प्रज्वालितॊ ज्ञानमयप्रदीपः

ಬುಧವಾರ, ಜುಲೈ 30, 2014

ಕ್ಷಮಾ ಬಲಮ್|

"ಬ್ರಾಹ್ಮಣಾನಾಂ ಕ್ಷಮಾ ಬಲಮ್"...!
ಲೋಕೋತ್ತರವಾದ ಶಕ್ತಿಯಿದ್ದರೂ ಬ್ರಾಹ್ಮಣನಾದವನಿಗೆ ಕ್ಷಮೆ ಎಂಬುದೇ ಬಲ..
ಮಕ್ಕಳನ್ನು ಕೊಂದು ಆಶ್ರಮವನ್ನು ಸುಟ್ಟು ಕೊಡಬಾರದ ಕಷ್ಟಗಳನ್ನು ವಿಶ್ವಾಮಿತ್ರ ವಸಿಷ್ಟರಿಗೆ ಕೊಟ್ಟಾಗ ಸ್ವತಹ ಕಾಮ ಧೇನುವೇ ವಸಿಷ್ಟರಿಗೆ ಯಾಕೆ ಗುರುವೇ ಇನ್ನೂ ನೋಡುತ್ತಾ ನಿಂತಿದ್ದೀಯಾ.. ನಿನ್ನ ಬಲವನ್ನು ಪ್ರಯೋಗ ಮಾಡು.. ಹೊಸಕಿ ಹಾಕು ಆ ವಿಶ್ವಾಮಿತ್ರನನ್ನ...!! ಎಂದಾಗ ಮಹಾ ಬ್ರಾಹ್ಮಣನಾದ ( ದೇವುಡು ರವರ ಮಹಾಬ್ರಾಹ್ಮಣನನ್ನು ತಲೆಕೆಳಗು ಮಾಡಿದ್ದೇನೆ- ಕೋಣನೆರಡುಂ ಹೋರೆ ಗಿಡಕ್ಕೆ ಮಿಲ್ತು ಎಂಬ ರಾಘವಾಂಕನ ಹರಿಶ್ಚಂದ್ರನ ಹೀನೋಪಮೆಯನ್ನು ಅವಸರಿಸುತ್ತಾ..) ವಸಿಷ್ಟ.. ಹೇಳಿದ್ದು ಇದನ್ನೇ.." ಬ್ರಾಹ್ಮಣಾನಾಂ ಕ್ಷಮಾ ಬಲಮ್"..ಎಂದವನೇ.. ಆ ವಿಶ್ವಾ ಮಿತ್ರನಿಗೆ "ಅಸ್ತು ಸ್ಯಾತ್ ಅಸೌ" ಎಂದು ಹೇಳಿದ್ದೇನು ಗೊತ್ತೇ.. ಅದು ಶಾಪವೇ..? ವರವೇ..?... 
ಥೂ..ಹೋಗು...ಹೋಗು... ಬ್ರಹ್ಮರ್ಷಿಯಾಗು..!!! ಬ್ರಾಹ್ಮಣ್ಯದ ಮೂಲ ಸ್ರೋತವಾದ ಗಾಯತ್ರಿಯು ನಿನ್ನಿಂದಲೇ ಉದ್ಘೋಷಿತವಾಗಿ ಹೋಗಲೀ.."! ಆ ಗಾಯತ್ರಿಯಿಮ್ದಲೇ ಮುಂದೆ ಬ್ರಾಹ್ಮಣರು ಸಂಸ್ಕಾರವನ್ನು ಹೊಂದಲೀ..!!
ಎಂಥಾ.. ಸಾತ್ವಿಕ ಕೋಪ.. ವಸಿಷ್ಠರದ್ದು..
ಮುಂದೆ ವಿಶ್ವಾಮಿತ್ರ ಬ್ರಹ್ಮರ್ಷಿಯಾದ ಹಲುಬಿದ... ಹೂಂಕರಿಸಿದ..|||ತತ್ಸವಿತುರ್ವರೇಣ್ಯಮ್| ಭರ್ಗೋ ದೇವಸ್ಯ ಧೀಮಹೀ| ಧಿ ಯೋ ಯೋ ನಃ ಪ್ರಚೋದಯಾತ್|..!!!!

ಬಲಿ..ಬಲಿ... ಭಜರಂಗ ಬಲಿ...!..ಉತ್ತರೀಯದ ಬಲಿ...

           ಈ ದೇಶದ ಮಹಾ ಚರಿತ್ರೆಗಳಲ್ಲಿ ಬಲಿಯೆಂದುಕೊಂಡವರು ಬಲಿಯಾದವರು ಅನೇಕರಿದ್ದಾರೆ.. ಆದರೆ ನಮ್ಮ ಸನಾತನತೆಯಿಂದ ಮಹಾಬಲಿಯಾದವರು ಈರ್ವರು.... ಅವರಲ್ಲೊಬ್ಬ ಬಲಿ..ವೀರಸೇನ  "ವಿಶ್ವಜಿದ್" ಎಂಬ ಮಹಾ ಯಾಗವನ್ನು ಮಾಡುವುದರ ಮೂಲಕ "ಬಲಿ" "ಮಹಾಬಲಿ" ಎನ್ನಿಸಿಕೊಂಡ...  ಜಗತ್ತನ್ನೇ ಗೆದ್ದಿರುವೆನೆಂಬ ಮಹದಹಂಕಾರಕ್ಕೆ ಬಲಿಯಾದ ಈ ಬಲಿ ತನ್ನ ಅತಿಯಾದ ಆತ್ಮ ವಿಶ್ವಾಸದಿಂದಲೇ ಬಲಿಯಾದ... ಪಾತಾಳ ಸೇರಿ
ಇನ್ನೋರ್ವ ಬಲಿ...ಅವನೇ " ಭಜರಂಗಬಲಿ" ಹನೂಮಂತ....!..ತನ್ನಲ್ಲಿ ಅಗಾಧವಾದ ಶಕ್ತಿಯಿದೆ ಎಂಬುದನ್ನೇ ಅರಿದ ಮಹಾ ಮತಿಯಾದ ಬಲಿ.. ಇಂದ್ರಜಿತ್ ನೊಂದಿಗೆ ಯುದ್ಧ ಮಾಡುವಾಗ ಆಯುಧಗಳಿಲ್ಲದೇ ಕೇವಲ ತನ್ನ ಕೈಗಳಿಂದ  ಇಡೀ ಸೈನ್ಯವನ್ನು ಸೂರೆಗೈದ ಕಲಿ ಹನುಮ.. ಒಂದು ಹಿಡಿಯಲ್ಲಿ ಒಂದು ಆನೆಯನ್ನೂ ಇನ್ನೊಂದು ಕೈಯ್ಯಲ್ಲಿ ಇನ್ನೊಂದು ಆನೆಯನ್ನೂ ಹಿಡಿದು.. ಒಂದಕ್ಕೊಂದು ತಲೆಯನ್ನು ಘಟ್ಟಿಸಿ ಕೊಲ್ಲುತ್ತಾ ಶ್ರೀ ರಾಮನ ವಿಜಯಕ್ಕೆ ಕಾರಣನಾದ ಭಜರಂಗ ಬಲಿ...!!
              ವಿಶ್ವಜಿದ್ ಯಾಗ ಭೂಮಿಯಲ್ಲಿ ತನ್ನ ವಿಶ್ವ ರೂಪವನ್ನು ಪ್ರಕಟಿಸಬೇಕೆಂಬ ಹಂಬಲದಿಂದ ಹೊರಟ ಶ್ರೀಮನ್ನಾರಾಯಣ ವಾಮನನಾಗಿ ಬಾಲ ಬ್ರಹ್ಮಚಾರಿಯಾಗಿ ಭೂಮಿಗಿಳಿಯ ಬೇಕೆಂದುಕೊಂಡ....ಆದರೆ ಪಕ್ಕದಲ್ಲೇ ಇದ್ದ ಲಕ್ಷ್ಮಿ ತಡೆದು ಕೇಳಿದಳು.." ನಾನೂ ಬರುತ್ತೇನೆ... ನಿಮ್ಮೊಂದಿಗೆ"..! ,...."ಛೇ.. ಬ್ರಹ್ಮ ಚಾರಿಯಾಗಿ ದಾನ ಬೇಡುವುದಕ್ಕಾಗಿ ಬ್ರಾಹ್ಮಣ ವೇಶಧಾರಿಯಾಗಿ ಹೊರಟ ನನ್ನೊಂದಿಗೆ ನೀನು ಬರುವುದೇ..?  ಅಂತೂ ಕೊನೆಗೆ ಅಳೆದು ಸುರಿದೂ ಒಪ್ಪಿದ ..ಭಗವಂತ...!  "ನೀನು ನನ್ನೊಮ್ದಿಗೆ ಬಂದರೆ ನೀನು ಕಣ್ಣು ಹಾಕಿದೆಡೆಯೆಲ್ಲಾ ಮಹಾ ಪುಣ್ಯಪ್ರಸಾದ ಆಗುವುದಲ್ಲವೇ ದೇವೀ...? ನೀನು ಬಲಿಯನ್ನು ನೋಡಿದೆ ಎಂದಾದರೆ..ನನ್ನ ಕೆಲಸ ಆದಂತೇ.. ಛೇ.. ಏನು ಮಾಡುವುದು..?" ಎಂಕೊಂಡ....!!
ದೇವಿ ಸಂತೈಸಿ ಹೇಳಿದಳು... ಪ್ರಭೂ.. ನೀನು ಬ್ರಾಹ್ಮಣ ವಟು ವೇಶಧಾರಿಯಾಗಿ ಹೋಗುವೆ ಎಂದೆಯಲ್ಲವೇ.. ನಾನು ನಿನ್ನ ಉತ್ತರೀಯದ ಮರೆಯಲ್ಲಿ ನನ್ನ ಮೂಲ ಆವಾಸಸ್ಥಾನವಾದ ನಿನ್ನ ವಕ್ಷಸ್ಥಲದಲ್ಲೇ ಕುಳಿತು ಬರುತ್ತೇನೆ.. ನಿನಗೇನೂ ತೊಂದರೆ ಇಲ್ಲವಲ್ಲಾ.."  ಅಂತೂ ಪತಿ-ಪತ್ನಿಯರ ಸರಸದಲ್ಲೇ ಬಲಿಯನ್ನು ಬಲಿ ಹಾಕುವುದಕ್ಕಾಗಿ ಪಯಣವಾಯಿತು.. ಲಕ್ಷ್ಮೀ ನಾರಾಯಣರದ್ದು... ಬ್ರಾಹ್ಮಣರು ಉತ್ತರೀಯವನ್ನು ಹೊದೆಯುವುದು ತಮ್ಮಲ್ಲಿರುವ ಅಂತಃಸತ್ವವೆಂಬ ಲಕ್ಷಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಎಂಬುದು ಲೋಕಕ್ಕೆ ತಿಳಿದು ಹೋಯ್ತು..!!
                  ಬಲ ಭಾಗದಲ್ಲಿ ಅವಕ್ರಮದಲ್ಲಿ ಹೊದೆದ ಉತ್ತರೀಯದ ಮರೆಯಿಂದ ಇಣುಕಿ ಇಣುಕಿ ನೋಡುತ್ತಿರುವ ದೇವಿಯನ್ನು ಆಗಾಗ ಉತ್ತರೀಯ ಸರಿ ಮಾಡಿಕೊಳ್ಳುವ ನೆಪದಲ್ಲಿ...!!  {ಭಿಕ್ಷೋಚಿತಂ ಪ್ರಕಟಯನ್ ಪ್ರಥಮಾಶ್ರಮತ್ವಮ್| ಕೃಷ್ಣಾಜಿನಂ ಯವನಿಕಾಂ ಕೃತವಾನ್ ಪ್ರಿಯಾಯಾಃ||}  ತನ್ನ ಉತ್ತರೀಯದಿಂದ ವಕ್ಷಸ್ಥಲದಲ್ಲಿ ಆಸೀನಳಾಗಿರುವ ಶ್ರೀದೇವಿಗೆ ಕೃಷ್ಣಾಜಿನ ವನ್ನು ಅಲ್ಲಲ್ಲಿ ತೆರೆದು   ಲಕ್ಷ್ಮಿಗೆ  ತೋರುವ ಮೂಲಕ ಲೋಕದಲ್ಲಿ ಅಲ್ಲಲ್ಲಿ ಅಲ್ಲಲ್ಲಿ ಅವಳ ದೃಷ್ಟಿ ಬೀಳುಹಾಗೆ ಮಾಡಿ ಈ ಭೂಮಿಯಲ್ಲಿ ಸಂಪತ್ತನ್ನೋ ಪುಣ್ಯ ಸಂಚಯನವನ್ನೋ ಮಾಡಿಸಿದ...ನಾರಾಯಣ..!!! ಬಲಿಯನ್ನೂ ನೋಡಿಬಿಟ್ತಳು..!!ಛೇ.. ಯಾವನ ಅಹಂಕಾರವನ್ನು ಮುರಿದು ತನ್ನ ವಶವರ್ತಿಯಾಗಿ ಮಾಡಿಕೊಳ್ಳಬೇಕೆಂದು ಶ್ರೀಮನ್ನಾರಾಯಣ ಬಯಸಿದ್ದನೋ..ಅವನನ್ನೂ ಲಕ್ಷ್ಮಿ ನೋಡಿದಳೆಂದ ಮೇಲೆ ..ಎಣೆಯುಂಟೇ.... ಅದರ ಫಲ ಆಗಲೇ ಬೇಕಲ್ಲಾ...!! ಹೌದು.. ಬಲಿಯಂಥವನು ತನ್ನ ಶಿರದಲ್ಲಿ ಲೋಕ ಪಾವನನಾದ ಶ್ರೀ ಮನ್ನಾರಾಯಣನ ಪದವನ್ನಿರಿಸಿಕೊಳ್ಳುವ ಯೋಗ ಪ್ರಾಪ್ತವಾಗಲಿಲ್ಲವೇ.... ಇದೇ ಲಕ್ಷ್ಮೀ ಕಟಾಕ್ಷ ಮಹಿಮೆ...!!!!
ವೀರಸೇನ ಮಹಾರಾಜ ಬಲಿಯಾದ..! ಬಲಿಚಕ್ರವರ್ತಿಯಾದ..!!
ಬ್ರಾಹ್ಮಣನ ಉತ್ತರೀಯದ ಮಹಿಮೆ ಲೋಕಕ್ಕೆ ಅರಿವಾಯ್ತು.. !!

ಮಂಗಳವಾರ, ಜುಲೈ 29, 2014

ಅವತಾರದ ಅಂತ್ಯಕ್ಕೆ ಕೃಷ್ಣನನ್ನು ಹುಡುಕುವುದೆಲ್ಲಿ...?

ಒಂದು ಅವತಾರ ಸಮಾಪ್ತಿಯ ಅಂತಿಮ ಕಾಲಕ್ಕೆ, ಒಂದು ಮನಸ್ಥಿತಿಯ ಜನರ ಕೊನೆಗಾಲಕ್ಕೆ ಏನೆಲ್ಲ ಅಪಸವ್ಯಗಳು ಆಗಬಹುದು ಎಂಬುದಕ್ಕೆ ಮಹಾಭಾರತದ ಸ್ವರ್ಗಾರೋಹಣ ಪರ್ವ ದಲ್ಲಿ ಬರುವ ಶ್ರೀ ಕೄಷನ ಕೊನೇಯ ದಿನಗಳು....ಯುದ್ಧದಲ್ಲಿ ಭಾಗವಹಿಸಿದ್ದರೂ ಸಾಯದ ಕೃತವರ್ಮ, ಸಾತ್ಯಕಿ,ದಾರುಕ ಮುಂತಾದ ಯಾದವರು ದ್ವಾರಕೆಗೆ ಹೋಗುವಾಗಲೇ ಯುದ್ಧದ ವೀಕ್ಷಣೆಯ ಪರಿಣಾಮವಾಗಿ ಅವರ ಮನದಲ್ಲಡಗಿದ್ದ ಕೌರವ ಭಾವ ಜಾಗೃತಗೊಂಡು ಮದಿರೆ ಮಾನಿನಿಯರ ತೆವಲಿಗೆ ಬಿದ್ದು ಇಡೀ ಯಾದವ ಕುಲ ಸರ್ವನಾಶದ ಹೆಬ್ಬಾಲಿಗೆ ಬಂದು ಬಿದ್ದಿದೆ..ಅದು ಸಾಲದೆಂಬಂತೇ.. ಸಾಂಬ ಮೊದಲಾದವರು ಪುಂಡು ಪೋಕರಿಗಳಾಗಿ ಅಂಡಲೆಯಲು ಪ್ರಾರಂಭಿಸುತ್ತಾರೆ.. ದಾರಿಯಲ್ಲಿ ಸಿಕ್ಕ ಸಜ್ಜನರನ್ನು ಗೇಲಿಮಾಡುತ್ತಾ ಹೆಂಡದ ಅಮಲಿನಲ್ಲಿ ತೊನೆದಾಡುತ್ತಾ ಬರುತ್ತಿರುವಾಗ ಧೌಮ್ಯ ದೂರ್ವಾಸಾದಿಗಳ ದರ್ಶನವಾಗುತ್ತದೆ.. ಅಜ್ಞಾನದ ಭಾಂಡದಲ್ಲಿ ಅದ್ದಿ ತೆಗೆದಂತಿರುವ ಈ ಪುಂಡರ ಸಮೂಹ ಮಾಡಿದ ಅಚಾತುರ್ಯದಿಂದಾಗಿ ಒನಕೆಯನ್ನು ಹಡೆಯಬೇಕಾಯಿತು..ಕೃತವರ್ಮ ತನ್ನವರೊಂದಿಗೆ ನಡೆಸಿದ ಹೋಳಿ.. ಕೇವಲ ಕಾಮ ದಹನ ಆಗದೇ ಹೆಂಡದ ಅಮಲಿನಲ್ಲಿ ಒನಕೆಯ ಬಡಿಗೆ ಸಿಕ್ಕಾಗ ಏನೇನು ಆಗಬಾರದೋ ಅದೆಲ್ಲವೂ ಆಗಿ ಸರ್ವನಾಶ ಆಗಿ ಹೋಯಿತು.. ಕೃಷ್ಣ ಅಂದು ತನ್ನ ಮಹಾ ಮಾಯೆಯನ್ನು ಕೇಳಿಕೊಂಡನಲ್ಲಾ.. ತಾಯೀ ಸಾಕು.. ಸಾಕು.. ಇಂದಿಗೆ ಮುಗಿಸಿಬಿಡು.. ಎಲ್ಲರೂ ನನ್ನಿಂದ ಆದವರು..ನನ್ನೊಳಗೆ ಹೋಗಿ ಸೇರಿಬಿಡಲೀ.. ಅದಕ್ಕನುವಾಗುವಂತೆ.. ಹೆಂಡದ ಬಾಯಿಗೆ ನೀನು ಮದಿರಾ ದೇವಿಯಾಗಿ ಅವರನ್ನು ಸೇರು.. ನನ್ನ ಕಾಲಿಗೆ ಬೇಡ ಬಿಟ್ಟ ಭಾಣದ ಆಘಾತದಿಂದ ಒಸರುತ್ತಿದ್ದ ನೆತ್ತರು ಕೆಂಪು ದಾಸವಾಳದ ಎಸಳಿನಿಂದ ಮುಚ್ಚಿಕೊಂಡಿದೆ... ಇದು ಮೇಲ್ನೋಟಕ್ಕೆ ತಂಪನ್ನಿತ್ತರೂ.. ಸಹಸ್ರ ಶೀರ್ಷಾ ಪುರುಷಃ, ಸಹಸ್ರಾಕ್ಷಃ ಸಹಸ್ರಪಾತ್.. ಆದ ನನ್ನಲ್ಲಿ ಎಲ್ಲವೂ ತುಂಬಿಕೊಳ್ಲಲೀ....
.....




ಇಂದು ಆ ಕಾಲ ಸನ್ನಿತವಾಗುತ್ತಿದೆಯಾ...ಆದರೆ ಕೃಷ್ಣನಂಥವರನ್ನು ಹುಡುಕುವುದೆಲ್ಲಿ..?

ಗಾಯತ್ರೀ ಮಂತ್ರ...ಭಾಗೋತ್ರ ಮನೆ ಮುಂಜಿ...!!!

ಗಾಯತ್ರೀ ಮಂತ್ರ...ಭಾಗೋತ್ರ ಮನೆ ಮುಂಜಿ...!!!
"ಯೇ.. ತಮಾ.. ಅಥೋ ನೀ ಇನ್ನೂ ಇಲ್ಲೇ ಇದ್ಯನೋ.... ಈವತ್ತು ಓ ಆ ಭಾಗೋತ್ರಮನೆ ,ಮಾಣಿ ಮುಂಜಿ ಇದ್ದಲೋ .. ಅಷ್ಟಲ್ಲಗಿದ್ದೇ ಹೇಳಿಕ್ ಹೋಯ್ದ.. ಉಂಬ್ಲಕ್ಕಾದ್ರೂ ಹೋಗ್ ಬರವೋ  ಶಿಕ್ಕಾಪಟ್ಟೆ ಖರ್ಚ್ ಮಾಡಿ ವಂದ್ ಮಾಣಿ ಮುಂಜಿ ಮಾಡ್ತಾ ಇದ್ದಾ ಭಾಗೋತಣ್ಣ..... " ಅಪ್ಪಯ್ಯ ಬಚ್ಚಲಕೊಟಗಿಂದಾ ಕೂಗತಾ ಬಂದ... ಅಂಗೋಸ್ತ್ರ ಪಂಜಿ ಗಳವೀಗೆ ಹರಗತಿದ್ದಾಗ ಮಾಣಿ ..."ಆತೋ ಅಪ್ಪಯ್ಯಾ ... ಯಾನೇ ಹೋಗವನಾ.. ನೀ ಹೋದ್ರೂ ಅಕ್ಕಾಗಿತ್ತಾ..ಯೆನಗಿನ್ನೂ ಗಡ್ಡ ಮಾಡಕ್ಯಂಡು ಮಿಂದಕಂಡು ಹೋಪಲ್ಲೀವರೆಗೆ ಮೂರ್ತ ಮುಗೂದು ವಂದೇ ಅಲ್ಲ... ಉಂಡೂ ಆಗೋಗ್ತೋ...".. ಆದ್ರೂ ಮಾಣಿಗೆ ಅವರಮನೆ ಮುಂಜಿಗೆ ಹೋಪ್ ಮನಸಿದ್ದು... ಎಂತಕ್ಕೆ ಅಂದ್ರೆ  ಅಕ್ಕಯ್ಯನ್ ಮನೆ ಸಾವಿತ್ರಿನೂ ಭಾಗೋತಣ್ಣನ್ ಮನೆ ಮುಂಜಿಗೆ ಹೋಪ್ಲಕ್ಕೇ ಹೇಳಿ ಮನ್ನೆ ಕುಮಟಿಂದಾ ಹೊಸಾ ಪಲಕು ಪಲಿಕಾರ ತಗಬಂಜು...ಅಂತೂ ಕಂಡ್ರೂ ಕಾಣದಾಂಗ್ ಮೀಶೆಲೇ ನೆಗೆ ಹೊಡೆತಾ ಮಾಣಿ ಮಿಂದಕಂಡು ಮುಂಜೀಗೆ ಹೋಪ್ಲೆ ತಯಾರಾದ.. ಆಯಿ ಅಡಗೆ ಮನಿಂದಾ "ತಮಾ ದೊಡ್ ಕಡತ್ನದ್ ಮುಂಜಿ ಮಾಡತ್ನಡಾ ಭಾಗೋತಣ್ಣ.. ಹಾಂಗಾಘಿ ಚೊಲೋ ಉಡಿಗೆರೆನೇ ತಗಂಡ್ ಹೋಗೋ" ಹೇಳಿ ಕೂಗಿ ಹೇಳತು.. ತಂಗಿ ಅದಾಗ್ಲೇ ಪೆಟಗಿಂದಾ ಅಪ್ಪಯ್ಯಂಗ್ ಬಂದ್ ಉಣ್ಣೇ ಶಾಲ್  ತೆಗದು ಪ್ಲೇಸ್ಟೀಕಿನ್ ಕೊಟ್ಟೆ ವಳಗೆ ತುಂಬಿ ತಗಬಂದು ಹಕ್ಕೆ ಹೊಳ್ಳಿ ಮೇಲೆ ಇಟ್ಟಿಕ್ ಹೋತು.. ಅದನ್ನ ಹಿಡಕಂಡು ಬಿಶೂಲಾಲ್ಲೇ ಮಾಣಿ ಮುಂಜಿ ಮನೆ ಕಡೆಗೆ ಹೋದ..
 ಅಲ್ ನೋಡೀರೆ ಇಡೀ ಅಂಗಳಕ್ ಸೋಂಗೆ ತಟ್ಟಿ ಕಟ್ಟಿ ಮಾಯಿನ್ ತುಮಕೆ ತೋರಣ ಹಾಕಿದ್ದೋ...!! ಮನೆ ಹಿಂದ್ ಬದಿಂದಾ ಹೊಗೆ ಯೋಳ್ತಾ ಇದ್ದಿದ್ ಕಾಣ್ತು..!! ಅಡುಗೆ ತಯ್ಯಾರಿ ಜೋರೇ ಇದ್ದಕು.. ತೋರಣದ ಬಾಗಲಲ್ಲಿ ಚಪ್ಪಲ್ ರಾಶೀ ನೋಡೀರೆ ಯಾನೇ ಒಂದ್ ಸಣ್ ಚಪ್ಪಲ್ ಕಾಯೂ ಅಂಗಡಿ ಮಡಗಿದ್ದಿದ್ರೆ ವಾರದ್ ಖರ್ಚೀಗೆ ಮಾಡಕಳ್ಳಕ್ಕಾಗಿತ್ತು ಅಂಬ ಕಾಣ್ತು.. ಆನಮನೀ ಜನ!!... ಅಂತೂ ಮಾಣಿ ಕೈಕಾಲಿಗೆ ಅಲ್ಲೇ ದಳ್ಳೇಲಿ ನೀರ್ ತುಂಬಿ ಅಡುಗೆ ಮನೆ ಕಾಯ್ ಕೆರದ್ ಗೆರಟೆ ಹಾಕಿಟ್ಟಿದ್ರಲ್ಲೇ ನೀರ್ ಮೊಗದಿ ಸುರಕಂಡ ..ಬಾಯಿ ಮುಕ್ಕಳಿಸೂಲೆ ಮನಸ್ ಬಂಜಿಲ್ಲೆ.. ಇಡೀ ನೀರ್ ಕಾಯಿ ಕೆರೆ ಸುಳಿ ತುಂಬಿದ್ದು.. ವನ್ನಮನೀ ಅಕ್ಕಚ್ಚನ್ ಬಾನಿ ಆದಾಂಗ್ ಆಗೋಜು.. ಎಣ್ಣೆ ನೆಂಯಕಲು..ಥೂ.. ಬೇಡ ಹೇಳಿ ಬಾಯಿಗೆ ನೀರ್ ತಾಗಸಿದ್ನಿಲ್ಲೆ.. ಅಂತೂ ಚೆಪ್ಪರದ್ ವಳಗೆ ಹೋದ..
ಅಥೋಥೋಥೋ.. ಏನ್ ಜನ ಮುಂಜೀಗೆ.. ಸುತ್ ಇಪ್ಪತ್ ಹಳ್ಳೀ ಜನ ಬಂಜೋ.. ಎರಡೆರಡು ವಾದ್ಯ ಮೇಳ .ಒಂದು ಭಂಡಾರಕ್ಕಳದ್ದು ಪಂಚವಾಲಗ.... ಇನ್ನೊಂದು ಪಾತ್ರೋನ್ ನಾಯಕಂದು ಬೇಂಡ್ ವಾದ್ಯ...!!
 ಮುಹೂರ್ತ ಮುಗದ್ದು..ಭಟ್ಟಕ್ಕೋ ದಕ್ಷಿಣೆ ತಗಂಡು ಅಂಗಿ ಶಿಗಸಾಯಕತ್ತಾ ಇದ್ದಿದ್ ನೋಡೇ ಅನಕಂಡ..ಅಲ್ಲೇ ಅಮಿತ ಶಿವಾಹರ ಮಾಡ್ದ.. ಸುಮಾರ್ ಜನ ಫ್ರೆಂಡ್ಸು ಸಿಕ್ಕದೋ.. ಮೊಬಾಯಲಲ್ಲಿ ಫೇಸ್ ಬುಕ್ಕಲ್ಲಿ ವಾಟ್ಸಾಪ್ಪಲ್ಲಿ ಕಂಡೋರೆಲ್ಲಾ ಕೆಲೂ ಜನ ಮುಂಜೀ ಮನೆಲೂ ನಿಜ ಮೊಕ ತೋರದೋ.. ಮೆಸೇಜ್ ಕಳಸದ್ದು ಯಾನೇಯಾ ಹೇಳಿ ಆ ಕೂಸಿಗೆ ಹ್ಯಾಂಗ್ ಗುತ್ತಾದಿಕ್ಕೋ ಹೇಳಿ ಪಕ್ಕದ ಮಾಣಿ ಕೇಳಿ ತೆಳಕಂಡ..!! ಉಂಬ್ಲಕ್ ಬಾಳೆ ಹಾಕೂದು.. ಕಸ ಗುಡಸೂಲೆ ಗಾಮೊಕ್ಕಲ್ ಹೆಣ್ಣಾಳು ಬಂದೋ ಹಿಡೀಕುಂಟೆ ತಗಂಡು.. ಗುಡಸ್ತಾ ಬಂದಾಗ ಶೆಗಣೀ ಹಾಕಿ ಸಾರಿಸಿದ ಅಂಗಳದಿಂದಾ ಎದ್ ಧೂಳು ಭಟ್ಟಕ್ಕೋ ಬಿಚ್ಚಿಟ್ ಬೆಳೀ ಅಂಗಿ ಶಾಲನ ಮೇಲೆಲ್ಲಾ ಸಮಾ ಕುತಗಂಡತು.. ಇಚಗಿದ್ದೋವು ಅಚಗೆ..ಅಚಗಿದ್ದೋವು ಇಚಗೆ ಹಾರಾಡಿ ಅಂತೂ ಗುಡಸಿ  ಮುಗೀಸಿಕ್ಕಿ ಹೋದೋ..ಮೆತ್ತಿನ್ ಮೇಲೆ ಇಸ್ಪೇಟ್ ಆಡ್ತಾಕುಂತಿದ್ ಅಜ್ಜನ ಮನೆ ಭಾವ.. ಆಚೆ ಮನೆ ಯೆಂಟ್ರೋಣ್ ಭಾವ ಎಲ್ಲಾ ಹಗೂರಕ್ ಕೆಳಗಿಳದು ಬಂದೋ..!!
ಬಾಳೆ ಹಾಕೂಲಾತು.. ಹೇಳಿ ಭಾವಯ್ಯ ತುಪ್ಪದ ಗಿಂಡೀ ಹಿಡಕಂಡೇ ನಿತಗಂಡು ಹೇಳದಾ ಹೇಳಾತು.. ಅಂತೂ ಬಾಳೆ ಬಂತು.. ಪಂಕ್ತಿ ಮೇಲೆ ಬಾಳೆ ಹಾಕಿ ತುಪ್ಪ ಅಭಿಗಾರನೂ ಆಗೋತು.. ಮೂರ್ ಮೂರ್ ನಮನೀ ಪಲ್ಯ.,, ಎರಡು ಚೆಟ್ಣಿ, ಕೋಸಂಬ್ರಿ ಹಪ್ಪಳ ಎಲ್ಲಾ ಬಂತು.. ಎರಡ್ ಸ್ವೀಟು.. .ಮಾಣಿ ಒಂದ್ ಪಂಕ್ತೀಲಿ ಬಾಳೆ ಹಿಡಕಂಡ.. ಎದ್ರ್ ಪಂಕ್ತೀಲಿ ಸಾವಿತ್ರಿ ಹೊಸಾ ಪಲಕು ಪಲಿಕಾರ ಹಾಯಕಂಡು ಕುಂತದ್ದು ಮಾಣಿಗೆ ಸಮಾ ಕಂಡತು...!!
ಅಂತೂ ಭರ್ಜರೀ ಮುಂಜಿ..ಭರ್ಜರೀ ಊಟ.. ಎಲ್ಲರೂ ಭಾಗೋತ್ರ ಮನೆ ಮುಂಜಿ ಅಂದ್ರೆ ಮುಂಜಿ ನೋಡೂ ಹೇಳಿ ಹೇಳ್ ಹೇಳಕಂಡು ಉಡಿಗೆರೆ ಕೊಟ್ಟಿಕ್ ಲಾಡನ ಉಂಡೆ ಪೊಟ್ಳ ಕೈಲಿಡ್ಕಂಡು ಹೋದೋ..
ಮುಂಜಿ ಮಾಣಿ... ಅಂತೂ ದಂಟ್ ಕೋಲ್ ತೆಗದು ವಳಗ್ ಮಡಗಿಕ್ಕಿ.. ಸುತ್ತಿನ್ ಪಂಜಿ ಬಿಚ್ ಹೊಸಾ ಚೆಡ್ಡಿ ಹಾಯಕಂಡ.. ಅವಂಗೂ ಉಂಡಾತು..ಎಲ್ಲಾ ಭಟ್ಟಕ್ಕೋ ಮುಂಜಿ ಮುಗೀಸಕಂಡು ರಸ್ತೆ ಕೂಡದೋ.. ಕಡವಾರದಂಚೀಗೆ ಒಂದ್ ಭಟ್ರು ಪಂಜಿ ಮೇಲೆತ್ತಿ ಕುಂತದ್ದೇ ತಡ ಅಷ್ಟೂ ಜನ ಭಟ್ಟಕ್ಕೋ ಕೆಮೀಗೆ ಜನ್ನಾವರ ಶಿಕ್ ಹಾಯಕಂಡ್ ಕುಂತೋ ಹೇಳಾತು..
..ಅಂತೂ ಸಂಜಾತು.. ಮಾಣಿ ಮುಂಜೀ ಮನೆಲಿ ಸಂಜೆ ಊಟಕ್ ಬಪ್ಪೋರಿಗೆ ಬಡಸೂಲೆ ಹೇಳಿ ಅಲ್ಲೇ ವಳಕಂಡ ..ಸಾವಿತ್ರಿನೂ ಉಪ್ಪು ಉಪ್ಪನಕಾಯಿ ಬಡಸೂಲಾದ್ರೂ ಬೇಕಾಗ್ತು ಹೇಳಿ ಅಲ್ಲೇ ವಳತ್ತು..!!
ಸಂಜಪ್ಪಾಗ ಸಂಧ್ಯಾವನೆ ಮಾಡೋ ಹೇಳಿ ಪುರೋಯ್ತ ಭಟ್ರು ಮುಂಜೀ ಮಾಣೀಗೆ ತಾಕೀತ್ ಮಾಡಿಕ್ ಹೋಜ್ರು.. ಅದು ಮುಂಜಿ ಮಾಣೀ ಅಬ್ಬೆಗೆ ನೆಂಪಿದ್ದು...!! ತಮಾ ಸಂಜಾಗೋತೋ.. ಇಂದ್ ಮುಂಜಿ ಆಗದ್ದು ಬಿಲ್ಯೋ.. ಕೈ ಕಾಲ್ ತೊಳಕಂಡು ಸಂಧ್ಯಾವನೆ ಮಾಡೂಲ್ ಕುತಗ ಅಂತು ಮುಂಜಿಮಾಣಿ ಅಬ್ಬೆ....  ಆಯ್ತ್ ಮಮ್ಮೀ.. ಬಂದೆ ಹೇಳಿಕ್ ಮುಂಜೀ ಮಾಣಿ ಕೈಕಾಲ್ ತೊಳೂಲ್ ಬಚ್ಚಲೀಗ್ ಹೋದ... ಅತೋಪಾ...! ಮಾಣಿ ಬಚ್ಚಲೀಗ್ ಹೋದಾಗ್ಲೇ ಕರೆಂಟ್ ಸುಟ್ಟದ್ದು ಹೋಗವಾ... ಬಚ್ಚಲಲ್ಲಿ ಮಾಣಿ ಕೈಕಾಲ್ ತೊಳೂಲೆ ಹೇಳಿ ಅಲ್ಲಿಪ್ ಒಂದ್ ಬಕೇಟಿಗೆ ಕೈ ಹಾಕದ.. ಕೈಗೆ ಗರಟೆ ಶಿಕ್ಕತು ಅದ್ರಲ್ಲೇ ನೀರ್ ಮೊಗದಿ ಕಾಲೀಗೆ ಹೊಯಕಂಡಾ... ಮೊಕ ತೊಳೂಲೆ ಹೇಳಿ ಗೆರಟೆ ನೀರ್ ಕೈಗ್ ತಗಂಡು ಮೊಕಕ್ ಹಾಕದಾಗಲೇ ಗುತ್ತಾಗದ್ದು..ಥೋ... ಅದು ಮದ್ದೇನಪ್ಪಾಣ್ ತೆಳಿ, ಹಳಸೋದ್ ಹಶಿ, ಕಾಯ್ ಚೆಟ್ಣಿ ಎಲ್ಲಾ ತಗಬಂದು ಹಾಕಿಟ್ ಅಕ್ಕಚ್ಚನ್ ಬಾನಿ...!! ಫೂ.ಫೂ.. ಹೇಳಿ ಹೇಳ್ತಾ ಇರಕ್ಕಾದ್ರೇ ಕರೆಂಟ್ ಬಂತು.. ಹಂಡೆ ನೀರಲ್ಲಿ ಮತ್ ಕೈಕಾಲ್ ತೊಳಕಂಡು ಬಂದು ಮಡಿ ಉಟಗಂಡು ಸಂಧ್ಯಾವನೆಗೆ ಕುಂತ.... ಅಪ್ಪಯ್ಯ.. ಅಲ್ಲೇ ಬಂದ್ ಜನರ ಮಾತಾಡಿಸ್ತಾ ಇದ್ದಿದ್ ನೋಡಿ... "ಅಪ್ಯಾ... ಬೆಳಿಗ್ಗೆ ಪುರೋಯ್ತ ಭಟ್ರು ಗಾಯತ್ರಿ ಹೇಳ್ ಕೊಟ್ಟಿದ್ದಿದ್ರು.. ಅದು ಎನಗ್ ಈಗ್ ಹೇಳ್ ಕೊಡೂ "... ಅಂದ..ಮಗನ್ ಮುಂಜೀಗೆ ಮಾಡದ್ ಸಾಲದ್ ಸುದ್ದೀ ಮಾತಾಡ್ತಾ ಇದ್ ಅಪ್ಪಯ್ಯಂಗೆ ರೇಗಿಹೋತು.. ಬಂದವನೇ ಮಾಣಿ ತಲೆ ಮೇಲೊಂದ್ ಬಿಟ್ಟಾ....!!" ಅಲ್ದೋ.. ಬೆಳಗಾಗಿ ಪುರೋಯ್ತ ಭಟ್ರು ಹೇಳ್ ಕೊಟ್ ಗಾಯತ್ರೀ ಮಂತ್ರಾನೇ ಈಗ್ ನಿನಗೆ ಹಂಬ್ಲಿಲ್ಲೆ ಮತ್ ಹೇಳ್ ಕೊಡೂ ಅಂಬೆ... ಯಾನು..ಈ ಪುರೋಯ್ತ್ ಭಟ್ರ ಅಪ್ಪನ ಕಾಲದಲ್ಲಿ ಮುಂಜಿ ಮಾಡಕಂಡಂವ..ಆವಾಗ್ ಅವರ್ ಹೇಳ್ಕೊಟ್ಟದ್ದು ನಲವತ್ ವರ್ಷಾತು.. ಈಗ್ ಹೇಳ್ ಕೊಡೂ ಅಂದ್ರೆ ಯೆನಗೆಲ್ ನೆಂಪಿದ್ದಾ...ಬೇರೆ ಕೆಲಸಿದ್ದಾ ನೋಡೂ" ಅಂದ..!!
ಅಷ್ಟ್ರಲ್ಲಿ ಸಾವಿತ್ರಿ ದೇವರೊಳಂಗೆ ಹೋತು ಹೇಳಿ ಮಾಣಿನೂ ವಳಗ್ ಬಂದಾ.. ಭಾಗೋತಣ್ಣ.. " ಮಾಣೀ..ನೀ ಬೆಗೇಲಿ ಯೆಮ್ಮನೆ ಮಾಣಿಗೆ ಗಾಯತ್ರೀ ಹೇಳ್ಕೊಡೂ ಮಾರಾಯಾ.. ಆಗ್ಲಿಂದಾ ಅಲಬತಗತ್ತಾ ಇದ್ದಾ " ಹೇಳಿ ಹೇಳ್ದಾಗ ಮಾಣಿ "ಓಂ ಭೂರ್ಭುವಃಸ್ವಃ..... ಹೇಳೂಲ್ ಶುರು ಮಾಡದಾ...

ಶುಕ್ರವಾರ, ಜುಲೈ 25, 2014

ಮಗೆಕಾಯಿ ಪುರಾಣ..!!

ಒಂದ್ ಸರ್ತಿ ಅಣ್ಣಯ್ಯ.. ತಂಗಿ ಮನೀಗ್ ಹೋಗ ಅಂತೇಳಿ ತಯಾರಾದ..ಮನೆಯಲ್ಲಿ ಕಳದ್ ಬೇಸಿಗೆಯಲ್ಲಿ ಮನೆ ಗೆದ್ದೆ ಬಯಲಲ್ಲಿ ಬೆಳೆದ್ ಮಗೆಕಾಯಿ ಮೆತ್ನಮೇಲೆ ಗಳಕ್ಕೆ ಕಟ್ಟಿಟ್ಟಿದ್ದು ದಿನಕ್ಕೊಂದೊಂದ್ರಂತೆ ಕೊಳತು ನೀರ್ ಸೋರ್ತಾ ಇರ್ತಿತ್ತು.. ಪ್ರತೀ ದಿನ ಮಗೆಕಾಯಿ ಹುಳಿ, ಶಿಪ್ಪೆ ಗೊಜ್ಜು, ತಿರಳ್ ತಂಬ್ಳಿ.. ಥೋ ಬೇಜಾರ್ ಬಂದೋತು.. ತಂಗೀ ಮನೆಗೆ ನಾಕ್ ಕೊಟ್ಟಿಕ್ ಬತ್ತೆ ಹೇಳಿ ಗನಾಕಿದ್ ನಾಕ್ ಎಮ್ಮೆಕರುನಂಥಾ ಮಗೆಕಾಯಿನ  ಗೋಣಿ ಚೀಲದಲ್ಲಿ ತುಂಬಕ್ಯಂಡು.. ತಂಗಿ ಮನೆಗೆ ಹೊಂಟ..... ರಣಗುಡೂ ಬಿಶಲು,, !!
.... ಅಂತೂಸಂಜೆ ನಾಕ್ ಗಂಟೆ ಹೊತ್ತೀಗೆ.. ತಂಗಿ ಮನೆಗೆ ತಲಪದಾ... ಅರೇ ಅಣ್ಯಾ.. ಬಾ.. ಬಂದ್ಯಾ.. ಈಗ್ ಮಾತ್ರ್ ಯಮ್ಮನೆ ಅವರತ್ರ ನಿನ್ ಸುದ್ದೀನೇ ಹೇಳಿತಿದ್ದಿದ್ದೆ.. ಅವೆಲ್ಲೋ ತ್ವಾಟದ್ ಬದೀಗ್ ಹ್ವಾದವಕಾ.. ಬಾ ಕೈಕಾಲ್ ತೊಳಕ.. ಬಿಶೂಲಲ್ಲಿ ಬಂದೆ.. ಹನೀ ಲಿಂಬೆಹಣ್ ಪಾನಕ ಮಾಡಕಂಡ್ ಬತ್ತೆ. ಹೇಳಿಕ್ ವಳಗೋತು,, ಅಣ್ಣಯ್ಯ..ಮಗೆಕಾಯ್ ಚೀಲ ಜಗಲೀಮೇಲೆ ಮೂಲೆಲಿ ತಗಂಡೋಗಿ ಇಟ್ಟ..ಕೈಕಾಲ್ ತೊಕ್ಕಂಡು ಅಡುಗೆ ಮನೆ ಕಡೀಗೆ ಹೆಜ್ಜೆ ಹಾಕ್ತಿದ್ದ... ಪಾನಕ ರೆಡಿ ಆತು.. ಅಷ್ಟಪ್ಪತಿಗೆ ತೋಟಕ್ ಹೋದ್ ಬಾವ ಬಂದ.."ಅರೇ ಬಾವಾ,, ಈಗ್ ಬಂದ್ಯನಾ..?" ಎಂದದ್ದಕ್ಕೆ.. "ಹೌದಾ... ಆವತ್ತಿಂದಾ ಬರ ಅಂತ ಅಂದಾಜ್ ಮಾಡ್ತಾ ಇದ್ದಿದ್ದೆ.. ಆಜಿಲ್ಲೆ.. ಇಂದು ಯೆಮ್ಮನೆದು ಯೇನ್ ಮಾಡೀರೂ ಕೇಳಿದ್ದಿಲ್ಲೆ.. ನಿಂಗ ತಂಗೀ ಮನೆಗೆ ಹೋಪದ್ರೊಳಗೆ ಮಗೆಕಾಯಿ ಪೂರಾ ಕೊಳ್ತ ಹೋಗಿರ್ತು ಕಡೀಗೆ..ಇಂದೇ ಹೋಗಿ ಹೇಳಿ ಕಳಿಸ್ತು.. "...ಎಂದ.. ಭಾವ-ಭಾವ ಪಾನಕ ಕುಡದ.. "ಅಯ್ಯೋ ಆ ಯಮ ಭಾರದ್ ಮಗೆಕಾಯ್ ಇಲ್ಲೀವರೆಗೆ ಹೊತಗಬಂದದ್ ಸಾಕೋ ಅಣ್ಯಾ.." ಅಂತ ತಂಗಿ ಅಕ್ಕಿ ತೊಳದು ಬಳಿ ಹಾಕ್ತಾ ಹೇಳ್ತಿತ್ತು.. " ಯೆಮ್ಮನೆಲಿ ಇವರತ್ರಾನೂ ಅಂದೆ.. ಮಗೆಬಳ್ಳಿ ನಾಕ್ ಹಾಕುವೋ.. ದೋಸೆಗಾದ್ರೂ ನಾಕ್ ಮಗೆಕಾಯಿ ಆಗ್ತು ಹೇಳಿ...ಅವ್ ಯೆನ್ ಮಾತೆಲ್ ಕೇಳತ್ವಾ.." ಅಂತ ಗಂಡನ ಮುಖ ನೋಡಿ ಬಾಯ್ಮುಚ್ಚು ಅಂತು..
ಅಂತೂ ಭಾವ ಮನೆಗೆ ಬಂದ್ ಭಾವನ ಕರಕಂಡು ಆಚ್ಚೆ ಮನೆಗೆ ಹೋದ.. ನಾಕಾಟ ನೋಸ್ಟ್ರಂಪ್ ಆಡಕಂಡ್ ಬಪ್ಪನಾ ಅಂತ...
ಅಣ್ಣಯ್ಯ ತಗಬಂದ್ ಮಗೆಕಾಯಿ ಗೋಣಿ.. ಜಗಲೀ ಮೂಲೆಲಿ ಮನಿಕಂಡಿದ್ದಿತ್ತು..ತಂಗಿ ಸೊಕಾಶ್ ಬಂದು ಗೋಣಿ ಬಾಯಿ ಬಿಚ್ಚೀರೆ.. ಅಯ್ಯೊಯ್ಯೋ..ದೊಡ್ ಯೆಮ್ಮೆಕರೂನಂಥಾ ನಾಕ್ ಮಗೆಕಾಯಿ..ಅಣ್ಣಯ್ಯ ಹ್ಯಾಂಗ್ ಹೊತಗಂಡ್ ಬಂದನೆನಾ.. ಅಂತ ಹೇಳ್ತಾ..ಒಂದ್ ಮಗೆಕಾಯಿ ಹೊರಗ್ ತಗತ್ತು..ಅಂತೂ ಒಂದ್ ಮಗೆಕಾಯಿ ಕೊಚ್ಚೂಲ್ ಅಡ್ಡಿಲ್ಲೆ.. ಅಥೋಅಣ್ಣಯ್ಯ ಅಷ್ಟ್ ದೂರದಿಂದಾ ತಗಬಂಜಾ.. ಮಗೆಕಾಯ್ ತೆಳ್ಳೇವು ಅಂದ್ರೆ ಅವಂಗೆ ಭಾರೀ ಪ್ರೀತಿ ಹೇಳಿ ಅಂತೂ ಕೊಚ್ಚಿದೋಸೆ ಕಲ್ಲೀಗೆ ಮಗೆಕಾಯ್ ಬಿತ್ತು.. ಅಯ್ಯ..ತಿಳ್ಳು ಕಂಯಿ ಇಲ್ಲೆ.. ಒಂದ್ ಹನೀ ಜೀರಿಗೆ ಕಾಳ್ ಹಾಖಿ ತಂಬ್ಳಿ ಮಾಡ್ತಿ.. ಯೆಮನೆ ಅವು ಎಂತದೋ ಘರ್ಮಿ ಆದಾಂಗ್ ಇದ್ದು ಹೇಳ್ತಿದ್ದ.. ತಂಪಾಗ್ತು ಹೇಳಿ ತಿರಳು ತಂಬ್ಳೀ ಆತು..ದೋಸೆಗೆ ನಾಕ್ ಕೊಚ್ಚಿದ್ ಹೋಳು ಹೆಚ್ಚುಳತ್ತು..ಅದ್ನೆಂತಾ ಬಿಸಾಕುದೂ ಅಂತ ಒಂದ್ ಬಿಶೀ ಪಳದ್ಯನೂ ಆತು.. ಆದ್ರೆ ಮಗೆ ಕಾಯಿ ಶಿಪ್ಪೆ ದಪ್ಪಕ್ಕಿದ್ದು ಅಂತ ತೆಗದು ಫ್ರಿಜ್ಜಲಿಟ್ಟಾತು.. ನಾಳೆಗೆ ದೋಸೆ ತಿಂಬ್ಲೆ ಶಿಪ್ಪೆ ಗೊಜ್ಜು ...!!
ಅಂತೂ ನಾಕ್ ಆಟ ನೋಸ್ಟ್ರಂಪ್ ಆಡಕಂಡು ಭಾವ - ಭಾವ ಮನೆ ಸೇರ್ದ... ಕತ್ಲಪ್ಪಾಗ...ಭಾಆ ಕಾಲ್ ತೊಕ್ಕಳಾ..ಉಂಡಬುಡ್ವಾ ಅಂದ... ಕಾಲ್ ತೊಳೂಲ್ ಭಾವ ಬಚ್ಚಲೀಗೆ ಹೋದ..
ದೊಡ್ ಕೊಡಬಾಳೆಲಿ ಭಾವಂಗೆ ಬಿಶ್ ಬಿಶೀ ಬೆಣ್ತಕ್ಕಿ ಅನ್ನ.. ಅನ್ನಕ್ಕೆ.. ಬಿಶೀ ಪಳದ್ಯ ಬಂದ್ ಬಿದ್ದಾಗ ಈ ಅಣ್ಣಯ್ಯಂಗೆ ಮೇಲ್ ಬಪ್ಪದೊಂದ್ ಬಾಕಿ ಇತ್ತು...!!
"ಅಣ್ಯಾ,... ನಿಂಗೆ ತಿರಳ್ ತಂಬ್ಳೀ ಅಂದ್ರೆ ಪ್ರೀತಿನಲಾ ಶಣ್ಣಿರಕಾದ್ರೆ ಆಯಿ ಮಗೆಕಾಯಿ ಕೊಚ್ಚಕಾದ್ರೆ ಮುಂದೇ ಕುತಗಂಡು ತಿರಳ್ ತಿಂತಿದ್ಯಲಾ.. ಅದ್ಕೇ ತಂಬ್ಳೀ ಮಾಡಿದ್ನೋ..ಅಂತ ಹೇಳ್ತಾ ಅನ್ನದ ಮೇಲೆ ತಿರಳು ತಂಬಳಿ ಹೊಯ್ದಾಗ ಮೊದಲಿನ ಪಳದ್ಯ.. ಗಂಟಲೀಗೇ ಬಂದಾಂಗ್ ಆತು...!..ಆದ್ರೂ ಉಂಡ್ ಮನಗದ... ಬೆಳಿಗೆ ಏಳು ಹೊತ್ತೀಗೇ ಮಗೆಕಾಯ್ ತೆಳ್ಳೇವಿಂದು ಘಂಮ್ಮಲು ಮೂಗಿಗೆ ಬಡದು ವನ್ನಮನೀ ಆತು ಭಾವಂಗೆ.. ಬಚ್ಚಲ್ ಮನೆಗೋದಂವ ಸುಮಾರ್ ಹೊತ್ ವ್ಯಾಕರಸ್ತಾ ಇದ್ದಿದ್ ನೋಡಿ ಅಣ್ಣಯ್ಯಂಗೆ ಪಿತ್ಥಾಗೋಜು ಹೇಳಿ ತಿಳಕಂಡತು..ತಂಗಿ....ಅಂತೂ ಆಸ್ರೀ ಕುಡಿಯಲೆ ಬಂದ್ ಕುಂತ್ ಭಾವಂಗೆ ಮಗೆಕಾಯ್ ತೆಳ್ಳೇವು.. ಶಿಪ್ಪೆ ಗೊಜ್ಜು... ಒಂದೇ ಗುಪ್ಪಿಗೆ ನುಂಗಿ ಚಾ ಕುಡದು.. ತಂಗೀ ಮಗೆಕಾಯಿದು ಇನ್ನೂ ಸುಮಾರ್ ನಮನೀ ಪದಾರ್ಥ ಮಾಡೂಲ್ ಕಲ್ತಿದ್ದೆ ನೀನು ಅಲ್ದಾ...? ನನಗೆ ಅರ್ಜಂಟು ಮನೆಗೆ ಹೋಗ.. ಅಲ್ಲಿ ಇಂದು ಕೊನೆ ಕೊಯ್ಯೂಲೆ ಬತ್ತ ಆಳಗ..ಅಂತ ಹೇಳ್ತಾ..ಕೈ ತೊಳದ ಭಾವ ಮನೆ ದಾರಿ ಹಿಡದಾ..!! ದೇವರೇ.. ಇನ್ ಮನೆಲೂ ಈವತ್ತು ಯಾವದೇ ಮಗೆಕಾಯಿ ಕೊಳ್ತ ನೀರ್ ಸೋರದೇ ಇರಲಪ್ಪಾ ಹೇಳಿ ದಾರಿ ಅಂಚಿಗೆ ಶಿಕ್ಕದ್ ಅಶ್ವತ್ಥ ಕಟ್ಟೆ ಮೇಲಿನ್ ನಾಗರಕಲ್ಲೀಗೆ ನಾಕ್ ಸುತ್ ಹೊಡದು ನಮಸ್ಕಾರ ಹಾಕದಾ....!!

ಗುರುವಾರ, ಜುಲೈ 17, 2014

ಸರ್ವ ನಾಶದ ಸನ್ನಾಹ...!!

 ಧೃತರಾಷ್ಟ್ರನ ಆಸ್ಥಾನ ನೂರೊಂದು ಜನ ಕೌರವರು, ಪಾಂಡವರು, ಎಲ್ಲರೂ ಒಂದೇ ಆಸ್ಥಾನದಲ್ಲಿ ಬದುಕುತ್ತಿದ್ದ ಕಾಲ. ಅದೇ ಆಸ್ಥಾನದಲ್ಲಿ ಸೌಭಲರು ನೂರು ಜನರೂ ಬದುಕು ಸಾಗಿಸುತ್ತಿದ್ದರು.
ಒಂದು ದಿನ ಭೀಮ ಆಸ್ಥಾನವನ್ನು ಪ್ರವೇಶಿಸಿದ.. ಓಹೋಹೋ..ಬರಬೇಕು ಬರಬೇಕು ವಾಯುಸುತರು..!! ಅರ್ಥ ಆಗಲಿಲ್ಲ ಭೀಮನಿಗೆ ಮುಂದೆ ಸಂಜೆ ತಾಯಿಯಲ್ಲಿ ..ಅಮ್ಮಾ ಇಮ್ದು ಆಸ್ಥಾದಲ್ಲಿ ಕೌರವರು ನನ್ನನ್ನು ವಾಯುಸುತ ಎಂದು ಹೇಳಿದರಲ್ಲಾ..ಇದರ ಮರ್ಮ ಏನು? ಎಂದು ಕೇಳಿದ. ...ಮಗನೇ ಹೌದು.. ನೀವೆಲ್ಲರೂ ಪಾಂಡುರಾಜನಿಗೆ ಹುಟ್ಟಿದವರಲ್ಲಾ ದೇವತಾಂಶ ಸಂಭೂತರಾದವರು.. ಯಮನಿಂದಾಗಿ ಯುಧಿಷ್ಠಿರನೂ ವಾಯುವಿನಿಂದಾಗಿ ನೀನೂ, ಇಂದ್ರನಿಂದಾಗಿ ಅರ್ಜುನನೂ ಅಶ್ವಿನೀ ದೇವತೆಗಳಿಂದಾಗಿ ನಕುಲ-ಸಹದೇವರೂ ಜನಿಸಿದಿರಪ್ಪಾ.... ಅದಿರಲೀ..ನಾಳೇ ನೀನು ಆಸ್ಥಾನಕ್ಕೆ ಹೋದಾಗ ಆ ಕೌರವರಿಗೆ ಕೇಳು.. ಸೌಖ್ಯವೇ ಹೋತಸುತರೇ?!!! ಎಂದು..
ಮರುದಿನ ಭೀಮ ಆಸ್ಥಾನಕ್ಕೆ ಹೋದವನು ಕೌರವರನ್ನು ಹೋತ ಸುತರೇ ಎಂದು ಸಂಬೋಧಿಸಿದ...!! ಅರ್ಥ ಆಗಲಿಲ್ಲ ದುರ್ಯೋಧನನಿಗೆ..ತಾಯಿಯ ಸಮೀಪ ತೆರಳಿ ಕೇಳಿದ ಅಮ್ಮಾ ನಾವೇನು ಹೋತ ಸುತರೇ.. ಭೀಮ ಹೇಳಿದನಲ್ಲಾ..!! ಗಾಂಧಾರಿ ತಲೆಯಾಡಿಸಿ ಹೌದೆಂದಳು..
ಈಗಿನ ಕಂದಹಾರ-ಗಾಂಧಾರ ಅದನ್ನೇ ಆಗ ಪಶ್ಚಿಮ ಕಳಿಂಗವೆನ್ನುತ್ತಿದ್ದರು.. ಅಲ್ಲಿಯ ದೊರೆ ಸೌಭ. ಅವನಿಗೆ ನೂರೊಂದು ಜನ ಮಕ್ಕಳು.. ಅವರಲ್ಲಿ ಮಗಳು ಸುರ ಸುಂದರಿ ಗಾಂಧಾರಿ..!! ಹಿರಿಯ ಗಂಡು ಮಗ ಶಕುನಿ..!! ವಾರ್ಷಿಕವಾಘಿ ಗಂಗಾ ಸ್ನಾನಕ್ಕಾಗಿ ಕಾಶೀ ಕ್ಷೇತ್ರಕ್ಕೆ ಕುಟುಂಬ ಸಮೇತನಾಗಿ ಬಂದ ಸೌಭ. ಇತ್ತ ಹಸ್ತಿನಾವತಿಯಲ್ಲಿ ತನ್ನ ಕುರುಡು ದೊರೆ ಧೃತರಾಷ್ಟ್ರನಿಗೆ ಯಾರೂ ಹೆಣ್ಣು ಕೊಡುವವರು ಇಲ್ಲದಾಗಿ ಅರಸುತ್ತಿದ್ದ ಭೀಷ್ಮನ ಕಣ್ಣಿಗೆ ತ್ರಿಲೋಕ ಸುಂದರಿಯಾದ ಗಾಂಧಾರಿ ಕಂಡಳು. ಆದರೂ ಹೋಗಿ ಹೆಣ್ಣು ಕೇಳುವುದಕ್ಕೆ ಏನೋ ಅಳುಕು.. ಸೌಭ ತನ್ನ ಯಾತ್ರೆಯನ್ನು ಮುಗಿಸಿ ಸ್ವರಾಜ್ಯಕ್ಕೆ ತೆರಳುವದರೊಳಗೇ ಗಾಂಧಾರಕ್ಕೆ ಭೀಷ್ಮನ ಸೈನ್ಯ ಮುತ್ತಿತು..ಾಧವಾದ ಸೈನ್ಯವನ್ನು ನೋಡಿದ ಸೌಭ ಭೀಷ್ಮನಿಗೆ ಶರಣಾದ.. ಭೀಷ್ಮ ಅವನ ಮಗಳನ್ನು ತನ್ನ ಮಗನಿಗೆ ಮದುವೆ ಮಾಡಿಕೊಟ್ತರೆ ನಿನ್ನನ್ನು ಈ ರಾಜ್ಯವಾಳುವುದಕ್ಕೆ ಬಿಡುತ್ತೇನೆ ಎಂದ ಹೀಗೆ ಬಲಾತ್ಕಾರವಾಗಿ ಸೌಭನ ಏಕಮಾತ್ರ ಸುಂದರ ಕುವರಿಯನ್ನು ತನ್ನ ಕುರುಡು ದೊರೆಗೆ ಮದುವೆ ಮಾಡಿಸಿಕೊಳ್ಳಲು ಕರೆತಂದ..
ರಾಜ ಜ್ಯೋತಿಷಿಗಳಲ್ಲಿ ಈ ಕುರುಡು ದೊರೆ ಮತ್ತು ಗಾಂಧಾರಿಯ ಜಾತಕ ತೆಗೆದುಕೊಂಡು ಹೋದ ಭೀಷ್ಮ ಅವರ ಮುಮ್ದಿನ ದಾಂಪತ್ಯ ಜೀವನದ ಬಗ್ಗೆ ವಿಚಾರಿಸಿದಾಗ ಅವರೆಂದರು.. ಗಾಂಧಾರಿಗೆ ವೈಧವ್ಯ ಯೋಗವಿದೆ..!! ಅಯ್ಯೋ ಏನು ಮಾಡುವುದು ಎಂದು ಚಿಂತಿಸಿದ ಭೀಷ್ಮ ಪರಿಹಾರಕ್ಕಾಗಿ ಆಕಾಲದಲ್ಲಿ ಪ್ರಚಲಿತವಿದ್ದ ಆಭಿಚಾರಿಕ ಪ್ರಕ್ರಿಯೆಗೆ ಮೊರೆಹೋದ.. ( ಹೆಣ್ಣಿನ ಜಾತಗ ಕೆಟ್ಟದಾಗಿದ್ದರೆ ಮದುವೆ ಮಾಡುವಾಗ ಬಾಳೆ ಮರಕ್ಕೆ ಕರಿಮಣಿ ಕಟ್ಟಿ ಆ ಬಾಳೆ ಮರವನ್ನು ತುಂಡರಿಸಿ ವಿದುರ ಯೋಗವನ್ನು ನಿವಾರಿಸಿಕೊಳ್ಳುವುದು, ಗಂಡಿನ ಜಾತಕ ಕೆಟ್ಟದಿದ್ದರೆ ಮದುವೆಗೆ ಮೊದಲು ಹೋತವೊಂದಕ್ಕೆ ಪಾಣಿಗ್ರಹಣ ಮಾಡಿಸಿ ಆ ಹೋತವನ್ನು ಬಲಿಕೊಟ್ಟು ವೈಧವ್ಯ ಯೋಗವನ್ನು ಕಳೆದುಕೊಳ್ಳುವುದು) ಒಂದು ಹೋತವನ್ನು ಕರೆತಂದು ಅದರೊಂದಿಗೆ ಗಾಂಧಾರಿಯ ಪಾಣಿಗ್ರಹಣ ಮಾಡಿಸಿ ಹೋತವನ್ನು ಬಲಿಕೊಟ್ಟು ಅವಳ ವೈಧವ್ಯ ಯೋಗವನ್ನು ಕಳ್ದು ಕೊಂಡು ಮುಂದೆ ಧೃತರಾಷ್ಟ್ರನಿಗೆ ಗಾಂಧಾರಿಯನ್ನು ಮದುವೆ ಮಾಡಿಸಿದ ಆ ಒಮ್ದು ಕ್ಷೇತ್ರ ಜನ್ಯವಾಗಿ ಮುಂದೆ ನಿಜವಾಗಿ ಧೃತರಾಶ್ಃತ್ರನಿಂದಲೇ ಜನಿಸಿದರೂ ಈ ಕೌರವರು ಹೋತ ಪುತ್ರರಾದರು.
ಸೌಭನ ಮರಣಾನಂತರ ಅರಾಜಕವಾದ ಈ ಸೌಭ ದೇಶ ಅವನ ನೂರು ಮಂದಿ ಮಕ್ಕಳಿಗೆ ಆಶ್ರಯ ಕೊಡದಾಯಿತು.. ಅವರೆಲ್ಲ ಅಕ್ಕ ಗಾಂಧಾರಿಯ ಸೆರಗಿಗೆ ಜೋತುಕೊಂಡು ಹಸ್ತಿನಾವತಿಗೆ ಬಂದು ಸೇರಿದರು.. ಎಲ್ಲರಲ್ಲೂ ಒಂದು ಮನದಾಳದ ಕೊರಗಿತ್ತು.. ನಮ್ಮಕ್ಕ ಕುರುಡು ದೊರೆಗೆ ಬಲಾತ್ಕಾರವಾಘಿ ಮಡದಿಯಾದಳಲ್ಲಾ... ಕೌರವನ ಆಸ್ಥಾನದಲ್ಲಿ ಈ ಸೌಭಲರು ನೂರು ಜನ ಮೆರೆಯ ತೊಡಗಿದರು.. ಇದು ದುರ್ಯೋಧನನಿಗೆ ಸಹಿಸದ ವಿಚಾರವಾಯಿತು.. ಹೇಗಾದರೂ ಮಾಡಿ ಇವರನ್ನು ಬಗ್ಗು ಬಡಿಯಲು ಕರ್ಣನ ಸಹಕಾರವನ್ನು ಬಯಸಿದ.. ಕರ್ಣನ ಉಪದೇಶದಂತೆ ಒಮ್ಮೆ ಈ ನೂರು ಮಂದಿಯನ್ನೂ ಬೇಂಟೆಗಾಗಿ ಕ್ಕಾಡಿಗೆ ಕರೆದೊಯ್ದ.. ಬೇಟೆಯಿಂದ ಬರುವಾಗ ಈ ಸೌಭ ಕುಮಾರರಿಗೆ ನಡುದಾರಿಯಲ್ಲಿ ಒಂದು ಬಂಡೆಯನ್ನು ನಿಲ್ಲಿಸಿದ.. ಆದರೆ ಅವರು ರಾತ್ರಿ ಬೆಳಗಾಗುವುದರೊಳಗೆ ಆ ಬಂಡೆಯನ್ನೇ ಒಡೆದು ದಾರಿ ಮಾಡಿಕೊಂಡು ಆಸ್ಥಾನ ಸೇರಿದ್ದರು.. ಇದು ಕೌರವನಿಗೆ ಅವರ ಶಕ್ತಿ ಮತ್ತು ಸಾಹಸಗಳ ಅರಿವಿಗೆ ದಾರಿ ಮಾಡಿಕೊಟ್ಟಿತು.. ಇದೆಲ್ಲ ನಡೆಯುತ್ತಿರುವಾಗ ಹೇಗಾದರೂ ಈ ಸೌಭಲರನ್ನು ಖೆಡ್ಡಾಕ್ಕೆ ಹಾಕುವ ಮಹಾ ಯೋಜನೆ ಅವನ ತಲೆ ತಿನ್ನತೊಡಗಿತು
ಒಂದು ದಿನ ಈ ಸೌಭ ಕುಮಾರರನ್ನು ಕೂಡಿಕೊಂಡು ಬೇಟೆಗಾಗಿ ಕಾಡಿಗೆ ತೆರಳಿದ ದುರ್ಯೋಧನ ಈ ಮೊದಲೇ ಅಲ್ಲಿ ಸಿದ್ಧ ಪಡಿಸಿದ ಒಂದು ಗುಹೆಯೊಳಕ್ಕೆ ಕರೆದೊಯ್ದ.. ಅಲ್ಲಿ ತನ್ನ ಬೊಕ್ಕಸವನ್ನು ಎಣಿಸುವ ಕೆಲಸ ಕೊಟ್ಟು ಸಾವಕಾಶವಾಗಿ ಅಲ್ಲಿಂದ ತಾನು ಹೊರಬಂದು ದೊಡ್ಡ ಬಂಡೆಯೊಂದನ್ನು ಗುಹೆಯ ಬಾಗಿಲಿಗೆ ಝಡಿದ... ಒಳಗಿನಿಂದ ಸೌಭಲರು ಕೂಗಿಕೊಳ್ಳತೊಡಗಿದರು.. ನಿರಾಯುಧರಾದ ಅವರಿಗೆ ಆ ಬಂಡೆಯನ್ನು ಅಲುಗಾಡಿಸಿ ಹೊರಬರಲು ಸಾಧ್ಯವಿರಲಿಲ್ಲ.. ಆಗ ದುರ್ಯೋಧನ ಅವರಿಗೆ ಒಬ್ಬೊಬ್ಬರಿಗೆ ಒಂದೊಂದು ತುತ್ತಿನಂತೆ ಆಹಾರ ಕೊಡಲು ಸೂಚಿಸಿದ.. ಇದು ಗಾಂಧಾರಿಗೂ ತಿಳಿಯಿತು..ಅವಳು ತನ್ನ ತಮ್ಮಂದಿರಿಗಾಗಿ ಗೋಳಾಡಿದಳು ಆದರೆ ದುರ್ಯೋಧನ ಅವಳ ಬಾಯಿಮುಚ್ಚಿಸಿದ..
ಪ್ರತಿ ದಿನ ಪ್ರತಿಯೊಬ್ಬರಿಗೂ ಲೆಕ್ಕ ಮಾಡಿ ಒಂದೊಂದೇ ತುತ್ತು ಭೋಜನವನ್ನು ನೀಡುತ್ತಾ ಬಂದ ದುರ್ಯೋಧನ.. ಆಗ ಒಳಗಿರುವ ಸೌಭಲರು ಚಿಂತಿಸಿದರು.. ಹೀಗೆ ನಾವು ಒಂದೊಂದೇ ತುತ್ತು ಉಂಡು ಎಲ್ಲರೂ ಕ್ರಮೇಣ ಸಾಯುವುದಕ್ಕಿಂತ ಯಾರಾದರೊಬ್ಬರು ಗಟ್ಟಿಯಾಗಿ ಉಂಡು ಈ ಕೌರವನ ಮೇಲೆ ಸೇಡು ತೀರಿಸಿಕೊಳ್ಳಲೇ ಬೇಕು ಅದಕ್ಕಾಗಿ ಒಂದು ಉಪಾಯ ಹೂಡಿದರು. ಭೋಜನ ನೀಡಲು ಬಂದ ದುರ್ಯೋಧನನಿಗೆ ಒಂದು ಬೇಡಿಕೆಯಿಟ್ಟರು.. ಅಯ್ಯಾ ನೀನು ಹೀಗೇ ಪ್ರತಿ ದಿನ ನಮಗೆ ಒಂದೊಂದು ತುತ್ತು ಪ್ರತ್ಯೇಕವಾಗಿ ನೀಡುವುದರ ಬದಲು ನೂರು ತುತ್ತುಗಳನ್ನೂ ಒಂದೇ ಬಾರಿ ಕೊಟ್ಟುಬಿಡು ನಾವದನ್ನು ಒಳಗೆ ಪಾಲು ಮಾಡಿಕೊಂಡು ತಿನ್ನುತ್ತೇವೆ..ಎಂದರು..ಅದೂ ಸರಿಯೆನಿಸಿತು ದುಷ್ಟನಿಗೆ..!!
ಒಟ್ಟಿಗೇ ಕೊಟ್ಟ ನೂರು ತುತ್ತುಗಳನ್ನು ನೋಡಿದ ಆ ನೂರುಜನ ಸೌಭಲರು ಮಂತ್ರಾಲೋಚನೆ ಮಾಡಿದರು... ಹೀಗೆ ಪ್ರತಿದಿನ ಒಂದೊಂದು ತುತ್ತು ತಿಂದು ಕೃಶವಾಗಿ ಎಲ್ಲರೂ ಸಾಯುವುದಕ್ಕಿಂತ ನಮ್ಮಲ್ಲಿ ಓರ್ವ ಚಾಣಕ್ಯನಾದವನು ಈ ನೂರೂ ತುತ್ತುಗಳನ್ನು ಭುಂಜಿಸಿ ಶಕ್ತಿವಂತನಾಗಿ ಹೊರ ಹೋಗಿ ಆ ದುರುಳನನ್ನು ಹೇಗಾದರೂ ಸರ್ವನಾಶ ಮಾಡಿದರೆ ಲೋಕಕ್ಕೆ ಒಳ್ಳೆಯದಾಗುವುದಲ್ಲವೇ...>?? ಹಾಗಾದರೆ ನಮ್ಮವರಲ್ಲಿ ಆ ಬುದ್ಧಿವಂತ ಯಾರು..? ಅದಕ್ಕೊಂದು ಉಪಾಯ ಹೊಳೆಯಿತು... ಇಂದು ರಾತ್ರಿ ಬೆಳಗಾಗುವುದರೊಳಗೆ ಇಲ್ಲಿ ಬಿದ್ದಿರುವ ಈ ಹವಳದ ಕಲ್ಲಿನ ಎಂಟು ತೂತುಗಳೊಳಗೆ ಯಾರು ದಾರವನ್ನು ಪೋಣಿಸುತ್ತಾರೋ ಅವರೇ ಬುದ್ದಿವಂತರೆಂದು ಪರಿಗಣಿಸುವುದು.. ಅವನಿಗೆ ನೂರೂ ತುತ್ತುಗಳನ್ನು ನೀಡಿ ಉಳಿದವ್ರು ಪ್ರಾಯೋಪವೇಶ ಮಾಡಿ ಪ್ರಾಣ ಬಿಡುವುದು ಎಂದು ತೀರ್ಮಾನವಾಯಿತು ಎಲ್ಲರೂ ಪ್ರಯತ್ನಕ್ಕಿಳಿದರು... ಯಾರಿಗೂ ಇದು ಆಗದ ಕೆಲಸವಾಯಿತು ಕೊನೆಯಲ್ಲಿ ಉಳಿದವನೇ ಈ ಶಕುನಿ...!!
ರಾತ್ರಿ ಕತ್ತಲ ಕೋಣೆಯೊಳಗೆ ಶಕುನಿ ಚಿಂತಾಕ್ರಾಂತನಾದ.. ತಮ್ಮಂದಿರೆಲ್ಲಾ ಸೋತು ಮಲಗಿದ್ದಾರೆ... ಹವಳದ ಗಡ್ಡೆ ದಾರ ಪೋಣಿಸಲಾಗದೇ ಹಾಗೇ ಬಿದ್ದಿದೆ.. ಕೌರವನ ಕುಲಕ್ಷಯ ಆಗದ ಮಾತೇ..? ಛೇ.. ಬಿಡಬಾರದು.. ಅಲ್ಲೇ ಬಿದ್ದಿರುವ ದಾರವನ್ನೂ ಆ ಎಂಟು ರಂಧ್ರಗಳ ಹವಳದ ಗಡ್ಡೆಯನ್ನೂ ಮತ್ತೆ ಮತ್ತೆ ನೋಡೀದ.. ಮನದಲ್ಲಿ ಏನೋ ಹೊಂಬೆಳಕು.. ದಾರವನ್ನು ಹಿಡಿದು ಮೇಲೆದ್ದ... ಅಲ್ಲೇ ಬಿದ್ದಿರುವ ಸಕ್ಕರೆಯ ಹರಳುಗಳನ್ನು ನೆನೆಸಿ ಆ ದಾರದ ಪ್ರತಿಯೊಂದು ತುದಿಗೂ ಹಚ್ಚಿದ...>! ಮುಂದೆ ಹವಳದ ಗಡ್ಡೆಯನ್ನು ತೆಗೆದುಕೊಂಡು ಒಂದು ಇರುವೆಯ ಹುತ್ತದ ಸಮೀಪ ಹೋಗಿ ಆ ಹುತ್ತದ ಬಾಗಿಲಿಗೆ ಗಡ್ಡೆಯನ್ನಿಟ್ಟು ಪ್ರತಿ ತೂತಿನ ಬಾಗಿಲಲ್ಲೂ  ಸಂಕರೆ ಲೇಪಿತವಾದ ದಾರದ ತುದಿಯನ್ನು ಇಟ್ಟ.....ಏನಾಶ್ಚರ್ಯ.. ಬೆಳಗಾಗುವುದರೊಳಗೆ ಆ ಎಂಟೂ ದ್ವಾರದೊಳಗೆ ದಾರ ಪೋಣಿಸಿತ್ತು..!!!
ತಮ್ಮಂದಿರೆಲ್ಲ ಎಚ್ಚರಗೊಂದು ಈ ಶಕುನಿಯ ತಂತ್ರವನ್ನು ಕೊಂಡಾಡಿದರು ಮತ್ತೂ ಅವನನ್ನೇ ನೂರು ತುತ್ತುಗಳನ್ನು ಭುಂಜಿಸಲು ಹೇಳಿದರು.. ಅದಕ್ಕೆ ಶಕುನಿ ಒಪ್ಪಿದ ಆದರೆ ಒಂದು ಮಾತು .. ನೀವೆಲ್ಲ ಸತ್ತು ನನ್ನನ್ನು ಬದುಕಿಸುತ್ತೀರಿ ತಮ್ಮಂದಿರೇ ಆ ಕೌರವನ ಸರ್ವನಾಶಕ್ಕಾಗಿ ನನಗೊಂದು ಮಾತು ಕೊಡಿ... ನಿಮ್ಮ ಮರಣಾನಂತರದಲ್ಲಿ ನಿಮ್ಮ ಚರ್ಮವನ್ನು ನಾನು ಪಗಡೆಯ ಹಾಸುಗಳಾಗಿ ಮಾಡಿಕೊಳ್ಳುತ್ತೇನೆ..ನಿಮ್ಮ ಮೂಳೆಗಳನ್ನೇ ದಾಳಗಳನ್ನಾಗಿ ಮಾಡಿಕೊಂಡು ಮುಂದಿನ ನಾಟಕಕ್ಕೆ ಮುಂದಾಗುತ್ತೇನೆ ನಿಮ್ಮ ಹರಕೆ ನನಗಿರಲಿ ..ಪಗಡೆಯ ಹಾಸಿನ ಮೇಲೆ ನಾನು ದಾಳಗಳನ್ನುರುಳಿಸುವಾಗ ನಾನು ಯಾವುದನ್ನು ನೆನ್ಯುತ್ತೇನೋ ಅದೇ ಅಂಕಿಗಳ ದಾಳಗಳು ಬೀಳುವ ಹಾಗೆ ನೀವು ಮನಮಾಡಬೇಕು...!! ಅಸ್ತು ಎಂದರು ದಿನ ದಿನಕ್ಕೂ ಒಬ್ಬೊರಾಗಿ ತಮ್ಮ ಜೀವಿತವನ್ನು ಕಳೆದುಕೊಂಡರು ಶಕುನಿ ನೂರೂ ತುತ್ತುಗಳನ್ನು ತಿನ್ನುತ್ತಾ ಬಲಿಷ್ಠನಾಗುತ್ತ ಬಂದ.. ಕೊನೆಗೊಂದು ದಿನ ಗುಹೆಯ ಬಾಗಿಲಿನಿಂದ ಬರುತ್ತಿರುವ ದುರ್ವಾಸನೆಯ ಜಾಡಿನಿಂದ ಸೌಭಲರೆಲ್ಲರೂ ಸತ್ತರೆಂದು ತಿಳಿದ ದುರ್ಯೋಧನ ಬಾಗಿಲನ್ನು ತೆರೆದ.. ಶಕುನಿ ಹೊರಬಂದ.. ಉಳಿದವರೆಲ್ಲ ಸತ್ತು ಇವನೊಬ್ಬ ಬಂದುದನ್ನು ನೋಡಿ ಓಹ್ ಇವನೊಬ್ಬನಿಂದ ಏನಾದೀತು ಎಂದು ತಿಳಿದು ಸುಮ್ಮನೇ ಬೀಟ್ಟ.. ದಾರಿಗಾಣದ ಶಕುನಿ ಪುನಃ ಗಾಂಧಾರಿಯ ಅಂತಃಪುರ ಹೊಕ್ಕು ಅವಳ ಪ್ರೀತಿಯ ಹೇಳಿಕೆಗೆ ಅಲ್ಲಿಯೇ ಉಳಿದ ..ಕೌರವನ ಕುಲಕ್ಷಯ ಪ್ರಾರಂಭವಾಗಲು ಸೌಭಲಕುಮಾರರ ಚರ್ಮ ಹದವಾಗುತ್ತಿತ್ತು..!! ಮೂಳೆಯ ದಾಳ.. ಕೆತ್ತಲ್ಪಟ್ಟಿತ್ತು.. ಸರ್ವನಾಶದ ಸನ್ನಾಹವಾಗಿತ್ತು..!!

ಬುಧವಾರ, ಜುಲೈ 16, 2014

ಕನ್ನಡ ಮೇಘದೂತ

ನನ್ನ ಆತ್ಮೀಯರಾದ, ಗುರುಗಳೂ ಆದ ಕುಮಟಾದ ಬಾಳಿಗಾ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾಗಿ ತಮ್ಮ ಕೈಂಕರ್ಯವನ್ನು ನಡೆಸಿಕೊಂಡು ಬಂದ ಶ್ರೀ ವಿ.ಆರ್. ಜೋಶಿಯವರು ರಚಿಸಿದ ಮಹಾ ಕವಿ ಕಾಲಿದಾಸ ವಿರಚಿತ ಮೇಘದೂತದ ಕನ್ನಡ ಭಾವ ಕಾವ್ಯವನ್ನು ಇಲ್ಲಿ ಪ್ರಸ್ತುತಿ ಪಡಿಸಲು ನನಗೊಂದು ಹೆಮ್ಮೆ.
*********************************************************
||ಪೂರ್ವ ಮೇಘ||

ಯಕ್ಷನೋರ್ವ ಅಲಕ್ಷದಿಂದ ತನ್ನ ಕೆಲಸ ಮರೆಯೆ
ಅಗಲಿದನು ಪ್ರಿಯೆಯ ವರುಷದವಧಿ ಭರ್ತೃ ಶಾಪ ಉರಿಯೆ|
ಭೂಮಿಜೆಯು ಮಿಂದ ನೆರಳಿಂದ ಮಂದವಾಗಿರ್ದ ತಾಣದಲ್ಲಿ
ವಸತಿ ಹೂಡಿದನು ಪುಣ್ಯ ತೀರ್ಥದಾ ರಾಮ ಗಿರ್ಯಂಗಳಲ್ಲಿ||01||

ಕೆಲವು ತಿಂಗಳನು ಕಳೆದನಲ್ಲಿ ಪ್ರಿಯತಮೆಯ ಅಗಲಿ ಆತ
ಅಯ್ಯೋ! ಸೊರಗಿದನು ಕಡಗ ಕಳಚಿ ಬರಿದಾಗೆ ಕೈಯ್ಯ ಸೋತ|
ಆಷಾಢಮಾಸದಾ ಮೊದಲನೆಯ ದಿನ ಗಿರಿಯನಪ್ಪೆ ಮೋಡ
ಕಂಡು ಬಂದಿತೋ ಕೋಟೆ ಒಡೆಯುವಾ ಮದ್ದಾನೆಯಂತೆ ಕಾಡ||02||

ತಾಳ್ಮೆಗೆಡಿಸಿದಾ ಮೋಡ ಕಂಡು ಧನಪತಿಯ ಪುರುಷನಂದು
ಎಂತೊ ಎಂತೋ ಕಣ್ಣೀರ ನುಂಗಿ ಬಹುಕಾಲ ಅಲ್ಲಿ ನಿಂದು|
ಮೋಡ ಕಂಡಾಗ ಸಖಿಯ ಹೃದಯವೂ ಬೇರೆ ಬಗೆವುದೇಕೋ
ಹತ್ತಿರದ ನಲ್ಲೆ ಮತ್ತಿರಲು ದೂರ ಬವಣೆ ಬೇಡ ಸಾಕೋ||03||

ಬಂತು ಶ್ರಾವಣಾ ಬದುಕಬೇಕು ಪ್ರಿಯೆ ಎಂಬ ಇಚ್ಛೆ ಧರಿಸಿ
ತನ್ನ ಅರ್ತಿಯನು ಮೋಡದೊಡನವನಂದೆ ಕಳಿಸ ಬಯಸಿ|
ಅದೆ ಆಗ ಬಿರಿದ ಬೆಟ್ಟಮಲ್ಲಿಗೆಯ ತಾನರ್ಘ್ಯ ಕಲ್ಪಿಸುತ್ತಾ
ಒಲವು ಉಲಿಯುತಿಹ ಮಾತನಾಡಿ ಸ್ವಾಗತವ ಗೈದನತ್ತ||04||

ಮಂಜು, ಮರುತ, ಉರಿ, ಸಲಿಲದಿಂದ ಕೂಡಿದ್ದ ಮೇಘವೆತ್ತ
ತೀಕ್ಷ್ಣ ಇಂದ್ರಿಯದ ಪ್ರಾಣಿಗಳೆ ಒಯ್ವ ಪ್ರೇಮ ಸಂದೇಶವೆತ್ತ|
ಅರಿಯದಂತೆರವ ಮೋಡದೊಡನಿಂತು ಬೇಡಿಕೊಂಬೆ ನಾನು
ಪ್ರಿಯೆಯನಗಲಿದವರ್ ಜಡ-ಚೇತನದಿ ಭೇದ ಕಾಂಬರೇನು||05||

ವಿಧಿವಶದಿ ನಲ್ಲೆ  ಅಗಲಿದ್ದ ನಾನು ಬೇಡಿಕೊಂಬೆ ಮೇಘ
ಪುಷ್ಕರಾದಿ ಜನಮಾನ್ಯ ವಂಶದಲಿ ಹುಟ್ಟಿ ನೀನಮೋಘಾ|
ಕಾಮರೂಪಿ ನೀ ಇಂದ್ರನಧಿಕಾರಿ ಎಂಬುದನ್ನು ಬಲ್ಲೆ
ವ್ಯರ್ಥವಲ್ಲ ಸಜ್ಜನರ ಅರ್ಥಿ ಅಧಮ ಸಿದ್ಧಿ ಬಲ್ಲೆ||06||

ದುಃಖಾರ್ತ ಜನಕೆ ರಕ್ಷಕನು ನೀನು ಅಲಕೆಗೋಗು ಮೇಘ
ಧನಪತಿಯ ಶಾಪದಿಂದಗಲಿದ ಪ್ರಿಯೆಗೆ ಮಾತು ತಿಳಿಸೊ ಬೇಗ|
ಉದ್ಯಾನದೊಳಗೆ ಶಿವನ ಶಿರದ ಶಶಿಕಳೆಯಬೆಳಕಿನಿಂದ
ಕಾಂಬ ಅರಮನೆಯ ಯಕ್ಷರಧಿಪನದು ಸಾಗು ಅಂದದಿಂದ||07||

ಪವನ ಪಥವನ್ನು ಬರೆ ನೀನು ಮುಂಗುರುಳ ಮೇಲೆ ಎತ್ತಿ
ಪಥಿಕವನಿತೆಯರು ಬಯಕೆಗೂಡಿ ನೋಡುವರು ಏರ ಹತ್ತಿ|
ನಿನ್ನ ದರ್ಶನದೆ ಯಾರು ತಾನೆ ಇಹರು ಪ್ರಿಯೆಯ ಬಿಟ್ಟು
ಪರರ ಹಂಗಿನಲಿ ದಿನನೂಕುತಿರುವ ನನ್ನಂಥ ಜೀವಿ ಬಿಟ್ಟು||08||

ಸುಶೀಲೆ ಬಾಲೆ ನಿರತಳಲ್ಲಿ ದಿನಗಳನು ಎಣಿಸುವಲ್ಲಿ
ಸಖನೆ ಅತ್ತಿಗೆಯ ಹೋಗಿ ನೋಡು ನಿರ್ವಿಘ್ನ ಮಾರ್ಗದಲ್ಲಿ|
ಕುಸುಮ ಕೋಮಲವು ನಾರಿ ಹೃದಯವು ವಿರಹದಲ್ಲಿ ಕಳಚಿ-
ಬೀಳದಂತೆ ಮೇಲೆತ್ತಿ ಹಿಡಿಯುವುದೆ ಕೂಡುವಾಸೆ ಸುರುಚಿ||09||

ಅನುಕೂಲ ಗಾಳಿ ಬೀಸಿ ನಿನ್ನನ್ನು ನೂಕುತಿರಲು ಮುಂದೆ
ಆಪ್ತ ಚಾತಕವು ಎಡಕೆ ಕೂಗುವುದು ಮಧುರ ಧ್ವನಿಯಲಿಂದೆ|
ಬೆದೆಯ ಬಯಸಿ ಬೆಳ್ವಕ್ಕಿ ತೋರಣದ ತೆರದಿ ಬಾನಿನಲ್ಲಿ
ಹಾರಿ ಸುಂದರನೆ..! ನಿನ್ನನನುಸರಿಸಿ ಬಂದಾವು ದಾರಿಯಲ್ಲಿ||10||