प्रज्वालितॊ ज्ञानमयप्रदीपः

ಶನಿವಾರ, ಮಾರ್ಚ್ 31, 2012

ಬರಬಹುದೇ ..?

  1. ಬರಬಹುದೇ ಧರೆಗೆ....?
ರಾವಣ ಸಾಯಲೇ ಬೇಕಿತ್ತು, ರಾಮ ಹುಟ್ಟಿದ 

ಕಂಸನಡಗಬೇಕಿತ್ತು,ಕಾಂಸಾರಿ ಬಂದ.

ಓಹ್, ಯಾರೂ ಸಾಯುವಂಥವರಿಲ್ಲವೇ  ಇಂದು

ಬರಲೇಇಲ್ಲ ರಾಮ,ಕ್ರಷ್ಣ,ಗೋವಿಂದ!!  

ಹಾಂ, ಮರೆತೇ ಬಿಟ್ಟಿದ್ದೆ ಅವರೂ ಅಂದೇ ಸತ್ತಿಹರೆಂದು.!!!  

ರಾಮ ರಾಮಾ......... ಬೇಗ ಬರಬಾರದೇ,

ಖಂಡಿತಾ ರಾಮನಾಗಿ ಬರಬ್ಯಾಡಾ..... 

ನಿನ್ನ ಅಯೋದ್ಯೆಯೀಗ 'ಕುರುಕ್ಷೇತ್ರ'ವಾಗಿ ಹೋಗ್ಯದೇ...

.....ಕೃಷ್ಣನಾಗಿ ಬರಬ್ಯಾಡಾ........ ಕಂಸರೇ ಸಂಸತ್ತು ನಡೆಸುತ್ತಿದ್ದಾರೆ!!!!

ಹೌದು...... ಕೇಳು ಆ ಬೊಮ್ಮನ ಪಡೆದು ಬಾ... ಸಾವಿಲ್ಲದ ವರವ!!!     

ಉಳಿದೀಯ.....

ಏನ ಪೇಳಲೀ... ಇವರಿಗೆ ?..!



ಏನ ಪೇಳಲೀ... ಇವರಿಗೆ ?..!

ಮನವು ಮರ್ಕಟನಾಗಿ 
ಮನದೊಡಲು ಮುನಿಯಾಗಿ
ಹನಿ ಮಾನ ಮರ್ಯಾದೆ ಮಾರಾಟವಾಗೆ
ಅನಿಬರುಸಾಬರಿಯ ತನ್ನ ಮೇಲೆಳಕೊಂಡು
ಎಣಿಸುತಿರುವರು ದಿನವ ಲಜ್ಜೆಯಿಲ್ಲದಲೇ

ಸೆಳೆತ!!



                                 ಸೆಳೆತ!!  ಕಣ್ರೀ...........



 ಅನೇಕ ಪುಸ್ತಕಗಳನ್ನು ಓದಲೇ ಬೇಕೆಂದು
ಮನೆಯ ಮಾಳಿಗೆಯಿಂದ ಧೂಳು ಕೊಡವಿ ಕೊಡವಿ ಎದುರಿಗೆ ತಂದಿಟ್ಟುಕೊಳ್ಳುತ್ತೇನೆ. 
ಆದರೆ ಪುಸ್ತಕಗಳಲ್ಲಿರುವ ವಿಷಯಗಳೂ ಯಾರೋ ತಮ್ಮಂಥವ್ರೇ ಬರೆದಿರುತ್ತಾರೆ ಹಾಗಾಗಿ...
ಓದು ಮರೆತು ಇಲ್ಲಿರುವ ಬರೆದ ಓದುಗರನ್ನೇ ಕೇಳಿದರಾಯಿತು ಎಂದು 
ಪುಸ್ತಕವನ್ನು ಮಸ್ತಕಕ್ಕೆ ಏರಿಸುವ್ ಗೋಜಿಗೇ ಹೋಗಲಿಲ್ಲ. 
ಫ್ಯಾನಿನ ಗಾಳಿಗ ಪರಪರನೆ ತೆರೆದುಕೊಳ್ಳುತ್ತಿರುವ 
ಪುಸ್ತಕದ ಹಾಳೆಗಳ ಕಲರವ ಕರ್ಕಶವೆನಿಸಿ 
ಅದರಮೇಲೊಂದು ಹೂದಾನಿಯಿಟ್ಟೆ. 
ಆಮೇಲೆ ಆ ಹೂದಾನಿಯೇ ಕಣ್ಸೆಳೆಯುತ್ತಿದ್ದುದರಿಂದ 
ಪುಸ್ತಕ ಕಾಣಿಸಲೇ ಇಲ್ಲ!! ....
ಓದು ಮುಂದಡಿಯಿಡಲೇ ಇಲ್ಲ!!.....

ಜವಾಬ್ದಾರಿ....!

ಜವಾಬ್ದಾರಿ....!!!!!! ಇದೆಯಾ....                                                                                ನಮ್ಮ ಮನೆಯನ್ನಾದರೂ ಗುಡಿಸಿಕೊಳ್ಳೋಣವೆಂದು ಮೂಲೆಯಲ್ಲಿಟ್ಟ ಪೊರಕೆಯನ್ನೇ ಕದ್ದೊಯ್ವ ಖದೀಮರು!!! ಯಾರಾದರೂ ಅಷ್ಟೇ, ಇಂದು ಅವರು ಇವರು ಎಂಬಂತಿಲ್ಲ,ಜವಾಬ್ದಾರಿ ಸ್ಥಾನ' ಹೇಳಿದಿರಲ್ಲ..! ಬೆಂಕಿ ಬಿತ್ತು!!! ಇದೆಯಾ ಅದು!!!  ಕೊಚ್ಚೆಯ ವಾಸನೆ ಮೂಗಿಗೆ ಬಡಿಯಬಾರದೆಂದು ಕಾಲರಿಗೆ ಸೆಂಟ್ ಬಳಿದುಕೊಂಡು ಓಡಾಡುವವ ಜನ. ಯೇನು ಮಾಡೋಣ ಅರಸಂಗೆ ಅಂಡಿಲ್ಲ ಆಳಿಂಗೆ ಕಾಳಿಲ್ಲ!!ಅಂಡಿಲ್ಲದ ಅರಸ ಆಳಿನ ಕಾಲಮೇಲೇ ಕುಂತು ಕಾಳನ್ನೆಲ್ಲ ಮೆಲ್ಲುತ್ತಿದ್ದಾನೆ.ಅಂದುಕೊಳ್ಳುತ್ತ  ಆನೆ ಆಳು'ಅರಸ ನನ್ನ ಕಾಲೇರಿಕುಂತವನೇ!!! ಪಾಪ ಅವಗೇನುಗೊತ್ತು ಕಾಳು ಖಾಲಿಯಾಗೇ ಹೋಯ್ತು!!

ಭಾರತದ ಬಲಿ ಪಶುಗಳು!!!.....ಮಾಲಿಕೆ.

ಊರ್ಧ್ವರೋಮ..(ಊರ್ಧ್ವಕೇಶೀ)

                                       

   ಪಾತ್ರಗಳು :- ಕೃಷ್ಣ, ಭೀಮ, 

ಊರ್ಧ್ವರೋಮ,ಮತ್ತು ಧರ್ಮಜಾದಿಗಳು                                             

      ಸನ್ನಿವೇಶಗಳು :- ೧) ನದೀಮಧ್ಯದಲ್ಲಿ  ಖಡ್ಗವನ್ನು ಮಸೆಯುತ್ತಿರುವ 


ಊರ್ಧ್ವರೋಮ, ಕೃಷ್ಣನ ಆಗಮನ ಮತ್ತು ಸಂವಾದ( ಕೃಷ್ಣ,ಊರ್ಧ್ವರೋಮ)
 


೨) ಯುದ್ಧದ ಬಲಿಗಾಗಿ ಜಿಜ್ಞಾಸೆ-ರಾಜಾಂಗಣದಲ್ಲಿ,

(ಕೃಷ್ಣ,ಭೀಮಾರ್ಜುನಾದಿಗಳು  (ಊರ್ಧ್ವರೋಮ)

೩) ತಾನೇ ಬಲಿಯಾದ ಊರ್ಧ್ವರೋಮ ( ಭೀಮ,ಊರ್ಧ್ವರೋಮ)
 

೪) ಕುರುಕ್ಷೇತ್ರ, (ಭೀಮಾರ್ಜುನರು,ಕೃಷ್ಣ,ಊರ್ಧ್ವರೋಮನ ರುಂಡ)


       {ಮೂಲ ಮಹಾಭಾರತದಲ್ಲಾಗಲೀ ಅಥವಾ ಮಹಾಭಾರತದ ಕನ್ನಡದ 

'ಮಾರ್ಗಕಾವ್ಯ'ಗಳೆನಿಸಿಕೊಂಡ ಜೈಮಿನೀ ಭಾರತದಲ್ಲಾಗಲೀ,

 ಪಂಪಭಾರತದಲ್ಲಾಗಲೀ, ಗದಾಯುದ್ಧದಲ್ಲಾಗಲೀ ಉಲ್ಲೇಖ ಕಾಣಸಿಗದು, ಪ್ರಕ್ಷಿಪ್ತ 

ಭಾಗವೆಂಬಂತೆಯೂ ಲಭ್ಯವಿ ಲ್ಲದ,ಅನೇಕ ಉಪಾಖ್ಯಾನಗಳಲ್ಲಿ ಈ 

'ಊರ್ಧ್ವರೋಮ' ಪ್ರಸಂಗವೂ ಒಂದು. ಇದು ನಮ್ಮ ಹಿರಿಯರ ಬಳುವಳಿ.

 ಕರ್ಣಾಕರ್ಣಿಯಾಗಿ ವಿವಿಧ ಕಲಾ ಪ್ರಕಾರಗಳಲ್ಲಿ ವ್ಯಕ್ತಗೊಳ್ಳುತ್ತ ಬಂದಿರುವ 

ಕಥೆ!!!. ಆದರೂ ರಂಗದ ಆಡಂಬರಕ್ಕೆ ಅತ್ಯಂತ ಯಶೋಪೂರ್ಣವಾದ

 ಮೆರುಗನ್ನು ನೀಡಬಲ್ಲ ಶಕ್ತಿ ಈ ಆಖ್ಯಾನಕ್ಕಿದೆ. ಹೀಗಿದ್ದರೂ ಬೇರೆ ಬೇರೆ ಕಲಾ 

ಪ್ರಕಾರಗಳಲ್ಲಿ ಕಥೆಯ ಹಂದರವು ವ್ಯತ್ಯಸ್ತವಾಗಿರುವುದು ಗೋಚರಿಸುತ್ತದೆ.ಇದಕ್ಕೆ 

ಹಲವು ಕಾರಣಗಳಿರಬಹುದು.ಇಂತಹ ಒಂದು ವಸ್ತುವನ್ನಿರಿಸಿಕೊಂಡು ಬಹು 

ಹಿಂದೆ ಕೃಷಿಗೆ ತೊಡಗಿಸಿಕೊಂಡಿದ್ದರ ಫಲವೇ ಈ ಪ್ರಸಂಗ. ಆಗಿನ ನನ್ನ 

ತೊದಲ್ನುಡಿಗಳನ್ನು ಈಗಿನ 'ಬಾಲಭಾಷೆಯಲ್ಲಿ' ಪರಿಷ್ಕರಿಸಿ ತಮ್ಮ 

ಮುಂದಿಡುತ್ತಿದ್ದೇನೆ............ ಓದಿ ಆನಂದಿಸಿ, ಪ್ರೋತ್ಸಾಹಿಸಿ. .}                                                                                

                       "ರಕ್ತ ರಂಗಸ್ಥಳ" 

    .ಹ್ವಾಯ್,,,, ಇಲ್ಲ ಬಿಡಿ. ಊಹೂಂ,,...... ತುಂಬ ಕಡಿಮೆ! ಯಾರು?  

ಅಲ್ಲಪ್ಪಾ... ಕಡಿಮೆ ಇದ್ದಾರೆ ಅಲ್ಲಿ ...... 'ಅಪ್ಪಂಗೇ ಹುಟ್ಟಿದೋರು'!!! ಯೆಲ್ಲ 

ಮಂತ್ರಕ್ಕೇ ಮಾವಿನಕಾಯಿಗೇ ಹುಟ್ಟಿದೋರೆ . ಥೂ,,,, ಯೇನು ಖರ್ಮವೋ 

ಇವರದ್ದು.!!! ಹೋದ ಹೋದಲ್ಲಿ ಹೆಂಡಿರ? ಕಟ್ಕೊಂಡ್ರು, ಮಡಿಲೀಗೆ 

ಒಂಡೆರಡು ಮಕ್ಕಳನ್ನೂ ಕೊಟ್ಟು, ಹೊರಟೇ ಬಿಟ್ರು!!!!!!!      ಹಾಗೆ 

ಹುಟ್ಟಿದೋನೇ ಈ ನಮ್ಮನಾಯಕ !!!! ಅರಿತಿದ್ದನವ, 'ಕಲಿಭೀಮನೇ' ತನ್ನಪ್ಪ 


ಎಂದು. ಯೇನೋ ರಕ್ತದ ಗುಣವಿರಬೇಕು, ಯುದ್ಧಕ್ಕೆ ಎದೆಯೊಡ್ಡುವಾಸೆ!!!. 

ಬಂದೇ ಬಿಟ್ಟ!! ಗಜಪುರಕ್ಕೆ. ಅಪ್ಪನಿಗೆ ಬಲಭುಜವಾದ, ಬಿಡದಿಯೊಳಗೆ 

ಗುರುತಿಸಿಕೊಂಡ!!ಅಪ್ಪನ ಗದೆಯ ಭಾರವನ್ನಳೆದ!! ಚಿಕ್ಕಪ್ಪನ ಬಿಲ್ಲ 

ಮೀಂಟಿದ,  ದೊಡ್ಡಪ್ಪನ ಧರ್ಮಕ್ಕೆ ತಲೆದೂಗಿದ!! ಆದರೂ ಕಂಕುಳ ಕತ್ತಿಗೆ 

ಸಾಣೆ ಹಿಡಿಯುವುದ ಬಿಟ್ಟಿರಲಿಲ್ಲ..................ಅದಕ್ಕಾಗೇ ನದೀತೀರಕ್ಕೆ 

ಹೋಗಿದ್ದ.       

         ಅಬ್ಬರಿಸಿ ಬೊಬ್ಬಿರಿದು ನೊರೆದೆರೆಗಳನ್ನು ಚಿಮ್ಮುತ್ತ, ತಾಯೊಡಲ 

ಸೀಳಿ ಬರುವಂತೆ ಬಂಡೆಯಿಂದ ಬಂಡೆಗೆ ಕೊರಕಲಿನಿಂದ ಕೊರಕಲಿಗೆ 

ಜಿಗಿಯುತ್ತ ಒಂದೇ ಸಮನೆ ತನ್ನ ಗಮ್ಯ್ದದೆಡೆಗೆ ಧುಮ್ಮಿಕ್ಕುತ್ತಿರುವ ಆ ನದೀ 

ಮಧ್ಯದ ಬಂಡೆಗಳೆರಡರ ಮೇಲೆ ಕಾಲೂರಿ ನಿಂತು ಬಗ್ಗಿ ಇನ್ನೊಂದು 

ಬೆಣಚುಗಲ್ಲಿಗೆ ಉಜ್ಜುತ್ತಿದ್ದ. ತನ್ನ ಒರೆಯಿಂದ ತೆಗೆದ ಝಳಪಿಸುತ್ತಿರುವ ಹರಿತ 

ಖಡ್ಗವ ಇನ್ನೂ ಹದಗೊಳಿಸುವ ತವಕ!!!!......ಸೈಂ.... ಪೈಂ... ಸದ್ದು. 

ಆಗಾಗ ಅಲಗನ್ನು ಬಾಯಿಂದ ಉರುಬಿ ಕತ್ತಿಯ ಹರಿತವನ್ನು  , 

ಶೂರ್ಪಾಗ್ರವನ್ನು ಪರೀಕ್ಷಿಸುತ್ತಿದ್ದ.  ಮತ್ತದೇ ಸೈಂ....ಪೈಂ...... ಕಲ್ಲು-ಖಡ್ಗದ 

ಮಸೆಯುವಿಕೆಯಿಂದ ಹೊರಟ ಆ ಬೆಂಕಿಯ ಕಿಡಿಗಳು 'ತನ್ನೊಡಲ 

ಕ್ರೋಧಾಗ್ನಿಯೇ ಕಿಡಿಯಾಗಿ ಚೆಲ್ಲಿದಂತೇ' , ಲಂಕೆಯನ್ನುರಿಸಿದ ಹನುಮ ಆ 

ಮಹೋದಧಿಯಲ್ಲಿ ಬಾಲವನ್ನಜ್ಜಿದಂತೆ ಕಿಡಿಗಳು ನದಿಯ ನೀರಿನ 

ಬಿಸಿಯೇರಿಸಿದ್ದವು!!!!. ............


                    .ಬೇಕಿತ್ತೇ? ಯೇಕೆ ಈ ರೋಷ?......... ಖಡ್ಗವೇತಕ್ಕೆ ಈ 

ರೀತಿ ಹದಗೊಳಿಸಿದ್ದು?......... ಓಹೋ...... ಯಾರೀತ? ಮುಗಿಲ ಮೇಘವ 

ಮುಟ್ಟುವ ತವಕದಲ್ಲಿರುವ ಮೇಲೆತ್ತಿದ ಕೇಶರಾಶಿ!!!ಭೂದೇವಿಯ 

ಆಳ-ಅಗಲಗಳ ಅಂಗುಲದಲ್ಲ್ಳೆಯಬಲ್ಲ ಕಾಯ!!! ಅಬ್ಬಾ!,,,,, 

 ಭಯಂಕರ!!!ಬಂದನಲ್ಲಿಗೆ ...ಗೋವಿಂದ!! .....ಆಂ!!! ಯೆಲ್ಲಿಯ 

ಅರಿಭಯಂಕರ ಆಹವ ಮಲ್ಲ!! ಯೆಲ್ಲಿಯ ಷೋಡಷ ಗೋಪಬಾಲೆಯರ 

ನಳಿದೋಳ ಅಪ್ಪುಗೆಯಿಮ್ದ ನುಣುಚಿಕೊಂಡು ಬಂದ ಕನಸಿನ ಕಣ್ಮಣಿ!!!        

ದಕ್ಷಿಣೋತ್ತರಗಳ ಸಮಾಗಮ!!! ಒಬ್ಬರನ್ನೊಬ್ಬರು ಕಣ್ಣನ್ನೇ 

ನಂಬದಾದರು!!!!. 


         ಓಹ್... ಇವನು ..... ನಮ್ಮ ಮಧ್ಯಮನ ಕುಮಾರನಲ್ಲವೇ?.... 

ಹೆತ್ತಬ್ಬೆ ಇವ ಕಣ್ಣುಬಿಡುವುದರೊಳಗೇ ಕಾಣದಾಗಿ, ವೃಕೋದರನನ್ನೇ ಅಪ್ಪ 

ಎಂದು ನಂಬಿ!! ಬಂದಿದ್ದಾನೆ. ಇಲ್ಲಿಗೆ. ಆದರೂ ಇವನಲ್ಲಿನ 'ಅಪ್ರತಿಮತೆ' 

ಸಾಲದ್ದಕ್ಕೆ "ಪಿತ್ರಾಹತ" ವರಭಾಗ್ಯ ಬೇರೆ.!!! ಈ ಮಹಾಶಯನ ಕೆಣಕಿ 

ಉಳಿದವರುಂಟೇ?....       ಅಯ್ಯಾ,,,,,, ಈ ರೀತಿ ಮಸೆಯುತ್ತಿರುವ ಖಡ್ಗಕ್ಕೆ 

ಕೆಲಸವುಂಟೇ? ಮುಂದೆ?...ಹಾಂ!!!!! ಯಾರದೂ....... ನೊರೆದೆರೆಯ 

ಅಬ್ಬರದ ಸಂದಿಯಿಂದೊಂದು ಸಲಿಲದ ಮಂಜುಳನಾದ ಕೇಳಿ 

ಬರುತ್ತಿದೆಯಲ್ಲಾ?????? ಓಹ್... ಅಯ್ಯಂಗೆ ಅಯ್ಯ...! ದೇವರೂ.... ಏಕೆ? 

... ಗೊತ್ತಿಲ್ಲವೇ ...ನಿನಗೆ?... ಮುಂದೊಂದು ದಿನ...... ಅಂದು ಕತ್ತರಿಸಿ 

ಕುಣಿಸಿ ಕುಳ್ಳಿರಿಸಿದ ಆ ವಿಧಾತನ ರುಂಡಕ್ಕೆ ರಕ್ತದ ದಾಹ ತೀರಿಸುವೆ 

ಎಂದಿರಲಿಲ್ಲವೇ ಭಗವಂತಾ?...ಅದಕ್ಕೇ ಬೇಕಾಗಿ ಈ ಸಿದ್ಧತೆ!!!!ಎಲಾ 

ಇವನಾ!!! ಆಂ!!! ಬಿಟ್ಟಾನೇ ಇವನು. .... ತಿಳಿದವಂಗೆ ತಿಳಿಹೇಳಬೇಕಿಲ್ಲ! 

ಅರಿಯದವ ಅಳುಕುವುದಿಲ್ಲ... ಹುಂಬ!!! ಸರ್ವನಾಶ ಮಾಡಿಬಿಡುತ್ತಾನೆ 

ಇವನು!!!...ಧರ್ಮಾಧರ್ಮದ ವಿವೇಚನೆಯಿಲ್ಲ ಇದಕ್ಕೆ!!!! ಅದು ಹಾಗೇ 

 ಅಲ್ಲವೇ? ಬೀಜದಲ್ಲಿ ಗುಣವನೇಕವಿದ್ದರೂ ಕ್ಷೇತ್ರದಲ್ಲಿ ನೆಲುವಿಲ್ಲವಲ್ಲಾ??? 

ಹಾಂ.... ಹಾಂ.... ನನ್ನ ಮನೋ ಯಜ್ಞಕ್ಕೊಂದು ಬಲಿ ಬೇಕಲ್ಲಾ?/ 

....ಸಿಕ್ಕಿತು....!
 


            ದಾಯಭಾಗಕ್ಕಾಗಿ ಹರಿಹಾಯಲೇ ಬೇಕಾದ ಪ್ರಸಂಗವೇನೋ 

ಬಂದೇ ಬಿಟ್ಟಿತು!!! ಒಂದು 'ಶಕ್ತಿಯಜ್ಞ' ಆಗಬೇಕಿತ್ತು ಜಗನ್ನಿಯಾಮಕನಿಗೆ!!! 

ಆಹವದ ಆರಂಭಕ್ಕೆ!!! ಅಣಿಯಾಗಿ ನಿಂತು ಪಾಂಡುಸುತರು ಅಧ್ವರದ 

ವಿಚಾರವಾಗಿ ಚಿಂತಿಸುತ್ತಿದ್ದರು. ಪಕ್ಕದಲ್ಲೇ ನಿಂದು ಈ ಆಹವಮಲ್ಲ 

ಕೇಳಿಸಿಕೊಳ್ಳುತ್ತಿದ್ದ... ಅಪ್ಪನ ಆಸೆಗೆ ಆಸರೆಯಾಗುವ ತವಕ!!! ಕೃಷ್ಣ 

ಹೇಳಿದ 


ಯುದ್ಧೋತ್ಸಾಹಕ್ಕಾಗಿ ಶಕ್ತಿಯಾಗವಾಗಬೇಕು. ಅದಕ್ಕೆ ಒಂದು ಬಲಿ 

ಸಿದ್ಧಗೊಳ್ಳಬೇಕು ಜಗನ್ನಾಟಕ ಸೂತ್ರಧಾರಿಗೆ ಅರಿವಿತ್ತು ಇವನ 

ಅಟಾಟೋಪ!! ತಣಿಸಬೇಕಿತ್ತು..... ವೃಕೋದರಾ!.. ಶಿರದ ರೋಮಗಳೆಲ್ಲ 

ಶಶಿರವಿಯ ಚುಂಬಿಪನ ತಲೆಕಡಿದು ತರಬೇಕಲ್ಲಾ . ನಿನ್ನ ಮಗನೇ ಈ 

ಬಲಿಯನ್ನರಸಿ ತರಬಲ್ಲ!! ಅಲ್ಲವೇ?? ಸಾಕಿತ್ತು ಇವನಿಗೆ !!! 

'ಮಗನೇ.. ತರಬಲ್ಲೆಯಾ ನೀನು?'  ... ತನ್ನ ತನ್ನ ಹೆಸರಿನ 

ಅರ್ಥವನ್ವರ್ಥವಾಗಿಪ್ಪ ಬಗೆಯನರಿಯದ ಹುಂಬ!! ಪಾಪ... 

ಅಪ್ಪಾ...ಯೆಂಥವ 


ಬೇಕೂ?... ಓ ಅಂಥವನರಸಲಸದಳವೇ ಈ ನಿಮ್ಮ ಕುಮಾರಕಂಗೆ?..... 

              ಮಧ್ಯಮನುಸುರಿದಂಥವನ ತಲೆತರಲು 

ಓಡಿದ.. ಭೂಪ!!! ಇದೋ ಬಂದೆ... ಆಳುವವನಾಳಾಗಿ 

ಅರಸಲಾರೆನೇ ಒಂದು ನರ ನೊರಜನ್ನು!!! ...ಒರೆಯ 

ಖಡ್ಗ ಗಾಳಿಯನ್ನು ಸೀಳಿತು. ಭೂಮಿ 

ಬಾಯ್ಬಿರಿದಂತಾಯ್ತು!!! ಕಂದನ ಕಣ್ಣುಗಳು ಅರಸಿಅರಸಿ 

ಉರಿದು ಹೋದವು!! ಊಹೂಂ... ಇಲ್ಲ..ಯೆಲ್ಲೆಲ್ಲಿ 

ಹುಡೂಕಿದರೂ ಅಂಥವನ ಸುಳಿವೇ ಇಲ್ಲ... ತಿರುಗಿ ದಣಿದು ಬಾಯಾರಿ 

ಬಸವಳಿದ !!!! ಬಳಲಿ ಬಾಯಾರಿದವ ನೀರಿಗಾಗಿ ತೊರೆಯ ತೆರೆಗೆ 

ಬಾಯೊಡ್ಡಲನುವಾದ!! ಆಗ ಮನದಲ್ಲಿ ಅಪ್ಪನ ಮಾತ ಮೀರಿದ ಕಡುಪಾಪಿ 

ಪಟ್ಟ ಎನಗಂಟದಿರದೇ ಯೇನು ಮಾಡಲೀ ...ಹಿಂದೆ ಯಾರೋ ಹೇಳಿದ್ದರು 

ಅವಗೆ ರಾಮ!! ಪಿತೃವಾಕ್ಯ ಪರಿಪಾಲಕ!!! ನಾನೇನು ಕಡಿಮೆಯೇ?... 

ಊಹೂಂ.. ಬಗ್ಗಿ ಬಾಯೊಡ್ಡಿದಾಗ ಕಂಡಿತ್ತು ಅವನಿಗೆ ಸ್ವಮುಖ!!! ತನ್ನ 

ಶಿರದಲ್ಲಿರುವ ಕೇಶರಾಶಿ!!! ಆ ದಿವಾಕರಂಗೆ ಚಾಮರಸೇವೆಗೈಯ್ಯುತ್ತಿರುವ 

ಪ್ರತಿಬಿಂಬ!!! ..........ಇನ್ನೇಕೆ ತಡ!! ಹೋಗಿ ಹೇಳಬೇಕು!!!           ಸರ 

ಸರನೆ ಸಾಗಿಬಂದ.  ಅಪ್ಪಾ.. ಅಪ್ಪಾ.. ಅದೋ ನೀನೆಣಿಸಿದ ಬಲಿ 

ಸಿದ್ಧವಾಗಿದೆ.. ಅಲ್ಲಿ ಅವಗುಂಠನವ ಮುಚ್ಚಿ ಮಲಗಿಸಿರುವೆ. ಹೋಗು.... 

ತುಂಬ ಕಷ್ಟ ಪಟ್ಟು ಹುಡುಕಿ ತಂದಿರುವೆ !! ಹೋಗಿ ನೋಡುತ್ತಿರಬೇಡಾ.. 

ಅವಗುಂಠನವನ್ನೆತ್ತಬೇಡ!! ಕೊಚ್ಚು!!! ಅವನನ್ನು.. ಕೊಡು 

ಬಲಿಯನ್ನು....ಒರೆಯ ಖಡ್ಗಕ್ಕೆ ಕೈಯಿಕ್ಕಿದ್ದ ಕಲಿಬೀಮ.... ನಡೆದನಲ್ಲಿಗೆ... 

ಎಲ್ಲಿಗೆ?.


          ತಾನೇ ಮುಸುಕೆಳೆದು ಮಲಗಿದ್ದ ಶಕ್ತಿಗೆ ಶಕ್ತಿತುಂಬಲು!! ಬಲಕ್ಕೆ 

ಬಲಿಯಾಗಲು....  ಯಜ್ಞಫಲದ ಕನಸಿನ ಕಪ್ಪತವನ್ನೇರಿದ ವೃಕೋದರ... 

ಅತ್ತಿತ್ತ ನೋಡಲಿಲ್ಲ.... ಕೊಚ್ಚಿಯೇಬಿಟ್ಟ... ಕಾಲಬುಡದಿಂದ ಕೊಚ್ಚಿ ಕೊಚ್ಚಿ 

ಕೆನ್ನೆತರ ಹೊಳೆ ಹರಿಸಿದ, ..........'ಕತ್ತಿಗೆ' ಕತ್ತಿಯಲಗು ಸೋಂಕುತ್ತಲೇ... 

..........ನಿಲ್ಲು!... ಅಪ್ಪಾ... ಒಂದೇ ಒಂದು ಆಸೆ....! ಆಹವದಿ 

ಜಯಿಸಬೇಕೆಂದಿದ್ದೆ... ಆಗದದು.. ಅದರೂ ಕುರುಕ್ಷೇತ್ರ್ವ ಈ ಕಣ್ಣುಗಳಿಂದ 

ನೋಡುವಾಸೆ... ಅಪ್ಪಾ!......ಆಂ...ಪರಿಚಿತ ಧ್ವನಿ.. ಅಯ್ಯೋ..... 

ಮಗನೇ....ಮುಚ್ಚಿದ್ದ ಮುಸುಕೆಳೆದ ಮಗನ ರುಂಡಮಾತ್ರವುಳಿದಿದೆ!!!! 

ಕೃಷ್ಣಾ......... ಕೊಲ್ಲಿಸಿದೆಯಾ ಮಗನನ್ನು ನನ್ನ ಕೈಯ್ಯಿಂದಲೇ ನನ್ನ ಮಗ....! 
ಕಪಟನಾಟಕ ಸೂತ್ರಧಾರೀ..... ಆಸೆ ತೀರಿತೇ?..... ವರ ಫಲಿಸಿತೇ..? 

'ಪಿತ್ರಾಹತ'.... ಅಯ್ಯೋ ಮಗನೇ ನಿನ್ನಾಸೆ... ಏನೆಂದೆ ?.... ಕುರುಕ್ಷೇತ್ರ!!!! 

ಹ ಹ್ಹ ಹ್ಹ ಹ್ಹಾ.. ಕುರುಕ್ಷೇತ್ರ!! ನಡೆ ನಿನ್ನಾಸೆಯ ಪೂರೈಸಲಾರೆ ಅಂದು 

ಕೊಂಡೆಯಾ ಈ ವೃಕೋದರ!!!! ಬಾ... ಹೋಗೋಣ .... ಕೋಲಿಗೆ ಸಿಕ್ಕಿಸಿದ 

ಮಗನ ರುಂಡವನ್ನು ತಾನೇ ಗದೆಯಂತೆ ಹೊತ್ತೊಯ್ದು ಊರಿದ್ದ ರಣದ 

ರಕ್ಷಾಗಡಿಯಲ್ಲಿ!!! ನಕ್ಕಿದ್ದ 'ನಾರಾಯಣ' ಮರೆಯಲ್ಲಿ!!!
 

          .ಕುರುಕ್ಷೇತ್ರ... ಕುರು-ಕ್ಷೇತ್ರ.... ಹೆಣದ ಹೊರೆಯಿಂದ ಹರಿದು 

ಹೆಪ್ಪುಗಟ್ಟಿದ ರುಧಿರೆಯ ಹೆದ್ದೊರೆ!!! ಘೂಕ -ವೃಕಗಳ ರಣ ಭಯಂಕರ 

ಕೋಲಾಹಲ...! ಅಲ್ಲಲ್ಲಿ ಸತ್ತ ಸಾಮ್ರಾಟರ ಎದೆಹಾರದ ವಜ್ರಗಳಿಂದ 

ಹೊರಹೊಮ್ಮಿದ ಚುಂಬೆಳಕು!.... ಅದೋ....ಕತ್ತರಿಸಿದ ಕಾಲು!... ಅದೋ... 

ಇನ್ನೂ ಕಣ್ಣು ಮಿಟುಕಿಸುತ್ತಿರುವ ಅರಿಗಳ ರುಂಡ!.... ಅದೋ ವಿಲವಿಲನೆ 

ಒದ್ದಾಡಿ ಮಗ್ಗುಲಾಗುತ್ತಿರುವ ಮುಂಡ!!...ಹಲವು ತಣ್ಣಗಾಗಿವೆ.. ನೀರವ 

ಮೌನವಾವರಿಸಿದೆ..!..ರೋದನ ರವ ಕ್ಷೀಣಿಸುತ್ತಿದೆ .....!ನೆಟ್ಟ ಖಡ್ಗದ 

ಮೊನೆಯ ಸಂದಿಯಿಂದೊಸರುತ್ತಿದೆ ಇನ್ನೂ 'ಬಿಸಿರಕ್ತ'...! ಸಾವೇ ಇಲ್ಲಿ!! 

ಸಂಯಮಕ್ಕೆಡೆಯೆಲ್ಲಿದೆ..? ರಣರಂಗ!! ಇಲ್ಲಿನ ಕ್ಷೇತ್ರಗುಣ!!ಅದಕ್ಕೇ ಇದು 

...ಕುರು ಕ್ಷೇತ್ರ!! ಮಾಡು...ಇಲ್ಲವೇ ಮಡಿ!! ಒಬ್ಬನೇ ಹೋದನೆಂದಾದರೆ..... 

ಹೆದರಿಯೇ ಸಾಯುತ್ತಾನೆ ಇಲ್ಲಿ!! ಇಲ್ಲಾ ಇಬ್ಬರು ಹೋದರೆ ಹೊಡದಾಡಿಯೇ 

 ಸಾಯುತ್ತಾರೆ!!! ಸಾಯಲೇಬೇಕು ಮತ್ತಿನ್ನೇನೂ ಉಳಿದಿಲ್ಲ ಇಲ್ಲಿ!!.  

 ಹೋದರಲ್ಲಾ.... ಆ ಇಬ್ಬರೂ ...ಭೀಮಾರ್ಜುನರು!!! ಅಯ್ಯೋ...ಶಿವನೇ... 

ಸಾವು ಯಾರಿಗಾಗಿ ಕಾದಿದೆಯೋ??? 

ಮಾಧವಾ...........ಬರಲಾರೆಯಾ.............. ಹಾಂ...ಗೆದ್ದವರಾರು ಈ 

ಮಹಾರಣವನ್ನು?? ಆಗ ಸುರುವಾಯಿತು ನೋಡಿ... ಈರ್ವರೊಳಗೇ 

!...ನಾನು...ನಾನು.... ಊಹೂಂ..... ನೀನಲ್ಲ ನಾನು!.... ಅಯ್ಯೋ... 

ಯಾರನ್ನು ಕೇಳೋಣ...ಯಾರೂ ಉಳಿದಿಲ್ಲವೇ..ಇಲ್ಲಿ!!?

                   ಅದೋ ಮೂಡಿ ಬಂದ 'ಮಾಧವ'' 

ಹೇಳಿದನವ... ನಾನಂತೂ ಪೂರ್ಣ ಯುದ್ಧವನ್ನು 

ಕಾಣಲೇ ಇಲ್ಲ... ಕಂಡವರನ್ನಲ್ಲದೇ ಯೆನ್ನನೇನು 

ಕೇಳುವಿರಿ ...ಕೇಳಿ ಆ ಕೋಲಿನಲ್ಲಿ ಕುಳಿತ 

ರುಂಡವನ್ನು ಹೇಳೀತು ಗೆದ್ದವರಾರೆಂದು... 

ಅಲ್ಲವೇ.......ಅಂಬರಚುಂಬಿತಕೇಶರಾಶಿಯಿಂದೊಪ್ಪುವ ಆರುಂಡ 

ಹೇಳಿದ್ದೇನು?.......... ಅಯ್ಯಾ ನಾನು ನಾನೆಂದು ಏಕೆ ಹೊಡೆದಾಡುವಿರಿ ಈ 

ಯುದ್ಧವನಾರು ಗೆದ್ದರು ?ಅಲ್ಲವೇ?......... ಅದೋ ಅಲ್ಲಿರುವ ಆ ಬ್ರಹ್ಮಶಿರ 

ತಣಿಯಿತು!! ಗದ್ದಿತು ಇದೋ ಗೋವಿಂದನ ಕರವನಲಂಕರಿಸಿದ ಸುದರ್ಶನ!! 

ಬಾಯಿ ಮುಚ್ಚಿತ್ತಷ್ಟೇ,,, ರುಂಡ............................ ಮಗನೇ........ 

'ಊರ್ಧ್ವರೋಮಾ'.........ಯಾರು/ ಯಾರು ಗೆದ್ದವರು 

ಸುದರ್ಶನವೇ?// +"ಢಂ+"........ ವೃಕೋದರನ ಬಲಭುಜವನೇರಿದ್ದ 

ಗದೆಯ ಆಘಾತ!!!!! ನನ್ನ ಮಗನಾಗಿ ನನ್ನನೇ ಕಡೆಗಣಿಸಿದೆಯಾ !!!!!!!!!!! 

ಪಾಪಿ....!! ಸಾಯಿ.... ಥೂ....ಸಿಡಿದು ಸೂರೆಯಾಯ್ತು ರುಂಡ!! 

ಸತ್ತನವ........ಹೆತ್ತಪ್ಪನಿಂದ!! ವರ ಫಲಿಸಲೇಬೇಕಲ್ಲಾ!! ಸಾವಾಗಲೇ 

ಬೇಕಲ್ಲಾ ಇದು '''ಕುರುಕ್ಷೇತ್ರ""""ಛಿಳ್ಳನೆರಚಿದ ಹಸಿ ರಕ್ತ !!!!ಕೆಳಗೆ.. 

ಹೆಪ್ಪುಗಟ್ಟಿದ ರಕ್ತ!! ಮೇಲೆ ....ಪ್ರತಿಬಿಂಬಿಸುತ್ತಿತ್ತು!!! ಆ ಬಾನು! 

ಭಾನುವಿನಸ್ತಮಾನದ ರಕ್ತವರ್ಣದ ವರ್ಣವ್ಯಾಖ್ಯಾನ!!!..... ಅಬ್ಬಾ!. 

ಇದು,,,,,,ಇದು..... "ರಕ್ತ ರಂಗಸ್ಥಳ"..........
 


ಕುಣಿಸುವವ ನೀಲಮೇಘಶ್ಯಾಮ!!


                              
॥  यदिहास्ति त्दन्यत्र यन्नॆहास्ति न तत् क्वचित् ॥

ಬಿನ್ನಾಣದ ಬೇಸಿಗೆ ಶಿಬಿರಗಳು.......!!


  1. ಮಕ್ಕಳಿದ್ದಾರೆ.....ಎಚ್ಚರ...!!

  1.                       ಇನ್ನು ಸುರುವಾಯ್ತು.... ಅಲ್ಲಿ ಬೇಸಿಗೆ ಶಿಬಿರ! ಇಲ್ಲಿ ಡ್ಯಾನ್ಸ್ ಶಿಬಿರ ಮಣ್ಣು ಮಸಿ!! ಆ ಮಕ್ಕಳಿಗೆ ಇದು ರಜೆಯೋ ಸಜೆಯೋ !!! ಪಾಪ  ಅವಕೇನ್  ಗೊತ್ತು. ಆಡಿಸಿದಾಂಗೆ ಆಡ್ತಾವೆ!!! ಇವರೀಗೂ ಬುದ್ಧಿ ಬ್ಯಾಡ್ವಾ? ನವಿಲೆದ್ದು ಕುಣೀತಿದೇ ಅಂತಾ ಕೆಂಬೂತಾನೂ ಪುಕ್ಕಾ ಬಿಚ್ಚಿತ್ತಂತೆ!!!
  2.          . ......... ಅಯ್ಯೋ ಶಿವನೇ................. ಬಿಡ್ರೋ... ಆ ಮಕ್ಕಳನ್ನಾ!! ಈ ಹಾಳ್ಬಸ್ತಿ ದೇಶೋದ್ಧಾರಾ ಮಾಡೋದ್  ಅಷ್ಟ್ರಲ್ಲೆಇದೆ.. ಕಲಿತು ಕನ್ನಂಬಾಡಿ ಕಟ್ಟೋಣ ಅಂದ್ರೆ ಇರೋ ಹಳ್ಳ!!ದಲ್ಲೇ ನೀರಿಲ್ಲ!! ಆಡಿ ಓಡಿ ಹಾರಿ ನೆಗೆದು. ಉಲ್ಲಾಸಹೊಂದಲಿ!! ಅಜ್ಜನ ಮನೆ,ಅಕ್ಕನ ಮನೆ, ಚಿಕ್ಕಮ್ಮನ ಮನೆ ಯಾವುದೋ ಒಂದು ನೆಂತರ ಮನೆಗೆ ಅಟ್ಟಿ!! ಅಲ್ಲಿ ಬೇಣ ಬೆಟ್ಟ,ಹೊಳೆ,ಕೆರೆ,ನೋಡಲಿ. .........ಬೆಳೆಯುವ ಮಕ್ಕಳಿಗೆ ...ಕೊಡಿ ಸ್ವಾತಂತ್ರ್ಯ (ಸ್ವಚ್ಛಂದವಲ್ಲ) ಕಾಣಿಸಿ ಸಂಬಂಧಿಗಳ!ಸಂಬಂಧಗಳ! ತೋರಿಸಿಜಗತ್ತನ್ನಾ!!   ಅವಕ್ಕೆಂತರ ಯೋಗ, ಪ್ರಾಣಾಯಾಮಾ.....ಅವರೊಟ್ಟಿಗೆ ಮಾಡ್ಲಿಕ್ಕೆ ನಿಮಗೆ ಪುರುಸೊತ್ತಿದೆಯಾ? ಊಹೂಂ........
  3.                    ಸಂಸ್ಕಾರವಂತೆ ಸಂಸ್ಕಾರ!! ನಿಮಗಿದೆಯಾ ಅದು? ಇದ್ರೆ ನೀವೇ ಹೇಳಿ ಸಾಕು!!ಕುರಿಗಡಿಯುವವನ ಮನೆಮುಂದೆ ಬೆಳೆಸಿ ಓ... ಸಂಸ್ಕಾರ ಕೊಡಬೇಕು ಅಂತ ಹಲುಬುತ್ತೀರಲ್ಲ!!! ನಿಮ್ಮ ಪಕ್ಕದ ಮನೆ ಯಾರದೂ ಅಂತ ಗೊತ್ತಾ ನಿಮ್ಮಕಂದಂಗೆ....
  4.                    ಕಾಂಕ್ರೀಟ್ ಕಾಡಲ್ಲಿದ್ದೀರಾ ಕೊಡಿ ಅವರ ಕೈಗೆ ಗುದ್ದಲೀನಾ...... ಯೆಲ್ಲೊ ಬಿದ್ದಿರೋ ಮಣ್ಣತಂದಾಕಿ (ಸ್ವಂತದ್ದಾದ್ರೆ) ಆ ನಿಮ್ಮ ಟೆರೇಸಲ್ಲಿ-ಕಿಟಕಿ ಪಕ್ಕ-ಬಗಿಲಸಂದಿ ಯೆಲ್ಲಾದ್ರೂ ಅಡ್ಡಿಲ್ಲ ,ಹರಿವೆ ಸೊಪ್ಪು ಬೆಳೆಯೋಕೆ ಹೇಳಿ ಕಷ್ಟ ಬಿಡ್ಲಿ ಬೆವರು ಸುರೀಲಿ ಹರಿವೆಬೆಳೆದು ಸೊಪ್ಪಕುಯ್ದು ಸಾಂಬಾರು ಮಾಡಿ ಹಾಕಿ ಯೆಷ್ಟ್ ಸಂತೋಷ ಆಗುತ್ತೆ ಗೊತ್ತಾ ಆ ನಿಮ್ ಕಂದಂಗೆ!!! ನಾನೇ ಬೆಳೆದಿದ್ದು!!!ಬಲುರುಚಿ!!!
  5.                            ನಾಕಾರು ಜನ ಮಕ್ಕಳು ಸಿಗ್ತಾರಾ? ಕೂಡಿಸಿ, ಒಬ್ಬರದೇ ಮನೆ ಕ್ಲೀನ ಮಾಡೋ ಮುಯ್ಯಾಳು ಸಂಘ ಮಾಡಿ ಅವರಮನೆಲಿ ಇವರು ಇವರ ಮನೇಲಿ ಅವರುಹಾಕಿ ಒಂದೂಟಾನಾ!!! ಬಂದ ಮಕ್ಕಳನ್ನ ಸೋಪಾದ ಮ್ಯಾಲೇ ಕೂರಿಸಿಮಾತಾಡಿಸಬ್ಯಾಡಿ ಕೂಗಿ ನಿಮ್ಮ ಅಡಿಗೆ ಮನೇಲೇ ಮಾತಾಡ್ಸಿ!! ಆಗ ಬೆಳೇಯುತ್ತೇ ನೋಡಿ ಸಂಸ್ಕಾರಾ ಸದಾಚಾರಾ ಯೆಲ್ಲಾ  ಮನೆ  ಮೂಲೆ  ಮೂಲೆ  ಗುಡ್ಸಿ  ವರ್ಸಿ  ಮಾಡ್ಳೀ,  ಮನೇನೂ  ಕ್ಲೀನು! ಮನಸೂ ಕ್ಲೀನು ಒಗ್ಗಟ್ಟಿನ ಶುದ್ಧಪಾಠಾನೂ....
  6.              ಸಂಜೆ ಹೊತ್ತು ಹೇಳಿ ಅವರೀಗೆ ನಿಮ್ ನಿಮ್ ಪ್ರಾಯದ ಪರಾಕ್ರಮಾನಾ..  ಜೋಕಾದ್ರೆ ಜೋಕು. ಇದೆಯಾ ಪುರುಸೊತ್ತು?ಊಹೂಂ............ಕಂಡವರ ಹತ್ರ ಬಿಟ್ ನೀತಿಪಾಠಾ ಹೇಳಿಸ್ತೀರಿ.... ಯಾಕೆ? ಇಲ್ವಾ ನಿಮ್ಮಲ್ಲಿ ನಿಮ್ ಕಂದಂಗೆ ಹೇಳೋ ನೀತಿ ಪಾಠಾ?   .....ಬದಕಿಲ್ವಾ ನೀವೂ, ಇಲ್ವಾ ನೀತಿ. ಸಾಕು !!! ಅದೇ ಹೇಳಿ!!!!ಕಂಡವರಿಗೇ ನೀತಿ ಹೇಳೋದೇ ಕೆಲವರ ಜೀವನಾರೀ......... 
  7.                  ಇಲ್ವಾ...? ...ನಿಮಗೇಂತ ಒಂದ್ ನೀತಿ ಒಂದ್  ನಿಯತ್ತು, ಜೀವನಾ?....ಅದ್ನೆಲ್ಲಾ ಯೆಲ್ಲಾಕ್ತೀರೀ? ಸಂಶಯನಾ? ನಿಮ್ಮ ಬಗ್ಗೆ, ನಿಮ್ಮ ಬದುಕಿನ ಬಗ್ಗೇನೇ!!! ಅಥವಾ ನಮ್ಮ ಕಂದನ ಬಗ್ಗೇ ಇದ್ಯಾ? ಇದ್ರೆ....... ಉದ್ಧಾರಾಗಲ್ಲಾ ಬಿಡಿ!!!!ನೀವೂ ...ಕಂದಾನೂ.....                                        
  8.                    ಇರೋಸತ್ಯಾನಾ ನಿಷ್ಟುರವಾಗಿ ಹೇಳೋದು. ಯಾರದೋ ಮಕ್ಕಳು ಯೆಲ್ಲಿಗೋ ಹೋದರೆ ನನಗೇನು. ಆದರೆ ಹೇಳಬೇಕೆನಿಸಿದ್ದನ್ನ ಹೇಳದೇ ಹೋದರೆ. ನಾನು ನಂಬಿದ ಸತ್ಯಕ್ಕೇ ಅಪಚಾರ ಅಲ್ದಾ? ಹಾಗಾಗಿ ಹೇಳಿದೆ.

ಹಲುಬುಲೋಕ...!



.............ಲೋಕ ಮೆಚ್ಚಿಸುವಾತುರ !!

ಹಲವ ಹಲುಬಿದರೇನು ಹೊಲೆಗೆಲಸ ಬಿಡದನಕ 
ಕಲಿಯ ನಿಂದಿಸಿ ಮತ್ತೆ ಕುಲವ ಜರಿದೇನು
ಕೆಲರು ಮಾಡಿದ ಖರ್ಮ(ಕರ್ಮ) 
ಕುಲವ ಕೆಡಿಸಿತು ನೊಡಾನೆಲೆಗೆ ಕಿಚ್ಚಿಡುವವರೇ ನಲಿದಿಹರು ಜಗದಿ
ಕರಿದುಂಬಿ ಕುಳಿತಿರಲು ಮಲ್ಲಿಗೆಯು ಕರಿಯಹುದೇ?
ಸರಿ ರಾತ್ರಿ ನೈದಿಲೆಗೆ ಬೆಳಗ ತೋರುವುದೇ?
ಎರವಾಗುವವರುಂಟು ಜಗದಿ ಮತ್ತದೇ ಮಂದಿನೆರವಾಗಲೂ ಬಹುದು 
ಲೋಕ ನೆಚ್ಚಲಿಕೆ.

ಸೆಳೆತ!!



ಸೆಳೆತ!!  ಕಣ್ರೀ...........

    ಅನೇಕ ಪುಸ್ತಕಗಳನ್ನು ಓದಲೇ ಬೇಕೆಂದು ಮನೆಯ ಮಾಳಿಗೆಯಿಂದ ಧೂಳು ಕೊಡವಿ ಕೊಡವಿ ಎದುರಿಗೆ ತಂದಿಟ್ಟುಕೊಳ್ಳುತ್ತೇನೆ. ಆದರೆ ಪುಸ್ತಕಗಳಲ್ಲಿರುವ ವಿಷಯಗಳೂ ಯಾರೋ ತಮ್ಮಂಥವ್ರೇ ಬರೆದಿರುತ್ತಾರೆ ಹಾಗಾಗಿ ಓದು ಮರೆತು ಇಲ್ಲಿರುವ ಬರೆದ ಓದುಗರನ್ನೇ ಕೇಳಿದರಾಯಿತು ಎಂದು ಪುಸ್ತಕವನ್ನು ಮಸ್ತಕಕ್ಕೆ ಏರಿಸುವ್ ಗೋಜಿಗೇ ಹೋಗಲಿಲ್ಲ. ಫ್ಯಾನಿನ ಗಾಳಿಗ ಪರಪರನೆ ತೆರೆದುಕೊಳ್ಳುತ್ತಿರುವ ಪುಸ್ತಕದ ಹಾಳೆಗಳ ಕಲರವ ಕರ್ಕಶವೆನಿಸಿ ಅದರಮೇಲೊಂದು ಹೂದಾನಿಯಿಟ್ಟೆ. ಆಮೇಲೆ ಆ ಹೂದಾನಿಯೇ ಕಣ್ಸೆಳೆಯುತ್ತಿದ್ದುದರಿಂದ ಪುಸ್ತಕ ಕಾಣಿಸಲೇ ಇಲ್ಲ!! ಓದು ಮುಂದಡಿಯಿಡಲೇ ಇಲ್ಲ!!

"ಪ್ರಳಯ"



        ಇದೇ ೨೧-೧೨-೨೦೧೨ ಕ್ಕೆ "ಪ್ರಳಯ"ವಾಗುತ್ತಂತೆ...!


  1. ಥೂ............... ಇವರಾ.... ರಸ್ತೇಗ್ ಬಳೀರೋ ಅಂತಂದ್ರೆ.... ಇವರ ಬುದ್ಧೀಗೇ ಬಳಕಂಬುಟ್ಟವ್ರೇ.... ಡಾಮ್ರಾನಾ ಕಣ್ರೀ...... ಹೆ....ಹ್ಹೆ.....ಹ್ಹೇ.....ಗೊತ್ತೇ ಆಗ್ಲಿಲ್ಲ ಇವರೀಗೆ.......................ಓಹ್..... ಆಗೋಯ್ತು!! ಪ್ರಳಯ!!!ಆಯ್ತಲ್ರೀ...ಮೊನ್ನೆ ಮೊನ್ನೆ ತಾನೇ ಆಯ್ತು.... ಆಗಿಲ್ವಾ... ನಮ್ ಜನರೊಳಗೆ ಅಡಗಿದ್ದ ಸುಪ್ತ ಸುಕಾಮನೆಗಳು ಸತ್ಯ-ಧರ್ಮ ಯೆಲ್ಲ ಆ ಮಹಾ ಪ್ರಳಯದ ಹೆದ್ದೆರೆಯಲ್ಲಿ ಕೊಚ್ಚಿ ಹೋಯ್ತಲ್ಲಾ!!! ಗೊತ್ತಾಗಿಲ್ವಾ ನಿಮಗೆ....ಮಾನವಿಯತೆ ಮರೆತು ಹೋಗಿ. ಮಾನ ಮರ್ಯಾದೆ ಮಣ್ಣುಪಾಲಾಗಿ, ಆಳುಗರು ಕೂಳಿಗಾನುವ ಕುನ್ನಿಗಳಾಗಿ, ಹಾಳು ಗಬ್ಬೆದ್ದು ಸರ್ವನಾಶವಾಗಿ ಹೋಗ್ಯದೇ..... ಕಣ್ರೀ.... ನೀವು ಇನ್ನೂ ಆ ಮಹಾ ಪ್ರಳಯಾನಾ ಕಾಯ್ತಾ ಇದ್ದೀರಾ? ಅಂದಾಂಗೇ ನೀವಿನ್ನೂ ಮಲಗೇ ಇದ್ದೀರಿ ಅಂತಾಯ್ತು...... ಏಳಿ ಎಚ್ಚರಗೊಳ್ಳಿ ಸುತ್ತ ಮುತ್ತ ನೋಡಿ ಇನ್ನೂ ಯೇನಾರ ಉಳಕಂಡಿದ್ರೆ ..... ಥೂ..... ಹೊಲಸು.... ಮುಟ್ಟಬ್ಯಾಡೀ. ಹೆಣಾ ಸುಟ್ಟ್ ಬೂದಿ,,,,, ಮೂಳೆ .... ಮಸಣ .ಥೂ..ಥೂ.. ವಾಸ್ನೇ..... ದೇವರೂ..... ಹಾಂಗೇ ಬಿದ್ದಿರಲಿ ಅದು... ಆಮೇಲೆ ನೀವೂ ಕಳದು ಹೋದೀರಾ..

ಬೇಸಿಗೆ ರಜೆ.



ಬೇಸಿಗೆ ರಜೆ.

ಮಕ್ಕಳೊಂದಿಗೆ ಹೊಳೆಯಲ್ಲಿ ತಿಳಿನೀರ ಮೈಗೆರಚಿ ಖುಶಿ ಪಡುವುದು ಮಕ್ಕಳಿಗಷ್ಟೇ ಮೋಜಲ್ಲ.

ಸಾಯಗೊಡದ ಸಾಡೇ ಸಾತಿಗಳು!!

..>>>..ಸಾಯಗೊಡರು!!....<<...

ಹೇಗೆ ಸಂಬಾಳಿಸಲಿ ಘನಚೋದ್ಯಗಳನೆರೆವ
ಸೋಗಲಾಡಿಗಳ ಸುಳ್ಳ ಸತ್ಯಮಾಡುವರು
ಹೆಣದ ಬೆಂಕಿಲಿ ಮೈಯ್ಯ ಛಳಿಯ ದೂಡುವರು
ಕೆಣಕೆ ಫಣಿಯೆಂಬವರು! ನೊಣಕೆ ಬೆರ್ಚುವರು!!
ಬೇಡದಿದ್ದರೂ ನೀಡಿ ಬಡವನೆಂದೆಣಿಸುವರು

ಕೋಡದಿದ್ದರೂ ಕರೆದು ಕೆರವ ತೋರುವರು
ಸಾವೆನೆಂದರು ಬಿಡರು ಸಾಯಬಡಿವರು ಜಗಕೆ
ನೋಯದಿದ್ದರೂ ಗಾಯ ತೋರಿ ಕೈಚಾಚುವರು
ಹೇಗೆ ಸಂಭಾಳಿಸಲೀ ಈ ಜನರ ಹುಚ್ಚಾಟ
ಕೊಟ್ಟ ಕುದುರೆಯನೇರಲರಿಯದೆ ಬಾಲ ಮೇಲೆತ್ತುವರು!!