प्रज्वालितॊ ज्ञानमयप्रदीपः

ಶನಿವಾರ, ಆಗಸ್ಟ್ 9, 2014

ಅಪುತ್ರಸ್ಯ ಗತಿರ್ನಾಸ್ತಿ....

       ಮಹಾಭಾರತ ತುಂಬ ಗಂಭೀರವಾದ ಕಥಾನಕ ಎಂಬ ಹೇಳಿಕೆಗಳು ಇದ್ದರೂ ಅದರಲ್ಲಿಯೂ ಶ್ರೀ ವ್ಯಾಸರು ತುಂಬ ಮಾರ್ಮಿಕವಾದ ತಮಾಷೆಯ ಅನೇಕ ಸನ್ನಿ ವೇಶಗಳನ್ನು ವರ್ಣಿಸಿ  ಚಿಕ್ಕ ಚಿಕ್ಕ ಉಪಕಥೆಗಳನ್ನು ಸಂದರ್ಭೋಚಿತವಾಗಿ ಸೇರಿ ಸಿದ್ದಾರೆ..
      ಯುಧಿಷ್ಟಿರಾದಿಗಳು ವನವಾಸಕ್ಕೆ ಹೊರಟ ಸಂದರ್ಭದಲ್ಲಿ ದಾರಿಯಲ್ಲಿ ಎದು ರಾದ ಲೋಮಶರು ಧರ್ಮರಾಜನಿಗೆ ತೀರ್ಥಕ್ಷೇತ್ರಗಳ ದರ್ಶನ ಮಾಡುವಂತೆ ತಿಳಿಸುತ್ತಾ ಬೇರೆ ಬೇರೆ ತೀರ್ಥ ಕ್ಷೇತ್ರಗಳಿಗೆ  ಕರೆದೊಯ್ಯುತ್ತಾ ಅಲ್ಲಲ್ಲಿಯ ಸ್ಥಳ ಮಹಿಮೆಯನ್ನು ತುಂಬ ಸುಂದರವಾಘಿ ವರ್ಣಿಸುತ್ತಾರೆ.. ಅಂತಹ ಒಂದು ತೀರ್ಥ 
**************************************************
ಯುಧಿಷ್ಟಿರಾಸೀನೃಪತಿಃಸೋಮಕೋ ನಾಮ ಧಾರ್ಮಿಕಃ
ತಸ್ಯ ಭಾರ್ಯಾಶತಂ ರಾಜನ್   ಸದೃಶೀನಾಮಭೂತ್ತದಾ||
      ಬಹಳ ಹಿಂದೆ ’ಸೋಮಕ’ ಎಂಬ ಓರ್ವ  ಬಹಳ ಧಾರ್ಮಿಕನಾದ ರಾಜನಿ ದ್ದ. ಅವನಿಗೆ ನೂರು ಜನ ಹೆಂಡತಿಯರಿದ್ದರು. ಬಹಳ ಕಾಲದ ನಂತರವೂ ಆ ನೂರು ಜನ ಹೆಂಡದಿರಿದ್ದರೂ ರಾಜನಿಗೆ ಪುತ್ರ ಸಂತಾನವಿರಲಿಲ್ಲ.ಧೃತರಾಷ್ಟ್ರನಿಗೆ ಒಂದೇ ಹೆಂಡತಿಯಲ್ಲಿ ನೂರೊಂದು ಜನ ಮಕ್ಕಳಿದ್ದರು.. ಆದರೆ ಈ ಸೋಮಕನಿಗೆ ನೂರು ಜನ ಹೆಂಡಂದಿರಿದ್ದರೂ ಒಂದೇ ಪುತ್ರ ಸಂತಾನವಿರಲಿಲ್ಲ. ರಾಜ ತುಂಬಾ ವ್ಯಾಕುಲನಾದ. ಹಲವಾರು ಹರಕೆಗಳನ್ನು ಹೊತ್ತ, ಹಲವು ತೀರ್ಥಗಳ ದರ್ಶನ ಮಾಡಿದ ತನ್ನ ಹೆಂಡತಿಯರೊಂದಿಗೆ. ಆದರೂ ತಾನು ವೃದ್ಧನಾಗುತ್ತಾ ಬಂದರೂ ಮಕ್ಕಳಾಗದ್ದನ್ನು ನೋಡಿ ಓರ್ವ ಬ್ರಾಹ್ಮಣನನ್ನು ಕೇಳಿದ.  
ಕದಾಚಿತ್ ತಸ್ಯ ವೃದ್ಧಸ್ಯ ಘಟಮಾನಸ್ಯ ಯತ್ನತಃ|
ಜಂತುರ್ನಾಮ ಸುತಃ ತಸ್ಮಿನ್ ಸ್ತ್ರೀ ಶತೇ ಸಮಜಾಯತ||
ಆ ಬ್ರಾಹ್ಮಣನ ಉಪದೇಶದಂತೇ ಮಾಡಲಾಗಿ ಆ ವೃದ್ಧಾಪ್ಯಕ್ಕೆ ಹೋಗುತ್ತಿರುವ ರಾಜನ ನೂರು ಹೆಂಡತಿಯರಲ್ಲೊಬ್ಬಳಿಗೆ ಓರ್ವ ಪುತ್ರ ಜನನವಾಯಿತು. ನೂರು ಜನ ತಾಯಂದಿರಿಗೆ ಓರ್ವ ಮಗನಾಗಿ ಜನಿಸಿದ ಆ ಮಗುವಿಗೆ ’ಜಂತು’ ಎಂದು ನಾಮಕರಣ ಮಾಡಲಾಯಿತು. ಮಗು ತನ್ನ ಅರಮನೆಯಲ್ಲಿ ಬಹಳ ಮುದ್ದಿನಿಂದ ಬೆಳೆಯತೊಡಗಿತು. ಮಗುವನ್ನು ಆ ನೂರು ಜನ ತಾಯಂದಿರೂ ತಮ್ಮ ಮಗನೆಂ ದೇ ತಿಳಿದು ಸಲಹ ತೊಡಗಿದರು.. ಅತಿಯಾದ ಮುಚ್ಚಟೆಯ ಕಾರಣದಿಂದಾಗಿ ಆ ಮಗು ಒಂದರೆಘಳಿಗೆಯೂ ಭೂಮಿಯಲ್ಲಿ ತೆವಳಲೇ ಇಲ್ಲ.. ಒಬ್ಬರಾದ ಮೇಲೊಬ್ಬ ರಂತೆ ಮಗುವನ್ನು ಎತ್ತಿಕೊಂಡೇ ತಿರುಗುತ್ತಿದ್ದರು.ಮಗುವಿಗೆ ನಿಜವಾದ ತಾಯಿ ಯಾರೆಂದು ಗುರುತಿಸುವುದೇ ಕಷ್ಟವಾಗುತ್ತಿತ್ತು..!!
          ಒಂದು ದಿನ ಅರಮನೆಯ ಅಂತಃಪುರದಲ್ಲಿ ಭಾರೀ ಕೋಲಾಹಲ...!! ರಾಣಿ ಯರೆಲ್ಲರೂ ಹಡಾವಿಡಿಯಿಂದ ಓಡಾಡುತ್ತಿದ್ದಾರೆ...! ಪರಿಚಾರಿಕೆಯರು ಅತ್ತಿಂದಿತ್ತ ಓಡುತ್ತಿದ್ದಾರೆ.. ಮಗು ಯಾವುದೋ ತಾಯಿಯ ಕಂಕುಳಲ್ಲಿ ಕುಳಿತು ಅಳುತ್ತಿದೆ...!! ಎಲ್ಲಿ ಕೇಳಿದರೂ ...ಏನಾಯಿತು..?....ಏನಾಯಿತು....? ...ಮಗು ಏಕೆ ಅಳುತ್ತಿದೆ...? ,.... ಮಗುವಿಗೇನಾಯಿತು...? ತಾಯಿಯ ಸೊಂಟವನ್ನೇರಿ ತಿರುಗುತ್ತಿರುವ ಮಗುವಿನ ಕುಂಡೆಗೊಂದು ಪುಟ್ಟ ಇರುವೆ ಕಚ್ಚಿಬಿಟ್ಟಿತ್ತು...!!!! ಫ್ಚ್...!!.. ಇಡೀ ಅರಮನೆ ಅಲ್ಲೋಲ ಕಲ್ಲೋಲವಾಯಿತು... ಅಂತಃಪುರದ ವಾರ್ತೆಯನ್ನು ಚಾರನೊ ಬ್ಬ ರಾಜ ಸಭೆಯಲ್ಲಿ ಮಂತ್ರಾಲೋಚನೆಯಲ್ಲಿ ಕುಳಿತಿದ್ದ ರಾಜನ ಕಿವಿಗೆ ಹಾಕಿದ.... " ಮಹಾರಾಜರೇ ಅಂತಃಪುರದಲ್ಲಿ ತಮ್ಮ ಮಗನ ಕುಂಡೆಗೆ ಇರುವೆ ಕಚ್ಚಿಬಿಟ್ಟಿದೆ.... .ಮಗು ಅಳುತ್ತಿದೆ... ರಾಣಿಯರೆಲ್ಲಾ ತುಂಬಾ ದುಃಖಿತರಾಗಿದ್ದಾರೆ.."!!ರಾಜನಿಗೂ ಗಾಬರಿಯಾಯಿತು.. ಮಂತ್ರಾಲೋಚನೆಯನ್ನು ಅರ್ಧದಲ್ಲೇ ನಿಲ್ಲಿಸಿ ಅಂತಃಪುರಕ್ಕೆ ಧಾವಿಸಿದ...! ಹುಟ್ಟಿದ ಒಬ್ಬನೇ ಮಗನಿಗೆ ಈ ರೀತಿ ಆಗುವುದೇ.. ಛೇ .. ಇದನ್ನು ಹೇಗೆ ಸಹಿಸಿಕೊಳ್ಳುವುದು.. ಅಂತಃಪುರದ ಚಾರರನ್ನು ಕೋಪದಿಂದ ಕೂಗಿದ...! "ಯಾರಲ್ಲಿ...." ಚಾರರು ಬಂದು ಕೈಮುಗಿದು ನಿಂತರು....." ನಿಮಗೆ ಅನ್ನ ಹಾಕು ವುದು ಇದಕ್ಕೇ ಏನು... ಏನು ಮಾಡುತ್ತಿದ್ದಿರಿ ನೀವು... ಆ ಇರುವೆ ಇಲ್ಲಿಗೆ ಹೇಗೆ ಬಂತು .. ನೀವೇನು ಮಾಡುತ್ತಿದ್ದಿರಿ..? ದಂಡ ಪಿಂಡಗಳೆ... ಇಷ್ಟೊಂದು ಜನ ಇದ್ದೂ ಆ ಇರುವೆ ನನ್ನ ಮಗನನ್ನು ಕಚ್ಚಿದೆಯೆಂದರೆ ನನ್ನಿಂದ ತಡೆದುಕೊಳ್ಳಲಾಗುವುದಿಲ್ಲ ......ಪಾಪ ಈ ನನ್ನ ಮಗನಿಗೆ ಅದೆಷ್ಟು ನೋವಾಗಿದೆಯೋ.... ಪಾಪಿಗಳಾ ತೊಲಗಿ ಇಲ್ಲಿಂದ...ಮುಖ ತೋರಿಸಬೇಡಿ...!!! " ಎಂದು ಬಡಬಡಿಸತೊಡಗಿದ.
          ಹೀಗೆ ಇರುವ ಒಬ್ಬನೇ ಮಗನಿಗೆ ಇರುವೆ ಕಚ್ಚಿ ನೋವನ್ನನುಭವಿಸುತ್ತಿರು ವಾಗ ರಾಜನಿಗೆ ಒಂದು ವಿಚಾರ ಬಂತು..
ನನಗೆ ಒಬ್ಬನೇ ಮಗನಿರುವುದರಿಂದ .....
ಧಿಗಸ್ತು ಇಹೈಕಪುತ್ರತ್ವಂ ಅಪುತ್ರತ್ವಂ ವರಂ ಭವೇತ್|
ನಿತ್ಯಾತುರತ್ವಾತ್ ಭೂತಾನಾಂ ಶೋಕ ಏವೈಕಪುತ್ರತಾ||
ಥೂ...ಧಿಕ್ಕಾರವಿರಲಿ... ಹೀಗೇ ಒಬ್ಬನೇ ಮಗನಿರುವುದಕ್ಕಿಂತಲೂ ಮಕ್ಕಳಿಲ್ಲದಿರು ವುದೇ ಒಳ್ಳೆಯದಾಗಿತ್ತು ... ಒಬ್ಬನೇ ಮಗನಿದ್ದರೆ ಹೀಗೇ ಆಗುವುದು...ಹಾಗಾಗಿ ಈ ಒಬ್ಬನೇ ಮಗನಿಗಿಂತ ನಾನು ನೂರಾರು ಮಕ್ಕಳನ್ನು ಪಡೆಯಬೇಕು.. ಎಂದು ಚಿಂತಿ ಸಿದ...!! ಅದಕ್ಕಾಗಿ ಅನೇಕ ಬ್ರಾಹ್ಮಣರನ್ನು ಕೇಳಿದ...ಆಗ ಒಬ್ಬ ಬ್ರಾಹ್ಮಣ ರಾಜನೆ ದುರಿಗೆ ಬಂದು ಆಶೀರ್ವಾದ ಮಾಡಿ ಹೇಳಿದ....." ಮಹಾರಾಜಾ ನೀನು ನೂರು ಮಕ್ಕಳನ್ನು ಸಾಮಾನ್ಯವಾದ ದೇವತಾರ್ಚನೆಗಳಿಂದಲೋ ಯಜ್ಞ ಯಾಗಗಳಿಂದ ಲೋ ಸಾಧ್ಯವಿಲ್ಲ...! ಅದಕ್ಕೆ ಒಂದು "ಆಭಿಚಾರಿಕ" ವನ್ನು ಮಾಡಬೇಕು....ನೀನು ನಮ್ಮ ತಲೆಯನ್ನು ಉಳಿಸುವೆಯಾದರೆ ಅದು ಏನೆಂದು ತಿಳಿಸುತ್ತೇವೆ" ಎಂದರು.. ರಾಜ ಹೇಳಿ ಎಂದ. ಅಭಯವನ್ನೂ ಕೊಟ್ಟ..!!!! ಆಗ" ರಾಜಾ ನಿನಗೆ ನೂರು ಮಕ್ಕ ಳನ್ನು ಪಡೆಯಲೇ ಬೇಕೆಂಬ ಆಸೆಯಿದ್ದರೆ ನಾವು ಒಂದು ಆಭಿಚಾರಕ ಯಾಗವನ್ನು ಮಾಡಬೇಕಿದೆ. ಅದಕ್ಕಾಗಿ ಆ ಯಾಗದಲ್ಲಿ ಪಶುಬಲಿಯನ್ನು ಕೊಡುವ ಕ್ರಮದಲ್ಲಿ ಈಗ ನಿನಗೆ ಹುಟ್ಟಿರುವ ’ಜಂತು’ ವನ್ನೇ ಬಲಿಕೊಡಬೇಕು... ಅವನ ಶರೀರದಿಂದ ತೆಗೆದ ’ವಪೆ’ಯನ್ನು ಅಗ್ನಿಗೆ ಸಮರ್ಪಿಸಬೇಕು"...ಎಂದರು...!! ಇದನ್ನು ಕೇಳಿದ ರಾಜ ಸೋಮಕ ಒಂದರೆಘಳಿಗೆ ಮೂರ್ಛಿತನಾದ... ಶೈತ್ಯೋಪಚಾರದ ನಂತರ ಎದ್ದುಕು ಳಿತ ರಾಜ.. ಆ ಬ್ರಾಹ್ಮಣನಿಗೆ "ಹಾಗೇ ಆಗಲಿ" ಎಂದುಬಿಟ್ಟ... ಈ ಆಭಿಚಾರಿಕ ಕ್ರಿಯೆ ಎಂದರೆ ಪ್ರೆಶ್ಶರ್ ಕುಕ್ಕರಿನಲ್ಲಿ ತರಕಾರಿ ಬೇಯಿಸಿದಂತೆ... ವೇದ ಮಂತ್ರಗ ಳಿಗೆ ಬಾರದ ದೇವತೆಗಳನ್ನು ಬಲತ್ಕಾರವಾಗಿ ಯಜ್ಞವೇದಿಗೆ ಎಳೆದು ತಂದು ಅವರಿ ಗೆ ಹವಿಸ್ಸುಗಳನ್ನು ನೀಡಿ ಅವರನ್ನು ಒತ್ತಾಯದ ಮೇಲೆ ಒಲಿಸಿಕೊಂಡು ಅವರಿಂದ ಪ್ರಾಪ್ತಿಯನ್ನು ಮಾಡಿಕೊಳ್ಳುವುದು....!...

          ಯಾಗ ಪ್ರಾರಂಭವಾಯಿತು... ರಾಜ ಆ ಬ್ರಾಹ್ಮಣನನ್ನೇ ಮುಮ್ದಿಟ್ಟುಕೊಂಡು ಯಜ್ಞವನ್ನು ಪ್ರಾರಂಭಿಸಿಯೇ ಬಿಟ್ಟ...!! ಅವನಿಗೆ ನೂರು ಮಕ್ಕಳನ್ನು ಪಡೆಯಲೇ ಬೇಕು ಎಂಬ ಹಠ ಇತ್ತು... ಅದಕ್ಕೆ ಈ ಬ್ರಾಹ್ಮಣರೂ ತಮ್ಮ ಬ್ರಾಹ್ಮಣ್ಯವನ್ನು ಮಾರಿ ಕೊಂಡರು.. ಅಲ್ಲಿಗೆ ಮುಗಿಯಿತು..ಕಾರ್ಯಾಕಾರ್ಯವನ್ನು ಅರಿತೂ ಬ್ರಾಹ್ಮಣರು ಆಭಿಚಾರಿಕಕ್ಕೆ ಮೊದಲುಮಾಡಿದರು...!

ಯಜಸ್ವ ಜಂತುನಾ ರಾಜನ್ ತ್ವಂ ಮಯಾ ವಿತತೇ ಕ್ರತು

ತತಃ ಪುತ ಶತಂ ಶ್ರೀಮತ್ ಭವಿಷ್ಯತಿ ಅಚರೇಣತ್||


ವಪಾಯಾಮಾಹೂಯಮಾನಾಮ್ ಧೂಮಮಾಘ್ರಾಯ ಮಾತರ|

ತತಾಸು ಮಾಹಾ ವೀರ್ಯಾನ್ ಜನಿಷ್ಯಂತಿ ತೇ ಸುತಾನ್||
 ಆ ಹೋಮ ಧೂಮವನ್ನು ಆಘ್ರಾಣಿಸಿದರೆ ಆ ತಾಯಂದಿರು ಮಕ್ಕಳನ್ನು ಪಡೆಯು ತ್ತಾರೆ.. ಅದೂ ಈ ಬಾಲಕನನ್ನೇ ಹೋಲುವ ಮಗುವನ್ನು ಪಡೆಯುತ್ತಾರೆ...ಎಂದು ಬ್ರಾಹ್ಮಣರು ಅಭಯ ನೀಡಿದರು....ಆಗ ರಾಜ ಅನುಮಾನಿಸಿದ... ಅದಕ್ಕೆ ಬ್ರಾಹ್ಮಣ ರು ಈ ಮಗುವಿನ ಸೊಂಟದಲ್ಲಿರುವ ಕಪ್ಪು ಮಚ್ಚೆಯನ್ನೇ ನೆನಪಿಟ್ಟುಕೋ..ಅದೇ ಮಚ್ಚೆಯನ್ನು ನಿನಗೆ ಮುಂದೆ ಹುಟ್ಟುವ ನೂರು ಮಕ್ಕಳೂ ಹೊಂದಿರುತ್ತಾರೆ... ಎಂದೆ ಲ್ಲಾ ರಾಜನಿಗೆ ಧೈರ್ಯ ತುಂಬಿದರು...

ಈ ಆಭಿಚಾರಕವೆಂಬುದೇ ಒಂದು ಅಸಂಬದ್ಧ...! ಅದರಲ್ಲೂ ಮನುಷ್ಯನನ್ನೇ ಯಾಗ ದಲ್ಲಿ ಬಲಿಕೊಡುವುದು ಇನ್ನೂ ಹೊಲಸು ಕೆಲಸ... ಹಾಗಿದ್ದೂ ಈ ಬ್ರಾಹ್ಮಣರು ರಾಜ ನಿಂದ ಈ ಅಕಾರ್ಯಕ್ಕೆ ಮುಂದಾದರು.. ಇದನ್ನು ಹೇಳುವಾಗ ಹಿಂದೆ ಶ್ರೀಮನ್ನಾರ ಯಣನು ತನ್ನನ್ನೇ ತಾನು ಯಾಜಿಸಿಕೊಂಡಿಲ್ಲವೇ ಎಂದು ಮನದಲ್ಲಿ ವಿಚಾರ ಬರುತ್ತದೆ..ಆದರೆ ಅದು ಮಹಾ ಪುರುಷ ಯಜ್ಞ...!! ಅಲ್ಲಿ ಭಗವಂತ ತನ್ನನ್ನೇ ಹೋಮದಲ್ಲಿ ಸಮಿತ್ತಾಗಿ ಬಳಸಿಕೊಂಡು ಸೃಷ್ಟಿಕಾರ್ಯಕ್ಕೆ ಮುಂದಾಗುತ್ತಾನೆ..

ತಂ ಯಜ್ಞಂ ಬರ್ಹಿಷಿ ಪ್ರೋಕ್ಷನ್ ಪುರುಷಂ ಜಾತಮಗ್ರತಃ.......

ಬಘವಂತನ ನಾನಾತ್ವದಿಂದ ಈ ಜಗತ್ತು ಸೃಷ್ಟಿಸಲ್ಪಟ್ಟಿತು...
ಭಗವಂತನ  ನಾನಾತ್ವವನ್ನು ಏಕತ್ವದಲ್ಲಿ ಕಂಡುಕೊಳ್ಳುವುದು ಯಜ್ಞ  
ಬ್ರಾಹ್ಮಣೋ ಅಸ್ಯ ಮುಖಮಾಸೀತ್....ಬಾಹೂ ರಾಜನ್ಯಃ ಕೃತಃ!! ಭಗವಂತನ ಅಂಗಾಗಗಳೆಲ್ಲವೂ ಯಜ್ಞವಾಗಿ ಏಕತ್ರೀಕೃತವಾಗಿ ಬಹು ಮುಖವುಳ್ಳ ಈ ಸೃಷ್ಟಿಗೆ ಕಾರಣವಾಯಿತು..
ಆರಣ್ಯಾಃ ಪಶವಃ| ಗ್ರಾಮ್ಯಾಃ ಪಶವಃ| ಇತ್ಯಾದಿಯಾಗಿ  ಎಲ್ಲವೂ ಸೃಷ್ಟಿಯಾದವು...
            ಹೀಗೇ ಒಂದು ಯಜ್ಞವನ್ನು ಮಾಡಲು ಪ್ರಾರಂಭಿಸಿದ..ರಾಜ ಸೋಮಕ.. ಮಗನನ್ನು ಬಲಿಕೊಡುವ ಸಂದರ್ಭದಲ್ಲಿ ರಾಣಿಯರು ಬಿಕ್ಕಿ ಬಿಕ್ಕಿ ಅತ್ತರು..ರಾಜನ ಮೂಢತ್ವವನ್ನು ಜೆರೆದರು.. ಅಯ್ಯೋ ಬೇಡಾ..ಎಂದು ಆ ಮಗುವಿನ ಒಂದು ಕೈಯ್ಯ ನ್ನು ರಾಣಿಯರೂ..ಇನ್ನೊಂದನ್ನು ರಾಜನೂ ಹಿಡಿದು ಜಗ್ಗಾಡಿದರು.. ಕಣ್ಣೀರ ಧಾರೆ ಕೋಡಿಯಾಗಿ ಹರಿಯಿತು.... ಅಯ್ಯೋ ಮಕ್ಕಳನ್ನು ಪಡೆಯಬೇಕು ಎಂಬ ಆತುರದಲ್ಲಿ ಹುಟ್ಟಿದ ಮಗನನ್ನೇ ಬಲಿಕೊಡಲು ಮುಂದಾದೆಯಲ್ಲಾ ಅಯ್ಯೋ ಅಪುತ್ರಸ್ಯ ಗತಿರ್ನಾಸ್ತಿ ಎಂದು ಮೂಢವಾಗಿ ಆಲೋಚಿಸುತ್ತೀರಲ್ಲಾ ಎಂದು ಕೂಗಾಡಿದರು... .ಮಕ್ಕಳಿದವರು ಅನೇಕರು ಈ ಲೋಕದಲ್ಲಿ ಆಗಿ ಹೋಗಿದ್ದಾರೆ..ಅವರೆಲ್ಲರಿಗೂ ಸ್ವ ರ್ಗದ ಗತಿ ಸಿಗಲಿಲ್ಲವೇ... ಛೇ ಎಂಥಾ ದುರ್ಗತಿ ಬಂತಪ್ಪಾ ಎಂದು ಹೊಟ್ಟೆ ಬಡಿದು ಕೊಂಡು ಅತ್ತರೂ..ಕೊನೆಯಲ್ಲಿ ಆ ಮಗುವನ್ನು ಎಳೆದುಕೊಂಡ ರಾಜ ಒಬ್ಬನೇ ಮಗ ನಾದ ಜಂತುವನ್ನು ಬಲಿಕೊಟ್ಟೇಬಿಟ್ಟ....!.. ಹೋಮ ಧೂಮವನ್ನು ರಾಣಿಯರೆಲ್ಲರೂ ಆಘ್ರಾಣಿಸಿದರು... ಅಂತೂ ಒಂದು "ಆಭಿಚಾರಿಕ" ಬ್ರಾಹ್ಮಣನಿಂದ ನಡೆದೇ ಹೋಯಿತು....

ಹತ್ತು ತಿಂಗಳು ಬಳಿಕ ರಾಣಿಯರು ಒಂದೊಂದು ಗಂಡು ಮಗುವನ್ನು ಹಡೆದರು.. ಆ ಎಲ್ಲ ಮಕ್ಕಳೂ ಸೊಂಟದಲ್ಲಿ ಮಚ್ಚೆಯನ್ನು ಹೊಂದಿದ್ದರು.... ಅಂತೂ ರಾಜ ಹಸನ್ಮು ಖಿಯಾದ.... ಆದರೆ ಕೆಲವೇ ದಿನಗಳಲ್ಲಿ ಆ ಪುರೋಹಿತ ಸತ್ತುಹೋದ... ಮಾಡಬಾ ರದ್ದನ್ನು ಮಾಡಿ ನರಕಕ್ಕೆ ಹೋದ..... ಕೆಲವು ದಿನಗಳಲ್ಲೇ ರಾಜನೂ ಸತ್ತ.... ಸತ್ತ ರಾಜನ ಆತ್ಮ ನರಕದಲ್ಲಿ ತೊಳಲಾಡುತ್ತಿದ್ದ ಆ ಪುರೋಹಿತನ ಆತ್ಮವನ್ನು ನೋಡಿ ತು .. ಅಯ್ಯಾ.. ನೂರು ಜನ ಮಕ್ಕಳನ್ನು ನನಗೆ ಕೊಡಿಸುವುದಕ್ಕಾದ ನಿನಗೆ ಈ ನರಕದಿಂದ ಮುಕ್ತನಾಗುವುದಕ್ಕೆ ಆಗಲಿಲ್ಲವೇ ಎಂದು ರಾಜ ಪುರೋಹಿತನನ್ನು ಕೇಳಿದ...

ಇದನ್ನೇ..ಭಗವಂತ..ಗೀತೆಯಲ್ಲಿ ಹೇಳಿದ್ದು


ಇದು ಯಮಧರ್ಮ ಗೀತೆ...

ನಾನ್ಯಃ ಕರ್ತುಃ ಫಲಂ ರಾಜನ್ ಭುಭೂಂಕ್ತೇ ಕದಾಚನ|

ಇಮಾನಿ ತವ ದೃಷ್ಯಂತೇ  ಫಲಾನಿ ವದತಾಂ ವರ||
ಹೀಗೇ ಹೇಳುತ್ತಾ  ರಾಜ ಯಮನಿಗೆ ತಾನೂ ಈ ಬ್ರಾಹ್ಮಣನೊಟ್ಟಿಗೆ ಇಲ್ಲೇ ಇರು ತ್ತೇನೆ ಎಂದು ಹಠ ಹಿಡಿದ.. ಇದನ್ನು ಕೇಳಿದ ಯಮಧರ್ಮ ಕೊನೆಗೆ ಇಬ್ಬರನ್ನೂ ಸ್ವರ್ಗಕ್ಕೆ ಕಳುಹಿಸಿದ... 
ಬ್ರಾಹ್ಮಣನಾದವನು ರಾಜನಿಗೆ ಸರಿಯಾದ ಮಾರ್ಗವನ್ನು ತಿಳಿಸಿದ್ದರೆ ಈ ನರಕ ದರ್ಶನಯೋಗವಿರಲಿಲ್ಲ.. ಬ್ರಾಹ್ಮಣನಿಗೆ ತುಂಬಾ ಕರ್ಮ ಕಾಠಿಣ್ಯವಿದೆ.. ತಿಳಿದೂ ತಪ್ಪನ್ನು ಬ್ರಾಹ್ಮಣನಾದವನು ಮಾಡಿದನಾದರೆ ಅವನಿಗೆ ಲೋಕೋತ್ತರದಲ್ಲೂ ಒಳ್ಳೆಯದಾಗುವುದಿಲ್ಲ ಎಂಬ ಕಥೆಯನ್ನು ಧರ್ಮರಾಜನಿಗೆ ಹೇಳಿದ ಲೋಮಶರು ಧರ್ಮರಾಜನನ್ನು ಮುಂದಿನ ತೀರ್ಥಕ್ಷೇತ್ರದ ಕಡೆಗೆ ಕರೆದುಕೊಂಡು ಹೋದರು....

ಬುಧವಾರ, ಆಗಸ್ಟ್ 6, 2014

ಋಷ್ಯಶೃಂಗ...

         ಕೌರವನ ಕಪಟ ದ್ಯೂತದಿಂದಾಗಿ ವನವಾಸಕ್ಕೆ ತೆರಳಿದ ಪಾಂಡವರು ದಾರಿಯಲ್ಲಿ ಎದುರಾದ ಅನೇಕ ಋಷಿ ಮುನಿಗಳ ಸಲಹೆಯಂತೆ ಅಲ್ಲಲ್ಲಿ ತಿರುಗಾಡಿ ಒಂದು ಸುಂದರವಾದ ಕಾಡಿನ ಮಧ್ಯಕ್ಕೆ ಬರುತ್ತಾರೆ. ಅಲ್ಲಿ ಮಹಾಮುನಿ ಲೋಮಶರು ಧರ್ಮರಾಜನಿಗೆ ಈ ವನವಾಸದ ಅವಧಿಯಲ್ಲಿ ನೋಡಬಹುದಾದ ಅನೇಕ ತೀರ್ಥ ಕ್ಷೇತ್ರಗಳ ವಿಚಾರವನ್ನು ತಿಳಿಸುತ್ತಾ ಒಂದೊಂದೇ ತೀರ್ಥ ಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಾರೆ ಮತ್ತು ಅಲ್ಲಿಯ ಮಹಿಮೆಯನ್ನು ಧರ್ಮರಾಜನಿಗೆ ಪಂಥಾಯಾಸ ಶಮನಕ್ಕಾಗಿ ಹೇಳುತ್ತಾರೆ...
ಹೀಗೇ ಅಗಸ್ತ್ಯ ತೀರ್ಥವನ್ನು ಸಂದರ್ಶಿಸಿ ಮುಂದೆ ತೆರಳುತ್ತಿದ್ದಾಗ ಅಲ್ಲೊಂದು ಸುಂದರವಾದ ತೀರ್ಥ ಕಾಣುತ್ತದೆ.. ಧರ್ಮರಾಜ ಈ ತೀರ್ಥ ಕ್ಷೇತ್ರದ ಮಹಿಮೆಯನ್ನು ವಿಸ್ತರಿಸಿ ಹೇಳುವಂತೆ ಲೋಮಶರನ್ನು ಕೇಳುತ್ತಾನೆ.. ಈ ಕಥೆಯು ಅತ್ಯಂತ ಗಂಭೀರವಾದ ಮಹಾಭಾರತ ಕಥಾನಕವನ್ನು ಹೆಣೆದ ವೇದವ್ಯಾಸರ  ಮತಿಯಿಂದ ಹೊರಬಂದ ಒಂದು ಅತಿ ಶೃಂಗಾರ ಮತ್ತು ತುಂಬ ಮನೋಹರವಾದ ಹಾಸ್ಯ ಕಥಾನಕವಾಗಿದೆ.
****************************************************
          "ಯುಧಿಷ್ಠಿರಾ... ಬಹಳ ಹಿಂದೆ ಈ ಭಾರತ ಭೂ ವರ್ಷದಲ್ಲಿ ರೋ( ಲೋ) ಮಪಾದ ಎಂಬ ಹೆಸರಿನ ಓರ್ವ ಅತಿ ಕ್ರೂರಿಯಾದ ರಾಜನಿದ್ದ... ಅವನು ಬ್ರಾಹ್ಮಣದ್ವೇಶಿಯಾಗಿದ್ದ..ಅವನಿಗೆ ಅಂಗಾಲುಗಳಲ್ಲಿಯೂ ರೋಮಗಳಿದ್ದುದರಿಂದ  ಆ ಹೆಸರು ಅನ್ವರ್ಥವಾಗಿ ಬಂದಿತ್ತು. ಹಿಂದೆ ಬ್ರಾಹ್ಮಣನೊಬ್ಬನಿಗೆ ಯಾವುದೋ ಕೆಲಸವನ್ನು ಮಾಡಿಕೊಡುತ್ತೇನೆ ( ತೇನ ಕಾಮಾತ್ ಕೃತಂ ಮಿಥ್ಯಾ ಬ್ರಾಹ್ಮಣಸ್ಯೇತಿ ನ ಶ್ರುತಿಃ|) ಎಂದು ನಂಬಿಸಿ ಮೋಸ ಮಾಡಿದ್ದರಿಂದ ಆ ದೇಶದಲ್ಲಿರುವ ಬ್ರಾಹ್ಮಣರೆಲ್ಲರೂ ದೇಶವನ್ನು ಬಿಟ್ಟು ಹೊರನಡೆದರು. "ಸಬ್ರಾಹ್ಮಣೈಃ ಪರಿತ್ಯಕ್ತಃ ತತೋ ವೈ ಜಗತಃ ಪತಿಃ ಪುರೋಹಿತಾಪಚಾರಾಚ್ಚ ತಸ್ಯ ರಾಜ್ಞೋ ಯದೃಚ್ಛಯಾ||  ಈ ಘಟನೆಯಿಂದ ಗಾಬರಿಯಾದ ರೋಮಪಾದ. 
. ಆಗ ತನ್ನ ಪುರೋಹಿತರನ್ನು ಕರೆಸಿ ಕೇಳಿದ ಯಾಕೆ ಬ್ರಾಹ್ಮಣರೆಲ್ಲಾ ನನ್ನ ದೇಶವನ್ನು ಬಿಟ್ಟು ಹೋದರು.. ಆಗ ಆ ಪುರೋಹಿತರೂ ಈ ರೋಮ ಪಾದನನ್ನು ಹಳಿದರು.. ಛೀ.. ನೀನು ಮಾಡಿದ ಪಾಪ ಕಾರ್ಯದಿಂದಾಗಿ ಹೀಗಾಗಿದೆ ಎಂದರು... ಅದನ್ನು ಕೇಳಿ ಪುರೋಹಿತರ ಮೇಲೂ ಕೋಪಗೊಂಡ ರಾಜ ಅವರನ್ನೂ ಹೊರ ಹಾಕಿದ.. ಬೇರೆ ದೇಶದಿಂದ ಬ್ರಾಹ್ಮಣರನ್ನು ಕರೆತರಬೇಕೆಂದು ಆಲೋಚಿಸಿದ. ಆದರೆ ಆ ಎಲ್ಲಾ ಬ್ರಾಹ್ಮಣರು ರಾಜನನ್ನು ಹಳಿದರು.. ಆಗ ಚಿಂತಾಕ್ರಾಂತನಾದ ರಾಜ.. ರಾಜ್ಯದಲ್ಲಿ ಮಳೆ ಬೆಳೆಗಳು ಆಗಲಿಲ್ಲ.. ಬ್ರಾಹ್ಮಣರು ಬಾಳದ ಭೂಮಿಯಲ್ಲಿ ಏನೂ ಆಗಲಾರದು ಎಂಬುದನ್ನರಿತ ರಾಜ ಲೋಮಪಾದ ಹೇಗಾದರೂ ಮಾಡಿ ಬ್ರಾಹ್ಮಣರನ್ನು ಈ ರಾಜ್ಯಕ್ಕೆ ಕರೆತಂದು ಬಾಳುಗೊಡಬೇಕು ಎಂದುಕೊಂಡ... ಆಗ ಯಾರೋ ರಾಜನಿಗೆ ಒಂದು ಸಲಹೆಯನ್ನಿತ್ತರು.... " ರಾಜಾ ವಿಭಾಂಡಕ ಎಂಬ ಮುನಿಯ ಮಗನೊಬ್ಬನಿದ್ದಾನೆ ಆ ವಿಭಾಂಡಕ ಮುನಿಯೋ ಮಹಾನ್ ಕೋಪಿಷ್ಠ..! ಅವನ ಮಗನೇ ಋಷ್ಯಶೃಂಗ..!! ಲೋಕದ ಯಾವ ಜ್ಞಾನವೂ ಇಲ್ಲದೇ ದಷ್ಟಪುಷ್ಟವಾಗಿ ಗಡವನಂತೆ ಬೆಳೆದುಕೊಂಡಿದ್ದಾನೆ.. ಕಟ್ಟುಮಸ್ತಾದ ದೇಹವಿದ್ದರೂ ಯಾವ ಪ್ರಯೋಜನವೂ ಇಲ್ಲ... ಆದರೆ ಅವನ ಪಾದದಲ್ಲಿ ಕ್ಷೇಮ ಚಕ್ರವಿದೆ..!! ಇದರಿಂದಾಗಿ ಅವನು ಯಾವ ಪ್ರದೇಶದಲ್ಲಿ ಕಾಲಿಡುತ್ತಾನೋ ಆ ಪ್ರದೇಶದಲ್ಲಿ ಮಳೆ ಬೆಳೆಗಳು ಉಂಟಾಗುತ್ತವೆ.. ಹಾಗಾಗಿ ಅವನನ್ನು ಕರೆಸು.. ಕ್ಷೇಮವಾಗುತ್ತದೆ ಅಲ್ಲದೇ ನಿನಗೊಬ್ಬಳು ಮಗಳಿದ್ದಾಳಲ್ಲಾ ಅವಳನ್ನು ಅವನಿಗೇ ಕೊಟ್ಟು ಮದುವೆಮಾಡಿ ನಿನ್ನ ರಾಜ್ಯದಲ್ಲಿಯೇ ಇಟ್ಟುಕೋ. (ಹೌದು ಅವನಿಗೊಬ್ಬ ಸಾಕುಮಗಳಿದ್ದಳು.. ಅವಳು ಶಾಂತಾ..! ದಶರಥನ ಮುನ್ನೂರೈವತ್ಮೂರು ಪತ್ನಿಯರಲ್ಲಿ ಯಾವಳಲ್ಲಿಯೋ ಹುಟ್ಟಿದ ಕೂಸು.. ಅದನ್ನು ಈ ರೋಮಪಾದನಿಗೆ ದಶರಥನೇ ದತ್ತಕಕ್ಕೆ ಕೊಟ್ಟಿದ್ದ...!!) ಎಂದು ಸಲಹೆಯನ್ನಿತ್ತ.. ಅದನ್ನು ಕೇಳಿದ ರೋಮಪಾದ.. ಕೂಡಲೇ ಆ ಋಷ್ಯಶೃಂಗನನ್ನು ತನ್ನ ರಾಜ್ಯಕ್ಕೆ ಕರೆಸುವ ಸಲುವಾಗಿ ಉಪಾಯಗಳನ್ನು ಹುಡುಕತೊಡಗಿದ..
 ಈ ವಿಭಾಂಡಕನ ಪುತ್ರನೋ.. ಅವನಿಗೊಬ್ಬನೇ ಮಗ.. ಬೇರೆ ಯಾರೂ ಬಂಧುಗಳಿಲ್ಲ.. ಈ ವಿಭಾಂಡಕರೋ.. ಮಹಾ ಬ್ರಾಹ್ಮಣ.. ಕಾಶ್ಯಪ ಗೋತ್ರದಲ್ಲಿ ಜನಿಸಿದ ಇವರು ಅದೇ ಅಂಗ ದೇಶದ ಪಕ್ಕದ ದೇಶದಲ್ಲಿ ತಮ್ಮ ಆಶ್ರಮವನ್ನು ಕಟ್ಟಿಕೊಂಡು ಶಿಷ್ಯಂದಿರಿಗೆ ವೇದೋಪದೇಶಗಳನ್ನು ಮಾಡುತ್ತಾ ಕಾಲಕಳೆಯುತ್ತ ಇದ್ದವರು... ಒಂದು ದಿನ ಸಮಿತ್ತುಗಳನ್ನು ಕಡಿಯುವುದಕ್ಕಾಗಿ ಮರವನ್ನೇರಿದ್ದ ವಿಭಾಂಡಕರು ಅದೇ ದಾರಿಯಲ್ಲಿ ದೇವಲೋಕದ ಅಪ್ಸರೆ ಊರ್ವಶಿ ಹಾದುಹೋಗುವುದನ್ನು ಗಮನಿಸಿದರು  ಕಾಮೋತ್ತೇಜಿತರಾದರು.. ಅದರಿಂದ ಅವರ ಶರೀರದಿಂದ ಹೊರಬಂದ ರೇತಸ್ಸು ಅಲ್ಲೇ ಕೆಳಗೆ ಓಡಾಡಿಕೊಂಡಿದ್ದ ಒಂದು ಜಿಂಕೆಯ ಕೋಡಿನ ಮೇಲೆ ಬಿತ್ತು....!! ಕೂಡಲೇ ಆ ಜಿಂಕೆಯು ಗರ್ಭ ಧರಿಸಲಾಗಿ ಆ ಜಿಂಕೆಯ ಹೊಟ್ಟೆಯಲ್ಲಿ ಹುಟ್ಟಿಬಂದ ಮಾನವರೂಪಿ ಶಿಶು...!!! ಜಿಂಕೆಯ ಗರ್ಭದಲ್ಲಿ ಬೆಳೆದುದರಿಂದ ಹುಟ್ಟಿದ ಶಿಶುವು ಜಿಂಕೆಯಂತೆ ಎರಡು ಕೊಂಬುಗಳನ್ನು ಹೊಂದಿತ್ತು.. ಆದ್ದರಿಂದ ಆ ಶಿಶುವಿಗೆ "ಋಷ್ಯಶೃಂಗ" ಎಂದು ನಾಮಕರಣ ಮಾಡಿದರು ವಿಭಾಂಡಕರು...!!!    ಅವನ ಮೇಲೆ ಅತಿಯಾದ ವ್ಯಾಮೋಹ..  ಆಳೆತ್ತರಕ್ಕೆ ಬೆಳೆದು ನಿಂತಿದ್ದರೂ  ಲೋಕದ ಹೊರ ಪರಿಚಯವೇ ಆಗದಂತೆ ಬೆಳೆಸಿಬಿಟ್ಟಿದ್ದ... ಪ್ರಾಯ ಪ್ರಭುದ್ಧನಾಗಿದ್ದರೂ ಸ್ತ್ರೀಯರನ್ನು ಕಣ್ಣಿನಿಂದಲೇ ನೋಡಿರಲಿಲ್ಲ..!! ಸ್ತ್ರೀ ಕುಲದ ಯಾವ ಪರಿಚಯವೂ ಅವನಿಗಿದ್ದಿಲ್ಲ..!!
ತನ್ನ ಮಗನಿಗೆ ವೇದಜ್ಞಾನವನ್ನು ಬಿಟ್ಟು ಬೇರೇನೂ ಗೊತ್ತಾಗಬಾರದೆಂದು ಅದ್ಭುತವಾದ ಬ್ರಹ್ಮಚಾರಿಯಾಗಿ ಬಾಳಬೇಕು ತನ್ನ ಮಗ ಎಂದು.. ಈ ರೀತಿಯಾಗಿ ಬೆಳೆಸಿದ್ದರು..!! "ಸತೇನ ದ್ರಷ್ಟಪೂರ್ವೋನ್ಯಃ ಪಿತೃರನ್ಯತ್ರ ಮಾನುಷಃ| ತಸ್ಮಾತ್ತಸ್ಯ ಮನೋನಿತ್ಯಂ ಬ್ರಹ್ಮಚರ್ಯ ಭವನೃಪ||  ಆಜನ್ಮ ಬ್ರಹ್ಮ ಚಾರಿಯಾಗಿ ಬದುಕಬೇಕು, ತನ್ನಮಗನಿಗೆ ಸ್ತ್ರೀ ದರ್ಶನವೇ ಆಗಬಾರದು ಎಂಬಂತೆ ಬೆಳೆಸಿದ್ದರು..!! ತಾವು ಹೊರಗೆ ಹೋಗುವಾಗಲೂ ತನ್ನ ಮಗನನ್ನು ಆಶ್ರಮದೊಳಗೆ ಕೂಡಿಹಾಕಿ ಹೋಗುತ್ತಿದ್ದರು.. ಆದ್ದರಿಂದ ಋಷ್ಯಶೃಂಗನಿಗೆ ಯಾವುದರ ಪರಿವೆಯೂ ಇರಲಿಲ್ಲ...!!
          ಉಪಾಯವನ್ನು ಹುಡುಕುತ್ತಿದ್ದ ರೋಮಪಾದನಿಗೆ ಈ ಋಷ್ಯಶೃಂಗನನ್ನು ಕರೆಸುವುದು ಹೇಗೆಂದು ಚಿಂತೆಯಾಯಿತು. ಹಲವಾರು ಜನರನ್ನು ಕೇಳಿದ.. ಆ ಋಷಿಕುಮಾರನನ್ನು ಕರೆಸಿಕೊಡಿ ಎಂದು.. ಆದರೆ ವಿಭಾಂಡಕರ ಕೋಪದ ಅರಿವಿದ್ದ ಬ್ರಾಹ್ಮಣರು ಯಾರೂ ಅವನನ್ನು ಕರೆತರಲು ಒಪ್ಪಲಿಲ್ಲ... ಕೇಳಿದಷ್ಟು ಧನಕನಕಗಳನ್ನು ಕೊಡುತ್ತೇನೆಂದರೂ ಆಗದೆಂದರು ಬ್ರಾಹ್ಮಣರು.... ಹೀಗೇ ಕಾಲಯಾಪನೆ ಮಾಡುತ್ತಿರುವಾಗ ಓರ್ವ ಬ್ರಾಹ್ಮಣ ಒಂದು ಸಲಹೆಯನ್ನು ಕೊಟ್ಟ.. !!!   ಅದೇನೆಂದರೆ ರಾಜಗಣಿಕೆಯರ ಸಹಾಯವನ್ನು ಪಡೆದುಕೊಳ್ಳುವುದು...!!! ವಾರಾಂಗನೆಯರನ್ನು ಅವನಲ್ಲಿಗೆ ಕಳಿಸು... ಎಂದ.. ಅದರಂತೆ ಆಸ್ಥಾನದ ವೇಶ್ಯೆಯರನ್ನೆಲ್ಲಾ ರಾಜ ತನ್ನೆದುರಿಗೆ ಕರೆಸಿದ...! ಆದರೆ ಯಾವ ಗಣಿಕೆಯೂ ಈ ಕೆಲಸಕ್ಕೆ ಒಲ್ಲೆ  ಎಂದು ಒಪ್ಪಲಿಲ್ಲ..ಅವರಿಗೂ ಈ ವಿಭಾಂಡಕನ ಪರಿಚಯವಿತ್ತು..ಅವನ ಕೋಪದ ಅರಿವಿತ್ತು..!! ಆಗ ರಾಜ ಅವರಮೇಲೂ ಸಿಟ್ಟಾಗಿ ನಿಮಗೆಲ್ಲಾ ಪಿಂಡಹಾಕಿ ಸಾಕಿದ್ದು ವ್ಯರ್ಥವಾಯಿತು ಎಂದು ಗದರಿದ..!! ಅಷ್ಟರಲ್ಲಿ ಅಲ್ಲಿಯೇ ಇದ್ದ ಓರ್ವ ಮುದುಕಿಯಾದ  ವೇಶ್ಯೆಯು ಮುಂದೆ ಬಂದಳು "ರಾಜಾ.... ನಾನು ಹೋಗುತ್ತೇನೆ...!! ಆ ಬ್ರಾಹ್ಮಣ ವಟುವನ್ನು ಹೇಗಾದರೂ ಮಾಡಿ ನಿನ್ನ ರಾಜ್ಯಕ್ಕೆ ಕರೆತರುತ್ತೇನೆ ... ಆದರೆ ನನಗೆ ಕೆಲವು ಸೋಪಸ್ಕರಗಳನ್ನು ಹೊಂದಿಸಿಕೊಡಬೇಕು" ಎಂದಳು. "ಏನು?" ಎಂದ ರಾಜ. " ರಾಜಾ.. ನನಗೆ ಒಂದು ನೀರಿನಲ್ಲಿ ಓಡಾಡಬಹುದಾದ  ದೊಡ್ಡ ನಾವೆಯನ್ನು ತರಿಸಿಕೊಡು.. ಅದು ಹೇಗಿರಬೇಕೆಂದರೆ..... ಅದರಲ್ಲಿ ಹಲವು ಜನ ವೇಶ್ಯಾ ಸ್ತ್ರೀಯರು ವಾಸಮಾಡುವುದಕ್ಕಾಗಿ ಪ್ರತ್ಯೇಕವಾದ ಕೊಠಡಿಗಳಿರಬೇಕು.. ಕೊಠಡಿಗಳ ಸುತ್ತಲೂ ಕೃತಕವಾದ ಗಿಡಮರಗಳು ಇರಬೇಕು ಅದು ಹೂವು ಹಣ್ಣುಗಳಿಂದ ತುಂಬಿ ತೊನೆಯುತ್ತಿರಬೇಕು".....??????!! ರಾಜ ಒಪ್ಪಿದ. ದೋಣಿ ಸಿದ್ಧವಾಯಿತು.. ತನಗೆ ಬೇಕಾದ ಅನೇಕ  ಸುಂದರ ಸ್ತ್ರೀಯರನ್ನು ಅದರಲ್ಲಿ ತುಂಬಿಕೊಂಡು ಆ ಮುದುಕಿ ಹೊರಟಳು.. ಗಂಗಾ ನದಿಯಲ್ಲಿ... ಹೀಗೇ ಅನೇಕ ದಿನಗಳು ಕಳೆದವು..ಪ್ರತಿದಿನವೂ ಬೇಕಾದ ಅಲಂಕಾರಗಳನ್ನು ಮಾಡಿಕೊಂಡು ಈ ವಿಭಾಂಡಕರ ಆಶ್ರಮವನ್ನು ಹುಡುಕುತ್ತಾ ಸಾಗಿದರು... ಅಂತೂ ಮುನಿಯ ಆಶ್ರಮದಿಂದ ತುಸು ದೂರದಲ್ಲಿ ದೋಣಿ ಬಂದು ತಲುಪಿತು... ಆದರೆ ಅಲ್ಲಿ ಮುನಿಯಾಶ್ರಮ ಯಾವುದೆಂದು ವಿಚಾರಿಸುವಂತಿರಲಿಲ್ಲ..!! ತಿಳಿದರೆ ಸುಟ್ಟುಬಿಡುತ್ತಾನೆ.. ಹಾಗಾಗಿ ಅಲ್ಲಿಯೇ ಸುತ್ತಾಡುತ್ತಾ ಆಶ್ರಮ ಆಶ್ರಮಗಳನ್ನು ಜಾಲಾಡುತ್ತಾ ಇರುವಾಗ.. ಒಂದು ಆಶ್ರಮ ಈ ಗಣಿಕಾ ಸ್ತ್ರೀಯರ ಕಣ್ಣಿಗೆ ಬಿತ್ತು.. ಅಲ್ಲಿರುವ ಮುನಿಯೋರ್ವ ಪ್ರತಿದಿನವೂ ತನ್ನ ಮಗನನ್ನು ಒಳಗೆ ಕೂಡಿಹಾಕಿ ತಾನು ಯಜ್ಞಕಾರ್ಯಾರ್ಥವಾಗಿ ಹೊರಗೆ ಸಂಚಾರಕ್ಕೆ ತೆರಳುತ್ತಿದ್ದ...!
..... ಹಲವು ದಿನಗಳ ಕಾಲ ಮುನಿಯ ಚಲನವಲನಗಳನ್ನು ಅಭ್ಯಾಸಮಾಡಿದ ಈ ವೇಶ್ಯಾ ಸ್ತ್ರೀಯರು ಒಂದು ದಿನ ಮುನಿಯು ಹೊರ ಸಂಚಾರಕ್ಕೆ ಹೋದ ಸಂದರ್ಭದಲ್ಲಿ ಓರ್ವ ಯುವತಿಯನ್ನು ಅವನ ಆಶ್ರಮದ ಸಮೀಪಕ್ಕೆ ಕಳುಹಿದಳು ಆ ವೃದ್ಧೆ..!! ಆ ಯುವತಿಯೋ ಮಹಾ ವಾರಾಂಗನೆ.. ಆ ಮುನಿಯ ಆಶ್ರಮಕ್ಕೆ ಸಮೀಪ ಹೋದಳು ಕಿಟಕಿ ಸಂದಿಯಿಂದ ಬಗ್ಗಿ ನೋಡಿದಳು... ಅಲ್ಲೊಬ್ಬ ಯುವಕ ಒಳಗೆ ಕುಳಿತುಕೊಂಡು ವೇದಾಧ್ಯಯನದಲ್ಲಿ ನಿರತನಾಗಿದ್ದ... ನೋಡುವುದಕ್ಕೆ ತುಂಬ ಸುಂದರನೂ ಆಗಿದ್ದ...!! ಅವನೂ  ಅತ್ತ ಕಿಟಕಿಯಲ್ಲಿ ನೋಡಿದ...!! ಯಾರೋ ನಿಂತಂತಿದೆಯಲ್ಲಾ ಎಂದು "ಯಾರು"? ಎಂದ... ಆಗ ಈ ಯುವತಿ ತಡ ಮಾಡದೇ ಉತ್ತರಿಸಿದಳು.. "ನಾನೂ ನಿಮ್ಮಂತೆ ಒಂದು ಋಷಿಯಾಶ್ರಮದವಳು...!!"  ಅಯ್ಯೋ ಇದೇನಿದು ಈ ರೀತಿಯಲ್ಲೂ ಋಷಿಗಳು ಇರುತ್ತಾರಾ...?" ಎಂದು ಕೇಳಿದ.. ಅದಕ್ಕವಳು ತಲೆಯಾಡಿಸಿದಳು..!! ಕೂಡಲೇ ಅವಳಿಗೆ ನಮಸ್ಕರಿಸುವುದಕ್ಕೆ ಮುಂದಾದ... ಛೇ  ಛೇ.. ಹಾಗೆಲ್ಲಾ ಮಾಡಬಾರದು.. ಅದು ನಮ್ಮ ಪದ್ಧತಿಯಲ್ಲ.. ನಮ್ಮಲ್ಲಿ ಹೀಗೆಲ್ಲಾ ಅಭಿವಾದನ ಮಾಡುವುದಿಲ್ಲ..! " ಹಾಗಾದರೆ ನಿಮ್ಮ ಪದ್ಧತಿ ಹೇಗೆ..? ಎಂದು ವಿಚಾರಿಸಿದ.. ಅದಕ್ಕವಳು.." ನಮ್ಮ ಆಶ್ರಮ ಪದ್ಧತಿ ಎಂದರೆ  ತಬ್ಬಿಕೊಳ್ಳುವುದೇ ಅಭಿವಾದನ...! ಮುತ್ತಿಕ್ಕುವುದೆ ಆಶೀರ್ವಾದ...!! (ವಯಸ್ಸಿಗೆ ಬಂದ ಯುವಕನೊಬ್ಬನಿಗೆ ಕಾಮೋದ್ರೇಕವಾ ಗುವುದಕ್ಕೆ ಏನೇನು ಮಾತುಗಳನ್ನು ಆಡಬೇಕೋ ಅದನ್ನೆಲ್ಲಾ ಹೇಳುತ್ತಾಳೆ...!!) ಹೀಗೆ ಹೇಳುತ್ತಾ ಕ್ಷೇಮ ಸಮಾಚಾರವನ್ನೆಲ್ಲಾ ಹೊರಗಿನಿಂದಲೇ ವಿಚಾರಿಸಿದಳು.. ಅದನ್ನು ಕೇಳಿದ ಋಷ್ಯಶೃಂಗನಿಗೆ ಯಾರೋ ಪರಿಚಿತರೇ ಇರಬೇಕು ಎಂದುಕೊಂಡು ಬಾಗಿಲನ್ನು ತೆರೆದ..!

      ಕೂಡಲೇ ಒಳ ಬಂದ ಆ ಯುವತಿ ಅವನ ಸಮೀಪದಲ್ಲೇ ಬಂದು ನಿಂತಳು..! ಅವಳ ದಿವ್ಯವಾದ ಶರೀರವನ್ನು ನೋಡಿದ ಋಷ್ಯಶೃಂಗ ಅವಳನ್ನು ಯಾವುದೋ ಋಷಿಕುಮಾರನೆಂದೇ ಭಾವಿಸಿ ಮಾತನಾಡತೊಡಗಿದ....!! ಋಧ್ಯಾ ಭವಾನ್ ಜ್ಯೋತಿರಿತಿ ಪ್ರಕಾಶತೇ......."ಅರೆರೇ.. ಏನು ಸುಂದರಾಂಗನಯ್ಯಾ ನೀನು.. ನಿನ್ನ ಈ ದಿವ್ಯವಾದ ಶರೀರವನ್ನು ನೋಡಿದರೆ ಒಳ್ಳೇ ತೇಜಸ್ವಿಯ ಹಾಗೇ ಕಾಣುತ್ತೀಯಾ.. ನಿನ್ನನ್ನು ನೋಡುತ್ತಿದ್ದರೆ ನಿನ್ನ ಕಾಲುಗಳನ್ನು ತೊಳೆದು ನಿನಗೆ ನಮಸ್ಕಾರಗಳನ್ನು ಮಾಡಬೇಕೆನ್ನಿಸುತ್ತಿದೆ...!! ಕುಮಾರಾ...!! ಬಾ ಇದೋ ಇಲ್ಲಿ ದರ್ಭಾಸನವಿದೆ ಕುಳಿತುಕೋ.. ತಿನ್ನಲು ನಮ್ಮ ವನದಲ್ಲಿ ಬೆಳೆದ ಹಣ್ಣುಗಳಿವೆ ಸೇವಿಸು" ಎಂದೆಲ್ಲ ಬಡಬಡಿಸುತ್ತಾನೆ. ಹೀಗೇ ಕೇಳುತ್ತಾ "ನಿನ್ನ ಆಶ್ರಮವೆಲ್ಲಿ ಯಾವ ನಿಷ್ಠೆಯನ್ನು ಹೊಂದಿದ್ದೀಯಾ.. " ಎಂದು ಕೇಳಿದ..ಅದಕ್ಕವಳು ಇಲ್ಲೇ ಪಕ್ಕದಲ್ಲಿ ಎಂದು ಉತ್ತರಿಸಿದಳು...  "ಹಾಗಾದರೆ ನಿಮ್ಮ ಕಾಲುಗಳನ್ನು ತೊಳೆದು ಅಭಿವಾದನ ಮಾಡುತ್ತೇನೆ.."ಎಂದ.  ಅದಕ್ಕವಳು "ಛೇ ಛೇ.. ಇದು ನಮ್ಮ ಕ್ರಮವಲ್ಲ.. ನಾವು ಬ್ರಾಹ್ಮಣರಿಂದ ಕಾಲು ತೊಳೆಸಿಕೊಳ್ಳುವುದಿಲ್ಲ...!( ವೇಶ್ಯೆಯಾದರೂ ಬ್ರಾಹ್ಮಣರಿಂದ ಕಾಲು ತೊಳೆಸಿಕೊಳ್ಳಬಾರದೆಂಬ ಪ್ರಜ್ಞೆ...!! )  "ನಾನೇ ನಿನಗೆ ಕಾಲು ತೊಳೆದು ಅಭಿವಾದನ ಮಾಡಬೇಕು..!!( ಅಭಿವಾದನ...!!) ಹೀಗೇ ಹೇಳುತ್ತಾ ಇದು ನಮ್ಮ ವ್ರತ ಎಂದು ಅವನನ್ನು ತಬ್ಬಿಕೊಂಡಳು...!! ಆಗ ಅವನ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು.. ಇಂಥಾ ಅಭಿವಾದನವನ್ನು ಜನ್ಮದಲ್ಲಿಯೇ ಕಂಡಿಲ್ಲವಲ್ಲಾ..!! ಇನ್ನೊಮ್ಮೆ ಹೀಗೇ ಅಭಿವಾದನ ಮಾಡು ಎಂದ..!! ಆಮೇಲೆ ಅವಳು ಹೇಳಿದಳು.." ಇದೋ ಈ ಫಲಗಳನ್ನು ಸ್ವೀಕರಿಸು ಇವು ನಮ್ಮ ತೋಟದಲ್ಲಿ ಬೆಳೆದವು.. ನಿಮ್ಮಾಶ್ರಮದ ಫಲಗಳನ್ನು ಸ್ವೀಕರಿಸುವಂತಿಲ್ಲ ನಾವು.. ನಮ್ಮ ತೋಟದ ಹಣ್ಣುಗಳನ್ನು ನಿನಗೆ ಕೊಡುತ್ತಿದ್ದೇನೆ " ಎಂದು ತಾನು ತಂದ ಹಣ್ಣುಗಳನ್ನು ಅವನಿಗೆ ಕೊಟ್ತಳು.. ಅದನ್ನೆಲ್ಲ ಋಷ್ಯಶೃಂಗ ತಿಂದ... ಅಪರಿಚಿತವಾದ ಅನೇಕ ಫಲಗಳನ್ನು ತಾನು ಇದುವರೆಗೂ ತಿಂದೇ ಇರಲಿಲ್ಲ...! ನಮ್ಮಪ್ಪನಿಗೆ ಇವೆಲ್ಲಾ ಗೊತ್ತೇ ಇಲ್ಲ..!! ನಮ್ಮ ತೋಟದಲ್ಲಿ ಇವನ್ನೆಲ್ಲಾ ಬೆಳೆಸಿಯೇ ಇಲ್ಲ..!!  ಹೀಗೇ ಅವರಿಬ್ಬರೂ ಹಣ್ಣುಗಳನ್ನು ತಿಂದರು.. ಅಲ್ಲದೇ ವಿಶೇಷವಾದ ಪೇಯಗಳನ್ನು ತಂದಿದ್ದೇನೆ ಎಂದು ಅನೇಕ ಬಗೆಯ ಪಾನೀಯಗಳನ್ನು ಕುಡಿಸಿದಳು... ಅಲ್ಲದೇ                





















ಮುಂದುವರೆಯುತ್ತದೆ.......

ಬುಧವಾರ, ಜುಲೈ 30, 2014

ಕ್ಷಮಾ ಬಲಮ್|

"ಬ್ರಾಹ್ಮಣಾನಾಂ ಕ್ಷಮಾ ಬಲಮ್"...!
ಲೋಕೋತ್ತರವಾದ ಶಕ್ತಿಯಿದ್ದರೂ ಬ್ರಾಹ್ಮಣನಾದವನಿಗೆ ಕ್ಷಮೆ ಎಂಬುದೇ ಬಲ..
ಮಕ್ಕಳನ್ನು ಕೊಂದು ಆಶ್ರಮವನ್ನು ಸುಟ್ಟು ಕೊಡಬಾರದ ಕಷ್ಟಗಳನ್ನು ವಿಶ್ವಾಮಿತ್ರ ವಸಿಷ್ಟರಿಗೆ ಕೊಟ್ಟಾಗ ಸ್ವತಹ ಕಾಮ ಧೇನುವೇ ವಸಿಷ್ಟರಿಗೆ ಯಾಕೆ ಗುರುವೇ ಇನ್ನೂ ನೋಡುತ್ತಾ ನಿಂತಿದ್ದೀಯಾ.. ನಿನ್ನ ಬಲವನ್ನು ಪ್ರಯೋಗ ಮಾಡು.. ಹೊಸಕಿ ಹಾಕು ಆ ವಿಶ್ವಾಮಿತ್ರನನ್ನ...!! ಎಂದಾಗ ಮಹಾ ಬ್ರಾಹ್ಮಣನಾದ ( ದೇವುಡು ರವರ ಮಹಾಬ್ರಾಹ್ಮಣನನ್ನು ತಲೆಕೆಳಗು ಮಾಡಿದ್ದೇನೆ- ಕೋಣನೆರಡುಂ ಹೋರೆ ಗಿಡಕ್ಕೆ ಮಿಲ್ತು ಎಂಬ ರಾಘವಾಂಕನ ಹರಿಶ್ಚಂದ್ರನ ಹೀನೋಪಮೆಯನ್ನು ಅವಸರಿಸುತ್ತಾ..) ವಸಿಷ್ಟ.. ಹೇಳಿದ್ದು ಇದನ್ನೇ.." ಬ್ರಾಹ್ಮಣಾನಾಂ ಕ್ಷಮಾ ಬಲಮ್"..ಎಂದವನೇ.. ಆ ವಿಶ್ವಾ ಮಿತ್ರನಿಗೆ "ಅಸ್ತು ಸ್ಯಾತ್ ಅಸೌ" ಎಂದು ಹೇಳಿದ್ದೇನು ಗೊತ್ತೇ.. ಅದು ಶಾಪವೇ..? ವರವೇ..?... 
ಥೂ..ಹೋಗು...ಹೋಗು... ಬ್ರಹ್ಮರ್ಷಿಯಾಗು..!!! ಬ್ರಾಹ್ಮಣ್ಯದ ಮೂಲ ಸ್ರೋತವಾದ ಗಾಯತ್ರಿಯು ನಿನ್ನಿಂದಲೇ ಉದ್ಘೋಷಿತವಾಗಿ ಹೋಗಲೀ.."! ಆ ಗಾಯತ್ರಿಯಿಮ್ದಲೇ ಮುಂದೆ ಬ್ರಾಹ್ಮಣರು ಸಂಸ್ಕಾರವನ್ನು ಹೊಂದಲೀ..!!
ಎಂಥಾ.. ಸಾತ್ವಿಕ ಕೋಪ.. ವಸಿಷ್ಠರದ್ದು..
ಮುಂದೆ ವಿಶ್ವಾಮಿತ್ರ ಬ್ರಹ್ಮರ್ಷಿಯಾದ ಹಲುಬಿದ... ಹೂಂಕರಿಸಿದ..|||ತತ್ಸವಿತುರ್ವರೇಣ್ಯಮ್| ಭರ್ಗೋ ದೇವಸ್ಯ ಧೀಮಹೀ| ಧಿ ಯೋ ಯೋ ನಃ ಪ್ರಚೋದಯಾತ್|..!!!!

ಬಲಿ..ಬಲಿ... ಭಜರಂಗ ಬಲಿ...!..ಉತ್ತರೀಯದ ಬಲಿ...

           ಈ ದೇಶದ ಮಹಾ ಚರಿತ್ರೆಗಳಲ್ಲಿ ಬಲಿಯೆಂದುಕೊಂಡವರು ಬಲಿಯಾದವರು ಅನೇಕರಿದ್ದಾರೆ.. ಆದರೆ ನಮ್ಮ ಸನಾತನತೆಯಿಂದ ಮಹಾಬಲಿಯಾದವರು ಈರ್ವರು.... ಅವರಲ್ಲೊಬ್ಬ ಬಲಿ..ವೀರಸೇನ  "ವಿಶ್ವಜಿದ್" ಎಂಬ ಮಹಾ ಯಾಗವನ್ನು ಮಾಡುವುದರ ಮೂಲಕ "ಬಲಿ" "ಮಹಾಬಲಿ" ಎನ್ನಿಸಿಕೊಂಡ...  ಜಗತ್ತನ್ನೇ ಗೆದ್ದಿರುವೆನೆಂಬ ಮಹದಹಂಕಾರಕ್ಕೆ ಬಲಿಯಾದ ಈ ಬಲಿ ತನ್ನ ಅತಿಯಾದ ಆತ್ಮ ವಿಶ್ವಾಸದಿಂದಲೇ ಬಲಿಯಾದ... ಪಾತಾಳ ಸೇರಿ
ಇನ್ನೋರ್ವ ಬಲಿ...ಅವನೇ " ಭಜರಂಗಬಲಿ" ಹನೂಮಂತ....!..ತನ್ನಲ್ಲಿ ಅಗಾಧವಾದ ಶಕ್ತಿಯಿದೆ ಎಂಬುದನ್ನೇ ಅರಿದ ಮಹಾ ಮತಿಯಾದ ಬಲಿ.. ಇಂದ್ರಜಿತ್ ನೊಂದಿಗೆ ಯುದ್ಧ ಮಾಡುವಾಗ ಆಯುಧಗಳಿಲ್ಲದೇ ಕೇವಲ ತನ್ನ ಕೈಗಳಿಂದ  ಇಡೀ ಸೈನ್ಯವನ್ನು ಸೂರೆಗೈದ ಕಲಿ ಹನುಮ.. ಒಂದು ಹಿಡಿಯಲ್ಲಿ ಒಂದು ಆನೆಯನ್ನೂ ಇನ್ನೊಂದು ಕೈಯ್ಯಲ್ಲಿ ಇನ್ನೊಂದು ಆನೆಯನ್ನೂ ಹಿಡಿದು.. ಒಂದಕ್ಕೊಂದು ತಲೆಯನ್ನು ಘಟ್ಟಿಸಿ ಕೊಲ್ಲುತ್ತಾ ಶ್ರೀ ರಾಮನ ವಿಜಯಕ್ಕೆ ಕಾರಣನಾದ ಭಜರಂಗ ಬಲಿ...!!
              ವಿಶ್ವಜಿದ್ ಯಾಗ ಭೂಮಿಯಲ್ಲಿ ತನ್ನ ವಿಶ್ವ ರೂಪವನ್ನು ಪ್ರಕಟಿಸಬೇಕೆಂಬ ಹಂಬಲದಿಂದ ಹೊರಟ ಶ್ರೀಮನ್ನಾರಾಯಣ ವಾಮನನಾಗಿ ಬಾಲ ಬ್ರಹ್ಮಚಾರಿಯಾಗಿ ಭೂಮಿಗಿಳಿಯ ಬೇಕೆಂದುಕೊಂಡ....ಆದರೆ ಪಕ್ಕದಲ್ಲೇ ಇದ್ದ ಲಕ್ಷ್ಮಿ ತಡೆದು ಕೇಳಿದಳು.." ನಾನೂ ಬರುತ್ತೇನೆ... ನಿಮ್ಮೊಂದಿಗೆ"..! ,...."ಛೇ.. ಬ್ರಹ್ಮ ಚಾರಿಯಾಗಿ ದಾನ ಬೇಡುವುದಕ್ಕಾಗಿ ಬ್ರಾಹ್ಮಣ ವೇಶಧಾರಿಯಾಗಿ ಹೊರಟ ನನ್ನೊಂದಿಗೆ ನೀನು ಬರುವುದೇ..?  ಅಂತೂ ಕೊನೆಗೆ ಅಳೆದು ಸುರಿದೂ ಒಪ್ಪಿದ ..ಭಗವಂತ...!  "ನೀನು ನನ್ನೊಮ್ದಿಗೆ ಬಂದರೆ ನೀನು ಕಣ್ಣು ಹಾಕಿದೆಡೆಯೆಲ್ಲಾ ಮಹಾ ಪುಣ್ಯಪ್ರಸಾದ ಆಗುವುದಲ್ಲವೇ ದೇವೀ...? ನೀನು ಬಲಿಯನ್ನು ನೋಡಿದೆ ಎಂದಾದರೆ..ನನ್ನ ಕೆಲಸ ಆದಂತೇ.. ಛೇ.. ಏನು ಮಾಡುವುದು..?" ಎಂಕೊಂಡ....!!
ದೇವಿ ಸಂತೈಸಿ ಹೇಳಿದಳು... ಪ್ರಭೂ.. ನೀನು ಬ್ರಾಹ್ಮಣ ವಟು ವೇಶಧಾರಿಯಾಗಿ ಹೋಗುವೆ ಎಂದೆಯಲ್ಲವೇ.. ನಾನು ನಿನ್ನ ಉತ್ತರೀಯದ ಮರೆಯಲ್ಲಿ ನನ್ನ ಮೂಲ ಆವಾಸಸ್ಥಾನವಾದ ನಿನ್ನ ವಕ್ಷಸ್ಥಲದಲ್ಲೇ ಕುಳಿತು ಬರುತ್ತೇನೆ.. ನಿನಗೇನೂ ತೊಂದರೆ ಇಲ್ಲವಲ್ಲಾ.."  ಅಂತೂ ಪತಿ-ಪತ್ನಿಯರ ಸರಸದಲ್ಲೇ ಬಲಿಯನ್ನು ಬಲಿ ಹಾಕುವುದಕ್ಕಾಗಿ ಪಯಣವಾಯಿತು.. ಲಕ್ಷ್ಮೀ ನಾರಾಯಣರದ್ದು... ಬ್ರಾಹ್ಮಣರು ಉತ್ತರೀಯವನ್ನು ಹೊದೆಯುವುದು ತಮ್ಮಲ್ಲಿರುವ ಅಂತಃಸತ್ವವೆಂಬ ಲಕ್ಷಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಎಂಬುದು ಲೋಕಕ್ಕೆ ತಿಳಿದು ಹೋಯ್ತು..!!
                  ಬಲ ಭಾಗದಲ್ಲಿ ಅವಕ್ರಮದಲ್ಲಿ ಹೊದೆದ ಉತ್ತರೀಯದ ಮರೆಯಿಂದ ಇಣುಕಿ ಇಣುಕಿ ನೋಡುತ್ತಿರುವ ದೇವಿಯನ್ನು ಆಗಾಗ ಉತ್ತರೀಯ ಸರಿ ಮಾಡಿಕೊಳ್ಳುವ ನೆಪದಲ್ಲಿ...!!  {ಭಿಕ್ಷೋಚಿತಂ ಪ್ರಕಟಯನ್ ಪ್ರಥಮಾಶ್ರಮತ್ವಮ್| ಕೃಷ್ಣಾಜಿನಂ ಯವನಿಕಾಂ ಕೃತವಾನ್ ಪ್ರಿಯಾಯಾಃ||}  ತನ್ನ ಉತ್ತರೀಯದಿಂದ ವಕ್ಷಸ್ಥಲದಲ್ಲಿ ಆಸೀನಳಾಗಿರುವ ಶ್ರೀದೇವಿಗೆ ಕೃಷ್ಣಾಜಿನ ವನ್ನು ಅಲ್ಲಲ್ಲಿ ತೆರೆದು   ಲಕ್ಷ್ಮಿಗೆ  ತೋರುವ ಮೂಲಕ ಲೋಕದಲ್ಲಿ ಅಲ್ಲಲ್ಲಿ ಅಲ್ಲಲ್ಲಿ ಅವಳ ದೃಷ್ಟಿ ಬೀಳುಹಾಗೆ ಮಾಡಿ ಈ ಭೂಮಿಯಲ್ಲಿ ಸಂಪತ್ತನ್ನೋ ಪುಣ್ಯ ಸಂಚಯನವನ್ನೋ ಮಾಡಿಸಿದ...ನಾರಾಯಣ..!!! ಬಲಿಯನ್ನೂ ನೋಡಿಬಿಟ್ತಳು..!!ಛೇ.. ಯಾವನ ಅಹಂಕಾರವನ್ನು ಮುರಿದು ತನ್ನ ವಶವರ್ತಿಯಾಗಿ ಮಾಡಿಕೊಳ್ಳಬೇಕೆಂದು ಶ್ರೀಮನ್ನಾರಾಯಣ ಬಯಸಿದ್ದನೋ..ಅವನನ್ನೂ ಲಕ್ಷ್ಮಿ ನೋಡಿದಳೆಂದ ಮೇಲೆ ..ಎಣೆಯುಂಟೇ.... ಅದರ ಫಲ ಆಗಲೇ ಬೇಕಲ್ಲಾ...!! ಹೌದು.. ಬಲಿಯಂಥವನು ತನ್ನ ಶಿರದಲ್ಲಿ ಲೋಕ ಪಾವನನಾದ ಶ್ರೀ ಮನ್ನಾರಾಯಣನ ಪದವನ್ನಿರಿಸಿಕೊಳ್ಳುವ ಯೋಗ ಪ್ರಾಪ್ತವಾಗಲಿಲ್ಲವೇ.... ಇದೇ ಲಕ್ಷ್ಮೀ ಕಟಾಕ್ಷ ಮಹಿಮೆ...!!!!
ವೀರಸೇನ ಮಹಾರಾಜ ಬಲಿಯಾದ..! ಬಲಿಚಕ್ರವರ್ತಿಯಾದ..!!
ಬ್ರಾಹ್ಮಣನ ಉತ್ತರೀಯದ ಮಹಿಮೆ ಲೋಕಕ್ಕೆ ಅರಿವಾಯ್ತು.. !!

ಮಂಗಳವಾರ, ಜುಲೈ 29, 2014

ಅವತಾರದ ಅಂತ್ಯಕ್ಕೆ ಕೃಷ್ಣನನ್ನು ಹುಡುಕುವುದೆಲ್ಲಿ...?

ಒಂದು ಅವತಾರ ಸಮಾಪ್ತಿಯ ಅಂತಿಮ ಕಾಲಕ್ಕೆ, ಒಂದು ಮನಸ್ಥಿತಿಯ ಜನರ ಕೊನೆಗಾಲಕ್ಕೆ ಏನೆಲ್ಲ ಅಪಸವ್ಯಗಳು ಆಗಬಹುದು ಎಂಬುದಕ್ಕೆ ಮಹಾಭಾರತದ ಸ್ವರ್ಗಾರೋಹಣ ಪರ್ವ ದಲ್ಲಿ ಬರುವ ಶ್ರೀ ಕೄಷನ ಕೊನೇಯ ದಿನಗಳು....ಯುದ್ಧದಲ್ಲಿ ಭಾಗವಹಿಸಿದ್ದರೂ ಸಾಯದ ಕೃತವರ್ಮ, ಸಾತ್ಯಕಿ,ದಾರುಕ ಮುಂತಾದ ಯಾದವರು ದ್ವಾರಕೆಗೆ ಹೋಗುವಾಗಲೇ ಯುದ್ಧದ ವೀಕ್ಷಣೆಯ ಪರಿಣಾಮವಾಗಿ ಅವರ ಮನದಲ್ಲಡಗಿದ್ದ ಕೌರವ ಭಾವ ಜಾಗೃತಗೊಂಡು ಮದಿರೆ ಮಾನಿನಿಯರ ತೆವಲಿಗೆ ಬಿದ್ದು ಇಡೀ ಯಾದವ ಕುಲ ಸರ್ವನಾಶದ ಹೆಬ್ಬಾಲಿಗೆ ಬಂದು ಬಿದ್ದಿದೆ..ಅದು ಸಾಲದೆಂಬಂತೇ.. ಸಾಂಬ ಮೊದಲಾದವರು ಪುಂಡು ಪೋಕರಿಗಳಾಗಿ ಅಂಡಲೆಯಲು ಪ್ರಾರಂಭಿಸುತ್ತಾರೆ.. ದಾರಿಯಲ್ಲಿ ಸಿಕ್ಕ ಸಜ್ಜನರನ್ನು ಗೇಲಿಮಾಡುತ್ತಾ ಹೆಂಡದ ಅಮಲಿನಲ್ಲಿ ತೊನೆದಾಡುತ್ತಾ ಬರುತ್ತಿರುವಾಗ ಧೌಮ್ಯ ದೂರ್ವಾಸಾದಿಗಳ ದರ್ಶನವಾಗುತ್ತದೆ.. ಅಜ್ಞಾನದ ಭಾಂಡದಲ್ಲಿ ಅದ್ದಿ ತೆಗೆದಂತಿರುವ ಈ ಪುಂಡರ ಸಮೂಹ ಮಾಡಿದ ಅಚಾತುರ್ಯದಿಂದಾಗಿ ಒನಕೆಯನ್ನು ಹಡೆಯಬೇಕಾಯಿತು..ಕೃತವರ್ಮ ತನ್ನವರೊಂದಿಗೆ ನಡೆಸಿದ ಹೋಳಿ.. ಕೇವಲ ಕಾಮ ದಹನ ಆಗದೇ ಹೆಂಡದ ಅಮಲಿನಲ್ಲಿ ಒನಕೆಯ ಬಡಿಗೆ ಸಿಕ್ಕಾಗ ಏನೇನು ಆಗಬಾರದೋ ಅದೆಲ್ಲವೂ ಆಗಿ ಸರ್ವನಾಶ ಆಗಿ ಹೋಯಿತು.. ಕೃಷ್ಣ ಅಂದು ತನ್ನ ಮಹಾ ಮಾಯೆಯನ್ನು ಕೇಳಿಕೊಂಡನಲ್ಲಾ.. ತಾಯೀ ಸಾಕು.. ಸಾಕು.. ಇಂದಿಗೆ ಮುಗಿಸಿಬಿಡು.. ಎಲ್ಲರೂ ನನ್ನಿಂದ ಆದವರು..ನನ್ನೊಳಗೆ ಹೋಗಿ ಸೇರಿಬಿಡಲೀ.. ಅದಕ್ಕನುವಾಗುವಂತೆ.. ಹೆಂಡದ ಬಾಯಿಗೆ ನೀನು ಮದಿರಾ ದೇವಿಯಾಗಿ ಅವರನ್ನು ಸೇರು.. ನನ್ನ ಕಾಲಿಗೆ ಬೇಡ ಬಿಟ್ಟ ಭಾಣದ ಆಘಾತದಿಂದ ಒಸರುತ್ತಿದ್ದ ನೆತ್ತರು ಕೆಂಪು ದಾಸವಾಳದ ಎಸಳಿನಿಂದ ಮುಚ್ಚಿಕೊಂಡಿದೆ... ಇದು ಮೇಲ್ನೋಟಕ್ಕೆ ತಂಪನ್ನಿತ್ತರೂ.. ಸಹಸ್ರ ಶೀರ್ಷಾ ಪುರುಷಃ, ಸಹಸ್ರಾಕ್ಷಃ ಸಹಸ್ರಪಾತ್.. ಆದ ನನ್ನಲ್ಲಿ ಎಲ್ಲವೂ ತುಂಬಿಕೊಳ್ಲಲೀ....
.....




ಇಂದು ಆ ಕಾಲ ಸನ್ನಿತವಾಗುತ್ತಿದೆಯಾ...ಆದರೆ ಕೃಷ್ಣನಂಥವರನ್ನು ಹುಡುಕುವುದೆಲ್ಲಿ..?

ಗಾಯತ್ರೀ ಮಂತ್ರ...ಭಾಗೋತ್ರ ಮನೆ ಮುಂಜಿ...!!!

ಗಾಯತ್ರೀ ಮಂತ್ರ...ಭಾಗೋತ್ರ ಮನೆ ಮುಂಜಿ...!!!
"ಯೇ.. ತಮಾ.. ಅಥೋ ನೀ ಇನ್ನೂ ಇಲ್ಲೇ ಇದ್ಯನೋ.... ಈವತ್ತು ಓ ಆ ಭಾಗೋತ್ರಮನೆ ,ಮಾಣಿ ಮುಂಜಿ ಇದ್ದಲೋ .. ಅಷ್ಟಲ್ಲಗಿದ್ದೇ ಹೇಳಿಕ್ ಹೋಯ್ದ.. ಉಂಬ್ಲಕ್ಕಾದ್ರೂ ಹೋಗ್ ಬರವೋ  ಶಿಕ್ಕಾಪಟ್ಟೆ ಖರ್ಚ್ ಮಾಡಿ ವಂದ್ ಮಾಣಿ ಮುಂಜಿ ಮಾಡ್ತಾ ಇದ್ದಾ ಭಾಗೋತಣ್ಣ..... " ಅಪ್ಪಯ್ಯ ಬಚ್ಚಲಕೊಟಗಿಂದಾ ಕೂಗತಾ ಬಂದ... ಅಂಗೋಸ್ತ್ರ ಪಂಜಿ ಗಳವೀಗೆ ಹರಗತಿದ್ದಾಗ ಮಾಣಿ ..."ಆತೋ ಅಪ್ಪಯ್ಯಾ ... ಯಾನೇ ಹೋಗವನಾ.. ನೀ ಹೋದ್ರೂ ಅಕ್ಕಾಗಿತ್ತಾ..ಯೆನಗಿನ್ನೂ ಗಡ್ಡ ಮಾಡಕ್ಯಂಡು ಮಿಂದಕಂಡು ಹೋಪಲ್ಲೀವರೆಗೆ ಮೂರ್ತ ಮುಗೂದು ವಂದೇ ಅಲ್ಲ... ಉಂಡೂ ಆಗೋಗ್ತೋ...".. ಆದ್ರೂ ಮಾಣಿಗೆ ಅವರಮನೆ ಮುಂಜಿಗೆ ಹೋಪ್ ಮನಸಿದ್ದು... ಎಂತಕ್ಕೆ ಅಂದ್ರೆ  ಅಕ್ಕಯ್ಯನ್ ಮನೆ ಸಾವಿತ್ರಿನೂ ಭಾಗೋತಣ್ಣನ್ ಮನೆ ಮುಂಜಿಗೆ ಹೋಪ್ಲಕ್ಕೇ ಹೇಳಿ ಮನ್ನೆ ಕುಮಟಿಂದಾ ಹೊಸಾ ಪಲಕು ಪಲಿಕಾರ ತಗಬಂಜು...ಅಂತೂ ಕಂಡ್ರೂ ಕಾಣದಾಂಗ್ ಮೀಶೆಲೇ ನೆಗೆ ಹೊಡೆತಾ ಮಾಣಿ ಮಿಂದಕಂಡು ಮುಂಜೀಗೆ ಹೋಪ್ಲೆ ತಯಾರಾದ.. ಆಯಿ ಅಡಗೆ ಮನಿಂದಾ "ತಮಾ ದೊಡ್ ಕಡತ್ನದ್ ಮುಂಜಿ ಮಾಡತ್ನಡಾ ಭಾಗೋತಣ್ಣ.. ಹಾಂಗಾಘಿ ಚೊಲೋ ಉಡಿಗೆರೆನೇ ತಗಂಡ್ ಹೋಗೋ" ಹೇಳಿ ಕೂಗಿ ಹೇಳತು.. ತಂಗಿ ಅದಾಗ್ಲೇ ಪೆಟಗಿಂದಾ ಅಪ್ಪಯ್ಯಂಗ್ ಬಂದ್ ಉಣ್ಣೇ ಶಾಲ್  ತೆಗದು ಪ್ಲೇಸ್ಟೀಕಿನ್ ಕೊಟ್ಟೆ ವಳಗೆ ತುಂಬಿ ತಗಬಂದು ಹಕ್ಕೆ ಹೊಳ್ಳಿ ಮೇಲೆ ಇಟ್ಟಿಕ್ ಹೋತು.. ಅದನ್ನ ಹಿಡಕಂಡು ಬಿಶೂಲಾಲ್ಲೇ ಮಾಣಿ ಮುಂಜಿ ಮನೆ ಕಡೆಗೆ ಹೋದ..
 ಅಲ್ ನೋಡೀರೆ ಇಡೀ ಅಂಗಳಕ್ ಸೋಂಗೆ ತಟ್ಟಿ ಕಟ್ಟಿ ಮಾಯಿನ್ ತುಮಕೆ ತೋರಣ ಹಾಕಿದ್ದೋ...!! ಮನೆ ಹಿಂದ್ ಬದಿಂದಾ ಹೊಗೆ ಯೋಳ್ತಾ ಇದ್ದಿದ್ ಕಾಣ್ತು..!! ಅಡುಗೆ ತಯ್ಯಾರಿ ಜೋರೇ ಇದ್ದಕು.. ತೋರಣದ ಬಾಗಲಲ್ಲಿ ಚಪ್ಪಲ್ ರಾಶೀ ನೋಡೀರೆ ಯಾನೇ ಒಂದ್ ಸಣ್ ಚಪ್ಪಲ್ ಕಾಯೂ ಅಂಗಡಿ ಮಡಗಿದ್ದಿದ್ರೆ ವಾರದ್ ಖರ್ಚೀಗೆ ಮಾಡಕಳ್ಳಕ್ಕಾಗಿತ್ತು ಅಂಬ ಕಾಣ್ತು.. ಆನಮನೀ ಜನ!!... ಅಂತೂ ಮಾಣಿ ಕೈಕಾಲಿಗೆ ಅಲ್ಲೇ ದಳ್ಳೇಲಿ ನೀರ್ ತುಂಬಿ ಅಡುಗೆ ಮನೆ ಕಾಯ್ ಕೆರದ್ ಗೆರಟೆ ಹಾಕಿಟ್ಟಿದ್ರಲ್ಲೇ ನೀರ್ ಮೊಗದಿ ಸುರಕಂಡ ..ಬಾಯಿ ಮುಕ್ಕಳಿಸೂಲೆ ಮನಸ್ ಬಂಜಿಲ್ಲೆ.. ಇಡೀ ನೀರ್ ಕಾಯಿ ಕೆರೆ ಸುಳಿ ತುಂಬಿದ್ದು.. ವನ್ನಮನೀ ಅಕ್ಕಚ್ಚನ್ ಬಾನಿ ಆದಾಂಗ್ ಆಗೋಜು.. ಎಣ್ಣೆ ನೆಂಯಕಲು..ಥೂ.. ಬೇಡ ಹೇಳಿ ಬಾಯಿಗೆ ನೀರ್ ತಾಗಸಿದ್ನಿಲ್ಲೆ.. ಅಂತೂ ಚೆಪ್ಪರದ್ ವಳಗೆ ಹೋದ..
ಅಥೋಥೋಥೋ.. ಏನ್ ಜನ ಮುಂಜೀಗೆ.. ಸುತ್ ಇಪ್ಪತ್ ಹಳ್ಳೀ ಜನ ಬಂಜೋ.. ಎರಡೆರಡು ವಾದ್ಯ ಮೇಳ .ಒಂದು ಭಂಡಾರಕ್ಕಳದ್ದು ಪಂಚವಾಲಗ.... ಇನ್ನೊಂದು ಪಾತ್ರೋನ್ ನಾಯಕಂದು ಬೇಂಡ್ ವಾದ್ಯ...!!
 ಮುಹೂರ್ತ ಮುಗದ್ದು..ಭಟ್ಟಕ್ಕೋ ದಕ್ಷಿಣೆ ತಗಂಡು ಅಂಗಿ ಶಿಗಸಾಯಕತ್ತಾ ಇದ್ದಿದ್ ನೋಡೇ ಅನಕಂಡ..ಅಲ್ಲೇ ಅಮಿತ ಶಿವಾಹರ ಮಾಡ್ದ.. ಸುಮಾರ್ ಜನ ಫ್ರೆಂಡ್ಸು ಸಿಕ್ಕದೋ.. ಮೊಬಾಯಲಲ್ಲಿ ಫೇಸ್ ಬುಕ್ಕಲ್ಲಿ ವಾಟ್ಸಾಪ್ಪಲ್ಲಿ ಕಂಡೋರೆಲ್ಲಾ ಕೆಲೂ ಜನ ಮುಂಜೀ ಮನೆಲೂ ನಿಜ ಮೊಕ ತೋರದೋ.. ಮೆಸೇಜ್ ಕಳಸದ್ದು ಯಾನೇಯಾ ಹೇಳಿ ಆ ಕೂಸಿಗೆ ಹ್ಯಾಂಗ್ ಗುತ್ತಾದಿಕ್ಕೋ ಹೇಳಿ ಪಕ್ಕದ ಮಾಣಿ ಕೇಳಿ ತೆಳಕಂಡ..!! ಉಂಬ್ಲಕ್ ಬಾಳೆ ಹಾಕೂದು.. ಕಸ ಗುಡಸೂಲೆ ಗಾಮೊಕ್ಕಲ್ ಹೆಣ್ಣಾಳು ಬಂದೋ ಹಿಡೀಕುಂಟೆ ತಗಂಡು.. ಗುಡಸ್ತಾ ಬಂದಾಗ ಶೆಗಣೀ ಹಾಕಿ ಸಾರಿಸಿದ ಅಂಗಳದಿಂದಾ ಎದ್ ಧೂಳು ಭಟ್ಟಕ್ಕೋ ಬಿಚ್ಚಿಟ್ ಬೆಳೀ ಅಂಗಿ ಶಾಲನ ಮೇಲೆಲ್ಲಾ ಸಮಾ ಕುತಗಂಡತು.. ಇಚಗಿದ್ದೋವು ಅಚಗೆ..ಅಚಗಿದ್ದೋವು ಇಚಗೆ ಹಾರಾಡಿ ಅಂತೂ ಗುಡಸಿ  ಮುಗೀಸಿಕ್ಕಿ ಹೋದೋ..ಮೆತ್ತಿನ್ ಮೇಲೆ ಇಸ್ಪೇಟ್ ಆಡ್ತಾಕುಂತಿದ್ ಅಜ್ಜನ ಮನೆ ಭಾವ.. ಆಚೆ ಮನೆ ಯೆಂಟ್ರೋಣ್ ಭಾವ ಎಲ್ಲಾ ಹಗೂರಕ್ ಕೆಳಗಿಳದು ಬಂದೋ..!!
ಬಾಳೆ ಹಾಕೂಲಾತು.. ಹೇಳಿ ಭಾವಯ್ಯ ತುಪ್ಪದ ಗಿಂಡೀ ಹಿಡಕಂಡೇ ನಿತಗಂಡು ಹೇಳದಾ ಹೇಳಾತು.. ಅಂತೂ ಬಾಳೆ ಬಂತು.. ಪಂಕ್ತಿ ಮೇಲೆ ಬಾಳೆ ಹಾಕಿ ತುಪ್ಪ ಅಭಿಗಾರನೂ ಆಗೋತು.. ಮೂರ್ ಮೂರ್ ನಮನೀ ಪಲ್ಯ.,, ಎರಡು ಚೆಟ್ಣಿ, ಕೋಸಂಬ್ರಿ ಹಪ್ಪಳ ಎಲ್ಲಾ ಬಂತು.. ಎರಡ್ ಸ್ವೀಟು.. .ಮಾಣಿ ಒಂದ್ ಪಂಕ್ತೀಲಿ ಬಾಳೆ ಹಿಡಕಂಡ.. ಎದ್ರ್ ಪಂಕ್ತೀಲಿ ಸಾವಿತ್ರಿ ಹೊಸಾ ಪಲಕು ಪಲಿಕಾರ ಹಾಯಕಂಡು ಕುಂತದ್ದು ಮಾಣಿಗೆ ಸಮಾ ಕಂಡತು...!!
ಅಂತೂ ಭರ್ಜರೀ ಮುಂಜಿ..ಭರ್ಜರೀ ಊಟ.. ಎಲ್ಲರೂ ಭಾಗೋತ್ರ ಮನೆ ಮುಂಜಿ ಅಂದ್ರೆ ಮುಂಜಿ ನೋಡೂ ಹೇಳಿ ಹೇಳ್ ಹೇಳಕಂಡು ಉಡಿಗೆರೆ ಕೊಟ್ಟಿಕ್ ಲಾಡನ ಉಂಡೆ ಪೊಟ್ಳ ಕೈಲಿಡ್ಕಂಡು ಹೋದೋ..
ಮುಂಜಿ ಮಾಣಿ... ಅಂತೂ ದಂಟ್ ಕೋಲ್ ತೆಗದು ವಳಗ್ ಮಡಗಿಕ್ಕಿ.. ಸುತ್ತಿನ್ ಪಂಜಿ ಬಿಚ್ ಹೊಸಾ ಚೆಡ್ಡಿ ಹಾಯಕಂಡ.. ಅವಂಗೂ ಉಂಡಾತು..ಎಲ್ಲಾ ಭಟ್ಟಕ್ಕೋ ಮುಂಜಿ ಮುಗೀಸಕಂಡು ರಸ್ತೆ ಕೂಡದೋ.. ಕಡವಾರದಂಚೀಗೆ ಒಂದ್ ಭಟ್ರು ಪಂಜಿ ಮೇಲೆತ್ತಿ ಕುಂತದ್ದೇ ತಡ ಅಷ್ಟೂ ಜನ ಭಟ್ಟಕ್ಕೋ ಕೆಮೀಗೆ ಜನ್ನಾವರ ಶಿಕ್ ಹಾಯಕಂಡ್ ಕುಂತೋ ಹೇಳಾತು..
..ಅಂತೂ ಸಂಜಾತು.. ಮಾಣಿ ಮುಂಜೀ ಮನೆಲಿ ಸಂಜೆ ಊಟಕ್ ಬಪ್ಪೋರಿಗೆ ಬಡಸೂಲೆ ಹೇಳಿ ಅಲ್ಲೇ ವಳಕಂಡ ..ಸಾವಿತ್ರಿನೂ ಉಪ್ಪು ಉಪ್ಪನಕಾಯಿ ಬಡಸೂಲಾದ್ರೂ ಬೇಕಾಗ್ತು ಹೇಳಿ ಅಲ್ಲೇ ವಳತ್ತು..!!
ಸಂಜಪ್ಪಾಗ ಸಂಧ್ಯಾವನೆ ಮಾಡೋ ಹೇಳಿ ಪುರೋಯ್ತ ಭಟ್ರು ಮುಂಜೀ ಮಾಣೀಗೆ ತಾಕೀತ್ ಮಾಡಿಕ್ ಹೋಜ್ರು.. ಅದು ಮುಂಜಿ ಮಾಣೀ ಅಬ್ಬೆಗೆ ನೆಂಪಿದ್ದು...!! ತಮಾ ಸಂಜಾಗೋತೋ.. ಇಂದ್ ಮುಂಜಿ ಆಗದ್ದು ಬಿಲ್ಯೋ.. ಕೈ ಕಾಲ್ ತೊಳಕಂಡು ಸಂಧ್ಯಾವನೆ ಮಾಡೂಲ್ ಕುತಗ ಅಂತು ಮುಂಜಿಮಾಣಿ ಅಬ್ಬೆ....  ಆಯ್ತ್ ಮಮ್ಮೀ.. ಬಂದೆ ಹೇಳಿಕ್ ಮುಂಜೀ ಮಾಣಿ ಕೈಕಾಲ್ ತೊಳೂಲ್ ಬಚ್ಚಲೀಗ್ ಹೋದ... ಅತೋಪಾ...! ಮಾಣಿ ಬಚ್ಚಲೀಗ್ ಹೋದಾಗ್ಲೇ ಕರೆಂಟ್ ಸುಟ್ಟದ್ದು ಹೋಗವಾ... ಬಚ್ಚಲಲ್ಲಿ ಮಾಣಿ ಕೈಕಾಲ್ ತೊಳೂಲೆ ಹೇಳಿ ಅಲ್ಲಿಪ್ ಒಂದ್ ಬಕೇಟಿಗೆ ಕೈ ಹಾಕದ.. ಕೈಗೆ ಗರಟೆ ಶಿಕ್ಕತು ಅದ್ರಲ್ಲೇ ನೀರ್ ಮೊಗದಿ ಕಾಲೀಗೆ ಹೊಯಕಂಡಾ... ಮೊಕ ತೊಳೂಲೆ ಹೇಳಿ ಗೆರಟೆ ನೀರ್ ಕೈಗ್ ತಗಂಡು ಮೊಕಕ್ ಹಾಕದಾಗಲೇ ಗುತ್ತಾಗದ್ದು..ಥೋ... ಅದು ಮದ್ದೇನಪ್ಪಾಣ್ ತೆಳಿ, ಹಳಸೋದ್ ಹಶಿ, ಕಾಯ್ ಚೆಟ್ಣಿ ಎಲ್ಲಾ ತಗಬಂದು ಹಾಕಿಟ್ ಅಕ್ಕಚ್ಚನ್ ಬಾನಿ...!! ಫೂ.ಫೂ.. ಹೇಳಿ ಹೇಳ್ತಾ ಇರಕ್ಕಾದ್ರೇ ಕರೆಂಟ್ ಬಂತು.. ಹಂಡೆ ನೀರಲ್ಲಿ ಮತ್ ಕೈಕಾಲ್ ತೊಳಕಂಡು ಬಂದು ಮಡಿ ಉಟಗಂಡು ಸಂಧ್ಯಾವನೆಗೆ ಕುಂತ.... ಅಪ್ಪಯ್ಯ.. ಅಲ್ಲೇ ಬಂದ್ ಜನರ ಮಾತಾಡಿಸ್ತಾ ಇದ್ದಿದ್ ನೋಡಿ... "ಅಪ್ಯಾ... ಬೆಳಿಗ್ಗೆ ಪುರೋಯ್ತ ಭಟ್ರು ಗಾಯತ್ರಿ ಹೇಳ್ ಕೊಟ್ಟಿದ್ದಿದ್ರು.. ಅದು ಎನಗ್ ಈಗ್ ಹೇಳ್ ಕೊಡೂ "... ಅಂದ..ಮಗನ್ ಮುಂಜೀಗೆ ಮಾಡದ್ ಸಾಲದ್ ಸುದ್ದೀ ಮಾತಾಡ್ತಾ ಇದ್ ಅಪ್ಪಯ್ಯಂಗೆ ರೇಗಿಹೋತು.. ಬಂದವನೇ ಮಾಣಿ ತಲೆ ಮೇಲೊಂದ್ ಬಿಟ್ಟಾ....!!" ಅಲ್ದೋ.. ಬೆಳಗಾಗಿ ಪುರೋಯ್ತ ಭಟ್ರು ಹೇಳ್ ಕೊಟ್ ಗಾಯತ್ರೀ ಮಂತ್ರಾನೇ ಈಗ್ ನಿನಗೆ ಹಂಬ್ಲಿಲ್ಲೆ ಮತ್ ಹೇಳ್ ಕೊಡೂ ಅಂಬೆ... ಯಾನು..ಈ ಪುರೋಯ್ತ್ ಭಟ್ರ ಅಪ್ಪನ ಕಾಲದಲ್ಲಿ ಮುಂಜಿ ಮಾಡಕಂಡಂವ..ಆವಾಗ್ ಅವರ್ ಹೇಳ್ಕೊಟ್ಟದ್ದು ನಲವತ್ ವರ್ಷಾತು.. ಈಗ್ ಹೇಳ್ ಕೊಡೂ ಅಂದ್ರೆ ಯೆನಗೆಲ್ ನೆಂಪಿದ್ದಾ...ಬೇರೆ ಕೆಲಸಿದ್ದಾ ನೋಡೂ" ಅಂದ..!!
ಅಷ್ಟ್ರಲ್ಲಿ ಸಾವಿತ್ರಿ ದೇವರೊಳಂಗೆ ಹೋತು ಹೇಳಿ ಮಾಣಿನೂ ವಳಗ್ ಬಂದಾ.. ಭಾಗೋತಣ್ಣ.. " ಮಾಣೀ..ನೀ ಬೆಗೇಲಿ ಯೆಮ್ಮನೆ ಮಾಣಿಗೆ ಗಾಯತ್ರೀ ಹೇಳ್ಕೊಡೂ ಮಾರಾಯಾ.. ಆಗ್ಲಿಂದಾ ಅಲಬತಗತ್ತಾ ಇದ್ದಾ " ಹೇಳಿ ಹೇಳ್ದಾಗ ಮಾಣಿ "ಓಂ ಭೂರ್ಭುವಃಸ್ವಃ..... ಹೇಳೂಲ್ ಶುರು ಮಾಡದಾ...

ಶುಕ್ರವಾರ, ಜುಲೈ 25, 2014

ಮಗೆಕಾಯಿ ಪುರಾಣ..!!

ಒಂದ್ ಸರ್ತಿ ಅಣ್ಣಯ್ಯ.. ತಂಗಿ ಮನೀಗ್ ಹೋಗ ಅಂತೇಳಿ ತಯಾರಾದ..ಮನೆಯಲ್ಲಿ ಕಳದ್ ಬೇಸಿಗೆಯಲ್ಲಿ ಮನೆ ಗೆದ್ದೆ ಬಯಲಲ್ಲಿ ಬೆಳೆದ್ ಮಗೆಕಾಯಿ ಮೆತ್ನಮೇಲೆ ಗಳಕ್ಕೆ ಕಟ್ಟಿಟ್ಟಿದ್ದು ದಿನಕ್ಕೊಂದೊಂದ್ರಂತೆ ಕೊಳತು ನೀರ್ ಸೋರ್ತಾ ಇರ್ತಿತ್ತು.. ಪ್ರತೀ ದಿನ ಮಗೆಕಾಯಿ ಹುಳಿ, ಶಿಪ್ಪೆ ಗೊಜ್ಜು, ತಿರಳ್ ತಂಬ್ಳಿ.. ಥೋ ಬೇಜಾರ್ ಬಂದೋತು.. ತಂಗೀ ಮನೆಗೆ ನಾಕ್ ಕೊಟ್ಟಿಕ್ ಬತ್ತೆ ಹೇಳಿ ಗನಾಕಿದ್ ನಾಕ್ ಎಮ್ಮೆಕರುನಂಥಾ ಮಗೆಕಾಯಿನ  ಗೋಣಿ ಚೀಲದಲ್ಲಿ ತುಂಬಕ್ಯಂಡು.. ತಂಗಿ ಮನೆಗೆ ಹೊಂಟ..... ರಣಗುಡೂ ಬಿಶಲು,, !!
.... ಅಂತೂಸಂಜೆ ನಾಕ್ ಗಂಟೆ ಹೊತ್ತೀಗೆ.. ತಂಗಿ ಮನೆಗೆ ತಲಪದಾ... ಅರೇ ಅಣ್ಯಾ.. ಬಾ.. ಬಂದ್ಯಾ.. ಈಗ್ ಮಾತ್ರ್ ಯಮ್ಮನೆ ಅವರತ್ರ ನಿನ್ ಸುದ್ದೀನೇ ಹೇಳಿತಿದ್ದಿದ್ದೆ.. ಅವೆಲ್ಲೋ ತ್ವಾಟದ್ ಬದೀಗ್ ಹ್ವಾದವಕಾ.. ಬಾ ಕೈಕಾಲ್ ತೊಳಕ.. ಬಿಶೂಲಲ್ಲಿ ಬಂದೆ.. ಹನೀ ಲಿಂಬೆಹಣ್ ಪಾನಕ ಮಾಡಕಂಡ್ ಬತ್ತೆ. ಹೇಳಿಕ್ ವಳಗೋತು,, ಅಣ್ಣಯ್ಯ..ಮಗೆಕಾಯ್ ಚೀಲ ಜಗಲೀಮೇಲೆ ಮೂಲೆಲಿ ತಗಂಡೋಗಿ ಇಟ್ಟ..ಕೈಕಾಲ್ ತೊಕ್ಕಂಡು ಅಡುಗೆ ಮನೆ ಕಡೀಗೆ ಹೆಜ್ಜೆ ಹಾಕ್ತಿದ್ದ... ಪಾನಕ ರೆಡಿ ಆತು.. ಅಷ್ಟಪ್ಪತಿಗೆ ತೋಟಕ್ ಹೋದ್ ಬಾವ ಬಂದ.."ಅರೇ ಬಾವಾ,, ಈಗ್ ಬಂದ್ಯನಾ..?" ಎಂದದ್ದಕ್ಕೆ.. "ಹೌದಾ... ಆವತ್ತಿಂದಾ ಬರ ಅಂತ ಅಂದಾಜ್ ಮಾಡ್ತಾ ಇದ್ದಿದ್ದೆ.. ಆಜಿಲ್ಲೆ.. ಇಂದು ಯೆಮ್ಮನೆದು ಯೇನ್ ಮಾಡೀರೂ ಕೇಳಿದ್ದಿಲ್ಲೆ.. ನಿಂಗ ತಂಗೀ ಮನೆಗೆ ಹೋಪದ್ರೊಳಗೆ ಮಗೆಕಾಯಿ ಪೂರಾ ಕೊಳ್ತ ಹೋಗಿರ್ತು ಕಡೀಗೆ..ಇಂದೇ ಹೋಗಿ ಹೇಳಿ ಕಳಿಸ್ತು.. "...ಎಂದ.. ಭಾವ-ಭಾವ ಪಾನಕ ಕುಡದ.. "ಅಯ್ಯೋ ಆ ಯಮ ಭಾರದ್ ಮಗೆಕಾಯ್ ಇಲ್ಲೀವರೆಗೆ ಹೊತಗಬಂದದ್ ಸಾಕೋ ಅಣ್ಯಾ.." ಅಂತ ತಂಗಿ ಅಕ್ಕಿ ತೊಳದು ಬಳಿ ಹಾಕ್ತಾ ಹೇಳ್ತಿತ್ತು.. " ಯೆಮ್ಮನೆಲಿ ಇವರತ್ರಾನೂ ಅಂದೆ.. ಮಗೆಬಳ್ಳಿ ನಾಕ್ ಹಾಕುವೋ.. ದೋಸೆಗಾದ್ರೂ ನಾಕ್ ಮಗೆಕಾಯಿ ಆಗ್ತು ಹೇಳಿ...ಅವ್ ಯೆನ್ ಮಾತೆಲ್ ಕೇಳತ್ವಾ.." ಅಂತ ಗಂಡನ ಮುಖ ನೋಡಿ ಬಾಯ್ಮುಚ್ಚು ಅಂತು..
ಅಂತೂ ಭಾವ ಮನೆಗೆ ಬಂದ್ ಭಾವನ ಕರಕಂಡು ಆಚ್ಚೆ ಮನೆಗೆ ಹೋದ.. ನಾಕಾಟ ನೋಸ್ಟ್ರಂಪ್ ಆಡಕಂಡ್ ಬಪ್ಪನಾ ಅಂತ...
ಅಣ್ಣಯ್ಯ ತಗಬಂದ್ ಮಗೆಕಾಯಿ ಗೋಣಿ.. ಜಗಲೀ ಮೂಲೆಲಿ ಮನಿಕಂಡಿದ್ದಿತ್ತು..ತಂಗಿ ಸೊಕಾಶ್ ಬಂದು ಗೋಣಿ ಬಾಯಿ ಬಿಚ್ಚೀರೆ.. ಅಯ್ಯೊಯ್ಯೋ..ದೊಡ್ ಯೆಮ್ಮೆಕರೂನಂಥಾ ನಾಕ್ ಮಗೆಕಾಯಿ..ಅಣ್ಣಯ್ಯ ಹ್ಯಾಂಗ್ ಹೊತಗಂಡ್ ಬಂದನೆನಾ.. ಅಂತ ಹೇಳ್ತಾ..ಒಂದ್ ಮಗೆಕಾಯಿ ಹೊರಗ್ ತಗತ್ತು..ಅಂತೂ ಒಂದ್ ಮಗೆಕಾಯಿ ಕೊಚ್ಚೂಲ್ ಅಡ್ಡಿಲ್ಲೆ.. ಅಥೋಅಣ್ಣಯ್ಯ ಅಷ್ಟ್ ದೂರದಿಂದಾ ತಗಬಂಜಾ.. ಮಗೆಕಾಯ್ ತೆಳ್ಳೇವು ಅಂದ್ರೆ ಅವಂಗೆ ಭಾರೀ ಪ್ರೀತಿ ಹೇಳಿ ಅಂತೂ ಕೊಚ್ಚಿದೋಸೆ ಕಲ್ಲೀಗೆ ಮಗೆಕಾಯ್ ಬಿತ್ತು.. ಅಯ್ಯ..ತಿಳ್ಳು ಕಂಯಿ ಇಲ್ಲೆ.. ಒಂದ್ ಹನೀ ಜೀರಿಗೆ ಕಾಳ್ ಹಾಖಿ ತಂಬ್ಳಿ ಮಾಡ್ತಿ.. ಯೆಮನೆ ಅವು ಎಂತದೋ ಘರ್ಮಿ ಆದಾಂಗ್ ಇದ್ದು ಹೇಳ್ತಿದ್ದ.. ತಂಪಾಗ್ತು ಹೇಳಿ ತಿರಳು ತಂಬ್ಳೀ ಆತು..ದೋಸೆಗೆ ನಾಕ್ ಕೊಚ್ಚಿದ್ ಹೋಳು ಹೆಚ್ಚುಳತ್ತು..ಅದ್ನೆಂತಾ ಬಿಸಾಕುದೂ ಅಂತ ಒಂದ್ ಬಿಶೀ ಪಳದ್ಯನೂ ಆತು.. ಆದ್ರೆ ಮಗೆ ಕಾಯಿ ಶಿಪ್ಪೆ ದಪ್ಪಕ್ಕಿದ್ದು ಅಂತ ತೆಗದು ಫ್ರಿಜ್ಜಲಿಟ್ಟಾತು.. ನಾಳೆಗೆ ದೋಸೆ ತಿಂಬ್ಲೆ ಶಿಪ್ಪೆ ಗೊಜ್ಜು ...!!
ಅಂತೂ ನಾಕ್ ಆಟ ನೋಸ್ಟ್ರಂಪ್ ಆಡಕಂಡು ಭಾವ - ಭಾವ ಮನೆ ಸೇರ್ದ... ಕತ್ಲಪ್ಪಾಗ...ಭಾಆ ಕಾಲ್ ತೊಕ್ಕಳಾ..ಉಂಡಬುಡ್ವಾ ಅಂದ... ಕಾಲ್ ತೊಳೂಲ್ ಭಾವ ಬಚ್ಚಲೀಗೆ ಹೋದ..
ದೊಡ್ ಕೊಡಬಾಳೆಲಿ ಭಾವಂಗೆ ಬಿಶ್ ಬಿಶೀ ಬೆಣ್ತಕ್ಕಿ ಅನ್ನ.. ಅನ್ನಕ್ಕೆ.. ಬಿಶೀ ಪಳದ್ಯ ಬಂದ್ ಬಿದ್ದಾಗ ಈ ಅಣ್ಣಯ್ಯಂಗೆ ಮೇಲ್ ಬಪ್ಪದೊಂದ್ ಬಾಕಿ ಇತ್ತು...!!
"ಅಣ್ಯಾ,... ನಿಂಗೆ ತಿರಳ್ ತಂಬ್ಳೀ ಅಂದ್ರೆ ಪ್ರೀತಿನಲಾ ಶಣ್ಣಿರಕಾದ್ರೆ ಆಯಿ ಮಗೆಕಾಯಿ ಕೊಚ್ಚಕಾದ್ರೆ ಮುಂದೇ ಕುತಗಂಡು ತಿರಳ್ ತಿಂತಿದ್ಯಲಾ.. ಅದ್ಕೇ ತಂಬ್ಳೀ ಮಾಡಿದ್ನೋ..ಅಂತ ಹೇಳ್ತಾ ಅನ್ನದ ಮೇಲೆ ತಿರಳು ತಂಬಳಿ ಹೊಯ್ದಾಗ ಮೊದಲಿನ ಪಳದ್ಯ.. ಗಂಟಲೀಗೇ ಬಂದಾಂಗ್ ಆತು...!..ಆದ್ರೂ ಉಂಡ್ ಮನಗದ... ಬೆಳಿಗೆ ಏಳು ಹೊತ್ತೀಗೇ ಮಗೆಕಾಯ್ ತೆಳ್ಳೇವಿಂದು ಘಂಮ್ಮಲು ಮೂಗಿಗೆ ಬಡದು ವನ್ನಮನೀ ಆತು ಭಾವಂಗೆ.. ಬಚ್ಚಲ್ ಮನೆಗೋದಂವ ಸುಮಾರ್ ಹೊತ್ ವ್ಯಾಕರಸ್ತಾ ಇದ್ದಿದ್ ನೋಡಿ ಅಣ್ಣಯ್ಯಂಗೆ ಪಿತ್ಥಾಗೋಜು ಹೇಳಿ ತಿಳಕಂಡತು..ತಂಗಿ....ಅಂತೂ ಆಸ್ರೀ ಕುಡಿಯಲೆ ಬಂದ್ ಕುಂತ್ ಭಾವಂಗೆ ಮಗೆಕಾಯ್ ತೆಳ್ಳೇವು.. ಶಿಪ್ಪೆ ಗೊಜ್ಜು... ಒಂದೇ ಗುಪ್ಪಿಗೆ ನುಂಗಿ ಚಾ ಕುಡದು.. ತಂಗೀ ಮಗೆಕಾಯಿದು ಇನ್ನೂ ಸುಮಾರ್ ನಮನೀ ಪದಾರ್ಥ ಮಾಡೂಲ್ ಕಲ್ತಿದ್ದೆ ನೀನು ಅಲ್ದಾ...? ನನಗೆ ಅರ್ಜಂಟು ಮನೆಗೆ ಹೋಗ.. ಅಲ್ಲಿ ಇಂದು ಕೊನೆ ಕೊಯ್ಯೂಲೆ ಬತ್ತ ಆಳಗ..ಅಂತ ಹೇಳ್ತಾ..ಕೈ ತೊಳದ ಭಾವ ಮನೆ ದಾರಿ ಹಿಡದಾ..!! ದೇವರೇ.. ಇನ್ ಮನೆಲೂ ಈವತ್ತು ಯಾವದೇ ಮಗೆಕಾಯಿ ಕೊಳ್ತ ನೀರ್ ಸೋರದೇ ಇರಲಪ್ಪಾ ಹೇಳಿ ದಾರಿ ಅಂಚಿಗೆ ಶಿಕ್ಕದ್ ಅಶ್ವತ್ಥ ಕಟ್ಟೆ ಮೇಲಿನ್ ನಾಗರಕಲ್ಲೀಗೆ ನಾಕ್ ಸುತ್ ಹೊಡದು ನಮಸ್ಕಾರ ಹಾಕದಾ....!!