प्रज्वालितॊ ज्ञानमयप्रदीपः

ಸೋಮವಾರ, ಜನವರಿ 4, 2016

ವೇದ ವಾಙ್ಮಯ


ನಮಃ ಸಭಾಭ್ಯಃ ಸಭಾಪತಿಭ್ಯಶ್ಚ|
      ನಾನು ಕೈಗೆತ್ತಿಕೊಂಡಿರುವುದು ಅಗಾಧವಾದ ವೇದರಾಶಿಯ ವಿಶ್ಲೇಷಣೆಯೆಂದು ಭಯವಾಗುತ್ತಿದ್ದರೂ ಸನಾತನ ಪರಂಪರೆಯ ಉಳಿವಿಗೆ ನನ್ನದೊಂದು ಅಳಿಲು ಸೇವೆ ಎಂದು ತಿಳಿದಿ ದ್ದೇನೆ. ಅಷ್ಟಕ್ಕೂ ನಾನೇನೂ ವೇದದ ಸಕಲ ವಿಭಾಗಗಳ ಅವಲೋಕನ ಮಾಡುತ್ತಿಲ್ಲ, ಅದು ಸಾಧ್ಯವೂ ಆಗಲಿಕ್ಕಿಲ್ಲ. ಆದರೆ ಈ ನಮ್ಮ ವೇದ ವಾಙ್ಮಯದ ಕೆಲವೊಂದಿಷ್ಟು ವಿಚಾ ರಗಳನ್ನು ನನಗೆ ತಿಳಿದ ಮಟ್ಟಿಗೆ ಹಿರಿಯ ವಿದ್ವಾಂಸರುಗಳ ಅಭಿಪ್ರಾಯವನ್ನೂ ಸೇರಿಸಿ ತಮ್ಮ ಮುಂದಿಡಲು ಉಪಕ್ರಮಿ ಸುತ್ತೇನೆ. ಮೊದಲಾಗಿ ನನಗೆ ಈ ವೇದದಲ್ಲಿ ಅನುರಕ್ತಿಯುಂಟಾಗಲು ಕಾರಣೀಭೂತರಾದ ನನ್ನೆಲ್ಲ ಹಿರಿಯ ಗುರುಗಳಿಗೆ ಶಿರಸಾ ಪ್ರಣಾಮಗಳನ್ನು ಗೈಯ್ಯುತ್ತೇನೆ. ಈ ವೇದ ವಿಚಾರದಲ್ಲಿ ಇದಮಿತ್ಥಂ ಎಂದು ಉಸುರಬಲ್ಲ ಸಾಮರ್ಥ್ಯವಿದ್ದ ನನ್ನ ಆತ್ಯಂತಿಕ ಗುರು ಶ್ರೀ ಶೇಷಾಚಲ ಶರ್ಮರು. ಅವರು ಈ ವಿಚಾರದಲ್ಲಿ ನನ್ನೊಳಗೆ ಅಚ್ಚೊತ್ತಿದ್ದನ್ನು ಇಲ್ಲಿ ಅರುಹುವ ಪ್ರಯತ್ನ ಮಾಡುತ್ತೇನೆ ಹಾಗಾಗಿ ಅವರಿಗೆ ನನ್ನ ಗೌರವ ಪೂರ್ವಕ ನಮನಗಳು. ವೇದವೆಂದರೆ ಕೇವಲ ಹಿಂದಿನ ಮಂತ್ರಗಳಷ್ಟೇ ಅಲ್ಲ. ತದನಂತರದ ಕಾಲಘಟ್ಟದಲ್ಲಿ ಜೀವನ ಧರ್ಮವನ್ನು ಬೋಧಿಸಿದ ಎಲ್ಲ ಸಾಹಿತ್ಯಗಳೂ ವೇದವೆಂದೇ ಪರಿಗಣಿಸಲ್ಪಡಬೇಕು ಎಂಬುದು ನನ್ನ ಅಂಬೋಣ, ಆಧುನಿಕವಾದ ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಕಂಡುಕೊಂಡ ಸತ್ಯಗಳ ಸಾಹಿತ್ಯವೂ ವೇದಗಳೇ ಆಗಿವೆ ಎಂಬುದು ನನ್ನ ಅಭಿಮತ. ವೇದ ಮಂತ್ರಗಳನ್ನು ಕೇವಲ ಮಡಿಗಂಟಿನೊಳಗಿಟ್ಟು ಅದನ್ನು ಪುರೋಹಿತರುಗಳ ಸ್ವತ್ತನ್ನಾಗಿಸಿ ಮಾನವ ಜೀವನ ಧರ್ಮ ದಿಂದ ದೂರಾಗಿಸಿರುವುದು ನಮ್ಮ ಮೌಢ್ಯ ಅಷ್ಟೇ. ಅದಲ್ಲದೇ ಸಕಲ ಜೀವರಾಶಿಗಳ ಒಳಿತನ್ನೇ ಬಯಸಿದ್ದ ವೇದ ರಾಶಿ ಯನ್ನು, ಅದರೊಳಗಿನ ಜೀವನಾಂಶಗಳನ್ನು ಪ್ರಸ್ತುತ ಕಾಲಕ್ಕೆ ಬೇಕಾದ ಅರ್ಥದೊಂದಿಗೆ ಸಮ್ಮಿಳಿತಮಾಡಲಾಗದೇ ಸೋತಿದ್ದು ನಮ್ಮ ಆಲಸ್ಯ. ಅಲ್ಲಿನ ವಿಜ್ಞಾನ, ಅಲ್ಲಿನ ಗಣಿತ, ಅದಲ್ಲದೇ ಇನ್ನೂ ಅನೇಕ ಮೌಲೀಕವಾದ ವಿಚಾರಗಳು ಇಂದು ಕೇವಲ ಪುರೋಹಿತರು ಹೇಳುವ ಮಂತ್ರಗಳು ಎಂಬ ಕಾರಣಕ್ಕೆ ಅವಗಣನೆಗೆ ಗುರಿಯಾಗಿ ಇದೇ ವೇದಾದಿಗಳ ಸೂಕ್ಷ್ಮಾಧ್ಯಯನದಿಂದ ಪಾಶ್ಚಿಮಾತ್ಯರು ಮುಂದುವರೆದು ಕಂಡುಕೊಂಡ ಸತ್ಯಗಳನ್ನೇ ಹೊಸ ಸಂಶೋಧನೆಯೆಂದು ಬಿಂಬಿಸಿ ಲಾಭಪಡೆದುಕೊಳ್ಳುತ್ತಿರುವುದು ಗುಪ್ತಸತ್ಯವಾಗಿದೆ. ಈ ಹಿನ್ನೆಲೆಯಲ್ಲಿ ವೇದದೊಳಗಣ ಹೂರಣಗಳನ್ನು ಸರಳ ಭಾಷೆಯಲ್ಲಿ ನನ್ನ ಅರಿವಿನ ಪರಿಧಿಯಲ್ಲಿ ವಿಸ್ತರಿಸ ಹೊರಡುವ ಉತ್ಸಾಹ ತೋರಿದೆ. ವಿಚಾರಗಳಲ್ಲಿ ತಮ್ಮ ಸಲಹೆ ಸೂಚನೆಗಳಿಗೆ ಅವಕಾಶವನ್ನೀಯುತ್ತಾ ಮುಂಬರಿಯುತ್ತೇನೆ ತಮ್ಮ ಆಶೀರ್ವಾದವಿರಲಿ.
      ವೇದವಾಙ್ಮಯವನ್ನು ಋಕ್, ಸಾಮ ಮತ್ತು ಯಜುಸ್ ಎಂದು ಮೂರು ಬಗೆಯಾಗಿಯೂ, ಅಥರ್ವಣವನ್ನೂ ಸೇರಿಸಿ ನಾಲ್ಕು ಬಗೆಯಾಗಿಯೂ ವಿಂಗಡಿಸಿದ್ದು ಕಂಡುಬರುತ್ತದೆ.   ‘ಋಕ್’ ಎಂದರೆ ಪ್ರಾರ್ಥನಾರೂಪವಾದ ಛಂದೋಬದ್ಧ ರಚನೆಗಳು. ‘ಮಂತ್ರ’ ಎಂಬುದು ಇದರ ನಾಮಾಂತರ. ‘ಯಜುಸ್’ ಎಂದರೆ ಯಜ್ಞ ವಿಧಾನಕ್ಕೆ ಸಾಧರೂಪವಾದುದು, ಇದು ಕೇವಲ ಗದ್ಯಾತ್ಮಕವಾದುದೂ ಆಗಿದೆ. ಇವೆರಡನ್ನೂ ಹೊರತುಪಡಿಸಿದ ಗೀತಾ( ಸಾಮ) ರೂಪವಾದ ಮಂತ್ರಭಾಗವೇ ಸಾಮ. ಈ ಸಾಮದ ಪ್ರಯೋಜನಗಳೂ ವಿಶಿಷ್ಟ, ‘ವಿಘ್ನಶಾಂತಿ’, ‘ದೇವತಾ ತುಷ್ಟಿ’ ಇವೇ ಸಾಮದ ಉದ್ದೇಶಗಳಾಗಿವೆ.  ಇವು ಮೂರರಲ್ಲೂ ಸೇರದೇ ಕೇವಲ ಮಾರಣ, ಮೋಹನ, ಉಚ್ಛಾಟನಾದಿ ವ್ಯವಹಾರಗಳಿಗೆ ಉಪಯುಕ್ತವಾದ ಮಂತ್ರಭಾಗಗಳನ್ನೊಳಗೊಂಡ ವೇದಭಾಗವೇ ‘ಅಥರ್ವಣ’. ಈ ಅಥರ್ವಣವನ್ನು ವೇದವೆಂದು ಪರಿಗಣಿಸಿದ್ದು ತೀರಾ ಇತ್ತೀಚೆಗೆ. ಏಕೆಂದರೆ ವೇದಗಳನ್ನು ‘ತ್ರಯೀ’ ಎಂದೇ ಕರೆಯಲಾಗಿತ್ತು. ಅಂದರೆ ಋಕ್-ಯಜುಸ್- ಸಾಮ ಇವು ಮಾತ್ರ ವೇದವೆಂದು ಪರಿಗಣಿತವಾದವುಗಳು.

     ಇಂತಹ ವೇದರಾಶಿಯನ್ನು ಮತ್ತೆ ಪುನಃ ‘ಸಂಹಿತಾ’, ‘ಬ್ರಾಹ್ಮಣ’, ‘ಆರಣ್ಯಕ’ ಹಾಗೂ ‘ಉಪನಿಷತ್’ ಎಂಬ ನಾಲ್ಕು ಪ್ರಕಾರಗಳಲ್ಲಿ ವಿಭಾಗಿಸಲಾಗಿದೆ. ಸಂಹಿತೆಗಳು ಅನೇಕ ಮಂತ್ರಗಳನ್ನು ಸೇರಿಸಿ ಹೇಳಿದ ಸಂಕಲನವಾದರೆ, ಬ್ರಾಹ್ಮಣಗಳು ಹೆಚ್ಚಾಗಿ ಗದ್ಯರೂಪದ ಸಾಹಿತ್ಯಗಳನ್ನೇ ಹೊಂದಿದ್ದಲ್ಲದೇ ಯಜ್ಞ ಸಂಬದ್ಧವಾದ ವಿಚಾರಗಳನ್ನು ಹೇಳುತ್ತವೆ. ಈ ಬ್ರಾಹ್ಮಣಗಳನ್ನೊಳಗೊಂಡ ಸಾಹಿತ್ಯವನ್ನು ‘ವಾನಪ್ರಸ್ಥಿಗಳೂ’, ‘ಸಂನ್ಯಾಸಿಗಳೂ’ ಅನುಸಂಧಾನ ಮಾಡಲು ಯೋಗ್ಯವೆನಿಸುವ ಭಾಗವೇ ‘ಆರಣ್ಯಕ’ ಹಾಗೂ ‘ಉಪನಿಷತ್’ ಗಳು.

..............................................................

ಸಂಹಿತಾ( ಸಂಹಿತೆಗಳು)
1. ಋಗ್ವೇದ ಸಂಹಿತಾಃ
       ಎಲ್ಲರಿಗೂ ತಿಳಿದಂತೆ ಇದು ಅತ್ಯಂತ ಪ್ರಾಚೀನತಮವಾದ ವೇದಭಾಗ. ಇದರಲ್ಲಿ ಉಪಲಬ್ಧಿಯಾದುದು 1,028 ಸೂಕ್ತಗಳು. ಇವನ್ನು 10 ಮಂಡಲಗಳಲ್ಲಿ ಅಳವಡಿಸಿ ಹೇಳಲಾಗಿದೆ. ಒಂದೊಂದು ಸೂಕ್ತದಲ್ಲಿಯೂ 3 ರಿಂದ 58 ಋಕ್ಕುಗಳು ಕಾಣಸಿಗುತ್ತವೆ. ಒಟ್ಟು ಋಗ್ವೇದದಲ್ಲಿ ಕಾಣಸಿಗುವ ಋಕ್ಕುಗಳ ಸಂಖ್ಯೆ 10,462. ಈ ರೀತಿಯಲ್ಲಿ ನೋಡಿದಾಗ ಸರಾಸರಿ ಒಂದು ಸೂಕ್ತಕ್ಕೆ ಹತ್ತರಿಂದ ಹನ್ನೆರಡು ಋಕ್ಕುಗಳು ಸಿಗುತ್ತವೆ. ಇದಲ್ಲದೇ ಇನ್ನೊಂದು ರೀತಿಯ ವಿಭಾಗಕ್ರಮವೂ ಇದೆ. ಅದೆಂದರೆ ಇಡೀ ಋಗ್ವೇದವನ್ನು ‘ಅಷ್ಟಕ’, ‘ಅಧ್ಯಾಯ’, ‘ವರ್ಗ’ ಗಳಲ್ಲಿ ವಿಭಾಗಿಸುವುದು. ಇದರ ಪ್ರಕಾರ ಪ್ರತೀ ವರ್ಗದಲ್ಲಿ 5 ಋಕ್ಕುಗಳು. ಅಷ್ಟಕದಲ್ಲಿ 8 ಅಧ್ಯಾಯಗಳು. ಇದನ್ನೂ ಮೀರಿ ಅಧ್ಯಯನಕ್ಕೆ ಉಪಯೋಗವಾಗುವಂತೆ ‘ಅನುವಾಕ’ ಕ್ರಮವೂ ಚಾಲ್ತಿಯಲ್ಲಿದೆ.
   ಋಗ್ವೇದದಲ್ಲಿರುವ ಸೂಕ್ತಗಳು ಹಾಗೂ ಋಕ್ಕುಗಳ ಸಂಯೋಜನೆಯಲ್ಲಿ ಒಂದು ವ್ಯವಸ್ಥಿತ ಕ್ರಮವಿದೆ. ಎರಡನೇ ಮಂಡಲದಿಂದ ಏಳನೇ ಮಂಡಲದ ವರೆಗೂ ‘ದೇವತಾ’ ದೃಷ್ಟಿಯಿಂದ ಮಾಡಿದ ಸಂಯೋಜನೆ ಕಂಡುಬರುತ್ತದೆ. ‘ಅಗ್ನಿ ದೇವತಾ ಸೂಕ್ತಗಳು’, ‘ಇಂದ್ರ ದೇವತಾ ಸೂಕ್ತಗಳು’, ‘ವರುಣ ದೇವತಾಸೂಕ್ತಗಳು’ ಇತ್ಯಾದಿ. ಮುಂದೆ ಒಂಭತ್ತನೇಯ ಮಂಡಲದಿಂದ ಛಂದಸ್ಸುಗಳ ಕ್ರಮಾನುಸಾರ ಸೂಕ್ತಗಳನ್ನು ಸಂಯೋಜಿಸಲಾಗಿದೆ. ಈ ಎರಡು ವ್ಯವಸ್ಥೆಯಲ್ಲಿ ಆಶ್ಚರ್ಯವೆಂಬಂತೆ ಸೂಕ್ತಗಳ ಕ್ರಮಾಣುಗತ ಇಳಿಕೆ ಕ್ರಮವನ್ನು ಕಾಣುತ್ತೇವೆ ( 58, 50, 42, 34, 28, 16, 10, 5, 3 ಇತ್ಯಾದಿ...!) ಸಮಾನ ಋಕ್ ಸಂಖ್ಯೆಯುಳ್ಳ ಸೂಕ್ತಗಳಾದರೆ ಆಗ ಛಂದಸ್ಸಿನ ಅಕ್ಷರ ಸಂಖ್ಯೆಯು ಇಳಿಕೆಯ ಕ್ರಮದಲ್ಲಿರುತ್ತದೆ. ಅದರಂತೆ ಮಂಡಲಗಳ ಮತ್ತು ಸೂಕ್ತ ಸಂಖ್ಯೆಯ ಸಂಯೋಜನೆಯಲ್ಲಿಯೂ ಇಳಿಕೆ ಕ್ರಮವನ್ನೇ ಅನುಸರಿಸಲಾಗಿದೆ. ಇದಲ್ಲದೇ ಇನ್ನೊಂದು ರೀತಿಯ ಸಂಯೋಜನಾ ಕ್ರಮವನ್ನೂ ಕಾಣುತ್ತೇವೆ. ಅದೇನೆಂದರೆ, ಒಂಭತ್ತನೇಯ ಮಂಡಲದ ಸೂಕ್ತಗಳೆಲ್ಲವೂ ಸೋಮ ದೇವತಾ ಮಂತ್ರಗಳನ್ನು ಒಳಗೊಂಡಿದೆ. ಎಂಟನೇ ಮಂಡಲದ ಸೂಕ್ತಗಳಲ್ಲಿ ‘ಪ್ರಗಾಥ’ ಹಾಗೂ ‘ಕಾಣ್ವ’ ವಂಶೀಯ ಸೂಕ್ತಗಳೇ ತುಂಬಿವೆ..!ಏಳನೇಯ ಮಂಡಲದ ಸೂಕ್ತಗಳು ಕ್ರಮವಾಗಿ ಗೃತ್ಸ್ನಮದ, ವಿಶ್ವಾಮಿತ್ರ, ವಾಮದೇವ, ಅತ್ರಿ, ಭರದ್ವಾಜ, ವಸಿಷ್ಠ ಈ ಋಷಿವಂಶೀಯ ಸೂಕ್ತಗಳೇ ಆಗಿವೆ...!( ವಂಶೀಯ ಎಂದರೆ ದೃಷ್ಟಾರರು) ಮೊದಲ ಮತ್ತು ಹತ್ತನೇ ಮಂಡಲದಲ್ಲಿರುವ ಸೂಕ್ತ ಸಂಖ್ಯೆ ಕೇವಲ 1.  ಇದನ್ನು ನೋಡಿದಾಗ 2ರಿಂದ 9 ಮಂಡಲಗಳ ತರುವಾಯ ಈ 1 ಮತ್ತು 10 ನೇ ಮಂಡಲಗಳನ್ನು ಸೇರಿಸಿರಲೂ ಬಹುದು ಎಂಬುದು ಕೆಲ ವಿದ್ವಾಂಸರ ಅಭಿಪ್ರಾಯ...( ಮಕ್ ಡೊನಾಲ್ಡ್) 
       ಅಧ್ಯಯನ ಕ್ರಮದಲ್ಲಿ ಪ್ರತಿಯೊಂದು ಸೂಕ್ತಕ್ಕೂ ಋಷಿ, ದೇವತೆ ಮತ್ತು ಛಂದಸ್ಸುಗಳನ್ನು ತಿಳಿಯಲೇ ಬೇಕೆಂಬ ನಿಯಮವಿದೆ( ...ನಿರುಕ್ತ). ಇದನ್ನು ‘ಕಾತ್ಯಾಯನ’ರು ತಮ್ಮ ‘ಸರ್ವಾನುಕ್ರಮಣಿ’ ಯಲ್ಲಿ ... ‘‘ಯಸ್ಯ ವಾಕ್ಯಂ ಸ ಋಷಿಃ| ಯಾ ತೇನೋಚ್ಯತೇ ಸಾ ದೇವತಾ| ಯದಕ್ಷರ ಪರಿಮಾಣಂ ತಚ್ಛಂದಃ| ಅರ್ಥೇಪ್ಸವಃ ಋಷಯಃ ದೇವತಾಃ ಛಂದೋಭಿಃ ಉಪಾಧಾವನ್" ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ. ಉದಾಹರಣೆಗೆ ಪ್ರಸಿದ್ಧವಾದ ‘ಗಾಯತ್ರೀಮಂತ್ರ’ ಕ್ಕೆ ಋಷಿ- ವಿಶ್ವಾಮಿತ್ರ, ದೇವತೆ-ಸವಿತೃ, ಛಂದಸ್ಸು- 8 ಅಕ್ಷಗಳ 3 ಪಾದಗಳುಳ್ಳ ‘ಗಾಯತ್ರೀ’
ಸಾಮಾನ್ಯವಾಗಿ ಸಂಹಿತಾ ಪಾಠವೆಂದರೆ  ಪದಗಳಿಗೆ ‘ಸಂಧಿ’ಮಾಡಿದ ರೂಪದಲ್ಲಿರುವ ಪಾಠವೇ ಆಗಿದೆ. ಒಮ್ಮೊಮ್ಮೆ ಇದರಲ್ಲಿನ ಪದವಿಭಾಗವೂ ಸುಲಭವಾಗಿರುವುದಿಲ್ಲ. ಅಲ್ಲದೇ ‘ಪ್ರಗೃಹ್ಯ’ ಗಳೂ ‘ಉ’ ಮುಂತಾದ ಅವ್ಯಯಗಳೂ ಸಂಧಿಯಲ್ಲಿ ಸುಲಭವಾಗಿ ಕಾಣುವಂತಿರುವುದಿಲ್ಲ. ಸಮಾಸಗಳಲ್ಲಿಯೂ ಭಿನ್ನ ಪಾದಗಳು ಯಾವುವು ಎಂಬುದು ಸ್ಪಷ್ಟಗೊಂಡಿರುವುದಿಲ್ಲ. ಹೀಗಿರುವಾಗ ಇವನ್ನೆಲ್ಲ ಸ್ಪಷ್ಟಗೊಳಿಸಲೋಸುಗ ‘ಶಾಕಲ್ಯ’ನು ರಚಿಸಿರುವ ಸಂಧಿ ಬಿಡಿಸಿ ಇತಿಕರಣಮಾಡಿ, ಸಮಾಸಗಳನ್ನು ಪ್ರತ್ಯೇಕಿಸಿರುವ ಪಾಠಕ್ಕೆ ‘ಪದಪಾಠ’ ಎನ್ನುತ್ತಾರೆ, ಅದನ್ನು ವಿಶೇಷವಾಗಿ ಅಧ್ಯಯನಮಾಡುತ್ತಾರೆ. ಇಲ್ಲಿ ಇನ್ನೊಂದು ಗಮನೀಯ ಅಂಶವೆಂದರೆ ಸಂಹಿತೆಯ ಸ್ವರಗಳಿಗೂ, ಪದಪಾಠದ ಸ್ವರಗಳಿಗೂ ನಿಯಮಾನುಸಾರ ಅಲ್ಲಲ್ಲಿ ವ್ಯತ್ಯಾಸಗಳನ್ನು ಕಾಣುತ್ತೇವೆ. ಆದ್ದರಿಂದ ವೇದಾಧ್ಯಯನ ಮಾಡುವಾಗ ಸಂಹಿತಾ ಪಾಠವನ್ನೂ ಪದ ಪಾಠವನ್ನೂ ಪ್ರತ್ಯೇಕವಾಗಿ ಅಧ್ಯಯನ ಮಾಡುವ ಕ್ರಮ ಬಂದಿರುತ್ತದೆ. ಅಲ್ಲದೇ ಪೂರ್ವಪದ ಉತ್ತರಪದಗಳ ಅಕ್ಷರಗಳನ್ನು ಶೃಂಖಲಾಕ್ರಮದಿಂದ ನಿಯತವಾಗಿ ಅನುವೃತ್ತಿ ಮಾಡುವ ‘ಕ್ರಮ ಪಾಠ’, ‘ಜಠಾಪಾಠ’ ಹಾಗೂ ‘ಘನಪಾಠ’ ಮುಂತಾದ ಜಟಿಲ ವ್ಯವಸ್ಥೆಗಳು ಈ ಸಂಹಿತಾ ಪಾಠಕ್ರಮದಲ್ಲಿ ಇವೆ. ಹಾಗಾಗಿಯೇ ಸಾವಿರ ಸಾವಿರ ವರ್ಷಗಳ ನಂತರದಲ್ಲೂ ವೇದಾಂಶಗಳು ಜನಮಾನಸದಿಂದ ಅಳಿಯದೇ ಉಳಿದುಕೊಂಡು ಬಂದಿರುವುದು. ಮತ್ತು ಹಾಗೆ ಉಳಿಸಿಕೊಂಡು ಬಂದ ಘನಪಾಠಿಗಳಿಗೆ ಇಂದಿಗೂ ನಾವು ನತಮಸ್ತಕವಾಗಬೇಕಿರುವುದು...! ಏಕೆಂದರೆ ವೇದ ಪಾಠಗಳು ಅವುಗಳ ನಿರ್ಣಯದಲ್ಲಿ ಹಸ್ತಪ್ರತಿಗಳಿಗಿಂತಲೂ ‘ಮುಖೋಚ್ಚಾರಣೆ’ ಯಲ್ಲಿಯೇ ಉಳಿದುಕೊಂಡಿರುವುದು. ಇಂತಹ ಒಂದು ಕ್ರಮ, ಇಂತಹ ಒಂದು ಅದ್ಭುತ ಸಾಹಿತ್ಯ ಬೇರೆ ಎಲ್ಲಿಯೂ ಕಾಣಸಿಗಲಾರದು..!

      ಋಗ್ವೇದ ಸೂಕ್ತಗಳ ವೈವಿಧ್ಯಃ-
ಈ ಸೂಕ್ತಗಳಲ್ಲಿ ಹಲ್ವು ಪ್ರಕಾರಗಳಿವೆ. ಅವುಗಳಲ್ಲಿ ಕೆಲವು ಪ್ರಮುಖವಾದವುಗಳ ವಿನ್ಯಾಸವನ್ನು ಗಮನಿಸೋಣ.
1. ದೇವತಾ ಸೂಕ್ತಗಳು :- ಭಾರತದ ಇತಿಹಾಸಕಾಲದ ಭಕ್ತಿಯ ತೋರ್ಪಡಿಕೆಯ ಸ್ವರೂಪಕ್ಕೂ ಋಷಿಗಳ ಉಪಾಸನಾ ಸ್ವರೂಪಕ್ಕೂ ಸ್ವಲ್ಪ ವೈಲಕ್ಷಣ್ಯಗಳಿವೆ. ದೇವತೆಗಳ ಬಗೆಗೆ ಋಷಿಗಳಿಗೆ ಭಯ-ಭಕ್ತಿಗಳಿಗಿಂತ ಕೊಡು-ತೆಗೆದುಕೊಳ್ಳುವ ವ್ಯವಹಾರ ಬುದ್ಧಿಯೇ ಹೆಚ್ಚಾಗಿ ಇರುವಂತೆ ತೋರುತ್ತದೆ. ‘ದೀನ ನಾನು ಸಮಸ್ತ ಲೋಕಕೆ ದಾನಿ ನೀನು’ ಎಂಬಂಥಾ ಆರ್ತ ಭಾವ ಋಗ್ವೇದದ ಸೂಕ್ತಗಳಲ್ಲಿ ಕಂಡುಬರುವುದಿಲ್ಲ. ಸಂಪತ್ತಿಗಳು ಅದರಲ್ಲೂ ಮುಖ್ಯವಾಗಿ ‘ಗೋಧನ’, ‘ವೀರಪುತ್ರಪ್ರಾಪ್ತಿ’ ಇಂತವುಗಳಿಗಾಗಿ ಸ್ತೋತ್ರ ಮಾಡುತ್ತಿದ್ದರೆಂಬುದನ್ನು ಗಮನಿಸಬಹುದಾಗಿದೆ. ಅದಕ್ಕೆ ಅವರು ಆಯ್ದುಕೊಂಡದ್ದು ಮುಖ್ಯವಾಗಿ ‘ಯಜ್ಞ’ವನ್ನು..! ಏಕೆಂದರೆ ಯಜ್ಞ ಗೈದ ಮೇಲೆ ತತ್ ಫಲವನ್ನು ದೇವತೆಗಳು ಕೊಟ್ಟೇ ತೀರಬೇಕು ಮತ್ತು ಕೊಡುತ್ತಾರೆ ಎಂಬ ವಿಶ್ವಾಸದ ಋಕ್ಕುಗಳೇ ಈ ಸ್ತೋತ್ರಗಳಲ್ಲಿ ಅಡಗಿದೆ. ಆದರೆ ಸಾಮಾನ್ಯವಾಗಿ ಸ್ತೋತ್ರಗಳಲ್ಲಿ ಈ ಭಾವ ತೋರಿದರೂ ‘ವರುಣ ಸೂಕ್ತ’ವು ಪಾಪ ಭೀರುತ್ವ ನಾಶಕವಾದ ಅಂಶಗಳ ಕಡೆಗೆ ಹೆಚ್ಚು ಒಲವು ತೋರಿದ್ದು ಕಂಡುಬರುತ್ತದೆ. ಋಷಿಗಳು ತಮ್ಮ ಪಾಪಗಳ ಕುರಿತು ಕ್ಷಮಾಯಾಚನೆ ಮಾಡುತ್ತಾರೆ...!  ಇದಕ್ಕೆ ಪ್ರತಿಯಾಗಿ ‘ವೈದಿಕ ಆರ್ಯ’  ರ ಶೌರ್ಯೋತ್ಸಾಹ ಗಳಿಗೆ ಪ್ರತೀಕವಾಗಿ ಕಾಣುವುದು ‘ಇಂದ್ರಸೂಕ್ತ’..! ಇಂದ್ರನೇ ವೈದಿಕ ಆರ್ಯರ ಯುದ್ಧ ದೇವತೆಯಂತೆ ಕಾಣುತ್ತಾನೆ. ಏಕೆಂದರೆ ಅವನ ವರ್ಣನೆಯಲ್ಲಿ ಅವನ ವಜ್ರಾಯುಧದ ವರ್ಣನೆ ಹೆಚ್ಚಾಗಿ ಕಂಡುಬರುತ್ತದೆ. ‘ವೃತ್ರಾಸುರ’ ಮುಂತಾದ ಅಸುರ..? ! ರನ್ನು ಅವನು ಸದೆಬಡಿಯುವ ವರ್ಣನೆಗಳೇ ಅತ್ಯಾಕರ್ಷಕವಾಗಿ ವರ್ಣಿಸಲ್ಪಟ್ಟಿವೆ. ಇನ್ನೊಂದು ವಿಶೇಷವೆಂದರೆ ‘ಅಗ್ನಿ’ ಇಲ್ಲಿ ಗೃಹದ ಅಧಿದೇವತೆ. ಅಲ್ಲದೇ ಅಗ್ನಿಯೇ ಮಾನವನ ಆತ್ಯಂತಿಕ ಮಿತ್ರನೆಂಬುದು ವರ್ಣಿಸಲ್ಪಟ್ಟಿದೆ. ಮನೆಯ ಮಕ್ಕಳನ್ನು ಆಶೀರ್ವದಿಸುವಂತೆ ಋಷಿಗಳು ಅಗ್ನಿಯನ್ನು ಸ್ತೋತ್ರಮಾಡುತ್ತಾರೆ.ಯಜ್ಞಪ್ರಧಾನವಾದ ಆ ಕಾಲದಲ್ಲಿ ಅಗ್ನಿಗೇ ಅಗ್ರಸ್ಥಾನ ದೊರೆತುದು ವಿಶೇಷವೇನಲ್ಲ ಎನ್ನಿಸುತ್ತದೆ.  ಹಾಗೆಯೇ ‘ಉಷಸ್’ ಸೂಕ್ತವೂ ಅತ್ಯಂತ ರೋಚಕವಾದುದು. ಋಷಿ ಸಂಕುಲದ ಸೌಂದರ್ಯೋಪಾಸನೆ ಈ ಸೂಕ್ತದಲ್ಲಿ ಅತ್ಯಂತ ವಿಶದವಾಗಿ  ತಿಳಿಸಲ್ಪಟ್ಟಿದೆ. "ಪುನಃ ಪುನರ್ಜಾಯಮಾನೀ ಪುರಾಣೀ" ಎಂಬಲ್ಲೆಲ್ಲ ನಿಚ್ಚಳವಾದ ಕಾವ್ಯಾತ್ಮಕ ಶೈಲಿ ನಮ್ಮನ್ನು ಸೌಂದರ್ಯೋಪಾಸನೆಯ ಹೊಸ ಮಜಲಿಗೆ ಕೊಂಡೊಯ್ಯುತ್ತದೆ. ಸವಿತೃ ದೇವನಿಂದ ‘ವಿಕಸಿತಪ್ರಜ್ಞೆ’ ಯನ್ನೂ ‘ರುದ್ರ’ನ ಕೋಪದಿಂದ ಮುಕ್ತಿಯನ್ನೂ ‘ಅಶ್ವಿನೀದೇವತೆ’ಗಳಿಂದ ರೋಗಬಾಧಾ ನಿವೃತ್ತಿಯನ್ನೂ, ‘ವಿಷ್ಣು’ವಿನಿಂದ ಪರಮಪದದ ಆನಂದವನ್ನೂ ಬಯಸಿ ಋಷಿಗಳು ಸ್ತೋತ್ರ ಮಾಡಿದ್ದು ಕಂಡುಬರುತ್ತದೆ. ಹೀಗೇ ಸ್ತೋತ್ರ ಮಾಡುವಾಗ ಒಂದು ಆಶ್ಚರ್ಯವೆಂಬಂತೆ ಎಲ್ಲ ದೇವತೆಗಳನ್ನೂ ಸೇರಿಸಿ ‘ವಿಶ್ವೇದೇವತೆ’ ಎಂಬ ನೂತನ ರೂಪದಲ್ಲಿಯೂ ಸ್ತೋತ್ರ ಗೈದಿರುವುದು ವಿಶೇಷ. 
2. ಆಪ್ರೀ ಸೂಕ್ತಗಳು :- ಕೇವಲ ಯಜ್ಞ ವಿಧಿಗೇ ಅನ್ವಯಗೊಳ್ಳುವಂತಹ ಸೂಕ್ತಗಳು ಪ್ರತಿಯೊಂದು ಋಗ್ವೇದ ಮಂಡಲದಲ್ಲಿಯೂ ಕಾಣಿಸಿಕೊಳ್ಳುತ್ತದೆ.ಇಂತಹ 10  ಸೂಕ್ತಗಳನ್ನು ನಾವು ಕಾಣಬಹುದು. ಇವುಗಳ ಪ್ರತಿಯೊಂದುಸೂಕ್ತದಲ್ಲಿಯೂ ಹತ್ತು ಅಥವಾ ಹನ್ನೆರಡು ಋಕ್ಕುಗಳು ಅಗ್ನಿಯ ಸ್ತೋತ್ರಕ್ಕಾಗಿ ಮೀಸಲಾಗಿವೆ. ಇದಲ್ಲದೇ ‘ತನೂನಪಾತ್’ ಇತ್ಯಾದಿ ದ್ವಾರಗಳು, ‘ದರ್ಭಾ’ ಇತ್ಯಾದಿ ದೇವತಾ ಸ್ತುತಿಗಳೂ ಕ್ರಮಾಗತವಾಗಿ ಕಂಡುಬರುತ್ತವೆ. ಇದನ್ನು ಗಮನಿಸಿದಾಗ ಒಂದೊಂದು ಋಷಿ ವಂಶೀಯರೂ ತಮ್ಮ ಪ್ರತ್ಯೇಕವಾದ ಆಪ್ರೀ ಸೂಕ್ತಗಲನ್ನು ಬಳಸುತ್ತಿದ್ದರು ಎಂದು ತೋರುತ್ತದೆ.ಹಾಗೆಯೇ ಸೋಮಪವಮಾನನ ಕುರಿತ ಒಂಭತ್ತನೇ ಮಂಡಲವೆಲ್ಲ ಯಜ್ಞೋಪಯೋಗೀ ಸೂಕ್ತಗಳಿಂದಲೇ ತುಂಬಿದೆ.
3. ಸಂಸ್ಕಾರ ಸೂಕ್ತಗಳು :- ಮರಣೋತ್ತರವಾದ ಅಪರಕ್ರಿಯೆಗಳ ಕುರಿತು ಅದು ಹೀಗೆಯೇ ನಡೆಯಬೇಕು ಎಂಬುದಕ್ಕೆ ಸಂಬಂಧಿಸಿದ ಮತ್ತು ಇನ್ನೂ ಕೆಲವು ಧಾರ್ಮಿಕ ಆಚರಣೆಗಳಿಗೆ ಉಪಯುಕ್ತವಾದ ಪಿತೃಕರ್ಮಪರ ಸೂಕ್ತಗಳು ಹತ್ತನೇ ಮಂಡಲದಲ್ಲಿ ಕಾಣಸಿಗುತ್ತವೆ. ಇವುಗಳಲ್ಲಿ ಪ್ರೇತ ಸಂಸ್ಕಾರ ವಿಚಾರಗಳು ದೇವಯಾನ - ಪಿತೃಯಾನ, ಜೀವಾತ್ಮಕ ವಿಚಾರಗಳು ತುಂಬಿವೆ.
4. ಆಧ್ಯಾತ್ಮಿಕ ಸೂಕ್ತಗಳು :- ವಿಶ್ವೋತ್ಪತ್ತಿ, ವಿಶ್ವವ್ಯಾಪಿಯಾದ ಒಬ್ಬನೇ ಪರಮಾತ್ಮ, ಮುಕ್ತಿ, ಮುಂತಾದ ಆಧ್ಯಾತ್ಮಿಕ ಅಂಶಗಳನ್ನು ವಿವರಿಸುವ ಸೂಕ್ತಗಳು ಇವನ್ನೆಲ್ಲ ವಿವರಿಸುವ ‘ಪುರುಷ ಸೂಕ್ತ’, ‘ನಾಸದೀಯ ಸೂಕ್ತ’ ಮೊದಲಾದವು ಕಂಡುಬರುತ್ತವೆ. ಇವೇ ಮುಂಬರಿದು ಉಪನಿಷತ್- ವೇದಾಂತ ಭಾಗದ ಮೂಲಸ್ರೋತಗಳಾಗಿವೆ.
5. ಆಖ್ಯಾನ ಸೂಕ್ತಗಳು :- ಮುಂದಿನ ನಮ್ಮ ಭಾರತೀಯ ಕಾವ್ಯ ಲೋಕಕ್ಕೆ ಅತ್ಯಂತ ಮೂಲಧನವೆನ್ನಿಸುವ ಆಖ್ಯಾನ ಸೂಕ್ತಗಳು ವೇದ ಸಾಹಿತ್ಯದಲ್ಲೇ ಮೇರು ಸದೃಶವಾದ ಭಾಗವಾಗಿದೆ. ಇವನ್ನು ಸಂವಾದ ಸೂಕ್ತಗಳೆಂದು ಕರೆದರೂ ತಪ್ಪೇನಿಲ್ಲ. ‘ಪುರೂರವಸ್-ಊರ್ವಶೀ, ಯಮ-ಯಮೀ, ವಿಶ್ವಾಮಿತ್ರ-ನದೀ ’ ಮುಂತಾದ ಸಂವಾದಗಳು ಆ ಕಾಲದ ಜನಜೀವನವನ್ನು ಈ ಲೋಕಕ್ಕೆ ತೆರೆದಿಡುವುದರೊಂದಿಗೆ ಮುಂದೆ ಬಂದ ವಾಲ್ಮೀಕಿಯಿಂದಾರಂಭಿಸಿ ಕಾಳಿದಾಸಾದಿಗಳವರೆಗಿನ ಸಾರಸ್ವತ ಸಾಮ್ರಾಟರುಗಳಿಗೆ ಮೂಲವಸ್ತುವನ್ನೊದಗಿಸಿದ ಕೀರ್ತಿ ಈ ಸೂಕ್ತಗಳಿಗೆ ಸಲ್ಲುತ್ತದೆ. 
6. ಮಾಂತ್ರಿಕ ಸೂಕ್ತಗಳು :- ಗರ್ಭ ರಕ್ಷಣೆ, ಆರೋಗ್ಯರಕ್ಷಣೆ, ರೋಗ ಪರಿಹಾರ, ದುಸ್ವಪ್ನನಾಶ, ಶತ್ರುನಾಶ, ವಿರೋಧೀ ಮಂತ್ರವಾದಿಗಳ ನಾಶ..!, ಮುಂತಾದ ತರಹೆವಾರಿ ವಿನಿಯೋಗಗಳಿರುವ ಸೂಕ್ತಗಳನ್ನು ಈ ಶೀರ್ಷಿಕೆಯಡಿಯಲ್ಲಿ ತರಬಹುದಾಗಿದೆ. ಪರ್ಜನ್ಯನಿಂದ ಬೇಗ ಮಳೆ ಸುರಿಯುವಂತೆ ಮಾಡುವ ಸಲುವಾಗಿ ಅನುಸರಿಸಿದ ಮಾಂತ್ರಿಕ ವಿಧಾನವು ತುಂಬ ಹಾಸ್ಯಮಯವಾಗಿಯೂ ಗೋಚರಿಸುತ್ತದೆ.. 
7. ಲೌಕಿಕ ಸೂಕ್ತಗಳು :- ಯಜ್ಞ ವಿಧಿಯ ಅಂಗಗಳನ್ನು ತಿಳಿಸುವ ಸೂಕ್ತಗಳ ನಡು ನಡುವೆಯೇ ಹಲವಾರು ಲೌಕಿಕ ವಿಚಾರಗಳನ್ನು ವಸ್ತುಗಳನ್ನೂ ತಿಳಿಸಿಕೊಡುವ ಸೂಕ್ತಗಳು ಕಂಡುಬರುತ್ತವೆ ಉದಾಹರಣೆಗೆ, ಒಂಭತ್ತನೇ ಮಂಡಲದಲ್ಲಿ ಇರುವ ಸೋಮ ಸೂಕ್ತದ ನಡುವೆಯೇ ನಾನಾ ದುಷ್ಪವೃತ್ತಿನಿಂದಾ ಸೂಕ್ತವಿದೆ. ಅದರಲ್ಲಿ ದ್ಯೂತ ವ್ಯಾಮೋಹದಲ್ಲಿ ಬಿದ್ದು ಸರ್ವಸ್ವವನ್ನೂ ಕಳೆದುಕೊಂಡು ಹೆಂಡತಿ ಮಕ್ಕಳಿಗೂ ಬೇಡದವನಾಗಿ ಹಳಹಳಿಸುವ ಜೂಜುಗಾರನ ಹಾಸ್ಯಭರಿತ ಸ್ಥಿತಿಯ ವರ್ಣನೆ ತುಂಬ ಮನೋಹರವಾಗಿದೆ. ಇದು ಆಕಾಲದ ಕುಟುಂಬ ವ್ಯವಸ್ಥೆಯನ್ನು ನಮಗೆ ತಿಳಿಸಿಕೊಡುತ್ತದೆ.
8. ದಾನಸ್ತುತಿ ಸೂಕ್ತಗಳು :- ಋಗ್ವೇದದ ಹಲವು ಮಂಡಲಗಳಲ್ಲಿ ಹಂಚಿಕೊಂಡಿರುವ ಸುಮಾರು 40 ದಾನ ಸ್ತುತಿಗಳು ಆ ಕಾಲದಲ್ಲಿ ವಿಜಯಿಯಾದ ರಾಜರುಗಳು ಯಜ್ಞಕಾಲದಲ್ಲಿ ಮಾಡಿದ ದಾನಗಳ ಪ್ರಶಂಸೆಯು  ಕಂಡುಬರುತ್ತದೆ. ಇಲ್ಲಿ ಐತಿಹಾಸಿಕ ನಾಮಾಂಕಿತಗಳನ್ನು ತಿಳಿಯುವುದರೊಮ್ದಿಗೆ ಆದರ್ಶ ಜೀವನದ ಸ್ಥಿತಿಗತಿಗಳನ್ನೂ ತಿಳಿದುಕೊಳ್ಳಬಹುದು.
9. ಕೆಲವು ಕೂಟರಚನೆಯ ಸ್ತುತಿಗಳು :- ಒಗಟಿನಂತಿರುವ ಕೆಲವು ಋಕ್ಕುಗಳನ್ನೊಳಗೊಂಡ ಕೆಲವೊಂದು ಸೂಕ್ತಗಳು ಋಗ್ವೇದದಲ್ಲಿದೆ. ಸೂರ್ಯ, ಯಜ್ಞ ಇತ್ಯಾದಿ ಗಳ್ ಕುರಿತು ಒಗಟಿನ ರೂಪಗಳು ಕಂಡುಬರುತ್ತವೆ. ಅಂತಹ ಒಗಟು ಸೂಕ್ತಗಳ ಎಷ್ಟೋ ಕೂಟಪ್ರಶ್ನಗಳನ್ನು ಇಂದಿಗೂ ಭೇದಿಸಲಾಗಿಲ್ಲ..!

     ಹೀಗೇ ಋಗ್ವೇದ ಸಂಹಿತೆಯ ಸೂಕ್ತಗಳ ಸಿಂಹಾವಲೋಕನದಿಂದ ಧರ್ಮನಿಷ್ಠೆಯ ಜೊತೆಜೊತೆಗೇ ಕಾವ್ಯ ನಿಷ್ಠೆಯೂ ಋಷಿಗಳಲ್ಲಿ ಮಿಂಚುತ್ತಿರುವ ವಿಷಯ ವ್ಯಕ್ತವಾಗುತ್ತದೆ. ಸಂಸ್ಕೃತ ಸಾಹಿತ್ಯದ ಮೂಲಸ್ರೋತವನ್ನು ಅನ್ವೇಷಿಸುವವರಿಗೆ ಮಹಾಭಾರತಾದಿ ಛಂದೋಬಂಧ ಸಾಹಿತ್ಯಗಳ ವಿಕಸಿತ ರೂಪವನ್ನರಿಯಲು ಋಗ್ವೇದದ ಛಂದಸ್ಸುಗಳು ಸಹಾಯಕವಾಗಿವೆ ಮತ್ತು ವೇದಜ್ಞಾನವಿಲ್ಲದ ರಾಮಾಯಣಾದಿಗಳ ಅಧ್ಯಯನವು ನಿರರ್ಥಕವಾಗುತ್ತದೆ ಎಂಬುದನ್ನು ಕಾಣಬಹುದಾಗಿದೆ.
ಇನ್ನು ನಾವು ಈ ವೇದದಲ್ಲಿ ಸ್ತಿತಿಸಲ್ಪಟ್ಟ ದೇವಾನುದೇವತೆಗಳ ಕುರಿತು ಕಿಂಚಿತ್ ಕಣ್ಣು ಹಾಯಿಸಲೇ ಬೇಕು. ವೇದದಲ್ಲಿ ಸ್ತುತರಾದ ದೇವತೆಗಳು ಮನುಷ್ಯ ಜೀವನದಲ್ಲಿ ಪ್ರಭಾವ ಬೀರುವ ವಿಭೂತಿಗಳು ಮತ್ತು ಮಹಾ ಸತ್ವರೂ ಆಗಿದ್ದಾರೆ. ಮೊದ ಮೊದಲು ಕಂಡುಬರುವ ವರ್ಣನೆಗಳಲ್ಲಿ ಭಯ-ಭೀತಿಗಳನ್ನು ತರುವಂತಹುದಾದರೂ ಸ್ತೋತ್ರದಿಂದ ಅವರನ್ನು ಪ್ರಸನ್ನಗೊಳಿಸಬಹುದು ಎಂಬುದನ್ನು ಮನವರಿಕೆ ಮಾಡಿಕೊಂಡಂತಿದೆ. ಅವರು ಮನುಷ್ಯರಿಗೆ ಮಿತ್ರರಾಗುತ್ತಾರೆ ಮತ್ತು ಪರಸ್ಪರವಾಗಿ ಆ ದೇವತೆಗಳಲ್ಲಿಯೂ ಸಖ್ಯವಿದೆ ಹಾಗಾಗಿ ಅವರೆಲ್ಲರೂ ಶತ್ರುಗಳಾದ ದಾನವರನ್ನು..( ಈ ದಾನವ ಪದ ಬಳಕೆ ಹೇಗೆ ಒಡಮೂಡಿತೆಂಬುದಕ್ಕೆ ವೇದಗಳು ವಿವರಣೆ ನೀಡದಿದ್ದರೂ ನಂತರ ಬಂದ ಉಪನಿಷತ್ತುಗಳು ಅವರ ಲಕ್ಷಣವನ್ನು ವಿವರಿಸುವಲ್ಲಿ ಸಫಲವಾಗಿವೆ)  ನಾಶಗೈಯ್ಯುವುದರಲ್ಲಿ ಸಹಕರಿಸುವವರು. ಮನುಷ್ಯನು ಈ ದೇವತೆಗಳ ದಾಸತ್ವವನ್ನು ಪಡೆದುಕೊಂಡಾಗ ಮಾತ್ರ ಸ್ತೋತ್ರ ಮಾಡುವುದರ ಫಲವಾಗಿ ಈ ದಾನವರುಗಳನ್ನು ನಿಯಂತ್ರಿಸಬಲ್ಲ ಶಕ್ತಿಯನ್ನು ಪಡೆಯುತ್ತಾನೆ ಎಂಬ ವಿವರಣೆ ಸಿಗುತ್ತದೆ. ಇದೇ ಮಂತ್ರದ ‘ಶಕ್ತಿ’ ಅಥವಾ ಸೂಕ್ತಗಳ ‘ಶಕ್ತಿ’ ಎನ್ನಿಸಿಕೊಂಡಿತು.
ಆಶ್ಚರ್ಯವೆಂದರೆ ವೇದದಲ್ಲಿ ವರ್ಣಿತವಾದ ದೇವತೆಗಳ ಸಂಖ್ಯೆ ಕೇವಲ 33...! ಈ ಸಂಖ್ಯೆಯು ಇರಾನಿನ ದೇವತೆಗಳ ಲೆಕ್ಕಾಚಾರಗಳಲ್ಲೂ ಪ್ರಸ್ತುತವೆನ್ನಿಸಿವೆ..! ಈ ದೇವತೆಗಳ ಸಾಂಖ್ಯಿಕ ವಿವರಗಳು ಬ್ರಾಹ್ಮಣಗಳಲ್ಲಿ ದೊರೆಯುತ್ತದೆ. ಅದನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

೧. ಅಷ್ಟ ವಸುಗಳು- 8
೨. ಏಕಾದಶ ರುದ್ರರು- 11
೩. ದ್ವಾದಶಾದಿತ್ಯರು- 12
೪.  ಅನಿರ್ದಿಷ್ಟರು ( ಇವರ ಹೆಸರುಗಳು ಉಲ್ಲೇಖಿತವಾಗಿಲ್ಲ..!) -2
ಇದನ್ನೇ ಯಾಸ್ಕನು ತನ್ನ ‘ನಿರುಕ್ತ’ದಲ್ಲಿ ಸ್ಥಾನಾಪನ್ನತೆಯ ಆಧಾರದಲ್ಲಿ ‘ಪೃಥ್ವೀಸ್ಥಾನಿಗಳು, ಅಂತರಿಕ್ಷಸ್ಥಾನಿಗಳು, ದ್ಯುಸ್ಥಾನಿಗಳು ’ ಎಂದು ಮೂರು ಗುಂಪುಗಳಲ್ಲಿ ವಿಂಗಡಿಸಿದ್ದಾನೆ.ಅಲ್ಲದೇ ಅವರ ಕೃತಿ ವೈಚಿತ್ರ್ಯಗಳೂ ಗಮನೀಯವಾಗಿವೆ. 
ಅಧಿರಾಜ ದೇವತೆಗಳು:- ವರುಣ, ಮಿತ್ರ ಇತ್ಯಾದಿಗಳು
ಯುದ್ಧ ದೇವತೆಗಳು:- ಇಂದ್ರ, ಮರುದ್ಗಣಗಳು, ರುದ್ರ ಇತ್ಯಾದಿಗಳು
ಪ್ರಕಾಶ ದೇವತೆಗಳು :- ವಿಷ್ಣು, ಅಶ್ವಿನೀಕುಮಾರರು ಇತ್ಯಾದಿ
ಯಜ್ಞದೇವತೆಗಳು :- ಅಗ್ನಿ, ಸೋಮ ಇತ್ಯಾದಿಗಳು
ಉಳಿದವೆಂದರೆ ಅಪ್ರಧಾನ ದೇವತೆಗಳು :- ಶ್ರದ್ಧಾ ಮತ್ತು ಇಳಾ
ಏಕದೇವತೋಪಾಸನೆಯ ಮೂಲ ಸಿಗುವುದೇ ನಮಗೆ ಋಗ್ವೇದದ ವರುಣನ ವಿವರಣೆಯಲ್ಲಿ. ಇವನನ್ನು ಎಲ್ಲರಿಗಿಂತ ಪ್ರಧಾನ ದೇವತೆಯೆಂದೇ ಬಿಂಬಿಸಲಾಗಿದೆ. ಈ ವರುಣನಿಗೆ ಮಾನವೀಯ ಆಕೃತಿಯನ್ನಾಗಲೀ ಮನೋಭೂಮಿಕೆಯನ್ನಾಗಲೀ ವೇದಗಳಲ್ಲಿ ಹೇಳಿಲ್ಲ. ಆದ ಕಾರಣ ಮಿತ್ರನೊಂದಿಗೆ ಇವನ ಸ್ತುತಿಗಳು ಸಮ್ಮಿಳಿತಗೊಂಡಿವೆ. ಹಾಗಿದ್ದೂ ವರುಣನೇ ಸರ್ವದೇವಾಧಿಪ, ಸಾಮ್ರಾಟ್..! ಜಗತ್ತಿನ ಸೃಷ್ಟಿ-ಸ್ಥಿತಿ ಕಾರ್ಯಗಳು ದ್ಯುದೇವನಂತೆಯೇ ಇವನಿಗೂ ಹೇಳಲ್ಪಟ್ತಿವೆ. ಸೂಕ್ತಗಳಲ್ಲಿ ಬರುವ ವರ್ಣನೆಗಳ ಪ್ರಕಾರ ವರುಣನು ಕ್ಷತ್ರಿಯರಿಗೆ ಪ್ರಭುತ್ವವನ್ನು ದಯಪಾಲಿಸುವವನು ವರುಣನೇ. ಅವನೇ ಮಹಾಪ್ರಭು, ಅವನಿಂದ ಹೊಮ್ಮಿದ ‘ಮಾಯೆ’ ಯಿಂದಲೇ ವಿಶ್ವದ ಋತುನಿಯಮವು ಕರಾರುವಾಕ್ಕಾಗಿ ನಡೆಯುವುದು. ಧರ್ಮ ನೀತಿಗಳು ಉಳಿದಿರುವುದು, ಪಾರ್ಶ್ವವಾಗಿ ಯಮನ ಕಾರ್ಯವನ್ನು ನಡೆಸುತ್ತಿರುವುದಾಗಿಯೂ ವರ್ಣನೆಯಿದೆ. ಹಾಗಾಗಿ ದುರ್ನೀತಿಯ ಜನರನ್ನು ಶಿಕ್ಷಿಸುವವನೂ ವರುಣನೇ...! ಕೆಲವು ಸೂಕ್ತಗಳಲ್ಲಿ ಅವನನ್ನು ಪಾಪಿಗಳನ್ನು ದಂಡಿಸುವ ದೇವತೆ, ಹಾಗಾಗಿ ಗೂಢಚಾರರನ್ನು ಹೊಂದಿದ್ದು ಎಲ್ಲೆಡೆಯೂ ಅವನ ಚರರು ನೋಡುತ್ತಲೇ ಇರುತ್ತಾರೆ. ಇನ್ನೊಂದು ವಿಶೇಷವೆಂದರೆ ಈ ವರುಣನೇ ಈ ಭೂಮಿಗೆ ಮಳೆಯನ್ನು ಕೊಡತಕ್ಕವನು, ಅಲ್ಲದೇ ಆಕಾಲದಲ್ಲಿ ಕಂಡುಬಂದ ‘ಜಲೋದರ’ ಕಾಯಿಲೆಯನ್ನು ಕಡಿಮೆ ಮಾಡುವ ಸಲುವಾಗಿ ಅವನಿಗೆ ಸೋಮಯಾಜಮಾನ್ಯವನ್ನೂ ಕರುಣಿಸಿದ್ದಾರೆ ಋಷಿಗಳು...! ಋಗ್ವೇದ ಕಾಲದಲ್ಲಿ ಪೌರಾಣಿಕ ಕಥಾ ಹಂದರದ ಪರಿಚಯ ಅಷ್ಟಾಗಿ ಕಾಣದಿರುವುದು ಈ ವರುಣನೇ ಮುಂದೆ ಮಿತ್ರ ಎಂದೂ ಕರೆಯಲ್ಪಟ್ಟು ವರುಣನಿಗೆ ಪ್ರತಿದ್ವಂದ್ವಿಯಾಗಿ ಮಾರ್ಪಟ್ಟಿದ್ದು ಕಂಡುಬರುತ್ತದೆ. ಮುಂದೆ ಮಿತ್ರನು ಹಗಲಿನ ದೇವತೆ- ಸೂರ್ಯನೆನ್ನಿಸಿಕೊಂಡರೆ ವರುಣನು ರಾತ್ರಿ ದೇವತೆಯಾಗಿ ಚಂದ್ರನಾಗಿ ಮಾರ್ಪಡುತ್ತಾನೆ.  ಹೀಗೆ ಚಂದ್ರ ತತ್ವವನ್ನು ಆರೋಪಿಸುವಾಗಲೂ ಜಲ ಸಂಬಂಧ ಬಿಟ್ಟು ಹೋಗುವುದಿಲ್ಲ. 
ಮುಂದೆ ಬರ ಬರುತ್ತಾ ಇದೇ ವರುಣನೇ ಯಜ್ಞ ಕಾರ್ಯಗಲಲ್ಲಿ ತನ್ನ ಸ್ಥಾನವನ್ನು ಚಂದ್ರನಿಗೆ ಬಿಟ್ಟುಕೊಡುತ್ತಾನೆ ಮತ್ತು ರಾಜಸೂಯ, ಮುಂತಾದ ಯಜ್ಞಗಳಲ್ಲಿ ಅವನ ಸ್ಥಾನವನ್ನು ಇಂದ್ರನು ಆಕ್ರಮಿಸುತ್ತಾನೆ. ಈ ತೆರನಾದ ಸ್ಥಾನ ಪಲ್ಲಟ ವಿಧಾನವನ್ನು ಇತ್ತೀಚಿನ ಸಂಶೋಧಕರು ಬಹು ಆಸಕ್ತಿಯಿಂದ ಗಮನಿಸಿ ತಮ್ಮ ವರುಣನ ಕುರಿತಾದ ಜಿಜ್ಞಾಸೆಯನ್ನು ತೋರ್ಪಡಿಸಿದ್ದಾರೆ( ಜಾನ್ ಕೀತ್,  ಓಲ್ಡೇನ್ ಬರ್ಗ್, ಹೀಲ್ ಬ್ರಾಂಡ್ ಓಟ್ಟೋ ಇತ್ಯಾದಿಗಳು)ಏನೇ ಆದರೂ ವರುಣನ ‘ಸಾಮ್ರಾಟ್’ ಪದವಿಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ...! ಅತಿ ಪ್ರಾಚೀನ ಮತ್ತು ವೇದ ವರ್ಣಿತರುಗಳಲ್ಲಿ ಪ್ರಥಮ ದೇವತೆಯೆಂಬುದನ್ನು ಎಲ್ಲರೂ ಸಮ್ಮತಿಸುತ್ತಾರೆ. 
...................................................................................................
ಋಗ್ವೇದದ ಸೂಕ್ತಗಳನ್ನು ಕೂಲಂಕಷವಾಗಿ ಗಮನಿಸುತ್ತಾ ಹೋದರೆ ನಮ್ಮ ಅರಿವಿಗೆ ಬರುವುದು ‘ಮಿತ್ರ’ನ ಕುರಿತಾದ ವಿವರಣೆಗಳು. ಆದರೆ ಅವನ ಸ್ಥಾನಾಪನ್ನತೆಯು ಕ್ಷೀಣವಾದುದು ‘ಮಿತ್ರಸೂಕ್ತ’ವೆಂದು ಕರೆಯಲ್ಪಡುವ ಒಂದೇ ಒಂದು ಸೂಕ್ತದಲ್ಲಿ ದೊರೆತ ವಿವರಣೆಯಷ್ಟೇ ಆಗಿದೆ. ಬಹುಶಃ ಹಿಂದೆ ತಿಳಿಸಿದಂತೆ ವರುಣನ ಸ್ಥಾನವನ್ನು ಆಕ್ರಮಿಸಿದ ಈ ದೇವತೆಯು ಹಿಂದೆ ಉತ್ತಮ ಸ್ಥಾನದಲ್ಲಿದ್ದವನು ಎಂಬುದನ್ನು ಸೂಚಿಸುತ್ತದೆ. ಇಲ್ಲಿ ಮಿತ್ರನ ನಂತರ ವರುಣನೋ ಅಥವಾ ವರುಣನಾದ ಮೇಲೆ ಮಿತ್ರನೋ ಎಂಬುದು ಇಂದಿಗೂ ಬಗೆಹರಿಯದ ವಿಚಾರವಾಗಿಯೇ ಇದೆ. ಏಕೆಂದರೆ ಕೆಲ ಋಕ್ಕುಗಳಲ್ಲಿ ಮಿತ್ರಾನಂತರದಲ್ಲಿ ವರುಣ ಬಂದಂತೆ ತೋರುತ್ತದೆ.
ವಿಶ್ವದ ಸೃಷ್ಟಿ, ಋತ-ಸತ್ಯ, ನ್ಯಾಯ ನಿರ್ಣಯಾದಿ ಕಾಯಕಗಳಲ್ಲಿ ಈ ಮಿತ್ರನ ಪಾತ್ರ ಮಹತ್ವದ್ದು ಎಂದೂ ಅದಕ್ಕೆ ಈ ಮಿತ್ರನು ವರುಣನೊಡಗೂಡಿಯೇ ಆ ಕೆಲಸಗಳನ್ನು ನಿರ್ವಹಿಸುತ್ತಾನೆಂದೂ ವರ್ಣಿಸಲಾಗಿದೆ. ಒಂದು ಅಚ್ಚರಿಯ ವಿಚಾರವೆಂದರೆ, ‘ಇರಾನ್’ ನಲ್ಲಿ ಅವರ ಪ್ರಾಕ್ಕಥನಗಳಲ್ಲಿ ಬರುವ ಇದೇ ಕಾಯಕಗಳನ್ನು ನಿರ್ವಹಿಸುತ್ತಾನೆಂದು ವರ್ಣಿಸಲ್ಪಡುವ ದೇವತೆಯ ಹೆಸರೂ ‘ಮಿಥ್ರ್’ ಇದಕ್ಕೆ ಹೊಂದಿಕೊಂಡಂತೆ ವರುಣನಲ್ಲಿ ಉಗ್ರಾಂಶವನ್ನೂ ಮಿತ್ರನಲ್ಲಿ ಸಾತ್ವಿಕಾಂಶಗಳನ್ನೂ ಆರೋಪಿಸಿರುವುದು ಈ ಎರಡು ದೇವತೆಗಳು ಸಮಾನ ಕಾರ್ಯಕ್ಕೆ ನಿಯೋಜಿಸಲ್ಪಟ್ಟವರೆಂಬುದನ್ನು ತಿಳಿಸುತ್ತದೆ.
ಆದಿತ್ಯರು :- ಈ ಮಿತ್ರ ಮತ್ತು ವರುಣರೂ ಅದಿತಿಯ ಪುತ್ರರು...! ಹೀಗೆ ಇವರನ್ನೂ ಒಳಗೊಂಡಂತೆ ಋಗ್ವೇದದ ಪಾಥಮಿಕ ಸೂಕ್ತಗಳಲ್ಲಿ ಕಂಡುಬರುವ ಆದಿತ್ಯರ ಸಂಖ್ಯೆ ಕೇವಲ ಏಳು...! ಅಥವಾ ಎಂಟು...! ಮುಂದೆ ಬ್ರಾಹ್ಮಣದ ಕಾಲದಲ್ಲಿ ಅವನ್ನು 12 ಕ್ಕೆ ತಂದು ನಿಲ್ಲಿಸಲಾಯಿತು. ಅದರ ವಿವರಣೆಯನ್ನು ಮುಂದೆ ಸಂದರ್ಭಾನುಸಾರ ವಿವೇಚಿಸೋಣ. ಏಕೆಂದರೆ ಅಲ್ಲಲ್ಲಿ ಈ ಆದಿತ್ಯರ ನಾಮಾಂಕಿತಗಳು ಬದಲಾಗುತ್ತಲೇ ಸಾಗಿದೆ.ಏಕೆಂದರೆ ಸೂಕ್ತಗಳಲ್ಲಿ ಬರುವ ‘ಮಿತ್ರ- ಅರ್ಯಮ’ ಎಂಬ ಈರ್ವರೂ ವರುಣನ ನಂತರದ ಕಾಲಘಟ್ಟದಲ್ಲಿ ಬರುವ ದೇವತೆಗಳು..! ಈ ‘ಅರ್ಯಮ’ ಇರಾನೀ ಸಾಹಿತ್ಯದಲ್ಲಿ ‘ಅರ್ಯಮನ್’..! ಹೇಗೆ ಇಲ್ಲಿ ಮಿತ್ರ ವರುಣ ಅರ್ಯಮರು ಎಲ್ಲರೂ ಆದಿತ್ಯಾಂಶಿಗಳೋ ಅಂತೆಯೇ ಇರಾನೀ ‘ಅರ್ಯಮನ್’ ಕೂಡಾ ಸೂರ್ಯಾಂಶನು..! ಆ ಕಾಲದ ವಿವಾಹ ವಿಧಿಗಳಲ್ಲಿ ( ಪೂರ್ವದ ಕಾಲಘಟ್ಟದಲ್ಲಿ ವಿವಾಹ ಎಂಬ ವ್ಯವಸ್ಥೆಯೇ ಇರಲಿಲ್ಲ..!), ಆತಿಥ್ಯ ಸಂದರ್ಭಗಳಲ್ಲಿ ಈ”ಅರ್ಯಮಾ’ ಎಂಬವನು ಪ್ರಧಾನ ದೇವತೆಯಾಗಿರುತ್ತಾನೆ. ಅಷ್ಟೇ ಅಲ್ಲ, ಅದೃಷ್ಟವನ್ನು ತಮ್ಮ ನಂಬಿಕೆಯ ಇನ್ನೊಂದು ಭಾಗವನ್ನಾಗಿ ಮಾಡಿಕೊಳ್ಳುತ್ತಾ ಸಾಗಿದ ಋಗ್ವೇದ ಸಂಸ್ಕೃತಿಯಲ್ಲಿ ಅದಕ್ಕೊಬ್ಬ ದೇವತೆ ‘ಅಂಶ’ ಮತ್ತು ನೀತಿಯನ್ನು ಸಾರುವ ದೇವತೆಯಾದ ‘ದಕ್ಷ’  ಇವರೆಲ್ಲ ಆಕಾಲದ ನೀತಿ, ಸಾಮಾಜಿಕ ಕಟ್ಟುಪಾಡುಗಳನ್ನು ನಿಯಂತ್ರಿಸಬಲ್ಲ ದೇವತೆಗಳೆಂದು ವರ್ಣಿಸಲ್ಪಟ್ಟಿವೆ. ಈ ಭಾಗವನ್ನು ‘ಲೋಕ ಶಾಸನ’ ಎಂಬ ಅರ್ಥದಲ್ಲಿ ವೇದ ತಿಳಿಸುತ್ತಿದೆ. ಇಲ್ಲಿ ಒಂದು ಜಿಜ್ಞಾಸೆ ಪೂರ್ವ ವಿದ್ವಾಂಸರುಗಳಿಗೂ ಮೂಡಿದ್ದು ಏನೆಂದರೆ ‘ಸಪ್ತಾದಿತ್ಯ’ ಸೂತ್ರಗಳು ಅಂದಿನ ಗ್ರಹ ಕೂಟಗಳಾಗಿ 7 ಗ್ರಹಗಳನ್ನು ಸೂಚಿಸಲೂ ಸಾಕು ಎಂಬುದು.ಆದರೆ ಕೆಲ ವಿದ್ವಾಂಸರು ಶಾಬ್ದಿಕ ವಿವರಣೆಯ ಪ್ರಕಾರ ಅದನ್ನು ಒಪ್ಪುತ್ತಿಲ್ಲ. ಏಕೆಂದರೆ ‘ಅದಿತಿ’ ಎಂಬುದು ‘ದಿತ್-ಬಂಧನೇ’ ಎಂದು ವಿಭಾಗಿಸಲ್ಪಡುವುದರಿಂದ ಬಂಧನವಿಲ್ಲದ ಸ್ಥಿತಿ ಎಂಬರ್ಥ ಸ್ಫುರಿಸುತ್ತದೆ. ಹಾಗಾಗಿಯೇ ಅದಿತಿಯನ್ನು ‘ದೇವ ಮಾತಾ’ ಸ್ಥಾನಕ್ಕೇರಿಸಿದ್ದು..!
ವೇದೋಲ್ಲಿಖಿತವಾದ ದೇವತೆಗಳಲ್ಲಿ ನಂತರದ ಸ್ಥಾನ ‘ಮರುದ್ಗಣ’ಗಳದ್ದು. ಇವರು ಯಾವಾಗಲೂ ತಾರುಣ್ಯಪೂರ್ಣಾವಸ್ಥೆಯಲ್ಲಿರುವವರು (ಮರ್ಯ) ಮತ್ತು ರುದ್ರನ ಪುತ್ರರು. ವೇದ ಸೂಕ್ತಗಳಲ್ಲಿ ಇವರ ವರ್ಣನೆ ಅನುಪಮ ಕಾವ್ಯ ಶಯ್ಲಿಯಿಂದ ಕೂಡಿದೆ ಎನ್ನಬಹುದು. ಕಂದುಬಣ್ನದ ಕುದುರೆಗಳನ್ನು ಹೊಂದಿದ ಚಿನ್ನದ ರಥಗಳಲ್ಲಿ ಇವರು ಬರುತ್ತಾರೆ. ಈ ಭೂಮಿಯ ಮೇಲೆ ಮಳೆಯನ್ನು ಸುರಿಸುವವರು, ಗಾಳಿಯನ್ನು ಬೀಸುವವರು, ಮತ್ತು ಸುಶ್ರಾವ್ಯವಾದ ಸಂಗೀತವನ್ನು ಹಾಡುತ್ತಾ ಬರುವವರೂ ಆಗಿರುತ್ತಾರೆ. ಅಂತೆಯೇ ಮಿಂಚು ಎಂಬ ಹೊಸ ಬೆಳಕಿನ ವೈಚಿತ್ರ್ಯವೂ ಇವರಿಂದಲೇ ಉದ್ಭವಿಸಿದ್ದು. ಏಕೆಂದರೆ ಇವರ ಆಭರಣಗಳೇ ಅದಕ್ಕೆ ಕಾರಣವಂತೆ...! ಏನೇ ಇದ್ದರೂ ಇವರು ‘ಇಂದ್ರ’ನ ನಾಯಕತ್ವವವನ್ನು ಒಪ್ಪಿ ಅವನ ಸಹಚರರಾಗಿ ಯುದ್ಧಾದಿಗಳಲ್ಲಿ ತೊಡಗಿಸಿಕೊಳ್ಳುವವರಾಗುತ್ತಾರೆ.
ರುದ್ರ :- ಋಗ್ವೇದದಲ್ಲಿ ಇವನ ಸ್ಥಾನ ಗೌಣ. ಆದರೂ ರುದ್ರನ ಬಿಲ್ಲು-ಬಾಣಗಳ ವರ್ಣನೆಗಳು ಅಲ್ಲಲ್ಲಿ ಬರುತ್ತವೆ. ಹಾಗಾಗಿ ಈ ರುದ್ರನೆಂಬವನು ಯಾವಾಗಲೂ ಉಗ್ರರೂಪಿ ಎಂಬುದು ತಿಳಿದುಬರುತ್ತದೆ. ಕಾಡುಗಳಲ್ಲಿಯೇ ಅವನ ವಾಸ, ಮತ್ತು ಯಾರನ್ನು ‘ಪಶುಪತಿ’ ಎಂದು ಹೇಳುತ್ತಾರೋ ಅವನೇ ರುದ್ರನು,...! ಸೂಕ್ತಗಳಲ್ಲಿ ಕಂಡುಬರುವಂತೆ ಇವನು ‘ನಿಷೇಧಗಳ ದೇವತೆಯಾಗಿದ್ದಾನೆ’..! ಈ ಪಶುಪತಿಯನ್ನೇ ಮುಂದೆ ‘ಯಜುರ್ವೇದ’ದಲ್ಲಿ ‘ಮಹಾದೇವ’, ‘ಶಿವ’ ಎಂದು ಬಣ್ಣಿಸಲಾಗಿದೆ. ಯಜ್ಞಗಳಲ್ಲಿ ಇವನಿಗೆ ಬೇರೆಯದೇ ಆದ ಹವಿರ್ಭಾಗವನ್ನೂ ನೀಡಲಾಗುತ್ತಿತ್ತು. ಏಕೆಂದರೆ ಇವನು ನಿಯಾಮಕನೂ, ರೋಗ ನಿವಾರಕನೂ, ಅನ್ಯಾಯಗಳನ್ನು ನಿಯಂತ್ರಿಸುವವನೂ ಆಗಿದ್ದನು.
ಅಶ್ವಿನೀ ದೇವತೆಗಳು :- ಇವರು ಮೂಲದಲ್ಲಿಯೇ ಅವಳಿಗಳು. ಎಲ್ಲ ಕಡೆಗಳಲ್ಲಿಯೂ ದ್ವಿವಚನದಲ್ಲಿಯೇ ಇವರನ್ನು ಹೆಸರಿಸಲಾಗುತ್ತದೆ. ಇವರು ‘ದ್ಯುದೇವ’ನ ಪುತ್ರರು. ಪಕ್ಷಿಗಳಿಂದ ಎಳೆಯಲ್ಪಡುವ ರಥದಲ್ಲಿ ಒಟ್ಟಿಗೇ ಕುಳಿತು ಆಕಾಶದಲ್ಲಿ ಸಂಚರಿಸುವವರು..! (ಆಕಾಶಗಮನದ ಕಲ್ಪನೆಯ ಕುರಿತು ಜಿಜ್ಞಾಸೆಗೊಳಪಡಬೇಕಾದ ಅನೇಕ ವಿಚಾರಗಳು ಈ ಅಶ್ವಿನೀದೇವತೆಗಳ ಸೂಕ್ತಗಳಲ್ಲಿ ವರ್ಣನೆಯಿರುವುದು) ಅರುಣೋದಯದಲ್ಲಿ ಇವರನ್ನು ಕಾಣುತ್ತೇವೆ. ಸುಂದರರೂ, ಶೀಘ್ರಗಾಮಿಗಳೂ ಆಗಿದ್ದಾರೆ. ಇವರಿಗೆ ಕೆಲವು ಸೂಕ್ತಗಳಲ್ಲಿ ‘ದಸ್ರಾ’- ‘ನಾಸತ್ಯ’ ಎಂಬ ನಾಮಾಂತರಗಳನ್ನೂ ಹೇಳಿದ್ದಾರೆ. ಇವರು ರೋಗ ಚಿಕಿತ್ಸಕರು ಎಂಬ ಬಹುವಾದ ವಿವರಣೆ ಕಂಡುಬರುತ್ತದೆ. ಏಕೆಂದರೆ ‘ಚ್ಯವನ’ನ ಮುಪ್ಪನ್ನು ಹೋಗಲಾಡಿಸಿ ತರುಣನನ್ನಾಗಿಸಿದವರು ಈ ಅಶ್ವಿನೀದೇವತೆಗಳು ಎಂದು ನಂಬಲಾಗಿದೆ.ಒಂದು ಸೂಕ್ತದಲ್ಲಿ ಕಥೆಯ ರೂಪದಲ್ಲಿ ಕಾಣುವಂತೆ ‘ಭುಜ್ಯು’ವು ಸಮುದ್ರದಲ್ಲಿ ಮುಳುಗುತ್ತಿರುವಾಗ ಅವನನ್ನು ಮೇಲಕ್ಕೆತ್ತಿ ಬದುಕಿಸಿದವರು ಇವರು. ಇವರ ಸೂಕ್ತಗಳಲ್ಲೇ ನಮಗೆ ‘ಮಧು’ ಎಂಬ ಪೇಯದ ವಿಚಾರ ತಿಳಿದುಬರುವುದು....! ‘ದಧ್ಯಂಚ’ ನೆಂಬವನ ಸಹಾಯದಿಂದ ಈ ಮಧುವನ್ನು ತಯಾರಿಸಿ ದೇವತೆಗಳಿಗೆ ಹಂಚಿದರು ಎಂಬುದು ತಿಳಿದುಬರುತ್ತದೆ. ಹಾಗಾಗಿ ಇವರು ಅತ್ಯಂತ ಜನಪ್ರಿಯ ದೇವತೆಗಳೆನ್ನಿಸಿದರಂತೆ...!
ವಿಷ್ಣು:- ವಿಷ್ಣುವಿನ ಕಲ್ಪನೆಯೇ ಋಗ್ವೇದದ ಏಳು ಮತ್ತು ಒಂಭತ್ತನೇ ಮಂಡಲದಲ್ಲಿ ಬರುತ್ತದೆ. ಹೇಗೆ ಇವನನ್ನು ಜಗನ್ನಿಯಾಮಕ ಎಂದು ಕರೆದರು ಎಂಬುದಕ್ಕೂ ವಿವರಣೆಗಳು ದೊರೆಯುತ್ತವೆ. ಅದಲ್ಲದೇ ‘ಮೂರುಲೋಕಗಳು’ ಎಂಬ ಕಲ್ಪನೆಯೂ ಇವನಿಂದಲೇ ತಿಳಿಯುತ್ತದೆ. ಏಕೆಂದರೆ ಇವನು ಮೂರು ಲೋಕಗಳನ್ನೂ ಅಳೆಯುವ  ಇವನ ಸಾಹಸ ವಿವರಗಳು ಋಗ್ವೇದದಲ್ಲಿ ಉಕ್ತವಾಗಿದೆ.  ಲೋಕವನ್ನಳೆಯುವಾಗ ಮೂರು ಕ್ರಮಗಳನ್ನು ಅನುಸರಿಸಿದ್ದರೂ ಮೊದಲೆರಡು ಕ್ರಮಗಳು ಸಾಮಾನ್ಯ ಕಣ್ಣಿಗೆ ಕಾಣಿಸುವಂತಿದ್ದು ಮೂರನೇಯ ಕ್ರಮವು ಅದೃಶ್ಯವಾದುದಾಗಿದೆ ಎಂದು ವಿವರಣೆ ದೊರೆಯುತ್ತದೆ. ಆದರಿಂದಲೇ ಇವನಿಗೆ ‘ಉರುಗಾಯ’, ‘ಉರುಕ್ರಮ’ ಎಂಬ ಬಿರುದುಗಳಿವೆಯಂತೆ...! ಈ ವಿಷ್ಣುವು ‘ಇಂದ್ರ’ನ ಮಿತ್ರನಾಗಿರುತ್ತಾನೆ. ಅವನಿಗಾಗಿ ‘ಮಧು’ವನ್ನು ತಯಾರಿಸಿಕೊಡುತ್ತಾನೆ ಅದು ವಿಶೇಷವಾದುದಾಗಿದೆ ಏಕೆಂದರೆ ಅವನ ಪಾದದಲ್ಲಿ ಮಧುವಿನ ‘ಉತ್ಸ’(ಬುಗ್ಗೆ) ರೂಪವಾಗಿ  ಸೋಮವು ಜನಿಸುತ್ತದೆ..!
ಪೂಷನ್:- ಈ ದೇವತೆಯು ಜನರಿಗೆ ಮಾರ್ಗ ದರ್ಶಕನು. ದಾರಿ ತಪ್ಪಿದ ಪ್ರಾಣಿಗಳಿಗೂ ಇವನು ಮಾರ್ಗ ದರ್ಶನ ಮಾಡುತ್ತಾನೆ. ಎಲ್ಲರಿಗೂ ಸಮೃದ್ಧಿಯನ್ನು ಕೊಡಬಲ್ಲ ದೇವತೆ ಪೂಷನ್..!
ಸೂರ್ಯಾಂಶೀಯ ದೇವತೆಗಳು:- 1.-ಸೂರ್ಯ- ಇವನು ಒಮ್ಮೆ ಹಕ್ಕಿಯಂತೆಯೂ ಇನ್ನೊಮ್ಮೆ ಜಡದಂತೆಯೂ...!? ಕಾಣಿಸಿಕೊಳ್ಳುತ್ತಾನೆ. ಆದರೂ ಇವನಿಗೆ ‘ದೇವ’ ಪಟ್ಟವಂತೂ ಇದ್ದೇ ಇದೆ..! 2.-ಸವಿತೃ- ಇವನನ್ನು ‘ಸುವರ್ಣಪಾಣಿ’ ಎಂದಿರುವುದು ಅರ್ಥವಾಗುವುದಿಲ್ಲವಾದರೂ ಈತನು ಸಕಲ ಜೀವ ಜಂತುಗಳ ಚೇತನಾ ಶಕ್ತಿ ಎಂದು ವಿವರಿಸಲಾಗಿದೆ..! 

ಇದಲ್ಲದೇ ಅಚ್ಚರಿಯ ಅಂಶಗಳೆಂದರೆ, ಈ ಚೈತನ್ಯಗಳನ್ನು ನೀಡುವಲ್ಲಿನ ವೈವಿಧ್ಯವನ್ನು ಗಮನಿಸಿ ಅವನೊಂದಿಗೆ ‘ಅಜೈಕಪಾತ್’ ‘ವಿವಸ್ವಾನ್’ ಮತ್ತು ‘ರೋಹಿತ’ ಎಂಬವರನ್ನೂ  ಸೂರ್ಯಾಂಶಿಗಳೆಂದು ಗುರುತಿಸಿದೆ.
ಉಷಸ್ :- ಋಗ್ವೇದದಲ್ಲಿ ವರ್ಣಿಸಲ್ಪಟ್ಟ ಪ್ರಥಮ ಸ್ತ್ರೀ ದೇವತೆಯೆಂದರೆ ‘ಉಷಸ್’..! ಇಲ್ಲಿಂದಲೇ ಅನೇಕ ಸ್ತ್ರೀದೇವತೆಗಳಾದ ‘ರಾತ್ರಿ ದೇವಿ’, ‘ನಿಶಾ ದೇವಿ’ ಮುಂತಾದವರು ಕಾಣಿಸಿಕೊಳ್ಳುತ್ತಾರೆ..! ಅಪ್ರತಿಮ ಸೌಂದರ್ಯದ ವರ್ಣನೆಯೂ ಇಲ್ಲಿಂದಲೇ ಪ್ರಾರಂಭವಾಗುತ್ತದೆ..! ಇವಳು ದ್ಯುದೇವನ ಮಗಳು. ಸೂರ್ಯನೊಂದಿಗೆ ಗುರುತಿಸಿಕೊಳ್ಳುತ್ತಾಳೆ..!
ದ್ಯಾವಾಪೃಥಿವೀ :- ದ್ಯುದೇವನು ಈ ಎಲ್ಲ ದೇವತಾ ಕುಟುಂಬಕ್ಕೆ ಪಿತೃ ಸ್ಥಾನದಲ್ಲಿರುವವನು  ಹಾಗಾಗಿ ಇವನು ಪೃಥಿವೀ ದೇವಿಯೊಡನೆ ಯಾವಾಗಲೂ ಗುರುತಿಸಿಕೊಂಡಿದ್ದು ಈ ‘ದ್ಯಾವಾಪೃಥಿವೀ’ ಎಂಬ ಹೆಸರಿನಿಂದ. ವೇದದಲ್ಲಿ ಈ ದೇವತಾಯುಗ್ಮಕ್ಕೆ ‘ರೋದಸೀ’ ಎಂಬ ನಾಮಾಂತರವೂ ಹೇಳಲ್ಪಟ್ಟಿದೆ. ಪೃಥಿವೀಯು ಸಕಲರನ್ನೂ, ಸಕಲವನ್ನೂ ಸಾಕುತ್ತಿರುವವಳು....!

ವಾಯು:- ವಾಯುವೆಂದರೆ ಅಗೋಚರವೆಂದೂ ಗಮ್ಯವೆಂದೂ ಚಲನ ಶೀಲವೆಂದೂ ಗುರುತಿಸಲಾದ ‘ಗಾಳಿ’ಯ ದೇವತಾ ಸ್ವರೂಪವು. ಆದರೂ ಇವನಿಗೆ ಮಾನವ ಸ್ವರೂಪವನ್ನೇ ಹೇಳಲಾಗಿದೆ..! ಇವನೂ ಇಂದ್ರನೂ ಪರಸ್ಪರ ಮಿತ್ರರು..!
ಪರ್ಜನ್ಯ:- ಇವನೂ ವೇದೋಕ್ತವಾದ ಓರ್ವ ದೇವತೆ...! ಅಪ್ರತಿಮ ಶಕ್ತಿವಂತನೂ ಮಳೆ-ಮೋಡ-ಬಿರುಗಾಳಿಗಳ ದೇವತೆಯಾಗಿದ್ದಾನೆ. ಎಲ್ಲ ಸಸ್ಯಗಳ ಜನಕನೂ, ಜೀವಿಗಳ ಉತ್ಪಾದಕನೂ ಪರ್ಜನ್ಯನೇ ಆಗಿದ್ದಾನೆ...!
ಸ್ತ್ರೀ ದೇವತೆಗಳು :- ವೇದದಲ್ಲಿ ಆಗಲೇ ಹೇಳಿದಂತೆ ಮೂಲದಲ್ಲಿ ಯಾವ ಸ್ತ್ರೀ ದೇವತೆಯ ವರ್ಣನೆ ಬಾರದಿದ್ದರೂ ಹಿಂದಿನ ದೇವತೆಗಳಿಗೆಲ್ಲ ಮಾತೃ ರೂಪಗಳನ್ನು ಕಲ್ಪಿಸುವಾಗ ಅನೇಕ ಸ್ತ್ರೀ ದೇವತೆಗಳ ಹೆಸರುಗಳು ಬರುತ್ತವೆ. ಅವರಲ್ಲಿ ಉಷಸ್ ಮತ್ತು ಅದಿತಿ ಗಳಲ್ಲದೇ ಶ್ರೀ, ಪುರಂಧ್ರೀ, ವಾಕ್, ಧಿಷಣಾ, ಇಳಾ ಮುಂತಾದ ಹನ್ನೆರಡು ಸ್ತ್ರೀದೇವತೆಗಳ ಹೆಸರುಗಳಿವೆ. ಅದಲ್ಲದೇ ಇಂದ್ರಾಣೀ ಎಂಬ ದೇವತೆಯೂ ಪ್ರಸ್ತಾಪಿಸಲ್ಪಟ್ಟಿದ್ದಾಳೆ... ( ಶಚಿ ಇಂದ್ರನ ಪತ್ನಿ ಎಂಬ ಉಲ್ಲೇಖ ಕಂಡುಬರುವುದಿಲ್ಲ..!)
ದ್ವಂದ್ವ ದೇವತೆಗಳು :- ವೇದದಲ್ಲಿ ಅನೇಕ ದೇವತೆಗಳು ಅಲ್ಲ..ಬಹುತೇಕ ದೇವತೆಗಳು ಯುಗ್ಮಗಳಾಗಿಯೇ ಗುರುತಿಸಲ್ಪಡುತ್ತಾರೆ. ಮಿತ್ರಾವರುಣ, ದ್ಯಾವಾಪೃಥಿವೀ, ಇಂದ್ರಾವಿಷ್ಣೂ, ಇಂದ್ರಾಗ್ನೀ..... ಮುಂತಾಗಿ
ದೇವತಾ ಗಣಗಳು:-  ಆದಿತ್ಯರು, ಮರುದ್ಗಣಗಳು, ರುದ್ರಗಣಗಳು, ಮುಂತಾದವು ಗಣ ರೂಪದ ದೇವತೆಗಳು( ಗಣ-ಗುಂಪು) ಇವುಗಳಲ್ಲಿ ‘ವಿಶ್ವೇದೇವ ಗಣ’ ಅತ್ಯಮ್ತ ಹರವಾದುದಾಗಿದೆ. ಈ ಎಲ್ಲ ಗಣಗಳನ್ನೂ ವಿಶೇಷವಾಗಿ ಸ್ತೋತ್ರಗೈಯ್ಯುವ ಅನೇಕ ಸೂಕ್ತಗಳು ದೊರೆಯುತ್ತವೆ. 
ಋಭುಗಳು:- ಇವರು ಮೂರು ಜನ ( ಹೆಸರು ಉಲ್ಲೇಖ ಇದ್ದಿರಬಹುದಾದರೂ ಆ ಋಕ್ಕುಗಳ ಉಪಲಬ್ದಿಯಿಲ್ಲ) ಇವರು ದೇವತೆಗಳ ಸಾರಥಿಗಳು.
ಋಗ್ವೇದದ ಅಂತ್ಯ ಕಾಲಘಟ್ಟದಲ್ಲಿ ಬಂದ ದೇವತಾ ಮಂತ್ರಗಳಲ್ಲಿ ಅಪ್ಸರೆಯರು, ಗಂಧರ್ವರು ಹಾಗೂ ಯಕ್ಷರು ಎಂಬ ದೇವತಾ ಗಣಗಳು ಸ್ತೋತ್ರಮಾಡಲ್ಪಟ್ಟಿದ್ದಾರೆ..! ಅಪ್ಸರೆಯರು ಗಂಧರ್ವರ ಪತ್ನಿಯರೆಂದೂ ಇಂದ್ರನರಮನೆಯ ನಾಟ್ಯಾಂಗನೆಯರೆಂದೂ ವರ್ಣಿತವಾಗಿದೆ. ( ಇಲ್ಲಿಂದಲೇ ನಮಗೆ ಭರತ ಮುನಿಯ ನಾಟ್ಯಶಾಸ್ತ್ರದ ಮೂಲ ಸ್ರೋತ ಸಿಗುವುದು..!) ಗಂಧರ್ವರು ಶಬ್ದದ ಅಧಿದೇವತೆಗಳು..! ಮೇಘ, ಜಲ, ಇತ್ಯಾದಿಗಳ ರಕ್ಷಕರು. ಇವರು ಕಳ್ಳರುಕೂಡಾ ..! ಏಕೆಂದರೆ ಇಂದ್ರನ ಉಪಭೋಗಕ್ಕಿರುವ ಸೋಮವನ್ನೂ ಜಲವನ್ನೂ ಕದ್ದೊಯ್ಯುತ್ತಾರೆ ಎಂಬ ವರ್ಣನೆ ದೊರೆಯುತ್ತದೆ
ಈ ಮೇಲಿನ/ಹಿಂದಿನ ದೇವತೆಗಳ ವರ್ಣನೆ ಕೇವಲ ಸ್ತೋತ್ರಾತ್ಮಕವೆಂದು ಕೈಬಿಡುವಂತಿಲ್ಲ. ಇಲ್ಲಿ ಬರುವ ಅನೇಕ ದೇವತೆಗಳ ಗುಣವಿಶೇಷಗಳಲ್ಲಿ ವೈಜ್ಞಾನಿಕ ಅಂಶಗಳ ಮಹಾದಧಿ ಇದೆ... ಸಾಂದರ್ಭಿಕವಾಗಿ ವಿವರಣೆಯಲ್ಲಿ ನೋಡೋಣ.

ಯಜುರ್ವೇದ:
ಯಜುರ್ವೇದ ಸಂಹಿತೆಗಳು:- ಕೇವಲ ಯಜ್ಞದ ದೃಷ್ಟಿಯಿಂದ ಅಧ್ವರ್ಯುವಿನ ಉಪಯೋಗಕ್ಕಾಗಿ ಇರುವ ನಿಯಮಗಳ ಸಂಗ್ರಹವೇ ಈ ಯಜುರ್ವೇದ ಸಂಹಿತೆಯ ಮುಖ್ಯಾಂಶವಾಗಿದೆ. ಈಗಾಗಲೇ ತಿಳಿಸಿದಂತೆ ಛಂದೋರೂಪವಾದ ಮಂತ್ರಕ್ಕೆ ‘ಋಕ್’ ಎಂಬ ಹೆಸರಿನಿಂದ ಹೇಗೆ ಕರೆಯುತ್ತಾರೆಯೋ ಹಾಗೆಯೇ ಗದ್ಯರೂಪಾತ್ಮಕವಾದ ಯಜುರ್ವೇದೀಯ ವಚನಗಳಿಗೆ ‘ಯಜುಸ್’ ಅಥವಾ ‘ಬ್ರಾಹ್ಮಣ’ ಎಂಬ ಸಂಜ್ಞೆಯಿಂದ ಸೂಚಿಸುತ್ತಾರೆ. “ಅನಿಯತಾಕ್ಷರಾವಸಾನೋ ಯಜುಃ”..... “ಗದ್ಯಾತ್ಮಕೋ ಯಜುಃ” .... ಎಂಬ ಅನೇಕ ವಿವರಣೆಗಳು ಇದನ್ನು ತಿಳಿಸಿಕೊಡುತ್ತವೆ. ಮುಂದೆ ‘ಗೃಹ್ಯ’ ಹಾಗೂ ‘ಶ್ರೌತ’ ಸೂತ್ರಗಳು ವಿವರವಾಘಿ ಹೇಳುವ ಕರ್ಮಗಳ ಮೂಲರೂಪಗಳುಅತಿ ಪ್ರಾಚೀನವಾದ ‘ಯಜುರ್ವೇದ’ ದಲ್ಲಿಯೇ ದೊರಕುತ್ತದೆ..!ಉಪನಯನಾದಿ ಗೃಹ್ಯ ಸಂಸ್ಕಾರಗಳನ್ನೂ, ಶ್ರಾದ್ಧಾದಿ ಅಪರ ಕರ್ಮಗಳನ್ನೂ ಆಚರಿಸಲು ಒಬ್ಬ ಪುರೋಹಿತನ ನೆರವು ಸಾಕು, ಆದರೆ ಸೋಮಯಾಗಾದಿಗಳನ್ನೂ, ರಾಜಸೂಯಾದಿ ಯಜ್ಞಗಳನ್ನೂ ನಡೆಸಲು ಅನೇಕ ಬಗೆಯ ...? ಪುರೋಹಿತರುಗಳ ಅವಶ್ಯಕತೆಯಿದೆ. ಇವನ್ನೇ ‘ಶ್ರೌತ’ಕರ್ಮಗಳು ಎಂದು ತಿಳಿಸುವುದರೊಂದಿಗೆ ಈ ಎರಡೂ ಕರ್ಮಾಚರಣೆಗಳಿಗೂ ಮುಖ್ಯವಾದ ಗದ್ಯ-ಪದ್ಯಾತ್ಮಕ ಮಂತ್ರಗಳ ಮೊದಲ ಸಂಕಲನವೇ ಯಜುರ್ವೇದವೆಂದು ತಿಳಿಯಬಹುದಾಗಿದೆ.ಯಜ್ಞದ ಮುಖ್ಯವಾದ ನಾಲ್ವರು ಪುರೋಹಿತರುಗಳಲ್ಲಿ ‘ಹೋತೃ’ವಿಗೆ ಋಗ್ವೇದ ಸಂಬಂಧಿಸುವಂತೆ ಯಜುರ್ವೇದವು ‘ಅಧ್ವರ್ಯು’ವಿಗೂ, ಸಾಮವೇದವು ‘ಉದ್ಗಾತೃ’ವಿಗೂ ಸಂಬಂಧಿಸಿರುತ್ತದೆ. ಕರ್ಮಾಚರಣೆಗೆ ಅಗ್ರ ಪ್ರಾಶಸ್ತ್ಯವನ್ನಿತ್ತ ಭಾರತೀಯರು ಯಜುರ್ವೇದವನ್ನು ಹೆಚ್ಚಾಗಿ ಅಧ್ಯಯನ ಮಾಡುವ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ಸಹಜವೂ ಆಗಿದೆ.ಆದ್ದರಿಂದಲೇ ಈ ಯಜುರ್ವೇದವು ಅನೇಕ ಶಾಖೆಗಳನ್ನು ಹೊಂದುವಂತಾಗಿದೆ. ಇದರಲ್ಲಿ ಮೂಲದಲ್ಲಿ 101 ಶಾಖೆಗಳು ಇದ್ದವು ಎಂಬುದು ಪತಂಜಲಿಯ ‘ಮಹಾಭಾಷ್ಯ’ ದ ಪ್ರಸ್ಥಾವನೆಯಿಂದ ತಿಳಿದುಬರುತ್ತದೆ. ಆದರೆ ಈಗ ಉಪಲಬ್ಧಿಯಿರುವುದು ಕೇವಲ 6 ಮಾತ್ರ...! 
1. ಕಾಠಕಸಂಹಿತೆ
2. ಕಪಿಷ್ಠಲಕಠಸಂಹಿತೆ
3. ಮೈತ್ರಾಯಣೀಸಂಹಿತೆ
4. ತೈತ್ತರೀಯಸಂಹಿತೆ
5.ವಾಜಸವನೇಯೀ ಸಂಹಿತೆಯ ‘ಕಾಣ್ವ’ಶಾಖೆ .
6.ವಾಜಸನೇಯೀ ಸಂಹಿತೆಯ ಮಾದ್ಯಂದಿನ ಸಂಹಿತೆ.
ಇದರಲ್ಲಿ ಮೊದಲ ನಾಲ್ಕು ಸಂಹಿತಗಳಿಗೆ ‘ಕೃಷ್ಣಯಜುರ್ವೇದ’ವೆಂದೂ ಕೊನೇಯ ಎರಡು ಶಾಖೆಗಳಿಗೆ ‘ಶುಕ್ಲಯಜುರ್ವೇದ’ವೆಂದೂ ಕರೆಯುತ್ತಾರೆ. ಇಲ್ಲಿ ಈ ವಿಭಾಗಕ್ರಮಕ್ಕೆ ಕೊಟ್ಟ ಕಾರಣ ಇದರಲ್ಲಿ ಮೊದಲ ವಿಭಾಗವು ‘ಗದ್ಯಪದ್ಯಮಿಶ್ರಿತ’ವೂ, ಎರಡನೇಯದು ಕೇವಲ ಗದ್ಯಾತ್ಮಕವೂ ಇರುವುದಾಗಿದೆ. ಋಗ್ವೇದಕ್ಕೆ ‘ಸಾಯಣಭಾಷ್ಯ’ ವಿರುವಂತೆ ಕೃಷ್ಣಯಜುರ್ವೇದದ ತೈತ್ತರೀಯ ಸಂಹಿತೆಗೂ ಸಾಯಣರ ಭಾಷ್ಯವಿದೆ. ಇದರಲ್ಲಿ ಸಾಯಣಾಚಾರ್ಯರು ‘ಅನುಬಂಧಚತುಷ್ಟಯ’ವನ್ನು ಬಹುವಾಗಿ ವಿವರಿಸಿದ್ದಾರೆ.“ಇಷ್ಟಪ್ರಾಪ್ತ್ಯನಿಷ್ಟ ಪರಿಹಾರಯೋರಲೌಕಿಕಮುಪಾಯಂ ಯೋ ಗ್ರಂಥೋ ವೇದಯತಿ ಸ ವೇದಃ” ಎಂದರೆ ಯಾವ ಗ್ರಂಥವು ಇಷ್ಟಪ್ರಾಪ್ತಿ ಮತ್ತು ಅನಿಷ್ಟನಿವಾರಣಾ ರೂಪದ ‘ಅಲೌಕಿಕ’ ಉಪಾಯಗಳನ್ನು ಬೋಧಿಸುವುದೋ ಅದೇ ವೇದ ಎಂದು ವೇದ ಲಕ್ಷಣವನ್ನು ಹೇಳಿದ್ದಾರೆ...! ‘ಪ್ರತ್ಯಕ್ಷ ಅನುಮಾನಗಳಿಗೆ ಗೋಚರವಲ್ಲದ ಉಪಾಯವನ್ನು ಬೋಧಿಸುವುದೇ ‘ಶ್ರುತಿ’ ಯೆಂದು ಸ್ಪಷ್ಟಪಡಿಸುವುದಕ್ಕಾಗಿ ‘ಅಲೌಕಿಕ’ ಎನ್ನಲಾಗಿದೆ. “ಪ್ರತ್ಯಕ್ಷೇಣಾನುಮಿತ್ಯಾವಾ ಯಸ್ತೂಪಾಯೋ ನ ಬುಧ್ಯತೇ
ಏನಂ ವಿಂದತಿ ವೇದೇನ ತಸ್ಮಾತ್ ವೇದಸ್ಯ ದೇವತಾ||"
ಈ ವೇದಾಧಿಕಾರವು ‘ಉಪನಯನ’ ಸಂಸ್ಕಾರವಾದವರಿಗೆ ಮಾತ್ರ ಎಂಬ ಪರಂಪರೆಯ ಕಾರಣ ಸ್ತ್ರೀ ಶೂದ್ರಾದಿಗಳಿಗೆ ಉಪದೇಶಿಸುವ ಪರಿಪಾಠವಿರಲಿಲ್ಲ.  ವೇದವು ನಿತ್ಯವಾದುದರಿಂದ ಅದು ‘ಸ್ವಯಂಪ್ರಮಾಣ’. “ಸ್ವಾಧ್ಯಾಯೋಧ್ಯೇತವ್ಯಃ” ಎಂಬ ವಿಧಿವಾಕ್ಯಕ್ಕೆ ಅರ್ಥಜ್ಞಾನ ಪುರಸ್ಸರವಾಗಿ ವೇದಾಧ್ಯಯನ ಮಾಡಬೇಕು ಎಂಬುದೇ ಆಗಿದೆ.