प्रज्वालितॊ ज्ञानमयप्रदीपः

ಶನಿವಾರ, ಮಾರ್ಚ್ 16, 2013

ಊರೆಲ್ಲಾ ಮಂಗ...!!

             ಒಮ್ಮೆ ಒಂದು ಊರಿಗೆ ಓರ್ವ ಮಹಾ ಪುರುಷನ ಆಗಮನವಾಯಿತು.. ಛೇ...ಮಹಾಪುರುಷ ಅಂದಕೂಡ್ಳೇ ಯಾರೋ ಮಹಾಪುರುಷ ಅಂದ್ಕೋಬ್ಯಾಡೀ.. ಅಂತೂ ಬಂದ... ಬಂದವನೇ ಊರಿನ ಹಲವರನ್ನು ಅಲ್ಲಲ್ಲ ಕೆಲವರನ್ನು ಸೇರಿಸಿ ಒಂದು ಅಹವಾಲನ್ನು ಎದುರಿಟ್ಟ... "ನೋದ್ರ್ಯಪ್ಪಾ... ನಾನು ಸುಮ್ ಸುಮ್ಮನೇ ಬಂದೋನಲ್ಲಾ ಈ ಊರಲ್ಲಿ ಮಂಗಗಳು ಹೆಚ್ಚಿವೆ ಅಂತ ಸುದ್ದಿ ಗೊತ್ತಾಯ್ತು..ಅದ್ರಿಂದಾ ನೀವೆಲ್ಲಾ ತುಂಬಾ ತೊಂದ್ರೀನೂ ಅನುಭವಿಸುತ್ತಾ ಇದ್ದೀರಿ ಅಂತಾನೂ ಗೊತ್ತಾಯ್ತು..ಇನ್ನು ಅದಿಲ್ಲ.. ನೀವು ಒಂದು ಕೆಲಸ ಮಾಡಬೇಕು... ಅದ್ರಿಂದಾ ನಿಮಗೆಹಣಾನೂ ಬರುತ್ತೆ ಅಲ್ಲದೇ ಮಂಗನ ಕಾಟಾನೂ ತಪ್ಪುತ್ತೇ ಅಂತ ಭರವಸೆ ಕೊಡ್ತೀನಿ" ಅಂದ. ಇವನ ಮಾತು ಕೇಳಲು ಕೆಲವರಿದ್ದವರು ಹಲವರಾದರು...ಆವಾಗ ಇವನಿಗೆ ಅದೆಲ್ಲಿಂದ ಬಂತೋ ...ಆವೇಶದಿಂದಾ.." ನೋಡೀ ನೀವು ಈ ಊರಲ್ಲಿ ಇರೋ ಮಂಗಗಳನ್ನೆಲ್ಲಾ ಹಿಡದು ನನಗೆ ತಂದು ಕೊಡೀ... ನಾನು ಅದನ್ನು ಖರೀದಿ ಮಾಡ್ತೀನಿ...!!! ಸುಮ್ಮನೇ ಅಲ್ಲಾ...ಒಂದು ಮಂಗನಿಗೆ ೧೦ ರೂಪಾಯಿ ಕೊಡ್ತೀನಿ" ಅಂದ... ಮೊದ ಮೊದಲು ನಂಬದ ಜನ ಕೊನೆಯಲ್ಲಿ ಅದೇ ಆ ಕೆಲವರು ಮೊದಲೇ ಇವನ ಮಾತು ಕೇಳಲು ಬಂದಿದ್ದರಲ್ಲಾ ಅವರ ಮಾತಿಗೆ ಒಪ್ಪಿಗೆ ಸೂಚಿಸಿಯೇ ಬಿಟ್ಟರು... ಊರಿಗೆ ಊರೇ ಮಂಗನನ್ನು ಹಿಡಿಯುವವರ ಬೀಡಾಗಿಹೋಯಿತು...
....
ಮನೆಗೊಬ್ಬರಂತೇ ಮಂಗನನ್ನು ಹಿಡಿಯೋಕೆ ತಾಮುಂದು ನಾ ಮುಂದು ಎಂದು ಓಡಿದರು.. ಕೆಲವರು ದೊಡ್ಡ ದೊಡ್ಡ ಗಡವಗಳನ್ನೇ ಕಷ್ಟ ಪಟ್ಟು ಹಿಡಿದು ತಂದರು... ಅಂತೂ ತಂದ ಮಂಗ ಗಳನೆಲ್ಲಾ ಈ ಮಹಾಪುರುಷ ೧೦ ರೂಪಾಯಿಗೊಂದರಂತೇ ವ್ಯಾಪಾರ ಮಾಡಿದ...ಜನರಿಗೆ ಖುಶಿಯೋ ಖುಶಿ... ಮಂಗನಿಗೆ ದುಡ್ಡು ದುಡೀಬಹುದಲ್ಲಾ...
ತಿರುಗಿ ತಿರುಗಿ ಮಂಗನನ್ನು ಕಂಡ ಕಂಡಲ್ಲೆಲ್ಲಾ ಹಿಡಿದು ಅಮುಕಿದರು.... ಎಲ್ಲಾ ಮಂಗಗಳೂ ಖಾಲಿ..!! ೧೦ ರೂಪಾಯಿಗೆ ಒಂದು ಮಂಗ ಸಾರಾ ಸಗಟಾಗಿ ಖರೀದಿಸಿ ಒಂದು ದೊಡ್ಡ ಹಾಲಿನಲ್ಲಿ ಕೂಡಿ ಹಾಕಿದ ಮಹಾಪುರುಷ... ಮಂಗನ ಮಹಲು ಭರ್ತಿ ಆಗೋಯ್ತು...!!ಆದರೂ.... ಈ ಊರವರ ಮಂಗನ ಹಿಡಿಯುವ ದಾಹ ತೀರಲೇ ಇಲ್ಲ... ೧೦ ರೂಪಾಯಿಗೊಂದು ಮಂಗ...!! ಮತ್ತೆ ಕಾಡು ಮೇಡು ಅಲೆದೂ ಅಂತೂ ಮರಿ ಪರಿ ಎಲ್ಲಾ ತಂದರು.. ಅವರೂ ೧೦ ರೂಪಾಯಿ ಎಣಿಸಿ ಜೋಬಿಗೆ ತುರುಕಿ ಮತ್ತೆ ಬೆಟ್ಟ ಬೇಣ ಬಿದ್ದರು... ಊಹೂಂ ಎಲ್ಲೂ ಇಲ್ಲಾ ಮಂಗ...!! ಹೋದವರು ಬರಿಗೈಯ್ಯಲ್ಲಿ ಬರಹತ್ತಿದರು.... ಆಗ ಇದನ್ನು ಗಮನಿಸಿದ ಮಹಾಪುರುಷ... ನೋಡೀ... ಒಂದು ಮಂಗನಿಗೆ ೨೦ ರೂಪಾಯಿ...!!!! ಎಂದ....ಕೆಲವರು ಹೊಟ್ಟೆ ಹಿಸುಕಿಕೊಂಡರು... ಮತ್ತೂ ಓಡಿದರು... ಮೂಲೆ ಮೂಲೆಯಲ್ಲಿರೋ ಮಂಗನಿಗೆಲ್ಲಾ ಶುಕ್ರದೆಸೆ...!!
...
ಅಯ್ಯೋ ಮೊದಲಿನಷ್ಟು ಕಷ್ಟ ಇಲ್ಲಾ ಮೊದಲಾದರೆ ಒಂದು ಮಂಗನಿಗೆ ೧೦ ರೂಪಾಯಿ ಇತ್ತು... ಈಗ ಹಾಗಲ್ಲ ೨೦ ರೂಪಾಯಿ..!! ಹಿಡೀರಪ್ಪೋ..ಅಕ ಅಕ ಕ್ಕಕ್ಕ..ಅಲ್ಲಿ ಹಿಡೀ... ಎಂದು ತಬ್ಬಲಿಯಾದ ಹಾಲೂಡುವ ಮರಿಯನ್ನೂ ಬಿಡಲಿಲ್ಲಾ ಬೆಟ್ಟದ ತುದಿಯಲ್ಲಿ ಅವಿತಿರೋ ಮಂಗನನ್ನೂ ಬಿಡಲಿಲ್ಲಾ ಎಳೆದೆಳೆದು ತಂದರು...ಒಂದಕ್ಕೆ ೨೦ ರೂಪಾಯಿ... ಯಾರಿಗುಂಟು ಯಾರಿಗಿಲ್ಲಾ... ಮಹಲಿನಲ್ಲಿ ಮಂಗ... ಜೇಬಲ್ಲಿ ಹಣ... ಛೇ.... ಎಲ್ಲಾ ಮಂಗ ಖಾಲಿ ಆಗೋಯ್ತಲ್ಲಾ.... ಇನ್ನೂ ಹುಡುಕಿದರು ಮತ್ತೆ ಹುಡುಕಿದರು.. ಸಿಗಲಿಲ್ಲ..ಕೆಲವರು ಅನ್ನ ನೀರು ಬಿಟ್ಟರು.. ಬೆಟ್ಟ ಬೇಣ ಸುತ್ತಿದರು..ಊಹೂಂ ಇಲ್ಲ... ತಿರುಗಿ ಬಂದವರಿಗೆ ಮಹಾ ಪುರುಷ ಕಾಣಲಿಲ್ಲ.. ಬದಲಿಗೆ ಇನ್ನೊಬ್ಬ ಅಸಿಸ್ಟೆಂಟ್ ಕಾಯುತ್ತಿದ್ದ..." ಸಾಯಾಬ್ರು... ಊರಿಗೆ ಹೋಗವ್ರೇ..ದುಡ್ಡಿನ ಗಂಟು ತರೋಕೆ.... ನೋಡೀ... ಅವ್ರು ಹೇಳಿ ಹೋಗಿದ್ದಾರೆ ನನಗೆ... ಇನ್ನು ಒಂದಕ್ಕೆ..೩೦ ರಂತೇ ಕೊಡುತ್ತಾರಂತೆ.. ತಗೊಂಬನ್ನೀ" ಅಂದ... ಮತ್ತೆ ಓಡಿದರು ಜನ... ಊಹೂಂ ಇಲ್ಲಾ.. ಸಿಗಲೇ ಇಲ್ಲಾ... ತಿರುಗಿ ವಾಪಾಸ್ಸು ಬಂದು ನಿಂತರು... ಆಗ ಈ ಅಸಿಸ್ಟೆಂಟ್ ಹೇಳಿದ ಪರಿಸ್ತಿತಿಯನ್ನು ಪೋನ್ ಮಾಡಿ ಸಾವ್ಕಾರರಿಗೆ ಹೇಳಿದೆ.... ಅವ್ರು ಹೇಳಿದ್ರೂ ೫೦ ಕ್ಕೆ ಖರೀದಿ ಮಾಡು ಎಂದು... ಏನ್ ಮಾಡ್ತೀರೀ.. ಹೋಗಿ ತಗೊಂಬನ್ನಿ ಎಂದ್...ಅಯ್ಯಾ ೫೦ ರೂಪಾಯಿನಾ...? ಏನ್ ಮಾಡೋದೂ.... ಒಂದೂ ಸಿಗಲ್ವೇ... ಆಚೀಚೆ ನೋಡುತ್ತಾ ನಿಂತೇ ಬಿಟ್ಟರ್ರು....!! ಆವಾಗ ಈ ಅಸಿಸ್ಟೆಂಟ್ ಒಬ್ಬನ ಕಿವಿಯಲ್ಲಿ ಉಸುರಿದ.." ಲೋ ತಮ್ಮಾ... ಇಲ್ಲಿ ಬಾ... ನೋಡೂ ..ಈ ಮಹಲಿನಲ್ಲಿ ಎಷ್ಟೊಂದು ಮಂಗಗಳು ಬಿದ್ದಿವೆ.. ನಮ್ ಸಾವ್ಕಾರಂಗೆ ಇಲ್ಲಿ ಎಷ್ಟ್ ಇವೆ ಅಂತ ಲೆಕ್ಕಾ ಅಂತೂ ಇಲ್ಲಾ.... ನೋಡು ಆಗೋದಾದ್ರೆ ಹೇಳೂ... ೪೦ ಕ್ಕೆ ಒಂದರಂತೇ ನಿಮಗೇ ಕೊಡತೀನಿ ೫೦ ಕ್ಕೆ ಸಾವ್ಕಾರ ಈಸ್ಕೋತಾನೆ ಗೊತ್ತಾಗಲ್ಲಾ ಅವನೀಗೆ" ಅಂದ... ಈ ಮಾತು ಕಿವ್ವಿಯಿಂದ ಕಿವಿಗೆ ಕ್ಷಣಾಮಾತ್ರದಲ್ಲಿ ಹರಿದು ಹೋಯ್ತು... ೧೦ ರೂಪಾಯಿ ೨೦ ರೂಪಾಯಿನಂತೇ ದುಡಿದಿದ್ದು ಜೋಬಲ್ಲಿ ಕುಣೀತಾ ಇತ್ತಲ್ಲಾ... ಎಲ್ಲಾ ಹೋ ಎಂದರು... ಅಸಿಸ್ಟೇಂಟ ಆರಿಸಿ ಆರಿಸಿ ೪೦ ಕ್ಕೆ ಒಂದರಂತೇ ಮಂಗಗಳನ್ನು ಊರವರಿಗೆ ಕೊಟ್ಟ... ಸಾವ್ಕಾರ ತಿರುಗಿ ಬರೋ ದಿನಾ ಹತ್ರ ಬಂತು ಇನ್ನು ಸಾಕು ಗೊತ್ತಾಗ್ ಬಿಡುತ್ತೆ ಕಷ್ಟ ...ಎಂದ ...ಆದ್ರೂ ಅರ್ಧಕ್ಕರ್ಧ... ಮಹಲಿನ ಮಂಗ ಊರವರ ಹಟ್ಟಿ ಗೂಡಲ್ಲಿ ಬಂಧಿ ಆಗಿತ್ತು...೪೦ ರೂಪಾಯಿಗೆ ತಂದಿದ್ದು.... ಸುಮ್ನೇ ಬರುತ್ತಾ... ಚಿನ್ನದ ರೇಟು.... ೫೦ಕ್ಕೆ ಮಾರೋದು.... ಅಷ್ಟರಲಿ ಪಕ್ಕದ ಊರೀಗೂ ಸುದ್ದಿ ಹೋಯ್ತು... ೪೦ ಕ್ಕೆ ಕೊಡ್ತಾರಂತೆ ಮಂಗನ್ನಾ..!!! ೫೦ ಕ್ಕೆ ಸಾವ್ಕಾರ ಬಂಡಮೇಲೆ ಈಸ್ಕೋತಾನಂತೆ... ಮೇಲೆಬಿದ್ದು ಬಂದರು... ಕಂತೆ ಕಂತೆ ಎಸೆದರು.. ಅಸಿಸ್ಟೆಂಟ...ಇರೋ ಬರೋ ಮಂಗಾನೆಲ್ಲಾ ರಾತ್ರೋ ರಾತ್ರಿ ಮಾರಿದ ೪೦ ರ್ಗೆ ಒಂದು...!! ಮಾಲಿನ ಮಂಗ ಎಲ್ಲಾ ಖಾಲಿ..!!ಇನ್ನೇನು ಸಾವ್ಕಾರ ಬರೋ ವರೆಗೆ ಇವನಿಗೆ ಕೆಲಸಾ ಇಲ್ಲವಲ್ಲಾ.... ಪಕ್ಕದ ಪ್ಯಾಟೇಗೋಗಿ ಗುಂಡಾಕಿ ಬರ್ತೇನೆ ಎಂದು ಬ್ಯಾಗ್ ಹಿಡದು ಹೊರಟ.... ಜನ ಮಂಗನನ್ನು ಊರ ತುಂಭಾ ಬಿಟಗೊಂಡು ಸಾವ್ಕಾರನ ಬರಾ ಕಾಯ್ತಾ ನಿದ್ದೆ ಬಿಟ್ರು... ಊಹೂಂ ಬರಲೇ ಇಲ್ಲ ಸಾವ್ಕಾರ... ಊರೆಲ್ಲಾ ಮಂಗ...!!! ೪೦ ರೂಪಾಯಿನ ಮಂಗ...!!ಸುಖದಲ್ಲಿದ್ದೋರಿಗೆ ಶೂಂಠಿ ಕಷಾಯ ಕುಡಿಸಿದ್ದ...
(೧೦,೨೦ ಕ್ಕೆ ಹಿಡದಿದ್ದು ೪೦ ಗಳಿಸಿತ್ತು... ಸರಾಸರಿ ೨೫ ಲಾಬ ತಂದಿತ್ತು..... ಶೇರು ಮಾರುಕಟ್ಟೆಯಲ್ಲಿ ಹುಚ್ಚಾದ ನನ್ನ ಗೆಳೆಯನೊಬ್ಬನಿಗೆ ನಾನು ಹೇಳಿದ ಕಥೆ... ನಿಮಗೂ ಹಂಚಿದ್ದೇನೆ...)

ಸೋಮವಾರ, ಮಾರ್ಚ್ 11, 2013

ಶಿವರಾತ್ರಿ ಜಾಗರಣೆ.

ನಿಜವಾಗಿ ಹೇಳ್ತೇನೆ.. ಶಿವರಾತ್ರಿಯ ಜಾಗರಣೆ ಅಂದರೆ ಕೇಳಿದ್ದೆನೇ ಹೊರತೂ ಇದೂವರೆಗೆ ಮಾಡಿರಲಿಲ್ಲ..!! ನಿನ್ನೆ ಅದೇಕೋ ನೋಡೋಣ ನಾವೂ ಜಾಗರಣೆ ಮಾಡೋಣ ಎನ್ನಿಸಿ ಎಲೆಪೆಟ್ಟಿಗೆಗೆ ಮೊದಲೇ ಭರ್ತಿಗೊಳಿಸಿ ಹೆಂಡತಿಯೊಡನೆ ಹೇಳಿಕೊಂಡೆ ಮನದಿಂಗಿತವನ್ನು. ಅವಳೂ ಸಮ್ಮತಿಸಿದಳೂ ಅನ್ನಿ.
ಜಾಗರಣೆ ಎಂದರೆ ಎಚ್ಚರಾಗಿರುವುದು...! ಅಲ್ಲವೇ..? ಪಾಪಪ್ರಜ್ಞೆಯಕೊರತೆಯೋ ನನ್ನ ಅಹಂಕಾರದ ಪರಮಾವಧಿಯೋ ಯಾವುದೇ ದೇವರ ಧ್ಯಾನ-ಭಜನೆ-ಪೂಜಾದಿಗಳನ್ನು ಮಾಡಿ ಹೊತ್ತು ಕಳೆಯಬೇಕೆಂದೆನಿಸಲಿಲ್ಲ. ಟಿ.ವಿ. ನೊಡೋಣವೆಂದರೆ ಇದುವರೆಗೂ ಹೆಂಡತಿಗೆ ಟಿ.ವಿ.ಕೇಳಿ ಅಭ್ಯಾಸವೇ ಹೊರತೂ ನೋಡಿ ಅಭ್ಯಾಸವಿಲ್ಲ..ಅವಳು ಇಲ್ಲಿ ಟಿ.ವಿ. ಹಾಕಿ ಒಳಗೆ ಅಡಿಗೆ ಮನೆಯಲ್ಲಿ ಕಾಯಕದಲ್ಲಿ ತೊಡಗಿರುವವಳು.ಮಕ್ಕಳಿಬ್ಬರೂ ತಮಗೆ ಜಾಗರಣೆ ನಿಷಿದ್ಧ ಎಂದು ಮೊದಲೇ ಸಾರಿದ್ದರು...!!ನಾವಿಬ್ಬರೇ ಜಾಗರಣೆ ಮಾಡಬೇಕು..!! ಮೊದಲೆಲ್ಲಾ ಅನ್ನಿಸುತ್ತಿತ್ತು ಎಲ್ಲ ಗಂಡ ಹೆಂಡತಿಯರಿಗನ್ನಿಸಿದಂತೆ...!! ನಾವಿಬ್ಬರೇ ಇರಬೇಕು.. ನಾವೇ ಇರಬೇಕು.. ತುಂಬಾಹೊತ್ತು ನಾವಿಬ್ಬರೇ ಕಳೆಯಬೇಕು .....ಎಷ್ಟೊಂದು ಹೇಳಿಕೊಳ್ಳಬೇಕು..ಇನ್ನೂ ಏನೇನೋ...ಆದರೆ ಬದುಕಿನ ಬಹುದಿನಗಳನ್ನು ಹಾಗೆ ಕಳೆಯಬೇಕೆಂದೆನಿಸಲಿಲ್ಲ..ಕಳೆಯಲು ಪುರುಸೊತ್ತೂ ಇರಲಿಲ್ಲ.. ಆದರೆ ಇಂದು ನಮಗಾಗಿಯೇ ಈ ಶಿವರಾತ್ರಿ-ಜಾಗರಣೆ ಬಂತೇನೋ ಎನ್ನಿಸಿ ಇಬ್ಬರೂ ಜಾಗರಣೆಗೆ ಕುಳಿತೆವು. ಅದೂ ಇದೂ ಮಾತಾಡುತ್ತಾ ಹೊತ್ತು ಸರಿಯುತ್ತಿತ್ತು...
..... ಓಹ್ ಬೆಳಗಾಗಿ ಹೋಯಿತು... ಇನ್ನೂ ಏನನ್ನೋ ಹೇಳಬೇಕಿತ್ತು... ಆಗಲೇ ಇಲ್ಲ.. ಬೆಳಗಾಗಿ ಹೋಯಿತು ಪುಟ್ಟಕ್ಕಾ... ಇನ್ನು ನಾವಿಬ್ಬರೇ ಮಾತಾಡೋದಕ್ಕೆ ಆಗದೇನೋ..ಹಾಲಿನವ ಬಂದೇಬಿಟ್ತ ಮಕ್ಕಳು ಮೈ ಮುರಿದು ಎದ್ದೇಳುವ ಹೊತ್ತು..ನಾವೂ ಎದ್ದು.. ಕಾಯಕದೆಡೆಗೆ ಸರಿದು ಹೋದೆವು.
....ಆಹಾ...ಎಂಥಾ ಜಾಗರಣೆ..ಎಂಥಾ ಜಾಗರಣೆ... ಬದುಕಿನ ಬಹುದಿನಗಳ ಸಿಂಹಾವಲೋಕನ...!!! ಅವಳು ಹೇಳಿದಳು... ನಾನು ಬಡವಿ...ನೀನೂ ಬಡವ ಒಲವೇ ನಮ್ಮ ಬದುಕು...ಛೇ....ನಾನೆಂದೆ... ಅಲ್ಲ ಪುಟ್ಟಕ್ಕಾ... ಬಡವರಲ್ಲ... ಎಂದೆಂದೂ ನನ್ನ ನಿನ್ನ ಬದುಕಿನಲ್ಲಿ ಬಡತನ ಬಂದಿಲ್ಲ ನೋಡೂ... ಎಂದೂ ಅತ್ತಿಲ್ಲ..ನೀನು... ಎಂದೂ ಎದೆಗುಂದಿಲ್ಲ ನಾನೂ.. . ಬದುಕಿಗೆ ಬಡತನ ಬಂದಿಲ್ಲ. ನಿನ್ನೆಯ ಚಿಂತೆಯಿಲ್ಲ..!! ನಾಳಿನ ಯೋಚನೆಯಿಲ್ಲ... ಏಕೆಂದರೆ.... ಶಿವ ಮೆಚ್ಚುವಂತೆ ಬದುಕಿದ್ದೀವಲ್ಲವೇ..? ಮುಂದೂ ಹಾಗೇ...


ಜಾಗರಣೆಯ ಫಲ......೧
...
........
ಮದುವೆಗೆ ಮುನ್ನ ಮಡದಿಯಾಗುವವಳನ್ನು ಕೇಳಬೇಕಾಗಿತ್ತು ಎಂದುಕೊಂಡಿದ್ದೆ... ಆದರೆ ಅದೇಕೋ ಕೇಳಲು ಆಗಿರಲಿಲ್ಲ... 
೧) ನಿಜವಾಗಿ ನನ್ನನ್ನು ಮದುವೆ ಆಗೋದಕ್ಕೆ ಇಷ್ಟ ಇದೆಯಾ..?
೨) ನಿನ್ನ ಮನದಲ್ಲಿ ಮದುವೆ ಆಗುವವ ಶ್ರೀಮಂತನಾಗಿರಬೇಕು ಎಂದಿದೆಯಾ?
೩) ನನ್ನನ್ನು ಮದುವೆ ಆದರೆ ಸುಖವಾಗಿರುವೆನೆಂಬ ಸಮಾಧಾನ ಇದೆಯಾ?
.....ಕೇಳಲು ಪುರುಸೊತ್ತೇ ಇರಲಿಲ್ಲ...
ಜಾಗರಣೆಯಲ್ಲಿ...ಕೇಳಿದೆ...ಅದೇ ಪ್ರಶ್ನೆ... ಆದರೆ ಭೂತಕಾಲದ ರೂಪ...!!
ಅವಳೆಂದಳು..
೧) ಇದುವರೆಗಿನ ನನ್ನೊಂದಿಗಿನ ಬದುಕು ತೃಪ್ತಿ ಕೊಟ್ಟಿದೆಯಾ..?
೨) ನೀನು ಶ್ರೀಮಂತನಲ್ಲಾ ಎಂಬ ಕೊರಗು ಇನ್ನೂ ಇದೆಯಾ..?
೩) ಸುಖ ಎಂದರೆ ಏನು ಎಂದು ತಿಳಿಯುವುದು ಯಾವಾಗ? ದುಃಖದ ಮಡುವಲ್ಲಿದ್ದಾಗ ಅಲ್ಲವಾ?...
....ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾಗಿತ್ತು.....
ಇಬ್ಬರೂ ಕಣ್ಣುಜ್ಜಿಕೊಂಡೆವು.... ಬೆಳಗಾಯಿತು..ಜಾಗರಣೆ ಮುಗಿಸೋಣ..


ಜಾಗರನೆಯ ಫಲ...೨
...
ಅಂದು ನಿನ್ನ ಕೈಹಿಡಿಯುವಾಗ, ತಂದೆಯಿಲ್ಲದ ನನಗೆ ತಂದೆಯ ಸ್ಥಾನದಲ್ಲಿ ನಿಂತು ನಿನ್ನನ್ನು ಮನೆತುಂಬಿಸಿಕೊಳ್ಳುವಾಗ ನನ್ನ ಚಿಕ್ಕಪ್ಪ ಹೇಳಿದ್ದ ನನಗೆ.ಬರೇ ಹೇಳಿದ್ದಲ್ಲ...ಆದೇಶಿಸಿದ್ದ... ಅವನ ಮಾತೇ ಹಾಗೆ... ಎಲ್ಲವೂ ತಕ್ಕದ್ದು ಎಂಬ ಕ್ರಿಯಾಪದದೊಂದಿಗೇ ಅಂತ್ಯವಾಗುತ್ತಿತ್ತು...ಅವನ ಬದುಕೂ ಹಾಗೇ ಇತ್ತು..!!.. ನೋಡು.. ನಿನಗವಲು ಹೆಂಡತಿಯಾಗಿ ಇಂದಿನಿಂದ ನಿನ್ನ ಮನೆಯ ಹೊಸಿಲನ್ನು ತುಳಿದು ಬರುತ್ತಿದ್ದಾಳೆ.. ಕಳೆದ ಮೂವತ್ತು ವರ್ಷಗಳ ಅವಲ ಬದುಕಿನಲ್ಲಿ ನೀನಿರಲಿಲ್ಲ.. ಅಲ್ಲಿ ಅವಳ ಅಪ್ಪ-ಅಮ್ಮ.. ಅಕ್ಕಂದಿರು.. ಅದೇ ಅವಳ ಜಗತ್ತು ಆಗಿದ್ದಿತ್ತು.. ಆದರೆ ಇನ್ನು ಮುಂದೆ ಅವಳ ಜಗತ್ತೆಂದರೆ ನೀನೇ ನೀನೊಬ್ಬನೇ ಇಲ್ಲಿ ಅವಳ ಬದುಕು ಕೇವಲ ಮೂವತ್ತು ವರ್ಷಗಳದ್ದಲ್ಲ. !! ಇಲ್ಲಿ ಅವಳಪ್ಪ ಅವಳಮ್ಮ ಅಕ್ಕಂದಿರು ಇರುವುದಿಲ್ಲ... ಆದರೆ ಎಂದೂ ಕೂಡಾ ಅವಳು ಆ ಕೊರಗನ್ನನುಭವಿಸದಂತೆ ನೋಡ್ಕೊಳ್ಲಬೇಕಾದ್ದು ನಿನ್ನ ಕರ್ತವ್ಯ..!! ಇಂದಿನಿಂದ ನೀನು ಅಂದುಕೊಂಡಂತೆ ಕೇವಲ ಅವಳಿಗೆ ಗಂಡನೊಬ್ಬನೇ ಅಲ್ಲ..!! ಅವಳು ನೆನೆದಾಗ ನೀನೇ ಅಪ್ಪನಾಗಬೇಕು... ಬಯಸಿದಾಗ ಅಮ್ಮನಾಗಬೇಕು.. ಅಣ್ಣತಮ್ಮಂದಿರನ್ನು ಕಾಣದ ಅವಳಿಗೆ ಆ ಸೋದರವಾತ್ದ್ಸಲ್ಯದ ಸವಿಯನ್ನೂ ಉಣಬಡಿಸಬೇಕು..!! ನೋಡು ಕೊನೇಯದಾಗಿ ಹೇಳ್ತೇನೆ...ಏಕೆಂದರೆ ಇನ್ನು ನೀನು ನಮ್ಮ ಮಾತನ್ನು ಕೇಳುವುದೂ ಇಲ್ಲ ಕೇಳಬಾರದು ಕೂಡಾ..!!
ಇದೊ.. ನಿನ್ನವಳ ಕಣ್ಣಲ್ಲಿ ಒಂದೇ ಒಂದು ದಿನ ಕೊರಗಿನ ಕಣ್ಣೀರು ತರಿಸಬೇಡ ಹಾಗೇನಾದರೂ ಬಂದರೆ... ಅದು ನಿನ್ನ ವಂಶವನ್ನೇ ತೊಳೆದುಕೊಂಡು ಹೋದಿತು...ಹಿರಿಯರ ಮಹಾನ್ ತಪಸ್ಸಿನ ಫಲವಾಗಿ ದೊರೆತ ಈ ವಂಶದ ಯಶದ ಹೊಲವನ್ನು ಅವಳ ಕಣ್ಣೀರ ಕೋಡಿಯಿಂದ ಕೊಚ್ಚಿಹೋಗುವಂತೆ ಮಾಡಬೇಡ..ಸರ್ವನಾಶವಾಗಿಬಿಡುತ್ತದೆ...!!
ಎಂದು ಅಂದು ಹೇಳಿದ್ದನಲ್ಲವಾ ಸಣ್ಣ ಮಾವ...! ನಾನೂ ಕೇಳಿಸಿಕೊಂಡಿದ್ದೆ... ಎಂದಾಗ ಜಾಗರಣೆ ಮುಗಿದಿತ್ತು ಬೆಳಕು ಕಂಡಿತ್ತು..!!