प्रज्वालितॊ ज्ञानमयप्रदीपः

ಭಾನುವಾರ, ಜುಲೈ 1, 2012

" 'ವೈದ್ಯರ ದಿನ'ಕ್ಕೊಂದು ವೈದ್ಯರ ಸಂಸ್ಮರಣೆ"

‎................................." 'ವೈದ್ಯರ ದಿನ'ಕ್ಕೊಂದು ವೈದ್ಯರ ಸಂಸ್ಮರಣೆ" ...................................
.........................................................................
ನನಗಾಗ ಕೇವಲ ನಾಲ್ಕು ಐದು ವರ್ಷ. ಮನೆಯಲ್ಲಿ ಯಾರಾದರೂ ಖಾಯಿಲೆ ಬಿದ್ದರೆ (ದೊಡ್ಡ ಖಾಯಿಲೆ ಇರಲಿಲ್ಲ, ಜ್ವರ,ಖೆಮ್ಮು, ಇತ್ಯಾದಿ) ನಾವು ನಂಬಿದ ವೈದ್ಯ ನಾರಾಯಣರೆಂದರೆ ಹೆಗಡೆ ಮನೆ ಗಣಪಜ್ಜ...!! ನಿಜವಾಗಿ ಅವನ ಅಪ್ಪ ಗಣಪತಿ ಹೆಗಡೆ, ಇವರ ಹೆಸರು ಗಣೇಶ ಹೆಗಡೆ ಎಂದು. ಆದರೂ ಅವರು ಇಡೀ ಊರಿಗೇ ಡಾಕ್ಟರ್ ಗಣಪಜ್ಜನಾಗಿದ್ದರು. (ಅವರನ್ನು ಇನ್ನು ಮುಂದೆ ನಾನು ಏಕವಚನದಲ್ಲಿಯೇ ಹೆಸರಿಸುತ್ತೇನೆ. ಏಕೆಂದರೆ ನನಗೆ ಏಕವಚನದಲ್ಲಿ ಹೆಸರಿಸಿದರೆ ಅದೇನೋ ನಮ್ಮವರೆಂಬ ಭಾವನೆ. ) 
ನಾನು ಆಗಾಗ ಈ ಗಣಪಜ್ಜನ ಮನೆಯ ಹಾದಿ ತುಳಿಯುತ್ತಿದ್ದೆ. ಏಕೆಂದರೆ ಈ ಜ್ವರ,ಖೆಮ್ಮು, ಇತ್ಯಾದಿ ನನ್ನ ಆಪ್ತ ಸ್ನೇಹಿತರಾಗಿದ್ದರು.. ಹಾಗಾಗಿ ಪದೇ ಪದೇ ಗಣಪಜ್ಜನ ತೀರ್ಥ ಬೀಳಲೇಬೇಕು ನನಗೆ. ಹೀಗಿರಲು, ನಾನು ಹೋದಾಗಲೆಲ್ಲಾ ಗಣಪಜ್ಜ "ತಮಾ... ಯಾರಿಗೋ? ಯೆಂತಾ ಆತೋ? "ಇತ್ಯಾದಿಗಳಿಂದಲೇ ಸ್ವಾಗತ ಮಾಡುತ್ತಿದ್ದುದು,( ಡಾಕ್ಟರ್ ಮನೆಯಲ್ಲಿ ಇನ್ನೇನು ಆರಾಮಾ ಯಾವಾಗ ಬಂದ್ರೀ ಎಂದು ಕೇಳುವುದಕ್ಕುಂಟೇ, ಮನೆಗೆ ನೆಂಟರು ಬಂದರೂ ಯಾರಿಗೆ? ಯೇನಾಯ್ತು? ಎಂದೇ ಮಾತಾಡಿಸಿ ಅಭ್ಯಾಸ...!! ಅದು ಸತ್ಯವೂ ಹೌದು) ಆಗ ನಾನು ನನ್ನ ಬಾಲ ಭಾಷೆಯಲ್ಲಿಯೇ ನನಗೆ ಬಂದ ರೋಗದ ವಿವರ ಸಲ್ಲಿಸುತ್ತಿದ್ದೆ. ನಾನು ನನ್ನ ವಿಚಾರವನ್ನು ಹೇಳುತ್ತಿದ್ದಂತೇ ನಾನು ತೆಗೆದುಕೊಂಡು ಹೋದ ಬಾಟಲಿಗೆ ಎರಡು ಜಾತಿಯ ಕೆಂಪು ಮದ್ದು, ಒಂದಷ್ಟು ಸಕ್ಕರೆಯಂತಹ ವಸ್ತು, ಒಂದೋ ಎರಡೋ ಸಣ್ಣ ಮಾತ್ರೆಗಳ ಪುಡಿ ಮಾಡಿ ಇಟ್ಟಿದ್ದು ಬಿದ್ದಿರುತ್ತಿತ್ತು. ಅದು ಎಲ್ಲಾ ಸೇರಿದರೆ ಒಂದು ಮೂರು ಚಮಚ ಆಗಬಹುದು. ಮತ್ತೆ ನನ್ನನ್ನು ಪ್ರಶ್ನಿಸುವವನಂತೇ ಕನ್ನಡಕದ ಮೇಳಿನಿಂದ ನೋಡಿದಾಗಲೇ ನಾನು ಹೇಳ ಬೇಕಿತ್ತು.. " ಗಣಪಜ್ಜಾ ಅಬ್ಬೆಗೂ ನನ್ನಾಂಗೇ ಜ್ವರ ಖೆಮ್ಮು . ಅದಕ್ಕೂ ಇದ್ರಲ್ಲೇ ಕೊಡು....!!!!!! " ಯೆಂತಾ ಹೇಳಿಕೆ ಅಬ್ಬೆಗೂ ಮಗನಿಗೂ ಒಂದೇ ರೋಗ ಒಂದೇ ಔಷಧ..!! ಒಂದೇ ಬಾಟಲಿಯಲ್ಲಿ...!! "ಆತೋ ಹೇಳಿದ ಗಣಪಜ್ಜ ಮನೆಯ ಒಳಗೆ ಹೋಗುತ್ತಿದ್ದ....!!! ಅಲ್ಲಿ ಅವನ ಹೆಂಡತಿ ಕಮಲಕ್ಕ ಬಿಸಿನೀರು ಕಾಯಿಸಿ ಆರಿಸಿ ಮಡುಗಿರುತ್ತಿದ್ದಳು.. ಅದನ್ನು ಒಂದು ಚೊಂಬು ತಕ್ಕೊಂಡು ಬಂದು ಆ ಬಾಟಲು ತುಂಬುವಷ್ಟು ನೀರು ಹಾಕಿ ಸುಮಾರು ಅಲ್ಲಾಡಿಸಿದಾಗ ಎಲ್ಲವೂ ತಿಳಿಗುಲಾಬಿ ಬಣ್ಣಕ್ಕೆ ತಿರುಗುತ್ತಿತ್ತು ಮದ್ದು.
ತುಂಬಿದ ಬಾಟಲಿಗೆ ಮುಚ್ಚಳ ಇದ್ದರೆ ಹಾಕುತ್ತಿದ್ದ....! ಇಲ್ಲದಿದ್ದರೆ ಪೇಪರಿನ ಸುರುಳಿ ಹಾಕಿ ಮತ್ತೆ ಪೇಪರಿನ ಒಂದು ಎಳೆ ತಕ್ಕೊಂಡು ಅದನ್ನು ಸ್ಮನಾಗಿ ಮಡಚಿ ಮೂಲೆ ಕತ್ತರಿಸಿ ಗೋಂದು ಕಾಕಿ ಬಾಟ್ಳಿಗೆ ಅಂಟಿಸಿ ಕೈಗಿತ್ತು" ತಮ್ಮಾ ಇದ್ನಾ ನೀನು ನಿನ್ನ ಅಬ್ಬೆ ಇಬ್ರೂ ಹೊತ್ತಿಗೆ ಒಂದೊಂದು ಗೆರೆ ಕುಡೀರಿ....!!! ಬಾಟ್ಳಿ ಅಲ್ಲಾಡಿಸಿ ಕುಡೀರಿ. ಮತ್ತೆ ಈ ಗುಳಿಗೆಗಳನ್ನು ಹೊತ್ತಿಗೆ ಒಂದೊಂದರಂತೇ ನಿನ್ನ ಅಬ್ಬೆ ತಕ್ಕೊಳ್ಳಲೀ ನೀನು ಅದ್ರಲ್ಲಿ ಅರ್ಧ ತಕ್ಕೊ......!!!! ಔಷಧ ಮುಗಿದ ಮೇಲೆ ಮತ್ತೆ ಬಾ. ಎನ್ನುತ್ತಿದ್ದ. ನಾನು ಅವನಿಗೆ ದುಡ್ಡು ಕೊಟ್ಟು ಔಷಧಿ ತೆಗೆದುಕೊಂಡು ಬರುತ್ತಿದ್ದೆ. ಆಗ ಹೆಚ್ಚೇನೂ ಇರಲಿಲ್ಲ.. ಔಷಧಿಗೂ ದಿನದ ಲೆಕ್ಕ....! ಒಂದು ದಿನದ್ದಾದರೆ ಎರಡು ರೂಪಾಯಿ....!! ಎರಡು ದಿನದ್ದಾದರೆ ಐದು ರೂಪಾಯಿ......!!!!
ಔಷಧಿ ತಂದು ಕುಡಿದು ಬೆಚ್ಚಗೆ ಹೊದ್ದು ಮಲಗಿದರೆ ಜ್ವರ ಕಮ್ಮಿ ಹೇಳಿಯೇ ಲೆಕ್ಕ. ಆದರೂ ಕಡಿಮೆ ಆಗದಿದ್ದರೆ ಮತ್ತೆ ಇದ್ದೇ ಇದೆಯಲ್ಲಾ.. ಗಣಪಜ್ಜನ ಮನೆ . ಆದರೂ ನಾನು ಕೊನೆ ಕೊನೆಗೆ ಈ ಗಣಪಜ್ಜನ ಔಷಧಿಯಿಂದ ಯಾಕೋ ಗುಣವಾಗದೆಂದು ಹೇಳುತ್ತಿದ್ದೆ. ಮತ್ತೆ.....!!!! ಮತ್ತೇನಿಲ್ಲಾ ಅಲ್ಲೇ ಹೋಗಬೇಕು... ಆದರೂ ಗಣಪಜ್ಜನಿಲ್ಲದಿದ್ದಾಗ ಹೋದರೆ ಕಮಲಕ್ಕನೇ ಔಷಧ ಕೊಡುತ್ತಿದ್ದಳು....!!! "ಕಮಲಕ್ಕನ ಔಷಧಿ ಬಹಳ ಸ್ಟ್ರಾಂಗು ಒಳ್ಳೆ ಗುಣಕಾರಿ" ಜನರಾಡಿಕೊಳ್ಳುತ್ತಿದ್ದುದು ನನ್ನ ಅನುಭವಕ್ಕೂ ಬಂತು. ಹಾಗಾಗಿ ಕಮಲಕ್ಕ ಇದ್ದಾರೆಯೆ ಎಂದು ನೋಡಿಕೊಂಡೇ ಹೋಗುತ್ತಿದ್ದೆ...!
ಅಂತೂ ಊರಿನ ಒಬ್ಬೇ ಒಬ್ಬ ವೈದ್ಯರ ಮನೆ ನನಗೆ ತುಂಬಾ ಅಚ್ಚು ಮೆಚ್ಚು. ಯಾರು ಏನೇ ಹೇಳಲೀ... ಅಂದಿನ ಕಾಲಕ್ಕೆ ಉಪಕೃತರಾದವರು ಇಂದಿಗೂ ನೆನೆಯದಿರಲಾರರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ