प्रज्वालितॊ ज्ञानमयप्रदीपः

ಶುಕ್ರವಾರ, ಜೂನ್ 27, 2014

ಮೋಹಿನಿ ಆಟಂ...!!


ಈ ಘಟನೆ ನೋಡಿದಾಗ ನನ್ನ ಒಂದು ಹಳೆಯ ನೆನಪು ಮತ್ತೆ ನೆನಪಿಗೆ ಬಂತು..
ನಾನಾಗ ತೋಟದ ಕೆಲಸ ಮಾಡಿಕೊಂಡು ಊರಿಲಿದ್ದೆ.. ಗೊಬ್ಬರಕ್ಕೆ ಬೇಕಾದ ಸೊಪ್ಪು ದೆರಕು ಇವನ್ನೆಲ್ಲಾ ದೂರದ ಚೆಂದಾವರ ಬೆಟ್ಟದಿಂದ ತಲೆಯಲ್ಲಿ ಹೊತ್ತು ತಂದು ಹಾಕಬೇಕಿತ್ತು.. ನನ್ನಂತೆ ಊರಿನ ಅನೇಕ ಗಂಡಸರು ಹೆಂಗಸರು ಹೆಮ್ಮಕ್ಕಳು ಬೆಳಗಿನ ಜಾವ ಸುಮಾರು ಮೂರು ಘಂಟೆಯಲ್ಲೇ ಮನೆಯಿಂದ ಹೊರಟು ಬೆಟ್ಟ ಸೇರಬೇಕಿತ್ತು..ಊರಿಂದ ತುಸು ದೂರದಲ್ಲಿ ಸಳ್ಳೇವಾರ ಎಂಬ ಒಂದು ಜಾಗೆ. ಅಲ್ಲಿ ಒಂದು ರೀತಿಯ ಬೆಟ್ಟದ ದಾರಿ..ಅಲ್ಲಿ ನಾವು ಗುಂಪು ಗುಂಪಾಗಿ ಹೋಗುತ್ತಿದ್ದೆವು.. ಕೆಲವರ ಕೈಯ್ಯಲ್ಲಿ ಮಡಲ ಸೂಡಿ ಉರಿಯುತ್ತಿತ್ತು ಅದರ ಮಂದ ಬೆಳಕಲ್ಲಿ ಪಯಣ..
ಕೆಲವು ಗುಂಪಿನವರು ಆಗಾಗ ಈ ದಾರಿಯಲ್ಲಿ ಒಂದು ದೆವ್ವ ಇದೆ.. ಮೋಹಿನಿ.. ದೆವ್ವ ಎಂದು ಭಯ ಬೀಳುತ್ತಿದ್ದರು.. ನನಗೆ ಇದುವರೆಗೆ ಕಂಡಿರಲಿಲ್ಲ.. ಅದಕ್ಕೆ ನಾನು ಗುಂಪು ಬದಲಿಸಿದೆ.. ನೋಡೋಣವೆಂದು ಆ ಮೋಹಿನಿಯನ್ನು...
ಎರಡು ದಿನ ಹೀಗೇ ಹೋಗುತ್ತಿದ್ದರೂ ನನಗೆ ಕಾಣಲಿಲ್ಲ.. ಮೂರನೇ ದಿನ ಗುಂಪಿನಲ್ಲಿ ಹೋಗುತ್ತಿರುವಾಘ ದೂರದಲ್ಲಿ ಬಿಳೀ ಮುಸುಕು ಹಾಕಿದ ಒಂದು ಆಕೃತಿ ನನ್ನೊಟ್ಟಿಗೆ ಹೋಗುತ್ತಿದ್ದ ಹೆಣ್ಣೊಬ್ಬಳಿಗೆ ಕಂಡು ಅವಳು ನನಗೆ ತೋರಿದಳು.. ನೋಡಿದರೆ ಹೆಣ್ಣಿನ ಹಾಗೇ ನಡಿಗೆ.. ತಲೆಯಿಂದ ಕಾಲಿನ ವರೆಗೂ ಬಿಳೀ ಬಟ್ಟೆ...ಮಸುಕು ಚಿತ್ರಣ..! ಹಾಗೇ ಮೆಲ್ಲಗೆ ಗುಂಪಿನಿಂದ ಹಿಂದೆ ಸರಿದು.. ನನ್ನ ನಡಿಗೆಯನ್ನು ನಿಧಾನ ಮಾಡಿದೆ...!!ಗುಂಪಿನ ಬೆಳಕಿನಿಂದ ತುಸು ದೂರಾದೆ.. ಮೋಹಿನಿಯ ಹತ್ತಿರಕ್ಕೆ ಬಂದೆ...!!!
ಇನ್ನೇನು ತೀರಾ ಹತ್ತಿರವಿರುವಾಗ.. ಮೋಹಿನಿ ಓಲಾಡಿಕೊಂಡು ಹಿಂದೆ ನೋಡದೇ ಹೋಗುತ್ತಿರುವುದು ಕಣ್ಣಿಗೆ ಕಂಡಿತು..ಮುಖ ಕಾಣುತ್ತಿರಲಿಲ್ಲ...! ನನ್ನ ಕೈ.. ತನ್ನಲ್ಲಿದ್ದ ದೆರಕು ಒಟ್ಟು ಮಾಡುವ ಕವಕೋಲನ್ನು ಗಟ್ಟಿಯಾಗಿ ಹಿಡೀದಿತ್ತು..! ಹತ್ತಿರ ..ತೀರಾ ಹತ್ತಿರ... ಇನ್ನೇನು ಮೋಹಿನಿ ಕೈಗೆ ಸಿಕ್ಕೇ ಬಿಟ್ಟಳು ಎನ್ನುವಾಗ ಕವಕೋಲು... ಆ ಮೋಹಿನಿಯ ಕುಂಡೆಗೆ ರಟ್...!! ಅಂತ ಒಂದು ಬಿಟ್ಟಿತು... ಯೆವ್ವಾ.....!!! ಎಂದು ಒಂದೇ ಉಸುರಿಗೆ ಓಡಿ ಮರೆಯಾಯಿತು...! ನಾನೂ ಓಡಬೇಕೆಂದು ಕೊಂಡರೂ ಬೆಳಕು ಸಾಕಾಗಲಿಲ್ಲ ದಾರಿಯಿಂದ ಕೆಳಕ್ಕೆ ಹೋಗಲಿಲ್ಲ..ಮುಂದೆ ಹೋಗಿ ಗುಂಪನ್ನು ಸೇರಿಕೊಂಡೆ... ಗುಂಪಲ್ಲಿ ಏನನ್ನೂ ಹೇಳಲಿಲ್ಲ... ಮೋಹಿನಿ ಓಡಿ ಹೋಯಿತು ಎಂದಷ್ಟೇ ಹೇಳಿದೆ....
ಬೆಟ್ತಕ್ಕೆ ಹೋಗಿ ದೆರಕು ತುಂಬಿಕೊಂಡು ಬೆಳಿಗ್ಗೆ ನಾವೆಲ್ಲಾ ಬಂದೆವು... ಊರಿಗೆ ಬಂದು ದೆರಕು ಗೊಬ್ಬರ ಕುಳಿಗೆ ಹಾಕಿ ಮನೆಯ ಹತ್ತಿರದ ಡಾ|| ಗಣಪಜ್ಜ( ಆವಾಗಿನ ನಮ್ಮೂರಿನ ಒಳ್ಳೇ ವೈದ್ಯರು) ನ ಮನೆಗೆ ಕೂಲಿ ಕೆಲಸಕ್ಕೆ ಹೋದೆ.. ಅಲ್ಲಿ ಅವರ ಮನೆಯಲ್ಲಿ ಕಮಲಕ್ಕ ಕೊಟ್ಟ ದೋಸೆ ತಿನ್ನುತ್ತಿರುವಾಗ ಒಂದು ನಾಯ್ಕನ ಹುಡುಗ ಕುಂಡೆ ನೀವಿಕೊಳ್ತಾ.. ಅಲ್ಲಿಗೆ ಡಾಕ್ಟರ್ ನೋಡಲು ಬಂದ...
ಬಂದ ಹುಡುಗನನ್ನು ಗಣಪಜ್ಜ..ಏನಾಯ್ತೋ.. ಎಂದು ಕೇಳಿದಾಗ .. ವಡ್ಯಾ.. ನಿನ್ನೆ ಸಂಜೆ ಹೊತ್ತೀಗೆ ಬೇಲಿ ಕಟ್ಟಬೇಕೂ ಅಂತ ತೋಟದಲ್ಲಿ ಬಿದ್ರ ಗಳು ಕಡೀತಾ ಇದ್ದೆ.. ಒಂದು ಬಿದ್ರು ಬಂದು ಹೊಡದುಬುಡ್ತು.. ..ಶಿಕ್ಕಾಬಟ್ಟೆ ನೋವು.. ಜರ ಬಂದಾಂಗ್ ಆಗಬುಟ್ತದೆ.. ಅಂದ.. ಕುಂಡಿ ತಿಕ್ಕಿಕೊಳ್ಳುತ್ತಾ... ಹೆತ್ತರಿಕೆ.... ಆಗ ನಾನೆಂದೆ......ಹುಡುಗಾ... ನೀ ಆ ಸಳ್ಳೇವಾರದ ನಾಗಪ್ ಗೊಡನ ಮಗ ಅಲ್ವಾ..?...ಹೌದೆಂಬಂತೆ ತಲೆಯಾಡಿಸಿದ...!! ಮೋಹಿನಿ... ಕಣ್ಣೆದ್ದುರೇ ಕಂಡಿದ್ದೆ..!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ