प्रज्वालितॊ ज्ञानमयप्रदीपः

ಶನಿವಾರ, ಮಾರ್ಚ್ 31, 2018

ಶ್ರೀಮಚ್ಛಂಕರಭಗವತ್ಪಾದ ಚರಿತ್ರ: ಕಾಲಪ್ರಕರಣ


       ಶ್ರೀಮಚ್ಛಂಕರ ಭಗವತ್ಪಾದರು ಕಾಲಾತೀತನಾದ ಶಿವನ ಅವತಾರವೆಂಬುವ ಪ್ರತೀತಿಯ ಕಾರಣಕ್ಕೋ ಏನೋ ಅವರ ಆವಿರ್ಭಾವಕಾಲವನ್ನು ಪ್ರಚಲಿತ ಶಾಂಕರಪೀಠಗಳ ಸಂಪ್ರದಾಯಸ್ಥರು ತಮಗೆ ಬೇಕಾದಂತೆ ಎಲ್ಲೆಲ್ಲೋ ಎಳೆದು ಬಿಸುಟಿದ್ದಾರೆ. ಯಾವುದೋ ಕಾಲದ ಇತಿಹಾಸಪುರುಷರನ್ನು ಇನ್ಯಾವುದೋ ಕಾಲಕ್ಕೆ ದರದರನೆ ಎಳೆತಂದು ಬೇಕುಬೇಕಾದ ಹಾಗೆ ಹುಟ್ಟಿಸುವುದು, ಸಾಯಿಸುವುದು ನಮ್ಮ ಇತಿಹಾಸಕಾರರಿಗೆಲ್ಲ ಕರತಲಾಮಕ. ಅದಕ್ಕೆ ಶಂಕರರೂ ಹೊರತಲ್ಲ. ಶ೦ಕರರ ಕಾಲಮಾನದ ವಿಚಾರದಲ್ಲಿ ವಾದ-ವಿವಾದಗಳು ವಿರಳವಾಗಿ ನಡೆದಿದ್ದರೂ ಅವುಗಳಲ್ಲಿ ಒಮ್ಮತಾಭಿಪ್ರಾಯವಿಲ್ಲದಿರುವುದ೦ತೂ ಸತ್ಯ.  ಲೋಕರೂಢಿಯೂ, ಕೆಲ ಇತಿಹಾಸದ ಪುಸ್ತಕಗಳೂ, ಭೈರಪ್ಪನವರ ’ಸಾರ್ಥ’ವೇ ಮು೦ತಾದ ಕಾದ೦ಬರಿಗಳೂ ಶ೦ಕರರನ್ನು ಕ್ರಿ.ಶ 8ನೇ ಶತಮಾನದಲ್ಲಿರುವ೦ತೆ ಚಿತ್ರಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲ ಐತಿಹಾಸಿಕ ದಾಖಲೆಗಳು, ಆದಿ ಶ೦ಕರರಿ೦ದ ಸ್ಥಾಪಿಸಲ್ಪಟ್ಟ ಕೆಲ ಮಠ, ದೇವಾಲಯಗಳು ಅವರ ಕಾಲವನ್ನು ಕ್ರಿ.ಪೂರ್ವದಷ್ಟು ಹಿ೦ದಕ್ಕೊಯ್ಯುತ್ತವೆ. ಕಾಲದ ನಿಷ್ಕರ್ಷೆಗೆ ಬರುವ ಮೊದಲು ಶಂಕರವಿಜಯಗಳನ್ನೇ ಗಮನಿಸೋಣ.
       ಚತುರಾಮ್ನಾಯಗಳಲ್ಲೊ೦ದಾದ ಶೃ೦ಗೇರಿ ಮಠವನ್ನು ಶ೦ಕರರು ಕ್ರಿ.ಶ. 8ನೇ ಶತಮಾನದಲ್ಲಿ ಸ್ಥಾಪಿಸಿದರೆ೦ಬುದು ಲೋಕರೂಢಿ. ಅವರೂ ಅದೇ ಕಾಲದವರೆಂದಾಯ್ತು. ಶೃಂಗೇರಿ ಮಠದಲ್ಲೇ ಅದಕ್ಕೇನಾದರೂ ದಾಖಲೆ ಸಿಗಬೇಕಾದರೆ ಅವರದ್ದೇ ಗುರುಪರಂಪರೆಗಳ ಪಟ್ಟಿ ನೋಡಬೇಕು. ಮಹಾದೇವ ರಾಜಾರಾಮ ಬೋಡಸ್‌ರ ’ಶಂಕರಾಚಾರ್ಯ ವ ತ್ಯಾಂಚಾ ಸಂಪ್ರದಾಯ’ ಪುಸ್ತಕದಲ್ಲಿ ಶೃಂಗೇರಿ ಸಂಪ್ರದಾಯದ ಗುರುಪರಂಪರೆಯ ನಾಲ್ಕು ಪಟ್ಟಿಗಳನ್ನು ಕೊಟ್ಟಿದ್ದಾರೆ!. ಮೊದಲನೇಯದು 8ನೇ ಜಗದ್ಗುರುಗಳಾದ ನರಸಿಂಹಭಾರತೀ ಸ್ವಾಮಿಗಳ ಮಂತ್ರಾಕ್ಷತೆಯೊಂದಿಗೆ 1879ರಲ್ಲಿ ಸಿದ್ಧಾಂತಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಬರೆದದ್ದು. ಎರಡನೇಯದು ಸೂರ್ಯನಾರಾಯಣರಾಯರು ಬರೆದ ವಿಜಯನಗರ ಇತಿಹಾಸದ್ದು. ಇದರ ಗುರುಪರಂಪರೆಯ ಪಟ್ಟಿ ಮೊದಲನೇಯದ್ದನ್ನೇ ಆಧರಿಸಿದ್ದು. ಮೂರನೇಯದು ಶ್ರೀಸಚ್ಚಿದಾನಂದಶಿವಾಭಿನವನೃಸಿಂಹಭಾರ್ತೀಸ್ವಾಮಿಗಳು ಮದ್ರಾಸಿನ ವಾಣಿವಿಲಾಸ ಪ್ರೆಸ್ಸಿನಲ್ಲಿ ಅಚ್ಚುಹಾಕಿಸಿದ ಕೃತಿ. ಅದು ಮೊದಲೆರಡನ್ನು ಹೋಲುವುದಾದರೂ ಸುರೇಶ್ವರಾಚಾರ್ಯರ ಬದಲು ವಿಶ್ವರೂಪರ ಹೆಸರು ಅಚ್ಚಾಗಿದೆ. ಇವುಗಳ ಪ್ರಕಾರ 14ನೇ ಈಶ್ವರ ಸಂವತ್ಸರದ ವೈಶಾಖ ಶುದ್ಧ ಆರ್ದ್ರಾ ನಕ್ಷತ್ರ ಮಿಥುನಲಗ್ನದಲ್ಲಿ ಆಚಾರ್ಯರ ಅವತಾರವೂ ವಿಕ್ರಮಶಕೆಯ 46ನೇ ಜ್ಯೇಷ್ಠಶುದ್ಧ ದ್ವಾದಶಿಯ ದಿನ ಕೈಲಾಸಗಮನವೆಂದೂ ಬರೆದಿದೆ. ಇದರ ಪ್ರಕಾರವೇ ಕ್ರಿ.ಪೂ 44ರಿಂದ ಕ್ರಿಪೂ 12ರವರೆಗೆ ಆಚಾರ್ಯರ ಕಾಲವಾಯ್ತು. ಇದೇ ಪಟ್ಟಿಯಲ್ಲಿ ಮೊದಲ ಪೀಠಾಧಿಪತಿಗಳಾದ ಸುರೇಶ್ವರಾಚಾರ್ಯರು ಕ್ರಿ.ಪೂ 28ರಿಂದ ಕ್ರಿ.ಶ 773ರವರೆಗೆ ಬರೋಬ್ಬರಿ 8೦೦ ವರ್ಷಗಳು ಪೀಠಾಧಿಪತಿಗಳಾಗಿದ್ದಾರು! ಅವರ ನಂತರ ಎರಡನೇ ಪೀಠಾಧಿಪತಿಗಳಾದ ನಿತ್ಯಬೋಧಘನಾಚಾರ್ಯರು ಪೀಠವೇರಿದ್ದು ಕ್ರಿ.ಶ 773ರಲ್ಲಿ. ಶೃಂಗೇರಿ ಪರಂಪರೆಯ ಪ್ರಕಾರವೇ ಆಚಾರ್ಯರ ಕಾಲ ಕ್ರಿ.ಪೂವೆಂದಾದಮೇಲೆ ಮಠಸ್ಥಾಪನೆ ಕ್ರಿ.ಶ 8ನೇ ಶತಮಾನದಲ್ಲಾಗಲು ಹೇಗೆ ಸಾಧ್ಯ? ಶೃಂಗೇರಿ ಅಂಗೀಕರಿಸಿದ ವಿಕ್ರಮಶಕೆಯು ಮಾಲವ ಶಕೆಯಲ್ಲವೆಂದೂ, ಅದು ಚಾಲುಕ್ಯ ವಿಕ್ರಮಶಕೆಯೆಂದೂ, ಸರ್ವಪ್ರಥಮ ವಿಕ್ರಮನು ಕ್ರಿ.ಶ 670ರಲ್ಲಿ ಸಿಂಹಾಸನಾರೋಹಣಗೈದುದರಿಂದ ಶಂಕರರ ಜನನ ಮತ್ತು ಕೈಲಾಸಗಮನವಾದುದು ಕ್ರಮವಾಗಿ ಕ್ರಿ.ಶ 684 ಹಾಗೂ ಕ್ರಿ.ಶ 716ರಲ್ಲೆಂದು ಇದಕ್ಕೆ ಸಮಾಧಾನವನ್ನು ಲೋಕಮಾನ್ಯ ತಿಲಕರು ನೀಡಿದ್ದಾರೆ.
       ಶಂಕರಾಚಾರ್ಯರು ಕ್ರಿಸ್ತನಿಗಿಂತ ಪೂರ್ವದವರೆಂಬುದು ಸರ್ವವಿದಿತ. ಅದಕ್ಕೆ ಬೇಕಾದಷ್ಟು ಇತಿಹಾಸದ ಪುರಾವೆಗಳಿವೆ. ಈ ಕಷ್ಟದಿಂದ ಪಾರಾಗಲು ಪ್ರಾಯಶಃ ಶೃಂಗೇರಿಯವರು ಸುರೇಶ್ವರಾಚಾರ್ಯರಿಗೆ 8೦೦ ವರ್ಷಗಳನ್ನು ಕೊಟ್ಟು ಅವರ ಸಮಾಧಿ ಕಾಲವನ್ನು ಕ್ರಿ.ಶ 8ನೇ ಶತಮಾನಕ್ಕೆ ಇಳಿಸಿದ್ದಾರೆ. ಶೃಂಗೇರಿ ಮಠವೇ ಹೀಗಾದರೆ ಇನ್ನು ಅದರ ಕಾಲುಮಠವಾದ ಶಂಕರರ ಏಕೈಕ ಅವಿಚ್ಛಿನ್ನ ಪರಂಪರೆಯೆಂದು ಹೇಳಿಕೊಳ್ಳುವ ರಾಮಚಂದ್ರಾಪುರಮಠದ ಕಾಲ ಅದಕ್ಕಿಂತ ಹಿಂದಿನದಂತೂ ಅಲ್ಲ. ಸ್ವರ್ಣವಲ್ಲಿ ಮಠವೂ ಅಷ್ಟೇ. ಶಂಕರರಿಂದ ಕಾಶಿಯಲ್ಲಿ ಸ್ಥಾಪಿತವಾಗಿ ಪ್ರಯಾಗವೇತ್ಯಾದಿ ಜಾಗಗಳಲ್ಲಿ  ಸ್ಥಳಾಂತರಗೊಂಡು ಈಗ ಶಿರಸಿ ಸಮೀಪದ ಸೋಂದೆಯಲ್ಲಿದೆ ಎಂದು ಮಠದ ಇತಿಹಾಸ ಹೇಳುತ್ತದೆ. ಆದರೆ ಇದು ಮೂಲತಃ ಹೊನ್ನಾವರ ತಾಲೂಕಿನ ಚಂದಾವರದ ಹತ್ತಿರದ ಹೊನ್ನೆಹಳ್ಳದಲ್ಲಿ ಚಂದಾವರದ ರಾಮಕ್ಷತ್ರಿಯ ಸಮಾಜದ ತುಂಡರಸ ಚಂದ್ರಸೇನನ ಕಾಲದಲ್ಲಿ ಶೃಂಗೇರಿ ಮಠದವರಿಂದ ಸ್ಥಾಪಿತವಾದ ಕಾಲುಮಠ.  ಗೋಮಾಂತಕರ ದಾಳಿಯ ನಂತರ ಅದು ಅಲ್ಲಿಂದ ಕಡತೋಕೆಗೆ ಹೋಯಿತು. ಮುಂದೆ ಸರ್ವಜ್ಞೇಂದ್ರ ಸರಸ್ವತಿಯವರ ಕಾಲದಲ್ಲಿ ಸೋದೆ ಅರಸರ ಕೋರಿಕೆಯ ಮೇರೆಗೆ ಅಲ್ಲಿಂದ ಸೋದೆಗೆ ಸ್ಥಳಾಂತರವಾಯಿತು. ಹೊನ್ನೆಹಳ್ಳಿ ಸ್ವರ್ಣವಲ್ಲಿಯಾಯಿತು. ಆದ್ದರಿಂದ ಅವೆರಡೂ ಮಠಗಳ ಇತಿಹಾಸವನ್ನು ಶಂಕರರ ಕಾಲಮಾನ ನಿಷ್ಕರ್ಷೆಗೆ ಬಳಸಲು ಬರುವುದಿಲ್ಲ. ಶೃಂಗೇರಿಯ ಪಟ್ಟಿಗಳನ್ನೂ ಬದಿಗಿಟ್ಟು ಶಂಕರವಿಜಯಗಳನ್ನೇ ಗಮನಿಸೋಣ.
ಕಂಚಿಕಾಮಕೋಟಿ ಪೀಠದ ಸಂಪ್ರದಾಯದಂತೆ ಆತ್ಮಬೋಧರು ಉದಾಹರಿಸಿರುವ ಪ್ರಾಚೀನಶಂಕರವಿಜಯದಲ್ಲಿ
ತಿಷ್ಯೇ ಪ್ರಯಾತ್ಯನಲಶೇವಧಿಬಾಣನೇತ್ರೇ
ಯೋ ನನ್ದನೇ ದಿನಮಣಾವುದಗಧ್ವಭಾಜಿ |
ರಾಧೇದಿತೇರುಡುನಿ ನಿರ್ಗತಮಸ್ತಲಗ್ನೆ
ಪ್ಯಾಹೂತವಾನ್ ಶುವಗುರುಃ ಸ ಚ ಶಂಕರೇತಿ ||
ಅನಲ=3, ಸೇವಧಿ=9, ಬಾಣ=5, ನೇತ್ರ=2 . ಕಲಿಪ್ರಾರಂಭವಾದ 2593ನೇ ಸಂವತ್ಸರವಾದ ನಂದನದ ಉತ್ತರಾಯಣ ವೈಶಾಖ ಶುದ್ಧ ಪಂಚಮಿ ಪುನರ್ವಸು ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ಶಿವಗುರುವಿಗೆ ಹುಟ್ಟಿದನು.
ಕಲಿಯುಗ ಪ್ರಾರಂಭವಾದದ್ದು ಕ್ರಿ.ಪೂ 3102ರಲ್ಲೆಂದು ಸಿದ್ಧಪಟ್ಟಿದೆ. ಅ೦ದರೆ ಶ೦ಕರರ ಜನನವಾದದ್ದು ಕ್ರಿ.ಪೂ 3102- ಕ್ರಿ.ಪೂ 2593= ಕ್ರಿ.ಪೂ 509ರಲ್ಲಿ.
ವ್ಯಾಸಾಚಲೀಯದಲ್ಲಿ
ಅಬ್ದೇ ಕಲೇರನಲವರ್ಷಶರಾಕ್ಷಿಸಂಖ್ಯೇ
ಶ್ರೀನಂದನೇ ದಿನಮಣಾವುದಗಧ್ವಭಾಜಿ |
ರಾಧೇಽದಿಪಞ್ಚಮಿತಿಥಾವಸಿತೇತರಾಯಾಮ್
ವಾರೇ ರವೇರದಿತಿಭೇ ಶುಭಯೋಗಯುಕ್ತೇ ||
ಲಗ್ನೇ ಶುಭೇ ಶುಭಯುತೇ ಸುಷುವೇ ಕುಮಾರಂ
ಶ್ರೀಪಾರ್ವತೀವ ಸುಖಿನೀ ಶುಭವೀಕ್ಷಿತೇ ಚ |
ಜಾಯಾ ಸತೀ ಶಿವಗುರೋರ್ನಿಜತುಙ್ಗಸಂಸ್ಥೇ
ಸೂರ್ಯೇ ಕುಜೇ ರವಿಸುತೇ ಚ ಗುರೌ ಚ ಕೇಂದ್ರೇ ||
ಮೊದಲ ಭಾಗವನ್ನು ಗಮನಿಸಿದರೆ ಇದು ಪ್ರಾಚೀನಶಂಕರ ವಿಜಯದಿಂದ ತೆಗೆದುಕೊಂಡಿರಬಹುದಾದ ಸಾಧ್ಯತೆಗಳಿವೆ. ಎರಡನೇ ಶ್ಲೋಕ ಮಾಧವೀಯದಲ್ಲಿಯೂ ಇದೆ. ಯುಧಿಷ್ಟಿರ ಶಕದ 2631ನೇ ವರ್ಷ ನಂದನ ಸಂವತ್ಸರ ವೈಶಾಖ ಶುದ್ಧ ಭಾನುವಾರ ಪುನರ್ವಸು ನಕ್ಷತ್ರ ಅಭಿಜಿನ್ಮುಹೂರ್ತದಲ್ಲಿ ಕರ್ಕಾಟಕ ಲಗ್ನ ರವಿಕುಜಗುರುಶನಿಗಳು ಉಚ್ಛಸ್ಥರಾಗಿ ಕೇಂದ್ರದಲ್ಲಿರಲು ಶುಕ್ರನು ಉಚ್ಛಸ್ಥಾನದಲ್ಲಿದ್ದು ಬುಧನು ರವಿಯೊಡನೆ ಸೇರಿದ ಶುಭಮುಹೂರ್ತದಲ್ಲಿ ಆರ್ಯಾಂಬೆ ಮಗನನ್ನು ಪಡೆದಳು.
ಇದೇ ಗ್ರಂಥದಲ್ಲಿ ಆಚಾರ್ಯರ ದೇಹಾಂತದ ವಿವರಗಳಿವೆ.
ವರ್ಷೇ ಕಲೇಃ ಶರವಿಲೋಚನಶಾಸ್ತ್ರನೇತ್ರೇ
ರಕ್ತಾಕ್ಷಿನಾಮ್ನಿ ವೃಷಶುಕ್ಲಮುಕುನ್ದನಿಥ್ಯಾಮ್ |
ಗಚ್ಛನ್ ಸ ಜಾತು ಸವಿಧೇ ಪರದೇವತಾಯಾಃ
ತ್ಯಕ್ತುಂ ಸಮೃಚ್ಛದಥ ಭೌತಿಕಮಾತ್ಮದೇಹಮ್ ||
-ಕಲಿ 2625ನೇ ರಕ್ತಾಕ್ಷಿ ಸಂವತ್ಸರದ ವೈಶಾಖ ಶುದ್ಧದ್ವಾದಶೀ ದಿನ ಪರದೇವತೆಯ ಸಮೀಪಕ್ಕೆ ಹೋಗಲು ಭೌತಿಕ ದೇಹವನ್ನು ಬಿಡಲಿಚ್ಛಿಸಿದರು. ಕಲಿ 2625ನೇ ವರ್ಷವೆಂದರೆ ಅದು ಕ್ರಿ.ಪೂ 477 ಆಯಿತು.
ಇದಕ್ಕನುಗುಣವಾಗಿ ಚಿತ್ಸುಖರ ಪ್ರಾಚೀನ ಶಂಕರವಿಜಯದ ಆತ್ಮಬೋಧರ ವ್ಯಾಖ್ಯಾನದಲ್ಲಿ
ಕಲ್ಯಬ್ದೈಶ್ಚ ಶರೇಕ್ಷಣಾಧ್ವನಯನೈಃ ಸತ್ಕಾಮಕೋಟಿಪ್ರಥೇ
ಪೀಠೇ ನ್ಯಸ್ಯ ಸುರೇಶ್ವರಂ ಸಮವಿತುಂ ಸರ್ವಜ್ಞಸಂಜ್ಞಂ ಮುನಿಮ್ |
ಕಾಮಾಕ್ಷ್ಯಾಃ ಸವಿಧೇ ಸ ಜಾತು ನಿವಿಶನ್ನುನ್ಮುಕ್ತಲೋಕಸ್ಪೃಹೋ
ದೇಹಂ ಸ್ವಂ ವ್ಯಪಹಾಯ ದೇಹ್ಯಸುಗಮಂ ಧಾಮ ಪ್ರಪೇದೇ ಪರಮ್ ||
ಎಂದಿದೆ.
ಬೃಹಚ್ಛಂಕರ ವಿಜಯವನ್ನು ಗಮನಿಸೋಣ.
ವಹ್ನ್ಯದ್ದ್ವಶಾಸ್ತ್ರನಯನಾಙ್ಕ ಯುಧಿಷ್ಠಿರಾಬ್ಧೇ
ದ್ವಾತ್ರಿಂಶತಂ ಹಿ ಶರದೋ ಧರಣೀಂ ವಿಭೂಷ್ಯ
ಶ್ರೀಶಂಕರೇಂದ್ರಗುರುರಾಟ್ಭ್ರತರಾಜಸೇನಃ
ಸಂ ಶಿಷ್ಯ ಧರ್ಮಮಖಿಲಂ ಶಿವತಾಂ ಪ್ರಪೇದೇ ||
ಯುಧಿಷ್ಟಿರಶಕದ 2663ರಂದು ಮೂವತ್ತೆರಡು ವರ್ಷ ಭೂಮಿಯನ್ನಲಂಕರಿಸಿದ ಮೇಲೆ ರಾಜಸೇನನಿಂದ ಸೇವೆಗೊಂಡ ಶ್ರೀಶಂಕರೇಂದ್ರ ಗುರುರಾಜರು ಶಿವತ್ವವನ್ನು ಹೊಂದಿದರು. ಇದರಲ್ಲಿರುವ ರಾಜಸೇನ ಯಾರೆಂಬುದು ಗೊಂದಲವಾದರೂ ಯುಧಿಷ್ಟಿರಶಕದ 2663ನೇ ವರ್ಷ ಕ್ರಿ.ಪೂ 477ಕ್ಕೆ ಸರಿಯಾಗಿ ಹೊಂದುತ್ತದೆ.
       ದ್ವಾರಕಾಮಠದ ಶಾಸನದಲ್ಲಿ ಯುಧಿಷ್ಟಿರಶಕದ 2631ನೇ ವೈಶಾಖ ಶುದ್ಧ ಪಂಚಮಿಯಂದು ಅವತರಿಸಿ 2663ನೇ ಕಾರ್ತ್ತೀಕ ಹುಣ್ಣಿಮೆಯಂದು ಬ್ರಹ್ಮೀಭೂತರಾದರು ಎಂದು ಇದೆಯಂತೆ. ಅದೂ ಕೂಡ ಕ್ರಿ.ಪೂ 508 ಮತ್ತು ಕ್ರಿ.ಪೂ 477ನ್ನೇ ಸೂಚಿಸುತ್ತದೆ.
ಇನ್ನು ಶಂಕರರ ಜನ್ಮಕಾಲ ವೈಶಾಖ ಶುದ್ಧ ಪಂಚಮಿ ಎನ್ನುವವರಂತೆ ದಶಮಿ ಎನ್ನುವವರೂ ಇದ್ದಾರೆ. ನೀಲಕಂಠಭಟ್ಟನ ಶಂಕರಮಂದಾರಸೌರಭದಲ್ಲಿ
ಸಂವತ್ಸರೇ ವಿಭವನಾಮ್ನಿ ಶುಭೇ ಮುಹೂರ್ತೇ
ರಾಧೇ ಸಿತೇ ಶಿವಗುರೋರ್ಗೃಹಿಣೀ ಧಶಮ್ಯಾಮ್ ||
ವಿಭವ ಸಂವತ್ಸರದ ವೈಶಾಖ ಶುದ್ಧ ದಶಮಿಯ ದಿನ ಶಿವಗುರುವಿನ ಪತ್ನಿ ಶಂಕರನನ್ನು ಹಡೆದಳು(ವಿಭವ ಸಂವತ್ಸರವೆಂದು ಹೇಳಿರುವುದನ್ನು ಆಸಕ್ತರು ಗಮನಿಸಬೇಕು!). ಇದಕ್ಕನುಗುಣವಾಗಿ ಶಂಕರಜಯಂತಿಯನ್ನು ದಶಮಿಯ ದಿನ ಆಚರಿಸುವವರೂ ಇದ್ದಾರೆ. ಎಲ್ಲ ಶಂಕರವಿಜಯಗಳು ಮತ್ತು ಮಠಗಳ ಸಂಪ್ರದಾಯಗಳನ್ನು ಹೊಂದಿಸಿಕೊಂಡು ಹೋಗುವುದಂತೂ ಸಾಧ್ಯವಿಲ್ಲ. ಕ್ರಿ.ಪೂ 5ನೇ ಶತಮಾನದಿಂದ ಹಿಡಿದು ಕ್ರಿ.ಶ 8ನೇ ಶತಮಾನದವರೆಗೆ ತಮಗೆ ತೋಚಿದ ಕಾಲಗಳನ್ನು ಎಲ್ಲರೂ ಬರೆದಿದ್ದಾರೆ. ಹಾಗೆ ಬರೆದವರಲ್ಲಿ ಒಬ್ಬರೂ ಶಂಕರರ ಕಾಲದವರಲ್ಲ. ಬರೆದುದಕ್ಕೆ ಏನು ಆಧಾರವೆಂಬುದು ಸ್ಪಷ್ಟವಿಲ್ಲ. ವೈಶಾಖ ಶುದ್ಧ ಪಂಚಮಿಯನ್ನು ಶಂಕರಜಯಂತಿಯೆಂದು ಆಚರಿಸಲಾಗುತ್ತಿದೆಯಾದರೂ ಅದಕ್ಕೂ ಸಾಧಾರವಿಲ್ಲ. ’ಶಂಕರ’ ಎಂಬ ಶಬ್ದದ ಅಕ್ಷರಗಳ ಅಂಕೆಗಳನ್ನು ಹಿಂದುಮುಂದಾಗಿ ಎಣಿಸಿದರೆ 5,1,2 ಬರುವುದರಿಂದ ವೈಶಾಖ ಶುದ್ಧ ಪಂಚಮಿಯೆಂದು ತರ್ಕಿಸಲಾಯ್ತೇ? ಶಂಕರರೇ ಹೇಳಬೇಕು!
ಇದಲ್ಲದೇ ಜಿನವಿಜಯದಲ್ಲಿ ಶಂಕರರ ಉಲ್ಲೇಖವಿದೆಯಂತೆ( ಈ ಹೆಸರಿನ ಪುಸ್ತಕ ನನಗಂತೂ ಸಿಕ್ಕಿಲ್ಲ)
ಋಷಿರ್ಬಾಣಸ್ತಥಾ ಭೂಮಿರ್ಮರ್ತ್ಯಾಕ್ಷೋ ವಾಮಮೇಳನಾತ್ |
ಏಕತ್ವೇನ ಲಭೇದಙ್ಕೋ ರಕ್ತಾಕ್ಷಸ್ತದ್ಧಿ ವತ್ಸರಃ ||
ರಶಿ=7, ಬಾನ=5, ಭೂಮಿ=1, ಮರ್ತ್ಯಕ್ಷವು=2. ಜೈನ ಕ್ಯಾಲೆ೦ಡರಿನ ಪ್ರಕಾರ ಶ೦ಕರರ ಭೌತಿಕ ಶರೀರದ ಮರಣ 2157ನೇ ಯುಧಿಷ್ಟೀರ ಶಕದ೦ದು ಸ೦ಭವಿಸಿತು. ಜೈನರ ಯುಧಿಷ್ಟಿರ ಶಕೆಗೂ ಹಿ೦ದುಗಳ ಯುಧಿಷ್ಟಿರ ಶಕೆಗೂ ಇರುವ ವ್ಯತ್ಯಾಸ 467 ವರ್ಷಗಳು. ಹಿ೦ದುಗಳ ಯುಧಿಷ್ಟಿರ ಶಕೆಯು ಕಲಿಯುಗದ ಮೊದಲ ವರ್ಷದಿ೦ದ ಪ್ರಾರ೦ಭವಾದರೆ ಜೈನರ ಯುಧಿಷ್ಟಿರ ಶಕವು 468ನೇ ಕಲಿ ವರ್ಷದಿ೦ದ ಪ್ರಾರ೦ಭವಾಗುತ್ತದೆ.
ಅರ್ಥಾತ್ ಶ೦ಕರರ ಮರಣ ಸ೦ಭವಿಸಿದ್ದು 2157+468=2625ನೇ ಕಲಿ ವರ್ಷದಲ್ಲಿ ಅಥವಾ 3102-2625=477 ಕ್ರಿ.ಪೂ.ದಲ್ಲಿ
ನೇಪಾಳವನ್ನು ಕ್ರಿ.ಪೂ 547 ರಿ೦ದ 486ರವರೆಗೆ ಆಳಿದವನು ಸೂರ್ಯವ೦ಶದ 18ನೇ ರಾಜ ವ್ರಶದೇವ ವರ್ಮ. ನೇಪಾಳರಾಜವ೦ಶಾವಳಿಯಾದ ಕಲ್ಹಣನ ರಾಜತರ೦ಗಿಣಿಯಲ್ಲಿ ಉಲ್ಲೇಖಿಸಿದ೦ತೆ ಕ್ರಿ.ಪೂ 487(ಕಲಿ ವರ್ಷ 2614)ರಲ್ಲಿ ದಕ್ಷಿಣದಿ೦ದ ಬ೦ದ ಆದಿ ಶ೦ಕರಾಚಾರ್ಯರು ಬೌದ್ಧರನ್ನು ವಾದದಲ್ಲಿ ಸೋಲಿಸಿ ಬುದ್ಧರ ನ೦ಬಿಕೆಯನ್ನು ನಾಶ ಮಾಡಿದರು.
ಶಂಕರರು ಕ್ರಿ.ಪೂರ್ವ 5ನೇ ಶತಮಾನದವರೆಂದು ಆಧಾರಗಳಿರುವಾಗ 8೦೦ ವರ್ಷಗಳ ಶೃಂಗೇರಿ ಮಠದ ಇತಿಹಾಸ ಮಾತ್ರ ಮಾಯವಾಗಿರುವುದು ಹೇಗೆ?
ಮಹಾನುಭಾವ ಸಂಪ್ರದಾಯದಲ್ಲಿ ದರ್ಶನಪ್ರಕಾಶವೆಂಬ ಗ್ರಂಥವೊಂದಿದೆ. ಅದರಲ್ಲಿರುವ ಒಂದು ಶ್ಲೋಕವನ್ನು ಗಮನಿಸಿ.
ಯುಗ್ಮಪಯೋಧಿರಸಾಮಿತಶಾಕೇ ರೌದ್ರಕವತ್ಸರ ಊರ್ಜಕಮಾಸೇ |
ವಾಸರ ಈಜ್ಯ ಉತಾಚಲ ಮಾನೇ ಕೃಷ್ಣತಿಥೌ ದಿವಸೇ ಶುಭಯೋಗೇ |
ಶಂಕರ ಲೋಕಮಗಾನ್ನಿಜದೇಹಂ ಹೇಮಗಿರೌ ಪ್ರವಿಹಾಯ ಹಠೇನ ||
- ಇಲ್ಲಿ ಶಂಕರರ ಮೃತ್ಯುಕಾಲ 642ನೇ ಶಕೆ(ಕ್ರಿ.ಶ  72೦) ಎಂದಿದೆ. ಆದರೆ ಹಠಯೋಗದಿಂದ ಹೇಮಗಿರಿಯಲ್ಲಿ ದೇಹವನ್ನು ಬಿಟ್ಟರು ಎಂದು ಹೇಳಿರುವುದರಿಂದ ಇದು ಯಾವ ಶಂಕರ ಕುರಿತಾದದ್ದೆಂದು ವಿಮರ್ಶಕರೇ ಊಹಿಸಬೇಕು. ಕಂಚಿಪೀಠದಲ್ಲಿ ಕೃಪಾಶಂಕರ, ಮೂಕ ಶಂಕರ, ಅಭಿನವಶಂಕರ ಎಂಬಿತ್ಯಾದಿ ಹೆಸರಿನ ಹಲವು ಯತಿಗಳು ಆಗಿಹೋಗಿರುವುದರಿಂದ ಅವರ ಚರಿತ್ರೆಗಳು ಆದ್ಯಶಂಕರರೊಡನೆ ಸೇರಿ ಹೋಗಿರಬಹುದೇ?!
ಕೇರಳೀಯ ಶಂಕರವಿಜಯದಲ್ಲಿ ಚೇರಾಮನ್ ಪೆರುಮಾಳನ ಕಾಲದಲ್ಲಿ ಶಂಕರರ ಜನನವಾಯ್ತೆಂದಿದೆ(ಪೆರುಮಾಳನ ಕಥೆಗಾಗಿ ಇಲ್ಲಿ ನೋಡಿ). ಆತ ಕ್ರಿ.ಶ ಏಳನೇ ಶತಮಾನದವನು. ಒಂದೇ ಸರ್ಗದಲ್ಲಿ ಸರ್ವಜ್ಞಪೀಠವನ್ನು ಕಾಶ್ಮೀರದಲ್ಲಿಯೂ ಕಾಂಚಿಯಲ್ಲಿಯೂ ಇತ್ತೆಂದು ಬರೆಯಲ್ಪಟ್ಟಿರುವ ಕೇರಳೀಯವು ಇತಿಹಾಸಕಾರರಿಂದ ತಿರಸ್ಕೃತವಾಗಿರುವುದರಿಂದ ಅದನ್ನು ಆಧಾರಯೋಗ್ಯವೆಂದು ಪರಿಗಣಿಸುವಂತಿಲ್ಲ.
       ಕಂಚಿಮಠ ಸಂಪ್ರದಾಯದ ಪ್ರಕಾರ ಶಂಕರರು ಜನಿಸಿದ್ದು ಕ್ರಿ.ಪೂ 508ರಲ್ಲಿ ಮತ್ತು ಸಿದ್ಧಿ ಹೊಂದಿದ್ದು ಕ್ರಿ.ಪೂ 476ರಲ್ಲಿ. ಕ್ರಿ.ಪೂ 406ರವರೆಗೆ ಸುರೇಶ್ವರಾಚಾರ್ಯರು ಕಂಚಿಯ ಮೊದಲ ಪೀಠಾಧಿಪತಿಗಳಾಗಿದ್ದರು. ಆತ್ಮಬೋಧರು ತಮ್ಮ ಸುಷುಮಾ ಗ್ರಂಥದಲ್ಲಿ ಸುರೇಶ್ವರರು ಅಪರಮಹಂಸರಾಗಿದ್ದರಿಂದ ಅವರ ಬದಲು ನಂತರ ಪೀಠವೇರಿದ್ದ ಸರ್ವಜ್ಞಾತ್ಮರನ್ನು ಮೊದಲ ಪೀಠಾಧಿಪತಿಯೆಂದಿದ್ದಾರೆ. ಅದೇನೇ ಇದ್ದರೂ ಶೃಂಗೇರಿಯಲ್ಲಿ ಮೊದಲ ಪೀಠಾಧಿಪತಿಗಳಾಗಿದ್ದ ಸುರೇಶ್ವರರೇ ಕಂಚಿಯಲ್ಲೂ ಪೀಠವೇರಿದ್ದಾರೆ. ಅದೇ ದ್ವಾರಕಾ ಪೀಠದಿಂದ 1957ರಲ್ಲಿ ಪ್ರಕಾಶಿತವಾದ ಗುರುಪರಂಪರೆಯ ಪಟ್ಟಿಯನ್ನೂ ಬಲದೇವ ಉಪಾಧ್ಯಾಯರ ದ್ವಾರಕಾ ಪರಂಪರೆಯ ಪಟ್ಟಿಯನ್ನೂ ನೋಡಿದರೆ ಅಲ್ಲಿನ ಮೊದಲ ಪೀಠಾಧಿಪತಿಗಳೂ ಸುರೇಶ್ವರಾಚಾರ್ಯರೇ. ಅವರಿಗೆ ಯುಧಿಷ್ಟಿರ ಶಕ 2649ರ ಮಾಘ ಶುದ್ಧ ಸಪ್ತಮಿಯ ದಿನ ಶಾರದಾಪೀಠದ ಅಧ್ಯಕ್ಷರಾಗಿ ಅಭಿಷೇಕವಾಯಿತೆಂದು ಪರಂಪರೆಯಲ್ಲಿದೆ. ಮಹಾದೇವ ರಾಜಾರಾಮ ಬೋಡಸ್‌ರು ಮೊದಲನೇಯ ಆಚಾರ್ಯರು ಹಸ್ತಾಮಲಕರೆನ್ನುತ್ತಾರೆ. ದ್ವಾರಕಾ ಮಠದಲ್ಲಿ ಕ್ರಿ.ಪೂ 477ರಲ್ಲಿ ಸುಧನ್ವ ರಾಜನಿಂದ ಬರೆಸಲ್ಪಟ್ಟ(!!!) ತಾಮ್ರಶಾಸನವೊಂದಿದೆಯಂತೆ. ಸುಧನ್ವ ಎಂಬ ರಾಜ ಕೇರಳ ದೇಶದವನೆಂದು ಕೆಲ ಶಂಕರವಿಜಯಗಳು ಹೇಳಿದರೆ, ಚಿತ್ಸುಖರ ಬೃಹತ್ ಶಂಕರ ವಿಜಯ ಮತ್ತು ಆನಂದಗಿರಿಯ ಪ್ರಾಚೀನ ಶಂಕರವಿಜಯಗಳು ಸುಧನ್ವ ದ್ವಾರಕೆಯನ್ನಾಳಿದ್ದನೆಂದಿವೆ. ಮಹಾಮಹೋಪಾಧ್ಯಾಯ ಜೆ.ಎನ್ ದ್ವಿವೇದಿ ಮತ್ತು ಬೋಡಸ್‌ರ ಶಂಕರರ ಚರಿತ್ರೆಗಳಲ್ಲಿಯೂ ಸುರೇಶ್ವರರನ್ನೇ ದ್ವಾರಕಾ ಮಠದ ಮೊದಲ ಪೀಠಾಧಿಪತಿಗಳನ್ನಾಗಿಸಿದೆ.
        ಮಠಾಮ್ನಾಯಗಳಲ್ಲಿ ದ್ವಾರಕೆ ’ಭದ್ರಕಾಲೀ’ಪೀಠವೆಂದಿದ್ದರೂ ಈ  ಪೀಠಕ್ಕೆ ’ಶಾರದಾ ಪೀಠ’ವೆಂದು ಅವರ ಪರಂಪರೆ ಕರೆದಿರುವುದು ವಿಚಾರಣೀಯ. ಶಾರದಾ ಪ್ರತಿಷ್ಟೆಯನ್ನು ಯುಧಿಷ್ಟಿರ ಶಕ 2648ರಲ್ಲೇ ಮಾಡಲಾಯಿತೆಂದು ದ್ವಾರಕಾ ಮಠದ ಸಂಪ್ರದಾಯ ಹೇಳುತ್ತದೆ. ಆದರೆ ಇಲ್ಲಿ ಭದ್ರಕಾಲಿ ಮತ್ತು ಸಿದ್ಧೇಶ್ವರರಿಗೇ ಹೆಚ್ಚು ಪ್ರಾಶಸ್ತ್ಯ. ಮಠಾಮ್ನಾಯಶಾಸನದಲ್ಲಿ ’ಕಾಲಿಕಾಪೀಠಶಾಸನೇ’ ಎಂದಿದ್ದು ದ್ವಾರಕೆಯ ಮಹಾಶಾಸನದಲ್ಲಿ ಮಾತ್ರ ’ಶಾರದಾಪೀಠಸ್ಕೃತಾಃ’ ಎಂದಾಗಿದೆ. ’ದ್ವಾರಕಾ ಶ್ರೀಶಾರದಾಪೀಠಗುರುಪರಂಪರೆ’ಯಲ್ಲಿ ಯುಧಿಷ್ಟಿರ ಶಕ 2648ರಲ್ಲಿ ಕಾರ್ತ್ತಿಕಮಾಸದ ಕೃಷ್ಣಪಕ್ಷದಂದು ಮಂದನರ ಪತ್ನಿ ಭಾರತಿದೇವಿಯ ಜೊತೆಗಿನ ವಾದದ ನಂತರ ಆಕಾಶಮಾರ್ಗದಿಂದ ತನ್ನ ಲೋಕಕ್ಕೆ ಹೋಗುತ್ತಿದ್ದ ಆಕೆಯನ್ನು ಚಿಂತಾಮಣಿ ಮಂತ್ರದಿಂದ ಆಕರ್ಷಣೆ ಮಾಡಿ ದ್ವಾರಕೆಯಲ್ಲಿ ಶಾರದೆಯಾಗಿ ಸ್ಥಾಪಿಸಿದರು ಎಂದಿದೆ. ಶೃಂಗೇರಿಯದ್ದೂ ಕೂಡ ಇದೇ ಕಥೆ. ಕಂಚಿಯಲ್ಲಿ ಕಾಮಾಕ್ಷಿಗೆ ಹೆಚ್ಚಿನ ಪ್ರಾಶಸ್ತ್ಯವಿದ್ದರೂ ಕಂಚಿಯವರೂ ತಮ್ಮದು ಶಾರದಾ ಪೀಠವೆಂದು ಕರೆದುಕೊಳ್ಳುತ್ತಾರೆ. ಶೃಂಗೇರಿಯವರೂ ಕೂಡ. ಇದರ ಗುಟ್ಟೇನೋ ತಿಳಿದಿಲ್ಲ.
       ದ್ವಾರಕೆ ಮತ್ತು ಕಾಂಚಿ ಇವೆರಡರ ಪರಂಪರೆಯಲ್ಲೂ ಶಂಕರಾಚಾರ್ಯರಿಗೆ ಹೆಚ್ಚುಕಡಿಮೆ ಕ್ರಿ.ಪೂ ೫ನೇ ಶತಮಾನದ ಕಾಲವನ್ನೇ ಕೊಟ್ಟಿದ್ದಾರೆ. ಇವೆರಡರಲ್ಲೂ ಮೊದಮೊದಲ ಗುರುಗಳಿಗೆ ಹೆಚ್ಚಿನ ಕಾಲಾವಧಿಯನ್ನೂ ಇತ್ತೀಚಿನವರಿಗೆ ಸ್ವಲ್ಪ ಕಡಿಮೆ ಒಪ್ಪುವ ಕಾಲವನ್ನೂ ಬರೆದಿರುತ್ತಾರೆ. ಕಂಚಿಯಲ್ಲಿ 67 ಪೀಠಾಧ್ಯಕ್ಷರ ಪಟ್ಟಿಯಿದ್ದರೆ ದ್ವಾರಕೆಯಲ್ಲಿ ಸುಮಾರು 78 ಜನರ ಹೆಸರಿದೆ. ಇವೆರಡೂ ಮಠಗಳ ಪೀಠಾಧಿಪತಿಗಳ ಸಂಖ್ಯೆಯಲ್ಲಿ ಸಾಮ್ಯವಿದ್ದರೂ ಶೃಂಗೇರಿಯ ಪಟ್ಟಿಯಲ್ಲಿ 36 ಜನರ ಹೆಸರು ಮಾತ್ರವಿದೆ. ಮಾತ್ರವಲ್ಲ ಶೃಂಗೇರಿ ಮಠದವರು ಒಪ್ಪುವಂತೆ ಶಂಕರರ ಕಾಲಮಾನ ಕ್ರಿ.ಶ 8ನೇ ಶತಮಾನ. ಶೃಂಗೇರಿ, ರಾಮಚಂದ್ರಾಪುರ, ಕಂಚಿ ಮತ್ತು ದ್ವಾರಕೆ ಈ ನಾಲ್ಕೂ ಪೀಠಗಳೂ ತಮ್ಮ ತಮ್ಮ ಮೊದಲ ಪೀಠಾಧಿಪತಿಗಳನ್ನಾಗಿ ಸುರೇಶ್ವರಾಚಾರ್ಯರನ್ನೇ ಹೆಸರಿಸಿದೆ. ಮಂಡನ ಮಿಶ್ರರು ಸಂನ್ಯಾಸ ಸ್ವೀಕಾರದ ನಂತರ ಸುರೇಶ್ವರರೆಂದು ಹೆಸರಾದರು ಎಂಬುದು ಲೋಕವಿದಿತ. ಆದರೆ ಶೃಂಗೇರಿಪೀಠದ ಅನುಜ್ಞೆಯಂತೆ ರಚಿತವಾದ ಗುರುವಂಶಕಾವ್ಯದಲ್ಲಿ ಮಂಡನಸುರೇಶ್ವರಿಬ್ಬರನ್ನೂ ಬೇರೆಬೇರೆ ವ್ಯಕ್ತಿಗಳಾಗಿ ಪರಾಮರ್ಶಿಸಲಾಗಿದೆ.
ಈ ಒಗಟುಗಳನ್ನು ಒಡೆಯುವುದು ಹೇಗೆಂದು ಸಾಕ್ಷಾತ್ ಶಂಕರರೇ ಬಲ್ಲರು!!!!!!!

ಶ್ರೀಮಚ್ಛಂಕರಭಗವತ್ಪಾದಚರಿತ್ರ: ಶಾರದಾ ಪೀಠ ಪ್ರಕರಣ

   

    ಶಿವನು ಆಚಾರ್ಯ ಶಂಕರರಿಗೆ ಕಾಶಿಯಲ್ಲಿ ಚಂಡಾಲನ ವೇಷದಲ್ಲಿ ದರ್ಶನವಿತ್ತ ಕಥೆ ಹೆಚ್ಚಿನೆಲ್ಲರೂ ಕೇಳಿದ್ದೇ. ಶಂಕರರ ದಾರಿಗೆ ಚಂಡಾಲನೊಬ್ಬ ಅಡ್ಡಬಂದ. ಅಪಸರ, ಆಚೆ ಹೋಗು ಎಂದರು ಶಂಕರರು. ಅಪಸರತು ಕಃ? ದೇಹಃ ಅಹೋ ಆತ್ಮಾ? ಕಸ್ತಾವದಪಸರತು? ದೂರ ಹೋಗಬೇಕಾದುದು ಒಂದು ಅನ್ನಮಯ ದೇಹದಿಂದ ಇನ್ನೊಂದು ಅನ್ನಮಯ ದೇಹವೋ ಅಥವಾ ಕೇವಲ ಸಾಕ್ಷಿಯಾದ ಒಂದು ಆತ್ಮದಿಂದ ಇನ್ನೊಂದು ಆತ್ಮವೋ? ಎಂದು ಕೇಳಿದ ಚಂಡಾಲ. ಇದು ಮಾಧವೀಯ ಶಂಕರ ವಿಜಯದಲ್ಲಿ ಬರುವ ಸಂಗತಿ. ಶಂಕರಾಚಾರ್ಯರದ್ದು ಎನ್ನುವ ’ಮನೀಷಾ ಪಂಚಕ’ದಲ್ಲೂ ಸರಿಸುಮಾರು ಇಂಥದೇ ಅವತರಣಿಕೆಯಿದೆ('ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ'). ಇದರ ಪ್ರಕಾರ ಚಂಡಾಲನ ಮಾತಿಗೆ ಜ್ಞಾನೋದಯಗೊಂಡ ಆಚಾರ್ಯರು ಆತನನ್ನು ಗುರುವೆಂದು ಒಪ್ಪಿ ನಮಸ್ಕರಿಸಿದರು. ಆಗ ಚಂಡಾಲನ ಜಾಗದಲ್ಲಿ ಸಾಕ್ಷಾತ್ ಶಿವನೇ ಪ್ರತ್ಯಕ್ಷನಾದ. ಆಚಾರ್ಯರು ಭಕ್ತಿಯಿಂದ ಶಿವನನ್ನು ಸ್ತುತಿಸಿದರು. ಶಿವನು ಪ್ರಸನ್ನನಾಗಿ ಬಾದರಾಯಣರು ಬ್ರಹ್ಮಸೂತ್ರಗಳನ್ನು ರಚಿಸಿ ದುರ್ಮತಗಳನ್ನು ಖಂಡಿಸಿದಂತೆ ನೀನು ವೇದಗಳು, ಬ್ರಹ್ಮಸೂತ್ರಾದಿಗಳಿಗೆ ಭಾಷ್ಯವನ್ನು ರಚಿಸಿ, ಕುತ್ಸಿತ ತತ್ತ್ವಗಳನ್ನು ಪ್ರಚಾರ ಮಾಡುತ್ತಿರುವ ಭಾಸ್ಕರ, ನೀಲಕಂಠ, ಅಭಿನವಗುಪ್ತ, ಮಂಡನರನ್ನು ಜಯಿಸಿ, ಅದ್ವೈತ ತತ್ತ್ವವನ್ನು ಖ್ಯಾತಿಗೊಳಿಸಿ ಜನರ ಅಜ್ಞಾನವನ್ನು ತೊಲಗಿಸು ಎಂದು ಆಶೀರ್ವದಿಸಿದ. ಬೇರೆ ಶಂಕರವಿಜಯಗಳಲ್ಲಿ ಈ ಕಥೆಯಿಲ್ಲ. ಭಾಸ್ಕರಾದಿಗಳು ಐತಿಹಾಸಿಕವಾಗಿ ಆಚಾರ್ಯರಿಗಿಂತ ಈಚಿನವರೆಂದು ಮಾಧವೀಯದ ಕವಿಗೆ ಗೊತ್ತಿಲ್ಲವೇನೋ! ಚಂಡಾಲನನ್ನೂ ಗುರುವೆಂದು ಒಪ್ಪಿಕೊಂಡ  ಆಚಾರ್ಯರು ಪರಮ ಸೆಕ್ಯುಲರ್ ಎಂದು ಪ್ರಚುರಪಡಿಸಲೋ ಈ ಕಥೆ ಹುಟ್ಟಿದ್ದೋ ಅಥವಾ ಆಚಾರ್ಯರು ಚಂಡಾಲನನ್ನು ಗುರು ಎಂದರೆ ಅವರಿಗೇ ಅವಮಾನ ಎಂಬ ಭ್ರಾಂತಿಯಿಂದ ಆ ಚಂಡಾಲ ಶಿವನೇ ಎಂದು ಈ ಕಥೆ ಹುಟ್ಟಿತೋ ನಾಕಾಣೆ. ಅದೇನೇ ಇರಲಿ. ತತ್ತ್ವಜ್ಞಾನಿಯೊಬ್ಬ ಜನ್ಮದಿಂದ ಯಾವ ವರ್ಣದವನಾದರೂ ಸದ್ಗುರುವಿನಂತೆ ಗೌರವಕ್ಕೆ ಅರ್ಹನೆಂಬ ಆಸ್ತಿಕ ಅದ್ವೈತಿಗಳ ನಂಬಿಕೆಗೊಂದು ನಮಸ್ಕಾರ.
       ಚಿದ್ವಿಲಾಸೀಯದಂತೆ ಆಚಾರ್ಯರು ಕಾಶಿವಿಶ್ವೇಶನನ್ನು ಪೂಜಿಸಿ ’ಅದ್ವೈತವು ಸತ್ಯವೋ, ದ್ವೈತವು ಸತ್ಯವೋ ಎಂಬ ಸಂಶಯವನ್ನು ತೊಲಗಿಸು’ ಎಂದು ಬೇಡಿಕೊಂಡಾಗ ಲಿಂಗದಿಂದ ಪ್ರತ್ಯಕ್ಷನಾದ ಶಿವನು ಅದ್ವೈತವೇ ಶುದ್ಧಸತ್ಯವೆಂದು ಮೂರು ಬಾರಿ ಕೈಯೆತ್ತಿ ಸಾರಿ, ವೇದಾದಿಗಳಿಗೆ ಅದ್ವೈತಪರ ಭಾಷ್ಯವನ್ನು ಬರೆಯುವಂತೆ ಹೇಳಿದನಂತೆ. ಶಂಕರರು ಸೂತ್ರಭಾಷ್ಯವನ್ನು ರಚಿಸಿದ್ದು ಅವರ ಹನ್ನೆರಡನೇ ವಯಸ್ಸಿನಲ್ಲಿ ಎನ್ನಲಾಗುತ್ತದೆ. ಆಮೇಲೆ ಭಗವದ್ಗೀತೆ ಹಾಗೂ ವೇದಾಂತಗಳಿಗೆ ಭಾಷ್ಯವನ್ನೂ ರಚಿಸಿದರು. ಈ ಭಾಷ್ಯಗಳಿಗೆ ಆಕಾಲದ ಸುಪ್ರಸಿದ್ಧ ವಿದ್ವಾಂಸರಾದ ಕುಮಾರಿಲಭಟ್ಟರಿಂದ ವಾರ್ತಿಕೆಯನ್ನು ಬರೆಯಿಸಬೇಕೆಂದು ಶಂಕರರಿಗೆ ಅಭಿಲಾಷೆಯುಂಟಾಯಿತು. ಭರತಖಂಡದಲ್ಲೆಲ್ಲ ಅವೈದಿಕರು ತಲ್ಲಣಗೊಳ್ಳುವ ಹೆಸರದು. ಕುಮಾರಿಲ ಭಟ್ಟರು ವಾದಕ್ಕೆ ಕರೆದರೆಂದರೆ ಮಹಾಮಹಾ ಬೌದ್ಧ ವಿದ್ವಾಂಸರ ಬಾಯಿಪಸೆ ಒಣಗಿಹೋಗುತ್ತಿತ್ತು. ಆ ಪಾಖಂಡಿಯ ಜೊತೆ ವಾದಕ್ಕೆ ಕೂರುವುದು ತಮ್ಮ ಧರ್ಮಕ್ಕೆ ಮಾಡುವ ಅವಮಾನವೆಂದು ಹೆಚ್ಚಿನವರೆಲ್ಲ ಭಟ್ಟರೆದುರು ಕೂರುವುದನ್ನು ತಪ್ಪಿಸಿಕೊಳ್ಳುತ್ತಿದ್ದರು. ಮಾಧ್ಯಮಿಕರ ನಿರಾಲಂಬವಾದವನ್ನೂ, ಬೌದ್ಧರ ಶೂನ್ಯವಾದವನ್ನೂ ಖಂಡಿಸಿ ವೇದಪ್ರಾಮಣ್ಯವನ್ನು ಸಿದ್ಧಪಡಿಸಿದ ಮಹಾಪುರುಷರಿವರು. ’ವ್ಯವಹಾರೇ ಭಾಟ್ಟನಯಃ’ ಎಂದು ವಿರೋಧಿಗಳಾದ ಅದ್ವೈತಿಗಳೂ ಇವರ ವಾದಕ್ಕೆ ತಲೆದೂಗಿದ್ದರು. ಋಗ್ವೇದಕ್ಕೆ ಭಾಷ್ಯ ಬರೆದ ಸ್ಕಂದಸ್ವಾಮಿಗೂ, ಶತಪಥ ಬ್ರಾಹ್ಮಣದ ಮೇಲೆ ಭಾಷ್ಯ ಬರೆದ ಹರಿಸ್ವಾಮಿಗೂ, ನಿರುಕ್ತದ ಮೇಲೆ ಭಾಷ್ಯವನ್ನು ಬರೆದ ಮಹೇಶ್ವರಾಚಾರ್ಯನಿಗೂ ಕುಮಾರಿಲರ ಅಭಿಪ್ರಾಯಗಳೇ ಆಧಾರ. ಶ್ಲೋಕವಾರ್ತಿಕ, ತಂತ್ರವಾರ್ತಿಕ, ಟುಪ್‍ಟೀಕಾಗಳ ಮೂಲಕ ಶಬರಸ್ವಾಮಿಗಳ ಭಾಷ್ಯಕ್ಕೆ ವಾರ್ತಿಕೆಯನ್ನು ಬರೆದು ಪೂರ್ವಮೀಮಾಂಸಾ ದರ್ಶನವನ್ನು ಜಗದ್ವಿಖ್ಯಾತಗೊಳಿಸಿದ ಕೀರ್ತಿ ಕುಮಾರಿಲರದ್ದು. ಅದ್ವೈತಿಗಳು ಬ್ರಹ್ಮಸತ್ಯವೆಂದರೆ ಮೀಮಾಂಸಕರು ದೇವರ ಬಗ್ಗೆಲ್ಲ ತಲೆಕೆಡಿಸಿಕೊಳ್ಳುವವರಲ್ಲ. ಅವರಿಗೆ ದೇವರಿರಲೀ, ಇಲ್ಲದಿರಲೀ ಎರಡೂ ಒಂದೇ. ಆದರೆ ವೇದಗಳು ಮಾತ್ರ ಸ್ವತಃ ಪ್ರಮಾಣವೆಂದು ಮೀಮಾಂಸಕರ ಅಭಿಮತ. ವೈದಿಕ ದರ್ಶನದ ಮಜವೇ ಅದು. ಷಡ್ದರ್ಶನಗಳಲ್ಲಿ ನ್ಯಾಯ ಮತ್ತು ವೈಶೇಷಿಕ ದರ್ಶನಗಳು ಮೂಲವಾಗಿ ನಿರೀಶ್ವರ ದರ್ಶನಗಳು. ಸಾಂಖ್ಯರೂ ದೇವರನ್ನು ಒಪ್ಪುವುದಿಲ್ಲ. ಯೌಗಿಕರೂ ಸಾಂಖ್ಯರಂತೆಯೇ. ಯೋಗ ಸಾಂಖ್ಯಗಳೆರಡೂ ಮುಂದೆ ಒಂದಾಗಿ ಕಲೆತುಹೋದವು. ಮೀಮಾಂಸಕರು ದೇವರಿಗೆ ತುಂಬ ಸೀಮಿತ ಅಧಿಕಾರವನ್ನು ನೀಡುತ್ತಾರೆ. ಹಾಗಿದ್ದರೂ ಇವೆಲ್ಲ ಅಪ್ಪಟ ಆಸ್ತಿಕ ವೈದಿಕ ದರ್ಶನಗಳು(ವೇದಗಳನ್ನು ಒಪ್ಪಿಕೊಳ್ಳದಿದ್ದವರನ್ನು ನಾಸ್ತಿಕರೆಂದು ಕರೆದರೇ ವಿನಹ ದೇವರನ್ನು ಒಪ್ಪಿಕೊಳ್ಳದಿದ್ದವರನ್ನಲ್ಲ ಎಂಬುದನ್ನು ಗಮನಿಸಬೇಕು). ಪೂರ್ಣಪ್ರಮಾಣದಲ್ಲಿ ದೇವರನ್ನೊಪ್ಪುವವರು ವೈದಿಕ ದರ್ಶನದ ಆರನೇ ಶಾಖೆಯಾದ ವೇದಾಂತಿಗಳೇ. ಪೂರ್ವ ಮೀಮಾಂಸದ ಪದ್ಧತಿಯನ್ನು ಅಳವಡಿಸಿಕೊಂಡು ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಮತ್ತು ಗೀತೆಯಲ್ಲಿರುವ ಸತ್ಯಗಳನ್ನು ಸಮನ್ವಯಗೊಳಿಸಲು ಪ್ರಯತ್ನಿಸಿದ್ದರಿಂದ ವೇಂದಾತ ದರ್ಶನಕ್ಕೆ ಉತ್ತರ ಮೀಮಾಂಸೆಯೆಂಬ ಹೆಸರೂ ಇದೆ. ನಮ್ಮ ಈಗಿನ ದೇವರುಗಳೆಲ್ಲ ವೇದಾಂತದ ದ್ವೈತಾದ್ವೈತ, ವಿಶಿಷ್ಟಾದ್ವೈತ, ಅಚಿಂತ್ಯ ಅಬೇಧವೇತ್ಯಾದಿ ಶಾಖೋಪಶಾಖೆಗಳಲ್ಲಿ ಸೃಷ್ಟಿಯಾದವೇ. ಅದು ಬೇರೆಯೇ ವಿಚಾರ ಬಿಡಿ. ಬೌದ್ಧಮತದ ಒಳರಹಸ್ಯವನ್ನೆಲ್ಲ ತಿಳಿಯಲು ನಾಲಂದದ ಮುಖ್ಯಸ್ಥ ಧರ್ಮಪಾಲಯಲ್ಲಿ ಶಿಷ್ಯನಾಗಿ ಕುಮಾರಿಲರು ಸೇರಿಕೊಂಡರು. ವೈದಿಕ ಮತವನ್ನು ಖಂಡಿಸಿ ಗುರುಗಳು ಪಾಠಮಾಡಿದಾಗಲೆಲ್ಲ ಕುಮಾರಿಲರ ಕಣ್ಣಂಚು ಒದ್ದೆಯಾಗುತ್ತಿತ್ತು. ಸುತ್ತಲಿದ್ದ ಸಹಪಾಠಿಗಳು, ಗುರುಗಳು ಇದನ್ನು ಗಮನಿಸಿದರು. ಪ್ರಚ್ಛನ್ನ ಬೌದ್ಧನ ವೇಷದಲ್ಲಿ ಸೇರಿಕೊಂಡವನ ನಿಜರೂಪ ತಿಳಿಯಲು ಅವರಿಗೆ ತುಂಬ ಹೊತ್ತೇನೂ ಬೇಕಾಗಲಿಲ್ಲ. ಆದರೆ ಹಾಗೆ ಬಂದವ ಕುಮಾರಿಲಭಟ್ಟರೆಂಬುದು ಗೊತ್ತಾದಾಗ ಮಾತ್ರ ನಾಲಂದದ ಬೌದ್ಧ ಭಿಕ್ಕುಗಳಿಗೆ ಕಾಲಡಿಯ ನೆಲ ಬಿರಿದ ಅನುಭವ. ಎದುರಿಗಿರುವ ಆಸಾಮಿ ಅಂಥಿಂಥವನಲ್ಲ. ವೈದಿಕ ಧರ್ಮದ ವಿರೋದಿಗಳೇ ಪ್ರಬಲರಾಗಿದ್ದ ಕಾಲದಲ್ಲಿ ಬೌದ್ಧಮತವನ್ನು ಖಂಡತುಂಡವಾಗಿ ಖಂಡಿಸಿ ಚೆಂಡಾಡಿ ವೈದಿಕ ಧರ್ಮದ ಪಕ್ಷವನ್ನು ಹಿಡಿದು ಅದನ್ನು ನಾಡಿನಾದ್ಯಂತ ಪ್ರಚಾರ ಮಾಡಿದ ಮಹಾಮೀಮಾಂಸಕ. ಆದರೆ ಒಬ್ಬನೇ ಸಿಕ್ಕಿದಾಗ ಬಿಡುತ್ತಾರೆಯೇ? ಸಮಯ ಸಾಧಿಸಿ ತಲೆಗೊಂದರಂತೆ ಏಟು ಹಾಕಿ ಬೆಟ್ಟದ ತುದಿಯಿಂದ ಕುಮಾರಿಲರನ್ನು ಕೆಳಗೆ ತಳ್ಳಿದರು. ’ವೇದಗಳು ಪ್ರಮಾಣವಾದರೆ ನನಗೆ ಯಾವ ಅಪಾಯವೂ ಆಗದಿರಲಿ’ ಎಂದು ಭಟ್ಟರು ಕೂಗಿಕೊಂಡರಂತೆ. ಬೆಟ್ಟದಿಂದ ಕಂದಕಕ್ಕೆ ಬಿದ್ದರೂ ಕುಮಾರಿಲರಿಗೆ ಏನೂ ಆಗಲಿಲ್ಲ. ಆದರೆ ಸಣ್ಣ ಕಲ್ಲೊಂದು ತಾಗಿ ಕಣ್ಣಿಗೆ ಗಾಯವಾಯಿತಂತೆ. ಮೀಮಾಂಸಕ ಮತದಲ್ಲಿ ವೇದಗಳು ಸ್ವತಃ ಪ್ರಮಾಣವಾದವು. ಅಂಥದ್ದರಲ್ಲಿ ’ಪ್ರಮಾಣವಾದರೆ’ ಎಂಬ ಸಂಶಯವನ್ನು ಸೂಚಿಸಿದ್ದರಿಂದಲೂ ಪ್ರಚ್ಛನ್ನವೇಷದಲ್ಲಿ ಶಾಸ್ತ್ರಶ್ರವಣ ಮಾಡಿದ್ದರಿಂದಲೂ ಒಂದು ಕಣ್ಣಿಗೆ ಗಾಯವಾಯಿತೆಂದು ಕಥೆ. ವೇದ ಮಹಾತ್ಮ್ಯವನ್ನರಿಯದೇ ವೇಷಾಂತರಿಯಾಗಿ ವಿರೋಧಿಯ ರಹಸ್ಯವನ್ನರಿತು ಸೋಲಿಸುವ ಲೌಕಿಕ ಕುತಂತ್ರವನ್ನು ಮಾಡಿದ್ದರಿಂದ, ಶಿಷ್ಯನೆಂದು ನಂಬಿದ ಗುರುವಿಗೆ ವಂಚನೆ ಮಾಡುವಂಥದ ವೇದವಿರೋಧಿ ಕರ್ಮದಲ್ಲಿ ತೊಡಗಿದ್ದರಿಂದ ಕುಮಾರಿಲರು ದೇಹತ್ಯಾಗಕ್ಕೆ ನಿರ್ಧರಿಸಿದರು.
       ಆ ಕಾಲದಲ್ಲಿ ವೈದಿಕರೂ ಬೌದ್ಧರೂ ಒಬ್ಬರ ಶಾಸ್ತ್ರವನ್ನು ಇನ್ನೊಬ್ಬರು ಕಲಿತು ಪರಸ್ಪರ ಖಂಡನೆ ಮಂಡನೆಗಳನ್ನು ಮಾಡುತ್ತಿದ್ದರೆಂಬುದು ಕುಮಾರಿಲರ ಕಥೆಯಿಂದ ಸ್ಪಷ್ಟ. ಆದರೆ ಕುಮಾರಿಲರನ್ನು ಗುಡ್ಡದ ತುದಿಯಿಂದ ತಳ್ಳಿದ, ಪ್ರಾಯಶ್ಚಿತ್ತಕ್ಕೆಣಿಸಿದ ಕಥೆಗಳು ಒಂದೊಂದು ಶಂಕರವಿಜಯದಲ್ಲಿ ಒಂದೊಂದು ತೆರನಾಗಿದೆ. ಬ್ರಾಹ್ಮಣನೆಂದು ತಿಳಿದು ಬೌದ್ಧರು ಕುಮಾರಿಲರನ್ನು ಹೊರಹಾಕಿದಾಗ ಅವರನ್ನೆಲ್ಲ ವಾದದಲ್ಲಿ ಜಯಿಸಿ ಸುಧನ್ವ ರಾಜನ ಸಹಾಯದಿಂದ ಅವರ ತಲೆಕಡಿಸಿದರೆನ್ನುತ್ತದೆ ಚಿದ್ವಿಲಾಸೀಯ. ಅನಂತಾನಂದಗಿರೀಯದ ಒಂದು ಕಥೆಯ ಪ್ರಕಾರ ರಾಜನು ಗಡಿಗೆಯಲ್ಲಿ ಸರ್ಪವನ್ನಿಟ್ಟು ಇದೇನೆಂಬ ಪ್ರಶ್ನೆ ಹಾಕಿದನಂತೆ. ಬೌದ್ಧ ವಿದ್ವಾಂಸರು ’ಇದರಲ್ಲಿ ಹಾವಿದೆ’ ಎಂದರು. ಕುಮಾರಿಲರು ’ಅದರಲ್ಲಿ ಶೇಷಶಾಯಿಯಾದ ವಿಷ್ಣುವಿದ್ದಾನೆ’ ಎಂದರು. ರಾಜನು ಗಡಿಗೆಯನ್ನು ತೆಗೆದು ನೋಡಲಾಗಿ ಸರ್ಪವು ವಿಷ್ಣುವಿನ ವಿಗ್ರಹವಾಗಿ ಬದಲಾಗಿತ್ತು, ರಾಜ ಕುಮಾರಿಲರ ಶಿಷ್ಯನಾಗಿ ಬೌದ್ಧರ ತಲೆಕಡಿಸಿ ಕಾಳ್ಗಿಚ್ಚಿಗಿಟ್ಟ. ಬೆಟ್ಟದಿಂದ ಬಿದ್ದರೂ ಎದ್ದು ಬಂದ ಪವಾಡ ಬೇರೆ. ಬುದ್ಧನ ಪವಾಡಗಳನ್ನು ಶ್ಲೋಕವಾರ್ತಿಕದ ಚೋದನಾಸೂತ್ರದಲ್ಲಿ ಹಾಸ್ಯಮಾಡಿದ ಭಟ್ಟರು ಇಂಥ ಅದ್ಭುತದರ್ಶನಗಳಿಗೆಲ್ಲ ಬೆಲೆಕೊಡುತ್ತಾರೆಂಬುದಕ್ಕೆ ಯಾವ ಆಧಾರವೂ ಇಲ್ಲ. ಇದೆಲ್ಲ ಶಂಕರವಿಜಯಕಾರರ ಕಲ್ಪನಾ ಸಾಮ್ರಾಜ್ಯ ಮಾತ್ರ.
ದ್ವಾರಕಾಮಠದಲ್ಲಿರುವ ಕುಮಾರಿಲ ಶಂಕರ ಸಮಾಗಮದ ಉಬ್ಬುಶಿಲ್ಪ
       ಅದೇನೇ ಆದರೂ ಕುಮಾರಿಲರು ತುಷಾಗ್ನಿ ಪ್ರವೇಶ ಮಾಡಿದ್ದೂ ಹಾಗೂ ಆ ಸಮಯದಲ್ಲಿ ಅವರನ್ನು ಶಂಕರರು ಭೇಟಿಯಾದ ಬಗ್ಗೆ ಎಲ್ಲ ಶಂಕರ ವಿಜಯಗಳಲ್ಲೂ ಸಹಮತವಿದೆ. ವ್ಯಾಸಾಚಲೀಯದ ಪ್ರಕಾರ ಆಚಾರ್ಯರು ತಮ್ಮ ಸೂತ್ರಗಳಿಗೆ ವಾರ್ತಿಕೆಯನ್ನು ಬರೆಸಲು ಕುಮಾರಿಲರನ್ನು ಹುಡುಕಿಕೊಂಡು ಪ್ರಯಾಗಕ್ಕೆ ಬಂದಾಗ ಹೊಟ್ಟಿನ ಮಧ್ಯೆ ಬೇಯುತ್ತಿದ್ದ ಭಟ್ಟಪಾದರನ್ನು ಕಂಡರು. ಅನಂತಾನಂದಗಿರೀಯ, ಚಿದ್ವಿಲಾಸೀಯ ಮತ್ತು ಆನಂದಗಿರೀಯದಂತೆ ಆಚಾರ್ಯರು ಕಾಶಿಯಲ್ಲಿದ್ದಾಗ ಕುಮಾರಿಲರ ಮಹಿಮೆಯನ್ನು ತಿಳಿದು ಅವರನ್ನು ಹುಡುಕಿಕೊಂಡು ದಕ್ಷಿಣದ ರುದ್ಧಪುರಿಗೆ ಬಂದರು. ಈ ರುದ್ದಪುರಿ ಈಗಿನ ಆಂಧ್ರದ ಅನಂತಪುರ ಜಿಲ್ಲೆಯ ರೊದ್ದಂ ಆಗಿರಬೇಕು. ಕುಮಾರಿಲರ ತಂತ್ರವಾರ್ತಿಕದಲ್ಲಿ ಬರುವ ದ್ರಾವಿಡಪದಗಳ ಹೇರಳ ಪ್ರಯೋಗವೂ ಅವರನ್ನು ದಾಕ್ಷಿಣಾತ್ಯನೆಂದೇ ಸೂಚಿಸುತ್ತದೆ. ಶಂಕರರು ಕುಮಾರಿಲರನ್ನು ಭೇಟಿಯಾದದ್ದೂ ಕೂಡ ಇಲ್ಲಿಯೇ .
       ತುಷಾಗ್ನಿಯ ಮಧ್ಯದಲ್ಲಿದ್ದಾಗೆ ಆಚಾರ್ಯರನ್ನು ಭೇಟಿಯಾದ ಭಟ್ಟರು ಮಗಧದಲ್ಲಿ ಮಹಾವೈದಿಕನಾದ ವಿಶ್ವರೂಪನೆಂಬ ತಮ್ಮೊಬ್ಬ ಶಿಷ್ಯನನ್ನು ಜಯಿಸುವಂತೆ ಶಂಕರರಿಗೆ ಸೂಚಿಸುತ್ತಾರೆ(’ಸ ವಿಶ್ವರೂಪಃ ಪ್ರಥಿತೋ ಮಹೀತಲೇ’). ಮಾಧವೀಯದಲ್ಲೂ ಸರಿಸುಮಾರು ಇದೇ ವೃತ್ತಾಂತವಿದೆ. ’ಶಬರಭಾಷ್ಯಕ್ಕೆ ವಾರ್ತಿಕವನ್ನು ಬರೆದಂತೆ ತಮ್ಮ ಭಾಷ್ಯಕ್ಕೂ ಬರೆಯುವ ಭಾಗ್ಯವಿಲ್ಲದೇ ಹೋಯಿತು. ಪ್ರಾಯಶ್ಚಿತ್ತವನ್ನು ಕೈಗೊಳ್ಳದೇ ಇದ್ದಿದ್ದರೆ ತಮ್ಮ ಮೊದಲನೇಯ ಅಧ್ಯಾಸಭಾಷ್ಯಕ್ಕೇ ಎಂಟು ಸಾವಿರ ವಾರ್ತಿಕೆಗಳನ್ನು ಬರೆಯಬಹುದಿತ್ತು. ಮಾಹಿಷ್ಮತಿಯಲ್ಲಿ ವಿಶ್ವರೂಪನೆಂಬ ನನ್ನ ಶಿಷ್ಯನಿದ್ದಾನೆ. ದೂರ್ವಾಸನ ಶಾಪದಿಂದ ಪ್ರಭಾವದಿಂದ ಭುವಿಯ ಮೇಲೆ ಜನಿಸಿದ ಸ್ವತಃ ಸರಸ್ವತಿಯೇ ಉಭಯಭಾರತಿಯೆಂಬ ಹೆಸರಿನಿಂದ ಅವನ ಹೆಂಡತಿಯಾಗಿದ್ದಾಳೆ. ತಮ್ಮ ಸೂತ್ರಭಾಷ್ಯಕ್ಕೆ ವ್ಯಾಖ್ಯಾನವನ್ನು ಬರೆಯಲು ಅವನೇ ಸರಿಯಾದ ವ್ಯಕ್ತಿ’ ಎನ್ನುತ್ತಾರೆ ಕುಮಾರಿಲರು. ಚಿದ್ವಿಲಾಸೀಯದ ಪ್ರಕಾರ ಮಂಡನಮಿಶ್ರರೆಂಬ ಭಟ್ಟಪಾದರ ಶಿಷ್ಯನಿದ್ದುದು ಕಾಶ್ಮೀರದಲ್ಲಿ. ಆತ ಸ್ವತಃ ಬ್ರಹ್ಮನ ಅಂಶದಿಂದ ಹುಟ್ಟಿದವನು. ದೂರ್ವಾಸರ ಸ್ವರಸ್ಖಾಲಿತ್ಯವನ್ನು ಕೇಳಿ ನಕ್ಕ ತಪ್ಪಿಗಾಗಿ ಶಾಪದಿಂದ ಸರಸ್ವತಿಯು ಭಾರತಿಯಾಗಿ ಜನಿಸಿ ಅವನ ಪತ್ನಿಯಾದಳಂತೆ. ಮನುಷ್ಯರೂಪನಾದ ಶಿವನನ್ನು ಕಂಡಕೂಡಲೇ ಅವಳಿಗೆ ಶಾಪಮೋಕ್ಷವೆಂದು ವಿಮೋಚನೆಯ ದಾರಿಯನ್ನೂ ಚಿದ್ವಿಲಾಸಕಾರನೇ ಸೂಚಿಸಿದ್ದಾನೆ. ಆನಂದಗಿರೀಯದಂತೆ ಮಂಡನ ಕುಮಾರಿಲರ ತಂಗಿಯ ಗಂಡ. ಮಾಧವೀಯದಂತೆ ಕುಮಾರಿಲರಿಗೆ ಮಂಡನ ಮತ್ತು ಪ್ರಭಾಕರರೆಂಬ ಇಬ್ಬರು ಶಿಷ್ಯರು. ಈ ಪ್ರಭಾಕರನು ಪೂರ್ವಮೀಮಾಂಸೆಯ ಮಹಾ ಪಂಡಿತ ಪ್ರಾಭಾಕರ ಮತದ ಪ್ರಭಾಕರನೇ ಅಲ್ಲವೇ ಎಂಬುದು ಪ್ರಶ್ನಾರ್ಹ ವಿಚಾರ.
(ಒಂದು ಕೃತಿಯನ್ನು ವಿವರಿಸಿ ಬರೆಯುವುದನ್ನೇ ಭಾಷ್ಯವೆಂದೂ, ಟೀಕಿಸಿ ಬರೆಯುವುದನ್ನೇ ಟೀಕೆಯೆಂದೂ ಹೆಚ್ಚಿನವರು ತಿಳಿದಿದ್ದಾರೆ. ರಾಜಶೇಖರನ ಕಾವ್ಯಮೀಮಾಂಸೆಯನ್ನು ನೋಡಿದರೆ ಅವುಗಳ ವ್ಯತ್ಯಾಸ ಸುಲಭಗ್ರಾಹ್ಯ. "ಸೂತ್ರಾಣಾಂ ಸಕಲಸಾರವಿವರಣಂ ವೃತ್ತಿಃ | ಸೂತ್ರವೃತ್ತಿವಿವೇಚನಂ ಪದ್ಧತಿಃ | ಆಕ್ಷಿಪ್ಯ ಭಾಷಣಾದ್ ಭಾಷ್ಯಮ್ | ಅಂತರ್ಭಾಷ್ಯಂ ಸಮೀಕ್ಷಾ | ಅವಾಂತರಾರ್ಥವಿಚ್ಛೇದಶ್ಚ ಸಾ | ಯಥಾಸಂಭವಮರ್ಥಸ್ಯ ಟೀಕನಂ ಟೀಕಾ | ವಿಷಮಪದಭಂಜಿಕಾ ಪಂಜಿಕಾ | ಅರ್ಥಪ್ರದರ್ಶನಕಾರಿಕಾ ಕಾರಿಕಾ | ಉಕ್ತಾನುಕ್ತದುರುಕ್ತಚಿಂತಾ ವಾರ್ತಿಕಮಿತಿ ಶಾಸ್ತ್ರಭೇದಾಃ |" - ಸೂತ್ರಗಳ ತಾತ್ಪರ್ಯವನ್ನು ವಿವರಿಸುವ ವ್ಯಾಖ್ಯಾನಕ್ಕೆ ವೃತ್ತಿಯೆಂದು ಹೆಸರು. ಇಂತಹ ಸೂತ್ರವೃತ್ತಿಗಳ ವಿವೇಚನೆಯೇ ಪದ್ಧತಿ. ಅನೇಕ ಆಕ್ಷೇಪಗಳನ್ನೆತ್ತಿ ಅದಕ್ಕೆ ಸಮುಚಿತವಾದ ಉತ್ತರವನ್ನು ರೂಪಿಸುವ ಸಿದ್ಧಾಂತವನ್ನು ನಿರ್ಣಯಿಸುವುದೇ ಭಾಷ್ಯ. ಭಾಷ್ಯದ ಅವಾಂತರ ಮತ್ತು ಗರ್ಭಿತ ಅರ್ಥಗಳ ಸ್ಪಷ್ಟೀಕರಣವೇ ಸಮೀಕ್ಷಾ. ಉಚಿತ ಅರ್ಥಗಳ ಪ್ರತಿಪಾದನೆಯೇ ಟೀಕಾ. ಕಠಿಣ ಶಬ್ದಗಳ ಅರ್ಥವನ್ನು ಸರಳ ಶಬ್ದಗಳಿಂದ ವಿವರಿಸುವುದೇ ಪಂಜಿಕಾ. ಸೂತ್ರಾರ್ಥವನ್ನು ಸರಳವಾಗಿ ಪ್ರದರ್ಶಿಸುವುದೇ ಕಾರಿಕಾ. ಸೂತ್ರಗಳಲ್ಲಿ ಹೇಳಿದ, ಹೇಳದ, ಕಠಿಣವಾಗಿ ಹೇಳಿದ ವಿಷಯಗಳ ವಿವೇಅನೆಯೇ ವಾರ್ತಿಕಾ. ಇದು ಶಾಸ್ತ್ರಗಳ ವಿಭಾಗ ಕ್ರಮ.)
ಮಂಡನ ಮಿಶ್ರರೊಡನೆ ಶಂಕರರ ವಾದ
       ಈ ಮಂಡನಮಿಶ್ರ ಅಥವಾ ವಿಶ್ವರೂಪರೇ ಮುಂದೆ ಶಂಕರರಿಂದ ವಾದದಲ್ಲಿ ಸೋತು ಸಂನ್ಯಾಸ ಸ್ವೀಕರಿಸಿ ಸುರೇಶ್ವರರೆಂಬ ಅಭಿದಾನದಿಂದ ವಿಖ್ಯಾತರಾದರು. ಶೃಂಗೇರಿ, ಕಂಚಿ, ದ್ವಾರಕಾಪೀಠಗಳಿಗೆ ಸಾವಿರ ವರ್ಷಗಳಿಗೂ ಮಿಕ್ಕಿ ಕಾಲವ್ಯತ್ಯಾಸದಲ್ಲಿ ಸುರೇಶ್ವರರು ಮೊದಲ ಪೀಠಾಧಿಪತಿಗಳಾಗಿದ್ದ ಆಶ್ಚರ್ಯವನ್ನು ಹಿಂದಿನ ಲೇಖನದಲ್ಲಿ ಗಮನಿಸಿದ್ದೇವೆ. ಆದರೆ ಈ ಮಂಡನಮಿಶ್ರ ಮತ್ತು ಕೆಲ ಶಂಕರವಿಜಯಗಳಲ್ಲಿ ಹೇಳಲಾಗಿರುವ ವಿಶ್ವರೂಪ ಇವರಿಬ್ಬರೂ ಒಬ್ಬರೇ ಅಥವಾ ಬೇರೆಬೇರೆಯೇ? ಮಾಧವೀಯದಲ್ಲೇ ಐದನೇ ಸರ್ಗದಲ್ಲಿ ಮಂಡನನಿಗೆ ಬ್ರಹ್ಮವಾದವನ್ನು ಉಪದೇಶಿಸಿದ ವೃತ್ತಾಂತವಿದ್ದರೆ(’ತ್ಯಕ್ತ್ವಾ ಮಂಡನಭೇದಗೋಚರಧಿಯಂ ಮಿಥ್ಯಾಭಿಮಾನಾತ್ಮಿಕಾ’), ಎಂಟನೇ ಅಧ್ಯಾಯದಲ್ಲಿ ’ಅಥ ಪ್ರತಸ್ಥೇ ಭಗವಾನ್ ಪ್ರಯಾಗಾತ್, ದಿದೃಕ್ಷಮಾಣೋ ಗೃಹಿವಿಶ್ವರೂಪಮ್’ ಎಂದು ಗೃಹಸ್ಥನಾದ ವಿಶ್ವರೂಪನನ್ನು ನೋಡಲು ಆಚಾರ್ಯರು ಯೋಗಬಲದಿಂದ ಅವನ ಮನೆಯಂಗಳದಲ್ಲಿ ಇಳಿಯುತ್ತಾರೆ!. ಗುರುವಂಶಕಾವ್ಯ, ವ್ಯಾಸಾಚಲೀಯದಲ್ಲೂ ಮಂಡನ ವಿಶ್ವರೂಪರನ್ನು ಬೇರೆಬೇರೆಯಾಗಿಯೇ ಉಲ್ಲೇಖಿಸಲಾಗಿದೆ. ಯಾಜ್ಞವಲ್ಕ್ಯಸ್ಮೃತಿಗೆ ಬಾಲಕ್ರೀಡಾ ವ್ಯಾಖ್ಯಾನವನ್ನು ಬರೆದವರು ವಿಶ್ವರೂಪರೆಂದು ಪ್ರಸಿದ್ಧಿ. ಶಂಕರರ ದಕ್ಷಿಣಾಮೂರ್ತಿ ಸ್ತೋತ್ರಕ್ಕೆ ಮಾನಸೋಲ್ಲಾಸ ವ್ಯಾಖ್ಯಾನವನ್ನು ಬರೆದವರೂ ವಿಶ್ವರೂಪರೆಂದು ಅದರ ವ್ಯಾಖ್ಯಾನಕಾರರು ಹೇಳುತ್ತಾರೆ. ಶಾಂಕರಪರಂಪರೆಯಲ್ಲಿ ಸಂನ್ಯಾಸಿಗಳು ಪೂಜಿಸುವ ’ಆಚಾರ್ಯ ಪಂಚಕ’ದಲ್ಲಿ ಸುರೇಶ್ವರರ ಹೆಸರಿಲ್ಲ. ಆದರೆ ಧರ್ಮಸಿಂಧುವೇತ್ಯಾದಿಗಳು ವಿಶ್ವರೂಪಾಚಾರ್ಯರನ್ನೇ ಹೆಸರಿಸಿವೆ. ಗೃಹಸ್ಥನಾಗಿದ್ದ ವಿಶ್ವರೂಪನನ್ನು ಶಾಂಕರ ಪರಂಪರೆಯಲ್ಲಿ ಮಠಾಧಿಪತಿಯ ಪದವಿಯಲ್ಲಿಟ್ಟದ್ದು ಹೇಗೆ ಸರಿಯಾದೀತು?
       ಇನ್ನು ಶಂಕರರು ಮಂಡನಮಿಶ್ರರನ್ನು ಎಲ್ಲಿ ಜಯಿಸಿದರೆಂಬುದೂ ಚರ್ಚಾರ್ಹವೇ. ಮಾಧವೀಯದಲ್ಲಿ ಪ್ರಯಾಗವೆಂದಿದ್ದರೆ, ವ್ಯಾಸಾಚಲೀಯದಲ್ಲಿ ಮಾಹಿಷ್ಮತಿಯೆಂದಿದೆ. ಪ್ರಾಚೀನ ಹಾಗೂ ಬೃಹಚ್ಛಂಕರ ವಿಜಯಗಳಲ್ಲಿ ಮತ್ತು ಗುರುರತ್ನಮಾಲಿಕೆಯಲ್ಲಿರುವಂತೆ ’ಪಟುಮಂಡನಮಿಶ್ರಖಂಡನಾರ್ಥಂ ಪ್ರವಿಶನ್ಪದ್ಮವನಂ ನವಂ ಜಯಾರ್ಥಮ್’ ಮಂಡನಮಿಶ್ರರನ್ನು ಜಯಿಸಿದ್ದು ಪದ್ಮವನವೆಂಬ ಅಗ್ರಹಾರದಲ್ಲಿ. ಅದೇನೆ ಆದರೂ ಮಂಡನರೊಡಗಿನ ಆಚಾರ್ಯರ ವಾದ ವಿವಾದಾತೀತ. ತತ್ತ್ವಶಾಸ್ತ್ರದ ಹಿನ್ನೆಲೆಯಲ್ಲಿ ಅವರಿಬ್ಬರ ವಾದಗಳ ಸೊಬಗನ್ನು ಭೈರಪ್ಪನವರ ’ಸಾರ್ಥ’ದಲ್ಲಿ ಓದಿ ಆಸ್ವಾದಿಸುವ ಸೊಗಸೇ ಬೇರೆ!. ಮಂಡನರ ಸೋಲು ಅರಿತ ಪತ್ನಿ ಉಭಯಭಾರತಿ ಬಾಲಸನ್ಯಾಸಿ ಆಚಾರ್ಯರಿಗೆ ಕಾಮಶಾಸ್ತ್ರದ ಮೇಲಿನ ಪ್ರಶ್ನೆಯನ್ನು ಹಾಕುತ್ತಾಳೆ. ಒಂದು ತಿಂಗಳ ಸಮಯಾವಕಾಶ ಕೋರಿದ ಶಂಕರರು ಅಮರುಕ ರಾಜನ ಶರೀರದೊಳಗೆ ಪರಕಾಶಪ್ರವೇಶ ಮಾಡಿಬಂದು ಈ ಪ್ರಶ್ನೆಗೆ ಉತ್ತರಿಸಿದರೆಂದು ಮಾಧವೀಯ ಮೂಲದ ಪ್ರಸಿದ್ಧ ಪ್ರತೀತಿ.(ಹೀಗೆ ಪರಕಾಯ ಪ್ರವೇಶದ ಸಂದರ್ಭದಲ್ಲಿಯೇ ಅಮರುಕ ಸಂಸ್ಕೃತದ ಸಾರ್ವಕಾಲಿಕ ಶ್ರೇಷ್ಟ ಶೃಂಗಾರ ಕೃತಿ ಅಮರುಶತಕವನ್ನು ಬರೆದನೆಂದು ಹೇಳಲಾಗುವುದಾದರೂ ಅದಕ್ಕೆ ಐತಿಹಾಸಿಕ ಆಧಾರಗಳು ಲಭ್ಯವಿಲ್ಲ). ಇದೇ ಕಥೆ ವ್ಯಾಸಾಚಲೀಯದಲ್ಲಿ ಸ್ವಲ್ಪ ಭಿನ್ನವಾಗಿದೆ. ಒಮ್ಮೆ ಶಂಕರರು ಗಂಗೆಯಲ್ಲಿ ನಿತ್ಯಾನುಷ್ಟಾನದಲ್ಲಿದ್ದಾಗ ಅವರಿಗೆ ಕಾಶ್ಮೀರದ ಶಾರದಾಪೀಠದ ಮಾಹಿತಿ ಕಿವಿಗೆ ಬಿತ್ತು. ಕಾಶ್ಮೀರದಲ್ಲಿ ಶಾರದಾದೇವಿಯ ಒಂದು ಪೀಠವಿದೆ. ಅದಿರುವ ಆಲಯಕ್ಕೆ ನಾಲ್ಕು ಬಾಗಿಲುಗಳು. ಸರ್ವಜ್ಞನಾದವನು ಮಾತ್ರ ಅದನ್ನೇರಬಹುದಾದುದರಿಂದ ಅದನ್ನು ಸರ್ವಜ್ಞ ಪೀಠವೆಂದೂ ಕರೆಯುತ್ತಾರೆ. ಈಗಾಗಲೇ ಪೂರ್ವ,ಪಶ್ಚಿಮ, ಉತ್ತರ ದೇಶದ ವಿದ್ವಾಂಸರು ಆ ಮೂರು ಬಾಗಿಲುಗಳನ್ನು ತೆರೆಸಿದ್ದಾರೂ, ದಕ್ಷಿಣದ ಬಾಗಿಲನ್ನು ದಕ್ಷಿಣದವರ್ಯಾರೂ ತೆರೆಸಲು ಸಾಧ್ಯವಾಗಿಲ್ಲ. ಇದನ್ನು ಕೇಳಿದ ಆಚಾರ್ಯರು ಆ ಬಾಗಿಲನ್ನು ತೆರೆಸಬೇಕೆಂದು ಶಾರದಾಲಯದ ದಕ್ಷಿಣ ದ್ವಾರಕ್ಕೆ ಬಂದರು. ಎದುರು ಬಂದ ಕಣಾದ, ನೈಯಾಯಿಕ, ಸಾಂಖ್ಯ, ಜೈಮಿನೀಯ, ಬೌದ್ಧ, ಜೈನ ವಿದ್ವಾಂಸರನ್ನೆಲ್ಲ ವಾದದಲ್ಲಿ ಸೋಲಿಸಿ ಸರ್ವಜ್ಞಪೀಠವನ್ನು ಹತ್ತಲು ಪ್ರಾರಂಭಿಸಿದಾಗ ಸ್ವತಃ ಶಾರದೆಯೇ ಆಚಾರ್ಯರೊಡನೆ ವಾದಕ್ಕೆ ಬಂದಳು. ಆಕೆ ಕೇಳಿದ ವಾತ್ಸಾಯನಯಂತ್ರದ ಪ್ರಶ್ನೆಗೆ ಉತ್ತರಿಸಲಾಗದೇ ಶಂಕರರು ಏಳು ದಿನಗಳ ಗಡುವು ಕೇಳಿ ಪರಕಾಯಪ್ರವೇಶಗೈದು ಎಂಟನೇ ದಿನ ತಿರುಗಿ ಬಂದು ಪ್ರಶ್ನೆಗಳಿಗೆಲ್ಲ ಉತ್ತರ ನೀಡಿದರಂತೆ. ಸ್ತ್ರೀಸಂಗವನ್ನು ಮಾಡಿ ಕಲಾರಾಸ್ಯವನ್ನು ಅರಿತುಕೊಂಡೆಯಾದ್ದರಿಂದ ನೀನು ಪರಿಶುದ್ಧನೇ ಎಂದು ಶಾರದೆ ತಿರುಗಿ ಪ್ರಶ್ನಿಸಿದಳಂತೆ. ಆಗ ಶಂಕರರು ಅನ್ಯದೇಹದಿಂದುಂಟಾದ ಕರ್ಮದಿಂದ ದೇಹಾಂತರಕ್ಕೆ ಪಾಪಲೇಪವಿಲ್ಲವೆಂದು ಹೇಳಿ ಆಕೆಯನ್ನು ನಿರುತ್ತರಳನ್ನಾಗಿಸಿ ಸರ್ವಜ್ಞಪೀಠವನ್ನು ಏರಿದರು. ಈ ಸಂಭಾಷಣೆ ಮಾಧವೀಯದಲ್ಲಿ ಹಾಗೂ ಸಾರ್ಥದಲ್ಲಿ ಉಭಯಭಾರತಿಯೊಡಗಿನ ವಾದದಲ್ಲಿ ಮೂಡಿಬಂದಿದೆ. ಕರ್ಮ ಫಲವು ಜನ್ಮಾಂತರದಲ್ಲಿಯೂ ಲೋಕಾಂತರದಲ್ಲಿಯೂ ಆಗುವುದೆಂದು ಶಾಸ್ತ್ರಾಧಾರವಿರುವಾಗ ಒಂದೇ ಜನ್ಮದಲ್ಲಿ ಒಂದು ದೇಹದಲ್ಲಿ ಮಾಡಿದ ಕರ್ಮವು ಇನ್ನೊಂದು ದೇಹದಲ್ಲಿರುವಾಗ ಅಂಟುವುದಿಲ್ಲವೆಂದು ಆಚಾರ್ಯರು ವಾದಿಸಿದರೆಂದು ಹೇಳುವುದು ಮಾತ್ರ ವಿಚಿತ್ರವಾಗಿದೆ. ಜೊತೆಗೆ ಸರ್ವಜ್ಞಪೀಠದ ಮೂರು ದಿಗ್ಭಾಗಗಳ ಬಾಗಿಲು ತೆರೆಯಿಸಲು ಕಾಶ್ಮೀರದ  ಪೂರ್ವೋತ್ತರ ಪಶ್ಚಿಮಗಳಲ್ಲಿ ಎಷ್ಟರ ಮಟ್ಟಿಗೆ ವೈದಿಕಮತ ವ್ಯಾಪಿಸಿತ್ತು? ವೈದಿಕ ಧರ್ಮದ ಮಹಾನ್ ಆಚಾರ್ಯರು, ವಿದ್ವಾಂಸರೆಲ್ಲ ಜನ್ಮತಳೆದಿದ್ದು ತೆರೆಯದೇ ಉಳಿದ ದಕ್ಷಿಣ ಭಾಗದಲ್ಲೇ ಅಲ್ಲವೇ! ಹಾಗೆಂದು ಈ ಕಥೆ ಪೂರ್ತಿ ಅತಾರ್ಕಿಕವಲ್ಲ. ಕಾಶ್ಮೀರದ ಶಾರದಾಮಂದಿರ ಬರಿಯ ಕವಿಕಲ್ಪನೆಯೂ ಅಲ್ಲ. ಶ್ರೀನಗರದಿಂದ ೧೩೦ ಕಿ.ಮೀ ದೂರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್‌ಬಾದ್‌ ಪ್ರದೇಶದಲ್ಲಿ LOCಯಿಂದ ಕೆಲವೇ ಕಿಲೋಮೀಟರ್‌ಗಳಷ್ಟು ಸಮೀಪದ ಕಿಷನ್‌ಗಂಗಾ ಮೇಲ್ಭಾಗದ ನೀಲಂಕೊಲ್ಲಿ ಎಂಬಲ್ಲಿ ಶಾರದಿ ಎಂಬ ಗ್ರಾಮವಿದೆ. ಇದು ಸರಸ್ವತಿ ಅಥವಾ ಕಲ್ನೋತ್ರಿ ಹಾಗೂ ಮಧುಮತಿ ನದಿಗಳ ಸಂಗಮಸ್ಥಾನ. ಲೋಲಬ್‌ವ್ಯಾಲಿಯ ಉತ್ತರ ಮತ್ತು ಉಲಾರ್ ಸರೋವರದ ವಾಯುವ್ಯಕ್ಕೆ ಈ ಗ್ರಾಮವಿದೆ. ಝೀಲಂ ಅನ್ನು ಸೇರುವ ಬಳಿ ಕಿಷನ್‌ಗಂಗಾ ನದಿಯನ್ನು ದಾಟಿ ಹೋದರೆ ಈ ಸ್ಥಳ ಸಿಗುತ್ತದೆ. ೧೨ನೇ ಶತಮಾದಲ್ಲಿ ಕಲ್ಹಣ ಸರ್ಹಸಿಲ ಕೋಟೆಯ ವಿವರಣೆ ನೀಡುವಾಗ ಸಮೀಪದ ಶಾರದಾ ಮಂದಿರವನ್ನು ಕವಿಗಳು ಹಾಡಿಹೊಗಳುವ ಪುಣ್ಯಸ್ಥಾನವೆಂದು ಬಣ್ಣಿಸುತ್ತಾನೆ. ಮಾತ್ರವಲ್ಲ ರಾಜತರಂಗಿಣಿಯ ಪ್ರಕಾರ ಗೌಡ ದೇಶದ ರಾಜ ಲಲಿತಾದಿತ್ಯ ಬಂಗಾಳದಿಂದ ಕಾಶ್ಮೀರಕ್ಕೆ ಬಂದು ಈ ಮಂದಿರವನ್ನು ಸಂದರ್ಶಿಸಿದ್ದನಂತೆ. ಬಿಲ್ಹಣನ ವಿಕ್ರಮಾಂಕದೇವಚರಿತದಲ್ಲಿ ಶಾರದಾ ಮಂದಿರ ಮತ್ತು ಶಾರದಾ ತೀರ್ಥಗಳ ಪ್ರಸ್ತಾಪವಿದೆ. ಅವರಿಗಿಂತ ಹಿಂದಿನ ಅಲ್ಬೆರುನಿ ಲಢಾಕ್ ಮತ್ತು ಗಿಲ್ಗಿಟ್‌ನ ನಡುಮಧ್ಯದಲ್ಲಿರುವ ಶಾರದಾಸ್ಥಾನ ಹಿಂದೂಗಳಿಗೆ ಸೋಮನಾಥದಷ್ಟೇ ಪವಿತ್ರಸ್ಥಳವೆಂದು ಹೊಗಳಿದ್ದಾನೆ. ೧೧ನೇ ಶತಮಾನದಲ್ಲಿ ಗುಜರಾತಿನ ಜಯಸಿಂಗನ ಆಸ್ಥಾನದಲ್ಲಿದ್ದ ಹೆಸರಾಂತ ವಯ್ಯಾಕರಣಿ ಹೇಮಚಂದ್ರಸೂರಿಯು ’ಸಿದ್ಧಹೇಮಖಂಡ’ವೆಂಬ ಸುಪ್ರಸಿದ್ಧ ವ್ಯಾಕರಣ ಗ್ರಂಥವೊಂದನ್ನು ಬರೆಯಲುದ್ದೇಶಿಸಿದಾಗ ಅದರ ನೆರವಿಗೆ ಜಯಸಿಂಗ ಶಾರದಾಮಂದಿರದ ಗ್ರಂಥಾಲಯದಿಂದ ಭಾರತದ ಎಂಟು ಹೆಸರಾಂತ ವ್ಯಾಕರಣಶಾಸ್ತ್ರದ ಉದ್ಗ್ರಂಥಗಳನ್ನು ತರಿಸಿಕೊಟ್ಟಿದ್ದನಂತೆ. ಅಕ್ಬರನ ಆಸ್ಥಾನ ಕವಿ ಅಬುಲ್ ಫಜಲ್ ತನ್ನ ಐನ್-ಎ-ಅಕ್ಬರಿಯಲ್ಲಿ ಹೀಗೆ ದಾಖಲಿಸುತ್ತಾನೆ. ’ಆಯಾ ಹೋಂನಿಂದ ಎರಡು ದಿನಗಳಷ್ಟು ಕಾಲ್ನಡಿಗೆಯಲ್ಲಿ ಕ್ರಮಿಸಿದ ಮೇಲೆ ದುರ್ದೇಶ ಪ್ರದೇಶದಲ್ಲಿ ಹರಿಯುವ ಮಧುಮತಿ ಎಂಬ  ನದಿ ಸಿಗುತ್ತದೆ. ಈ ನದಿಯ ದಡದ ಮೇಲೆ ಶಾರದೆಯ ಒಂದು ವಿಶ್ವವಿಖ್ಯಾತ ಮಂದಿರವಿದೆ. ಪ್ರತಿ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಇಲ್ಲಿ ಜರುಗುವ ಅದ್ಭುತ ಪವಾಡಗಳನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಸಾವಿರಾರು ಜನ ಇಲ್ಲಿ ಬಂದು ಸೇರುತ್ತಾರೆ’. ವಸಿಷ್ಟನ ಮಗ ಶಾಂಡಿಲ್ಯ ಬ್ರಾಹ್ಮಣರಿಂದ ಬಹಿಷ್ಕೃತನಾಗಲು ಕಾಶ್ಮೀರಕ್ಕೆ ಬಂದು ಇದೇ ಸ್ಥಳದಲ್ಲಿ ಶಾರದೆಯನ್ನು ತಪಸ್ಸಿನ ಮೂಲಕ ಒಲಿಸಿಕೊಂಡನಂತೆ. ಈತ ರಚಿಸಿದ ಶಾರದಾ ಮಹಾತ್ಮ್ಯಮ್‌ನಲ್ಲಿ ಶಾರದಾಪೀಠ ವಿಸ್ತೃತ ಮಾಹಿತಿಯಿದೆ. ಈಗಲೂ ಕಾಶ್ಮೀರಿ ಪಂಡಿತರಲ್ಲಿ ಶಾಂಡಿಲ್ಯ ಗೋತ್ರದವರೇ ಅಧಿಕ. ಕಾಶ್ಮೀರಿ ಮತ್ತು ಪಂಜಾಬಿನ ಗುರುಮುಖಿ ಲಿಪಿಗಳ ತಾಯಿಯಾದ ಶಾರದಾ ಲಿಪಿ ಹುಟ್ಟಿದ್ದು ಇಲ್ಲಿಂದಲೇ. ಹದಿನಾಲ್ಕು-ಹದಿನೈದನೇ ಶತಮಾನದಲ್ಲಿದ್ದ ಕಾಶ್ಮೀರದ ಸುಲ್ತಾನ ಜೈ-ಉಲ್-ಅಬಿದ್ದೀನ್ ಈ ಶಾರದೆಯ ಕಟ್ಟಾ ಭಕ್ತನಾಗಿದ್ದನಂತೆ. ಮಾತ್ರವಲ್ಲ ಪ್ರತಿವರ್ಷ ಕಾಲ್ನಡಿಗೆಯಲ್ಲಿ ಶಾರದಾ ಮಂದಿರಕ್ಕೆ ತಪ್ಪದೇ ಭೇಟಿಕೊಡುತ್ತಿದ್ದ. ಲಕ್ಷಾಂತರ ಯಾತ್ರಿಕರು ಸಹಸ್ರಾರು ವರ್ಷಗಳಿಂದ ಭಾರತ ಮತ್ತು ಬೇರೆ ಬೇರೆ ದೇಶಗಳಿಂದ ಇಲ್ಲಿಗೆ ಬಂದು ಹೋದ ದಾಖಲೆಗಳಿವೆ. ಶತಮಾನಗಳ ಕಾಲ ವೈದಿಕ ಸಂಸ್ಕೃತಿಯ ಅತ್ಯುಚ್ಚ ಕೇಂದ್ರವಾಗಿ ಬೆಳೆದ ಶಾರದಾ ಪೀಠಕ್ಕೆ ಮೊದಲ ಹೊಡೆತ ಬಿದ್ದಿದ್ದು ಹದಿನೈದನೇ ಶತಮಾನದಲ್ಲಿ ಕಾಶ್ಮೀರದ ಮೇಲಾದ ಅಫ್ಘನ್ನರ ದಾಳಿಯಿಂದ. ಸತತ ಮೂರು ಶತಮಾನ ಇಸ್ಲಾಮಿನ ದಾಳಿಗೆ ತತ್ತರಿಸಿದ ಇದು ಪುನಃ ವೈಭವದಿಂದ ತಲೆಯೆತ್ತಿದ್ದು ೧೮೪೬ರಲ್ಲಿ ಪಂಜಾಬಿನ ಮಹಾರಾಜ ಗುಲಾಬ್ ಸಿಂಗ್‌ನ ಕಾಲದಲ್ಲಿ. ಆದರೇನು ಫಲ? ೧೯೪೭ರಲ್ಲಿ ಈ ಪ್ರದೇಶ ಪಾಕಿಸ್ತಾನದ ವಶವಾಯ್ತು. ಪಾಕಿನ ಹಿಂದೂಗಳ ಪಾಲಿಗೆ ಪರಮ ಶ್ರದ್ಧಾಕೇಂದ್ರವಾಗಿಯೇ ಕೆಲಕಾಲ ಇದು ಮುಂದುವರೆಯಿತಾದರೂ ಇತ್ತೀಚೆಗೆ ಈ ಸ್ಥಳ ಹೆಚ್ಚುಕಡಿಮೆ ಹೊರಜಗತ್ತಿಗೆ ಮುಚ್ಚಿದ ಸ್ಥಿತಿಯಲ್ಲಿಯೇ ಇದೆ. ಮುಂದೆ ಅಕ್ಟೋಬರ್ ೨೦೦೫ರಲ್ಲಿ ನಡೆದ ಭೀಕರ ಭೂಕಂಪದಲ್ಲಿ ಈ ಮಂದಿರ ಸಂಪೂರ್ಣವಾಗಿ ಭಗ್ನಗೊಂಡಿತಂತೆ. ಭಾರತದ ಅಜ್ಮೇರ್ ದರ್ಗಾಕ್ಕೆ ಬರಲು ಪಾಕಿಸ್ತಾನಿಯರಿಗೂ, ಲಹೋರಿನ ನಾನಕಾನಾ ಸಾಹೇಬ್ ಗುರುದ್ವಾರಕ್ಕೆ ಹೋಗಲು ಭಾರತೀಯ ಸಿಖ್ಖರಿಗೂ ಉಭಯ ದೇಶಗಳು ಅವಕಾಶ ಕಲ್ಪಿಸಿದಂತೆ ಕಾಶ್ಮೀರದ ಹಿಂದೂಗಳಿಗೆ ಇಲ್ಲಿ ಭೇಟಿನೀಡಲು ಅವಕಾಶ ಮಾಡಿಕೊಡಬೇಕೆಂಬ ಕಳೆದ ಎಪ್ಪತ್ತು ಚಿಲ್ಲರೆ ವರ್ಷಗಳ ಕೂಗು ಇನ್ನೂ ನಮ್ಮ ಸರ್ಕಾರಗಳ ಕಿವಿ ತಲುಪಿಲ್ಲ. ಪಾಕಿಸ್ತಾನ ಸರ್ಕಾರ ಇಲ್ಲಿಗೆ ಭೇಟಿ ಕೊಡಲು ಭಕ್ತಾದಿಗಳನ್ನು ಪದೇ ಪದೇ ನಿಷೇಧಿಸುತ್ತ ಬಂದಿರುವುದಕ್ಕೂ ಒಂದು ಕಾರಣವಿದೆ. ಝೀಲಂ ವ್ಯಾಲಿ ಕಾಶ್ಮೀರದ ಅತಿಸೂಕ್ಷ್ಮ ಪ್ರದೇಶಗಳಲ್ಲೊಂದು. ಜೊತೆಗೆ ಭಾರತದ ಕುಪ್ವಾರಾ ಪ್ರದೇಶಕ್ಕೆ ಪಾಕಿಸ್ತಾನಿ ಭಯೋತ್ಪಾದಕರು ಒಳನುಗ್ಗುವುದು ಇದೇ ಕಡೆಯಿಂದ ಎಂಬ ಕುಖ್ಯಾತಿಯೂ ಇದೆ. ಆಯಕಟ್ಟಿನ ಜಾಗವೊಂದರ ಒಳಗೆ ಶತ್ರು ದೇಶದವರನ್ನು ಬಿಟ್ಟುಕೊಳ್ಳವಷ್ಟು ಉದಾರ ಮನಸ್ಸು ಪಾಕಿಸ್ತಾನಕ್ಕೂ ಇದ್ದಂತಿಲ್ಲ. ಇಷ್ಟಾದರೂ ಇತ್ತೀಚೆಗೆ ಮುಜಫರಾಬಾದ್ ವಿಶ್ವವಿದ್ಯಾಲಯದ ಕುಕ್ಷಾನಾ ಖಾನ್‌ರಂಥ ಕೆಲ ಸಂಶೋಧಕರ ನೆರವಿನಿಂದ ಅಲ್ಪಸ್ವಲ್ಪ ಪ್ರಮಾಣದಲ್ಲಿ ಶಾರದಾ ಸಂಸ್ಕೃತಿಯನ್ನು ಹರಡುವ ಕಾರ್ಯ ಶುರುವಾಗಿದೆ. ಕಟ್ಟಡಗಳನ್ನು ಎಷ್ಟೇ ಮರುನಿರ್ಮಿಸಿದರೂ ಅದು ಶ್ರದ್ಧಾಳುಗಳ ಶ್ರದ್ಧೆಗೆ. ಭಾವನೆಗಳಿಗೆ ಸರಿಸಾಟಿಯಲ್ಲವೇ ಅಲ್ಲ. ವರ್ಷಕ್ಕೆ ಕೆಲವೇ ಕೆಲ ಕಾಶ್ಮೀರಿ ಹಿಂದೂಗಳಿಗಾದರೂ ಶಾರದಾ ಪೀಠದ ದರ್ಶನಕ್ಕೆ ಪಾಕಿಸ್ತಾನ ಅವಕಾಶ ಕಲ್ಪಿಸಿದರೆ, ಭಾರತ ಸರ್ಕಾರ ಆ ದಿಶೆಯಲ್ಲಿ ಪ್ರಯತ್ನಿಸಿದರೆ ಅದಕ್ಕಿಂತ ದೊಡ್ಡ ಖುಶಿಯ ಮಾತೇನಿದೆ ಹೇಳಿ?
       ಹಾಗೆಂದು ಶಂಕರವಿಜಯಕಾರರ ಸರ್ವಜ್ಞಪೀಠದೆಡೆಗಿನ ಗೊಂದಲ ಪೂರ್ತಿ ಬಗೆಹರಿದಿಲ್ಲ. ಚಿದ್ವಿಲಾಸೀಯದಲ್ಲಿ, ಪ್ರಾಚೀನಶಂಕರ ವಿಜಯದಲ್ಲಿ ಸರ್ವಜ್ಞಪೀಠವಿರುವುದು ಕಾಂಚಿಯಲ್ಲಿ ಎನ್ನಲಾಗಿದೆ. ಶೃಂಗೇರಿ ಸಂಪ್ರದಾಯದ ಆತ್ಮಬೋಧರ ಗುರುರತ್ನಮಾಲಿಕೆಯೂ ಸರ್ವಜ್ಞಪೀಠವಿರುವುದು ಕಂಚಿ ಎಂದೇ ಹೇಳುತ್ತದೆ. ಅಲ್ಲಿಗೆ ಶಂಕರವಿಜಯಕಾರರಲ್ಲೇ ಕಾಶ್ಮೀರಸರ್ವಜ್ಞಪೀಠವಾದಿಗಳು ಹಾಗೂ ಕಾಂಚೀಸರ್ವಜ್ಞಪೀಠವಾದಿಗಳು ಎಂಬ ಎರಡು ಪಂಗಡಗಳಿವೆ ಎಂದಾಯ್ತು. ಕಾಶ್ಮೀರವು ಶಾರದಾಸ್ಥಾನವೆಂಬ ಪ್ರಸಿದ್ಧಿಯ ಮೇಲೆ ಮೊದಲನೇಯವರೂ, ಸರ್ವಜ್ಞಾತ್ಮರು ಕಂಚಿಯ ಮೊದಲನೇ ಪೀಠಾಧಿಪತಿಗಳಾಗಿದ್ದರೆಂಬ ಆಧಾರದಲ್ಲಿ ಎರಡನೇಯವರೂ ಸರ್ವಜ್ಞಪೀಠವನ್ನು ತಮ್ಮತಮ್ಮಲ್ಲಿ ಕಲ್ಪಿಸಿಕೊಂಡಿರಬಹುದೇ!!!

ಕೊನೆಹನಿ:
ಆಚಾರ್ಯರು ಗೋಕರ್ಣದಿಂದ ಕೊಲ್ಲೂರಿಗೆ ತೆರಳುತ್ತಿದ್ದಾಗ ಶ್ರೀವಲ್ಲಿ ಎಂಬ ಅಗ್ರಹಾರಕ್ಕೆ ಬಂದರು. ಅಲ್ಲಿ ಎರಡು ಸಾವಿರ ಅಗ್ನಿಹೋತ್ರಿ ಬ್ರಾಹ್ಮಣರಿದ್ದರು. ಅವರಲ್ಲಿ ಪ್ರಭಾಕರನೆಂಬವನೊಬ್ಬ. ಇರುವ ಒಬ್ಬನೇ ಮಗ ಹುಟ್ಟಿದಾಗಿನಿಂದ ಮೂಕನಾಗಿದ್ದರಿಂದ ತಂದೆತಾಯಂದಿರು ಚಿಂತಿತರಾಗಿದ್ದರು. ಶಂಕರರಲ್ಲಿ ಕರೆತಂದು ಮಗನ ಸ್ಥಿತಿಯನ್ನು ವಿವರಿಸಿದರು. ಶಂಕರರು ಕರುಣೆಯಿಂದ ’ಯಾರಪ್ಪಾ ನೀನು? ಏಕೆ ಮಾತಾಡದೇ ಜಡನಂತಿರುವೆ?’ ಎಂದು ಕೇಳಿದರು. ಕೂಡಲೇ ಬಾಲಕ
ನಿಮಿತ್ತಂ ಮನಶ್ಚಕ್ಷುರಾದಿಪ್ರವೃತ್ತೌ
ನಿರಸ್ತಾಖಿಲೋಪಾಧಿರಾಕಾಶಕಲ್ಪಃ |
ರವಿರ್ಲೋಕಚೇಷ್ಟಾನಿಮಿತ್ತಂ ಯಥಾ ಯಃ
ಸ ನಿತ್ಯೋಪಲಬ್ಧಿ ಸ್ವರೂಪೋಹಮಾತ್ಮಾ ||
- ’ಸೂರ್ಯನು ಲೋಕದ ವ್ಯವಹಾರಕ್ಕೆ ನಿಮಿತ್ತನಾಗಿರುವಂತೆ ಯಾವ ಉಪಾಧಿಯೂ ಇಲ್ಲದ ಯಾವನು ಮನಸ್ಚಕ್ಷೆರೇತ್ಯಾದಿಗಳ ಪ್ರವೃತ್ತಿಗೆ ನಿಮಿತ್ತನಾಗಿರುವನೋ ಆ ನಿತ್ಯಸ್ವರೂಪನಾದ ಆತ್ಮನೇ ನಾನು’ ಎಂದು ನುಡಿದನಂತೆ. ಪರತತ್ತ್ವವನ್ನು ಅಂಗೈನ ನೆಲ್ಲಿಕಾಯಿಯಂತೆ ಹೇಳಿದ ಬಾಲಕನಿಗೆ ಆಚಾರ್ಯರು ಹಸ್ತಾಮಲಕನೆಂದು(ಹಸ್ತ- ಅಂಗೈ, ಆಮಲಕ - ನೆಲ್ಲಿ) ನಾಮಕರಣ ಮಾಡಿ ಶಿಷ್ಯನನ್ನಾಗಿ ಸ್ವೀಕರಿಸಿದರು. ’ನಿತ್ಯೋಪಲಬ್ಧಿ ಸ್ವರೂಪೋಹಮಾತ್ಮಾ’ ಎಂಬ ಪಲ್ಲವಿಯುಳ್ಳ ಹನ್ನೆರಡು ಶ್ಲೋಕಗಳು ’ಹಸ್ತಾಮಲಕೀಯ’ ಪ್ರಕರಣವೆಂದು ಪ್ರಸಿದ್ಧವಾದವು. ’ಅಗ್ರಹಾರಕಂ ಶ್ರೀವಲಿಸಂಜ್ಞಮ್’ ಎಂದು ಮಾಧವೀಯದಲ್ಲೂ, ವ್ಯಾಸಾಚಲೀಯದಲ್ಲೂ ಈ ಘಟನೆಯ ಉಲ್ಲೇಖವಿದೆ. ಶ್ರೀವಲಿ ಅಗ್ರಹಾರವೆಂದು
ಧನ್ಯೋಸ್ಮಿ ಶ್ರೀಶಂಕರಭಗವತ್ಪಾದಪ್ರಭೋ