प्रज्वालितॊ ज्ञानमयप्रदीपः

ಬುಧವಾರ, ಜುಲೈ 16, 2014

ಕನ್ನಡ ಮೇಘದೂತ

ನನ್ನ ಆತ್ಮೀಯರಾದ, ಗುರುಗಳೂ ಆದ ಕುಮಟಾದ ಬಾಳಿಗಾ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾಗಿ ತಮ್ಮ ಕೈಂಕರ್ಯವನ್ನು ನಡೆಸಿಕೊಂಡು ಬಂದ ಶ್ರೀ ವಿ.ಆರ್. ಜೋಶಿಯವರು ರಚಿಸಿದ ಮಹಾ ಕವಿ ಕಾಲಿದಾಸ ವಿರಚಿತ ಮೇಘದೂತದ ಕನ್ನಡ ಭಾವ ಕಾವ್ಯವನ್ನು ಇಲ್ಲಿ ಪ್ರಸ್ತುತಿ ಪಡಿಸಲು ನನಗೊಂದು ಹೆಮ್ಮೆ.
*********************************************************
||ಪೂರ್ವ ಮೇಘ||

ಯಕ್ಷನೋರ್ವ ಅಲಕ್ಷದಿಂದ ತನ್ನ ಕೆಲಸ ಮರೆಯೆ
ಅಗಲಿದನು ಪ್ರಿಯೆಯ ವರುಷದವಧಿ ಭರ್ತೃ ಶಾಪ ಉರಿಯೆ|
ಭೂಮಿಜೆಯು ಮಿಂದ ನೆರಳಿಂದ ಮಂದವಾಗಿರ್ದ ತಾಣದಲ್ಲಿ
ವಸತಿ ಹೂಡಿದನು ಪುಣ್ಯ ತೀರ್ಥದಾ ರಾಮ ಗಿರ್ಯಂಗಳಲ್ಲಿ||01||

ಕೆಲವು ತಿಂಗಳನು ಕಳೆದನಲ್ಲಿ ಪ್ರಿಯತಮೆಯ ಅಗಲಿ ಆತ
ಅಯ್ಯೋ! ಸೊರಗಿದನು ಕಡಗ ಕಳಚಿ ಬರಿದಾಗೆ ಕೈಯ್ಯ ಸೋತ|
ಆಷಾಢಮಾಸದಾ ಮೊದಲನೆಯ ದಿನ ಗಿರಿಯನಪ್ಪೆ ಮೋಡ
ಕಂಡು ಬಂದಿತೋ ಕೋಟೆ ಒಡೆಯುವಾ ಮದ್ದಾನೆಯಂತೆ ಕಾಡ||02||

ತಾಳ್ಮೆಗೆಡಿಸಿದಾ ಮೋಡ ಕಂಡು ಧನಪತಿಯ ಪುರುಷನಂದು
ಎಂತೊ ಎಂತೋ ಕಣ್ಣೀರ ನುಂಗಿ ಬಹುಕಾಲ ಅಲ್ಲಿ ನಿಂದು|
ಮೋಡ ಕಂಡಾಗ ಸಖಿಯ ಹೃದಯವೂ ಬೇರೆ ಬಗೆವುದೇಕೋ
ಹತ್ತಿರದ ನಲ್ಲೆ ಮತ್ತಿರಲು ದೂರ ಬವಣೆ ಬೇಡ ಸಾಕೋ||03||

ಬಂತು ಶ್ರಾವಣಾ ಬದುಕಬೇಕು ಪ್ರಿಯೆ ಎಂಬ ಇಚ್ಛೆ ಧರಿಸಿ
ತನ್ನ ಅರ್ತಿಯನು ಮೋಡದೊಡನವನಂದೆ ಕಳಿಸ ಬಯಸಿ|
ಅದೆ ಆಗ ಬಿರಿದ ಬೆಟ್ಟಮಲ್ಲಿಗೆಯ ತಾನರ್ಘ್ಯ ಕಲ್ಪಿಸುತ್ತಾ
ಒಲವು ಉಲಿಯುತಿಹ ಮಾತನಾಡಿ ಸ್ವಾಗತವ ಗೈದನತ್ತ||04||

ಮಂಜು, ಮರುತ, ಉರಿ, ಸಲಿಲದಿಂದ ಕೂಡಿದ್ದ ಮೇಘವೆತ್ತ
ತೀಕ್ಷ್ಣ ಇಂದ್ರಿಯದ ಪ್ರಾಣಿಗಳೆ ಒಯ್ವ ಪ್ರೇಮ ಸಂದೇಶವೆತ್ತ|
ಅರಿಯದಂತೆರವ ಮೋಡದೊಡನಿಂತು ಬೇಡಿಕೊಂಬೆ ನಾನು
ಪ್ರಿಯೆಯನಗಲಿದವರ್ ಜಡ-ಚೇತನದಿ ಭೇದ ಕಾಂಬರೇನು||05||

ವಿಧಿವಶದಿ ನಲ್ಲೆ  ಅಗಲಿದ್ದ ನಾನು ಬೇಡಿಕೊಂಬೆ ಮೇಘ
ಪುಷ್ಕರಾದಿ ಜನಮಾನ್ಯ ವಂಶದಲಿ ಹುಟ್ಟಿ ನೀನಮೋಘಾ|
ಕಾಮರೂಪಿ ನೀ ಇಂದ್ರನಧಿಕಾರಿ ಎಂಬುದನ್ನು ಬಲ್ಲೆ
ವ್ಯರ್ಥವಲ್ಲ ಸಜ್ಜನರ ಅರ್ಥಿ ಅಧಮ ಸಿದ್ಧಿ ಬಲ್ಲೆ||06||

ದುಃಖಾರ್ತ ಜನಕೆ ರಕ್ಷಕನು ನೀನು ಅಲಕೆಗೋಗು ಮೇಘ
ಧನಪತಿಯ ಶಾಪದಿಂದಗಲಿದ ಪ್ರಿಯೆಗೆ ಮಾತು ತಿಳಿಸೊ ಬೇಗ|
ಉದ್ಯಾನದೊಳಗೆ ಶಿವನ ಶಿರದ ಶಶಿಕಳೆಯಬೆಳಕಿನಿಂದ
ಕಾಂಬ ಅರಮನೆಯ ಯಕ್ಷರಧಿಪನದು ಸಾಗು ಅಂದದಿಂದ||07||

ಪವನ ಪಥವನ್ನು ಬರೆ ನೀನು ಮುಂಗುರುಳ ಮೇಲೆ ಎತ್ತಿ
ಪಥಿಕವನಿತೆಯರು ಬಯಕೆಗೂಡಿ ನೋಡುವರು ಏರ ಹತ್ತಿ|
ನಿನ್ನ ದರ್ಶನದೆ ಯಾರು ತಾನೆ ಇಹರು ಪ್ರಿಯೆಯ ಬಿಟ್ಟು
ಪರರ ಹಂಗಿನಲಿ ದಿನನೂಕುತಿರುವ ನನ್ನಂಥ ಜೀವಿ ಬಿಟ್ಟು||08||

ಸುಶೀಲೆ ಬಾಲೆ ನಿರತಳಲ್ಲಿ ದಿನಗಳನು ಎಣಿಸುವಲ್ಲಿ
ಸಖನೆ ಅತ್ತಿಗೆಯ ಹೋಗಿ ನೋಡು ನಿರ್ವಿಘ್ನ ಮಾರ್ಗದಲ್ಲಿ|
ಕುಸುಮ ಕೋಮಲವು ನಾರಿ ಹೃದಯವು ವಿರಹದಲ್ಲಿ ಕಳಚಿ-
ಬೀಳದಂತೆ ಮೇಲೆತ್ತಿ ಹಿಡಿಯುವುದೆ ಕೂಡುವಾಸೆ ಸುರುಚಿ||09||

ಅನುಕೂಲ ಗಾಳಿ ಬೀಸಿ ನಿನ್ನನ್ನು ನೂಕುತಿರಲು ಮುಂದೆ
ಆಪ್ತ ಚಾತಕವು ಎಡಕೆ ಕೂಗುವುದು ಮಧುರ ಧ್ವನಿಯಲಿಂದೆ|
ಬೆದೆಯ ಬಯಸಿ ಬೆಳ್ವಕ್ಕಿ ತೋರಣದ ತೆರದಿ ಬಾನಿನಲ್ಲಿ
ಹಾರಿ ಸುಂದರನೆ..! ನಿನ್ನನನುಸರಿಸಿ ಬಂದಾವು ದಾರಿಯಲ್ಲಿ||10||










ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ