ಸಣ್ಣ ಕಥೆಗಳ ಸಂಗ್ರಹ.
ಕನ್ನಡ ಸಾಹಿತ್ಯದ್ಲ್ಲ ಇದುವರೆಗೆ ಅನೇಕ ಪ್ರಕಾರಗಳನ್ನು ನಾವು ಕಂಡಿದ್ದೇವೆ,ಓದಿದ್ದೇವೆ,ಆನಂದಿಸಿದ್ದೇವೆ. ನಾನೂ ಏನಾದರೂ ಬರೆಯಬೇಕು ಎಂಬ ಹಪಹಪಿಕೆಯಲ್ಲಿರುವಾಗ, ಎಲ್ಲರು ಬರೆದಂತೆ ನಾನೂಈ ಹಾಡು,ಕವಿತೆ, ಕಥೆ, ಕಾದಂಬರಿಗಳನ್ನು ಬರೆಯಲೇ,? ಬ್ಯಾಡಾ.... ಬೇರೆ ಏನಾದರೂ ಬರೆಯೋಣವೆಂದು ಶಸ್ತ್ರ ಸಜ್ಜಿತನಾದಾಗ ನನಗೆ ಎದುರಾದದ್ದು ಹಲವರು ಬರೆದ ಹನಿಗವನಗಳು ಎಂಬ ವಿಚಿತ್ರ ಪ್ರಕಾರ...... ಆದರೂ..ಅದನ್ನೇ ನಾನೂ ಬರೆದು ಬರೆದವರಿಗೆ ಸ್ಪರ್ಧೆಯೊಡ್ಡುವುದು ತರವಲ್ಲ ಎಂದು ನನ್ನ ಬಾಣದಿಂದ ಹೊಸ ಮಿಕವನ್ನು ಹೊಡೆದೆ.ಅದೇ ಈ .....ಹನಿಗತೆಗಳು....ಇದು ಕೇವಲ ನನ್ನೊಬ್ಬನ ಕಾಯಕವಲ್ಲ ಸ್ನೇಹಿತರನೇಕರು ಈ ಸಾಹಿತ್ಯಕ್ಕೆ ಬಾಯಾನಿದ್ದಾರೆ. ಅವರೆಲ್ಲರಿಗೂ ನಾನು ಋಣಿ.
ಹನಿಗತೆಗಳೆಂದರೆ ಮನದ ಮೂಲೆಯಲ್ಲಡಗಿದ್ದ ನನ್ನ ಭಾವನೆಗಳನ್ನು ಚಿಕ್ಕ ಕಥೆಗಳ ರೂಪದಲ್ಲಿ ಅಂದರೆ 'ಕಿರಿದರೋಳ್ ಪಿರಿದರ್ಥವಂ ಪೇಳ್ವಂತೆ' ಎಂಬ ಪ್ರಯತ್ನ .....
***********************************************************************************
೦೧ : ದೇವರನ್ನು ಹ್ಡುಕುತ್ತಾ......
ಆತ.... ಜೀವನದಲ್ಲಿ ಜಿಗುಪ್ಸೆಗೊಂಡಿದ್ದ. ಯಾವುದೂ ಬೇಡಾ.... ಓ ದೇವರೇ ನೀನೆಲ್ಲಿರುವೆ ...... ಎಂದು ದೇವರನ್ನು ಹುಡುಕುತ್ತಾ ಮನೆ ಬಿಟ್ಟು ಯಾವುದೋ ರಸ್ತೆಯಲ್ಲಿ ಸಾಗುತ್ತಿದ್ದ... ಅದೇ ರಸ್ತೆಯ ಮಧ್ಯದಲ್ಲಿ , ಅಂಬೆಗಾಲಿಕ್ಕುತ್ತ ಬರುತ್ತಿದ್ದ ಮಗುವನ್ನೂ, ಶರವೇಗದಲ್ಲಿ ಅದೇ ರಸ್ತೆಯಲ್ಲಿ ಬರುತ್ತಿದ್ದ ಒಂದು ಕಾರನ್ನೂ ಕಂಡ....... ಅಷ್ಟೆ...ಇನ್ನೇನು ಆ ಕಾರಿನಡಿಯಲ್ಲಿ ಮಗು ಸಿಕ್ಕಿ ಸಾಯುತ್ತದೆ .......ಓಡುತ್ತ ಹೋಗಿ ಆ ಮಗುವನ್ನು ಎತ್ತಿ ಈಚೆ ಬಂದ. ಅದೆಲ್ಲಿದ್ದಳೋ ಆ ಮಗುವಿನ ಹೆತ್ತವ್ವೆ... ಓಡೋಡಿ ಬಂದಳು... ಇವನ ಕಂಕುಳಲ್ಲಿ ಆಡುತ್ತಿರುವ ಮಗುವನ್ನು ಕಂಅಳು.....ಓ ದೇವರೇ.....ಹತ್ತಿರ ಬಂದು ಇವನನ್ನೇ ನೋಡುತ್ತ ಹೇಳಿದಳು..." ನಿಮ್ಮ ಜೀವವನ್ನೂ ಲೆಕ್ಕಿಸದೇ ನನ್ನ ಮಗುವನ್ನು ಕಾಪಾಡಿದಿರಿ, ನನ್ನ ಪಾಲಿನ ದೇವರು ನೀವು...." ಎಂದಳು.... ಅದನ್ನು ಕೇಳಿ ಇವನು ಮನೆಯ ಕಡೆಗೇ ಹೆಜ್ಜೆ ಹಾಕತೊಡಗಿದ........
೦೨ : ಮಂಗ ಮನಸ್ಸು.......
ಈ ನಿಸರ್ಗಕ್ಕೆ ಅಂಜಿಕೊಂಡೇ ಬದುಕಿದ ಆ ಗ್ರಹದ ಮಂಗನ ಮನದಲ್ಲೊಮ್ಮೆ ನಿಸರ್ಗವನ್ನೇ ಆಳುವ ಸಾಧ್ಯತೆಯ ಬಗ್ಗೆ ಕುತೂಹಲ ಮೂಡತೊಡಗಿತು......!
ಮನುಷ್ಯ ಹುಟ್ಟಿದ...!! 'ತನ್ನ ಗ್ರಹವನ್ನೇ 'ಭೂಮಿ' ಎಂದು ಕರೆದುಬಿಟ್ಟ.......
೦೩ : ಸುಳ್ಳಾದ ನಿರೀಕ್ಷೆ......
"ಆತ.... ಅವಳ ಹಿಂದೆಯೇ ನಡೆಯುತ್ತಿದ್ದ....!! ಆಕೆ...... ನಿಧಾನವಾಗಿ ಹೆಜ್ಜೆ ಹಾಕಿದಳು........
ನಿರೀಕ್ಷೆ ಸುಳ್ಳಾದ ಮೇಲೆ .....ದಾಟಿಹೋದವನನ್ನು ಹಿಂಬಾಲಿಸುವ ಸರದಿ ಅವಳದಾಯಿತು......"
೦೪ : ಜಿನುಗಿದ ರಕ್ತ....
ರಕ್ತ,ಮಾಂಸ ತುಂಬಿದ ಮೂಳೆಯೊಂದನ್ನು ಕಂಡು ಹಿರಿಹಿರಿ ಹಿಗ್ಗಿದ ನಾಯಿಯು, ಮೂಲೆಯೊಂದರಲ್ಲಿ ಕುಳಿತು ಅದನ್ನು ಸವಿಯ ತೊಡಗಿತ್ತು. ರಕ್ತ ಮುಗಿದು ಮಾಂಸ ಕಳೆದು ತಾಸುಗಟ್ಟಳೆ ಕಳೆದಮೇಲೂ ಬರಿ ಮೂಳೆಯನ್ನಗಿಯುವುದರಲ್ಲೇ ಪರಮಾನಂದವನ್ನನುಭವಿಸುತ್ತಿತ್ತು. ಅದರ ದವಡೆಯೆಡೆಯಿಂದ ರಕ್ತ ಜಿನುಗುತ್ತಿತ್ತು.......!!
೦೫ : ಸಾವಿನ ಸೂಚನೆ......
ಆತ ತನಗೆ ಸಾವು ಬರುವ ಸೂಚನೆಯನ್ನು ಮುಂಚಿತವಾಗಿ ತಿಳಿಯುವ ವರವನ್ನು ಆ ದೇವರಿಂದ ಪಡೆದಿದ್ದ....ಮುಪ್ಪಿನಲ್ಲಿ ತೀವ್ರವಾದ ಖಾಯಿಲೆ ಬಿದ್ದ....... "ಹೆಚ್ಚೆಂದರೆ ಒಂದು ವಾರ"...! ಡಾಕ್ಟರ್ ಮರೆಯಲ್ಲಿ ಮಗನಿಗೆ ಹೇಳಿದ್ದು ಕೇಳಿಸಿಕೊಂಡ... ...ಓಹ್... ದೇವರು ತನಗೆ ಮೋಸ ಮಾಡಿದ ಎಂದು ದೂರಿದ. ...........
ಪಾಪ ತನ್ನ ಕೂದಲು ಹಣ್ಣಾಗುತ್ತಿರುವುದನ್ನೂ, ಚರ್ಮ ಸುಕ್ಕುಗಟ್ಟುತ್ತಿರುವುದನ್ನೂ ಆತ ಗಮನಿಸಿಯೇ ಇರಲಿಲ್ಲಾ.......
೦೬ : ಗೆಜ್ಜೆ ನಾದ.......
ಆತ ಜೀವನದ ಸಂಜೆಯಲ್ಲಿದ್ದ....... ಮನದ ಬಯಲಲ್ಲಿ ಬಿಚ್ಚಿಕೊಂಡಿದ್ದ ತನ್ನ ಯೌವ್ವನದ ನೆನಪುಗಳ್ನ್ನು ಹುಡುಕುತ್ತಾ... ಸಿಕ್ಕಿದ್ದನ್ನು ಬಾಚಿಕೊಳ್ಳುತ್ತಾ... ಹೊರಟ.....
ಹೀಗೇ ಸಾಗುತ್ತಿರುವಾಗ..... ಅಲ್ಲಿ ಆಕೆಯ ಹೆಜ್ಜೆಯ ಗುರುತು...... ಗೆಜ್ಜೆಯ ನಾದ ಆತನನ್ನು ಬಿಗಿದಪ್ಪಿಕೊಂಡಿತು.....
೦೭ : ಹಚ್ಚ ಹಸುರಿನ ನಗೆ....
ತನ್ನ ಸೀಮಂತಕ್ಕೆ ಅಣ್ಣಂದಿರು ಕೊಟ್ಟ ಕಾಮನಬಿಲ್ಲಿನ ಉಡುಗೊರೆಯನ್ನು ಕಂಡ ಆ ಭೂಮಿ ತಾಯಿ ಹಚ್ಚ ಹಸುರಿನ ನಗೆ ಬೀರಿದಳು..........
೦೮ : ಕಳೇಬರವಾದಳು.....
ಒಡೆಯನ ತೋಟದಲ್ಲಿ ತನ್ನ ಜೀವಮಾನವೆಲ್ಲಾ ಕಳೆ ಕೀಳುತ್ತಿದ್ದವಳು ಒಂದು ದಿನ ದೇವರ ಕಾನಲ್ಲಿ ಕಳೇಬರವಾಗಿದ್ದಳು...
೦೯ : ಮೂರನೇ ಕ್ಕೋ....
ಗಾಳಿ ಬಂದಿಲ್ಲವೆಂದು ಆ ಮೋಡ ಕುಂತಲ್ಲೇ ಕುಕ್ಕರಿಸಿತ್ತು..... ಸೂರ್ಯ ಕಂಡಿಲ್ಲವೆಂದು ಆ ಗಾಳಿ ಬೀಸಿರಲೇಯಿಲ್ಲಾ .... ಕೋಳಿ ಕೂಗಿಲ್ಲವೆಂದು ಎದ್ದಿರಲಿಲ್ಲ ಈ ಲೋಕ....
ಕೋಳಿಯ ಒಂದು ದಿನದಾಯುಷ್ಯ ಜಾಸ್ತಿಯಾಗಿದ್ದು ಹಾಗೆ, ಮಾರನೇ ದಿನ ಕೋಳಿ ಕೊ ಕ್ಕೊ.... ಎಂದಿತು.... ಇನ್ನೂ ಒಂದು ಕ್ಕೋ... ಬಾಕಿಯಿತ್ತು...... ಅವನಿಗೆ ಎರಡು ದಿನದಿಂದ ಊಟವೇ ಇರಲಿಲ್ಲ.... ಕೋಳಿಯ ಮೂರನೇ ಕ್ಕೋ... ಅವನ ಹೊಟ್ಟೆಯೊಳಗಿಂದಲೇ ಕೇಳಿಬಂತು.....!!
೧೦ : ಪರಾಯಿ ಪಾಲು....
ಆತ ತನ್ನ ಆಫೀಸಿನ ಕಂಪ್ಯೂಟರಿನಲ್ಲಿ ಬೆಳಗಿನಿಂದ ಆಟವಾಡುತ್ತಿದ್ದ..... ಕಾಯುತ್ತಿದ್ದ.. ಅವಳ .. ಮೇಲಿಗಾಗಿ... ಪೋನ ರಿಂಗಣಿಸಿತ್ತು ....ಕಳಿಸಿರುವೆನೊಂದು ಮೇಲ್..... ಆಫೀಸ್ ಟೈಮ ಮುಗಿದೋಗಿತ್ತು....
೧೧ : ಕನ್ನಡಿಯ ಮುಷ್ಕರ.....
ಅವಳ ಕೋಣೆಯಲ್ಲಿದ್ದ ಆ ಕನ್ನಡಿ ಮುಷ್ಕರ ಹೂಡಿತ್ತು..... ಅಂದಿನಿಂದ ಆಕೆ ಮೊದಲಿಗಿಂತ ಲಕ್ಷಣವಾಗಿ ಕಾಣಿಸತೊಡಗಿದಳು.....(ಅವಳು-ಆತ್ಮ, ಕನ್ನಡಿ-ಅಹಂಕಾರ,)
೧೨ ; ನೇತ್ರದಾನ.....
ಆತನಿಗೆ ತನ್ನ ಸಾವು ಸಮೀಪಿಸುತ್ತಿದೆ ಎಂದೆನಿಸಿತು. ತಾನು ನೋಡುವುದು ಈ ಜಗತ್ತಿನಲ್ಲಿ ಇನ್ನೂ ಬೇಕಾದಷ್ಟಿದ್ದೆ. ತನಗೆ ಆರೋಗ್ಯವಂತ ಕಣ್ಣುಗಳಿವೆ,.....!!! ದೇವರು ಎಂತಹ ತಪ್ಪು ಮಾಡಿದ ಎಂದುಕೊಂಡ........ ಬಹುವಾಗಿ ಯೋಚಿಸಿದ... ನಂತರ ಒಂದು ನಿರ್ಧಾರಕ್ಕೆ ಬಂದ..... ನೇತ್ರದಾನಕ್ಕೆ ಹೆಸರು ನೋಂದಾಯಿಸಿಬಿಟ್ಟ.....!!!!
೧೩ : ಒಲಿದವಳು.........
ಹೊನ್ನನ್ನೂ ಮಣ್ಣನ್ನೂ ಹೇಗೋ ಒಲಿಸಿಕೊಂಡಿದ್ದ ಆತ, 'ಹೆಣ್ಣು' ತಾನಾಗಿ ಒಲಿಯಲೀ ಎಂದು ಕಾಯ್ದ.....? ... ಕೊನೆಗೂ ಹೆಣ್ಣೊಬ್ಬಳು ಒಲಿದಳು...! ಆತನ ಹೊನ್ನಿಗೆ , ಮಣ್ಣಿಗೆ....!!!!
೧೪ : ಕಾಯುತ್ತಿದ್ದನವ...
ಅಲ್ಲೊಬ್ಬ ಈತನಿಗಾಗಿ ಕಾಯುತ್ತ ಕುಳಿತಿದ್ದ. ಅದು ಇವನಿಗೂ ಗೊತ್ತಿತ್ತು...!!! ..ಆ ದಾರಿಯೆಡೆಗೆ ಮನಸಿಲ್ಲದ ಮನಸ್ಸಿನಿಂದಲೇ ನಡೆಯುತ್ತಿದ್ದ. ಹೋಗಲೇ ಬೇಕಿತ್ತು... ಅಲ್ಲಿ...... ನಡೆಯುತ್ತಿದ್ದವನಿಗೆ ಅವನ ರೂಪ ಗೋಚರಿಸಿತು... ಅದೇನೋ ಸೆಳೆತ...!!! ತನ್ನ ನಡಿಗೆಯ ವೇಗವನ್ನು ಹೆಚ್ಚಿಸಿದ...... ಬಂಧು ಬಾಂಧವರೆಲ್ಲರೂ ಬೇಡವೆಂದು ಗೋಗರೆದರೂ ಪ್ರಯೋಜನವಾಗಲಿಲ್ಲ. ಈತನ ಮುಖದಲ್ಲಿ ಅದೇನೋ ಮಂದಹಾಸ ಮಿನುಗುತ್ತಿದ್ದರೆ.... ಅಲ್ಲಿದ್ದವರ ಕಣ್ಣೀರ ಕೋಡಿ ಹರಿದಿತ್ತು.. ಕಾಯುತ್ತಿದ್ದವ ಕರೆದೊಯ್ದಿದ್ದ.....ಪರಲೋಕಕ್ಕೇ......
೧೫ : ನಿಟ್ಟುಸಿರು.....
ತನ್ನಮೇಲೆ ಲೇಪಿಸಿದ ಆ ಕಪ್ಪು ಡಾಂಬರಿನ ಹೊದಿಕೆಯಿಂದಾಗಿ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಈ ಭೂಮಿ ಅರ್ಧ ಘಂಟೆ ಸುರಿದ ಸೋನೆ ಮಳೆಗೆ ಸಮಾಧಾನದ ನಿಟ್ಟುಸಿರು ಬಿಟ್ಟಿತು........ ಆ ನಿಟ್ಟುಸಿರು ಆವಿಯಾಗಿ ಹೊರಹೊಮ್ಮಿತು......!!!
೧೬ : ಚೀಲದ ಭಾರ....
ದಿನಗೂಲಿ ಮಾಡುತ್ತಿದ್ದ ಆತ.... ತನ್ನ ಮಗ ತನ್ನಷ್ಟು ಕಷ್ಟ ಪಡಬಾರದೆಂದೆಣಿಸಿದ. ಚೆನ್ನಾಗಿ ಓದಿ ಒಳ್ಳೆಯ ಜಿವನವನ್ನು ನಡೆಸಬೇಕೆಂದು ಬಯಸಿ, ನಗರದ ಪ್ರಸಿದ್ಧ ಕಾನ್ವೆಂಟೊಂದಕ್ಕೇ ಸೇರಿಸಿದ್ದ...... ಹೀಗಿರಲು ಒಂದು ದಿನ ಮನೆಯ ಜಗುಲಿಯ ಮೇಲೆ ಬಿದ್ದಿದ್ದ ತನ್ನ ಮಗನ ಸ್ಕೂಲ್ ಬ್ಯಾಗನ್ನು ತೆಗೆದಿರಿಸಲು ಎತ್ತಿದ ಆತನಿಗೆ.... ತಾನು ಚಿಕ್ಕವನಿದ್ದಾಗ ಹೊರುತ್ತಿದ್ದ ಇಟ್ಟಿಗೆ ಬಾಂಡ್ಳಿಯೇ ತುಸು ಹಗುರವಾಗಿತ್ತೆಂದು ತೋರಿತು......!
೧೭ : ಒಂದು ದಿನದ ನಿದ್ದೆ........
ತಾಯಿಯಿಲ್ಲದ ತಬ್ಬಲಿ ಕೂಸು....... ತಂದೆಯೇ ಸರ್ವಸ್ವ...! ಸಹನೆಯೇ ಮೂರ್ತಿವೆತ್ತಂತಿರುವ ಆ ತಂದೆ ಆ ಕುಸನ್ನು ಮಲಗಿಸಲುಜೋಗುಳ ಹಾಡುತ್ತಾನೆ ಹದಿನಾಲ್ಕು ದಿನಗೂಡಿ ಮಲಗಿಸುತ್ತಾನೆ... ಅಂದು ಸುಖನಿದ್ದೆ ಕೂಸಿಗೆ...! ಎಬ್ಬಿಸಲೂ ಅಷ್ಟೇ ದಿನಗಳು ಎಲ್ಲವೂ ಆ ಪುಟ್ಟ ಮಗುವಿನ ಒಂದು ದಿನದ ಕಾರ್ಗತ್ತಲ ಸುಖನಿದ್ದೆಗಾಗಿ........ ಒಂದು ದಿನದ ಬೆಳ್ ಬೆಳದಿಂಗಳಿಗಾಗಿ.....!!
೧೮ : ಮತ್ತೆ ಬಾರದ ಮಳೆ......
ಅದೋ..ಆತ ನಿರೀಕ್ಷಿಸದ ಮಳೆ.... ಅದು. ಅದರಲ್ಲೇ ನೆನೆಯುತ್ತಾ ನಿಂತ. ಆನಂದದಿಂದ..... ಮಗನ ಮನದ ಭಾವಗಳಿಗೆ ಜಿವ ತುಂಬಿದ ಮಳೆ ಎಂದರಿಯದ ಆವನ ಇಷ್ಟಕ್ಕೆ ವಿರೋಧವಾಗಿ ಮದುವೆ ಮಾಡಿದರು...... ಅವನ ಜೀವನದಲ್ಲಿ ಬರಲೇಯಿಲ್ಲಾ.... ಮತ್ತೆ ಆ ಮಳೆ...!!
೧೯ : ಅಮರ ಪ್ರೇಮ.....
ಅದುವರೆಗೂ ನಿಶ್ಚಲವಾಗಿದ್ದ ಆ ದೀಪದ ಜ್ವಾಲೆಯು ಗಾಳಿಯ ಸಂಚಲಕ್ಕೆ ಮಾರು ಹೋಯಿತು. ಅವುಗಳೆರಡರ ನಡುವಿನ ಸೆಳೆತ, ಒಲವ ನರ್ತನಕ್ಕೆ ನಾಂದಿ ಹಾಡಿತು. ಕತ್ತಲಲ್ಲಿ ಅಂತ್ಯ ಕಂಡಿತು. ಗಾಳಿಯಲ್ಲಿ ಲೀನವಾದ ದೀಪವು ಮಧುರ ಪ್ರೇಮದ ಅಮರತ್ವವನ್ನು ಸಾರಿತು.....!
೨೦ : ಮರುಗಿದ ಲೇಖನಿ....
ಕಥೆಗಾರನ ಮೌನವನ್ನು ಕಂಡು ಲೇಖನಿ ಕಂಬನಿದುಂಬಿ ಮರುಗಿತು.
೨೧ : ಯೋಚನೆ...
'ಭಯಾನಕ ರಾತ್ರಿ'...... ಆ ಬ್ಯಾಂಕಿನ ಕಾವಲುಗಿದ್ದ ಸೆಕ್ಯುರಿಟಿ ಗಾರ್ಡ್ ತನ್ನ ಮನೆ-ಹೆಂಡತಿ-ಮಕ್ಕಳ ಬಗ್ಗೆ ಯೋಚಿಸತೊಡಗಿದ.
೨೨ : ಒಲವ ನೌಕೆ......
ಕನಸುಗಳೆಂಬ ನೂರಾರು ದೋಣಿಗಳು ಆತನ ಕಂಗಳ ಸಾಗರದಲ್ಲಿ ಬಿಡಾರ ಹೂಡಿದ್ದವು. ಒಂದೊಂದು ದೋಣಿಯದೂ ಒಂದೊಂದು ದಿಕ್ಕು. ಆದರೂ ಎಲ್ಲವುಗಳ ಗುರಿಯೊಂದೇ..... ಯಾವ ದೋಣಿಯನ್ನೇರಲೀ ಎಂಬ ಗೊಂದಲದಲ್ಲಿದ್ದ್ದ ಆತನನ್ನು ಕರೆದಿದ್ದಳು ತನ್ನೊಲವಿನ ನೌಕೆಯಲ್ಲಿ .......!! ಆ ಎಲ್ಲಾ ನೌಕೆಗಳ ಜೊತೆಗೆ......
೨೩ : ತುಂಬಿದ ಕೊಡ....
ತುಂಬಿಹೋಗಿದ್ದ ತನ್ನ ಪಾಪದ ಕೊಡವನ್ನು ಆತ ತಾನೂ ಹೊರಲಾರದೇ ಇತರರ ಭುಜದ ಮೇಲಿಟ್ಟು ಹೊರಿಸಿದ ............!!.....ಸಮಯದೊಂದಿಗೆ ಆ ಕೊಡವೂ ದೊಡ್ಡದಾಗುವುದು ಅನಿವಾರ್ಯವಾಯಿತು....!!
೨೪ : ಆತ್ಮಹತ್ಯೆ..........
ತಮ್ಮಷ್ಟಕ್ಕೆ ತಾವೇ ಕಳಚಿ ಬೀಳುತ್ತಿದ್ದ ಆ ಹಳೇಯ ಕಟ್ಟಡದ ಗೋಡೆಗಳು, ಇನ್ನೆರಡು ತಿಂಗಳುಗಳಲ್ಲಿ ನಿಗದಿಯಾಗಿದ್ದ ತನ್ನ ಕಟ್ಟಡದ ಡಮಾಲಿಷನ್ನಿನ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯ ಆತ್ಮಹತ್ಯೆಯಂತೆ ತೋರುತ್ತಿತ್ತು.....!!
೨೫ : ವಾಸ್ತವದ ವಾತ್ಸಲ್ಯ.......
ತಾಯಿಯಾದಾಗಿನ ಸಾರ್ಥಕ ಭಾವ ಕರುಳಬಳ್ಳಿಯ ಕತ್ತರಿಸಿದ ನೋವಿನ ವಾಸ್ತವವನ್ನು ಮರೆಸಿತ್ತು.......
೨೬ : ನಿಸ್ವಾರ್ಥಿ......
ಸ್ವಾರ್ಥಿ ನದಿಯನ್ನು ಈಜಿ ದಾಟಿದ, .........ನಿಸ್ವಾರ್ಥಿ....? ಸೇತುವೆ ಕಟ್ಟಿದ....!!
೨೭ : ಭಕ್ತಿಯ ಪರಾಕಾಷ್ಟೆ....
ವಾನರ ಸೇನೆ ತಾನು ಹೊತ್ತು ತರುವ ಪ್ರತಿ ಕಲ್ಲಿನ ಮೇಲೆ ರಾಮನಾಮ ಬರೆದು ಸಮುದ್ರಕ್ಕೆಸೆಯಲು ಆ ಕಲ್ಲುಗಳೆಲ್ಲ ತೇಲಿ ಸೇತುವೆ ನಿರ್ಮಾಣವಾಗುತ್ತಿತ್ತು.... ಈ ವಿಷ್ಯ ತಿಳಿದ ಶ್ರೀ ರಾಮ ತಾನೇ ಒಂದು ಕಲ್ಲನ್ನು ತೆಗೆದು ಸಮುದ್ರಕ್ಕೆಸೆದ,,.....!!! ಅಲ್ಲಿದ್ದವರ ನಿರೀಕ್ಷೆ ಸುಳ್ಳಾಯಿತು....? ಕಲ್ಲು ತಳ ಸೇರಿತು....!!!! ...ಭಕ್ತಿಯ ಭಾವ ದೈವತ್ವವನ್ನೂ ಮೀರಿಸಿತ್ತು.....!!!
೨೮ : ಕನಸ ಕೊಂಡವನು...
ಕನಸುಗಳನ್ನು ಮಾರುತ್ತಿದ್ದವನನ್ನು ಕಂಡ ಆಕೆ ನಸು ನಕ್ಕಳು.....!! ತದನಂತರ ಆತ ಆಕೆಯಿಂದಲೇ ಕನಸುಗಳನ್ನು ಕೊಳ್ಳುವಂತಾಯಿತು....!!
೨೯ : ಕಾಣದ ಧೂಳು...
ಆ ಕಿಟಕಿಯ ಗಾಜುಗಳನ್ನು ಅದೆಷ್ಟೇ ಶುಚಿಗೊಳಿಸಿದರೂ ನೋಟ ಮಾತ್ರ ಇನ್ನೂ ಅಸ್ಪಷ್ಟ ....!! ಗಾಜಿನ ಇನ್ನೊಂದು ಬದಿಗೆ ಧೂಳು ಹಾಗೇ ಇತ್ತು......!!
೩೦ : ಆಶಾವಾದಿ...
'ರಾತ್ರಿ' ಎಂದೊಡನೆ ನಿರಾಶಾವಾದಿ ಕತ್ತಲನ್ನು ಕಲ್ಪಿಸಿಕೊಂಡ.....! ಆಶಾವಾಡಿ ....? ಬೆಳದಿಂಗಳನ್ನು....!!
೩೧ : ಜೊತೆಯಾಗಿ....
ಏಕಾಂಗಿಯಾಗಿರಲು ಬಯಸಿದವನಿಗೆ ಒಂಟಿತನ ಜೊತೆಯಾಯಿತು....!!
೩೨ : ಸರಿದ ಪರದೆ....
ನಾಚಿಕೆಯ ಪರದೆ ಸರಿಸಲು ಕತ್ತಲ ಮೊರೆಹೋದರು.....!!
೩೩ : ಮಾನವತೆ.....
'ಗರ್ಭ'ಗುಡಿಯಿಂದಾಚೆ ಹೊರಬಂದ ಭಗವಂತನ ಪ್ರತಿರೂಪವು ದಿನಗಳುರುಳಿದಂತೇ ತನ್ನ ದೈವತ್ವವನ್ನು ಕಳೆದುಕೊಂಡು ಸಹಜ ಮಾನವತೆಯ ಸ್ಥರಕ್ಕೆ ಕುಸಿಯಿತು....!!
೩೪ : ದರ್ಪಣ ಸುಂದರಿ.......
ಅಂದಿನ ಸಮಾಜದ ಹುಳುಕನ್ನು ಬಿಂಬಿಸುವ ಶಿಲ್ಪವೊಂದನ್ನು ರಚಿಸಲು ತೊಡಗಿದವನ ಯೋಚನಾ ಲಹರಿ ಇದ್ದಕ್ಕಿದ್ದಂತೆ ಆತ್ಮವಿಮರ್ಶೆಯೆಡೆಗೆ ತಿರುಗಲು, "ದರ್ಪಣ ಸುಂದರಿ" ಯ ಸೃಷ್ಟಿ ಮಾಡಿತು.....!
೩೫ : ಸರ್ಕಸ್ಸಿನ ಕುದುರೆ....
ಹದಿಹರೆಯದ ವರೆಗೂ ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ (ಮನಸೆಂಬ) ಕುದುರೆಯು, (ಬದುಕೆಂಬ) ಸರ್ಕಸ್ ಮಾಡಲು ಬಲು ಕ್ರೂರವಾಗಿ ಪಳಗಿಸಲ್ಪಟ್ಟಿತು. ಕೆಲವು ಕೊನೇಯವರೆಗೂ ಸೆರೆಯಾಗದೇ ಕಾಡು ಕುದುರೆಯಾಗೇ ಉಳಿದರೆ, ಮತ್ತೆ ಕೆಲವು ಹುಟ್ಟುತ್ತಲೇ ಸರ್ಕಸ್ಸಿಗೆ ತಳ್ಳಲ್ಪಟ್ಟವು.....!!! ಬಲವಂತವಾಗಿ...!!
೩೬ : ಬಲಿದಾನದ ಗತಿ.....
ವೀರ ಯೋಧನ ಬಲಿದಾನಕ್ಕೆ ರಾಷ್ಟ್ರಪತಿಗಳ ಕ್ಷಮಾದಾನ ಅವಮಾನವೆಸಗಿತು....!
೩೭ : ನೆರಳಿಗಾಗಿ ಹುಡುಕಾಟ.....
ಅಮಾವಾಸ್ಯೆಯ ರಾತ್ರಿಯಲ್ಲಿ ಆ ಊರಿನ ಕೊನೇಯ ಬೀದಿಯಲ್ಲಿ ನಡೆದು ಹೋಗುತ್ತಿದ್ದವನು , ಬೀದಿ ದೀಪಗಳು ಒಮ್ಮೆಲೇ ಆರಿಹೋದಾಗ ತನ್ನ ನೆರಳಿಗಾಗಿ ಹುಡುಕಾಡತೊಡಗಿದನು....!!!
೩೮ : ಒಬ್ಬೊಬ್ಬ್ರೇ..ಓಡಾಡಬೇಡಿ....
ದಾರಿಯಲ್ಲಿ ಒಬ್ಬೊಬ್ಬರೇ ಓಡಾಡಬೇಡೀ ಎಂದವನ ಜೊತೆ ಬೇರೆ ಯಾರೂ ಇದ್ದಂತಿರಲಿಲ್ಲ....!
೩೯ : ನೇಣು ಹೇಳಿದ ಕಥೆ.....
ಆತ ನನ್ನನ್ನು ತನ್ನೆರಡೂ ಕೈಗಳಲ್ಲಿ ಹಿಡಿದು ಚುಂಬಿಸಿದ....! ನಾನವನ ಕೊರಳನ್ನಾವರಿಸಿದೆ....!! ನನ್ನ ಹಿಡಿತ ಬಿಗಿಯಾಗುತ್ತಲೇ ಹೋಯಿತು.... ಆತನ ಉಸಿರು ನಿಲ್ಲುಅ ವರೆಗೂ...................... ನಾನು ಕಂಡಿರಲೇ ಇಲ್ಲಾ..ಮೃತ್ಯುವ್ನ್ನೇ ಹೆದರಿಸಿದ ಧೀರ..... ಭಗತ್ ಸಿಂಗ್.....!!
೪೦ : ಚಾಂಡಾಲ....
ಅಧಿಕಾರಿಯ ಅವತಾರದಲ್ಲಿ ಆತನ ಜೀವ ತೆಗೆದ......! ಲಂಚಾಸುರ....., ಆತನ ಹೆಣದಲ್ಲಿಯೂ ಹೆಣ ಕಂಡ.....; ಚಾಂಡಾಲನ ವೇಷ ಧರಿಸಿದ......!!! ಸುಡುಗಾಡಿನಲ್ಲಿ...!!
೪೧ : ಅಗಿಯದ ಅಗುಳು....
ಆಹಾರಕ್ಕಾಗಿ ಅಲೆದಾಡುತ್ತಿದ್ದ ಅಳಿಲೊಂದು ಮನೆಯೊಂದರ ಅಂಗಳದಲ್ಲಿ ಹರಡಿದ ಕಾಳುಗಳನ್ನು ಕಂಡು ಕಣ್ಣರಳಿಸುತ್ತಾ ಮರದಿಂದ ಕೆಳಗೆ ಜಿಗಿಯಿತು. ಮೇಲೆ ಆಗಸದಲ್ಲಿ ಗಿರಕಿ ಹೊಡೆಯುತ್ತಿರುವ ಹದ್ದು, ಅಂಗಳದಲ್ಲಿಳಿದ ಅಳಿಲನ್ನು ಕಂಡು 'ಇಂದಾದರೂ ನನ್ನ ಮಕ್ಕಳ ಹೊಟ್ಟೆ ತುಂಬೀತು' ಎಂದು ಆಲೋಚಿಸುತ್ತಿತ್ತು....... ಅಳಿಲು ಕೊನೆಯುಸಿರೆಳೆದಾಗ ಅಗಿಯದ ಅಗುಳು(ಕಾಳು) ಅಳಿಲಿನ ಬಾಯಲ್ಲಿ ಹಾಗೇ ಇತ್ತು.....
೪೨ : ಅಂಚೆಯವನ ಪತ್ರ......
ಊರಿನವರಿಗೆಲ್ಲಾ ಅವರವರಿಗೆ ಬಂದ ಪತ್ರಗಳನ್ನು ಓದಿ ಹೇಳುತ್ತಿದ್ದ ಅಂಚೆಯಣ್ಣ, ...... ಸೇನೆಯಲ್ಲಿದ್ದ ತನ್ನ ಓರ್ವನೇ ಮಗನ ಸಾವಿನ ಸುದ್ದಿಯನ್ನು ಹೊತ್ತು ತಂದ ತೆಲಿಗ್ರಾಮಿನ ವಿಷಯವನ್ನು ತನ್ನ ಹೆಂಡತಿಗೆ ಹೇಳುವಾಗ ಮಾತೇ ಹೊರಡಲಿಲ್ಲ......
೪೩ : ಹಣತೆ......
ದೀಪಾವಳಿಯ ದಿನ ತನ್ನವನಿಗಾಗಿ ಹಣತೆ ಹಚ್ಚಿ ಕಾಯುತ್ತಿದ್ದ ಆಕೆ, ಆ ಹಣತೆಯಲ್ಲಿ ಎಣ್ಣೆ ಮುಗಿದು ಹೋಗುತ್ತಿದ್ದಂತೇ ಮತ್ತೆ ತುಂಬುತ್ತಿದ್ದಳು............
ಹಣತೆಯಲ್ಲಿದ್ದ ಎಣ್ಣೆಯ ಪ್ರಮಾಣ ಆಕೆಯ ಮನದಲ್ಲಿ ಆತನಾಗಮನದ ಬಗೆಗಿನ ಭರವಸೆಯನ್ನು ಸೂಚಿಸುತ್ತಿತ್ತು........!!
೪೪ : ಧನಪಿಶಾಚಿ....!
ಕಷ್ಟಕ್ಕಾಗಲೆಂದು ಮಗಳ ಮದುವೆಯಲ್ಲಿ ಮಾಡಿಸಿ ಕೊಟ್ಟ ಒಡವೆಯೇ.. ಕಷ್ಟಕಾಲವ ತಂದೊಡ್ಡಿತು....? ಆ ಮಗಳ್ ಗಂಡನ ಮನದಲ್ಲಡಗಿದ್ದ ಧನ ಪಿಶಾಚಿಯ ರೂಪದಲ್ಲಿ........
೪೫ : ಶ್ರಮದ ಸೂಚನೆ....
ಪ್ರತ್ಯೇಕಿಸಲಾಗದಂತಿದ್ದ ಕಣ್ಣಹನಿ-ಬೆವರ ಹನಿಗಳು ಆತನ , ಸಾವಿನೊಂದಿಗೆ ಹೋರಾಡುತ್ತಿದ್ದ ತನ್ನ ಮಗನನ್ನು ಕಂಡು ಅನುಭವಿಸುತ್ತಿರುವ, ನೋವನ್ನೂ, ...! ಉಳಿಸಿಕೊಳ್ಳಲು ಪಡುತ್ತಿರುವ ಶ್ರಮವನ್ನೂ ಏಕ ಕಾಲಕ್ಕೆ ತೋರುತ್ತಿದ್ದವು...!!!
೪೬.: ಹೊರೆ ಇಳಿಸಿದರು...
..
ಪುಸ್ತಕದ ಹೊರೆಯನ್ನು ಇಳಿಸ ಬೇಕೆಂದು ಚಿಂತಿಸಿದ ಸರಕಾರ.. ಇದ್ದ ಪುಸ್ತಕಗಳನ್ನೆಲ್ಲಾ ಒಟ್ಟು ಸೇರಿಸಿ ಹೊಲಿದು ಮಕ್ಕಳ ಬೆನ್ನಿಗೆ ಹೇರಿತು..!! ಪುಸ್ತಕ ಒಂದೇ ಆಯ್ತು..!!