ಊರ್ಧ್ವರೋಮ..(ಊರ್ಧ್ವಕೇಶೀ)
ಪಾತ್ರಗಳು :- ಕೃಷ್ಣ, ಭೀಮ,
ಊರ್ಧ್ವರೋಮ,ಮತ್ತು ಧರ್ಮಜಾದಿಗಳು
ಸನ್ನಿವೇಶಗಳು :- ೧) ನದೀಮಧ್ಯದಲ್ಲಿ ಖಡ್ಗವನ್ನು ಮಸೆಯುತ್ತಿರುವ
ಊರ್ಧ್ವರೋಮ, ಕೃಷ್ಣನ ಆಗಮನ ಮತ್ತು ಸಂವಾದ( ಕೃಷ್ಣ,ಊರ್ಧ್ವರೋಮ)
೨) ಯುದ್ಧದ ಬಲಿಗಾಗಿ ಜಿಜ್ಞಾಸೆ-ರಾಜಾಂಗಣದಲ್ಲಿ,
(ಕೃಷ್ಣ,ಭೀಮಾರ್ಜುನಾದಿಗಳು (ಊರ್ಧ್ವರೋಮ)
೩) ತಾನೇ ಬಲಿಯಾದ ಊರ್ಧ್ವರೋಮ ( ಭೀಮ,ಊರ್ಧ್ವರೋಮ)
೪) ಕುರುಕ್ಷೇತ್ರ, (ಭೀಮಾರ್ಜುನರು,ಕೃಷ್ಣ,ಊರ್ಧ್ವರೋಮನ ರುಂಡ)
{ಮೂಲ ಮಹಾಭಾರತದಲ್ಲಾಗಲೀ ಅಥವಾ ಮಹಾಭಾರತದ ಕನ್ನಡದ
'ಮಾರ್ಗಕಾವ್ಯ'ಗಳೆನಿಸಿಕೊಂಡ ಜೈಮಿನೀ ಭಾರತದಲ್ಲಾಗಲೀ,
ಪಂಪಭಾರತದಲ್ಲಾಗಲೀ, ಗದಾಯುದ್ಧದಲ್ಲಾಗಲೀ ಉಲ್ಲೇಖ ಕಾಣಸಿಗದು, ಪ್ರಕ್ಷಿಪ್ತ
ಭಾಗವೆಂಬಂತೆಯೂ ಲಭ್ಯವಿ ಲ್ಲದ,ಅನೇಕ ಉಪಾಖ್ಯಾನಗಳಲ್ಲಿ ಈ
'ಊರ್ಧ್ವರೋಮ' ಪ್ರಸಂಗವೂ ಒಂದು. ಇದು ನಮ್ಮ ಹಿರಿಯರ ಬಳುವಳಿ.
ಕರ್ಣಾಕರ್ಣಿಯಾಗಿ ವಿವಿಧ ಕಲಾ ಪ್ರಕಾರಗಳಲ್ಲಿ ವ್ಯಕ್ತಗೊಳ್ಳುತ್ತ ಬಂದಿರುವ
ಕಥೆ!!!. ಆದರೂ ರಂಗದ ಆಡಂಬರಕ್ಕೆ ಅತ್ಯಂತ ಯಶೋಪೂರ್ಣವಾದ
ಮೆರುಗನ್ನು ನೀಡಬಲ್ಲ ಶಕ್ತಿ ಈ ಆಖ್ಯಾನಕ್ಕಿದೆ. ಹೀಗಿದ್ದರೂ ಬೇರೆ ಬೇರೆ ಕಲಾ
ಪ್ರಕಾರಗಳಲ್ಲಿ ಕಥೆಯ ಹಂದರವು ವ್ಯತ್ಯಸ್ತವಾಗಿರುವುದು ಗೋಚರಿಸುತ್ತದೆ.ಇದಕ್ಕೆ
ಹಲವು ಕಾರಣಗಳಿರಬಹುದು.ಇಂತಹ ಒಂದು ವಸ್ತುವನ್ನಿರಿಸಿಕೊಂಡು ಬಹು
ಹಿಂದೆ ಕೃಷಿಗೆ ತೊಡಗಿಸಿಕೊಂಡಿದ್ದರ ಫಲವೇ ಈ ಪ್ರಸಂಗ. ಆಗಿನ ನನ್ನ
ತೊದಲ್ನುಡಿಗಳನ್ನು ಈಗಿನ 'ಬಾಲಭಾಷೆಯಲ್ಲಿ' ಪರಿಷ್ಕರಿಸಿ ತಮ್ಮ
ಮುಂದಿಡುತ್ತಿದ್ದೇನೆ............ ಓದಿ ಆನಂದಿಸಿ, ಪ್ರೋತ್ಸಾಹಿಸಿ. .}
"ರಕ್ತ ರಂಗಸ್ಥಳ"
.ಹ್ವಾಯ್,,,, ಇಲ್ಲ ಬಿಡಿ. ಊಹೂಂ,,...... ತುಂಬ ಕಡಿಮೆ! ಯಾರು?ಅಲ್ಲಪ್ಪಾ... ಕಡಿಮೆ ಇದ್ದಾರೆ ಅಲ್ಲಿ ...... 'ಅಪ್ಪಂಗೇ ಹುಟ್ಟಿದೋರು'!!! ಯೆಲ್ಲ
ಮಂತ್ರಕ್ಕೇ ಮಾವಿನಕಾಯಿಗೇ ಹುಟ್ಟಿದೋರೆ . ಥೂ,,,, ಯೇನು ಖರ್ಮವೋ
ಇವರದ್ದು.!!! ಹೋದ ಹೋದಲ್ಲಿ ಹೆಂಡಿರ? ಕಟ್ಕೊಂಡ್ರು, ಮಡಿಲೀಗೆ
ಒಂಡೆರಡು ಮಕ್ಕಳನ್ನೂ ಕೊಟ್ಟು, ಹೊರಟೇ ಬಿಟ್ರು!!!!!!! ಹಾಗೆ
ಹುಟ್ಟಿದೋನೇ ಈ ನಮ್ಮನಾಯಕ !!!! ಅರಿತಿದ್ದನವ, 'ಕಲಿಭೀಮನೇ' ತನ್ನಪ್ಪ
ಎಂದು. ಯೇನೋ ರಕ್ತದ ಗುಣವಿರಬೇಕು, ಯುದ್ಧಕ್ಕೆ ಎದೆಯೊಡ್ಡುವಾಸೆ!!!.
ಬಂದೇ ಬಿಟ್ಟ!! ಗಜಪುರಕ್ಕೆ. ಅಪ್ಪನಿಗೆ ಬಲಭುಜವಾದ, ಬಿಡದಿಯೊಳಗೆ
ಗುರುತಿಸಿಕೊಂಡ!!ಅಪ್ಪನ ಗದೆಯ ಭಾರವನ್ನಳೆದ!! ಚಿಕ್ಕಪ್ಪನ ಬಿಲ್ಲ
ಮೀಂಟಿದ, ದೊಡ್ಡಪ್ಪನ ಧರ್ಮಕ್ಕೆ ತಲೆದೂಗಿದ!! ಆದರೂ ಕಂಕುಳ ಕತ್ತಿಗೆ
ಸಾಣೆ ಹಿಡಿಯುವುದ ಬಿಟ್ಟಿರಲಿಲ್ಲ..................ಅದಕ್ಕಾಗೇ ನದೀತೀರಕ್ಕೆ
ಹೋಗಿದ್ದ.
ಅಬ್ಬರಿಸಿ ಬೊಬ್ಬಿರಿದು ನೊರೆದೆರೆಗಳನ್ನು ಚಿಮ್ಮುತ್ತ, ತಾಯೊಡಲ
ಸೀಳಿ ಬರುವಂತೆ ಬಂಡೆಯಿಂದ ಬಂಡೆಗೆ ಕೊರಕಲಿನಿಂದ ಕೊರಕಲಿಗೆ
ಜಿಗಿಯುತ್ತ ಒಂದೇ ಸಮನೆ ತನ್ನ ಗಮ್ಯ್ದದೆಡೆಗೆ ಧುಮ್ಮಿಕ್ಕುತ್ತಿರುವ ಆ ನದೀ
ಮಧ್ಯದ ಬಂಡೆಗಳೆರಡರ ಮೇಲೆ ಕಾಲೂರಿ ನಿಂತು ಬಗ್ಗಿ ಇನ್ನೊಂದು
ಬೆಣಚುಗಲ್ಲಿಗೆ ಉಜ್ಜುತ್ತಿದ್ದ. ತನ್ನ ಒರೆಯಿಂದ ತೆಗೆದ ಝಳಪಿಸುತ್ತಿರುವ ಹರಿತ
ಖಡ್ಗವ ಇನ್ನೂ ಹದಗೊಳಿಸುವ ತವಕ!!!!......ಸೈಂ.... ಪೈಂ... ಸದ್ದು.
ಆಗಾಗ ಅಲಗನ್ನು ಬಾಯಿಂದ ಉರುಬಿ ಕತ್ತಿಯ ಹರಿತವನ್ನು ,
ಶೂರ್ಪಾಗ್ರವನ್ನು ಪರೀಕ್ಷಿಸುತ್ತಿದ್ದ. ಮತ್ತದೇ ಸೈಂ....ಪೈಂ...... ಕಲ್ಲು-ಖಡ್ಗದ
ಮಸೆಯುವಿಕೆಯಿಂದ ಹೊರಟ ಆ ಬೆಂಕಿಯ ಕಿಡಿಗಳು 'ತನ್ನೊಡಲ
ಕ್ರೋಧಾಗ್ನಿಯೇ ಕಿಡಿಯಾಗಿ ಚೆಲ್ಲಿದಂತೇ' , ಲಂಕೆಯನ್ನುರಿಸಿದ ಹನುಮ ಆ
ಮಹೋದಧಿಯಲ್ಲಿ ಬಾಲವನ್ನಜ್ಜಿದಂತೆ ಕಿಡಿಗಳು ನದಿಯ ನೀರಿನ
ಬಿಸಿಯೇರಿಸಿದ್ದವು!!!!. ............
.ಬೇಕಿತ್ತೇ? ಯೇಕೆ ಈ ರೋಷ?......... ಖಡ್ಗವೇತಕ್ಕೆ ಈ
ರೀತಿ ಹದಗೊಳಿಸಿದ್ದು?......... ಓಹೋ...... ಯಾರೀತ? ಮುಗಿಲ ಮೇಘವ
ಮುಟ್ಟುವ ತವಕದಲ್ಲಿರುವ ಮೇಲೆತ್ತಿದ ಕೇಶರಾಶಿ!!!ಭೂದೇವಿಯ
ಆಳ-ಅಗಲಗಳ ಅಂಗುಲದಲ್ಲ್ಳೆಯಬಲ್ಲ ಕಾಯ!!! ಅಬ್ಬಾ!,,,,,
ಭಯಂಕರ!!!ಬಂದನಲ್ಲಿಗೆ ...ಗೋವಿಂದ!! .....ಆಂ!!! ಯೆಲ್ಲಿಯ
ಅರಿಭಯಂಕರ ಆಹವ ಮಲ್ಲ!! ಯೆಲ್ಲಿಯ ಷೋಡಷ ಗೋಪಬಾಲೆಯರ
ನಳಿದೋಳ ಅಪ್ಪುಗೆಯಿಮ್ದ ನುಣುಚಿಕೊಂಡು ಬಂದ ಕನಸಿನ ಕಣ್ಮಣಿ!!!
ದಕ್ಷಿಣೋತ್ತರಗಳ ಸಮಾಗಮ!!! ಒಬ್ಬರನ್ನೊಬ್ಬರು ಕಣ್ಣನ್ನೇ
ನಂಬದಾದರು!!!!.
ಓಹ್... ಇವನು ..... ನಮ್ಮ ಮಧ್ಯಮನ ಕುಮಾರನಲ್ಲವೇ?....
ಹೆತ್ತಬ್ಬೆ ಇವ ಕಣ್ಣುಬಿಡುವುದರೊಳಗೇ ಕಾಣದಾಗಿ, ವೃಕೋದರನನ್ನೇ ಅಪ್ಪ
ಎಂದು ನಂಬಿ!! ಬಂದಿದ್ದಾನೆ. ಇಲ್ಲಿಗೆ. ಆದರೂ ಇವನಲ್ಲಿನ 'ಅಪ್ರತಿಮತೆ'
ಸಾಲದ್ದಕ್ಕೆ "ಪಿತ್ರಾಹತ" ವರಭಾಗ್ಯ ಬೇರೆ.!!! ಈ ಮಹಾಶಯನ ಕೆಣಕಿ
ಉಳಿದವರುಂಟೇ?.... ಅಯ್ಯಾ,,,,,, ಈ ರೀತಿ ಮಸೆಯುತ್ತಿರುವ ಖಡ್ಗಕ್ಕೆ
ಕೆಲಸವುಂಟೇ? ಮುಂದೆ?...ಹಾಂ!!!!! ಯಾರದೂ....... ನೊರೆದೆರೆಯ
ಅಬ್ಬರದ ಸಂದಿಯಿಂದೊಂದು ಸಲಿಲದ ಮಂಜುಳನಾದ ಕೇಳಿ
ಬರುತ್ತಿದೆಯಲ್ಲಾ?????? ಓಹ್... ಅಯ್ಯಂಗೆ ಅಯ್ಯ...! ದೇವರೂ.... ಏಕೆ?
... ಗೊತ್ತಿಲ್ಲವೇ ...ನಿನಗೆ?... ಮುಂದೊಂದು ದಿನ...... ಅಂದು ಕತ್ತರಿಸಿ
ಕುಣಿಸಿ ಕುಳ್ಳಿರಿಸಿದ ಆ ವಿಧಾತನ ರುಂಡಕ್ಕೆ ರಕ್ತದ ದಾಹ ತೀರಿಸುವೆ
ಎಂದಿರಲಿಲ್ಲವೇ ಭಗವಂತಾ?...ಅದಕ್ಕೇ ಬೇಕಾಗಿ ಈ ಸಿದ್ಧತೆ!!!!ಎಲಾ
ಇವನಾ!!! ಆಂ!!! ಬಿಟ್ಟಾನೇ ಇವನು. .... ತಿಳಿದವಂಗೆ ತಿಳಿಹೇಳಬೇಕಿಲ್ಲ!
ಅರಿಯದವ ಅಳುಕುವುದಿಲ್ಲ... ಹುಂಬ!!! ಸರ್ವನಾಶ ಮಾಡಿಬಿಡುತ್ತಾನೆ
ಇವನು!!!...ಧರ್ಮಾಧರ್ಮದ ವಿವೇಚನೆಯಿಲ್ಲ ಇದಕ್ಕೆ!!!! ಅದು ಹಾಗೇ
ಅಲ್ಲವೇ? ಬೀಜದಲ್ಲಿ ಗುಣವನೇಕವಿದ್ದರೂ ಕ್ಷೇತ್ರದಲ್ಲಿ ನೆಲುವಿಲ್ಲವಲ್ಲಾ???
ಹಾಂ.... ಹಾಂ.... ನನ್ನ ಮನೋ ಯಜ್ಞಕ್ಕೊಂದು ಬಲಿ ಬೇಕಲ್ಲಾ?/
....ಸಿಕ್ಕಿತು....!
ದಾಯಭಾಗಕ್ಕಾಗಿ ಹರಿಹಾಯಲೇ ಬೇಕಾದ ಪ್ರಸಂಗವೇನೋ
ಬಂದೇ ಬಿಟ್ಟಿತು!!! ಒಂದು 'ಶಕ್ತಿಯಜ್ಞ' ಆಗಬೇಕಿತ್ತು ಜಗನ್ನಿಯಾಮಕನಿಗೆ!!!
ಆಹವದ ಆರಂಭಕ್ಕೆ!!! ಅಣಿಯಾಗಿ ನಿಂತು ಪಾಂಡುಸುತರು ಅಧ್ವರದ
ವಿಚಾರವಾಗಿ ಚಿಂತಿಸುತ್ತಿದ್ದರು. ಪಕ್ಕದಲ್ಲೇ ನಿಂದು ಈ ಆಹವಮಲ್ಲ
ಕೇಳಿಸಿಕೊಳ್ಳುತ್ತಿದ್ದ... ಅಪ್ಪನ ಆಸೆಗೆ ಆಸರೆಯಾಗುವ ತವಕ!!! ಕೃಷ್ಣ
ಹೇಳಿದ
ಯುದ್ಧೋತ್ಸಾಹಕ್ಕಾಗಿ ಶಕ್ತಿಯಾಗವಾಗಬೇಕು. ಅದಕ್ಕೆ ಒಂದು ಬಲಿ
ಸಿದ್ಧಗೊಳ್ಳಬೇಕು ಜಗನ್ನಾಟಕ ಸೂತ್ರಧಾರಿಗೆ ಅರಿವಿತ್ತು ಇವನ
ಅಟಾಟೋಪ!! ತಣಿಸಬೇಕಿತ್ತು..... ವೃಕೋದರಾ!.. ಶಿರದ ರೋಮಗಳೆಲ್ಲ
ಶಶಿರವಿಯ ಚುಂಬಿಪನ ತಲೆಕಡಿದು ತರಬೇಕಲ್ಲಾ . ನಿನ್ನ ಮಗನೇ ಈ
ಬಲಿಯನ್ನರಸಿ ತರಬಲ್ಲ!! ಅಲ್ಲವೇ?? ಸಾಕಿತ್ತು ಇವನಿಗೆ !!!
'ಮಗನೇ.. ತರಬಲ್ಲೆಯಾ ನೀನು?' ... ತನ್ನ ತನ್ನ ಹೆಸರಿನ
ಅರ್ಥವನ್ವರ್ಥವಾಗಿಪ್ಪ ಬಗೆಯನರಿಯದ ಹುಂಬ!! ಪಾಪ...
ಅಪ್ಪಾ...ಯೆಂಥವ
ಬೇಕೂ?... ಓ ಅಂಥವನರಸಲಸದಳವೇ ಈ ನಿಮ್ಮ ಕುಮಾರಕಂಗೆ?.....
ಮಧ್ಯಮನುಸುರಿದಂಥವನ ತಲೆತರಲು
ಓಡಿದ.. ಭೂಪ!!! ಇದೋ ಬಂದೆ... ಆಳುವವನಾಳಾಗಿ
ಅರಸಲಾರೆನೇ ಒಂದು ನರ ನೊರಜನ್ನು!!! ...ಒರೆಯ
ಖಡ್ಗ ಗಾಳಿಯನ್ನು ಸೀಳಿತು. ಭೂಮಿ
ಬಾಯ್ಬಿರಿದಂತಾಯ್ತು!!! ಕಂದನ ಕಣ್ಣುಗಳು ಅರಸಿಅರಸಿ
ಉರಿದು ಹೋದವು!! ಊಹೂಂ... ಇಲ್ಲ..ಯೆಲ್ಲೆಲ್ಲಿ
ಹುಡೂಕಿದರೂ ಅಂಥವನ ಸುಳಿವೇ ಇಲ್ಲ... ತಿರುಗಿ ದಣಿದು ಬಾಯಾರಿ
ಬಸವಳಿದ !!!! ಬಳಲಿ ಬಾಯಾರಿದವ ನೀರಿಗಾಗಿ ತೊರೆಯ ತೆರೆಗೆ
ಬಾಯೊಡ್ಡಲನುವಾದ!! ಆಗ ಮನದಲ್ಲಿ ಅಪ್ಪನ ಮಾತ ಮೀರಿದ ಕಡುಪಾಪಿ
ಪಟ್ಟ ಎನಗಂಟದಿರದೇ ಯೇನು ಮಾಡಲೀ ...ಹಿಂದೆ ಯಾರೋ ಹೇಳಿದ್ದರು
ಅವಗೆ ರಾಮ!! ಪಿತೃವಾಕ್ಯ ಪರಿಪಾಲಕ!!! ನಾನೇನು ಕಡಿಮೆಯೇ?...
ಊಹೂಂ.. ಬಗ್ಗಿ ಬಾಯೊಡ್ಡಿದಾಗ ಕಂಡಿತ್ತು ಅವನಿಗೆ ಸ್ವಮುಖ!!! ತನ್ನ
ಶಿರದಲ್ಲಿರುವ ಕೇಶರಾಶಿ!!! ಆ ದಿವಾಕರಂಗೆ ಚಾಮರಸೇವೆಗೈಯ್ಯುತ್ತಿರುವ
ಪ್ರತಿಬಿಂಬ!!! ..........ಇನ್ನೇಕೆ ತಡ!! ಹೋಗಿ ಹೇಳಬೇಕು!!! ಸರ
ಸರನೆ ಸಾಗಿಬಂದ. ಅಪ್ಪಾ.. ಅಪ್ಪಾ.. ಅದೋ ನೀನೆಣಿಸಿದ ಬಲಿ
ಸಿದ್ಧವಾಗಿದೆ.. ಅಲ್ಲಿ ಅವಗುಂಠನವ ಮುಚ್ಚಿ ಮಲಗಿಸಿರುವೆ. ಹೋಗು....
ತುಂಬ ಕಷ್ಟ ಪಟ್ಟು ಹುಡುಕಿ ತಂದಿರುವೆ !! ಹೋಗಿ ನೋಡುತ್ತಿರಬೇಡಾ..
ಅವಗುಂಠನವನ್ನೆತ್ತಬೇಡ!! ಕೊಚ್ಚು!!! ಅವನನ್ನು.. ಕೊಡು
ಬಲಿಯನ್ನು....ಒರೆಯ ಖಡ್ಗಕ್ಕೆ ಕೈಯಿಕ್ಕಿದ್ದ ಕಲಿಬೀಮ.... ನಡೆದನಲ್ಲಿಗೆ...
ಎಲ್ಲಿಗೆ?.
ತಾನೇ ಮುಸುಕೆಳೆದು ಮಲಗಿದ್ದ ಶಕ್ತಿಗೆ ಶಕ್ತಿತುಂಬಲು!! ಬಲಕ್ಕೆ
ಬಲಿಯಾಗಲು.... ಯಜ್ಞಫಲದ ಕನಸಿನ ಕಪ್ಪತವನ್ನೇರಿದ ವೃಕೋದರ...
ಅತ್ತಿತ್ತ ನೋಡಲಿಲ್ಲ.... ಕೊಚ್ಚಿಯೇಬಿಟ್ಟ... ಕಾಲಬುಡದಿಂದ ಕೊಚ್ಚಿ ಕೊಚ್ಚಿ
ಕೆನ್ನೆತರ ಹೊಳೆ ಹರಿಸಿದ, ..........'ಕತ್ತಿಗೆ' ಕತ್ತಿಯಲಗು ಸೋಂಕುತ್ತಲೇ...
..........ನಿಲ್ಲು!... ಅಪ್ಪಾ... ಒಂದೇ ಒಂದು ಆಸೆ....! ಆಹವದಿ
ಜಯಿಸಬೇಕೆಂದಿದ್ದೆ... ಆಗದದು.. ಅದರೂ ಕುರುಕ್ಷೇತ್ರ್ವ ಈ ಕಣ್ಣುಗಳಿಂದ
ನೋಡುವಾಸೆ... ಅಪ್ಪಾ!......ಆಂ...ಪರಿಚಿತ ಧ್ವನಿ.. ಅಯ್ಯೋ.....
ಮಗನೇ....ಮುಚ್ಚಿದ್ದ ಮುಸುಕೆಳೆದ ಮಗನ ರುಂಡಮಾತ್ರವುಳಿದಿದೆ!!!!
ಕೃಷ್ಣಾ......... ಕೊಲ್ಲಿಸಿದೆಯಾ ಮಗನನ್ನು ನನ್ನ ಕೈಯ್ಯಿಂದಲೇ ನನ್ನ ಮಗ....!
ಕಪಟನಾಟಕ ಸೂತ್ರಧಾರೀ..... ಆಸೆ ತೀರಿತೇ?..... ವರ ಫಲಿಸಿತೇ..?
'ಪಿತ್ರಾಹತ'.... ಅಯ್ಯೋ ಮಗನೇ ನಿನ್ನಾಸೆ... ಏನೆಂದೆ ?.... ಕುರುಕ್ಷೇತ್ರ!!!!
ಹ ಹ್ಹ ಹ್ಹ ಹ್ಹಾ.. ಕುರುಕ್ಷೇತ್ರ!! ನಡೆ ನಿನ್ನಾಸೆಯ ಪೂರೈಸಲಾರೆ ಅಂದು
ಕೊಂಡೆಯಾ ಈ ವೃಕೋದರ!!!! ಬಾ... ಹೋಗೋಣ .... ಕೋಲಿಗೆ ಸಿಕ್ಕಿಸಿದ
ಮಗನ ರುಂಡವನ್ನು ತಾನೇ ಗದೆಯಂತೆ ಹೊತ್ತೊಯ್ದು ಊರಿದ್ದ ರಣದ
ರಕ್ಷಾಗಡಿಯಲ್ಲಿ!!! ನಕ್ಕಿದ್ದ 'ನಾರಾಯಣ' ಮರೆಯಲ್ಲಿ!!!
.ಕುರುಕ್ಷೇತ್ರ... ಕುರು-ಕ್ಷೇತ್ರ.... ಹೆಣದ ಹೊರೆಯಿಂದ ಹರಿದು
ಹೆಪ್ಪುಗಟ್ಟಿದ ರುಧಿರೆಯ ಹೆದ್ದೊರೆ!!! ಘೂಕ -ವೃಕಗಳ ರಣ ಭಯಂಕರ
ಕೋಲಾಹಲ...! ಅಲ್ಲಲ್ಲಿ ಸತ್ತ ಸಾಮ್ರಾಟರ ಎದೆಹಾರದ ವಜ್ರಗಳಿಂದ
ಹೊರಹೊಮ್ಮಿದ ಚುಂಬೆಳಕು!.... ಅದೋ....ಕತ್ತರಿಸಿದ ಕಾಲು!... ಅದೋ...
ಇನ್ನೂ ಕಣ್ಣು ಮಿಟುಕಿಸುತ್ತಿರುವ ಅರಿಗಳ ರುಂಡ!.... ಅದೋ ವಿಲವಿಲನೆ
ಒದ್ದಾಡಿ ಮಗ್ಗುಲಾಗುತ್ತಿರುವ ಮುಂಡ!!...ಹಲವು ತಣ್ಣಗಾಗಿವೆ.. ನೀರವ
ಮೌನವಾವರಿಸಿದೆ..!..ರೋದನ ರವ ಕ್ಷೀಣಿಸುತ್ತಿದೆ .....!ನೆಟ್ಟ ಖಡ್ಗದ
ಮೊನೆಯ ಸಂದಿಯಿಂದೊಸರುತ್ತಿದೆ ಇನ್ನೂ 'ಬಿಸಿರಕ್ತ'...! ಸಾವೇ ಇಲ್ಲಿ!!
ಸಂಯಮಕ್ಕೆಡೆಯೆಲ್ಲಿದೆ..? ರಣರಂಗ!! ಇಲ್ಲಿನ ಕ್ಷೇತ್ರಗುಣ!!ಅದಕ್ಕೇ ಇದು
...ಕುರು ಕ್ಷೇತ್ರ!! ಮಾಡು...ಇಲ್ಲವೇ ಮಡಿ!! ಒಬ್ಬನೇ ಹೋದನೆಂದಾದರೆ.....
ಹೆದರಿಯೇ ಸಾಯುತ್ತಾನೆ ಇಲ್ಲಿ!! ಇಲ್ಲಾ ಇಬ್ಬರು ಹೋದರೆ ಹೊಡದಾಡಿಯೇ
ಸಾಯುತ್ತಾರೆ!!! ಸಾಯಲೇಬೇಕು ಮತ್ತಿನ್ನೇನೂ ಉಳಿದಿಲ್ಲ ಇಲ್ಲಿ!!.
ಹೋದರಲ್ಲಾ.... ಆ ಇಬ್ಬರೂ ...ಭೀಮಾರ್ಜುನರು!!! ಅಯ್ಯೋ...ಶಿವನೇ...
ಸಾವು ಯಾರಿಗಾಗಿ ಕಾದಿದೆಯೋ???
ಮಾಧವಾ...........ಬರಲಾರೆಯಾ.............. ಹಾಂ...ಗೆದ್ದವರಾರು ಈ
ಮಹಾರಣವನ್ನು?? ಆಗ ಸುರುವಾಯಿತು ನೋಡಿ... ಈರ್ವರೊಳಗೇ
!...ನಾನು...ನಾನು.... ಊಹೂಂ..... ನೀನಲ್ಲ ನಾನು!.... ಅಯ್ಯೋ...
ಯಾರನ್ನು ಕೇಳೋಣ...ಯಾರೂ ಉಳಿದಿಲ್ಲವೇ..ಇಲ್ಲಿ!!?
ಅದೋ ಮೂಡಿ ಬಂದ 'ಮಾಧವ''
ಹೇಳಿದನವ... ನಾನಂತೂ ಪೂರ್ಣ ಯುದ್ಧವನ್ನು
ಕಾಣಲೇ ಇಲ್ಲ... ಕಂಡವರನ್ನಲ್ಲದೇ ಯೆನ್ನನೇನು
ಕೇಳುವಿರಿ ...ಕೇಳಿ ಆ ಕೋಲಿನಲ್ಲಿ ಕುಳಿತ
ರುಂಡವನ್ನು ಹೇಳೀತು ಗೆದ್ದವರಾರೆಂದು...
ಅಲ್ಲವೇ.......ಅಂಬರಚುಂಬಿತಕೇಶರಾಶಿಯಿಂದೊಪ್ಪುವ ಆರುಂಡ
ಹೇಳಿದ್ದೇನು?.......... ಅಯ್ಯಾ ನಾನು ನಾನೆಂದು ಏಕೆ ಹೊಡೆದಾಡುವಿರಿ ಈ
ಯುದ್ಧವನಾರು ಗೆದ್ದರು ?ಅಲ್ಲವೇ?......... ಅದೋ ಅಲ್ಲಿರುವ ಆ ಬ್ರಹ್ಮಶಿರ
ತಣಿಯಿತು!! ಗದ್ದಿತು ಇದೋ ಗೋವಿಂದನ ಕರವನಲಂಕರಿಸಿದ ಸುದರ್ಶನ!!
ಬಾಯಿ ಮುಚ್ಚಿತ್ತಷ್ಟೇ,,, ರುಂಡ............................ ಮಗನೇ........
'ಊರ್ಧ್ವರೋಮಾ'.........ಯಾರು/ ಯಾರು ಗೆದ್ದವರು
ಸುದರ್ಶನವೇ?// +"ಢಂ+"........ ವೃಕೋದರನ ಬಲಭುಜವನೇರಿದ್ದ
ಗದೆಯ ಆಘಾತ!!!!! ನನ್ನ ಮಗನಾಗಿ ನನ್ನನೇ ಕಡೆಗಣಿಸಿದೆಯಾ !!!!!!!!!!!
ಪಾಪಿ....!! ಸಾಯಿ.... ಥೂ....ಸಿಡಿದು ಸೂರೆಯಾಯ್ತು ರುಂಡ!!
ಸತ್ತನವ........ಹೆತ್ತಪ್ಪನಿಂದ!! ವರ ಫಲಿಸಲೇಬೇಕಲ್ಲಾ!! ಸಾವಾಗಲೇ
ಬೇಕಲ್ಲಾ ಇದು '''ಕುರುಕ್ಷೇತ್ರ""""ಛಿಳ್ಳನೆರಚಿದ ಹಸಿ ರಕ್ತ !!!!ಕೆಳಗೆ..
ಹೆಪ್ಪುಗಟ್ಟಿದ ರಕ್ತ!! ಮೇಲೆ ....ಪ್ರತಿಬಿಂಬಿಸುತ್ತಿತ್ತು!!! ಆ ಬಾನು!
ಭಾನುವಿನಸ್ತಮಾನದ ರಕ್ತವರ್ಣದ ವರ್ಣವ್ಯಾಖ್ಯಾನ!!!..... ಅಬ್ಬಾ!.
ಇದು,,,,,,ಇದು..... "ರಕ್ತ ರಂಗಸ್ಥಳ"..........
ಕುಣಿಸುವವ ನೀಲಮೇಘಶ್ಯಾಮ!!
॥ यदिहास्ति त्दन्यत्र यन्नॆहास्ति न तत् क्वचित् ॥
ಈ ಕಥೆ ಯಕ್ಷಗಾನದಲ್ಲಿ ಮಾತ್ರ ಇದೆ ಎಂದು ಕಾಣುತ್ತದೆ. ತುಂಬಾ ಖುಷಿಯಾಯ್ತು ಓದಿ . ಧನ್ಯವಾದಗಳು.
ಪ್ರತ್ಯುತ್ತರಅಳಿಸಿಸಂಗೀತ ವಿದ್ವಾನ್ ವೈದ್ಯಕಾರ ನಾರಾಯಣಸ್ವಾಮೀ ಕಾನುಗೋಡು ಇವರು ಈ ಊರ್ದ್ವರೋಮ ಕಥೆಯನ್ನು ಆರುದಿನಗಳ ಸತತ ಪ್ರಯೋಗಕ್ಕಾಗಿ ಯಕ್ಷಗಾನ ಪ್ರಸಂಗ ಬರೆದಿದ್ದಾರೆ. ಅದು ಲಭ್ಯ ಇದೆಯೇ ಎಂದು ಅವರ ಮನೆಯವರನ್ನು ಮತ್ತು ಬೆಳೆಯೂರು ಮೇಳದವರನ್ನು ಕೇಳ ಬೇಕು. ಅದರ ಅದ್ಭುತ ಕಥೆಯನ್ನು ಅವರ ಬಾಯಾರೆ ಅತ್ಯದ್ಭುತವಾಗಿ ಹೇಳಿದ್ದರು. ನಾನು ಓದಿದ ಕೇಳಿದ ಯಾವ ಕಥೆಯೂ ಅಷ್ಟು ರೋಚಕವಾಗಿಲ್ಲ ಎಂದು ಯಾವ ಅನುಮಾನ ಇಲ್ಲದೇ ಹೇಳ ಬಹುದು.
ಪ್ರತ್ಯುತ್ತರಅಳಿಸಿ