕ್ಕಷ್ಟೇಯಾ..... ಅಷ್ಟೂ ತಲಾಖ್ ಕೊಟ್ಟು ಕೈ ತೊಳಕಂಡಿದ್ದೀಯಾ..ಮತ್ತೆಂತದೂ...ಅಲ್ಲಿ ಕುಮಟೇಲಿ.... ಇಲ್ಲಿ ಈ ನಮ್ಮನೆ ಗುಡಿಸಲು ನಿನಗೇಯಾ ತಗೋ ಬಂದ್ ಬಿಡು,, ಹೇಳಿ ಅಮ್ಮೊರೇ... ....ಹ್ವಾಯ್.... ಅಯ್ತಲ್ಲದಾ..... ಮುಗೀತು...ಈ ತುರಕಾ..ಇಲ್ಲೇ ಗಟ್ಟಿ...ಇನ್ನು...ಅಪ್ಪನ ವೀಲನ್ನು ಇವನೇ ಓದಿ ಹೇಳಿದನಲ್ಲಾ......ಯೆಂತರ ಮಾಡುದೂ...ಥೋ...ಸಾಯಲಿ. ..ಎಂದು ನಾನು ಅಮ್ಮನ ದೇವರಾದ ಸಾಬಿಯ ಸುದ್ದಿ ಬಿಟ್ಟು ಬಿಟ್ಟೆ... ಆದರೂ ಮನದಲ್ಲಿ ....ಅಯ್ಯೋ ಈ ಒಂದು ಒಳ್ಳೆಯ ಜಾಗದಲ್ಲಿ ಈ ತುರುಕನ ಸೇರಿಸಿಯಾಯಿತಲ್ಲಾ..ಅವ ಬೇರೆ ತಿದಿಬೊಡ್ಡೆಗೇ ಹಸಿರು ಬಟ್ಟೆ ಹೊಡಿಸಿ ಮೆಕ್ಕಾವನ್ನೂ ಮದೀನಾವನ್ನೂ ಗುಡಿಸಲ ಸಂದಿಯಲ್ಲೇ ತಂದು ಮಡುಗಿಯಾಗಿತ್ತು... ಇನ್ನು ಮುಗೀತು.... ಈ ಅಯೋಧ್ಯೆಯ ಗಲಾಟೆ ಬೇರೆ....ಹೇಗಪ್ಪಾ ದಾಟುವುದೂ...
          ಒಂದು ದಿನ ಇದ್ದಕ್ಕಿದ್ದಂತೆ ತುರುಕ ಸಾಬಿಗೆ ಸುದ್ದಿ ಬಂತಂತೆ.... ಅಮ್ಮಾಜಾನ್.. ಅಲ್ಲಾನಪಾದ ಸೇರಿದಳು...ಕೂಡ್ಳೇ... ಹೊರಟು..ಬಾ...ಎಂದು....ಸಾಬಿ....ಎಲ್ಲವನ್ನೂ ಸರಿಸಿಟ್ಟು,, ದಬ್ಬೆಯ ಕಟ್ಟಿ ಹೋದ... ಕುಮಟೆಗೆ...ಇದೇ ಸುಸಮಯವೇದು...ನಾನು ಕಟ್ಟೆಭಟ್ಟರ ಮನೆಯ ದಾರಿ ಹಿಡೀದೆ.... ಈ ಕಟ್ಟೇ ಭಟ್ರು ಅಂದ್ರೆ ದೇವರ ಪ್ರತಿಷ್ಠೆ ,ದೇವರನ್ನೂ ಕೀಳೋದು ಹುಗಿಯೋದು ಯೆಲ್ಲ ಮಾಡುವ ಆಗಮಿಕರು....! ಅವ್ರಲ್ಲಿಗೆ ಹೋದೋನು ಹೇಳಿದೆ ನನ್ನಪ್ಪ ಹೇಳ್ತಾ ಇದ್ದ ನಮ್ಮದೊಂದು ಜಾಗದಲ್ಲಿ ಚೌಡಿಯೊಂದು ಇದ್ತ್ತು...ಮೊದಲು ಪೂಜೆ ಪುನಸ್ಕಾರಾ ಯೆಲ್ಲಾ ಇತ್ತು ಅದಕ್ಕೆ ಈಗ ಅದು ಇಲ್ಲದೇ ಹಕ್ಕಲು ಚೌಡಿಯಾಗಿದೇ....ಅದಕ್ಕೊಂದು ಗತಿ ಕಾಣಿಸಬೇಕು ಮಗನೇ ...ಎಂದು ಹಾಗಾಗಿ ಬಂದೆ ಭಟ್ರೇ..ಈಗ ಅರ್ಜೆಂಟಾಗಿ ಆ ಚೌಡಿಗೊಂದು ಅಷ್ಟಬಂಧ ಆಗಬೇಕಲ್ಲಾ ನೀವು ನಾಳೇನೇ ಬರಬೇಕು ಎಂದೆ......ಭಟ್ಟರಿಗೆ ಇರೋ ವಿಷಯದ ಆಳ ಅಗಲ ಎಲ್ಲಾ ಹೇಳಿದೆ ಅವಾರೂ ಒಪ್ಪಿದರು..... ಸಾಬಿ ಅಮ್ಮಾಜಾನನನ್ನ ಮೆಕ್ಕಾದ ದಾರಿ ಹಿಡಿಸಿ ಬರೋದ್ರೋಳಗೆ ಅವನ ತಿದಿ ಮಸೀದಿಯಲ್ಲಿ ಅಷ್ಟಬಂಧ ಆಗಬೇಕಿತ್ತು....!!
            ಅಂತೂ ಒಂದು ಶುಕ್ರವಾರ ಕಟ್ಟೇಭಟ್ರು ಪರಿಚಾರಕನೋರ್ವನ ಜೊತೆಗೆ....ದೊಡ್ಡ ಮಡಿಗಂಟನ್ನು ಹೊತ್ತು ಬಂದರು.... ನಾನೂ ಗಣಪತ್ನಾಯಕನ ಅಂಗಡಿಯಿಂದ ಒಂದೆರಡು ಕೇ.ಜಿ ನೇ. ಕುಂಕುಮ...ತಂದೆ...!..ಅಕ್ಕಪಕ್ಕದ ಮನೆಯವರ ಕಣ್ಣು ಮುಚ್ಚಿಸಬೇಕಿತ್ತು...ಅವರೆಲ್ಲಾ ಆ  ಸಾಬಿಯಿಂದ ಉಪಕೃತರೇ ಅಲ್ಲವೇ.....?..  ಕಟ್ಟೇಭಟ್ರು ಮಡಿಯುಟ್ಟು.. ಚಾಕರಿ ಭಟ್ಟ ಕೆಂಪು ನೀರು ಮಾವಿನ ಸೊಪ್ಪು.ಅಕ್ಷತೆಗಳನ್ನು ಭಟ್ಟರ ಮುಂದೆ ಇಟ್ಟ ಊರಿನ ಕೆಲವರಿಗೆ ತುರ್ತು ಕರೆಯನ್ನೂ ಕಳಿಸಿದ್ದೆ!!! ಅವರೆಲ್ಲರ ಸಮ್ಮುಖದಲ್ಲಿ ಪೂಜೆ  ಕಟ್ಟೇಭಟ್ರದ್ದು ಆರಂಭ...! ಕೊನೆಯಲ್ಲಿ ಹಕ್ಕಲು ಚೌಡಿಯ ಹುಡುಕುವ ಮಂತ್ರ ಹೇಳಿ ಕೆಂಪುಮಡಿಯುಟ್ಟು ನಿಂತಿದ್ದ ನನ್ನ ಮೇಲೆ ಅಕ್ಷತೆಯ ಕಾಳು ಬಿದ್ದೊಡನೇ ನಾನು....ಹ್ಮು...ಉಹುಂ. ...ಊಹ್ಂ.... ..ಆಹಾ.. .ಗ್ರಾಮದೇವತೇ  ಮನೆದೇವತೇ.. ..ಹುಮ್. ...ಹ್ಮೂ ..ಹೂಂ.. .ಇಡೀ ನಮ್ಮ  ಜಮೀನಿನ  ಸುತ್ತು ಹೊಡೆದೆ... ಭಟ್ಟರು  ಕತ್ತಿಸಿ ಅಂಗೈಯ್ಯಲ್ಲಿಟ್ಟ ಕರ್ಪೂರವನ್ನು ಕೈ ಸುಡುವುದರೊಳಗೇ...ಬಾಯಲ್ಲಿ ಹಾಕಿ...ಹುಂ.ಎಂದೆ.......ತಿರುಗಿ ತಿರುಗಿ... ಬಂದು ನಿಂತೆ.....ಬಾ..ಬಾ... ಇಲ್ಲೇ ಇದ್ದೇನೆ....ಇಲ್ಲೇ...ಈ ತಿದಿಗುಡ್ಡೆಯ ಅಡಿಯಲ್ಲಿ ......!!! ನನಗೊಂದು ಸ್ಥಾನ ಬೇಕೂ...ಇಲ್ಲೇ ಆಗಬೇಕೂಊ,,, ಹಕ್ಕಲು ಚೌಡಿ ಸ್ಥಾನ ತೋರಿಸಿ ಹಲುಬಿತ್ತು.!!!! ಭಟ್ಟರು ಪಿಕಾಸಿ ಊರಿದರು ಅಲ್ಲಿ.... ಪರಿಚಾರಕ ತನ್ನ ಕೆಲಸ ಮುಂದುವರೆಸಿದ. ಗೊತ್ತಿತ್ತು ಅವನಿಗೆ ಕಟ್ಟೇಭಟ್ರು ಪಿಕಾಸಿ ಊರಿದಲ್ಲಿ ಯೇನು ಮಾಡಬೇಕು....ಎಂದು... ಎಲ್ಲಾ...ಖುಲ್ಲಾ.... ಕುಂಕುಮ ಕೇಜಿಯಷ್ಟು...ಚೆಲ್ಲಿತ್ತು ಮಾವಿನ ಸೊಪ್ಪು.. ಅಕ್ಷತ ಯೆಲ್ಲಾ...ಅಲ್ಲೇ..ಹಕ್ಕಲು ಚೌಡಿಗೆ ಪೂಜೆ ಆರಂಭವಾಯ್ತು...ಕಟ್ಟೇಭಟ್ಟರು ದಕ್ಷಿಣೆ ತೆಗೆದುಕೊಂಡು ಹೊರಟು ಹೋದರು...ಊರವರು ಅರೇ..ಅದು ಮೊದಲು ಆ ಚೌಡಿಯ ಮನೆಯೇ ಆಗಿತ್ತು.. ಇತ್ಯಾದಿ ಆಡಿಕೊಳ್ಳುತ್ತ ಅತ್ತ  ಸಾಗಿದರು. 
    ಅಮ್ಮಾಜಾನಳ ಅಲ್ಲಾಹ್ ನ ಪಾದ ಸೇರಿಸಿ ಬಂದ ತುರುಕರ ಜಬ್ಬಾರ ತನ್ನ ತಿದಿ ಗುಡ್ಡೆ ಮಸೀದಿ ಹಕ್ಕಲಚೌಡಿಯ ಗುಡಿಯಾದ್ದನ್ನು ಕಂಡು ಹೌಹಾರಿದ. ಯೇನೂ ಅನ್ನುವಂತಿರಲಿಲ್ಲ. ಹಕ್ಕಲ ಚೌಡಿ ತುರುಕನ ತಕರಾರಿಗೆ ತಡೆಯಾಗಿದ್ದಳು.ನಮ್ಮ ಮನೆಯ ಗೋಡೆಯಾಚಿನ ಪಾಳು ಗುಡಿಸಲು ನಮ್ಮಲ್ಲೇ ಉಳಿದಿತ್ತು. ಕಟ್ಟೇಭಟ್ಟರು ಹೊಡೆದ ಅಕ್ಷತೆ ಅಷ್ಟು ಕೆಲಸ ಮಾಡಿತ್ತು. ಅವರು ನನಗೇ ಹೊಡೆದಿದ್ದರಲ್ಲಾ..ಅಕ್ಷತೇನಾ...
            ಅಲ್ಲಿ ಅಯೋಧ್ಯದಲ್ಲಿ ಅಂತೂ ಧ್ವಂಸ ಮಾಡಿದ್ದರು.... ರಾಮ ಮಂದಿರವನ್ನೋ...ಬಾಬ್ರೀ ಮಸೀದಿಯನ್ನೋ....ಗೊತ್ತಿರಲಿಲ್ಲ. ..ನನಗೂ....! ಅವರಿಗೂ..!!!!!. ... ಅಂತೂ ನಮ್ಮ ಮನೆಯ ಪಕ್ಕದಲ್ಲಿ ಹಕ್ಕಲ ಚೌಡಿಗೆ  ಸ್ಥಾನ ಕೊಟ್ಟಾಗಿತ್ತು.'ಅದು ನಮದೂಕಿದು ಇದು ಇಲ್ಲಿ  ಇರಲಿಲ್ಲ'

* ಓ.. ಭಾಸ್ಕರಾ...!


ಓ.. ಭಾಸ್ಕರಾ...! ಧರೆಯ ನಿದ್ದೆಯ ಕಳೆದು
ಹೊಸ ಬದುಕ ತೋರಿಸಿದೆ,
ಇಳೆಯ ಇರುಳನು ಸರಿಸಿ
ಬೆಳೆದು ಬಂದೆ.
ಆ ನಿಶೆಯ ನಶೆಯಲ್ಲಿ
ಈ ದಿನದ ಕನಸಿಲ್ಲ,
ನಿನ್ನ ಬರವಿನ ಸುಳುಹು
ಮೊದಲೇ ಇರಲಿಲ್ಲಾ.
ನಿನಗಿಂತ ಮೊದಲೆದ್ದು
ಜಗವ ನೋಡುವೆನೆಂಬ
ಬಿಮ್ಮಿತ್ತು ನನ್ನಲ್ಲಿ ನಿನ್ನೆ ಇರುಳು
ನೀನಿಲ್ಲದೇ ಕಾಣೆ
ಜಗವು ನಿನ್ನದೇ ಎಂಬ
ಮೂಲ ಮರೆತಿದ್ದೆ...!
ಕಂಡೆ ಜಗದಧ್ಬುತವ
ನಿನ್ನ ಕಣ್ಣಲಿ ನಾನು
ಇನ್ನು ನೋಡಲಿಕುಂಟೇ
ಬೇರೆ ಮತ್ತಿನ್ನೇನು
ಓ...ಸದಾಪೂರ್ಣ..!
ನಿನಗಿದೋ ನಮನ....

ಮಂಗಳವಾರ, ಏಪ್ರಿಲ್ 10, 2012

* ನಾನೇನಾಗಲೀ ನಿನಗೆ?


ಓ ...ನವಿಲೇ.... ನೀನೆಷ್ಟು ಬಣ್ಣ, ನೀನೆಷ್ಟು ಸುಂದರ,
ಆ ನಿನ್ನ ನಾಟ್ಯವೇ ಚೆನ್ನ...!
ಓ... ಕೋಗಿಲೆಯೇ... ನೀನೆಷ್ಟು ಕಪ್ಪು, ನೀನೆಷ್ಟು ಸಣ್ಣ.
ಆ ನಿನ್ನ ಕುಹೂ ಕೂಗೇ ಚೆನ್ನ
ಓ... ಹಂಸವೇ.... ನೀನೆಷ್ಟು ಬಿಳಿ, ನೀನೆಷ್ಟು ಶುದ್ಧ.
ಆ ನಿನ್ನ ಹೆಸರೇ ಚೆನ್ನ..!
ಏನು ಮಾಡಲೀ....?
ಓ.. ನವಿಲೇ, ನಿನಗೆ ನಾಟ್ಯ ಮರೆತೋಗಿದೆ,
 ಮೋಡವೇ ಇಲ್ಲವಲ್ಲಾ..
ಓ..ಕೋಗಿಲೆಯೇ,ನಿನಗೆ  ಕೂಗು ಮರೆತೋಗಿದೆ,
 ಮಾಮರವೇ ಒಣಗಿನಿಂತಿದೆಯಲ್ಲಾ.
ಓ ..ಹಂಸವೇ ನಿನ್ನ ಶುದ್ಧತೆ ಕಳೆದೋಗಿದೆ,
ಸುತ್ತ ಕಾರ್ಗತ್ತಲಲ್ಲಾ,
ಓ.. ದೆವ್ವವೇ.. ನವಿಲಂತೆ ನರ್ತಿಸುವ ಕೋಮಲೆಯರಿಲ್ಲಾ,
................. ಕೋಗಿಲೆಯ ಕಂಠದ ಹಾಡುಗರಿಲ್ಲಾ,
..................ಹಂಸ  ಈ ಜಗದಲ್ಲಿ ಇರುವ ಪರಮಹಂಸರು
..................ನಿನಗೇ ಕಾವಿಯುಡಿಸಿಬಿಟ್ಟಿದ್ದಾರೆ,
...................ಓಹ್ ನೀನೆಲ್ಲಿ? ಇಲ್ಲ... ಕಾಣಬೇಕು...
....................ಕಾಣಿಸಬೇಕು.. ನೀನು....ಅದು... ಇದು ...,ಎಲ್ಲಾ,
ಈ  ಧರೆಯ ಧೂಳು ಹೊಡೆಯಬೇಕು,
ಆ ಭಾನುವಿನ ಪ್ರಭೆಯಲ್ಲಿ ಬೆಳಗಬೇಕು ಈ ಧರಣಿ
....ಬಾ....ಬಾ...ಬಂದು, ಕುಣಿ ನೀ ನವಿಲಾಗಿ, ನಾ ಮೋಡವಾಗುವೆ.
....ಬಾ....ಬಾ...ಬಂದು, ಕೂಗು ನೀ ಕೋಗಿಲೆಯಾಗಿ, ನಾ ಮಾಮರವಾಗುವೆ
....ಬಾ....ಬಾ...ಬಂದು, ಹಾರು ನೀ ಹಂಸವಾಗಿ, ನಾನೇನಾಗಲೀ ನಿನಗೆ?
ನೀಲಾಕಾಶವಾಗಲೇ ? ಪದ್ಮ ಸರೋವರವಾಗಲೇ ?
ನನ್ನ ಮನದ ನೀಲಾಕಾಶದಲ್ಲಿ  ಹಾರು,

ಅದು ನಿಷ್ಕಲ್ಮಷ ನಿರಭ್ರ...
ನನ್ನ ಹೃದಯ ಸರಸಿಯಲ್ಲಿ ಹಾರಾಡು.
ಅದು ನಿಷ್ಕಪಟ,ನಿರಾತಂಕ
ಬಾ...ಬಾ...

ಸೋಮವಾರ, ಏಪ್ರಿಲ್ 9, 2012

* ನಾನು ಕಂಡ ನನ್ನೂರ ಸಾಧಕರು

‎...........ತುಂಬಾ ಜನ ಇದ್ದಾರೆ ಆದರೆ ನನ್ನ ಬಾಲ್ಯದಲ್ಲಿ ನೋಡಿದ ನನ್ನೂರಿನ ಕೆಲ ಮಹನೀಯರ ಜೀವನದ ದಿಶೆಯನ್ನು ಮೆಲುಕು ಹಾಕುವ ಕುತೂಹಲ,ಅವರಂತೆ ನಾನಾಗಲಾರೆನಾ ಎಂಬ ಹಪಹಪಿಕೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಚಪಲ....................
..ಓದಿ...ಪ್ರತಿಕ್ರಿಯಿಸಿ.ಅವರಂತೆ ನಾವೂ ಆಗಬಹುದಾ.....ಚಿಂತೆ ಬ್ಯಾಡಾ..ಚಿಂತನೆ ನಡೆಸಿ.......ವಂದನೆಗಳು... 
******************************************************************************************************
                                                         01) ನಾಣಿ (ನಾರಾಯಣ) ಸಭಾಹಿತರು:-
  :- ಸಭಾಹಿತ ಕುಟುಂಬದ ಅತ್ಯಂತ ಗೌರವಾನ್ವಿತ ಮನುಷ್ಯ. ಆ ಕಾಲದಲ್ಲಿ ಒಂದು ರೀತಿಯಲ್ಲಿ ಯಾವುದೇ ಕೆಲಸ ಕಾರ್ಯಗಳಿಗೆ ಎದೆಯೊಡ್ಡಿ ನಿಲ್ಲಬಲ್ಲ ಸಮರ್ಥ.ಆ ಕಾಲದಲ್ಲಿ ಯಾರ ಮನೆಯಲ್ಲಿಯೇ  ವಿವಾಹಾದಿ ಕಾರ್ಯಗಳು ನಡೆದರೂ ಅಲ್ಲಿನ ಮೇಲುಸ್ತುವಾರಿಕೆ ನಾಣಿ ಸಭಾಹಿತರದ್ದು, ಹೇಗೆಂದರೆ ಅಲ್ಲಿ ಯಾವುದೇ ಸಾಮಾನು ಸರಂಜಾಮುಗಳು ಕಡಿಮೆ ಆಗಿ ಕಾರ್ಯಕ್ಕೆಅಡ್ಡಿ ಆದಾಗ ತಾವೇ ತಮ್ಮ ಮನೆಯಿಂ ದಲೇ ತರಿಸಿ ಮಾಡಿ ಬಿಡುವಂಥ ಗುಣ ಅಂತೂ ಕಾರ್ಯ ನಿಲ್ಲಬಾರದು ಯಜಮಾನನ ಮಾನ ಹೋಗಬಾರದು, ಹೋದರೆ ಊರಿನ ಮಾನವೇ ಹೋದಂತೇ ಎಂದುಭಾವಿಸುವಂಥ ಧೀಮಂತ ವ್ಯಕ್ತಿತ್ವ.
        ಅವರ ಪ್ರಾಯದ ಕಾಲಕ್ಕೆ ಸಂಬಂಧಿಸಿದಂತೆ ನಾನು ಅವರ ಬಗ್ಗೆ ಕೇಳಿದ ಮಾತೊಂದಿತ್ತು,ಅದೆಂದರೆ, ಆಗ ಬ್ರಿಟಿಷ್ ಆಳ್ವಿಕೆಯ ರೇಷನ್ನಿನ ಕಾಲ, ಜನ ತುತ್ತು ಅನ್ನಕ್ಕೆ ಪರದಾಡುವ ಕಾಲ. ಅಂತಹ ಸಮಯದಲ್ಲಿ ಊರಿನ ಕೆಲ ಮುಖಂಡರಿಗೆ ಸಂಸ್ಥಾನದ ಸವಾರಿಯನ್ನು ಊರಿಗೆ ಬರಮಾಡಿಕೊಂಡು ಮೆರೆಯುವ ಆತುರ. ಆದರೆ ಈ ಸಭಾಹಿತರಿಗೆ ಜನರು 'ನೊಂದಿದ್ದಾರೆ, ಈ ಸಮಯದಲ್ಲಿ ಸವಾರಿಯನ್ನು ಬರಮಾಡಿಕೊಂಡರೆ ಜನರು ಸವಾರಿಯ ಉಪಚಾರ ಮಾಡುವಷ್ಟು ಶಕ್ತರಿಲ್ಲ, ನಾವು ನಗೆಪಾಟಲಿಗೀಡಾಗಬೇಕಾಗುತ್ತದೆ, ಹಾಗಾಗಿ ಈಗ ಬೇಡ 'ಎಂದರು. ಆದರೆ ಶ್ರಿ ಗುರುಗಳಿಗೂ ಇಲ್ಲಿಗೆ ಬರಬೇಕು ಕಡತೋಕೆಯಲ್ಲಿ (ಕೆಕ್ಕಾರು) ಮಠದ ದೊಡ್ಡ ಕಟ್ಟಡ ಕಟ್ಟಬೇಕು,ಜನರಿಂದ ಸಂಗ್ರಹ ಮಾಡಬೇಕು,ಎಂಬ ಇರಾದೆ ಬಹಳಿತ್ತು. ಅದಕ್ಕೆ ಮುಖಂಡರ ಒತ್ತಾಸೆ ಬೇರೆ. ಹೇಗಾದರೂ ಮಾಡಿ ಕರೆಸಲೇ ಬೇಕು, ಗುರುಗಳಿಂದಲೇ ಸಭಾಹಿತರಿಗೆ ಒಂದು ಮಾತು ಹೇಳಿಸಿದರೆ ಹೇಗೆ ಎಂದು ಯೋಚಿಸಿ ವಿಷಯ ಗುರುಗಳಿಗೆ ತಿಳಿಸಿದರಂತೆ. ಅದರಂತೇ  ಸ್ವತಃ ಶ್ರೀಗಳೇ ಸಭಾಹಿತರಿಗೆ ಒಂದು ನಿರೂಪು ಕಳುಹಿದರಂತೆ ' ಸವಾರಿ ನಿಮ್ಮ ಮನೆಗೇ ಬರುತ್ತದೆ, ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ,ಇತ್ಯಾದಿ' ಇದನ್ನು ತಿಳಿದ ಸಭಾಹಿತರು ಗುರುಗಳಿಗೇ ಕಾಗದ ಕಳುಹಿದರಂತೆ ಏನೆಂದರೆ, 'ತಮ್ಮ ಸವಾರಿ ಸಭಾಹಿತರ ಮನೆಗೆ ಬಂದರೆ ಸಭಾಹಿತರ ಸವಾರಿ ಹಳದೀಪುರಕ್ಕೆ  ಹೋಗುತ್ತದೆ' ಎಂದು (ಅವರದ್ದು ಸಮೀಪದ ಹಳದೀಪುರದಲ್ಲಿಯೂ ಮನೆಯಿತ್ತು). ಅಂದರೆ, ಸತ್ಯವನ್ನು ಕ್ಠೋರವಾಗಿ ತಿಳಿಸುವ ಮನೋದಾರ್ಢ್ಯ ಇತ್ತು
                                                       

                                                            02) ಕಡೇಮನೆ ಗೋಪಾಲ ಭಟ್ರು :-

      :- ಆ ಕಾಲದಲ್ಲಿ ಇಡೀ ಕಡತೋಕೆ ಊರಿನ ಎಲ್ಲರ ಆಸ್ತಿಯನ್ನು ಒಂದೆಡೆ ಇಟ್ಟರೆ, ಆ ಎಲ್ಲಾ ಆಸ್ತಿಯಷ್ಟೇ ಜಾಗ ಕಡೆಮನೆ ಒಂದು ಮನೆ ಆಸ್ತಿಗೆ 'ಸಮ' ಆಗಿತ್ತಂತೆ ಅಂತಹ ಮನೆತನದ ವಾರಸುದಾರ ಈ ಗೋಪಾಲ ಭಟ್ರು. ಅಷ್ಟಿದ್ದರೂ ಇಡೀ ಊರಿನ ಜನರ ಕಷ್ಟಕ್ಕಾಗುವ ,ಕಣ್ಣ್ರೊರೆಸುವ ಹೃದಯ ವೈಶಾಲ್ಯ. ಅದಷ್ಟೇ ಅಲ್ಲ, ಊರಿನಲ್ಲಿ ಯಾವುದೇ ತಂಟೆ ತಕರಾರು,ಪಾಲು-ಪಟ್ಟಿ ವ್ಯವಹಾರಗಳಿದ್ದರೂ ಅಲ್ಲಿ ಕಡೆಮನೆ ಗೋಪಾಲಭಟ್ರು ಒಬ್ಬರು ಪಂಚಾಯತಿದಾರರು ಇರಲೇ ಬೇಕು. ಅವರ ನ್ಯಾಯ ದಾನ ನಿಖರ! ಎಂಬ ವಿಶ್ವಾಸವಿತ್ತು ಜನರಲ್ಲಿ.
        ಯಾರದಾದರೂ ಮನೆಗೆ ಗೋಪಾಲ ಭಟ್ಟರು ಬಂದರೆ ಮನೆಯ ಜನರಿಗೆ ಸಂಭ್ರಮ. ಆ ಬರುವಿಕೆ,ಆ ಮಾತು, ಆ ಸಾಂತ್ವನ. ಹಾಗಿತ್ತು ಅವರ ವ್ಯಕ್ತಿತ್ವ. ಮನೆಯ ಜಗುಲಿಯಲ್ಲಿ ಕುಳಿತೇ ಆ ಮನೆಯ ಸರ್ವಸ್ವವನ್ನೂ ಅಳೆಯಬಲ್ಲ ಸಾಮರ್ಥ್ಯ. ಯಾವ ತೊಂದರೆ ಇದೆ ಅಲ್ಲಿ. ಕೊರತೆಯಿದೆ. ನಾನೇನು ಮಾಡಬಲ್ಲೆ , ಇವರ ಸಮಸ್ಯೆಗೆ ಎಂದು ನೋಟದಲ್ಲೇ ತಿಳಿದು ಸುಮ್ಮನೆ ಎದ್ದು ತಮ್ಮ ಮನೆಗೆ ಹೋಗಿ ಅಲ್ಲಿಂದಲೇ ಆ ಮನೆಯ ಸಮಸ್ಯೆಗೆ ಪರಿಹಾರ ಕೊಡಬಲ್ಲ, 'ಬಲಗೈಯ್ಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು' ಎಂಬ ನಿಲುವಿನ ಮನುಷ್ಯ.
       ಅವರ ಕುರಿತು ಈ ಮಾತುಗಳು ಕೇಳಿ ಬರುತ್ತಿತ್ತು ಅದೆಂದರೆ, ಗೋಪಾಲ ಭಟ್ರು ಬೆಳಿಗ್ಗೆ ತಮ್ಮ ಮನೆಯಲ್ಲಿ ಆಸರಿ( ತಿಂಡಿ) ಕುಡಿದು ಹೊರಬಂದು ಹಕ್ಕೆಹೊಳ್ಳಿಯಲ್ಲಿ ಕುಳಿತಿರುತ್ತಿದ್ದರು. ಆ ಸಮಯದಲ್ಲಿ ಅವರ ಮನೆಯ ಮುಂಭಾಗದ ತೋಟದ ಅಡಿಕೆಗಿಡಗಳು ಅಲ್ಲಾಡಿದ್ದು ನೋಡಿ  ಅಲ್ಲಿ ಯಾರೋ ಬರುತ್ತಿದ್ದಾರೆ ಎಂಬುದನ್ನು ಗಮನಿಸಿ ಬರುತ್ತಿರುವವ ನಮ್ಮ ಕೆಲಸದವನೇ ಎಂದು ತಿಳಿದು ಅವನಿಗೂ ಕೇಳಿಸುವಂತೆ ಹೇಳುತ್ತಿದ್ದರಂತೆ " ಹಾಂ...ಬಂದ.... ಈವತ್ತು... ಬೋ....ಮಗ... ಹಾಂ ಇನ್ನೆಂತಾ ಖರ್ಮ ...ಮತ್ತೆ ಬೇಕೆನೋ.....ತಕಂಡು ಹೋಗದ್ದು ಮುಕ್ಕಿ ಖರ್ಚಾತು ಬಂದ... (ಅಷ್ಟೊತ್ತಿಗೆ ಬಂದವ ಮನೆಯ ಸೂರಿನಡಿಯಲ್ಲಿ ಬಂದು ಕಾಲು ಕೆರೆಯುತ್ತ ನಿತಿರುತ್ತಿದ್ದ) ಗೋಪಾಲ ಭಟ್ಟರು ಅವನನ್ನು ನೋಡಿ ಯಾರೆಂದು ಖಚಿತ ಪಡಿಸಿಕೊಂಡು ಒಳಮನೆಗೆ ಅಂದರೆ ಹೆಂಡತಿಗೆ ಕೇಳಿಸುವಂತೆ ಹೇಳುತ್ತಿದ್ದರು " ಯೇ...ಹೌದನೇ.....( ಈ ಯೇ... ಹೌದನೇ..ಇದು ತಮ್ಮ ಹೆಂಡತಿಯನ್ನು ಕರೆಯುವ ಪ್ರೀತಿಯ ಪದ. ಸುಮಾರು ಜನ ಈ ಪದದಿಂದಲೇ ತಮ್ಮ ಹೆಂಡತಿಯನ್ನು ಕರೆಯುವುದನ್ನು ಕೇಳಿದ್ದೇನೆ) ಆ.... ಹೆಸರು ಹೇಳಿ --- ಬಂದಾ.... ಇನ್ನೆಂತಾ ಹಾಕ್ಕಿಕ್ ಹೋಗವನಾ...ಸಾಯಲೀ.... ಅವಂಗೆ ಆಸರೀಗೆ ಕೊಡು ಕಡೇಗೆ ನೋಡ್ವೋ....ಬಾ ಇಲ್ಲಿ...ಅಲ್ಲೆಂತಾ ಅಂಗಳ ಕೆರೂದು..... ಕೂತ್ಗ. " ಎಂದು ಸ್ವಾಗತ !! ಅವ ಬಂದು ಜಗುಲಿಯ ತುದಿಯಲ್ಲಿ ಕುಳಿತರೆ ಭಟ್ಟರ ಹೆಂಡತಿ ಒಂದು ಬಾಳೆ ಎಲೆಯತುಂಬಾ ಕಲಸಿದ ಅವಲಕ್ಕಿ, ದೊಡ್ಡ ಲೋಟದಲ್ಲಿ ಚಹ ಅವನ ಮುಂದೆ ತಂದಿಡುತ್ತಿದ್ದರು. ಆ ಆಳು ಅದನ್ನು ತಿಂದು ಮುಗಿಸುವ ವರೆಗೆ ಮಾತಿಲ್ಲ. ಭಟ್ಟರು ನೋಡುತ್ತ ಕುಳಿತುಕೊಳ್ಳುತ್ತಿದ್ದರು . ಅಷ್ಟೇ ಅಲ್ಲ... ಹೆಂಡತಿ ತಂದು ಹಾಕಿದ ಅವಲಕ್ಕಿ ಕಡಿಮೆಯೆನಿಸಿದರೆ.. ಮತ್ತೆ ಅವರೇ "ಹೌದನೇ....ಅವಲಕ್ಕಿಗೆ ಬರ!! ಬಂತನೇ..." ಸಾಕಿತ್ತು ಭಟ್ಟರ ಹೆಂಡತಿಗೆ... ತಂದೆ ತಂದೆ... ಎಂದು ಮತ್ತೊಂದಿಷ್ಟು ಅವಲಕ್ಕಿ  ತ್ಹಂದು ಹಾಕುತ್ತಿದ್ದರು. ಅಂತೂ ಆಳು ಹೊಟ್ಟೆ ತುಂಬಾ ತಿನ್ನ ಬೇಕು. ಇದು ಭಟ್ಟರ ನಿಲುವು!!!! 
         ಆಸರಿ ಕುಡಿದಾದಮೇಲೆ ಕವಳಕ್ಕೆ (ತಾಂಬೂಲ) ಬೇಕಾದ ಸಾಮಗ್ರಿಯನ್ನು ಅವನೆಡೆಗೆ ತೂರಿ ' ಹಾಂ...ಕವಳ ಹಾಕು..... ಅದ್ಯೆಂತದೂ ಹೇಳಿ ...ಬೊಗಳು...... ಎಂತಾ... ಅಕ್ಕಿ ಬೇಕಾ....ಬೆಲ್ಲ ಬೇಕಾ.... ಯೆಂತಾ ಬೇಕು......" ಆಳು ವೀಳ್ಯದೆಲೆಗೆ ಸುಣ್ಣ ಸವರುತ್ತಾ ಮುಖ ಕೆಳ ಹಾಕಿ ಮೆಲ್ಲಗೆ ..... ಉಂಬೂಕೆ.....ಎಂದೆನ್ನುತ್ತಿರುವಾಗಲೇ... ಹಾಂ...ಗೊತ್ತಾಯ್ತು ಬಿಡು......ಕಳದವಾರ ಕೊಟ್ಟದ್ದು ಮುಗ್ದೋಯ್ತು... ಅದೆಂತದೋ ಮಾಡಿ ಕೊಡ್ತೆ ಹೇಳಿ ಸತ್ತಿದ್ಯಲಾ.... ಅದು ಮಾಡಿ ನನಗೆ ತಿನಸದೇ ನೋಡು ಮಣ್ಣ..... ಮೊಕ ಹಾಕಲೇ ಇಲ್ಲ ಇಲ್ಲೀವರೆಗೆ.... ಈಗ ತಕಂಡ ಹೋಗದ್ದು ಮುಕ್ಕಿ ಮುಗೀತು.. ಬಂದೆ... ಬೇಡೂಕೆ.... ಆಯ್ತು ......ಹೌದನೇ....ಎಂದು ಹೆಂಡತಿಯನ್ನು ಕೂಗಿ..ಓ ಇವಂಗೊಂದು ಎರಡು ಕೊಳಗ ಅಕ್ಕಿ ತಂದಾಕು..ತಗಂಡ್ ಹೋಗಿ ತಿಂದ್ ಸಾಯಲಿ...ತಿರಗ್ ಬಪ್ಪದಲ್ಲ..ಮತ್ತೆ.....ಹೂಂ...ಹೋಗು ಎದೆಮೇಲ್ ಹಾಯ್ಕಂಡ್ ಹೋಗು..ಇದನ್ನೂವಾ..ತಿಂದ್ ಹಾಳ್ ಮಾಡೂ.....ಮನೀಕಾ..... ಇನ್ನೊಂದೆರಡು ಹುಟ್ಟಲೀ..ಖರ್ಮಾ.ಖರ್ಮಾ... " ಎಂದು ಬೈಯ್ಯುತ್ತಲೇ ಹೇಳಿದರೆ ಅಕ್ಕಿ ಮೊರದಲ್ಲಿ ಬರುತ್ತಿತ್ತು ಒಳಗಿಂದ, ಆಳು ಪಂಚೆಯಲ್ಲಿ ಕಟ್ಟಿಕೊಂಡು 'ವಡ್ಯಾ...ನಾ ...ಬತ್ತೆ....'ಎಂದು ಹೇಳಿ ಮನೆಕಡೆ ಹೆಜ್ಜೆ ಹಾಕುತ್ತಿದ್ದ. ಇಲ್ಲಿ ಭಟ್ಟರು ''ಪಾಪವೇ.... ಬಡತನಾ....ಅವಂಗೆ.....ದೇವರು ಕೊಟ್ಟಿದ್ದ...ನಮಗೆ...... ತಿಂದುಂಡ್...ಇರಲೀ....ನಮ್ಮ ಮಕ್ಕೋ ಇದ್ದಾಂಗೇ ಅಲ್ದಾ..... ತಗಂಡ್ ಹೋಗ್ಲೀ..." ಎಂದು ತೋಟಕ್ಕೆ ಇಳಿಯುತ್ತಿದ್ದರು
..........ಬೇಕಾ...ನಮ್ಮೂರಿಗೆ ಇದಕ್ಕಿಂತಾ ದೊಡ್ಡ  ಕೊಡುಗೈ ದಾನಿಗಳು....!!.ಊರು ಧನ್ಯವಾಗಿದ್ದು ಹೀಗೇ...!!


                                                             03) ಭಡ್ತಿ ಗೋವಿಂದ ಭಟ್ರು :-

04) ಧರ್ಮಶಾಲೆ ಪುಟ್ ಭಟ್ರು :-

05) ಭಡ್ತಿ ರಾಮಕೃಷ್ಣ ಭಟ್ರು :-

06) ಡಾ|| ಗಣಪಜ್ಜ :-

07) ಕಟ್ಟೆ ಪರಮೇಶ್ವರ ಭಟ್ರು :-

08) ಎಸ್. ಶಂಭು ಭಟ್ರು :-

09) ಭಡ್ತಿ ವಿ.ಜಿ.ಭಟ್ರು :-

10) ಕೊಂಕೇರಿ ಪರಮೇಶ್ವರ ಭಟ್ರು :-

11) ಮಹದೇವ ನಾಯ್ಕ :-

12) ಕೆ.ಎಸ್. ಮೋಹನ ಹೆಗಡೆ :-

13)  ಎಸ್.ವಿ.ನಾಯ್ಕ :-

14) ಮೊಮ್ಮನ್ ರಾಂಭಟ್ರು :-

15) ಮಾಡಗೇರಿ ಗಣಪತಿ ಮಾಸ್ತರು :-

16) ಅವಧಾನಿ ಶಂಭು ಶಾನಭಾಗರು :-

17) ಸಂತನ್ ಶಂಭು ಹೆಗಡೆ :-

18) ನವಿಲಗೋಣ್ ಡಾ|| ವಿ.ವಿ. ಭಟ್ರು :-

19) ಮಧುಕರ (ಡಾ:) :-

20) ಕ್ರಿಶ್ಚನರ ಪಾವಲು :-

21) ಪಡಸಾಲಿ ಡೇವರು ಶೆಟ್ಟಿ :-

22) ಪಡಸಾಲಿ ಶಿವರಾಮ ಶೆಟ್ಟಿ :-

23) ಹೆಬ್ಳೇ ಕೇರಿ ಎಮ್.ಆರ್.ಭಟ್ರು :-

24) ಕೆಕ್ಕಾರು ಜೋಯಿಸರು :-

25) ದೇವಸ್ಥಾನ ಮಂಜ ಭಟ್ರು :-

26) ಗುಡ್ಡೂ ಜೋಯಿಸರು :-

27) ಘಾಟಿ ಗಣೇಶ ಹೆಗಡೇರು :-

28) ಮಂಜುನಾಥ ಭಾಗವತರು :-

29) ಜೋಗಿ ಕೃಷ್ಣ ಭಾಗವತರು :-

30) ಅಗ್ನಿ ಹೋತ್ರಿ ಮಹಾಬಲೇಶ್ವರ ಭಟ್ರು :-

31) ಜಿ. ಶಿವರಾಮ ಅಗ್ನಿ ಹೋತ್ರಿ :-

32) ಮಡಿವಾಳ ಹರಿಯಣ್ಣ :-

33) ಮಡಿವಾಳ ಮಂಜು ಸುಬ್ರಾಯ :-

34) ಮಠದ ಗೋಪಾಲ ಭಟ್ರು :-

35) ಮುಕ್ರಿ ಅಳ್ಳಿಕಟ್ಟಿ :-

36) ಬೆಣ್ಣೆ ಭಟ್ರು :-

37) ಪುಟಭಟ್ರ ಮನೆ ಮಂಜಜ್ಜ :-

38) ಮಡಿವಾಳ ಮಂಜು :-

39) ಬೂದಿಗುಡ್ಡೆ ತಿಮ್ಮಪ್ಪ ಶೆಟ್ಟಿ :-

40) ಗುಂಬ್ಲೆ ಪುಟ್ಟಿ ಮಹಾಬಲೇಶ್ವರ ಭಟ್ರು :-

41) ಶಿದ್ದನ ಮನೆ ಯೆಂಗ್ಟ :-

42) ಸೊನಗಾರ ವಿಟೋಬ ಶೆಟ್ಟಿ :-

43) ಸೊನಗಾರ ರಾಮಚಂದ್ರ ಶೆಟ್ಟಿ :-

44) ಮೋಹಿನೀ ಭಟ್ಟ :-

45) ದರ್ಜಿ ಲಕ್ಷ್ಮಣ ನಾಯ್ಕ :-

46) ರಾಮವಧಾನಿ :-

    ಇವರೆಲ್ಲ ಕಡತೋಕೆಯ ಊರಿನ ಮಹನೀಯರೇ , ಕೆಲವರು ನಗಿಸುತ್ತಿರುವವರು, ಇನ್ನು ಕೆಲವರು ಅವರೇ ನಗೆಗೀಡಾದವರು...... ಊರಲ್ಲವೇ ಯೆಲ್ಲ ಥರದವರೂ ಬಾಳಿ ಬದುಕಿದರು. ಇವರಲ್ಲದೇ ಇನ್ನೂ ಅನೇಕರು ನನ್ನ ಮನದ ಮರೆಯಲ್ಲಿದ್ದಾರೆ.!!!!












ಭಾನುವಾರ, ಏಪ್ರಿಲ್ 8, 2012

* ನನ್ನ ಕಥೆ...!! ನನ್ನ ಜಿವನದ ದರ್ಶನ...!

  "ಅಗ್ನಿಹೋತ್ರಿ" ಸುಮ್ಮನೇ ಬಂದುದಲ್ಲ..... ಕುಲದ ಹಿರಿಯರ ತಪದ ಫಲ ಅದು.! ಅಂದು ಕಡತೋಕೆಯೆಂಬ ಊರಿನಲ್ಲಿ ಪೌರೋಹಿತ್ಯಕ್ಕೆ ಬೇಕಾಗಿ ಆ ಕಾಲದ ಊರಿನ ಹೆಗಡೇ ಮನೆಯವರು ಕರೆತಂದು ಬೆಳೆಸಿದ ಕುಟುಂಬ ನಮ್ಮದು. ಕಡತೋಕೆ ಸಣ್ಣ ಊರಲ್ಲ. ಮೊದಲಿಂದಲೂ ಚೌಕಗ್ರಾಮವೆದು ಕರೆಸಿಕೊಂಡಿದೆ. ಅಲ್ಲದೇ ಪಕ್ಕದಲ್ಲಿ ಪಂಚಗ್ರಾಮವೆಂಬ ಹೊಸಾಕುಳಿ ಇತ್ತಲ್ಲಾ.!! ಈ ಚೌಕಗ್ರಾಮಕ್ಕೆ ಸಂಬಂಧಿಸಿದ್ದು ಕೆಕ್ಕಾರು, ಕಡತೋಕೆ, ನವಿಲಗೋಣು ಮತ್ತು ಮಾಡಗೇರಿ ಯೆಂಬ ನಾಲ್ಕು ಊರುಗಳು. ಈ ಒಂದೊಂದು ಊರೂ ಒಂದೊಂದಕ್ಕೆ ಪ್ರಸಿದ್ಧ. ಅಂತೆಯೇ ಆ ಕಾಲದಲ್ಲಿ ಅಂದರೆ ಸುಮಾರು 450 ವರ್ಷಗಳ ಹಿಂದೆಯೇ ಈ ಊರಿನ ಗಣಪ ಹೆಗಡೆ ಮತ್ತು ಸುಬ್ಬಣ್ಣ ಹೆಬ್ಬಾರ ಎಂಬ ಮುಖಂಡರೀರ್ವರು ಇಲ್ಲಿ ಪೌರೋಹಿತ್ಯಕ್ಕೆ ಒಳ್ಳೆ ಬ್ರಾಹ್ಮಣರಿಲ್ಲವಲ್ಲಾ ಎಂದು, ಯಲ್ಲಾಪುರದ 'ಕುಳಿನಾಡು' ಸೀಮೆಯ( ಈಗ ಅದು ಆ ಹೆಸರಿಂದ ಇದೆಯೋ ಇಲ್ಲವೋ ಗೊತ್ತಿಲ್ಲ) ಕಡೆಯಿಂದ ಒಂದು ಬ್ರಾಹ್ಮಣ ದಂಪತಿಯನ್ನು ಈ ಊರಿಗೆ ಕರೆದು ತಂದರು. ಆಗ ಈ  ಊರು ಚಂದಾವರ ಅರಸ 'ಚಂದ್ರಸೇನ'ನ ಆಳ್ವಿಕೆಗೊಳಪಟ್ಟಿತ್ತು.  ಅದೇ ಕಾಲದಲ್ಲಿ ಈಗಿನ ಸ್ವರ್ಣವಲ್ಲೀ ಸಂಸ್ಥಾನದ ಪರಮಗುರುಗಳೂ ಈ ಊರಿಗೆ ಬಂದು ಇಲ್ಲಿ ಮಠ ಮಾಡಿ ಉಳಿದಿದ್ದರು. ಅದಕ್ಕೆ ಅರಸನ ಅಭಯವಿತ್ತು ಎಂಬ ಐತಿಹ್ಯ ದೊರೆಯುತ್ತದೆ. ಆಗ ಬಂದ ದಂಪತಿ ಸುಬ್ರಾಯ ಭಟ್ಟ- ಮಾದೇವಿ .ಇಲ್ಲಿ ಬಂದು ಊರಿನ ಪೌರೋಹಿತ್ಯ್ದ ಜವಾಬ್ದಾರಿಕೆಯನ್ನು ವಹಿಸಿಕೊಂಡಿದ್ದರು.
       ಬರ ಬರುತ್ತ ಸಂಸಾರ ಬೆಳೆದು ಮಕ್ಕಳು ಮೊಮ್ಮಕ್ಕಳು ಆದರು (ಅವರ ಇತಿಹಾಸ ತಿಳಿದುಬರುವುದಿಲ್ಲ) ಅದೇ ಕುಟುಂಬದ ವಾರಸುದಾರ ರಾಮಯ್ಯ ಭಟ್ಟ ಎಂಬವ ತನ್ನ ವಿವಾಹದಿಂದಾರಂಭಿಸಿ ಅಂತ್ಯದ ವರೆಗೆ 'ಅಗ್ನಿಹೋತ್ರ'ವನ್ನಿಟ್ಟು ಅಗ್ನಿಹೋತ್ರಿಯಾದ. ಆ ನಂತರದಲ್ಲಿ ಬಂದ ಕುಲಜರೆಲ್ಲರಿಗೆ ಈ 'ಅಗ್ನಿಹೋತ್ರಿ' ಬಿರುದಿನ ಬಿಲ್ಲೆಯಾಯಿತು. ಈ ರಾಮಯ್ಯ ಭಟ್ಟನಿಗೆ ಈರ್ವರು ಗಂಡು ಮಕ್ಕಳು. (ಅದುವರೆಗಿನ ಈ ಕುಟುಂಬದ ವಂಶವೃಕ್ಷ ಅಷ್ಟಾಗಿ ತಿಳಿಯುತ್ತಿಲ್ಲ) ಸುಬ್ರಾಯ ಭಟ್ಟ- ನಾರಾಯಣ ಭಟ್ಟ. ಇವರು ಕೌಟುಂಬಿಕ ಕಾರಣಗಳಿಗಾಗಿ ಮನೆಯನ್ನು ಎರಡು ಮಾಡಿಕೊಂಡರು, ಆದರೂ ಇಡೀ ಊರಿನ ಪೌರೋಹಿತ್ಯ ಸುಖದಿಂದ ಸಾಗುತ್ತಿತ್ತು. ಗೌರವಾದರಗಳಿದ್ದವು.
      ಅದೇ ರೀತಿಯ ಒಂದು ಕವಲು ಸುಬ್ರಾಯ ಭಟ್ಟನಿಗೆ  ಸಣ್ಣಯ್ಯ ಭಟ್ಟ ರಾಮಕೃಷ್ಣ ಭಟ್ಟ , ಸೀತಾರಾಮ ಭಟ್ಟ ಎಂಬ ಮೂವರು ಗಂದು ಮಕ್ಕಳು ಜನಿಸಿ ಅದರಲ್ಲಿ ಸಣ್ಣಯ್ಯ ಭಟ್ಟ ಅದೇ ಊರಿನ ತುದಿಯಲ್ಲಿ ಮಾಡಗೇರಿಯ ಸಮೀಪವಿರುವ 'ಮಕ್ಕಿಗದ್ದೆ' ಎಂಬಲ್ಲಿ(ಅದು ಈಗಿನ ಭಟ್ರ ದೇವಸ್ಥಾನದ ಶ್ರೀದೇವ ಕೇಶವನಾರಾಯಣನ ಉಂಬಳಿ ಜಾಗ) ತನ್ನ ಕುಟುಂಬ ಸಮೇತನಾಗಿ ಬಂದು ನೆಲೆಸಿದ. ಪಕ್ಕದಲ್ಲೇ 'ಮೇಲಿನ ಮಠ' ಎಂದು ಕರೆಸಿಕೊಳ್ಳುತ್ತಿದ್ದ ಸ್ವರ್ಣವಳ್ಳೀ ಮಠದ ಪೂರ್ವ ಗುರುಗಳ ಮಠವಿತ್ತು. ಹೀಗೆ ಬಂದು ತಳವೂರಿದ ಸಣ್ಣಯ್ಯ ಭಟ್ಟನಿಗೆ  ಈಗಿನ 'ಖಚರಹೆಗಡೆಮನೆ' ಶಿವಹೆಗಡೆಯ ಮಗಳು ಕೈ ಹಿಡಿದಿದ್ದಳು (ಹೆಸರು ತಿಳಿದಿಲ್ಲ) ಆ ದಂಪತಿಗೆ ಈರ್ವರು ಗಂಡು ಮಕ್ಕಳು ಅವರೇ ನನ್ನ ಅಜ್ಜಂದಿರು. ಶಿವರಾಮ ಭಟ್ಟ- ಮಹಾಬಲೇಶ್ವರ ಭಟ್ಟ. ದೊಡ್ಡಜ್ಜ  ಶಿವರಾಮ ಭಟ್ಟನಿಗೂ 'ಖಚರಹೆಗಡೆಮನೆ'  ಸೋದರಿಕೆಯ ಸಂಬಂಧವಾಯಿತು. ಅಜ್ಜ ಮಹಾಬಲನಿಗೆ ಕಡತೋಕೆಯ 'ಮಂಡಿಮನೆ'ಯ ಹೆಬ್ಬಾರ ಲಕ್ಷ್ಮೀ ಮನದನ್ನೆಯಾದಳು.
   ಈ  ಶಿವರಾಮ ಮತ್ತು ಮಹಾಬಲೇಶ್ವರರೀರ್ವರೂ ವೇದ ವಿದ್ಯಾ ಪಾರಂಗತರಾಗಿದ್ದರೂ ಪೌರೋಹಿತ್ಯಗಳನ್ನು ಮಾಡಿಕೊಂಡು ಬರುತ್ತಿದ್ದರೂ, ಶಿವರಾಮನಿಗೆ ಅದೇಕೋ ಕೃಷಿಯಲ್ಲಿ ತುಂಬಾ ಆಸಕ್ತಿ. ವಿವಿಧ ತಳಿಗಳ ಮಾವು, ಚಿಕ್ಕು, ಸೌತೆ.ಹೀಗೇ ಬೆಳೆ ಬೆಳೆಯುವುದು, ಅದನ್ನು ಪ್ರದರ್ಶಿಸುವುದೂ.ಅವನಿಗೆ ಹೆಮ್ಮೆಯ ಸಂಗತಿಯಾಗಿತ್ತು. ಆಕಾಲದಲ್ಲಿ ಕೃಷಿಗಾಗಿ ಕೊಡುತ್ತಿದ್ದ ಅನೇಕ ಪ್ರಶಸ್ತಿಗಳಿಗೆ  ಭಾಜನನಾಗಿದ್ದ. ಅಲ್ಲದೇ ಗಾಂಧೀಜಿಯವರ ಪ್ರಭಾವದಿಂದಲೋ ಅಥವಾ ಮೊದಲಿಂದಲೋ ಈ ಚರಕ-ಮಗ್ಗ, ಈ ಕಸುಬಿಗೂ ಕೈ ಹಾಕಿದ್ದ. ಹೀಗೇ ಅವನ ಬದುಕು ಕಂಡುಕೊಳ್ಳುತ್ತಿದ್ದಾಗಲೇ ಹುಟ್ಟಿದ ಮಗ ನಾರಾಯಣನಿಗೆ 'ಊರುಕೇರಿ'ಯ ದೇವಕಿಯನ್ನು ಮದುವೆ ಮಾಡಿಸಿಕೊಂಡು ಬಂದ ಅವಳು ಬಸುರಿಯಾಗಿ ಸೀಮಂತಮಾಡಿ ಹೆರಿಗೆಗೆ ಹೋದವಳು ಹೆತ್ತ ಗಂಡು ಮಗುವನ್ನೆತ್ತಿಕೊಂಡು ತಿರುಗಿ ಗಂಡನ ಮನೆಗೆ ಬರುವಾಗ ಹಣೆಯ ಕುಂಕುಮ ಅಳಿಸಿ ಹೋಗಿತ್ತು . ನಾರಾಯಣ 'ಮೈಲಿ' ಗೆ ತುತ್ತಾಗಿದ್ದ. (ಹಾಗಾಗಿ ಇಂದಿಗೂ ನಮ್ಮ ಕುಟುಂಬದಲ್ಲಿ ಸೀಮಂತ ಮಾಡುವ ಪದ್ದತಿ ಇಲ್ಲ )  ಬಂದ ದೇವಕಿ ಅಂದಗಾತಿಯಾಗಿದ್ದುದು ಅವಳ ವಿರೂಪಕ್ಕೂ ಕಾರಣವಾಯಿತು. ಕೆಂಪುಸೀರೆ ಬಂತು. ಮಗನನ್ನು ಮುದ್ದಾಡುತ್ತ ಮನದ ನೋವ ಮರೆಯಬೇಕೆನ್ನುವಷ್ಟರಲ್ಲಿಯೇ ಅಪ್ಪನ ಕರೆಗೆ ಓ ಗೊಟ್ಟಿದ್ದ ಮಗ ಕೂಡಾ... ಅಂತೂ ದೇವಕಿ ತನ್ನ ಹದಿನಾರನೇ ವಯಸ್ಸಿನಲ್ಲೇ ಏಕಾಂಗಿಯಾದಳು. ಆದರೂ ಹಿರಿ-ಕಿರಿಯರೆನ್ನದೇ ಆದರದಿಂದ ಮನೆಯನ್ನು ನೋಡಿಕೊಂಡಿದ್ದಳು,ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿ ತುಂಬು ಜೀವನ ನಡೆಸಿದಳು.  ಮಗನ ಗಂಡನ ವಿಯೋಗದ ಯಾವ ಬೇನೆಯೂ ತಟ್ಟದಂತೆ ಅವಳನ್ನು ತನ್ನ 97 ನೇ ವಯಸ್ಸಿನವರೆಗೂ ನೋಡಿಕೊಂಡಿದ್ದು ನಮಗೆ ಹೆಮ್ಮೆಯ ವಿಷಯ.ನಮ್ಮೆಲ್ಲರಿಗೆ ಅವಳು ಪ್ರೀತಿಯ 'ಅಬ್ಬಬ್ಬೆ'
   ಇತ್ತ ಮಹಾಬಲ ತುಂಬಾ  ವೇದ ಶಾಸ್ತ್ರ ಪುರಾಣಂಗಳನ್ನು ಅಧ್ಯಯನ ಮಾಡಿ ಆ ಕಾಲದ ಮೈಸೂರು ಒಡೆಯರ ಬಂಗಾರದ ಪದಕ, ಕಂಠೀಹಾರ, ಶಾಲುಗಳಿಗೆ ಒಡೆಯನಾಗಿದ್ದ  ಕೈಹಿಡಿದ ಹೆಬ್ಬಾರ ಲಕ್ಷ್ಮೀ ಅದೆಷ್ಟು ಹೆತ್ತಳೋ.... ಅಂತೂ ಕೊನೆಗುಳಿದವರು ಹಿರಿಯಳಾಗಿ ಸೌಭದ್ರೆ, ಮಂಜುನಾಥ, ಗೋವಿಂದ, ವಿಷ್ಣು, ಶಂಭು, ರಾಮಚಂದ್ರ, ವಾಸುದೇವ ಈ  ಏಳು ಜನ ಮಾತ್ರ.  (ಇವರ ವಿದ್ಯಾಭಾಸ ಅಷ್ಟೇನೂ ಇಲ್ಲ. ತಕ್ಕಮಟ್ಟಿಗೆ ವೇದಾಧ್ಯಯನ ಇತ್ತು ) ಅಜ್ಜಂದಿರಾದ ಶಿವರಾಮ, ಮಹಾಬಲರು,   ಮತ್ತು ಈ ತುಂಬಿದ ಸಂಸಾರ ಬಹುಕಾಲ ನಂದನವಾಗಿಯೇ ಇತ್ತು. ಆಗ ಬ್ರಿಟಿಷ್ ಆಳ್ವಿಕೆಯ ಬಿಸಿ ವಾತಾವರಣ ,ರೇಷನ್ನಿನ ಕಾಲದಲ್ಲೂ ಯಾವುದೇ ಕೊರತೆಯಿರಲಿಲ್ಲ.  ಊರಿಗೇ ಉಣಬಡಿಸುವಷ್ಟು ತುಂಬಿತ್ತು.... ಕಾಣದಂತೆ ಬಚ್ಚಿಡಲು ನೆಲಮಾಳಿಗೆಯಿತ್ತು...!!! (ಈಗಲೂ ಇದೆ ,ಆದರೆ ಬಾವಲಿಗಳು ತುಂಬಿವೆ ಅಲ್ಲಿ.)  ಮನೆಯ ಮಗಳು ಮದುವೆಯಾಗಿ ಹೆಗ್ಗೆರೆ ಕೃಷ್ಣ  ಭಟ್ಟರ ಮಡದಿಯಾದಳು, ಮಂಜುನಾಥನಿಗೆ ಹೊನಲಗದ್ದೆಯ 'ಕಾರಹಿತ್ತಲಿನ' ಮಂಜಿ ಮದುವೆಯಾಗಿ ಬಂದಳು. ಗೋವಿಂದ ,'ಹೆಗಡಿ'ಯ ಕಾನಂಭಟ್ಟರ ಮನೆಯ ಮಗಳ ಕೈ ಹಿಡಿದ, ಇಷ್ಟಾಗುವಾಗ ಮಂಜುನಾಥನಿಗೆ ಹಿರಿಯ ಮಗ ಮಹಾಬಲ ಹುಟ್ಟಿ ಸತ್ತು, ಎರಡನೇ ಮಗಳು ಯಶೋದೆ, ಮೂರನೇ ಮಗ ಗಣೇಶನ ಜನನದ ಬಾಣಂತನ ನಡೆಯುತ್ತಿತ್ತು.  ಆಗ ಅದೆಲ್ಲಿತ್ತೋ ಮಾರಿ ಮಂಜಿಯನ್ನು ಎಳೆದೊಯ್ದಿತ್ತು..... ಮಗಳು ಯಶೋದೆ ಇನ್ನೂ ನಾಕು ವರ್ಷದ ಬಾಲೆ ಗಣೇಶ ಹಸುಗೂಸು. ಆ ಈರ್ವರನ್ನೂ ನಾನೇ ಸಾಕುತ್ತೇನೆಂದು ಮದುವೆಯನ್ನೇ ಧಿಕ್ಕರಿಸಿ ಬೆಂಗಾವಲಾಗಿನಿಂತ ಹೊನಲಗದ್ದೆಯ ಸೋದರ ಮಾವ ಭಟ್ಟಣ್ಣ. ಅಲ್ಲಿಗೇ ಈರ್ವರೂ ಹೋದರು, ಇಲ್ಲಿ ತಮ್ಮಂದಿರಿಗೆ ಮದುವೆ ಮಾಡಿಸಲು ಓಡಾಡಿಕೊಂಡಿದ್ದ ಮಂಜುನಾಥ ತಾನೇ ಏಕಾಂಗಿಯಾಗಿದ್ದ.... ಮತ್ತೊಂದು ಮದುವೆ ಆಗಬೇಕು, ಅದಕ್ಕಾಗಿ ಓಡಾದಿಕೊಂಡಿದ್ದಾಗ ಆಗಿನ ರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಂದ್ರ ಭಾರತೀ ಶ್ರೀಗಳ ಸಖ್ಯದಿಂದಾಗಿ ಸವಾರಿಯೊಂದಿಗೆ ಅಲ್ಲಲ್ಲಿ ತಿರುಗಾಟ ಮಾಡಿಕೊಂಡಿರುವಾಗ ಶ್ರೀಗಳೇ ಸೂಚಿಸಿದರು ; ಅಲ್ಲಿ ಪುತ್ತೂರಿನ 'ಮುಗುಳಿ'ಯ ಶಂಕರ ನಾರಾಯಣ ಭಟ್ಟರ ಮಗಳು ಲಕ್ಷ್ಮೀ.. ಇದ್ದಾಳೆ ಓದಿದವಳಿದ್ದಾಳೆ( ಆಕಾಲಕ್ಕೇ ಬಲ್ಮಠ ಕಾಲೇಜಿನ ಮೆಟ್ಟಿಲು ತುಳಿದು ಟೀಚರ್ಸ್ ಟ್ರೇನಿಂಗ್ ಮುಗಿಸಿದ್ದಳು) ಭ್ಹಟ್ಟರು ತುಂಬಾ ಬಡವರು. ನೀವೇ ಮದುವೆ ಮಾಡಿಸಿಕೊಂದು ಬರಬಹುದಾದರೆ ನೋಡುವಾ ಎಂದು.  ಶಂಕರ ನಾರಾಯಣ ಭಟ್ಟರಿಗೆ ನಿರೂಪು ಹೋಯಿತು, ಅಲ್ಲಿ ಶಂಕರ ನಾರಾಯಣ ಭಟ್ರಿಗೆ ಐದುಜನ ಹೆಣ್ಣು ಮಕ್ಕಳು ಈರ್ವರು ಗಂಡು ಮಕ್ಕಳು ಹೆಂಡತಿ ಹೈಮಾವತಿ.   ಬಡತನವಿದ್ದರೂ ಗೌರವದ ಸಂಸಾರ ಬೇಡಿಯಾದರೂ ಬದುಕಿಯೇನು ತೊತ್ತಿಗೆ ಬದುಕಲಾರೆ ಎಂಬ ಮನೋಭಾವ ಅವರದ್ದು.  ದೊಡ್ಡಮಗಳಿಗೆ ಮದುವೆಯಾಗಿತ್ತು (ಈಗಿನ ಯಕ್ಷಗಾನಕಲಾವಿದ ಕೆ.ಗೋವಿಂದ ಭಟ್ಟರ ಅತ್ತೆ - ಮಾವ ! :ಹೆಂಡತಿ ಸಾವಿತ್ರಿಯ ಅಪ್ಪ-ಅಮ್ಮ) ಉಳಿದವಳು ಈ ಲಕ್ಷ್ಮೀ, ಗೋವಿಂದ ( ಘನಪಾಟಿ. ವಿದ್ವಾನ್ ಎಮ್.ಗೋವಿಂದ ಭಟ್ಟ: ಹಾಲಿ ಬಳ್ಳಾರಿವಾಸಿ )  ಮಗಳು ಪರಮೇಶ್ವರಿ ( ಬೆಳ್ಳಾರೆ ಪಿ.ಸುಬ್ಬಣ್ಣ ಭಟ್ಟರ ಹೆಂಡತಿ ), ಮಗ ನಾರಾಯಣ( ಸದ್ಯ ಪುಟ್ಟಪರ್ತಿ ವಾಸಿ) ಮಗಳು ಶಾರದೆ ( ವೇಣೂರು ಈಶ್ವರ ಭಟ್ಟರ ಹೆಂಡತಿ) ಅವರು ಬಂದರು.  ಸವಾರಿಯಲ್ಲಿಗೆ ಶ್ರೀಗುರುಗಳೇ ಹೇಳಿದ ಮೇಲೆ ಮತ್ತಿನ್ನೇನು ಎಂದು ಮಾತುಕತೆಯಾಗಿ ಶುಭಮುಹೂರ್ತದಲ್ಲಿ ಲಕ್ಷ್ಮೀ ಮಂಜುನಾಥನಿಗೆ ಎರಡನೇ ಸಂಬಂಧವಾಗಿ ಮನೆಗೆ ಬಂದಳು.
      ಸಂಸಾರ  ಸಾಗುತ್ತಿತ್ತು  ಬೆಳೆದ ಕುಟುಂಬದ ನಿರ್ವಹಣೆಗಾಗಿ ಘಟ್ಟದ ಮೇಲೆ ಒಂದಿಷ್ಟು ಜಮೀನು ಖರೀದಿಯಾಯಿತು ಅಲ್ಲಿಯೂ ಕೆಲ ಮಕ್ಕಳು ಹೋಗಿ ದುಡಿದರು ಇಂತಿಪ್ಪಾಗ ವಿಷ್ಣು ಕರ್ಕಿಯ ಶಶಿಕಲಾಳನ್ನೂ ಶಂಭು ಹೆಬ್ಬಾತಕೇರಿ (ಹೊಸಾಕುಳಿ)ಯ  ಹೈಮಾವತಿ (ಹೊನ್ನಿ)ಯನ್ನೂ, ರಾಮಚಂದ್ರ ಸಿರ್ಸಿ-ಗೋಳಿ ಹತ್ತಿರದ ಹೊಸಳ್ಳಿಯ ಕೂಸನ್ನೂ, ವಾಸುದೇವ ಸಿದ್ದಾಪುರ ಉಂಬಳಮನೆಯ ಲಕ್ಷ್ಮೀಯನ್ನೂ, ಕೈಹಿಡಿದು ಸಂಸಾರದ ಉತ್ತರಕಾಂಡ ಪ್ರಾರಂಭಿಸಿಯಾಗಿತ್ತು, 
     ಮಂಜುನಾಥನ ಹೆಂಡತಿ ಲಕ್ಷ್ಮೀ, ಮನೆಗೆ ಹಿರಿ ಸೊಸೆಯಾಗಿ ತನ್ನ ಯಜಮಾನಿಕೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಳು. ಕಲಿತವಳು ಎಂಬ ಗೌರವ-ಭಯ ಇತ್ತು ಎಲ್ಲರಲ್ಲೂ , ಅವಳಿಗೆ ಅಹಂಕಾರವಿರಲಿಲ್ಲ ,ಊರಿನ ಮಕ್ಕಳೆಲ್ಲರಿಗೆ ಲಕ್ಷ್ಮೀಚಿಕ್ಕಿಯಾಗಿದ್ದಳು , ಮಂಜುನಾಥನ  ಹಿರಿಯ ಹೆಂಡತಿಯ ತವರಿನವರಿಗೂ ಇವಳು ಮನೆ ಮಗಳೇ ಆಗಿದ್ದಳು. ಇವಳೂ ಅಲ್ಲಿ ಹೊನಲಗದ್ದೆಯ ಎಲ್ಲಾ ಕಾರ್ಯಗಳಿಗೆ 'ತವರು' ಮನೆಯ ಕೆಲಸವೆಂದೇ ತಿಳಿದು ಹೋಗುತ್ತಿದ್ದಳು ಆ ಮಕ್ಕಳಿಗೂ ಲಕ್ಷ್ಮೀಚಿಕ್ಕಿ ಆಪ್ಯಾಯವಾಗಿದ್ದಳು. ಮನೆಯಲ್ಲಿ ಓರಗಿತ್ತಿಯರ ಮನಗೆದ್ದಿದ್ದ ಲಕ್ಷ್ಮೀ ಮನೆಗೆಲಸ ಮುಗಿಸಿ ಊರಲ್ಲಿ ಮಹಿಳಾ ಮಂಡಳ ಯುವತಿ ಮಂಡಳಗಳನ್ನು ಕಟ್ಟಿ ಹೊಲಿಗೆ ,ಹಪ್ಪಳ,ಕಸೂತಿ ಮುಂತಾದ ಕಾರ್ಯಗಳಲ್ಲೂ ಮುಂದಾಗಿದ್ದಳು.
ಹೀಗೇ ಸಾಗುತ್ತಿರುವಾಗ ಅಣ್ಣ ಮಂಜುನಾಥ ಕೇವಲ ಅಲ್ಲಿ ಇಲ್ಲಿ ತಿರುಗಾಡಿಕೊಂಡು ಮನೆಗೆಲಸಕ್ಕೆ ಸಿಗದೇ..... ಬಂದಾಗ ಓ..ಆ...ಎಂದು ಕೂಗಾಡುವುದನ್ನು ಸಹಿಸಲಾರದ ತಮ್ಮಂದಿರು ಹಿಸೆಯಾಗಬೇಕು, ನಮ್ಮ ಸಂಸಾರ ನಾವು ನೋಡಿಕೊಳ್ಳುತ್ತೇವೆ, ಎಂಬ ಇರಾದೆ ಇಟ್ಟಾಗ, ಸಣ್ಣ ಪುಟ್ಟ ಮನಸ್ತಾಪಗಳೊಂದಿಗೆ ಮನೆಯ ಆಸ್ತಿ ಭಾಗವಾಯಿತು, ಇದಕ್ಕೆ ಆಕಾಲದ ಕೊಂಕೇರಿ ವಿಷ್ಣು ಭಟ್ಟರು,ಭಡ್ತಿ ಗೋವಿಂದ ಭಟ್ಟರು,ಕಡೇಮನೆ ಗೋಪಾಲ ಭಟ್ಟರು, ಸಭಾಹಿತರು ಇವರೆಲ್ಲ ಸಾಕ್ಷಿಗಳಾದರು. ಮಂಜುನಾಥ - ಲಕ್ಷ್ಮೀ ಮನೆಯ ಹಿರಿಯರಾಗಿದ್ದರೂ ಬೇರೆ ಮನೆ ಮಾಡಿಕೊಂಡು ಮಕ್ಕಿಗದ್ದೆಯ ಮೂಲೆಯಲ್ಲಿ ವಾಸಿಸಬೇಕಾಯಿತು. ಅದು ಹೆಣ ಸುಡುವ ಸುಡುಗಾಡಾಗಿತ್ತು ಮೊದಲು, ( ಈಗಲೂ ಅಲ್ಲಲ್ಲಿ ಅಗೆದರೆ ಮೂಳೆಗಳನ್ನು ಹುಗುದಿಟ್ಟ ಮಣ್ಣಿನ ಪಾತ್ರೆಗಳು ಸಿಗುತ್ತಿವೆ.)
      ಬೇರೆ ಮನೆ ಮಾಡಿ, ತೋಟ ಸಾಲದೆಂದು ಹೆಚ್ಚು ಅಡಿಕೆ ಸಸಿನೆಟ್ಟು, ಅದು ಫಲಬಿಡುವ ಹೊತ್ತಿಗೆ ಲಕ್ಷ್ಮಿಯೂ ಫಲಭರಿತಳಾ ದಳು. ಕೀಲಕ ಸಂವತ್ಸರದ ಶ್ರಾವಣ ಶುದ್ಧ ನವಮಿಯಶುಭಮುಹುರ್ತದಲ್ಲಿ ಬೆಳಿಗ್ಗೆ ಏಳುಗಂಟೆಗೆ ( ಗಡಿಯಾ ರವಿರಲಿಲ್ಲ ಅಂದಾಜು)  ಗಂಡು ಮಗುವಿಗೆ ತಾಯಿಯಾದಳು, ಅಂದರೆ ನಾನು ಹುಟ್ಟಿದೆ. !!!  ಮನೆಯಲ್ಲಿ ಬೋರಿಡುವ ಬಡತನ, ಮಳೆಗಾಲ, ಎಲ್ಲವನ್ನೂ ಮರೆಸಿದ್ದೆ.!! ಹಾಲು ಮೊಸರಿಗೆ ಬರವಿರಲಿಲ್ಲ. ಅಪ್ಪ ಆಟದ ಮೇಳ- ಗುರುಗಳ ಸವಾರಿ ಎಂದು ಹೊರಗೇ ಇರುತ್ತಿದ್ದ ಇಲ್ಲಿ ಗೊಂಡಾರಣ್ಯದ ಮಧ್ಯದಲ್ಲಿ ಹಗಲೆನ್ನದೇ ರಾತ್ರಿಯೆನ್ನದೇ ತಾಯಿ-ಮಗ ಇಬ್ಬರೇ...! ಹಿಂದೆ ಸುಡುಗಾಡು( ವಾಸ್ತವ್ಯ ಸುರು ಆದ ಮೇಲೆ ಊರಿನ ಹೆಣ ಸುಡುವುದು ನಮ್ಮ ಮನೆಯ ಹಿಂಭಾಗಕ್ಕೆ ಸ್ಥಳಾಂತರ ಆಗಿತ್ತು ಮೊದಲು ಮನೆಯಿದ್ದ ಜಾಗದಲ್ಲೇ ಇತ್ತಂತೆ!!!
                   ಬಾಲ್ಯ...!!! ನನಗೂ ಇತ್ತು,,,,! ಆಡಲು ಮಕ್ಕಳಿರಲಿಲ್ಲ.... ಮನೆಯ ನಾಯಿ ಬೆಕ್ಕು, ಹಸು,ಕರು,,, ಎಲ್ಲಾ ನನ್ನ ಆಟಿಕೆಗೆ ವಸ್ತುವಾದವುಗಳೇ...!! ಆದರೆ ತಾಯಿಯ ಶಿಕ್ಷಣದ ಫಲ!!! ಅದರ ಸಂಸ್ಕಾರವಿತ್ತು.. ಜಾಣ್ಮೆಯಿತ್ತು... ವಂಶದ ಪ್ರಭಾವವಿತ್ತು. !!! ಸೂಕ್ಷ್ಮಗ್ರಾಹಿಯಾಗಿದ್ದೆ.... ಬೆಳೆದೆ..... ಬಡತನ ಎಷ್ಟಿದ್ದರೂ.... ಬಾಗುತ್ತಿರಲಿಲ್ಲ ದೇಹಿ ಎನ್ನುತ್ತಿರಲಿಲ್ಲ ಈಗಲೂ ನೆನಪಿದೆ... ಅಪ್ಪನಿಲ್ಲದ  ಒಂದು  ಮಳೆಗಾಲ.... ಮನೆಯಲ್ಲಿ ದೇವರ ಅಕ್ಷತೆಗೆಂದು ತೆಗೆದಿರಿಸಿದ್ದ  ಪಾವು ಅಕ್ಕಿ ಬಿಟ್ಟರೆ ಬೇರೆ ಅಕ್ಕಿಯಿಲ್ಲ.... ಸಾಲ ಕೊಡುವವರಿಲ್ಲ.!!..... ಊರು ಬೆಳೆದಿರಲಿಲ್ಲ....!!. ಇಪ್ಪತ್ತೇಳುದಿನ..... ಮಳೇಗಾಲದಲ್ಲಿ  ಹಿತ್ತಿಲಲ್ಲಿ ಬೆಳೆದುಕೊಂಡಿದ್ದ ಬೆಂಡೇಕಾಯಿ ಬೇಯಿಸಿ ತಿಂದು. ಅದೂ ಒಗ್ಗರಣೆಯಿಲ್ಲ,,...! ಹಾಗೇ ತಿಂದು ಬದುಕಿದ್ದೆವು, ನಾವು ತಾಯಿ ಮಗ...!!!! ಅಂತೂ ಒಂದು ದಿನ ಬಂದ ಕಡೇಮನೆ ಗೋಪಾಲ ಭಟ್ರು ವಿಷಯ ಹೇಗೋ ತಿಳಿದು ಮನೆಗೆ ಹೋಗಿ ಮನೆಯ ಆಳಿನ ಮೂಲಕ ಅಕ್ಕಿ ಕಳುಹಿಸಿದ್ದರು. ಅಂದೇ ಅನ್ನ!!! ಕಂಡಿದ್ದು ಇಪ್ಪತ್ತೇಳನೇ ದಿನ ರಾತ್ರಿ..... ಮರೆಯಲಾದೀತೇ..... ಆ ರಾತ್ರಿಯನ್ನ....! ಎಂದೋ ಬಂದ ಅಪ್ಪನಿಗೆ ವಿಷಯವೇ ಗೊತ್ತಿರಲಿಲ್ಲ ಅವ ಕೇಳಲೂ ಇಲ್ಲ!!!!! ಆದರೂ ಅಪ್ಪ ಅಪ್ಪನೇ ಅಲ್ಲವೇ ಸಂಭ್ರಮಿಸುತ್ತಿದ್ದೆ... ಕಂಡಾಗ..... ಹಾಗಂತ ,,,,ತುಂಬ ಮೃದು ಸ್ವಭಾವ ಯಾವ ಚಟಗಳಿಲ್ಲ!! ಬರೇ ಸುತ್ತುವುದು..... ಇದು ಇಡೀ ಮನೆಯ ಬದುಕನ್ನೇ ವಿಚಿತ್ರವಾಗಿಸಿತ್ತು...! ಅಂತೂ ಬೇಳೆದೆ ಶಾಲೆಗೆ ಹೋಗಬೇಕು.... ಹತ್ತಿರದಲ್ಲೇ ಎರಡುಶಾಲೆಗಳಿದ್ದವು.  ತೊಂದರೆಯಿರಲಿಲ್ಲ.. ಹೋದೆ... ಓದಿನಲ್ಲಿ ಮುಂದಿದ್ದೆ ಆ ಕಾಲದ ವಿಷ್ಣು ಮಾಸ್ತರರು ಯಾಲಕ್ಕಿ. ಭಡ್ತಿ ಪಿ.ಆರ್..ಭಟ್ಟರು. ಪಿ.ವಿ.ಶೇಟರು.. ಸೂರಿ ಮಾಸ್ತರರು, ಎಮ್.ಪಿ.ಭಟ್ಟರು.. ಇವರೆಲ್ಲಾ ಮೆಚ್ಚಿನ ಗುರುಗಳು ನನ್ನನ್ನು  ಮೆಚ್ಚಿದ ಗುರುಗಳು.... ಅದರಲ್ಲೂ ಯಾಲಕ್ಕಿ ವಿಷ್ಣು ಮಾಸ್ತರರ ಮರೆಯಲು ಸಾಧ್ಯವೇ ಇಲ್ಲ...!!
    ಹೀಗೇ ದಿನಗಳೆಯುತ್ತಿರುವಾಗ ಅಮ್ಮ ಮತ್ತೋರ್ವ ತಂಗಿಗೆ ಜನ್ಮ ಕೊಟ್ಟಳು (ಅವಳು ಸತ್ತೂ ಹೋದಳು) ಮತ್ತೆ ನಂತರದ ದಿನಗಳಲ್ಲಿ  ಮತ್ತೊಬ್ಬ ತಂಗಿ ಹುಟ್ಟಿದಳು.. ಮಹಾಲಕ್ಷ್ಮೀ.... ಆಕಾಲಕ್ಕೆ ನಾನು ಹೈಸ್ಕೂಲು ಸೇರಿದ್ದೆ.  ಅದರೊಟ್ಟಿಗೆ ವೇದ ಸಂಸ್ಕೃತಾಧ್ಯಯನಕ್ಕಾಗಿ ಕೆಕ್ಕಾರು ಪಾಠಶಾಲೆಗೂ ಹೋಗಿ ಬರುತ್ತಿದ್ದೆ. ಆ ಸಮಯಕ್ಕೇ ವೈದಿಕ ಮಂತ್ರ -ಪೂರ್ವಾಪರ ಪ್ರಯೋಗ ಆಗಿತ್ತು, ಹಾಗಾಗಿ ಅಪ್ಪನಿಗೆ ಇನ್ನು ಇಂಗ್ಲೀಷ್ ವಿದ್ಯೆ ಸಾಕು ಮಾಡೋಣ ಪೌರೋಹಿತ್ಯ ಮಾಡಲಿ, ಎಂದಿತ್ತು. ಆಧಾರವಾಗಲೀ ಎಂದು. ಆದರೆ ಅಮ್ಮ ( ಅಮ್ಮನನ್ನು "ಅಬ್ಬೆ" ಎನ್ನುತ್ತೇನೆ) ಸುತರಾಂ ಒಪ್ಪಲಿಲ್ಲ .ಅವಳ ಜ್ಞಾನದ ಅರಿವಿತ್ತು ಅವಳಿಗೆ !! ಅಂತೂ ಹೈಸ್ಕೂಲು ಸೇರಿದೆ. ಅಲ್ಲಿ ಜಿ,ಆರ್,ಭಟ್ಟರು, ಎಸ್,ಶಂಭು ಭಟ್ಟರು, ಜಿ,ವಿ,ಭಟ್ಟರು, ಪಿ.ಜಿ.ಭಟ್ಟರು, ಇತ್ಯಾದಿ ಮಹಾಮಹೋಪಾಧ್ಯಾಯರ ಸೂಕ್ತ ಮಾರ್ಗದರ್ಶನ ಇತ್ತು, ಶಿಕ್ಷಕ ತರಬೇತಿಯನ್ನೂ ಮುಗಿಸಿದೆ ,
    ,ಶಾಲೆ ಕಾಲೇಜಿಗೆ ಹೋಗುತ್ತಲೇ ಜೋಗಿ ನಾರಾಯಣ ಭಟ್ರು ಛೇರಮನ್ ನಾರಾಯಣ್ ಭಟ್ರು( ಬಾವಜ್ಜನ ಮನೆ) ಇವರಲ್ಲಿ ಜ್ಯೋತಿಷ್ಯದ ಪ್ರಥಮ ಪಾಠವಾಗಿತ್ತು, ಅಂತೆಯೇ ಬಾಳೆಗೆದ್ದೆ ಜಿ.ಆರ್.ಬಟ್ಟರು ಹಾಗೂ ನಮ್ಮೂರಿಗೆ ವಾರದಲ್ಲೊಮ್ಮೆ ಬಂದು ಸಂಗೀತ ಪಾಠ ಹೇಳೀ ಕೊಡುತ್ತಿದ್ದ ಪಂಡಿತ ಷಡಕ್ಷರಿ ಗವಾಯಿಗಳ ಸಾಂಗತ್ಯದಲ್ಲಿ ಸಂಗೀತದ ಸರಿಗಮ ವನ್ನ್ನೂ ಕಲಿತಾಯ್ತು. ಇನ್ನು ಊರಿನ ಅಕ್ಕ ಪಕ್ಕದ ಮನೆಯವರು ಯಕ್ಷಗಾದ ದಿಗ್ಗಜರುಗಳು, ಜೋಗಿ ಕೃಷ್ಣ ಬಾಗವತರು, ಕಡತೋಕಾ ಮಂಜುನಾಥ ಭಾಗವತರು,ಮತ್ತು ಕಡತೋಕೆಯವರ ಅಣ್ಣಂದಿರಾದ ಶ್ರೀ ಸುಬ್ರಾಯ ಭಾಗವತರು ಶ್ರೀ ನಾರಾಯಣ ಭಾಗವತರು ಹೀಗೆ ಇವರೆಲ್ಲರ ಮೈದಡವುವಿಕೆಯಿಂದ ಆ ರಂಗದಲ್ಲೂ ಗೆಜ್ಜೆ ಕಟ್ಟಿದ್ದಾಯ್ತು. ಆ ಕಾಲದ ಘಟಾನುಘಟಿಗಳೆನಿಸಿದ ಶೇಣಿ ಮಾವ, ಮಲ್ಪೆ ರಾಮದಾಸ ಸಾಮಗರು ಕೆರೆಕೈ ಕೃಷ್ಣ ಭಟ್ಟರು, ಕೆರೆಮನೆ ಹೆಗಡೆ ದ್ವಯರು ಮುಂತಾದ ಮಹಾಪಾತ್ರರ ಎದುರು ಸಣ್ಣ ಸಣ್ಣ ಪಾತ್ರಗಳಾದ ವಿದುರ,ಚಾರಕ, ಬ್ರಾಹ್ಮಣ,ಲಕ್ಷ್ಮಣ, ಪಾತ್ರಧಾರಿಯಾಗಿ ತಾಳಮದ್ದಳೆಗಳಲ್ಲಿ ಕುಳಿತಿದ್ದಾಯಿತು. ಹಿರಿಯರೆದುರ ಸಹಜ ಭಯ ಮಾತ ಮರೆಸಿದಾಗ ಬೆನ್ನು ಸವರಿ ಬಾಯ್ದೆರಿಸಿದರು ಆ ಹಿರಿಯ ಜೀವಗಳು...ಮತ್ತೆ ಆ ಚಿಕ್ಕ ಪಾತ್ರಗಳಿಗೇ ಜೀವತುಂಬಿ ಸೈ ಎನಿಸಿಕೊಂಡೆ......ಹೀಗಿರುವಾಗಲೇ ತರ್ಕಶಾಸ್ತ್ರವನ್ನು ಕಲಿಯಬೇಕು ಎಂಬ ಹಪಹಪಿಕೆ ಉಂಟಾಗಿ ಆಗ ಶ್ರೀ ಎಸ್.ಶಂಭು ಭಟ್ಟರ ಮನೆಯಲ್ಲಿ ವಾಸಿಸುತ್ತಿದ್ದ  ಕರ್ಕಿಯ ಬೊಂಬೆ ವೆಂಕಟ್ರಮಣ ಶಾಸ್ತ್ರಿಗಳಿಂದ  ತರ್ಕ ಪಾಠವೂ ಆಯಿತು. ಅದರ ಸಾರವನ್ನು ಉಣಬಡಿಸಿದರವರು. ಈ ಪಾಠವೇ ಅಂದು ಅದುವರೆಗೆ ನನ್ನಲ್ಲಡಗಿದ್ದ ಹಿಂದಿನ ದೈವೀ ಕಲ್ಪನೆಗಳನ್ನೆಲ್ಲ ಬದಿಗೊತ್ತಿ ಜೀವನದ ದಿಕ್ಕು ಬದಲಿಸಲು ಕಾರಣ ಆಯಿತು ಎನ್ನಬಹುದೇನೋ. ಆದರೂ ಇವು ಎಲ್ಲವೂ ನನ್ನ ಮಾನಸಿಕ ಬದುಕನ್ನು ಬೆಳೆಸಿದವೇ ಹೊರತು ಭೌತಿಕವಾಗಿ, ಆರ್ಥಿಕವಾಗಿ ಬೆಳೆಯಲನುವಾಗಲೇ ಇಲ್ಲ.!!!! ಹಾಗಾಗಿ ಎಲ್ಲವನ್ನೂ ಬಿಟ್ಟೆ.......!!!! ಹೊಸದ ಹುಡುಕಲು ಹೊರಟೆ...
       ಇಷ್ಟಾಗುವಾಗ ಮನೆಯಲ್ಲಿ ಅಪ್ಪ ರಕ್ತದೊತ್ತಡದಿಂದಾಗಿ ಪಾರ್ಶ್ವವಾಯು ಪೀಡಿತನಾಗಿ ಜೀವಚ್ಛವವಾಗಿದ್ದ . ಮನೆಯಲ್ಲಿನ ಒಬ್ಬ ರೋಗಿಯಾಗಿ ಮಲಗಿದ್ದ. ಇಡೀ ಮನೆಯ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಿದ್ದ, ತಕ್ಕ ಮಟ್ಟಿಗೆ ಉಂಡುಟ್ಟು ಸುಖವಾಗಿದ್ದ ಸಂಸಾರ ವೈದ್ಯಕೀಯ ವೆಚ್ಚಗಳಿಂದಾಗಿ ಸಾಲದ ಬಲೆಯಲ್ಲಿ ಬೀಳ ಬೇಕಾಯಿತು.... ಅಂತೂ  ಅಪ್ಪ ಸತ್ತ.. !!!ಅದುವರೆಗೆ ಮನೆಯಿಂದ ದೂರವಾಗೇ ಇದ್ದ ಅಣ್ಣ ಗಣೇಶ ಅಕ್ಕ ಯಶೋದೆ ಬಂದು ಕ್ರಿಯಾದಿಗಳನ್ನು ಮಾಡಿದರು..... ದೂರವೇ ಇದ್ದರೂ ಅಪ್ಪ ಅಪ್ಪನೇ ಅಲ್ಲವೇ?,  ಇವೆಲ್ಲ ಘಟನೆಗಳ ಒಳಗೆ ನಾನು ವೇದ,  ಸಂಸ್ಕೃತ,  ವೈದಿಕ ವಿದ್ಯೆ,  ಜ್ಯೋತಿಷ್ಯ  ಎಲ್ಲ ಕಲಿತಿದ್ದರೂ ಯಾವುದೂ ಪ್ರಯೋಜನಕ್ಕೆ ಬಾರದಿದ್ದಾಗ ಅದನ್ನು ದ್ವೇಷಿಸ ತೊಡಗಿದೆ.  ಅದು ಸತ್ಯವೂ ಆಗಿತ್ತು!!!!
        ಅಪ್ಪನ ನಂತರ ?....... ಕೆಲಸವಿಲ್ಲಾ... ಸಾಲದ ಹೊರೆ.... ಊರಲ್ಲಿ ಯೇನಾದರೂ ಉದ್ಯೋಗ ಮಾಡೋಣವೆಂದರೆ.... ಸಹಕಾರವಿಲ್ಲಾ.... ಅಂತೂ ಕಾಲೇಜು ಮುಗಿಸಿದ ಶಾಸ್ತ್ರ ಮಾಡಿದೆ. ಅಂದು ಆಗಿನ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡದಲ್ಲಿ ಯಾವುದೋ ಸಕ್ರೆಟರಿ ಹುದ್ದೆಗೆ ಅರ್ಜಿ ಕರೆದಿದ್ದಕ್ಕೆ ಗುಜರಾಯಿಸಿದ್ದೆ. ಕರೆಯೂ ಬಂತು...... ಹೋಗಬೇಕಲ್ಲಾ  ಧಾರವಾಡಕ್ಕೆ.... ಇಪ್ಪತ್ತು ಹಲಸಿನಕಾಯಿ ಮಾರಿ ಸಂಪಾದಿಸಿದ ಹಣ ರೂಪಾಯಿ ಒಂದುನೂರಾ ಎಂಭತ್ತನ್ನು ಕೈಯಲ್ಲಿ ಹಿಡಿದುಕೊಂಡು ಧಾರವಾಡಕ್ಕೆ ಬಂದು ಇಂಟರವ್ಯೂನಲ್ಲಿ ಉತ್ತಮವಾಗಿ ಅಂಕಗಳಿಸಿ ಹೊರಕ್ಕೆ ಬರುವಾಗ ಇಟ್ಟಿದ್ದ ಬೇಡಿಕೆ ಐದಂಕಿಯ ಮೊತ್ತದ್ದಾಗಿತ್ತು....!!! ಥೂ.... ಇವರಾ.... ವಿದ್ಯೆಗೆ ಬೆಲೆಯೇ ಇಲ್ಲವಾ...? ಎನಿಸಿ ಬಿಟ್ಟಿತ್ತು.... ಮನೆಗೆ ಬರುವಾಗ ಇನ್ನೂ ಮೂವತ್ತಾರು ರೂಪಾಯಿ ಉಳಿಯುತ್ತದೆನ್ನುವುದನ್ನು ಲೆಕ್ಖ ಹಾಕಿ, ತಂಗಿಗೆ ಒಂದು ಅಂಗಿಯನ್ನು ತಂದೆ. ಚೆಂದದ್ದು... ಹಾಕಿ ನಲಿದಳು ಅವಳು...... ಇಲ್ಲಿ ಏನೂ  ಇಲ್ಲ... ಬೇರೆ ಯೆಲ್ಲಿಗಾದರೂ ಹೋಗಬೇಕು ಎಂಬ ಮನಸು... ಊರು ತೊರೆದೆ. ಅಷ್ಟು ಮಾಡುವಾಗ ತಂಗಿಯಂದಿರಿಗೆ ಓದಿಸುವ ಜವಾಬ್ದಾರಿಯಿಂದ ಹಿಂದೆ ಸರಿಯಲಿಲ್ಲ ,ಅವರೂ ಓದಿದರು.... ಒಂದು ಹಂತಕ್ಕೆ ಬಂದ ಮೇಲೆ ಅಬ್ಬೆ ಇನ್ನೂ ಗಟ್ಟಿ ಇದ್ದಾಳೆ ಮನೆಗೆಲಸ ತೊಂದರೆಯಾಗಲಿಕ್ಕಿಲ್ಲ ವೆಂದು ಸಮಾಧಾನ ಗೊಂಡು ನಾವು ಅಣ್ಣ-ತಂಗಿ ಮನೆ ಬಿಟ್ಟು ಬೆಂಗಳೂರು ಸೇರಿ ಅಲ್ಲಿ ಸಂಸ್ಕೃತದ ಅರಿವಿನಿಂದಾಗಿ 'ಸಂಸ್ಕೃತ ಭಾರತೀ'ಯಲ್ಲಿ ಸೇವೆ ಮಾಡುತ್ತ  ಇದ್ದೆವು. ಅಲ್ಲಿ ನಾಲ್ಕೈದು ವರ್ಷಗಳ ಕಾಲ ದೇಶದ ನಾನಾ ಭಾಗಗಳಿಗೆ ತಿರುಗಿದೆವು. ಕಾಶ್ಮೀರ ದಿಂದ ಕನ್ಯಾಕುಮಾರಿ, ಗುಜರಾತಿನಿಂದ ಕಲಕತ್ತಾದ ವರೆಗೆ ಯೆಲ್ಲ ಕಡೆ ಸಂಸ್ಕೃತ ಪ್ರಚಾರಕ್ಕಾಗಿ ಓಡಾಡಿದೆ...ಜ್ಞಾನದ ಹರವು ಹೆಚ್ಚಿಸಿಕೊಂಡೆ,,,ವಿದ್ವಜ್ಜನರ ಸಖ್ಯ ಬೆಳೆಸಿದೆ .ಈ ಸಂಸ್ಕೃತ ಭಾರತಿಯ ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಾಗುತ್ತಿರುವಾಗಲೇ ತಿರುಗದ ತಾಣವಿಲ್ಲಾ ....ಎಂದೆನಲ್ಲಾ......ಅಲ್ಲಿ ಹೋದಲ್ಲಿ ಬಂದಲ್ಲಿ ನನ್ನ ಬೇಟೆ..... ವಿದ್ವಜ್ಜನರದಾಗಿತ್ತು...!! ಉತ್ತರದ ಉದ್ದಾಮ ಪಂಡಿತ ಶ್ರೀ ದೇವೇಂದ್ರ ಚತುರ್ವೇದಿಯವರಿಂದ ವೇದದ ಸಾರವನ್ನು ಸಾಧ್ಯವಾದಷ್ಟು ಸೊರೆದೆ... ಕಲಕತ್ತದಲ್ಲಿರುವಾಗ ಊಟದ ಮನೆಯ ಅಪ್ರತಿಮ ವೈಯ್ಯಾಕರಣಿ  'ಮಹಾಪಾತ್ರರು'  ಸಮಯವಿದ್ದಾಗಲೆಲ್ಲಾ ವ್ಯಾಕರಣ ಶಾಸ್ತ್ರದ ಒಳಹೊರಗನ್ನೂ ಉಣಬಡಿಸಿದರು ನನಗೆ. ಆಂಧ್ರದಲ್ಲಿರುವಾಗ 'ವೆಂಗಪಲ್ಲಿ ರಂಗಸ್ವಾಮಿ ಅವಧಾನಿ, ಮೇಲುಕೋಟೆಯ ಶ್ರೀ ಲಕ್ಷ್ಮೀತಾತಾಚಾರ್ಯರು, ವೇದಗಣಿತದ ಪ್ರವಕ್ತೃ ಪೂಜ್ಯ ಭಾರತೀ ತೀರ್ಥರ ಪರಂಪರಾನುಗತ  ಶಿಷ್ಯರಾದ ಶ್ರೀ ವಿದ್ಯಾತೀರ್ಥರು. ಶತಾವಧಾನಿ ಆರ್.ಗಣೇಶ್. ಮೈಸೂರಿನ ಶ್ರೀ ಪರಾಂಜಪೆ  ಮುತಾದವರೆಲ್ಲರ ವಿದ್ವತ್ತೆಯ ಹನಿಗಳನ್ನು ಸವಿದೆ. ಇಷ್ಟೆಲ್ಲ ಆಗಿದ್ದರೂ ಅಂದು ಕುಮಟಾ ಕಾಲೇಜಿಗೆ ಹೋಗುತ್ತಿರುವಾಗ  ಅಲ್ಲಿ ಸಖೀಗೀತವನ್ನು ಹೇಳಿದ ಡಾ|| ಜಿ.ಎಲ್.ಹೆಗಡೆ, ಬುದ್ಧ ಚರಿತದಲ್ಲಿ ನನ್ನೊಂದಿಗೆ ವಾದಕ್ಕಿಳಿದ ಡಾ|| ಮಹೇಶ್ ಅಡಕೊಳಿ, ಮೇಘದೂತವನ್ನು ಕನ್ನಡದಲ್ಲೂ ಬರೆದ ಡಾ|| ವಿ.ಆರ್.ಜೋಷಿ. ಕಬ್ಬಿಣದ ಕಡಲೆಯಂತಿದ್ದ ಸಂಸ್ಕೃತ ವ್ಯಾಕರಣವನ್ನು ಸೋದಾಹರಣವಾಗಿ ತಿಳಿಸಿಕೊಟ್ಟ ಡಾ|| ವಿ.ಕೆ.ಹಂಪಿಹುಳಿ, ಇವರಲ್ಲದೇ ಅದಾಗಲೇ ಕನ್ನಡದ 'ಶಬ್ದಮಣಿ ದರ್ಪಣ'ಕ್ಕೆ ದರ್ಪಣವಾಗಬಲ್ಲ ಸಾಮರ್ಥ್ಯ ಹೊಂದಿದ್ದ ಗೆಳೆಯ ಜಿ. ಎಸ್. ಹೆಗಡೆ, ಇವರೆಲ್ಲರಿಂದ ಕಲಿತಿದ್ದು ಅಳೆಯಲಾಗದ ಆಳದ್ದು..ಆದರೂ 'ಅಕ್ಷರಂ' ಪರಿಸರದಲ್ಲಿ ಇರುವಾಗ ಅಲ್ಲಿನ ಶ್ರೀ ಶೇಷಾಚಲ ಶರ್ಮರು,ಭುವನಗಿರಿ ಅನಂತ ಶರ್ಮರು, ಸೋ.ತಿ.ನಾಗರಾಜರು, ಜಿ,ಮಹಾಬಲೇಶ್ವರ ಭಟ್ಟರು ಇವರೊಂದಿಗೂ ನನ್ನ ಮಾತುಗಳು ಕೇವಲ ಉಭಯ ಕುಶಲೋಪರಿಯಷ್ಟೇ ಆಗಿರಲಿಲ್ಲ, ಶಾಸ್ತ್ರ-ಸಂಪ್ರದಾಯಗಳ ಕುರಿತೂ ಅರಿತುಕೊಂಡೆ . ಒಂದು ರೀತಿಯ ಶಾಸ್ತ್ರಾಧ್ಯಯನವೇ ಆಯಿತೆನ್ನಿ.....ಎಲ್ಲವೂ ಇತ್ತು  ..... ಅದಾವುದೂ.. ಉಣ್ಣುವ ಬೋನಕ್ಕೆ 'ತುಪ್ಪ'ವಾಗಲೇ ಇಲ್ಲ .... .......ಆಗ ಅಂಕುರಿಸಿತ್ತು ಮತ್ತೆ..... ಎಲ್ಲವನ್ನೂ ಬಿಟ್ಟುಬಿಡಬೇಕು..... ಯಾವುದೂ ಇಲ್ಲ...! ಇರುವುದೆಲ್ಲ  ಬೇರೆಯವರಿಗೆ  ಬೋಧಿಸುವುದಕ್ಕೆ  ಮಾತ್ರ....! ಬದುಕಿಗಲ್ಲಾ....!!! ಹಾಗಾಗಿ ಬಿಟ್ಟೆ...... ಎಲ್ಲವನ್ನೂ  ಬಿಟ್ಟೆ......ನಾನು ನಾನಾದೆ..... ಮುಂದೆ ನನಗೇ ಎಂದು ಒಂದು ಬದುಕಿದೆ, ....ತಂಗಿಯರು ತಾಯಿ ಎಲ್ಲ ಮನದ ಮೂಲೆಯಲ್ಲಿದ್ದವರು ಎದ್ದು ಬಂದರು...
     ಹೀಗಿರುವಾಗ ... ನನ್ನ ಹೆಸರಿಗೆ ಒಂದು ಎಂದೋ ಗುಜರಾಯಿಸಿದ್ದ ಅರ್ಜಿಯಿಂದಾಗಿ  ಕೆಲಸದ ಆದೇಶ ಬಂತು... ಸಂಘದ ಹಿರಿಯರ ಹೇಳಿಕೆಯಂತೆ ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಈ ರಾಮನಗರಕ್ಕೆ ಬಂದೆ. ಇಲ್ಲಿ ಕೆಲಸ ಪ್ರಾರಂಭಿಸುತ್ತಿದ್ದಾಗಲೇ ತಂಗಿ ಮಹಾಲಕ್ಷ್ಮಿಯನ್ನು ಕೈಹಿಡಿಯಲು ಸಾಗರದ ಗೊರಮನೆ ಸುಬ್ರಾಯರ ಮಗ ಮೋಹನ ಬಂದ ಮದುವೆಯೂ ನಡೆಯಿತು... ಇನ್ನು ಅಬ್ಬೆ ಇನ್ನೋರ್ವ ತಂಗಿ ಊರಲ್ಲಿದ್ದಾರೆ.  ತಂಗಿ ಓದುತ್ತಿದ್ದಾಳೆ... ನಾನು ಊರಿಗೆ ಹೋದೆ ಒಂದು ಬೇಸಿಗೆ ರಜೆಯಲ್ಲಿ.... ಅಲ್ಲಿ ಮದುವೆ ಮನೆಗಳಲ್ಲಿ ಮಾತು ಬಂದು ಹೀಗೊಬ್ಬಳು ಬೆಂಗಳೂರಿನಲ್ಲೇ ಒಬ್ಬಳು ಶಿಕ್ಷಕಿಯಾಗಿ ಇರುವ ಹುಡುಗಿಯಿದ್ದಾಳೆ ಎಂದು ಹೇಳಿದ್ದನ್ನು  ಕೇಳಿ ನಾನೇ ನೇರವಾಗಿ ಆ ಹುಡುಗಿಯ ಮನೆಗೆ ಹೋಗಿ ಮಾತಾಡಿ ಅವಳೂ ಒಪ್ಪಿ.. ಆಮೇಲೆ ಅಮ್ಮನಿಗೆ ಹೇಳಿದ್ದು... ಅಮ್ಮ ಅಸ್ತು ಎಂದಳು. ಮದುವೆ ನಡೆದೇ ಹೋಯಿತು ಸಾಲಕೋಡು ಗೋವಿಂದ ಹೆಗಡೆಯ ಮನೆಯ ಪರಮೇಶ್ವರ ಮತ್ತು ಕಲಾವತಿ ದಂಪತಿಯ ನಾಲ್ಕನೇ ಮಗಳು 'ಉಷೆ' ನನ್ನ ಹೆಂಡತಿಯಾದಳು ಆಮೇಲೆ ರಾಮನಗರದಲ್ಲಿ ಸಂಸಾರ ಅಮ್ಮ ತಂಗಿ ಮನೆಯಲ್ಲಿ .
      ಒಂದು ದಿನ  ನಾನು ಮೊದಲು ಆಟವಾಡಲು ಹೋಗುತ್ತಿದ್ದ ಮನೆಯ  ಮಾವನಿಂದ ಬಂದ ದೂರವಾಣಿ  'ನಿನ್ನ ತಂಗಿಯನ್ನು ನನ್ನ ಮಗ 'ಮಹೇಶನಿಗೆ ಮದುವೆ ಮಾಡಿ ಕೊಡುತ್ತೀಯಾ?  ಎಂದು ಕೇಳಿದ್ದಕ್ಕೆ ದೂರವಾಣಿಯಲ್ಲೇ ಯಾವಾಗ ಮದುವೆ ಇಟ್ಟುಕೊಳ್ಳೋಣ, ಎಂಬಲ್ಲಿಯವರೆಗೂ  ಮಾತಾಡಿದ್ದಾಯಿತು .. ಮನೆಗೆ ತಿಳಿಸಿ ತಂಗಿಯ ಒಪ್ಪಿಗೆ ಆಯಿತು ಅಮ್ಮ ಒಪ್ಪಿದಳು ಯೇನು ಕೇಳುವುದಿರಲಿಲ್ಲ .....ಅವ ನಮ್ಮ ಗಾಳಿ ಮನೆ, ಈಶ್ವರ ಭಟ್ಟರ ನಾಲ್ಕನೇ ಮಗ ಮಹೇಶನಾಗಿದ್ದ.  ಆ ಬೇಸಿಗೆಯಲ್ಲಿ ಮದುವೆ ಆಯಿತು.. ತಂಗಿಯರು ದಿಡವ ಸೇರಿದರು ನಾನು ಮೊದಲ ಮಗಳು ಪ್ರಥಮಾಳಿಗೆ ತಂದೆಯಾದೆ. ನನ್ನ ಅಮ್ಮ ಮೊಮ್ಮಗಳ ಕಂಡಳು ವಂಶ ಬೆಳೆಯಿತೆಂಬ ಸಂತಸವಿತ್ತು ಅವರ ಮುಖದಲ್ಲಿ,
     ಊರಲ್ಲಿ ಇದ್ದ ಅಮ್ಮ ಅದೇಕೋ ಒಮ್ಮೆ  ದೂರವಾಣಿ ಮಾಡಿ ತಮಾ... ನಾನು ಅಲ್ಲಿಗೇ ಬರುತ್ತೇನೆ... ಇಲ್ಲಿ ನನ್ನಿಂದ ಕೆಲಸ ಮಾಡಿ ಕೊಳ್ಳಲು ಆಗುತ್ತಿಲ್ಲಾ ....ಅಂದಳು  ಅವಳಿಗೂ  ವರ್ಷ ಎಪ್ಪತ್ತೊಂದಾಗಿತ್ತು. ಅಸ್ತಮಾ ಖಾಯಿಲೆ ಈ ಮೊದಲೇ ಇತ್ತು ,ಜರ್ಝರಿತರಾಗಿದ್ದರು,  ನಾನೂ 'ಬಾ' ಎಂದೆ ಬಂದಳು, ಮಗ ,ಸೊಸೆ, ಮೊಮ್ಮಗಳೊಟ್ಟಿಗೆ ಒಂದು ವರ್ಷಗಳ ಕಾಲ ತುಂಬಾ ಸಂತಸದಿಂದಲೇ ಇದ್ದ ರು ಅತ್ತೆ ಸೊಸೆ ಸೇರಿ ಮಾಡಿದ ಚೌತಿ ಹಬ್ಬ, ಮರೆಯಲಾರದ  ಸುದಿನ....  ನನ್ನವಳೂ ಪುಟ್ಟಕ್ಕ.(ನನ್ನ ಹೆಂಡತಿ ಉಷೆಯನ್ನು ನಾನು ಕೂಗುವುದು ಪುಟ್ಟಕ್ಕ ಎಂದೇ) ಅವಳು ಹಾಗೇ.... ಎಲ್ಲರೊಂದಿಗೆ ಬೆಳೆದವಳು. ಅತ್ತೆ ಅತ್ತೆಯೆನಿಸಲಿಲ್ಲ. ಅಮ್ಮ ತಿಳಿದವಳು ಅತ್ತೆಯ ದೌಲತ್ತು ಮೆರೆಯಲಿಲ್ಲ... ಒಂದೊಂದು ಬಾರಿ ನಾನೇ ಪರಕೀಯನಾಗಿ ಬಿಡುತ್ತಿದ್ದೆ....
     ಒಂದು  ದಿನ ಅಮ್ಮ ಹೇಳಿದಳು.... ಸಾಕು... ಯೆಲ್ಲವನ್ನೂ ನೋಡಿ ಮುಗಿಯಿತು ,,,,,, ನಾನು ಹೋಗಲಾ...?  ಗಟ್ಟಿ ಇದ್ದವರು ಇದೇನಪ್ಪಾ ಈ ಪ್ರಶ್ನೆ ಎಂದು ಮನಸ್ಸಿಗೆ ಬಂದರೂ, ಯಾಕೋ ಹೊರ ಬಂದಿದ್ದು ಆತಬ್ಬೆ..ಅದು ಯೆಲ್ಲಡಗಿತ್ತೋ ಗೊತ್ತಿಲ್ಲ...!. ಅದೇ ದಿನ ಸಂಜೆ ಮಲಗಿದೋರು ಸನ್ನೆ ಮಾಡಿದರು ಕರೆಸು ಹೆಮ್ಮಕ್ಕಳನ್ನ ಎಂದರು.  ಬೆಂಗಳೂರಿನಲ್ಲೇ ಇರುವ ಕಿರಿಯ ಮಗಳು ಅಳಿಯ ಮೊದಲೇ ಬಂದರು, ಸಾಗರ ದಿಂದ  ಆ ಕೂಡಲೇ ಹೊರಟ ಹಿರಿಯ ಮಗಳು ಅಳಿಯ ರಾತ್ರಿ ಹತ್ತಾಗು ವಾಗ ರಾಮನಗರ ಸೇರಿದ್ದರು. ಎಲ್ಲರೂ ಸೇರಿದ್ದರೆಂದು ಖಚಿತ ಮಾಡಿ ಕೊಳ್ಳು ಒಮ್ಮೆ ಕಣ್ಣು ಬಿಟ್ಟು ನಗಾಡಿದವರು,  ಕಣ್ಣು ಮುಚ್ಚಿದ ರು ....ಮತ್ತೆ ತೆರೆಯಲೇ ಇಲ್ಲ.... ನನ್ನಮ್ಮ ನನ್ನ ಹೊತ್ತು ಹೆತ್ತು ಪೊರೆದ ಅಬ್ಬೆ ಹೋದರು..... ಮುಂದೆ ಹೇಳಲಾಗುತ್ತಿಲ್ಲ... ಸಾಕು...
    ನಂತರದ ದಿನಗಳಲ್ಲಿ ನಮ್ಮ ಸಂಸಾರದಲ್ಲಿ ಮಗ ಶರಚ್ಚಂದ್ರನ ನ ಪ್ರವೇಶವಾಗಿದೆ. ಮಕ್ಕಳ ಆಟ ಪಾಠ ಯಶಸ್ವೀ ತಂದೆ-ತಾಯಿಯೆನಿಸಿದೆ. ನಮ್ಮ ಸಂತೋಷಕ್ಕಾಗಿ ಮಾಡಿಕೊಂಡ ಬೊಂಬೆಗಳಲ್ಲವೇ ?...ಅವರೊಂದಿಗೆ ಆಡುವ ಆಡಿ ಸಂತಸ ಪಡುವ ಯಾವ ಘಳಿಗೆಯನ್ನೂ ನಮಗೆ ತಪ್ಪಿಸಲಿಲ್ಲ... , ನಮ್ಮನ್ನು ಸಂತೈಸುತ್ತ ಅವರೂ ಬೆಳೆಯುತ್ತಿದ್ದಾರೆ, ಓದಿನಲ್ಲೂ ಆಚಾರದಲ್ಲೂ ಮುಂದಿದ್ದಾರೆ. ನಾವೂ ಸದ್ಯಕ್ಕೆ ಯಾವ ರೋಗ ರುಜಿನಗಳಿಲ್ಲದೇ ಸಾಗಿ ಬರುತ್ತಿದ್ದೇವೆ. ಸಾಕಲ್ಲವೇ?
  ಎನ್ನಬ್ಬೆ ಆವಾಗಾವಾಗ ಹೇಳುತ್ತಿದ್ದಳು. ತಮಾ ( ನನ್ನನ್ನು ಹಾಗೆ ಸಂಬೋಧಿಸುತ್ತಿದ್ದಳು) " ಉರಿದರೆ ಕರ್ಪೂರದಂತೆ ಉರಿದುಬಿಡು, ಧಗ ಧಗನೆ ಉರಿದು ನಿಶ್ಶೇಷವಾಗಿಬಿಡು....! ಬತ್ತಿಯ ಸೊಡರಾಗಬೇಡಾ... ಕೊನೆಯಲ್ಲಿ ಕಮಟು ವಾಸನೆ...! ಬತ್ತಿಯ ಕರಿ ಹಾಗೇ ಉಳಿದುಬಿಡುತ್ತದೆ....! . ಬಾಗಿದರೆ ಬದುಕಲ್ಲಿ ನಿನ್ನ ಆತ್ಮಸಾಕ್ಷಿಗೆ ಬಾಗು..! ಉಳಿದಿದ್ದಕ್ಕೆ ಬಾಗಬೇಡಾ...! ಬದುಕಲ್ಲಿ ವೈಜ್ಞಾನಿಕ ಭಾವವಿರಲಿ.....!!! ಮೂಢ ಆಚರಣೆಗಳಿಗೆ ಮನವೀಯ ಬೇಡಾ... !!ಇವೆಲ್ಲ.. ನನ್ನಲ್ಲಿ ಆಡಂಬರದ ಭಕ್ತಿಯ ವಿರೋಧಕ್ಕೆ , ಸ್ವಲ್ಪಮಟ್ಟಿನ 'ಚಾರ್ವಾಕ' ಭಾವಕ್ಕೆ ಕಾರಣವಾಯಿತು. ಆದರೂ ಬೇರೆಯವರಿಗೆ ಹೇಳುವ ಮನವಿರಲಿಲ್ಲ.... ಹಾಗೇ ಬದುಕಿದೆ.. ಈಗಲೂ ಹಾಗೇ.......
  ಯಾಕೋ.... ಬಾಲ್ಯದ ಆ ಜಗತ್ತಿಲ್ಲಿ ಬದಲಾಗಿದೆ ಎನಿಸುತ್ತಿದೆ.... ಅಂದು ಎನ್ನಬ್ಬೆ ಹೇಳಿದ ಸತ್ಯ,ಧರ್ಮ,ನ್ಯಾಯ ಎಲ್ಲ ಸಾಯಹೊರಟಿದೆ....! ಆದರೂ "ಧರ್ಮೊ ರಕ್ಷತಿ ರಕ್ಷಿತಃ" ಅಲ್ಲವೇ...? ಇನ್ನೂ ನನ್ನ ಭವಿಷ್ಯದಲ್ಲಿ 'ಸತ್ಯ'ಸತ್ತಿರಲಾರದು...? 'ಧರ್ಮ' ಕುಲಗೆಟ್ಟಿರಲಾರದು...? ನ್ಯಾಯಕ್ಕೇ ಸಂಕೋಲೆ ಬೀಳಲಾರದು...? ಅಲ್ಲವೇ..?
......... ಇದು ನನ್ನ ಕಥೆಯಲ್ಲ ನನ್ನ ಜೀವನದರ್ಶನ....!






* ನನಗೇ ಬುದ್ಧಿ ಬಂದಿತ್ತು...!

    ನಾನು ಸಣ್ಣವನಾಗಿದ್ದೆ ಆಗ,( ಇಷ್ಟು ದೊಡ್ಡಾದ್ರೂ ಇನ್ನೂ ಬುದ್ಧಿ ಬಂಜಿಲ್ಯನಾ ಹೇಳಿ ಯೆನ್ನಪ್ಪ ಬೈದಾಗಲೇ ನಾನು ದೊಡ್ಡವನಾಗಿಬಿಟ್ಟಿದ್ದೆ) ಒಂದು ದಿನ ಪಕ್ಕದೂರಿನಲ್ಲಿರುವ ಒಂದು ಕಲ್ಲು ಬಸವನ ನೋಡಲೆಂದು ಒಂದು ನಮ್ಮ ಗುಂಪು ದಾರಿ ಸವೆಸಿತು. ನಾಮುಂದು ತಾಮುಂದು ಎಂದು ಓಡಿಕೊಂಡೇ ಹೋದೆವು ಅನ್ನಿ. ಅಂತೂ ಗುಡ್ಡ ಇಳಿದು ಹೊಳೆ ದಾಟಿ ಮತ್ತೊಂದು ಗುಡ್ಡ ಏರಿದರೆ ಅಲ್ಲಿ ಒಂದು ಪಾಳುಬಿದ್ದ ದೇವಸ್ಥಾನದ (ಅದು ಈಶ್ವರನ ದೇವಾಲಯ ಇತ್ತೆಂದು ಕಾಣುತ್ತದೆ) ಮುಂಭಾಗದಲ್ಲಿ ಒಂದು ದೊಡ್ಡ ಕಲ್ಲಿನ ಬಸವ ಇತ್ತು.. ನಾವು ಹೋದದ್ದು ಏಪ್ರಿಲ್-ಮೇ ರಜೆಯಲ್ಲಿ, ತುಂಬಾ ಸೆಕೆ... ಆದರೂ ಗುಡ್ಡದಲ್ಲಿ ಸಿಗುವ ತರಹೇವಾರಿ ಹಣ್ಣುಗಳ ರುಚಿನೋಡಬಹುದಾದ ಕಾಲ. ಮುಳ್ಳೇ ಹಣ್ಣು,ಕರಜಲು ಹಣ್ಣು.ಗೇರ ಹಣ್ಣು, ಬೊಕಳೇ ಹಣ್ಣು. ವಾಂಟೇ ಹಣ್ಣು,ಸಂಪಿಗೆ ಹಣ್ಣುಅಂಡಮುರುಗಲ ಹಣ್ಣು, ಬಿಳಿಮುಳ್ಳೇಹಣ್ಣು, ಹೀಗೇ ಹೊಟ್ಟೆ ತುಂಬುತ್ತಿತ್ತು. ಆದರೂ ಸೆಕೆ...ಅಬ್ಬಾ...
    ಅಂತೂ ಬಸವನ ಕಾಲ ಬುಡಕ್ಕೆ ಬಂದಾಯ್ತು. ಅತ್ತಿತ್ತ ನೋಡಿದೆವು ಯೇನೂ ವಿಶೇಷವಿಲ್ಲ ಬರೇ ಬೋಳು ದೇವಾಲಯ.. ಅದೂ ಪಾಳು. ಪೂಜೆಯಿಲ್ಲ,ನೈವೇದ್ಯವಿಲ್ಲಾ...ಅಸಲಿಗೆ ಅಲ್ಲಿ ದೇವರೇ ಇಲ್ಲಾ.. ಅಂತೂ ಬಸವನೊಬ್ಬ ಇದ್ದ. ಅಲ್ಲಿ ಇಲ್ಲಿ ತಿರುಗಿ ನೋಡುತ್ತಿದ್ದೆವು.. ನಮ್ಮ ಗ್ಯಾಂಗಿನ ನಾಯಕ ದಿವಾಕರ !!! ಬಲು ಜೋರು, ಅಷ್ಟೇ ಹಾಸ್ಯ ಸ್ವಭಾವದವ.. ಅವ...ಇದ್ದಕ್ಕಿದ್ದಂತೇ.."ಅಯ್ಯೊಯ್ಯೋ... ಅಬ್ಬಾ...." ಎಂದು ಕೈ ಕುಡುಗುತ್ತ ನಮ್ಮ ಕಡೆಗೆ ಬಂದ . ನಮ್ಮೊಟ್ಟಿಗಿನ ಕಿತ್ತೂರು ರಾಣಿ ಮಂಗಲ ಕೇಳಿದಳು "ಅಣ್ಣ.. ಯೆಂತದೂ..." ಅದಕ್ಕೆ ದಿವು.." ಇಲ್ಲ್ ನೋಡು ,'ಆಬಸವನ ಮೂಗಲ್ಲಿ ಒಂದ್ ಬಾರಿ ಕೈ ಬೆರಳಾಕು..ನೀನು... ಏಷ್ಟ್ ತಂಪೂ..ಆಹಾಹಾ..... ' ಅಂದ.. ಮಂಗಲಾ ಘಾಟಿ. "ಹೌದಾ... ನಾನೂ ಕೈ ಹಾಕುತ್ತೇನೆ ಹಾಗಾದರೆ'' ಎಂದು ಅವಳೂ ಬೆರಳು ತೂರಿಸಿದಳು.. ಅಮ್.. ಅಯ್ಯೊಯ್ಯೋ..ಎಷ್ಟ್ ತಂಪಲ್ಲವಾ..? ಏ ರಾಮೂ... ಇಲ್ಲ್ ಬಾ..ನೋಡು...ಇಲ್ಲಿ ಕೈ.ಹಾಕೂ...ನೀನೂ... ಅಹಾ...ತಂ..ಪೂ... ಎಂದಳು ಕೈ ಉಜ್ಜಿಕೊಳ್ಳುತ್ತ........ನನಗ್ಯಾಕೋ ಅನುಮಾನಾ..... ಮೊದಲಿಂದಾನೂ ಹಾಗೇ ನಾನು ಯಾವುದನ್ನೂ ನಂಬೋ ಗಿರಾಕಿ ಅಲ್ಲಾ... ಅದಕ್ಕೇ..ನಾನು ಮತ್ತೊಬ್ಬ ನಮ್ಮ ಅಣ್ಣ ದತ್ತಣ್ಣನಿಗೆ ಕೈಹಾಕಲು ಸೂಚಿಸಿದೆ. ಅವನಿಗೆ ಅದಾಗಲೇ ಮಂಗಳ ಕಣ್ಸನ್ನೆ ಮಾಡಿ ಆಗಿತ್ತು... ಅವ ಕೈ ಹಾಕಿದೋನು... ಅಮ್ಮಾ..ಅಯ್ಯೊಯ್ಯೋ...ಅದೆಷ್ಟು ತಂ....ಪೂ..ಅನ್ನುತ್ತಲೇ ಕೈ ಹಿಂದಕ್ಕೆಳೆದ.....ಆದರೂ...ಯಾಕೋ,,ಅನುಮಾನ ನನಗೆ.... ಏಕೆಂದರೆ ಈ ಮಂಗಲ ನನ್ನ ಓರಗೆಯವಳು.. ನಾವು ಮೂರ್ನಾಲ್ಕುಜನ ಸೇರಿ ಹೋಗುತ್ತಿದ್ದಾಗ ಹಲಸಿನ ಮರ ಹತ್ತಿ ಹಲಸಿನ ಹಣ್ಣು ಕೆಡವಿ ಬಿರಿದು ತಿನ್ನುತ್ತಿದ್ದೆವು ಆಗ ಅವಳು ಎಲ್ಲರಿಗಿಂತ ಮೊದಲೇ ಮೇಲೆ ಹತ್ತಿಬಿಡುತ್ತಿದ್ದಳು..ನಮಗೆಲ್ಲ..ಓ ..ಇವಳು ಹಣ್ಣು ಕೆಳಗೆ ಕೆಡವುತ್ತಾಳೆ ನಾವೆಲ್ಲ ಪಾಲು ಮಾಡಿ ತಿಂದರಾಯಿತು. ಎಂದುಕೊಂಡಿದ್ದರೆ... ಇವಳು ಮೇಲೇನೇ ಹಣ್ಣನ್ನು ಬಿರಿದು ತಿನ್ನೋದಕ್ಕೇ ಕುಳಿತುಬಿಡುತ್ತಿದ್ದಳು ನಾವು ಮೇಲೆ ನೋಡುತ್ತ ಜೊಲ್ಲುಸುರಿಸಿದ್ದೇ ಲಾಭಾ... ಬೇಳೆ ಮಾತ್ರ ಕೆಳ್ಗೆ ಉದುರುತ್ತಿತ್ತು...ಥತ್ತೇರಿಕೇ..
   ಈ ಎಲ್ಲ ಅನುಭವಗಳೇ ನನ್ನನ್ನು ಅವಿಶ್ವಾಸಿಯನ್ನಾಗಿ ಮಾಡಿದ್ದು.... ಅಂತೂ ಎಲ್ಲರೂ ಬಸವನ ಮೂಗಿಗೆ ಕೈ ಬೆರಳು ತೂರಿಸಿ ಅಮ್ಮಾ,ಅಯ್ಯೊಯ್ಯೋ,,ತಂಪೂ..ಎಲ್ಲಾ ಹೇಳಿದ್ದು ನೋಡಿ ನನಗೂ ತಡೆಯಲಾಗಲಿಲ್ಲಾ... ಸಾಲದ್ದಕ್ಕೆ ಸೆಕೆ ಬೇರೆ ತಂಪಾದರಾಗಲೀ ಎನ್ನುವ ಯೋಚನೆ ಬಂದು ಏನಾದರಾಗಲೀ ಮೊದಲು ಒಂದು ಚಿಕ್ಕ ಕೋಲನ್ನು ಬಸವನ ಮೂಗಿನೊಳಕ್ಕೆ ತೂರಿಸಿ ತಿರುವಿದೆ ನೋಡಿ....... ಆಗ ಅಲ್ಲಿಂದ  ಪುಳಕ್ ನೆ ಬಿತ್ತು ನೋಡಿ ಒಂದು ಕರೇ ಚೇಳು..... ಆಹಾಹಾ..ಈ ಖರ್ಮದವರು ನನ್ನನ್ನು ಹಳ್ಳಕ್ಕೇ ಹಾಕ ಬೇಕೆಂದಿದ್ದರು...! ಮಗ ನಾನು ಬೀಳುವವನೇ...? ಇಷ್ಟಾಗುವಾಗ ಈ ಖಳ್ಳನನ್ನ ಮಕ್ಕಳು ಬಸವನ ಬಾಲ ಅಳೆಯುತ್ತಿದ್ದರು...ಮುಸಿ ಮುಸಿ ನಗುತ್ತಾ....
     ಇದುವರೆಗೂ ಯೆಲ್ಲ ಇವರು ಆಹಾಹಾ ಎಂದದ್ದು ತಂಪಾಗಿ ಅಲ್ಲ ...! ಕೈಬೆರಳಾಕಿದಾಗ ಆ ಕರಿ ಚೇಳು ಮಾಡಿತ್ತಲ್ಲಾ ಇವರ ಬೆರಳಿಗೆ ಸರ್ಜರಿನಾ.... ಆದ್ರೂ ಬಡ್ಡೀಮಕ್ಕಳು ಅಯ್ಯೊಯ್ಯೊ ತಂಪೂ ಎಂದೇ ಬಡಕೊಂಡರಲ್ಲಾ..!!! ಆಮೇಲೆ ಒಬ್ಬೊಬ್ಬರ ಕೈಬೆರಳು ನೋಡಿದರೇ..... ಬಾಳೇಕಾಯಿ ಆದ ಹಾಗಿತ್ತು...! ಈ ಯೆಲ್ಲಾ ಮಂಗನಾಟಗಳ ಮುಗಿಸಿ ಮನೆಗೆ ಬಂದು ಅಮ್ಮನ ಹತ್ತಿರ ಹೇಳಿದರೆ.... ಹೌದಾ... ನಿನಗೇನೂ ಆಗಿಲ್ಲವಲ್ಲಾ,,,, ಇದನ್ನೇ ಹೇಳೂದು ದೊಡ್ಡವರ ಲಕ್ಷಣ ಅಂತಾ.... ಬುದ್ಧಿ ಬಂದಾಗ ಹಿಂಗೆಲ್ಲಾ ಆಗುವುದಿಲ್ಲಾ ತಂತಾನೇ ವಿಚಾರ್ ಮಾಡುವ ಮನಸ್ಸು ಆಗುತ್ತದೆ . ಎಂದು ಹೇಳಿದಾಗ ನಾನು ನಿಜವಾಗಲೂ 'ದೊಡ್ಡವನಾಗಿದ್ದೇನೆ'...! ನನಗೂ 'ಬುದ್ಧಿ ಬಂದಿದೇ' ಅಂದುಕೊಂಡಿದ್ದು.

* "ಕಲ್ಪನಾ ದಾರಿದ್ರ್ಯ"

ಒಂದು ದಾರಿಯಲ್ಲಿ ಪಥಿಕನೋರ್ವ ಬರುತ್ತಿದ್ದ. ದಾರಿಯಂಚಿನ ಮರದ ಕೆಳಗೆ ಕುಳಿತ ಓರ್ವ ಭಿಕ್ಷುಕ ತನ್ನೆದುರು ಇದ್ದ ಅಲ್ಯೂಮೀನಿಯಂ ತಟ್ಟೆಯಲ್ಲಿ ಇರುವ ಯಾರೋ ಕೊಟ್ಟ ರೊಟ್ಟಿಯನ್ನು ಚೂರು ಮಾಡಿ ಕೈಗೆ ತೆಗೆದುಕೊಂಡು ಇನ್ನೊಂದು ಕೈಯ್ಯಲ್ಲಿ ಅಜ್ಜಿಕೊಂಡು ಬಾಯಿಗಿಡುತ್ತಿದ್ದ. ಈ ಚಟುವಟಿಕೆಯನ್ನು ಸುಮಾರು ದೂರದಿಂದಲೂ ಗಮನಿಸಿಕೊಂಡು ಬರುತ್ತಿದ್ದ ಆ ಪಥಿಕ ಭಿಕ್ಷುಕನ ಹತ್ತಿರ ಬಂದು ಕೇಳಿದ. "ಅಯ್ಯಾ, ಆವಾಗಿನಿಂದ ನಿನ್ನನ್ನು ಗಮನಿಸುತ್ತಿದ್ದೇನೆ, ಅದೇನೋ ರೊಟ್ಟಿಯ ಚೂರನ್ನು ನಿನ್ನ ಒಂದು ಬರಿಗೈಗೆ ಅಜ್ಜಿ ಅಜ್ಜಿ ತಿನ್ನುತ್ತಿರುವೆಯಲ್ಲಾ ಏಕೆ..?" ಅದಕ್ಕೆ ಭಿಕ್ಷುಕ " ಅಣ್ಣಾ, ನನಗೆ ಈ ರೊಟ್ಟಿಯನ್ನು ಕೊಟ್ಟವರು ನೆಂಚಿಕೊಳ್ಳಲು ಏನನ್ನೂ ಕೊಡಲಿಲ್ಲ , ನನ್ನ ಹತ್ತಿರ ಹಾಕಿಕೊಳ್ಳಲು ಚೂರು ಉಪ್ಪೂ ಇಲ್ಲ, ಯೇನು ಮಾಡೋದು ಖಾಲಿ ತಟ್ಟೆ ರೊಟ್ಟಿ ತಿನ್ನಲಾಗೋದಿಲ್ಲಾ,ಸಪ್ಪೆ, ಹಾಗಾಗಿ ಈ ಕೈಯ್ಯಲ್ಲಿ ಉಪ್ಪು ಇದೆ ಎಂದು ಭಾವಿಸಿಕೊಂಡು ನೆಂಚಿ ನೆಂಚಿ ತಿನ್ನುತ್ತಿದ್ದೇನೆ" ಎಂದ. ಇದನ್ನು ಕೇಳಿದ ಆ ಪಥಿಕನಿಗೆ ಅನಿಸಿತು'ಅಯ್ಯೋ ಖರ್ಮವೇ.... ಇವರಿಗೆ ಎಷ್ಟು ಮಾಡಿದರೂ ಅಷ್ಟೇ.... ಉದ್ಧಾರವಾಗುವುದಿಲ್ಲಾ.. ಅಲ್ಲಾ... ಈ ಬರಿಗೈಯಲ್ಲಿ ಉಪ್ಪು ಇದೇ ಎಂದು ನೆಂಚಿ ತಿನುವುದರ ಬದಲು ತುಪ್ಪ-ಸಕ್ಕರೆಯೇ ಇದೆ ಎಂದುಕೊಂಡು ತಿನ್ನಬಹುದಿತ್ತಲ್ಲಾ... ಅದೂ ದಾರಿದ್ರ್ಯವೇ..... ಇದನ್ನೇ ಅಲ್ಲವೇ "ಕಲ್ಪನಾ ದಾರಿದ್ರ್ಯ...!" ಎನ್ನುವುದೂ.... ಅಂದುಕೊಂಡು " ಆಯಿತಪ್ಪಾ...... ಹಾಗೇ ಆಗಲೀ..." ಎನ್ನುತ್ತ ಮುಂದೆ ಸಾಗಿದ...
.......ನೀವೇನಂತೀರಿ........

ಶನಿವಾರ, ಏಪ್ರಿಲ್ 7, 2012

* ಸಾಹಿತ್ಯ ಮತ್ತು ಸಂಸ್ಕೃತಿ: ಸೊಡರು....!!


ಸಂಸ್ಕೃತಿ

      - ಸಾಹಿತ್ಯ

                  ಒಂದು ಮಂಥನ..(Shankara Bhat Baalya)

     ಸಾಹಿತ್ಯ ಮತ್ತು ಸಂಸ್ಕೃತಿ:ಮನುಷ್ಯರಾದ ನಮಗೆ, ನಮ್ಮಲ್ಲಿ ಸಂಚಯನಗೊಳ್ಳುವ ಅನುಭವಗಳನ್ನು ಬೇರೆಯವರೆದುರು ತೋಡಿಕೊಳ್ಳುವುದರಲ್ಲಿ ಒಂದು ಬಗೆಯ ಸುಖವಿದೆ. ಈ ಸುಖಕ್ಕೆ. ನಮ್ಮೊಳಗಿನ ಅನುಭವಗಳ ಒತ್ತಡದವೇದನೆಗೆ ಒದಗುವಬಿಡುಗಡೆ ಒಂದು ಕಾರಣವಾದರೆ, ಅದನ್ನು ಹತ್ತು ಜನದ ಜತೆಗೆ ಹಂಚಿಕೊಳ್ಳುವುದರಿಂದ ಬರುವ 
ಸಮಾಧಾನಇನ್ನೊಂದು ಕಾರಣವಿರಬಹುದು. ಹೀಗೆತನ್ನಲ್ಲಿನಅನುಭವಗಳನ್ನುಸಮುಚಿತವಾದ ಭಾಷಾ ಮಾಧ್ಯಮದ ಮೂಲಕಪರಿಣಾಮಕಾರಿಯಾಗಿಬಿಡುಗಡೆ ಮಾಡಿಕೊಳ್ಳುವ ಕಲೆಗಾರಿಕೆಯನ್ನು ಸಾಹಿತ್ಯ ಎಂದು ಕರೆಯಬಹುದು.
    ಸಾಹಿತ್ಯ ನಿರ್ಮಿತಿ, ಸಾಹಿತ್ಯ ಅಧ್ಯಯನದಿಂದ ಆಗುವ ಕೆಲಸವಲ್ಲ ; ಸಾಹಿತ್ಯ ನಿರ್ಮಿತಿ ಸಾಹಿತಿಯೊಬ್ಬನ ಜೀವನದ 
ಅನುಭವದಿಂದ ಆಗತಕ್ಕದ್ದು. ಸಮಕಾಲೀನ ಬದುಕಿನೊಂದಿಗೆ ಹೀಗೆ ಸಂಬಂಧಿಸಿಕೊಂಡಂತಹ ಸಾಹಿತಿಗೆ ಮೊದಲು 
ಪ್ರಸ್ತುತವಾದದ್ದು ತನ್ನ ಸಮಕಾಲೀನತೆಯಲ್ಲಿ ತನ್ನ ಜತೆಗೋ, ತನಗಿಂತ ಹಿರಿಯರಾಗಿಯೋ ಇರುವಂಥವರ ಬರವಣಿಗೆ; 
ಅಥವಾ ತನಗೆ ತನ್ನ ಪರಿಸರದಲ್ಲಿ ಪರಿಚಿತವಾಗುವ ಸಮಕಾಲೀನ ಸಾಹಿತ್ಯ. ತನ್ನ ಸುತ್ತ ತನ್ನಂತೆಯೆ, ಸಮಕಾಲೀನತೆಗೆ 
ಬಾಯಿ ನೀಡುತ್ತಿರುವ ಸೃಜನಶೀಲ ಲೇಖಕರು ಮತ್ತು ಅವರ ಸಾಹಿತ್ಯ ನಿರ್ಮಿತಿ ಹೆಚ್ಚು ಪ್ರಸ್ತುತವಾಗಿರುತ್ತದೆ. ಅವರಿಂದ 
ಈತನಿಗೆ ಸಾಹಿತ್ಯ ನಿರ್ಮಿತಿಯ ಕಿಡಿ ಹೊತ್ತಿಕೊಳ್ಳಬಹುದು ; ಅವರ ಬರವಣಿಗೆಯ ಪ್ರಭಾವ ಇಂಥವನ ಬರೆಹದ ಮೇಲೆ 
ಮೊದಮೊದಲು ಆಗಬಹುದು; ಅವರ ಸಖ್ಯ ಸಂಬಂಧ, ಅವರ ದೃಷ್ಟಿ ಧೋರಣೆಗಳೂ, ಅವರ ಅಭಿವ್ಯಕ್ತಿಯ ವಿಧಾನಗಳೂ 
ಈತನ ಸಾಹಿತ್ಯ ನಿರ್ಮಿತಿಯ ಮೇಲೆ ತಕ್ಕಷ್ಟು ಪರಿಣಾಮ ಮಾಡಿರಬಹುದು: ಅಥವಾ ಅವರ ನಡುವೆ ಇದ್ದೂ, ತಾನು 
ಅವರಂತಾಗದೆ ಬೇರೊಂದು ಅಭಿವ್ಯಕ್ತಿಯನ್ನು ಕೊರೂಪಿಸಿಕೊಳ್ಳುವ ಸವಾಲುಗಳೂ ಸಮಸ್ಯೆಗಳೂ ಸಾಹಿತ್ಯ ಕ್ಷೇತ್ರಕ್ಕೆ 
ಕಾಲಿರಿಸಿದ ನಿಜವಾದ ಸಾಹಿತಿಗೆ ಎದುರಾಗಬಹುದು
      ಒಂದು ಅಖಂಡವಾದ, ಶತಶತಮಾನಗಳ ಜೀವನಾನುಭವ, ಮತ್ತು ಅದನ್ನು ಅಂದಂದಿನ ಕಾಲಕ್ಕೆ ಹಿಡಿದಿರಿಸಿದ 
ಲೇಖಕರ ಅಭಿವ್ಯಕ್ತಿ ಪರಂಪರೆ ಈ ಎರಡೂ ಇರುತ್ತವೆ. ಈ ಕಾರಣದಿಂದ ವರ್ತಮಾನದ ಜೀವನ ಹಾಗೂ ಸಾಹಿತ್ಯವನ್ನು, 
ಅದಕ್ಕೆ ಹಿಂದಿನ ಜೀವನ ಹಾಗೂ ಸಾಹಿತ್ಯದಿಂದ ಬೇರ್ಪಡಿಸಲು ಬರುವುದಿಲ್ಲ. ಇವುಗಳಲ್ಲಿ ಯಾವುದನ್ನು, ತನಗೆ ಹಿಂದಿನ 
ಬದುಕು ಎನ್ನುತ್ತೇವೋ ಅದು, ಲೇಖಕನಿಗೆ ಅರಿವಿಲ್ಲದೆಯೇ ಅವನ ಒಳಪ್ರಜ್ಞೆಯಲ್ಲಿ ಮುಂದುವರಿಯುತ್ತದೆ ಎಂಬುದನ್ನು 
ಒಪ್ಪಿದರೂ, ಆ ಜೀವನಾನುಭವದ ದಾಖಲೆಗಳಾದ ಹಿಂದಿನ ಸಾಹಿತ್ಯ ಕೃತಿಗಳ ಅಧ್ಯಯನದ ಮೂಲಕ ಲೇಖಕನಿಗೆ 
ಮೈಗೂಡುವ ಸತ್ವ ಬಹಳ ಮುಖ್ಯವಾದದ್ದು. ಹೀಗೆ ಹಿಂದಿನದು ಸ್ವಲ್ಪಮಟ್ಟಿಗೆ ಅಪ್ರಜ್ಞಾಪೂರ್ವಕವಾಗಿ, ಮತ್ತು ಬಹುಮಟ್ಟಿಗೆ 
ಪ್ರಜ್ಞಾಪೂರ್ವಕ ಪ್ರಯತ್ನಗಳ ಮೂಲಕ, ಸಮಕಾಲೀನ ಲೇಖಕನಲ್ಲಿ ಅವನ ಸಾಹಿತ್ಯ ನಿರ್ಮಿತಿಗೆ ನೆರವಾಗುತ್ತದೆ. ಈ 
ದೃಷ್ಟಿಯಿಂದ ಇಂದಿನ ಸಾಹಿತಿಗೆ, ಹಿಂದಿನ ಸಾಹಿತ್ಯ ಕೃತಿಗಳ ಅಧ್ಯಯನ ಅತ್ಯಂತ ಅಗತ್ಯವಾದ ಪರಿಕರಗಳಲ್ಲಿ 
ಒಂದಾಗಿದೆ-ಎನ್ನುವುದು ಈ ವಿಷಯ ಇಲ್ಲಿ ಯಾಕೆ ಬರೆದೆನೆಂದರೆ,ಸಾಹಿತ್ಯ-ಸಂಸ್ಕೃತಿ;ಎನ್ನುವಲ್ಲಿ 'ಸಂಸ್ಕೃತಿ'ಅನ್ನುವುದನ್ನು 
'ನಾಗರಿಕತೆ'civilization, ಅನ್ನುವ ಅರ್ಥದಲ್ಲಿ ಬಳಸುತ್ತಿದ್ದೇನೆ.Culture,ಅರ್ಥದಲ್ಲಿ ಅಲ್ಲ.ಯಾಕೆಂದರೆ ಸಾಹಿತ್ಯವು ಕಾಲ 
ಕಾಲಕ್ಕೆ,ನಾಗರಿಕತೆಯ ಜೊತೆಗೆ ಬದಲಾಗುತ್ತಾ ಸಾಗಿದೆ.ಆದರೆ ಸಂಸ್ಕಾರ-ಸಂಸ್ಕೃತಿ,ಯು ಜನಾಂಗದ,ಪ್ರದೇಶದ, 
ಆಹಾರ,ವಿಚಾರ,ಗಳ ಮೇಲೆಸಹ ಅವಲಂಬಿಸಿದೆ. ಆದ್ದರಿಂದ,ವೇದಗಳ ಕಾಲದ ಜನಜೀವನಕ್ಕೂ,ವೇದಗಳು ರಚನೆಯಾದ 
ಪರಿಸರ,ಕಾಲಘಟ್ಟದಲ್ಲಿದ್ದ ನಾಗರಿಕರೆಗೂ ನೇರ ಸಂಬಂಧವಿದೆ.ಪುರಾಣಗಳು,ಇತಿಹಾಸಗಳು,ಬಳಿಕ ರಚನೆಯಾದ 
ಕಾಳಿದಾಸ,ಭವಭೂತಿ,ಮೊದಲಾದವರ ನಾಟಕಗಳು,ಪಂಪ,ರನ್ನ,ಹರಿಹರ,ರಾಘವಾಂಕ,ಮೊದಲಾದ ಕವಿಗಳ 
ಕಾವ್ಯಗಳು,ಆಕಾಲದ ರಾಜ,ಮಹಾರಾಜರ,ನಾಗರಿಕತೆ,ಆಗಿನಜನಜೀವನ,
   ಆಸ್ಥಾನದ ವೈಭವ ಇತ್ಯಾದಿಗಳ ಜೊತೆಗೆ ಮಿಳಿತ ವಾಗಿದೆ.ನಂತರಬಂದ ರಮ್ಯ,ನವೊದಯ, ನವ್ಯ,ಬಂಡಾಯ, 
ಶೂದ್ರಕದಲಿತ,ಮೊದಲಾಗಿ ಕರೆಸಿಕೊಳ್ಳುವ ಸಾಹಿತ್ಯಗಳ ಸಾಹಿತಿಗಳ ಬದುಕಿನಅನುಭವ,ಬದುಕಿದ ಪರಿಸರ,ಅಧ್ಯಯನದ 
ಫಲಗಳಾಗಿವೆ.ಸಾಹಿತ್ಯ ಯಾವಾಗ,ಯಾರೇ ರಚಿಸಲಿ ಆ ಬರಹದ ಮೇಲೆ ಸಮಕಾಲಿನ ಬದುಕಿನ,ನಾಗರಿಕತೆಯ ಪ್ರಬಾವ 
ಇದ್ದೇ ಇರುತ್ತದೆ. ವೇದಗಳು "ಸಂಸ್ಕೃತ" ಭಾಷೆಯಲ್ಲಿರುವ ಅತ್ಯಂತ ಪ್ರಾಚೀನವಾದ ಸಾಹಿತ್ಯ"ಸಂಸ್ಕೃತ"ವು ಜಗತ್ತಿನ 
ಪ್ರಾಚೀನ ಭಾಷೆ.(ಸಂಸ್ಕೃತ ವು ಸ್ವಯಂಭೂ ಅಲ್ಲ,ಪ್ರಾಕೃತ ಭಾಷೆ ಗಳನ್ನು ಪರಿಷ್ಕರಿಸಿ,ಸಂಸ್ಕರಿಸಿ,ರೂಪುಗೊಂಡ 
ಭಾಷೆ. ಆದ್ದರಿಂದಲೇ ಅದರ ಹೆಸರು "ಸಂಸ್ಕೃತ" )"ಸಂಸ್ಕೃತ"ಭಾಷೆಯನ್ನು ತಿಳಿದವರು ಅದೃಷ್ಟವಂತರು, ಈ 
ಭಾಷೆಯ ಲ್ಲಿರುವಷ್ಟು ಸಾಹಿತ್ಯ ಇನ್ನಾವ ಭಾಷೆಯಲ್ಲೂ  ಇಲ್ಲ.(ನನಗೆ "ಸಂಸ್ಕೃತ" ಗೊತ್ತಿಲ್ಲ,ಈ ಕುರಿತು ನಾನು 
ದುರದೃಷ್ಟವಂತನೇ ಸರಿ).
      "ವೇದ" ಎಂದರೆ ಏನು?"ವಿದ್,ಜ್ಞಾನೇ" ಎಂಬ ಧಾತು ವಿನಿಂದ ಈ ಶಬ್ದ ರೂಪುಗೊಂಡಿದೆ.ಈ ಶಬ್ದಕ್ಕೆ ಜ್ಞಾನ ಎಂದು ಅರ್ಥ.ಯಾವುದರ ಜ್ಞಾನ ?ಆತ್ಮ,ಧರ್ಮ,ಕರ್ಮ,ಪುಣ್ಯ,ಪಾಪ,ದೇವತೆಗಳು,ಲೋಕ,ಲೋಕಾಂತರಗಳು- ಮುಂತಾದ ಗಹನ ವಿಷಯಗಳ ಜ್ಞಾನ.ನಮ್ಮ ಇಂದ್ರಿಯಗಳು ಕೊಡುವ ಜ್ಞಾನ ಪ್ರತ್ಯಕ್ಷ.ಊಹೆ ಅಥವಾ ತರ್ಕದಿಂದ ಬರುವ ತಿಳಿವು ಅನುಮಾನ. 
ಕೆಲವು ಸಂಗತಿಗಳು ಇವೆರಡಕ್ಕೂ ತಿಳಿಯಬರುವುದಿಲ್ಲ.ನಮ್ಮ ಇಷ್ಟವನ್ನು ಪದೆಯುವುದಕ್ಕೂ,ಅನಿಷ್ಟವನ್ನು 
ನಿವಾರಿಸುವುದಕ್ಕೂ ಅನೆಕ ಉಪಾಯ ಗಳಿವೆ.ಅವುಗಳಲ್ಲಿ ಯಾವುದು ಲೋಕದಲ್ಲಿ ಅನುಭವಕ್ಕೆ,ಪ್ರತ್ಯಕ್ಷ ಮತ್ತು ಅನುಮಾನ 
ಗಳಿಗೆ ನಿಲುಕದೇ ಇದ್ದು,ಅಲೌಕಿಕವೆನಿಸುವುದೋ ಅಂತಹ ಉಪಾಯವನ್ನು ತಿಳಿಸಿಕೊಡುವುದೋ ಅದು "ವೇದ".
    ವೇದಕ್ಕೆ,ಶ್ರುತಿ,ದರ್ಶನ,ಆಮ್ನಾಯ,ಎಂಬ ಹೆಸರುಗಳೂ ಇವೆ.ವೇದಗಳ ಅಗಾಧತೆ,ಅಪಾರತೆ,ಅದರಲ್ಲಿರುವಅಪರಿಮಿತ ಜ್ಞಾನ ಭಂಡಾರ,ಗಳಿಂದಾಗಿ ಇದು ಮನುಷ್ಯ ಮಾತ್ರರಿಂದ ರಚಿಸಲು ಅಸಾಧ್ಯವೆಂದು ತಿಳಿದು, ವೇದ ಗಳನ್ನು "ಅಪೌರುಷೇಯ"ವೆಂದು ಕರೆಯಲಾಯಿತು. <ನವ್ಯ ಮತ್ತು ನವೋದಯ ಕನ್ನಡ ಸಾಹಿತ್ಯವನ್ನವಲೋಕಿಸಿದಾಗ ಅಲ್ಲಿ ಭಟ್ಟಂಗಿತನ, ಭಾಷಾ ವಿಲಾಸ, ಅರ್ಥ ಸಂಪ್ರಾಪ್ತಿ, ವಿಮರ್ಶಾ ಕಾವ್ಯ ರಚನೆ, ಬೋಧಕಸಾಹಿತ್ಯ, ಮುಂತಾದ ಅನೇಕ ಹೊಳಹುಗಳಿದ್ದುದು ಕಂಡುಬರುತ್ತದೆ. >> ಸುಮನಸ ರಾಂಭಟ್ಟ ಅಗ್ನಿಹೋತ್ರಿಯವರ ಈ ಮಾತಿಗೆ ನನ್ನ ಒಪ್ಪಿಗೆಯಿದೆ.. ಇದು ಹೊಸ ಬೆಳವಣಿಗೆಯೇನಲ್ಲ. ಇತಿಹಾಸದುದ್ದಕ್ಕೂ ನಡೆದು ಬಂದಿರುವುದನ್ನು ಕಾಣಬಹುದು. ಹಿಂದಿನ ಅರಸೊತ್ತಿಗೆಗಳ ಕಾಲದಲ್ಲೂ ಕವಿಗಳು, ಸಾಹಿತಿಗಳಿಗೆ ರಾಜಾಶ್ರಯವಿತ್ತು. ಸಹಜವಾಗಿ ಅವರುಗಳು ಅರಸರುಗಳನ್ನು ಹೊಗಳಿ ಭಟ್ಟಂಗಿರನದ ಪ್ರದರ್ಶನ ಮಾಡುತ್ತಿದ್ದುದು ವಿಶೇಷವಲ್ಲ. ತುರ್ತು ಪರಿಸ್ಥಿತಿ ಕಾಲದಲ್ಲಿ ಅದನ್ನು ಸಮರ್ಥಿಸಿ ಬರೆದ 'ಸಾಹಿತಿ'ಗಳಿಗೆ ಕೊರತೆಯಿರಲಿಲ್ಲವೆಂಬುದನ್ನು ಗಮನಿಸಬಹುದು. ವೇದ, ವೇದಾಂಗಗಳು, ಇತ್ಯಾದಿಗಳಿಗೆ ಮಹಿಮಾನ್ವಿತರುಗಳು ಭಾಷ್ಯಗಳನ್ನು ರಚಿಸಿರುವುದು ಮೂಲ ಕೃತಿಗಳ ಮೌಲ್ಯ ಹೆಚ್ಚಿಸಿವೆ. ಇವೂ ಬೋಧಕ ಸಾಹಿತ್ಯವೆನ್ನಲು ಅಡ್ಡಿಯಿಲ್ಲ.
   ವೇದಗಳ,ಅಗಾಧತೆ,ಅಪರಿಮಿತ ಹರವು,ಅದರಲ್ಲಿ ಅಡಗಿರುವ ಅಪಾರ ಜ್ಞಾನ ಭಂಡಾರ ಗಳಿಂದಲಾಗಿ "ವೇದ"ವು ಅಪೌರುಷೇಯ ವೆಂದು ಕರೆಯಲ್ಪಟ್ಟಿತು.ಈ ಕುರಿತು ಒಂದು ಕಥೆ ಹೀಗಿದೆ:ಭರದ್ವಾಜ ಎಂಬ ಋಷಿ ಮುನ್ನೂರು ವರ್ಷಗಳಕಾಲ ಗುರುಕುಲದಲ್ಲಿ ಇದ್ದು ವೇದಗಳನ್ನು ಕಲಿಯುತ್ತಾ ಹಣ್ಣು ಹಣ್ಣು ಮುದುಕರಾದರು.ಆದರೂ ಸಹ ಮನೆಗೆ ಹಿಂತಿರುಗಿ ಗೃಹಸ್ಥಾಶ್ರಾಮವನ್ನು ಸ್ವೀಕರಿಸಲಿಲ್ಲ,ಮುಪ್ಪಿನಿಂದ ಬಳಲಿ ಬಿದ್ದಿದ್ದ ಅವರ ಬಳಿ ಇಂದ್ರದೇವನು ಬಂದು "ಭರದ್ವಾಜ ನಾನು ನಿನಗೆ ನಿನ್ನ ಆಯುಸ್ಸನ್ನು ನಾಲ್ಕುಪಟ್ಟು ಹೆಚ್ಚು ಮಾಡುವೆನು ಆಗ ಏನು ಮಾಡುವೆ? ಎಂದನು .ಅದಕ್ಕೆ ಭರದ್ವಾಜರು "ನಾನು ಬ್ರಹ್ಮಚರ್ಯ ವನ್ನು ಮುಂದುವರಿಸಿ ಇನ್ನೂ ಹೆಚ್ಚುವೇದಗಳನ್ನು ಕಲಿಯುವೆನು" ಎಂದರು.ಆಗ ಇಂದ್ರನು ಅವರಿಗೆ ವೇದಮಯವಾದ ಮೊರು ಬೆಟ್ಟಗಳನ್ನು ತೋರಿಸಿ,ಒಂದೊಂದರಿಂದಲೂ ಒಂದೊಂದು ಮುಷ್ಟಿಯಷ್ಟನ್ನು ಮಾತ್ರಾ ತೆಗೆದುಕೊಂಡು ಅವರಿಗೆ ತೋರಿಸುತ್ತಾ "ನೋಡು ಭರದ್ವಾಜ ಇವು ವೇದಗಳು.ಇವು ಅನಂತವಾಗಿವೆ,ನೀನು ಮುನ್ನೂರು ವರ್ಷಗಳಲ್ಲಿ ಕಲಿತದ್ದು ಈ ಮೋರುಮುಷ್ಟಿಯಷ್ಟು ಮಾತ್ರಾ.ಉಳಿದದ್ದನ್ನು ಕಲಿಯುವುದು ಯಾವಾಗ.?ಎಂದು ತಿಳಿಸಿದನಂತೆ.ಆದ್ದರಿಂದ ವೇದವು ಇಷ್ಟೇ ಎಂದು ಹೇಳಲಾಗದು.ಅದು ಅನಂತ ವಾಗಿದೆ.
         ನಮ್ಮ ಬುದ್ಧಿ ಮಟ್ಟದಲ್ಲಿ ಯೋಚಿಸಿದಾಗ 'ವೇದ' ಗಳು ಒಬ್ಬನೇ ಬರೆದ ಕೃತಿಗಳಲ್ಲ.'ವೇದಯುಗ' ಒಂದು 'ಕಾಲಘಟ್ಟ'.(ವೈದಿಕಯುಗ.) ಇದು ಹಲವು ನೂರು (ಸಾವಿರ.?)ವರ್ಷಗಳ ಕಾಲ ಮುಂದುವರಿದಿರ ಬಹುದು.ಋಷಿ,ಮುನಿಗಳು,ಗುರುಕುಲಗಳಲ್ಲಿ ತಮ್ಮ ಪಾಂಡಿತ್ಯ-ತಪೋಬಲಗಳಿಂದ ಕಂಡುಕೊಂಡ "ಸತ್ಯ"ಗಳ ಸಾಹಿತ್ಯ ರಾಶಿಗಳೇ ವೇದಗಳು.ಹಲವರು ಬರೆದ ಹಲವಾರು ವಿಷಯ ವೈವಿಧ್ಯಗಳುಳ್ಳ ಈರಾಶಿಯನ್ನು ವಿಭಾಗಿಸಿ ವಿಷಯಗಳಿಗೆ ಅನುಗುಣವಾಗಿ ವಿಂಗಡಿಸಿ ಸಮಾಜಕ್ಕೆ ನೀಡಿದ ಮಹನೀಯರುಗಳೇ "ವೇದವ್ಯಾಸ"ರುಗಳು.ವ್ಯಾಸರೆಂದರೆ ಒಬ್ಬರಲ್ಲ ಹಲವರು ಎಂಬ ವಾದವೂ ಇದೆ.ಈ ಬಗ್ಗೆ ವೇದಾಧ್ಯಯನ ಸಂಪನ್ನರಾದ 'ಮಹನೀಯರು'ಗಳು ನಮಗೆ ಮಾರ್ಗದರ್ಶನ ನೀಡಬೇಕಾಗಿ ನಮ್ರ ವಿನಂತಿ.




   ವೇದಗಳ ವಿಂಗಡನೆ,ಉಪನಿಷತ್ತುಗಳು,ವೇದಗಳಲ್ಲಿ ಏನಿದೆ.ಚತುರ್ವೇದಗಳು-ದಶೋಪನಿಷತ್ತುಗಳು;ನಮ್ಮ ಹೆಮ್ಮೆಯ ಸಾಹಿತ್ಯಗಳು.ವೈದಿಕ ಸಾಹಿತ್ಯ ಮತ್ತುಸಂಸ್ಕೃತಿ.ಹೀಗೆ ವಿಷಯದ ಹರವು (ವ್ಯಾಪ್ತಿ)ತುಂಬಾವಿಶಾಲವಾಗಿದೆ.ಸಹೃದಯರು ಬರೆಯಬೇಕಾಗಿ ವಿನಂತಿ. ಸಾಹಿತ್ಯ ಮತ್ತು ಸಂಸ್ಕೃತಿ> ಎಂದು ವಿಶ್ಲೇಷಿಸಿದರೆ>ಸಾಹಿತ್ಯ ಮತ್ತು ಸಂಸ್ಕೃತಿಗಿರುವ ಸಂಬಂಧವನ್ನು ವಿವರಿಸಿ, ವಿಮರ್ಶಿಸಭೇಕಾಗುತ್ತದೆ.ಸಾಹಿತ್ಯ-ಸಂಸ್ಕೃತಿ ಎಂದಾದರೆ ಸಾಹಿತ್ಯ ಅಂದರೇನು.?ಸಂಸ್ಕೃತಿ ಅಂದರೇನು.? ಎಂದು ವಿವರಿಸಿ,ಮತ್ತೆ ಅವುಗಳಿಗಿರುವ 'ಪೂರಕ ಸಂಬಂಧ'ವನ್ನು ವಿಮರ್ಶಿಸಬೇಕು.ಇಲ್ಲಿ ಒಂದು ಸಲ ಸಾಹಿತ್ಯದ ಬಗ್ಗೆ ವಿಮರ್ಶೆ ನಡೆದಿದೆ ಆದ್ದರಿಂದ 'ಸಂಸ್ಕೃತಿ'ಬಗ್ಗೆ ನನ್ನ ಅಭಿಪ್ರಾಯವನ್ನು ಪ್ರಸ್ತುತ ಪಡಿಸುತ್ತಿದ್ದೇನೆ.ವಿದ್ವಾಂಸರ ಕ್ಷಮೆ ಕೋರಿ........ಸಂಸ್ಕೃತಿ=ತಿದ್ದಿದ ನಡವಳಿಕೆ,ಮನಸ್ಸಿನ ಪಕ್ವತೆ,ಸಭ್ಯತೆ,ಸೌಜನ್ಯ,ಇತ್ಯಾದಿ ಅರ್ಥಗಳಿವೆ.ಶಬ್ಧಾರ್ಥಕ್ಕಿಂತ ರೂಢಿಯಲ್ಲಿ (ಬಳಕೆ)ರುವ ಅರ್ಥಕ್ಕೆ ಒತ್ತು ಕೊಡುವ ದೃಷ್ಟಿ ಯಿಂದ 'ಸಂಸ್ಕೃತಿ'ಶಬ್ಧ 'ಶಬ್ಧ ದ ಪ್ರಯೋಗವನ್ನು ಗಮನಿಸಿ:-ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಸಾಂಸ್ಕೃತಿಕ ಕಾರ್ಯಕ್ರಮ,ಸಿಂಧೂ ಕಣಿವೆ,ಮೊಹೆಂಜದಾರೋ-ಹರಪ್ಪ,ವೇದಕಾಲದ'ಸಂಸ್ಕೃತಿ'.ದ್ರಾವಿಡ-ಆರ್ಯರ 'ಸಂಸ್ಕೃತಿ'>ಇಲ್ಲಿ ನಾಗರೀಕತೆ,ಜನಜೀವನ,ಆಚಾರ ವಿಚಾರಗಳು,ಸಾಹಿತ್ಯ,ಕಲೆ,ವಿಜ್ಞಾನ ಎಲ್ಲವನ್ನೂ ಒಟ್ಟು ಸೇರಿಸಿ 'ಸಂಸ್ಕೃತಿ' ಎಂದು ಕರೆಯಲಾಗುತ್ತಿದೆ.ಸಂಸ್ಕಾರ ಹೊಂದಿದ ಕೃತಿ=ಸಂಸ್ಕಾರ ಹೊಂದಿದ ಜೀವನ ಪದ್ಧತಿಯೇ ''ಸಂಸ್ಕೃತಿ''.=ನಾಗರಿಕತೆ.
  ಇಂಗ್ಲಿಷಿ ನಲ್ಲಿ Culture ಎಂಬ ಪದಕ್ಕೆ 'ಸಂಸ್ಕೃತಿ'ಎಂದೂ, Civilization ಎಂಬ ಪದಕ್ಕೆ 'ನಾಗರಿಕತೆ' ಎಂದೂ ಪರ್ಯಾಯ ಪದಗಳು ಈಗ ನಮ್ಮಲ್ಲಿ ಬಳಕೆಯಲ್ಲಿದೆ.ಇಂಗ್ಲಿಷ್ ಶಬ್ದಕ್ಕೆ ಮೊಲವು ಲ್ಯಾಟಿನ್ ಭಾಷೆಯ Cultus(ಕಲ್ಟಸ್) ಎಂಬ ಪದ.ಈ ಪದಕ್ಕೆ,1. ಗೌರವಿಸುವಿಕೆ,ನಿಷ್ಠೆ,ದೀಕ್ಷೆ, ಮುಂತಾದ ಅರ್ಥಗಳ ಜೊತೆಗೆ 2. ಕೃಷಿ,ಬೆಳೆ ಬೆಳೆಸುವುದು,ಭೂಮಿ ದೇವಿಯ ಆರಾಧನೆ,ಮುಂತಾದ ಅರ್ಥಗಳಿವೆ.ಮೊದಲನೆಯ ಅರ್ಥವು ರೂಪಾಂತರ ಹೊಂದಿ,"ಒಳ್ಳೆಯ ತಿಳಿವು,ಒಳ್ಳೆಯ ಭಾವನೆ ಮತ್ತು ಒಳ್ಳೆಯನಡವಳಿಕೆ-ಇವುಗಳನ್ನು ತನ್ನ ಅಂತರಂಗ -ಬಹಿರಂಗ ಗಳಲ್ಲಿ,ವೈಯಕ್ತಿಕ ಮತ್ತು ಸಾಮಾಜಿಕ ಬಾಳಿನಲ್ಲಿ ರೂಪಿಸಿ ಕೊಳ್ಳುವುದು"ಎಂಬ ಅರ್ಥದಲ್ಲಿ ಈಗ ಬಳಕೆಯಲ್ಲಿದೆ. 'ಸಂಸ್ಕೃತಿ'ಎಂಬ ಶಬ್ದಕ್ಕೆ 'ಸಂಸ್ಕಾರ' ಎಂಬ ಶಬ್ಧ ವೂ ಹೆಚ್ಚು ಸಂವಾದಿ ಯಾಗಿದೆ."ಸಂಸ್ಕೃತಿ"ಯಬಗ್ಗೆ ಪೂಜ್ಯ ಡಿ.ವಿ.ಜಿ,ಯವರು ತಮ್ಮ'ಕೃತಿಶ್ರೇಣಿ' ಯಲ್ಲಿ ಹೀಗೆ ಹೇಳಿದ್ದಾರೆ........... "ಸಂಸ್ಕೃತಿ"ಯಬಗ್ಗೆ ಪೂಜ್ಯ ಡಿ.ವಿ.ಜಿ,ಯವರು ತಮ್ಮ'ಕೃತಿಶ್ರೇಣಿ' ಯಲ್ಲಿ ಹೀಗೆ ಹೇಳಿದ್ದಾರೆ........... 
 "ಸಂಸ್ಕೃತಿ" ಎಂಬುದು ಒಂದು ಬಗೆಯ ಆತ್ಮಶಿಕ್ಷಣ.ಅದು ಬರಿಯ ಮನಸ್ಸಿನ ವ್ಯಾಪಾರವಲ್ಲ ಅಥವಾ ಬರಿಯ ವ್ಯಾಪಾರವಲ್ಲ ಅಥವಾ ಬರಿಯ ಸ್ಮೃತಿ ಶಕ್ತಿಯ ವ್ಯಾಪಾರವೂಅಲ್ಲ.ಅದು ಮನಸ್ಸು,ಬುದ್ಧಿ,ಸ್ಮೃತಿ ಇವೆಲ್ಲಕ್ಕೂ ಸ್ವಾಮಿಯಂತಿರುವ ಜೀವಾತ್ಮನಿಗೆಸೇರಿದ್ದು. ಕಾಡಿನಲ್ಲಿರುವ ಸಂಪಿಗೆ,ಕೇದಿಗೆ,ಮಲ್ಲಿಗೆ,ಪಾದರಿ,ಸುರಗಿ,ಹೊನ್ನೆ ಮುಂತಾದ ನೂರಾರು ಜಾತಿಯ ವನಪುಷ್ಪಗಳ ಸೌರಭಕಣಗಳನ್ನು ಗಾಳಿಯು ಒಂದಾಗಿ ಬೆರೆಸಿ,ದೂರದಲ್ಲಿರುವವನಿಗೆ ಹೆಸರಿಸಲಾಗದ ಒಂದು ವಿಜಾತೀಯ ಪರಿಮಳಭಾರವನ್ನು ಬೀರುತ್ತದೆ.ಕಾಡುಬೆಟ್ಟಗಳಲ್ಲಿರುವ ಹಲವು ಹದಿನಾರು ಮೊಲಿಕೆಗಳ ಸಾರವನ್ನು ವೈದ್ಯನು ಪುಟಪಾಕದಲ್ಲಿರಿಸಿ ಒಂದೇ ಹೊಸ ಸಂಜಿವಿನೀ ರಸವನ್ನಾಗಿ ಇಳಿಸುತ್ತಾನೆ. ಸಂಸ್ಕೃತಿ ಎಂಬುದೂ ಹಾಗೆಯೇ.ಸಂಗೀತ ಸಾಹಿತ್ಯಾದಿ ನಾನಾ ಕಲಾನುಭವಗಳ ಮತ್ತು ನಾನಾ ಶಿಕ್ಷಣಗಳ ಫಲಿತಾಂಶಗಳ ಸಾರಸಮ್ಮೇಳನ ಅದು...........  


ಮಾನ್ಯ ಶಂಕರ ಭಟ್ಟರಿಗೆ ಅಭಿನಂದನೆಗಳು.....




‌‌‌‌‌‌‌‌‌‌‍**॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑**


ಸಂಸ್ಕೃತಿ 

      - ಸಾಹಿತ್ಯ 

         ಒಂದು ಮಂಥನ (ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ )

       ಕಬ್ಬಿಣದ ಕಡ್ಳೆಯನ್ನು ಅಗಿಯಲು ಕೊಟ್ಟಿದ್ದಾರೆ!!! ತುಂಬಾ ಗಟ್ಟಿ!!! ಕಾರಣಅದರೊಟ್ಟಿಗೆ ಸ್ವಲ್ಪ ಚುರುಮುರಿ :- ಏನಂದರೆ,ಈಗ ನಾವು ಬಹುತೇಕರು ತಿಳಿದೂ ಏಕವಚನ-ಬಹುವಚನ ಪ್ರಯೋಗಗಳನ್ನು ಹೇಗೆ ಮಾಡುತ್ತಿದ್ದೇವೆ? ಸಾಮಾನ್ಯ ನಿಯಮ: ಒಂದಿದ್ದರೆ:ಏಕವಚನ ಒಂದಕ್ಕಿಂತಾ ಹೆಚ್ಚಿದ್ದರೆ ಬಹುವಚನ, ಅಲ್ಲವೇಕನ್ನಡದಲ್ಲಿ:::: ನಾವು ಸಾಮಾನ್ಯವಾಗಿ ಗೌರವ ಸೂಚಕ ಎಂಬ ಅಭಿಧಾನದಲ್ಲಿ ಯಾರ್ಯಾರಿಗೋ ಬಹುವಚನ ಪ್ರಯೋಗ ಮಾಡಬೇಕಾದ ಅನಿವಾರ್ಯ ಇದೆ.{ ( ಮುಂದೆ ಆಗುವ ಅಚಾತುರ್ಯವನ್ನು ನೆನೆದರೆ ಭಯವಾಗತ್ತದೆ ಇರಲಿ)ಸಾಹೇಬರು, ಪೂರ್ವಪರಿಚಿತರಲ್ಲದವರು,ಒಟ್ಟಾರೆ ಮನದಲ್ಲಿ ಗೌರವ ಭಾವ ಸ್ಫುರಿಸಿದವರು,ಹಿರಿಯರು,ಗುರುಗಳುಇತ್ಯಾದಿ} ಅದರಂತೆ

ಬಹು ವಚನಕ್ಕೆ ಯೋಗ್ಯರಾದ ಅನೇಕರನ್ನು ಏಕ ವಚನದಲ್ಲೇಸಂಬೋಧಿಸುತ್ತೇವೆ.{(ಹೇಗೆ ಮಾತಾಡಿಸುವುದೂ ಮೊದಲು ಬ.ವ. ಪ್ರಯೋಗಿಸಿ 'ದೇವರೇ' 'ನೀನೇ' ಕಾಪಾಡಬೇಕು ಎಂದು ಅಸಂಬದ್ಧವಾಗಿ ಪ್ರಲಾಪಿಸುತ್ತೇವೆ ಇರಲಿದೇವರಲ್ಲವೇ ಸುಧಾರಿಸಿಕೊಳ್ತಾನೆ,ಪಿತೃಗಳು,-ಇಲ್ಲೂ ಒಳಗೊಂದು ಹೊರಗೊಂದು ಎಲ್ಲರೆದುರಿಗೆ-ನಮ್ಮ ತಂದೆಯವರು, ಅವರ ಮುಂದೆ ನೀನು ತಾನು!,ಮನೆಯ ಹಿರಿಯರು ಅಣ್ಣ-ಅಕ್ಕ- ಇತರರು,} ಹೇಗೆ ಸಂಭಾಳಿಸುವುದು ಇದನ್ನಎಂದು ತಿಳಿಯದೇ ಪಾಣಿನಿಯಿಂದಾರಂಭಿಸಿ ಶಬ್ದಮಣಿಯವರೆಗೆ ಸವೆಸಿದರೂ ಇನ್ನೂಗೊಂದಲವೇ? ..................ಎಂತಾ ಸಂಸ್ಕಾರ ಅಲ್ಲವೇ? ನಮ್ಮ ಸಂಸ್ಕೃತಿಯ ಮೂಲ ಸ್ರೋತವೇ ಇದು!! ಯೆಷ್ಟೇ ದೊಡ್ಡವರಾಗಿರಲಿ ನಮ್ಮಆಂತರ್ಯಕ್ಕೆ ಅವರನ್ನು ಬರಮಾಡಿಕೊಂಡಾಗ ಮಾತ್ರ ಅವರು ನಾವಾಗಲಿಕ್ಕೆ ಸಾಧ್ಯ ಎಂಬ ಒಳಸುಳಿ ಇಲ್ಲಿದೆ. ನಾವು ಕೆಲವರನ್ನು ಹತ್ತಿರಾಗಿಸಿಕೊಳ್ಳೋದೇ ಹೀಗೆ ನಮ್ಮ ಅಪ್ಪ ಇಲ್ಲಿ ನನಗೆ 'ಅವನು' ಏ.ವ.: ದೇವರ ಮೊದಲು ದೂರ ಇದ್ದರೂ ಆಮೇಲಎಂಬಗೊಂದಲವೇ ಕಾರಣ ಇರಬಹುದೇನೋ ಯೇನಾದರಾಗಲೀ ಒಂದು ಹೊತಾಕಿ ಬಿಡೋಣ ಎಂದಿರಬಹುದು.) ದೇವರು,-ಅಯ್ಯೋ...ಶಿವನೇ ...ಅವನು ನಮ್ಮವನೇ ಆಗಿದ್ದಾಗ ಮಾತ್ರ ಸಾ-ಯುಜ್ಯ ಸಾಧ್ಯ..! ಅಲ್ಲವೇ..?... ಯೆಲ್ಲೋ ಇರುವ ನಿಮ್ಮನ್ನೆಲ್ಲಾ ನಾನು 'ಅಣ್ಣಾ' 'ಎನ್ನುವುದೂ ಇದಕ್ಕಾಗೇ ಅಲ್ಲವೇ ಹತ್ತಿರಾಗೋಣ !!! ಎಂಥಾ ಮಾಧುರ್ಯವಿದೆ,ಸ್ನಿಗ್ಧತೆಯಿದೆ,ಆತ್ಮಿಕ ಭಾವವಿರುತ್ತದೆ ಅಲ್ಲವೇ?ಇಲ್ಲಿಯೂ ನೀವು ತಾವು ಬನ್ನಿ ಹೋಗಿ : ಏಕೆ ದುಶ್ಶಾಸನ ಸೀರೆಯೆಳೆವಾಗ ಕೂಗಿದ ದ್ರೌಪದಿಗೆ ಕೄಷ್ಣ ಬೇಗ ಬರಲಿಲ್ಲ!!! ಏಕೆಂದು ದ್ರೌಪದಿ ಕೇಳಿದ್ದಕ್ಕೆ ಹೇಳಿದನಂತೆ ಪರಮಾತ್ಮ" ತಂಗೀ... ನಿನ್ನೊಳಗೇ ಇರುವ ಈ ಹರಿಯನ್ನು 'ಹೇ ದ್ವಾರಕಾ ವಾಸೀ' ಎಂದು ಬಹು ದೂರ ಕೊಂಡೋಗಿ ಮಡುಗಿದೆಯಲ್ಲಾ!!! ಕರೆಯಬಾರದಿತ್ತೇ ಓ'''ಅಣ್ಣಾ'''' ಎಂದು ಅಂದನಂತೆ ಹಾಗೇ ನಾವು ಬಹುವಚನವೀಯುವ ಭರದಲ್ಲಿ ಸಂಬಂಧಗಳನ್ನೂ ದೂರಮಾಡಿ ಪ್ರಿತಾಪ ಪಡುತ್ತಿರುತ್ತೇವೆ ಅಲ್ಲವೇ..? ಚಿಂತನೆ ಮಾಡಿ. ಪ್ರಕೃತಿಯನ್ನು ತುಂಬಾ ಸಂಸ್ಕರಿಸಲು ಹೋಗಿ ಮಾಡಿಕೊಳ್ಳುವ ಕೆಲ ಅವಾಂತರಗಳ ಸ್ಯಾಂಪಲ್ಲು ಇದು
ಜನ್ಮತಃ ಯಾರೂ ಮಾನವರು ಸಂಸ್ಕೃತರಾಗಿರಲಿಕ್ಕಿಲ್ಲ!!! ಅವರವರ ವೈಯ್ಯಕ್ತಿಕ ಬದುಕಿನ ಒಳಹೊಕ್ಕಾಗ ಅವರಲ್ಲಿರುವ ಪೈಶಾಚ ಭಾವದ ಅನಾವರಣ ತಂತಾನೇ ಆಗಿಬಿಡುತ್ತದೆ. ಸಂ ಘಜೀವನಕ್ಕೆ ಹೊಂದಿಕೊಂಡ ಅವ ಕೇವಲ "ಭಯ"ಕ್ಕೇ ಭಯಬಿದ್ದು ಬದಲಾಯಿಸಿಕೊಳ್ಳುವ, ಅಥವಾ ಹೊಂದಿಕೊಳ್ಳುವ ಸಂಪ್ರದಾಯಕ್ಕೆ ತನ್ನನ್ನು ತಾನು ಪಳಗಿಸಿಕೊಂಡ ಎನ್ನಬಹುದೇ ನೋ.ನಾನು ಈಗ ಕೇವಲ ಭಾರತೀಯ ಸಂಸ್ಕೃತಿಯ ಮೇಲೆ ಮಾತ್ರ ಬರೆಯಬೇಕಾಗಿದೆ,ಏ ಕೆಂದರೆ , ಸಂಸ್ಕೃತಿಯನ್ನು ಸಂಸ್ಕಾರದ ಮೂಸೆಯಲ್ಲಿ ಬೇಯಿಸಲು ತೊಡಗಿದವರು ಮೊದಲು ಭಾರತೀಯರು ಎಂಬುದು ನನ್ನ ನಂಬಿಕೆ. ಸಂಸ್ಕೃತಿಗೂ 'ನಾಗರೀಕತೆಗೂ" ಅಂತರವಿದೆ. ತೋರಿಕೆಯ ಬದುಕು ಬದುಕಲ್ಲ. ಬೌದ್ಧಿಕ ದಿವಾಳಿತನವನ್ನೇ ಹೊದ್ದು ಮಲಗಿದವರೂ ಇಂದು ನಾಗರೀಕರೆನಿಸಿಕೊಂಡುಬಿಟ್ಟಿದ್ದಾರೆ,ನಮ್ಮ ಆರ್ಷ್ಯ ಅನುಭವಗಳು ಕೇವಲ ಭೌತಿಕ ವಾದವ ನ್ನೇ ನೆಚ್ಚಿ ಕುಳಿತಿಲ್ಲ. ನಮ್ಮ ಪರಂಪರೆಯಲ್ಲಿ ಬದುಕಿಗಿಂತ ಹೆಚ್ಚಿನದಾದ ಮಹತ್ವ ಆನಂತರದ ಸ್ಥಿತಿಗೆ ಇದೆ. ನಮ್ಮ ಎಲ್ಲಾ ಪ್ರಕ್ರಿಯೆಗಳೂ ಅಧಿ ಭೌತಿಕ ,ಅಧಿ ದೈವಿಕ, ಅಧ್ಯಾತ್ಮಿಕ ಎಂಬ ತಾ ಪ ತ್ರಯಗಳ ಶಮನೋಪಾಯಕ್ಕಾಗಿಯೇ ನಡೆದುಕೊಂಡು ಬಂದಿವೆ ಸುಕೃತಿಗೆ ಸ್ವರ್ಗ ದುಷ್ಕೃ ತಿಗೆ ನರಕ ಎಂಬ ಭಯ ನಮ್ಮನ್ನಾಳಿಸುತ್ತಿದೆ(ಈಗ ಸ್ವಲ್ಪ ವ್ಯತ್ಯಸ್ತವಾಗಿ ತೋರಿದರೂ 'ಧರ್ಮಕ್ಕೇ ಜಯ' ಎಂಬುದನ್ನು ಅಲ್ಲಗಳೆಯಲಾಗಿಲ್ಲ!!)


    


   ಕೃತಿಕೃತ್, ಕೃ, ಮಾಡು ಆಚರಿಸು, ತೊಡಗು,ಎಂಬ ವಾಚ್ಯಾರ್ಥದಿಂದ ಸ್ಫುರಿತವಾದರೂ, ಸಂಸ್ಕೃತಿ ಎಂಬ ಪದಕ್ಕೆ ಬಂದಾಗ, ಮಾಡಲ್ಪಟ್ಟ ಹಿಂದೆ ಆಚರಿಸಿಕೊಂಡು ಬಂದ,ಇತ್ಯಾದಿ ಧ್ವ್ನನ್ಯರ್ಥಗಳು ಸ್ಫೋಟಗೊಳ್ಳುತವೆ,ಅದೇನೇ ಇರಲಿ. ಸಾಮಾನ್ಯವಾಗಿ ಹೇಳುವುದಾದರೆ- ಕೃತಿ= (ಗ್ರಂಥಾದಿಗಳ ವಿಚಾರದಲ್ಲಿ ಕಾವ್ಯ,ಹೊತ್ತಗೆ,ಗ್ರಂಥ ಇತ್ಯಾದಿ ಬಂದರೂ) ಆಚರಣೆ, ಎಂಬ ಅರ್ಥವೇ ಪ್ರಾಧಾನ್ಯವನ್ನು ಹೊಂದಿದೆ. ಅದೇ ಈ ಆಚರಣೆ ಎಂಬುದು ಸಂಸ್ಕರಿತವಾದಾಗ ಅಂದರೆ ಭೋಜನಯೋಗ್ಯವಾದಾಗ,ಸಾಮಾಜಿಕ ನ್ಯಾಯ,ನಿಸರ್ಗನ್ಯಾಯದ ಮಂಥನದಲ್ಲಿ ಕಡೆಯಲ್ಪಟ್ಟು ನವನೀತವಾದಾಗ ಸಂ'ಸ್ಕೃತಿ ಎನಿಸಿಕೊಳ್ಳುತ್ತದೆ. (ಇಲ್ಲಿ ಸಾಮಾಜಿಕ ನ್ಯಾಯ-ನಿಸರ್ಗನ್ಯಾಯದ ವಿವರಣೆ ಬಲ್ಲವರಾದ ತಮಗೆ ಕೊಡಬೇಕೆನಿಸುವುದಿಲ್ಲ ಗ್ರಾಹಿಗಳಿದ್ದೀರಿ.) 


...... ಸಂಸ್ಕರಿಸಲ್ಪಡುವುದು :-ಕ್ಷೇತ್ರವಾರು {(ಭೌತಿಕ ಮತ್ತು ಬೌದ್ಧಿಕ)ವಿಶಾಲಾರ್ಥವಿದೆ}ಸಂಸ್ಕರಣೆನಡೆದಿದೆ.ಆದರೆ ನನಗನಿಸುವುದೇನೆಂದರೆ ನಾವು ದೊಡ್ಡ ಗುಡ್ಡವನ್ನು ಅಗೆಯುವುದು ಈ ಸಂದರ್ಭದಲ್ಲಿ ಸಮಂಜಸವೆನಿಸುವುದಿಲ್ಲ. ಎರಡುಬಗೆಯ ಸಂಸ್ಕಾರಗಳಲ್ಲಿ ಭೌತಿಕ ಸಂಸ್ಕಾರಕ್ಕೂ ಬೌದ್ಧ್ಹಿಕ ಸಂಸ್ಕಾರದ ತಳಹದಿಯೇ ಇರುವುದರಿಂದ ಆ ಕ್ಷೇತ್ರದ ವಿಷ್ಯದಲ್ಲಿ ಚಿಂತನೆ ನಡೆಸುವುದು ಸೂಕ್ತವೆನಿಸುತ್ತಿದೆ.


........... ಮಾನವ ಎಂದು ನಾನು ಹೇಳಿದಂತೇ ಕೇಳದವರೂ ಇದ್ದಾರೆ ಇಲ್ಲಿ ಎಂದು ಅರಿತಾಗ, ಈ ಪಂಚಭೂತಗಳಿಗೆ ಭಯಪಡಬೇಕಾಯಿತೋ ಅಂದಿನಿಂದ ಪ್ರಕೃತಿಯನ್ನು ಯಥಾವತ್ತಾಗಿ ಉಪಭೋಗಿಸುವುದಕ್ಕೆ ಹಿಂಜರಿದ.ಹಾಗಾದರೆ ಹೇಗೆ ಮುಂದುವರಿದ..... ತನ್ನ ಬಲಿಯನ್ನು ತನ್ನಿಂದ ತಿನ್ನಲಾಗದು ಎಂಬ ಕಾಲ ಸನ್ನಿಹಿತವಾದಾಗ ಈ ತಿನ್ನುವಿಕೆಗೆ ಅಡ್ಡಿಯಾಗುವದ್ಯಾವುದು ಎಂದು ಕಣ್ಣಾಡಿಸತೊಡಗಿದ. ಅಲ್ಲಿಂದ ಬಲಿಯ ಸಂಸ್ಕಾರ ಪ್ರಾರಂಭವಾಯ್ತು.......'ಬೆಂಕಿ,ನೀರು,,ಗಾಳಿ,ಭೂಮಿ,ಆಕಾಶ' ಇವುಗಳಿಂದ ಜನ್ಯವಾದುದನ್ನು ಸಂಸ್ಕರಿಸತೊಡಗಿದ........ ಈ ವಿಚಾರವನ್ನು ಪ್ರಸ್ತಾಪಿಸುವ ಮೊದಲೇ ಮುಖ್ಯವಾದ ಒಂದು ವಿಷಯವನ್ನರುಹುವುದು ಸೂಕ್ತ ಅದೆಂದರೆ ನಮಗೆ ಗೊತ್ತಿರುವ ಎಲ್ಲ ಚರಾಚರಗಳೂ ಗೋಚರಿಸಲ್ಪಡುವುದು-ಪಡುತ್ತಿರುವುದು. ಮೂರು ರೂಪಗಳಲ್ಲಿ ಅದೆಂದರೆ :-೧) ಪ್ರಕೃತಿ:-೨) ಸಂಸ್ಕೃತಿ:-೩) ವಿಕೃತಿಈ ಮೂರನ್ನೂ ಅರಿತ ಮಾನವ ಮೂರೂ ರೂಪಗಳ ಕೃತಿಗೆ ಕೈಹಾಕಿದ!! ಮೂರೂ ರೂಪದಲ್ಲಿ ಭೋಜನಕ್ಕೆ ಸಿದ್ಧನಾದ!!!


}ಮುಂದುವರೆದು................................................       ಜಗತ್ತ್ತಿನ ಸರ್ವೋತ್ಕೄಷ್ಟವಾದುದು ಎಲ್ಲ ಕಡೆಯಿಂದ ಹರಿದು ಬರಲೀ, ಎಂಬ ಸದುದ್ದೇಶವಿರಿಸಿಕೊಂಡ ಭಾರತೀಯ ಮನಸ್ಸು ಹೊರಗಿನ ಅನೇಕ ಸಂಸ್ಕಾರಗಳನ್ನು !! ತನ್ನದಾಗಿಸಿಕೊಂಡಿದ್ದು ಬಹುತೇಕ ಸಾಹಿತ್ಯದ ಮೂಲಕವೇ ಅಲ್ಲವೇ? ಪಾಶ್ಚಿಮಾತ್ಯ(ಪಾಶ್ಚಾತ್ಯವಲ್ಲ!!) ಪೌರ್ವಾತ್ಯ , ದಾಕ್ಷಿಣಾತ್ಯ, ಮತ್ತು ಔತ್ತರೇಯ ವಿಧಿ ವಿಧಾನಗಳ ಸಮ್ಮೇಳನ ಆಗಿದ್ದು ಸಾಹಿತ್ಯದಿಂದಲೇ ಅಲ್ಲವೇ.... ಈ ಸಾಹಿತ್ಯ-ದರ್ಶನಗಳಲ್ಲೂ ಸಾಮಾಜಿಕ ಸಂಸ್ಕಾರಕ್ಕೆ ಒತ್ತು ಕೊಟ್ಟವು, ವೈಯ್ಯಕ್ಕ್ತಿಕ ಸಂಸ್ಕಾರಕ್ಕೆ ಒತ್ತು ಕೊಟ್ಟವು, ಜೀವನ ದರ್ಶನ ಮಾಡಿಸಿದವು, ಮಾನಸಿಕ ವಿಭ್ರಮತೆಯನ್ನು ಹೋಗಲಾಡಿಸಿದವು , ವೈಚಾರಿಕ ದೃಷ್ಟಿಕೋನವನ್ನು ಜಾಗೃತಗೊಳಿಸಿದವು,ಇದೆಲ್ಲಕ್ಕಿಂತ ಅಭಿವ್ಯಕ್ತಿ ಮತ್ತೂ ಉತ್ತದಾಯೀ ಸಂಸ್ಕಾರವನ್ನು ಬೆಳೆಸಿದಂಥವು ಎಂದು ವಿಂಗಡಿಸಿ ನೋಡಿದರೆ ಕಾಲೀನ ಸಂಸ್ಕಾರಗಳನ್ನು ಸಾಹಿತ್ಯಗಳೇ ಬೆಳಕಿಗೆ ತರುವಲ್ಲಿ ಅದನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದೇ ನನ್ನ ಅಂಬೋಣ ಇದರೊಟ್ಟಿಗೆ..... ಪ್ರಕೃತಿಯನ್ನು ಸಂಸ್ಕಾರಗೊಳಿಸಿ ಸಂಸ್ಕೃತಿಯ ನಾವೀನ್ಯವನ್ನು ತುಂಬುವುದಕ್ಕಾಗಿಯೇ ಅನೇಕ ಸಾಹಿತ್ಯ 'ಪ್ರಕಾರಗಳ' ಉಗಮವಾಯಿತು ಎನ್ನಬಹುದು. ಹಾಗೆ ಮಾಡುವಾಗ ಮನುಷ್ಯಸಹಜವಾದ ಕುತೂಹಲವೋ,ಅವನಲ್ಲಡಗಿದ ಪೈಶಾಚೀ ಭಾವದ ಆವಿರ್ಭಾವವೋ ವಿಕೃತಿಯೂ ಓನಾಮ ಹಾಡಿತು.ಅಸಂಬದ್ಧಗಳ ಹುಟ್ಟೂ ಆಯಿತೆನ್ನಿ. ಇಂತಹ ಸಾಹಿತ್ಯಗಳ ರಂಜನಾಗುಣದಿಂದಾಗಿ ಪ್ರಾಚುರ್ಯವನ್ನೂ ಪಡೆಯಿತು.ಅದು ಮಾನವನ ವಿಕೄತ ಭಾವಗಳಿಗೆ ಹೊದೆಸಿದ್ದ ಅವಗುಂಠನವನ್ನು ಕಿತ್ತೆಸೆದು ಕುಣಿಯಲಾರಂಭಿಸಿತು!!!!
        ಇನ್ನೂ ಒಂದಿದೆ,, ನಾವು ಗಮನಿಸಿದಂತೆ ಅನೇಕ ಸಂಸ್ಕಾರಗಳು ಭಾಷೆಯ ಬಂಧನಕ್ಕೊಳಪಟ್ಟಿವೆ, ಭಾಷೆ ತನ್ನ ನಿರಂತರತೆಯನ್ನು ಕಳೆದುಕೊಂಡಾಗ ಸಂಸ್ಕಾರಗಳೂ ತಮ್ಮ ಮಹತ್ವವನ್ನು ಕಳೆದುಕೊಂಡಿದ್ದು ಐತಿಹ್ಯಗೋಚರ.ಬ್ರಾಹ್ಮೀ,ಪೈಶಾಚೀ,ಪ್ರಾಕೃತ,ಪಾಳಿ,ಸಂಸ್ಕೄತ,ಮತ್ತು ಸಂಸ್ಕೃತ ಜನ್ಯ ದೇಶ್ಯ ಭಾಷೆಗಳನ್ನು ಅವಲೋಕಿಸಿದಾಗ ಆಯಾ ಭಾಷೆಯ ಉಚ್ರಾಯಕಾಲದ ಸಾಹಿತ್ಯಗಳು ಸಮಕಾಲೀನ ಸಂಸ್ಕೃತಿಯನ್ನು ಮನಂಬುಗುವಂತೆ ವರ್ಣಿಸಿದ್ದು ಕಂಡುಬರುತ್ತದೆ(ಇದಕ್ಕೆ ಹೆಚ್ಚು ವಿವರಣೆ ಕೊಡುವುದು ಬೇಡಾ ಎಂದೆನಿಸುತ್ತಿದೆ)
ಹೀಗೇ ಬರಬರುತ್ತ ಆದೇಶ ಸಾಹಿತ್ಯಗಳ ಕಠೋರತೆಯು ಕರಗಿ ರಮ್ಯ ಸಾಹಿತ್ಯ-ಕಾಂತಾ ಸಂಹಿತೆಯು ಆವಿರ್ಭವಿಸಿತು. ಇದು ಸಂಸ್ಕೃತಿಯನ್ನು ಇನ್ನೊಂದು ರೀತಿಯಲ್ಲಿ ಬೆಳೆಸಿತಾದರೂ, ಪ್ರಭುತ್ವರಹಿತರಿಂದಾಗಿ ಸಾಮಾಜಿಕ ಪರಿವರ್ತನೆಯ ಹಾದಿಯನ್ನು ಕವಲೊಡೆಸಿತು ಎನ್ನಬಹುದು {ಹೀಗೇ ಬರಬರುತ್ತ ಆದೇಶ ಸಾಹಿತ್ಯಗಳ ಕಠೋರತೆಯು ಕರಗಿ ರಮ್ಯ ಸಾಹಿತ್ಯ-ಕಾಂತಾ ಸಂಹಿತೆಯು ಆವಿರ್ಭವಿಸಿತು. ಇದು ಸಂಸ್ಕೃತಿಯನ್ನು ಇನ್ನೊಂದು ರೀತಿಯಲ್ಲಿ ಬೆಳೆಸಿತಾದರೂ, ಪ್ರಭುತ್ವರಹಿತರಿಂದಾಗಿ ಸಾಮಾಜಿಕ ಪರಿವರ್ತನೆಯ ಹಾದಿಯನ್ನು ಕವಲೊಡೆಸಿತು ಎನ್ನಬಹುದು}ಮುಂದು ವರೆದಿದ್ದು......................................................... 


ಈ ಕೃತಿಗೂ, ಕೃಷಿಗೂ ಅವಿನಾಭಾವ ಸಂಬಂಧವನ್ನು ಭಾರತೀಯ ಮನದಲ್ಲಿ ಕಾಣುತ್ತೇವೆ. ಅದರಂತೆ ವೇದದಲ್ಲಿ "ಸೀರಾ ಯುಜಂತಿ ಕವಯೋ ಯುಗಾ ವಿ ತನ್ವತೇ ಪೃಥಕ್.. ಧೀರಾ ದೇವೇಷು ಸುಮ್ನಯೌ" ಮುಂತಾದ ಮಂತ್ರಗಳು ಆ ಕಾಲದ ಸಂಸ್ಕೄತಿಯೊಡನೆ ಕೃಷಿಯೂ, ಕಾವ್ಯ ಪಟುತ್ವವೂ ಬೆಸೆದುಕೊಂಡಿರುವುದನ್ನು ತೋರಿಸುತ್ತದೆ. ಇದರ ಅರ್ಥವಿವರಣೆ ನನಗೆ ತಿಳಿದಂತೆ, ನನ್ನ ಪುಟ್ಟ ಮೆದುಳಿಗೆ ಹೊಳೆದಂತೆ, ಕೊಡುತ್ತೇನೆ ( ದೇವೇಷು ಧೀರಾಃ ಕವಯಃ= ಪ್ರಭುತ್ವವುಳ್ಳವರು/ಬುದ್ಧಿವಂತರು,:ಸೀರಾ ಯುಜಂತಿ= ನೇಗಿಲನ್ನು ಕಟ್ಟಿ ಉಳುಮೆ ಮಾಡುತ್ತಾರೆ; ಯೇಕೆಂದರೆ, ಸುಮ್ನಯೌ= ಸುಖ ಪ್ರಾಪ್ತಿಗಾಗಿ ; ಯುಗಾ ಪೃಥಕ್=ಬೇರೆ ಬೇರೆಯಾದ ಎತ್ತುಗಳಿಗೆ ಒಂದೇ ನೊಗವೂಡಿ : ವಿತನ್ವತೇ = ಹೇರುತ್ತಾರೆ  ಉಳುತ್ತಾರೆ ) ವಾಚ್ಯಾರ್ಥ :- ಜಾಣ್ರಾದವರು ತಮ್ಮ ಐಹಿಕ ಸುಖಕ್ಕಾಗಿ ಕೃಶಿಯಂಥಾ ಕೆಲಸಗಳಲ್ಲಿ ತೊಡಗುತ್ತಾರೆ,ಅದಕ್ಕಾಗಿ ನೇಗಿಲಿಗೆ ಜೋಡಿ ಎತ್ತುಗಳನ್ನು ಹೂಡಿ ಉಳುಮೆ ಮಾಡುತ್ತಾರೆ ; ..........................




( ಈ ವೇದ ಭಾಗ ಕೃಷಿಗೆ ಸಂಬಂಧಿಸಿದ್ದೇ ಆದರೂ ಇದನ್ನು ಆರೋಪ ಮಾಡಿಕೊಳ್ಳ ಬೇಕು)