प्रज्वालितॊ ज्ञानमयप्रदीपः

ಗುರುವಾರ, ಅಕ್ಟೋಬರ್ 16, 2014

*ರಾಮಚಂದ್ರಾಪುರ ಮಠ*

        ಕರ್ನಾಟಕದ ಶ್ರೀ ಶಂಕರಭಗವತ್ಪಾದ ಮಠ ಪರಂಪರೆಯಲ್ಲಿ ಒಂದು ಸುದೀರ್ಘವಾದ ಇತಿಹಾಸವನ್ನು ತನ್ನೊಡಲೊಳಗೆ ತುಂಬಿಕೊಂಡ ಅನೇಕ ಗುರು ಪೀಠಗಳಲ್ಲಿ ಮುಖ್ಯವಾಗಿ ನಮಗೆ ಕಾಣುವುದು ಶೃಂಗೇರಿಯ ಶಾರದಾ ಪೀಠ, ಸ್ವರ್ಣವಳ್ಳಿಯ ಸರಸ್ವತೀ ಪೀಠ ಹಾಗೂ ಪ್ರಸ್ತುತ ರಾಮಚಂದ್ರಾಪುರದ ಗೋಕರ್ಣಮಂಡಲಾಧೀಶ್ವರ ಪೀಠ. ಇದಲ್ಲದೇ ಇನ್ನೂ ಕೆಲವು ನಡಾವಳಿಯ ಮೂಲಕ ಪರಂಪರಾನುಗತವಾಗಿ ಬಂದ ಮಠಗಳೂ ಇವೆ.ಪ್ರಸ್ತುತ ಇಲ್ಲಿ ನಾನು ಗೋಕರ್ಣಮಂಡಲಾಧೀಶ್ವರ ಪೀಠದ ಕುರಿತು ಕೆಲ ವಿಚಾರಗಳನ್ನು ಅರುಹಲೆತ್ನಿಸುತ್ತೇನೆ.
      ಈ ವಿಚಾರವನ್ನು ವಿವೇಚಿಸುವಾಗ ಈ ಮಠದ ಹಿನ್ನೆಲೆಯನ್ನು ನೋಡಲೇ ಬೇಕು. ಶ್ರೀ ಮಠದ ಇತಿಹಾಸವನ್ನು ಗಮನಿಸಿದಾಗ ನಮಗೆ ಕಾಣ ಸಿಗುವುದು ಶ್ರೀ ಶಂಕರ ಭಗವತ್ಪಾದರಿಂದ ಬಂದ ಗುರು ಪರಂಪರೆ.
     ಒಮ್ಮೆ ಆದಿ ಶಂಕರಾಚಾರ್ಯರು ತಮ್ಮ ಯಾತ್ರೆಯ ಸಮಯದಲ್ಲಿ ಭಾರತ ಪಶ್ಚಿಮ ಸಮುದ್ರ ತೀರದಲ್ಲಿರುವ ಗೋಕರ್ಣವನ್ನು ತಲುಪಿದರು. ಅಲ್ಲಿನ ಸ್ಥಳ ದೇವತೆಯಾದ ಮಹಾಬಲೇಶ್ವರನನ್ನು ಪೂಜಿಸಿದರು. ನಂತರ ಶ್ರೀ ವರದೇಶ ನನ್ನು ಪೂಜಿಸಲು ತಮ್ಮ ಶಿಷ್ಯರೊಮ್ದಿಗೆ ಶತಶೃಂಗಕ್ಕೆ ತೆರಳಿದರು. ( ಅಂದರೆ ಗೋಕರ್ಣದ ಮಹಾಬಲ ದೇವಾಲಯವು ಶ್ರೀ ಶಂಕರರಿಗಿಂತ ಇಲ್ಲಿ ಮೊದಲೇ ಪ್ರತಿಷ್ಠಾಪಿತವಾಗಿದ್ದ ದೇವಾಲಯವಾಗಿತ್ತು ಎಂಬುದು ನಿರ್ವಿವಾದ..!!) ಈ ಶತಶೃಂಗವು ಶಾಂತಿ-ನೆಮ್ಮದಿಯ ತಾಣವಾಗಿತ್ತು. ಇಲ್ಲಿ ಪರಸ್ಪರ ವೈರತ್ವವ ನ್ನು ಹೊಂದಿದ ಪ್ರಾಣಿಗಳೂ ಬಹು ಸಖ್ಯದಿಂದ ಜೀವಿಸುತ್ತಿದ್ದವು . ಅಂತೆಯೇ ವರದ ಮುನಿಗಳು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದ ? ಅಲ್ಲಿನ  ’ಅಶೋಕವನ’ ದಲ್ಲಿ ಒಂದು ಹೆಣ್ಣು ಹುಲಿಯು ಅನಾಥವಾಗಿದ್ದ ಜಿಂಕೆಯೊಂದಕ್ಕೆ ತಾಯಿಯ ಮಮತೆಯನ್ನು ತೋರುತ್ತಿದ್ದುದನ್ನು ನೋಡಿ  ಶ್ರೀ ಭಗವತ್ಪಾದರು ಮೂಕ ವಿಸ್ಮಿತರಾದರು. ( ಸಾಮಾನ್ಯವಾಗಿ ಶ್ರೀ ಶಂಕರಭಗವತ್ಪಾದರ ಸಂಚಾರದ ಎಲ್ಲಾ ಕ್ಷೇತ್ರಗಳಲ್ಲಿ ಇಂತಹ ವೈರತ್ವ- ಸಖ್ಯದ ಕಥೆಗಳು ಬರುತ್ತವೆ.!!)  ನಂತರದಲ್ಲಿ ಅಲ್ಲಿ ವರದ ಮುನಿಗಳು ಶ್ರೀಗಳನ್ನು ಸ್ವಾಗತಿಸಿ ಮಹಾತ್ಮರು ಸದಾ ಪೂಜಿಸಲು ಅನುಕೂಲವಾಗುವಂತೆ ತಮಗೆ ತಮ್ಮ ಗುರುಗಳಾದ ಅಗಸ್ತ್ಯರು ನೀಡಿದ್ದ ಪರಮ ಪೂಜನೀಯನಾದ ಶ್ರೀ ರಾಮ-ಸೀತೆ-ಲಕ್ಷ್ಮಣ ಮೂರ್ತಿಯನ್ನೂ ಹಾಗೂ ಶ್ರೀ ಚಂದ್ರಮೌಳೇಶ್ವರ ಲಿಂಗವನ್ನೂ ಕೊಟ್ಟರು. ಆಮೇಲೆ ಶ್ರೀ ಶ್ಂಕರಾಚಾರ್ಯರು ಸಮಾಜದ ಉದ್ಧಾರಕ್ಕಾಗಿ ಧರ್ಮ ಮಾರ್ಗ ಬೋಧನೆಗಾಗಿ ಅಲ್ಲಿ ಆ  ಶ್ರೀ ಸೀತಾಲಕ್ಷ್ಮಣ ಸಹಿತ ರಾಮಚಂದ್ರ ಹಾಗೂ ಶ್ರೀ ಚಂದ್ರಮೌಳೀಶ್ವರ ವಿಗ್ರಹವನ್ನು ಪೂಜಿಸುವುದಕ್ಕಾಗಿ ಮಠವೊಂದನ್ನು ಸ್ಥಾಪಿಸಿ ಅದನ್ನು "ಶ್ರೀ ರಘೂತ್ತಮ ಮಠ" ಎಂದು ಕರೆದರು. ಅಲ್ಲಿಗೆ ತಮ್ಮ ಶಿಷ್ಯರಾದ ಶ್ರೀ ಸುರೇಶ್ವರಾಚಾರ್ಯರಿಂದ ಅದಾಗಲೇ ದೀಕ್ಷೆಯನ್ನೂ ಪಡೆದಿದ್ದ ಶ್ರೀ ವಿದ್ಯಾನಂದರನ್ನು ಪ್ರಥಮ ಪೀಠಾಧಿಪತಿಯಾಗಿ ನಿಯಮಿಸಿದರು.ಇಲ್ಲಿಂದ ಗೋಕರ್ಣದಲ್ಲಿರುವ ಶ್ರೀ ರಘೂತ್ತಮ ಮಠವು ಕರ್ನಾಟಕದ ಮಠ ಪರಂಪರೆಯಲ್ಲೊಂದಾಗಿ ರೂಪುತಳೆಯಿತು.(ಈ ವಿಚಾರಗಳು ಶ್ರೀ ಮಠಕ್ಕೆ ಸಂಬಂಧಿಸಿದ ಕಥೆಗಳಿಂದ ತೆಗೆದುಕೊಂಡಿದೆ)

      ಈಗ ನಾವು ಈ ಮಠಕ್ಕೆ ಸಂಬಂಧಿಸಿದ ಇನ್ನಿತರ ಐತಿಹಾಸಿಕ ಸತ್ಯಗಳ ಕುರಿತು ವಿವೇಚಿಸೋಣ. ಹೀಗೆ ಮಠದ ಕುರಿತು ಮಾಹಿತಿಗಳನ್ನು ಕಲೆಹಾಕುವಾಗ ನಮಗೆ ಪ್ರಾಕ್ ಕಲ್ಪನೆಗಳಾಗಿ ದೊರೆಯುವ ಇನ್ನಿತರ ಆಧಾರಗಳ ಬಗ್ಗೆ ನೋಡಿದಾಗ ನಮಗೆ ಸಿಕ್ಕಿದ್ದು ಕೆಳದಿಯ ಐತಿಹಾಸಿಕ ದಾಖಲೆಗಳನ್ನು ವಿಧಿವತ್ತಾಗಿ ಕಾಪಿಡಿದ ಶ್ರೀ ಗುಂಡಾಜೋಯಿಸರು ಬರೆದ  ಶ್ರೀ ರಾಮಚಂದ್ರಾಪುರಮಠದ ರಾಜಮಾನ್ಯ ಇತಿಹಾಸ ವೈಭವ ಸಂ-೧,-೨,-೩, ಮತ್ತು ಶ್ರೀ ರಾಮಚಂದ್ರಾಪುರ ಮಠಕ್ಕೆ ಸಂಬಂಧಿಸಿದ ಕೆಲವು ತಾಳಗ್ರಂಥಗಳು, ತಾಮ್ರಶಾಸನಗಳು, ಹಾಗೂ ಶ್ರೀ ಮಠದ ಯತಿಗಳು ವಿರಚಿಸಿದ  ಆತ್ಮವಿದ್ಯಾಆಖ್ಯಾಯಿಕಾ, ಮಠೀಯ ವೃತ್ತಾಂತಕ್ಕೆ ಸಂಬಂಧಿಸಿ ಕೆಕ್ಕಾರು ಶ್ರೀ ಶಿವಭಟ್ಟ ಎಂಬವರು ಬರೆದ ’ತುಳಸೀ ವಿಯೋಗ ವಿಜ್ಞಾನ’ ಹಾಗೂ ವಿಕ್ಕಿಪೀಡಿಯಾದಿಂದ ಪಡೆದ ಕೆಲವು ನಂಬಲರ್ಹ ಮಾಹಿತಿಗಳು.

     








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ