प्रज्वालितॊ ज्ञानमयप्रदीपः

ಮಂಗಳವಾರ, ಜುಲೈ 29, 2014

ಗಾಯತ್ರೀ ಮಂತ್ರ...ಭಾಗೋತ್ರ ಮನೆ ಮುಂಜಿ...!!!

ಗಾಯತ್ರೀ ಮಂತ್ರ...ಭಾಗೋತ್ರ ಮನೆ ಮುಂಜಿ...!!!
"ಯೇ.. ತಮಾ.. ಅಥೋ ನೀ ಇನ್ನೂ ಇಲ್ಲೇ ಇದ್ಯನೋ.... ಈವತ್ತು ಓ ಆ ಭಾಗೋತ್ರಮನೆ ,ಮಾಣಿ ಮುಂಜಿ ಇದ್ದಲೋ .. ಅಷ್ಟಲ್ಲಗಿದ್ದೇ ಹೇಳಿಕ್ ಹೋಯ್ದ.. ಉಂಬ್ಲಕ್ಕಾದ್ರೂ ಹೋಗ್ ಬರವೋ  ಶಿಕ್ಕಾಪಟ್ಟೆ ಖರ್ಚ್ ಮಾಡಿ ವಂದ್ ಮಾಣಿ ಮುಂಜಿ ಮಾಡ್ತಾ ಇದ್ದಾ ಭಾಗೋತಣ್ಣ..... " ಅಪ್ಪಯ್ಯ ಬಚ್ಚಲಕೊಟಗಿಂದಾ ಕೂಗತಾ ಬಂದ... ಅಂಗೋಸ್ತ್ರ ಪಂಜಿ ಗಳವೀಗೆ ಹರಗತಿದ್ದಾಗ ಮಾಣಿ ..."ಆತೋ ಅಪ್ಪಯ್ಯಾ ... ಯಾನೇ ಹೋಗವನಾ.. ನೀ ಹೋದ್ರೂ ಅಕ್ಕಾಗಿತ್ತಾ..ಯೆನಗಿನ್ನೂ ಗಡ್ಡ ಮಾಡಕ್ಯಂಡು ಮಿಂದಕಂಡು ಹೋಪಲ್ಲೀವರೆಗೆ ಮೂರ್ತ ಮುಗೂದು ವಂದೇ ಅಲ್ಲ... ಉಂಡೂ ಆಗೋಗ್ತೋ...".. ಆದ್ರೂ ಮಾಣಿಗೆ ಅವರಮನೆ ಮುಂಜಿಗೆ ಹೋಪ್ ಮನಸಿದ್ದು... ಎಂತಕ್ಕೆ ಅಂದ್ರೆ  ಅಕ್ಕಯ್ಯನ್ ಮನೆ ಸಾವಿತ್ರಿನೂ ಭಾಗೋತಣ್ಣನ್ ಮನೆ ಮುಂಜಿಗೆ ಹೋಪ್ಲಕ್ಕೇ ಹೇಳಿ ಮನ್ನೆ ಕುಮಟಿಂದಾ ಹೊಸಾ ಪಲಕು ಪಲಿಕಾರ ತಗಬಂಜು...ಅಂತೂ ಕಂಡ್ರೂ ಕಾಣದಾಂಗ್ ಮೀಶೆಲೇ ನೆಗೆ ಹೊಡೆತಾ ಮಾಣಿ ಮಿಂದಕಂಡು ಮುಂಜೀಗೆ ಹೋಪ್ಲೆ ತಯಾರಾದ.. ಆಯಿ ಅಡಗೆ ಮನಿಂದಾ "ತಮಾ ದೊಡ್ ಕಡತ್ನದ್ ಮುಂಜಿ ಮಾಡತ್ನಡಾ ಭಾಗೋತಣ್ಣ.. ಹಾಂಗಾಘಿ ಚೊಲೋ ಉಡಿಗೆರೆನೇ ತಗಂಡ್ ಹೋಗೋ" ಹೇಳಿ ಕೂಗಿ ಹೇಳತು.. ತಂಗಿ ಅದಾಗ್ಲೇ ಪೆಟಗಿಂದಾ ಅಪ್ಪಯ್ಯಂಗ್ ಬಂದ್ ಉಣ್ಣೇ ಶಾಲ್  ತೆಗದು ಪ್ಲೇಸ್ಟೀಕಿನ್ ಕೊಟ್ಟೆ ವಳಗೆ ತುಂಬಿ ತಗಬಂದು ಹಕ್ಕೆ ಹೊಳ್ಳಿ ಮೇಲೆ ಇಟ್ಟಿಕ್ ಹೋತು.. ಅದನ್ನ ಹಿಡಕಂಡು ಬಿಶೂಲಾಲ್ಲೇ ಮಾಣಿ ಮುಂಜಿ ಮನೆ ಕಡೆಗೆ ಹೋದ..
 ಅಲ್ ನೋಡೀರೆ ಇಡೀ ಅಂಗಳಕ್ ಸೋಂಗೆ ತಟ್ಟಿ ಕಟ್ಟಿ ಮಾಯಿನ್ ತುಮಕೆ ತೋರಣ ಹಾಕಿದ್ದೋ...!! ಮನೆ ಹಿಂದ್ ಬದಿಂದಾ ಹೊಗೆ ಯೋಳ್ತಾ ಇದ್ದಿದ್ ಕಾಣ್ತು..!! ಅಡುಗೆ ತಯ್ಯಾರಿ ಜೋರೇ ಇದ್ದಕು.. ತೋರಣದ ಬಾಗಲಲ್ಲಿ ಚಪ್ಪಲ್ ರಾಶೀ ನೋಡೀರೆ ಯಾನೇ ಒಂದ್ ಸಣ್ ಚಪ್ಪಲ್ ಕಾಯೂ ಅಂಗಡಿ ಮಡಗಿದ್ದಿದ್ರೆ ವಾರದ್ ಖರ್ಚೀಗೆ ಮಾಡಕಳ್ಳಕ್ಕಾಗಿತ್ತು ಅಂಬ ಕಾಣ್ತು.. ಆನಮನೀ ಜನ!!... ಅಂತೂ ಮಾಣಿ ಕೈಕಾಲಿಗೆ ಅಲ್ಲೇ ದಳ್ಳೇಲಿ ನೀರ್ ತುಂಬಿ ಅಡುಗೆ ಮನೆ ಕಾಯ್ ಕೆರದ್ ಗೆರಟೆ ಹಾಕಿಟ್ಟಿದ್ರಲ್ಲೇ ನೀರ್ ಮೊಗದಿ ಸುರಕಂಡ ..ಬಾಯಿ ಮುಕ್ಕಳಿಸೂಲೆ ಮನಸ್ ಬಂಜಿಲ್ಲೆ.. ಇಡೀ ನೀರ್ ಕಾಯಿ ಕೆರೆ ಸುಳಿ ತುಂಬಿದ್ದು.. ವನ್ನಮನೀ ಅಕ್ಕಚ್ಚನ್ ಬಾನಿ ಆದಾಂಗ್ ಆಗೋಜು.. ಎಣ್ಣೆ ನೆಂಯಕಲು..ಥೂ.. ಬೇಡ ಹೇಳಿ ಬಾಯಿಗೆ ನೀರ್ ತಾಗಸಿದ್ನಿಲ್ಲೆ.. ಅಂತೂ ಚೆಪ್ಪರದ್ ವಳಗೆ ಹೋದ..
ಅಥೋಥೋಥೋ.. ಏನ್ ಜನ ಮುಂಜೀಗೆ.. ಸುತ್ ಇಪ್ಪತ್ ಹಳ್ಳೀ ಜನ ಬಂಜೋ.. ಎರಡೆರಡು ವಾದ್ಯ ಮೇಳ .ಒಂದು ಭಂಡಾರಕ್ಕಳದ್ದು ಪಂಚವಾಲಗ.... ಇನ್ನೊಂದು ಪಾತ್ರೋನ್ ನಾಯಕಂದು ಬೇಂಡ್ ವಾದ್ಯ...!!
 ಮುಹೂರ್ತ ಮುಗದ್ದು..ಭಟ್ಟಕ್ಕೋ ದಕ್ಷಿಣೆ ತಗಂಡು ಅಂಗಿ ಶಿಗಸಾಯಕತ್ತಾ ಇದ್ದಿದ್ ನೋಡೇ ಅನಕಂಡ..ಅಲ್ಲೇ ಅಮಿತ ಶಿವಾಹರ ಮಾಡ್ದ.. ಸುಮಾರ್ ಜನ ಫ್ರೆಂಡ್ಸು ಸಿಕ್ಕದೋ.. ಮೊಬಾಯಲಲ್ಲಿ ಫೇಸ್ ಬುಕ್ಕಲ್ಲಿ ವಾಟ್ಸಾಪ್ಪಲ್ಲಿ ಕಂಡೋರೆಲ್ಲಾ ಕೆಲೂ ಜನ ಮುಂಜೀ ಮನೆಲೂ ನಿಜ ಮೊಕ ತೋರದೋ.. ಮೆಸೇಜ್ ಕಳಸದ್ದು ಯಾನೇಯಾ ಹೇಳಿ ಆ ಕೂಸಿಗೆ ಹ್ಯಾಂಗ್ ಗುತ್ತಾದಿಕ್ಕೋ ಹೇಳಿ ಪಕ್ಕದ ಮಾಣಿ ಕೇಳಿ ತೆಳಕಂಡ..!! ಉಂಬ್ಲಕ್ ಬಾಳೆ ಹಾಕೂದು.. ಕಸ ಗುಡಸೂಲೆ ಗಾಮೊಕ್ಕಲ್ ಹೆಣ್ಣಾಳು ಬಂದೋ ಹಿಡೀಕುಂಟೆ ತಗಂಡು.. ಗುಡಸ್ತಾ ಬಂದಾಗ ಶೆಗಣೀ ಹಾಕಿ ಸಾರಿಸಿದ ಅಂಗಳದಿಂದಾ ಎದ್ ಧೂಳು ಭಟ್ಟಕ್ಕೋ ಬಿಚ್ಚಿಟ್ ಬೆಳೀ ಅಂಗಿ ಶಾಲನ ಮೇಲೆಲ್ಲಾ ಸಮಾ ಕುತಗಂಡತು.. ಇಚಗಿದ್ದೋವು ಅಚಗೆ..ಅಚಗಿದ್ದೋವು ಇಚಗೆ ಹಾರಾಡಿ ಅಂತೂ ಗುಡಸಿ  ಮುಗೀಸಿಕ್ಕಿ ಹೋದೋ..ಮೆತ್ತಿನ್ ಮೇಲೆ ಇಸ್ಪೇಟ್ ಆಡ್ತಾಕುಂತಿದ್ ಅಜ್ಜನ ಮನೆ ಭಾವ.. ಆಚೆ ಮನೆ ಯೆಂಟ್ರೋಣ್ ಭಾವ ಎಲ್ಲಾ ಹಗೂರಕ್ ಕೆಳಗಿಳದು ಬಂದೋ..!!
ಬಾಳೆ ಹಾಕೂಲಾತು.. ಹೇಳಿ ಭಾವಯ್ಯ ತುಪ್ಪದ ಗಿಂಡೀ ಹಿಡಕಂಡೇ ನಿತಗಂಡು ಹೇಳದಾ ಹೇಳಾತು.. ಅಂತೂ ಬಾಳೆ ಬಂತು.. ಪಂಕ್ತಿ ಮೇಲೆ ಬಾಳೆ ಹಾಕಿ ತುಪ್ಪ ಅಭಿಗಾರನೂ ಆಗೋತು.. ಮೂರ್ ಮೂರ್ ನಮನೀ ಪಲ್ಯ.,, ಎರಡು ಚೆಟ್ಣಿ, ಕೋಸಂಬ್ರಿ ಹಪ್ಪಳ ಎಲ್ಲಾ ಬಂತು.. ಎರಡ್ ಸ್ವೀಟು.. .ಮಾಣಿ ಒಂದ್ ಪಂಕ್ತೀಲಿ ಬಾಳೆ ಹಿಡಕಂಡ.. ಎದ್ರ್ ಪಂಕ್ತೀಲಿ ಸಾವಿತ್ರಿ ಹೊಸಾ ಪಲಕು ಪಲಿಕಾರ ಹಾಯಕಂಡು ಕುಂತದ್ದು ಮಾಣಿಗೆ ಸಮಾ ಕಂಡತು...!!
ಅಂತೂ ಭರ್ಜರೀ ಮುಂಜಿ..ಭರ್ಜರೀ ಊಟ.. ಎಲ್ಲರೂ ಭಾಗೋತ್ರ ಮನೆ ಮುಂಜಿ ಅಂದ್ರೆ ಮುಂಜಿ ನೋಡೂ ಹೇಳಿ ಹೇಳ್ ಹೇಳಕಂಡು ಉಡಿಗೆರೆ ಕೊಟ್ಟಿಕ್ ಲಾಡನ ಉಂಡೆ ಪೊಟ್ಳ ಕೈಲಿಡ್ಕಂಡು ಹೋದೋ..
ಮುಂಜಿ ಮಾಣಿ... ಅಂತೂ ದಂಟ್ ಕೋಲ್ ತೆಗದು ವಳಗ್ ಮಡಗಿಕ್ಕಿ.. ಸುತ್ತಿನ್ ಪಂಜಿ ಬಿಚ್ ಹೊಸಾ ಚೆಡ್ಡಿ ಹಾಯಕಂಡ.. ಅವಂಗೂ ಉಂಡಾತು..ಎಲ್ಲಾ ಭಟ್ಟಕ್ಕೋ ಮುಂಜಿ ಮುಗೀಸಕಂಡು ರಸ್ತೆ ಕೂಡದೋ.. ಕಡವಾರದಂಚೀಗೆ ಒಂದ್ ಭಟ್ರು ಪಂಜಿ ಮೇಲೆತ್ತಿ ಕುಂತದ್ದೇ ತಡ ಅಷ್ಟೂ ಜನ ಭಟ್ಟಕ್ಕೋ ಕೆಮೀಗೆ ಜನ್ನಾವರ ಶಿಕ್ ಹಾಯಕಂಡ್ ಕುಂತೋ ಹೇಳಾತು..
..ಅಂತೂ ಸಂಜಾತು.. ಮಾಣಿ ಮುಂಜೀ ಮನೆಲಿ ಸಂಜೆ ಊಟಕ್ ಬಪ್ಪೋರಿಗೆ ಬಡಸೂಲೆ ಹೇಳಿ ಅಲ್ಲೇ ವಳಕಂಡ ..ಸಾವಿತ್ರಿನೂ ಉಪ್ಪು ಉಪ್ಪನಕಾಯಿ ಬಡಸೂಲಾದ್ರೂ ಬೇಕಾಗ್ತು ಹೇಳಿ ಅಲ್ಲೇ ವಳತ್ತು..!!
ಸಂಜಪ್ಪಾಗ ಸಂಧ್ಯಾವನೆ ಮಾಡೋ ಹೇಳಿ ಪುರೋಯ್ತ ಭಟ್ರು ಮುಂಜೀ ಮಾಣೀಗೆ ತಾಕೀತ್ ಮಾಡಿಕ್ ಹೋಜ್ರು.. ಅದು ಮುಂಜಿ ಮಾಣೀ ಅಬ್ಬೆಗೆ ನೆಂಪಿದ್ದು...!! ತಮಾ ಸಂಜಾಗೋತೋ.. ಇಂದ್ ಮುಂಜಿ ಆಗದ್ದು ಬಿಲ್ಯೋ.. ಕೈ ಕಾಲ್ ತೊಳಕಂಡು ಸಂಧ್ಯಾವನೆ ಮಾಡೂಲ್ ಕುತಗ ಅಂತು ಮುಂಜಿಮಾಣಿ ಅಬ್ಬೆ....  ಆಯ್ತ್ ಮಮ್ಮೀ.. ಬಂದೆ ಹೇಳಿಕ್ ಮುಂಜೀ ಮಾಣಿ ಕೈಕಾಲ್ ತೊಳೂಲ್ ಬಚ್ಚಲೀಗ್ ಹೋದ... ಅತೋಪಾ...! ಮಾಣಿ ಬಚ್ಚಲೀಗ್ ಹೋದಾಗ್ಲೇ ಕರೆಂಟ್ ಸುಟ್ಟದ್ದು ಹೋಗವಾ... ಬಚ್ಚಲಲ್ಲಿ ಮಾಣಿ ಕೈಕಾಲ್ ತೊಳೂಲೆ ಹೇಳಿ ಅಲ್ಲಿಪ್ ಒಂದ್ ಬಕೇಟಿಗೆ ಕೈ ಹಾಕದ.. ಕೈಗೆ ಗರಟೆ ಶಿಕ್ಕತು ಅದ್ರಲ್ಲೇ ನೀರ್ ಮೊಗದಿ ಕಾಲೀಗೆ ಹೊಯಕಂಡಾ... ಮೊಕ ತೊಳೂಲೆ ಹೇಳಿ ಗೆರಟೆ ನೀರ್ ಕೈಗ್ ತಗಂಡು ಮೊಕಕ್ ಹಾಕದಾಗಲೇ ಗುತ್ತಾಗದ್ದು..ಥೋ... ಅದು ಮದ್ದೇನಪ್ಪಾಣ್ ತೆಳಿ, ಹಳಸೋದ್ ಹಶಿ, ಕಾಯ್ ಚೆಟ್ಣಿ ಎಲ್ಲಾ ತಗಬಂದು ಹಾಕಿಟ್ ಅಕ್ಕಚ್ಚನ್ ಬಾನಿ...!! ಫೂ.ಫೂ.. ಹೇಳಿ ಹೇಳ್ತಾ ಇರಕ್ಕಾದ್ರೇ ಕರೆಂಟ್ ಬಂತು.. ಹಂಡೆ ನೀರಲ್ಲಿ ಮತ್ ಕೈಕಾಲ್ ತೊಳಕಂಡು ಬಂದು ಮಡಿ ಉಟಗಂಡು ಸಂಧ್ಯಾವನೆಗೆ ಕುಂತ.... ಅಪ್ಪಯ್ಯ.. ಅಲ್ಲೇ ಬಂದ್ ಜನರ ಮಾತಾಡಿಸ್ತಾ ಇದ್ದಿದ್ ನೋಡಿ... "ಅಪ್ಯಾ... ಬೆಳಿಗ್ಗೆ ಪುರೋಯ್ತ ಭಟ್ರು ಗಾಯತ್ರಿ ಹೇಳ್ ಕೊಟ್ಟಿದ್ದಿದ್ರು.. ಅದು ಎನಗ್ ಈಗ್ ಹೇಳ್ ಕೊಡೂ "... ಅಂದ..ಮಗನ್ ಮುಂಜೀಗೆ ಮಾಡದ್ ಸಾಲದ್ ಸುದ್ದೀ ಮಾತಾಡ್ತಾ ಇದ್ ಅಪ್ಪಯ್ಯಂಗೆ ರೇಗಿಹೋತು.. ಬಂದವನೇ ಮಾಣಿ ತಲೆ ಮೇಲೊಂದ್ ಬಿಟ್ಟಾ....!!" ಅಲ್ದೋ.. ಬೆಳಗಾಗಿ ಪುರೋಯ್ತ ಭಟ್ರು ಹೇಳ್ ಕೊಟ್ ಗಾಯತ್ರೀ ಮಂತ್ರಾನೇ ಈಗ್ ನಿನಗೆ ಹಂಬ್ಲಿಲ್ಲೆ ಮತ್ ಹೇಳ್ ಕೊಡೂ ಅಂಬೆ... ಯಾನು..ಈ ಪುರೋಯ್ತ್ ಭಟ್ರ ಅಪ್ಪನ ಕಾಲದಲ್ಲಿ ಮುಂಜಿ ಮಾಡಕಂಡಂವ..ಆವಾಗ್ ಅವರ್ ಹೇಳ್ಕೊಟ್ಟದ್ದು ನಲವತ್ ವರ್ಷಾತು.. ಈಗ್ ಹೇಳ್ ಕೊಡೂ ಅಂದ್ರೆ ಯೆನಗೆಲ್ ನೆಂಪಿದ್ದಾ...ಬೇರೆ ಕೆಲಸಿದ್ದಾ ನೋಡೂ" ಅಂದ..!!
ಅಷ್ಟ್ರಲ್ಲಿ ಸಾವಿತ್ರಿ ದೇವರೊಳಂಗೆ ಹೋತು ಹೇಳಿ ಮಾಣಿನೂ ವಳಗ್ ಬಂದಾ.. ಭಾಗೋತಣ್ಣ.. " ಮಾಣೀ..ನೀ ಬೆಗೇಲಿ ಯೆಮ್ಮನೆ ಮಾಣಿಗೆ ಗಾಯತ್ರೀ ಹೇಳ್ಕೊಡೂ ಮಾರಾಯಾ.. ಆಗ್ಲಿಂದಾ ಅಲಬತಗತ್ತಾ ಇದ್ದಾ " ಹೇಳಿ ಹೇಳ್ದಾಗ ಮಾಣಿ "ಓಂ ಭೂರ್ಭುವಃಸ್ವಃ..... ಹೇಳೂಲ್ ಶುರು ಮಾಡದಾ...

1 ಕಾಮೆಂಟ್‌: